ಹುಡುಕಿ

Christmas preparations in Pakistan Christmas preparations in Pakistan  (ANSA)

ಪಾಕಿಸ್ತಾನ: ಶಾಂತಿಗಾಗಿ ಕ್ರೈಸ್ತ ಮತ್ತು ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ

ಲಾಹೋರ್‌ನಲ್ಲಿ ನಡೆದ ಅಂತರ್ಧರ್ಮೀಯ ಸಭೆಯಲ್ಲಿ ತಪಸ್ಸುಕಾಲ ಮತ್ತು ರಂಜಾನ್ ಉಪವಾಸ ದಿನಗಳ ಸಂದರ್ಭದಲ್ಲಿ ಕ್ರೈಸ್ತ ಹಾಗೂ ಮುಸ್ಲಿಂ ಬಾಂಧವರು ಒಂದಾಗಿ ಸೇರಿ ಪಾಕಿಸ್ತಾನ–ಅಫ್ಘಾನಿಸ್ತಾನ ಗಡಿಭಾಗದಲ್ಲಿ ಮುಂದುವರಿಯುತ್ತಿರುವ ಹಿಂಸಾಚಾರಕ್ಕೆ ಅಂತ್ಯವಾಗಲೆಂದು ಶಾಂತಿಗಾಗಿ ಪ್ರಾರ್ಥಿಸಿದರು.ಸಭೆಯು ಶಾಂತಿ, ಏಕತೆ ಮತ್ತು ಪರಸ್ಪರ ಬದ್ಧತೆಯ ಸಂಕೇತವಾಗಿ ಪರಿಣಮಿಸಿತು.

ಲೇಖಕರು: ಕೀಲ್ ಗಸ್ಸಿ

ಅಫ್ಘಾನಿಸ್ತಾನ–ಪಾಕಿಸ್ತಾನ ಗಡಿಭಾಗದಲ್ಲಿ ಮುಂದುವರಿಯುತ್ತಿರುವ ಸಂಘರ್ಷ ಮತ್ತು ಹಿಂಸಾಚಾರ ದಿನನಿತ್ಯದ ಬದುಕನ್ನು ಆವರಿಸಿರುವ ಸಂದರ್ಭದಲ್ಲಿ, ಪಾಕಿಸ್ತಾನದ ಲಾಹೋರ್ ನಗರದ “ಶಾಂತಿ ಕೇಂದ್ರ”(ಪೀಸ್ ಸೆಂಟರ್)ದಲ್ಲಿ ಅಂತರಧರ್ಮೀಯ ಸಭೆ ನಡೆಯಿತು. ನಗರದಲ್ಲಿನ ಐತಿಹಾಸಿಕ ಬಾದ್ಷಾಹಿ ಮಸೀದಿ (ರಾಜಮಸೀದಿ) ಯಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳ ಪ್ರತಿನಿಧಿಗಳು ಒಂದಾಗಿ ಸೇರಿ ಶಾಂತಿಗಾಗಿ ಪ್ರಾರ್ಥಿಸಿದರು.

ಲಾಹೋರ್ ಮಹಾಧರ್ಮಪ್ರಾಂತ್ಯದ ವಂ. ಶ್ರೇಷ್ಠ ಗುರು  ಆಸಿಫ್ ಸರ್ದಾರ್ ಅವರು, ಈ ಸಭೆಯು “ವಿಶೇಷವಾಗಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಂದರ್ಭದಲ್ಲಿ ಶಾಂತಿ ಮತ್ತು ಏಕತೆಯ ಸಂಕೇತವಾಗಿದೆ” ಎಂದು ತಿಳಿಸಿದ್ದಾರೆ.

ಶಾಂತಿಗಾಗಿ ಸಹಬದ್ದತೆ

ವ್ಯಾಟಿಕನ್ ಸುದ್ದಿ ಸಂಸ್ಥೆ ‘ಫಿಡೆಸ್’ ವರದಿ ಪ್ರಕಾರ, ಲಾಹೋರ್ ಮಹಾಧರ್ಮಪ್ರಾಂತ್ಯದ ವಂ. ಶ್ರೇಷ್ಠ ಗುರು ಆಸಿಫ್ ಸರ್ದಾರ್ ಅವರು ಈ ಸಮಾಗಮವನ್ನು “ಒಂದು ಕನಸು” ಎಂದು ವರ್ಣಿಸಿದರು. “ಎರಡು ಸಮುದಾಯಗಳ ನಡುವೆ ಅಂತರಧರ್ಮೀಯ ಸೌಹಾರ್ದ ಮತ್ತು ಶಾಂತಿಯ ನೇರ ಸಾಕ್ಷಿಯಾಗಲು ನನಗೆ ಸಾಧ್ಯವಾಯಿತು,” ಎಂದು ಅವರು ಹೇಳಿದರು. ತಪಸ್ಸುಕಾಲ ಮತ್ತು ರಂಜಾನ್ ಉಪವಾಸ ದಿನಗಳ ಸಂದರ್ಭದಲ್ಲಿ ನಡೆದ ಈ ಸಭೆಯಲ್ಲಿ ಇಫ್ತಾರ್ ಭೋಜನವೂ ಆಯೋಜಿಸಲಾಗಿತ್ತು.

ವಂ. ಗುರು ಸರ್ದಾರ್ ಅವರು, ಯುದ್ಧದ ಪರಿಣಾಮ ನೇರವಾಗಿ ಅನುಭವಿಸುತ್ತಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿ, “ಎರಡು ಸಮುದಾಯಗಳ ಆತ್ಮೀಯ ಏಕತೆಯನ್ನು ಮತ್ತು ಶಾಂತಿಯತ್ತ ಇರುವ  ಸಹಬದ್ಧತೆಯನ್ನು ಪುನರುಚ್ಚರಿಸಲು” ಈ ಕಾರ್ಯಕ್ರಮವನ್ನು ಸಮರ್ಪಿಸಲಾಗಿದೆ ಎಂದು ವಿವರಿಸಿದರು. ಉಪವಾಸ, ಪ್ರಾರ್ಥನೆ ಮತ್ತು ದಾನಧರ್ಮದ ಮೇಲೆ ಗಮನಹರಿಸುವುದು ಎಂದರೆ ಅನ್ನವಿಲ್ಲದವರೊಂದಿಗೆ ಅನ್ನ ಹಂಚಿಕೊಳ್ಳುವುದು, ನ್ಯಾಯ, ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವುದಾಗಿದೆ ಎಂದು ತಿಳಿಸಿದರು.

ಸಭೆಯ ಸಂದರ್ಭದಲ್ಲಿ, ಲಾಹೋರ್‌ನ ಶಾಂತಿ ಕೇಂದ್ರದ ಮುಖ್ಯಸ್ಥರಾದ ಡೊಮಿನಿಕನ್ ವಂ. ಗುರು ಜೇಮ್ಸ್ ಚನ್ನನ್ ಅವರು ಮಸೀದಿಯ ಇಮಾಮ್ ಅಬ್ದುಲ್ ಖಬೀರ್ ಅಜಾದ್ ಅವರೊಂದಿಗೆ, “ಪಾಕಿಸ್ತಾನದಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರ ನಡುವಿನ ಸಂಬಂಧಗಳ ಬೇರುಗಳನ್ನು ಇನ್ನಷ್ಟು ಗಾಢಗೊಳಿಸುವುದು,” “ರಂಜಾನ್ ಮತ್ತು ತಪಸ್ಸುಕಾಲದಲ್ಲಿ ಅಡಕವಾಗಿರುವ ಉಪವಾಸ, ಚಿಂತನೆ ಮತ್ತು ತ್ಯಾಗದ ಹಂಚಿಕೊಂಡ ಮೌಲ್ಯಗಳನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುವುದು,” ಮತ್ತು “ಪಾಕಿಸ್ತಾನದ ಸ್ಥಿರತೆ ಹಾಗೂ ಜಾಗತಿಕ ಸಂಘರ್ಷಗಳ ಅಂತ್ಯಕ್ಕಾಗಿ ದೇವರಲ್ಲಿ ಒಟ್ಟಾಗಿ ಪ್ರಾರ್ಥನೆ ಸಲ್ಲಿಸುವುದು” ಎಂಬ ಸಂಕಲ್ಪವನ್ನು ಹಂಚಿಕೊಂಡರು.

ಡೊಮಿನಿಕನ್ ಗುರು ಈ ಅಂತರಧರ್ಮೀಯ ಸಭೆಯನ್ನು ಪರಸ್ಪರ ಗೌರವದ ಸ್ಪಷ್ಟ ಉದಾಹರಣೆಯೆಂದರು. “ ನಂಬಿಕೆ ವಿಭಜನೆಯ ಗೋಡೆಯಾಗದೆ, ಏಕತೆಯ ಸೇತುವೆಯಾಗಬಹುದು ಎಂಬ ಸ್ಪಷ್ಟ ಸಂದೇಶವನ್ನು ನಾವು ನೀಡಿದ್ದೇವೆ” ಎಂದು ಹೇಳಿದರು.

ಸ್ಪಷ್ಟ ಮನವಿ

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ನಡೆದ ಪ್ರಾರ್ಥನೆ ಮತ್ತು ಆತ್ಮಪರಿಶೀಲನೆಯ ಕಾರ್ಯಕ್ರಮ ಇದು ಮಾತ್ರವಲ್ಲ. ಪಾಕಿಸ್ತಾನ–ಅಫ್ಘಾನಿಸ್ತಾನ ಗಡಿಭಾಗದಲ್ಲಿ ಶಾಂತಿಯಿಗಾಗಿ ಕಥೋಲಿಕ ಸಮುದಾಯವು ಮೆಣಬತ್ತಿ ಮೆರವಣಿಗೆ ಹಾಗೂ ಪ್ರಾರ್ಥನಾ ಜಾಗರಣೆಯನ್ನೂ ನಡೆಸಿತು. ಸಂತ ಪಿಯೊ ಆಫ್ ಪಿಯೆತ್ರೆಲ್ಚಿನಾ ಧರ್ಮಕೇಂದ್ರದ ಭಕ್ತರು, ಧಾರ್ಮಿಕ ಸಹೋದರ ಸಹೋದರಿಯರು ಹಾಗೂ ಇತರ ಸಮುದಾಯ ಸದಸ್ಯರು ಸೇರಿ ಶಿಲುಬೆಯ ಮಾರ್ಗವನ್ನು ಸ್ಮರಿಸಿ ಪ್ರಾರ್ಥಿಸಿದರು.

ಪಾಕಿಸ್ತಾನ ಕಥೋಲಿಕ ಧರ್ಮಾಧ್ಯಕ್ಷರ ಮಹಾಸಭೆಯ ಸಾಮಾಜಿಕ ಸಂವಹನ ಆಯೋಗದ ಕಾರ್ಯನಿರ್ವಹಣಾ ಕಾರ್ಯದರ್ಶಿ ವಂ. ಗುರು ಕೈಸರ್ ಫೆರೋಸ್ OFM Cap. ಹಾಗೂ ಕಾರ್ಮೆಲೈಟ್ ಅಪೋಸ್ತೋಲಿಕ್ ಸಹೋದರಿಯರ ಮೇಲ್ವಿಚಾರಕಿ ಸಹೋದರಿ ಅಝ್ಮತ್ ಕಾರ್ಯಕ್ರಮವನ್ನು ಮುನ್ನಡೆಸಿದರು.

ವಂ. ಗುರು ಫೆರೋಸ್ ಅವರ ಎರಡು ರಾಷ್ಟ್ರಗಳ ನಡುವಿನ ಹಿಂಸಾಚಾರವನ್ನು ಅವರು ಖಂಡಿಸುವ ಮತ್ತು ಸಂವಾದದ ಮೂಲಕ ಯುದ್ಧವಿರಾಮಕ್ಕೆ ಆಗ್ರಹಿಸುವ ಸಂದೇಶ ಸ್ಪಷ್ಟವಾಗಿತ್ತು. “ತಾಲಿಬಾನ್‌ನ ಅತಿರೇಕಿ ಹಿಂಸಾಚಾರವು ವಿನಾಶಕಾರಿ ತತ್ವಶಾಸ್ತ್ರವಾಗಿದೆ, ಅದನ್ನು ತಡೆದು ಪರಿವರ್ತಿಸಲು ವಿಶ್ವಾಸಿಗಳ ಸಂಯುಕ್ತ ಬದ್ಧತೆ ಅಗತ್ಯವಿದೆ.”

ಇದಲ್ಲದೆ, ಸಂಘರ್ಷಕ್ಕೆ ಅಂತ್ಯ ನೀಡಿ ಶಾಂತಿಯನ್ನು ಸ್ಥಾಪಿಸಲು ಅಂತರರಾಷ್ಟ್ರೀಯ ಸಮುದಾಯವು ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎಂದು ಅವರು ನೆನಪಿಸಿದರು. “ಶಾಂತಿ ಮಾನವಕುಲದ ಸಾಮಾನ್ಯ ಗುರಿ ಮತ್ತು ಹಿತವಾಗಿರಲಿ” ಎಂದು ಅವರು ಮನವಿ ಮಾಡಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

02 ಮಾರ್ಚ್ 2026, 16:22