2025.07.01 Documentario Peru, Chiclayo 2025.07.01 Documentario Peru, Chiclayo 

ಪೆರು ಮಹಾಧರ್ಮಾಧ್ಯಕ್ಷರಿಂದ ಚುನಾವಣೆಗೆ ಮುನ್ನ “ನೈತಿಕ ವಿವೇಕ”ಕ್ಕೆ ಕರೆ

ದೇಶದಲ್ಲಿ ನಡೆಯಲಿರುವ ಚುನಾವಣೆಗಳ ಹಿನ್ನೆಲೆಯಲ್ಲಿ ಪೆರು ಮಹಾಧರ್ಮಾಧ್ಯಕ್ಷರು ಸಂದೇಶವೊಂದನ್ನು ಪ್ರಕಟಿಸಿ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಮಾತು-ಕೃತಿಗಳ ನಡುವಿನ ಹೊಂದಾಣಿಕೆಯನ್ನು ಹೊಂದಿರುವ ನಾಯಕರ ಅಗತ್ಯವಿದೆ ಎಂದು ಒತ್ತಿಹೇಳಿದ್ದಾರೆ.

ವ್ಯಾಟಿಕನ್ ವರದಿ

ಈ ವರ್ಷ ನಡೆಯಲಿರುವ ಚುನಾವಣಾ ಪ್ರಕ್ರಿಯೆಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ, ಪೆರು ಮಹಾಧರ್ಮಾಧ್ಯಕ್ಷರ ಪರಿಷತ್ತು ಮಾರ್ಚ್ 15ರಂದು ಪ್ರಕಟಿಸಿದ ಸಂದೇಶದಲ್ಲಿ, “ಚುನಾವಣಾ ಪ್ರಕ್ರಿಯೆಯನ್ನು ನೈತಿಕ ವಿವೇಕ ಮತ್ತು ನಾಗರಿಕ ಹೊಣೆಗಾರಿಕೆಯ ಕ್ಷಣವೆಂದು ಅನುಭವಿಸಬೇಕು” ಎಂದು ಕರೆ ನೀಡಿದೆ.

ಪೆರುಗೆ “ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಮಾತು-ಕೃತಿಗಳ ನಡುವಿನ ಹೊಂದಾಣಿಕೆಯಿಂದ ಗುರುತಿಸಲ್ಪಡುವ ಅಧಿಕಾರಿಗಳು” ಅಗತ್ಯವಿದ್ದಾರೆ ಎಂದು ಮಹಾಧರ್ಮಾಧ್ಯಕ್ಷರು ಹೇಳಿದ್ದಾರೆ.

ಪೆರು ಜನತೆಗೆ ನೀಡಿದ ಈ ಸಂದೇಶವನ್ನು ಮಹಾಧರ್ಮಾಧ್ಯಕ್ಷರ ಪರಿಷತ್ತಿನ ಸ್ಥಾಯಿ ಮಂಡಳಿ ಸಹಿ ಮಾಡಿದ್ದು, “ದೇಶದ ಪ್ರಜಾಸತ್ತಾತ್ಮಕ ಜೀವನದ ಈ ಮಹತ್ವದ ಕ್ಷಣದಲ್ಲಿ, ನಮ್ಮ ರಾಷ್ಟ್ರ ಎದುರಿಸುತ್ತಿರುವ ಪರಿಸ್ಥಿತಿಯನ್ನು ಬದಲಿಸಲು ಸಹಾಯ ಮಾಡುವ ಚಿಂತನೆಗಳನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ. 2026ರ ಚುನಾವಣಾ ಪ್ರಕ್ರಿಯೆಗಳಲ್ಲಿ ನಾಗರಿಕರ ಭಾಗವಹಿಸುವಿಕೆಗೆ ನೈತಿಕ ಹೊಣೆಗಾರಿಕೆಯಿಂದ ಮಾರ್ಗದರ್ಶನ ನೀಡುವ ಉದ್ದೇಶವೂ ನಮ್ಮದು” ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ವಿಭಜನೆಯ ಚಿಂತೆ

"ನಮ್ಮ ದೇಶವನ್ನು ಅಲುಗಾಡಿಸುತ್ತಿರುವ ಆಳವಾದ ಸಾಮಾಜಿಕ ವಿಭಜನೆ ನಮ್ಮನ್ನು ಚಿಂತೆಗೊಳಪಡಿಸಿದೆ” ಎಂದು ಮಹಾಧರ್ಮಾಧ್ಯಕ್ಷರು ಎಚ್ಚರಿಸಿದ್ದಾರೆ. ಪೆರು ಜನರು ಹಿಂಸಾಚಾರ, ಭ್ರಷ್ಟಾಚಾರ ಮತ್ತು ರಾಜಕೀಯದ ಮೇಲಿನ ನಂಬಿಕೆಯ ಕಳೆತೆಯಿಂದ ಗಾಯಗೊಂಡಿದ್ದಾರೆ ಎಂದು ಅವರು ಸೂಚಿಸಿದ್ದಾರೆ.

“ಸಾಮಾಜಿಕ, ಆರ್ಥಿಕ ಮತ್ತು ಪ್ರಾದೇಶಿಕ ಅಸಮಾನತೆಗಳು ಇನ್ನೂ ಆಳವಾಗಿ ಮುಂದುವರಿದಿವೆ. ಅನೇಕರು ದಾರಿದ್ರ್ಯ, ಹೊರತಾಕಲ್ಪಟ್ಟ ಸ್ಥಿತಿ ಮತ್ತು ಅವಕಾಶಗಳ ಕೊರತೆಯಲ್ಲಿ ಬದುಕುತ್ತಿದ್ದಾರೆ. ಅಪಾರ ಪ್ರಕೃತಿ ಮತ್ತು ಸಾಂಸ್ಕೃತಿಕ ಸಂಪತ್ತಿನಿಂದ ಆಶೀರ್ವದಿತವಾದ ದೇಶದಲ್ಲಿ ಇಂತಹ ಪರಿಸ್ಥಿತಿ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿದೆ,” ಎಂದು ಮಹಾಧರ್ಮಾಧ್ಯಕ್ಷರು ಹೇಳಿದ್ದಾರೆ.

ಪೆರು ದೇಶದ ಬಹುಜನಾಂಗೀಯ ವೈವಿಧ್ಯತೆ, ಜನರ ಉದಾರತೆ ಮತ್ತು ಐಕ್ಯತೆಯ ನಡುವೆಯೂ ಈ ಅಸಮಾನತೆಗಳು ಮುಂದುವರಿಯುತ್ತಿರುವುದು ರಾಷ್ಟ್ರದ ಮನಸ್ಸನ್ನು ಪ್ರಶ್ನಿಸುತ್ತದೆ ಎಂದು ಅವರು ಹೇಳಿದ್ದಾರೆ.

ನೈತಿಕ ವಿವೇಕದ ಅಗತ್ಯ

ಈ ಹಿನ್ನೆಲೆಯಲ್ಲಿ, ಚುನಾವಣಾ ಪ್ರಕ್ರಿಯೆಯನ್ನು “ನೈತಿಕ ವಿವೇಕ ಮತ್ತು ನಾಗರಿಕ ಹೊಣೆಗಾರಿಕೆಯ ಕ್ಷಣ”ವೆಂದು ಪರಿಗಣಿಸಬೇಕೆಂದು ಮಹಾಧರ್ಮಾಧ್ಯಕ್ಷರು ಕರೆ ನೀಡಿದ್ದಾರೆ.

“ಚುನಾವಣೆಗಳು ಕೇವಲ ರಾಜಕೀಯ ಸ್ಪರ್ಧೆಯಾಗಬಾರದು. ನಾವು ನಿರ್ಮಿಸಲು ಬಯಸುವ ದೇಶ ಮತ್ತು ನಾವು ಉತ್ತೇಜಿಸಲು ಬಯಸುವ ಪ್ರಜಾಸತ್ತಾತ್ಮಕ ಸಹಬಾಳ್ವೆಯ ಕುರಿತು ಚಿಂತಿಸುವ ಅವಕಾಶವಾಗಬೇಕು. ಆದ್ದರಿಂದ ಮತದಾನವು ತಿಳುವಳಿಕೆಯ, ಜಾಗೃತಿ ಮತ್ತು ಹೊಣೆಗಾರಿಕೆಯಿಂದಿರಬೇಕು,” ಎಂದು ಅವರು ತಿಳಿಸಿದ್ದಾರೆ.

ಪೆರು ದೇಶಕ್ಕೆ “ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಮಾತು-ಕೃತಿಗಳ ನಡುವಿನ ಹೊಂದಾಣಿಕೆಯನ್ನು ಹೊಂದಿರುವ, ಅಧಿಕಾರವನ್ನು ಹೊಣೆಗಾರಿಕೆಯಿಂದ, ಸಾಮರ್ಥ್ಯದಿಂದ ಮತ್ತು ನಿಜವಾದ ಸೇವಾಭಾವದಿಂದ ನಿರ್ವಹಿಸಬಲ್ಲ ನಾಯಕರ ಅಗತ್ಯವಿದೆ” ಎಂದು ಅವರು ಒತ್ತಿಹೇಳಿದ್ದಾರೆ.

ಆದ್ದರಿಂದ ಮತದಾರರು ಅಭ್ಯರ್ಥಿಗಳ ಬದ್ಧತೆಯನ್ನು ಪರಿಶೀಲಿಸಬೇಕು ಎಂದು ಮಹಾಧರ್ಮಾಧ್ಯಕ್ಷರು ಮನವಿ ಮಾಡಿದ್ದಾರೆ. ವಿಶೇಷವಾಗಿ ಮಾನವ ಗೌರವದ ರಕ್ಷಣೆ, ಜನರ ಹಕ್ಕುಗಳ ಕಾಪಾಡುವಿಕೆ, ಸಾರ್ವಜನಿಕ ಸುರಕ್ಷತೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ದೇಶದ ಸಾಂಸ್ಕೃತಿಕ ವೈವಿಧ್ಯತೆಯ ಗೌರವಕ್ಕೆ ಬದ್ಧರಾಗಿರುವವರನ್ನು ಬೆಂಬಲಿಸಬೇಕೆಂದು ಅವರು ಹೇಳಿದ್ದಾರೆ.

ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಲಪಡಿಕೆ

“ಪೆರು ತನ್ನ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬಲಪಡಿಸಬೇಕಾಗಿದೆ,” ಎಂದು ಮಹಾಧರ್ಮಾಧ್ಯಕ್ಷರು ಹೇಳಿದ್ದಾರೆ. “ಆಡಳಿತ ನಡೆಸುವುದು ಎಂದರೆ ಸೇವೆ ಮಾಡುವುದು ಎಂಬ ಅರಿವು ಹೊಂದಿರುವ ನಾಯಕರ ಅಗತ್ಯ ದೇಶಕ್ಕಿದೆ.” ಮುಂದುವರೆದು, ರಾಷ್ಟ್ರೀಯ ಸೌಹಾರ್ದತೆ ಅತ್ಯಂತ ಅಗತ್ಯವಿರುವ ಸವಾಲಾಗಿದೆ ಎಂದು ಹೇಳಿದ್ದಾರೆ.

“ನಮ್ಮ ಗಾಯಗಳನ್ನು ಒಪ್ಪಿಕೊಳ್ಳುವುದು, ಸತ್ಯವನ್ನು ಹುಡುಕುವುದು, ನ್ಯಾಯವನ್ನು ಸಾಧಿಸುವುದು ಮತ್ತು ಸಾಮಾಜಿಕ ಕ್ಷಮೆಯನ್ನು ಅರಸುವುದರ ಮೂಲಕವೇ ನಾಗರಿಕರ ನಡುವಿನ ನಂಬಿಕೆಯನ್ನು ಮರುನಿರ್ಮಿಸಬಹುದು. ಆಗ ಮಾತ್ರ ಶಾಂತಿಯುತ ಸಹಬಾಳ್ವೆಯ ದಾರಿಗಳನ್ನು ತೆರೆಯಲು ಸಾಧ್ಯ,” ಎಂದು ಅವರು ತಿಳಿಸಿದ್ದಾರೆ.

ಧರ್ಮಸಭೆಯ ಬದ್ಧತೆ

ಮಹಾಧರ್ಮಾಧ್ಯಕ್ಷರು ಧರ್ಮಸಭೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿ, “ನಿಜವಾದ ಸಮಗ್ರ ಮಾನವ ಅಭಿವೃದ್ಧಿಯನ್ನು ಹುಡುಕುವ ಪ್ರಯತ್ನದಲ್ಲಿ ನಮ್ಮ ಜನರೊಂದಿಗೆ ಮುಂದುವರೆಯುತ್ತಾ ಸಹಯಾತ್ರಿಯಾಗಿರುವುದಕ್ಕೆ ಧರ್ಮಸಭೆ ಬದ್ಧವಾಗಿದೆ.”

ಈ ಹಿನ್ನೆಲೆಯಲ್ಲಿ ಅವರು ಒಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ: “ಭವಿಷ್ಯದ ತಲೆಮಾರಿಗೆ ನಾವು ಏನನ್ನು ಬಿಟ್ಟು ಹೋಗಲು ಬಯಸುತ್ತೇವೆ?”

ಸಂದೇಶದ ಅಂತ್ಯದಲ್ಲಿ ಪೂಜ್ಯ ಜಗದ್ಗುರು 14ನೇ ಲಿಯೋ ಅವರ ಮಾತುಗಳನ್ನು ಉಲ್ಲೇಖಿಸಲಾಗಿದೆ: “ರಾಜಕೀಯ ಪರಿವರ್ತನೆಯ ಈ ಕ್ಷಣದಲ್ಲಿ ನಾನು ಪೆರುವಿನ ಜನರ ಜೊತೆಯಲ್ಲಿದ್ದೇನೆ. ಪೆರು ಸೌಹಾರ್ದತೆ, ಸಂವಾದ ಮತ್ತು ರಾಷ್ಟ್ರೀಯ ಏಕತೆಯ ದಾರಿಯಲ್ಲಿ ಮುಂದುವರಿಯಲಿ ಎಂದು ನಾನು ಪ್ರಾರ್ಥಿಸುತ್ತೇನೆ” (ಆಂಜೆಲಸ್, 12 ಅಕ್ಟೋಬರ್ 2025).

“ಪೂಜ್ಯ ಜಗದ್ಗುರುಗಳೊಂದಿಗೆ, ಇಂದು ನಾವು ನಮ್ಮ ಪೆರು ದೇಶವನ್ನು ಏಕತೆ, ಸಹೋದರತ್ವ ಮತ್ತು ಶಾಂತಿಯತ್ತ ಕರೆದೊಯ್ಯಲಿದ್ದೇವೆ” ಎಂದು ಮಹಾಧರ್ಮಾಧ್ಯಕ್ಷರು ತಮ್ಮ ಸಂದೇಶವನ್ನು ಪೂರ್ಣಗೊಳಿಸಿದರು

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

16 ಮಾರ್ಚ್ 2026, 19:36