ಯುದ್ಧಕ್ಕಾಗಿ ದೇವರ ನಾಮದ ದುರುಪಯೋಗ ಗಂಭೀರ ಪಾಪ: ಪ್ರಧಾನ ಗುರು ಪಿಜ್ಜಬಲ್ಲಾ
ಲೇಖಕರು: ಲಿಂಡಾ ಬೋರ್ಡೊನಿ
“ಈಗ ನಡೆಯುತ್ತಿರುವ ಅಥವಾ ಯಾವುದೇ ಯುದ್ಧವನ್ನು ನ್ಯಾಯೀಕರಿಸಲು ದೇವರ ನಾಮದ ದುರುಪಯೋಗ ಮತ್ತು ವಕ್ರವಾಗಿ ಬಳಸುವುದು ಈ ಕಾಲದಲ್ಲಿ ನಾವು ಮಾಡುವ ಅತ್ಯಂತ ಗಂಭೀರ ಪಾಪವಾಗಿದೆ,” ಎಂದು ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಪೂಜ್ಯ ಪಿಯರ್‌ಬತ್ತಿಸ್ತ ಪಿಜ್ಜಬಲ್ಲಾ ಮಧ್ಯಪ್ರಾಚ್ಯವನ್ನು ಕಂಗೆಡಿಸುತ್ತಿರುವ ಅಮೆರಿಕಾ–ಇಸ್ರಾಯೇಲ್–ಇರಾನ್ ಯುದ್ಧ ಕುರಿತು ನಡೆದ ವೆಬಿನಾರ್‌ನಲ್ಲಿ ಹೇಳಿದರು.
ಅವರು ಮುಂದುವರೆದು, “ಯುದ್ಧವು ಮೊದಲನೆಯದಾಗಿ ರಾಜಕೀಯ ಸ್ವಭಾವದ್ದಾಗಿದೆ; ಬಹುತೇಕ ಯುದ್ಧಗಳಂತೆ ಇದಕ್ಕೂ ಭೌತಿಕ ಹಿತಾಸಕ್ತಿಗಳಿವೆ. ಆದ್ದರಿಂದ ದೇವರ ನಾಮವನ್ನು ಹೊತ್ತುಕೊಂಡಿರುವಂತೆ ತೋರುವ ಈ ಕಪಟ ಧಾರ್ಮಿಕ ಭಾಷೆಗೆ ನಾವು ಯಾವುದೇ ಸ್ಥಳ ಕೊಡಬಾರದು; ಅದು ದೇವರ ವಿಷಯವಲ್ಲ, ನಮ್ಮ ಸ್ವಾರ್ಥ ಉದ್ದೇಶಗಳನ್ನು ದೇವರ ನಾಮದ ಹಿಂದೆ ಮುಚ್ಚಿ ಹಾಕುವ ದುಷ್ಕೃತ್ಯ,” ಎಂದು ಹೇಳಿದರು. ಅಮೆರಿಕದ ರಕ್ಷಣಾ ಕಾರ್ಯದರ್ಶಿಯವರು ಅಮೆರಿಕಾ–ಇಸ್ರಾಯೇಲ್–ಇರಾನ್ ಯುದ್ಧದ ಸಂದರ್ಭದಲ್ಲಿ ಕೀರ್ತನೆ 144 ಅನ್ನು ಉಲ್ಲೇಖಿಸಿ ದೈವೀ ಆಶೀರ್ವಾದ ಕೋರಿದ ಹಿನ್ನೆಲೆ ಅವರು ಈ ಮಾತುಗಳನ್ನು ಹೇಳಿದರು.
ಅಂತರರಾಷ್ಟ್ರೀಯ ಓಯಾಸಿಸ್ ಪ್ರತಿಷ್ಠಾನದ ಸಂವಾದದಲ್ಲಿ ಮಾತನಾಡಿದ ಅವರು, “ವಿಶ್ವಾಸಿಗಳಾಗಿ ನಾವು, ಹೊಸ ಕ್ರೂಸೇಡ್‌ಗಳು ಇಲ್ಲ. ದೇವರು ಈ ಯುದ್ಧದಲ್ಲಿ ಜೀವ ಕಳೆದುಕೊಂಡವರೊಂದಿಗಿದ್ದಾನೆ, ನೋವು ಅನುಭವಿಸುವವರಲ್ಲಿ, ಹಿಂಸೆಗೆ ಒಳಗಾದವರಲ್ಲಿ ಇದ್ದಾನೆ; ಮಧ್ಯಪ್ರಾಚ್ಯದ ಎಲ್ಲ ನೋವಿನ ಮಧ್ಯದಲ್ಲಿ ಆತನು ಇರುವನೇ ಹೊರತು ,ಈ ಯುದ್ಧದ ಪರವಾಗಿಲ್ಲ ” ಎಂದು ಸ್ಪಷ್ಟವಾಗಿ ಹೇಳಬೇಕಾಗಿದೆ ಎಂದು ಹೇಳಿದರು.
“ಈ ಯುದ್ಧದ ಯಾವುದೇ ಕಡೆಯಲ್ಲಿಯೂ ಧಾರ್ಮಿಕ ಅಥವಾ ದೈವೋದ್ದೇಶವಿಲ್ಲ; ಆದರೆ ಧರ್ಮವನ್ನು ಒಳಗೆಳೆಯಲು ಪ್ರಯತ್ನಿಸುವವರು ದೇವರ ನಾಮವನ್ನು ತಮ್ಮ ದುರುದ್ದೇಶಗಳಿಗೆ ಬಳಸುತ್ತಿದ್ದಾರೆ,” ಎಂದು ಎಚ್ಚರಿಸಿದರು
ಕ್ರೈಸ್ತ ಸಂದೇಶ
ಪೂಜ್ಯ ಜಗದ್ಗುರು ಲಿಯೋ 14ನೇಯವರು ಕರೆ ನೀಡಿದ ಯುದ್ಧ ವಿರಾಮ ಮತ್ತು ಸಂವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಗದ್ಗುರುಗಳ ಸಂದೇಶ ಕಿವುಡರಾಗಿರುವ ರಾಜಕೀಯ ಬಣಗಳಿಗೆ ಕೇಳಿಸದೇ ಇರಬಹುದು, ಆದರೆ ಧರ್ಮಸಭೆ ಸತ್ಯವನ್ನು ಹೇಳುತ್ತಲೇ ಇರಬೇಕು ಮತ್ತು ಭವಿಷ್ಯದಲ್ಲಿ ಹೂಡಿಕೆ ಮಾಡಲು ಒಗ್ಗೂಡಬೇಕು ಎಂದು ಹೇಳಿದರು.
“ಹಿಂಸೆಯಿಂದ ನಿರ್ಮಿತವಾದದ್ದು ನಾಶವಾಗುತ್ತದೆ; ಅದಕ್ಕೆ ಭವಿಷ್ಯವಿಲ್ಲ. ಅದು ತನ್ನ ಸುತ್ತ ಭಯ, ದ್ವೇಷ ಮತ್ತು ವಿರೋಧದ ಶೂನ್ಯವನ್ನು ಸೃಷ್ಟಿಸುತ್ತದೆ — ಕ್ರೈಸ್ತ ಭಾಷೆಯಲ್ಲಿ ಇವು ಮರಣದ ಲೋಕಕ್ಕೆ ಸೇರಿದವುಗಳು,” ಎಂದು ಹೇಳಿದರು.
ಮಾಧ್ಯಮಗಳ ಪಾತ್ರ
ಈ ಸಂದರ್ಭದಲ್ಲಿ ಮಾಧ್ಯಮಗಳ ಹೊಣೆಗಾರಿಕೆಯನ್ನು ಅವರು ಉಲ್ಲೇಖಿಸಿದರು. “ಮಾಹಿತಿ-ಸಂಪರ್ಕ ಯುದ್ಧದ ಭಾಗವಾಗಿದೆ — ಅದು ಯುದ್ಧವನ್ನು ತಿಳಿಸುವುದಷ್ಟೇ ಅಲ್ಲ, ಅದನ್ನು ಸಮರ್ಥಿಸುವುದಕ್ಕೂ ಬಳಸಲ್ಪಡುತ್ತದೆ.” ಆದ್ದರಿಂದ ಪತ್ರಕರ್ತರು ಸುದ್ದಿಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಬೇಕು, ಸಮಗ್ರ ವಿವರಣೆ ನೀಡಬೇಕು ಅಥವಾ ಓದುಗರಿಗೆ ವಿಮರ್ಶಾತ್ಮಕ ದೃಷ್ಟಿಕೋನ ರೂಪಿಸಲು ನೆರವಾಗಬೇಕು ಎಂದು ಅವರು ಹೇಳಿದರು.
ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನ ಪರಿಸ್ಥಿತಿ
ಈ ಹಿನ್ನೆಲೆಗಳಲ್ಲಿ, ಅಮೆರಿಕಾ–ಇಸ್ರಾಯೇಲ್–ಇರಾನ್ ಯುದ್ಧದ ಪರಿಣಾಮವಾಗಿ ಗಾಜಾದ ಸಂಕಷ್ಟ ಮತ್ತು ವೆಸ್ಟ್ ಬ್ಯಾಂಕ್‌ನ ಹಿಂಸಾಚಾರ ಇನ್ನು ಹೆಚ್ಚಿನ ಚರ್ಚೆಗೆ ಬಾರದಿರುವುದನ್ನು ಅವರು ವಿಷಾದಿಸಿದರು. ಅಲ್ಲಿನ ಮಾನವೀಯ ಪರಿಸ್ಥಿತಿ ಇನ್ನೂ ತೀವ್ರವಾಗಿ ಹದಗೆಡುತ್ತಲೇ ಇದೆ ಎಂದು ಅವರು ಹೇಳಿದರು.
“ಹಸಿವಿನ ಸಮಸ್ಯೆ ಮಾತ್ರವಲ್ಲ; ಇನ್ನೂ ಸುಮಾರು 20 ಲಕ್ಷ ಜನರು ಸ್ಥಳಚ್ಯುತರಾಗಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ. 80% ಪ್ರದೇಶ ನಾಶವಾಗಿದೆ; ಪುನರ್‌ನಿರ್ಮಾಣ ಇನ್ನೂ ಆರಂಭವಾಗಿಲ್ಲ. 36 ಆಸ್ಪತ್ರೆಗಳು ಭಾಗಶಃ ಕಾರ್ಯನಿರ್ವಹಿಸುತ್ತಿವೆ; ಆದರೆ ಮೂಲಭೂತ ಔಷಧಿಗಳ ಕೊರತೆಯಿದೆ. ಜನರು ಅತೀ ಕಷ್ಟಕರ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಈ ಸ್ಥಿತಿ ಯಾವಾಗ ಮತ್ತು ಹೇಗೆ ಅಂತ್ಯಗೊಳ್ಳುತ್ತದೆ ಎಂಬುದು ತಿಳಿಯದಂತಾಗಿದೆ; ಶಾಂತಿಯ ಮಾರ್ಗ ಇನ್ನೂ ಸ್ಪಷ್ಟವಾಗಿಲ್ಲ. ಒಂದು ವಿಷವರ್ತುಲ ಮುಂದುವರಿಯುತ್ತಿದೆ — ಹಮಾಸ್ ಶಸ್ತ್ರಾಸ್ತ್ರಗಳನ್ನು ಒಪ್ಪಿಸದಿದ್ದರೆ ಇಸ್ರಾಯೇಲ್ ಹಿಂತೆಗೆದುಕೊಳ್ಳುವುದಿಲ್ಲ; ಇಸ್ರಾಯೇಲ್ ಹಿಂತೆಗೆದುಕೊಳ್ಳದಿದ್ದರೆ ಹಮಾಸ್ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವುದಿಲ್ಲ. ಎಲ್ಲವೂ ಸ್ತಬ್ಧವಾಗಿದೆ,” ಎಂದು ಅವರು ಹೇಳಿದರು.
“ವೆಸ್ಟ್ ಬ್ಯಾಂಕ್‌ನ ವಿಷಯದಲ್ಲೂ ಪರಿಸ್ಥಿತಿ ನಿರಂತರವಾಗಿ ಹದಗೆಡುತ್ತಿದೆ. ಬಹುತೇಕ ಪ್ರತಿದಿನವೂ ದಾಳಿಗಳು ನಡೆಯುತ್ತಿವೆ; ನೂರಾರು ತಪಾಸಣಾ ಕಚೇರಿಗಳು ಸ್ಥಾಪಿತವಾಗಿವೆ. ಜನರ ಸಂಚಾರ ಇನ್ನೂ ಕಷ್ಟಕರವಾಗಿದೆ,” ಎಂದು ಅವರು ಹೇಳಿದರು.
ಕೊನೆಗೆ, ಭೂ ನೋಂದಣಿಗೆ ಸಂಬಂಧಿಸಿದ ಇತ್ತೀಚಿನ ಕ್ರಮಗಳ ಪರಿಣಾಮಗಳ ಬಗ್ಗೆ ಮತ್ತು ಇಸ್ರಾಯೇಲ್ ಆಡಳಿತ ಪ್ರದೇಶಗಳಲ್ಲಿ ಪ್ಯಾಲೇಸ್ತೀನಿ ವಿದ್ಯಾರ್ಹತೆಗಳ ಅಮಾನ್ಯತೆ ಇನ್ನಷ್ಟು ಆರ್ಥಿಕ ಸಂಕಷ್ಟ, ಕಷ್ಟಗಳು ಮತ್ತು ಶಾಲೆಗಳಲ್ಲಿ ಕ್ರೈಸ್ತ ಶಿಕ್ಷಕರ ಕೊರತೆಯನ್ನು ಉಂಟುಮಾಡುವ ಸಾಧ್ಯತೆಯಿದೆ ಎಂಬ ಚಿಂತೆಯನ್ನು ಪ್ರಧಾನ ಧರ್ಮಾಧ್ಯಕ್ಷರು ವ್ಯಕ್ತಪಡಿಸಿದರು.
(ಮೂಲ: ಏಷ್ಯಾನ್ಯೂಸ್)
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).