ಹುಡುಕಿ

2026.03.09 Papuan Women Carry Mercy to Remote Homes 2026.03.09 Papuan Women Carry Mercy to Remote Homes 

ದೂರದ ಮನೆಗಳಿಗೆ ಕರುಣೆಯ ವಾಹಕರಾಗಿರುವ ಪಪುವಾ ನ್ಯೂಗಿನಿಯಾದ ಮಹಿಳೆಯರು

ಪಪುವಾ ನ್ಯೂಗಿನಿಯಾದ ಬಸಿಲಾಕಿ ದ್ವೀಪದಲ್ಲಿ, ತಪಸ್ಸು ಕಾಲದ ಸಂದರ್ಭದಲ್ಲಿ ಧರ್ಮಕೇಂದ್ರದ ಮಹಿಳೆಯರು ರೋಗಿಗಳು ಮತ್ತು ವೃದ್ಧರ ಮನೆಗಳಿಗೆ ಪ್ರಾರ್ಥನೆ, ಸಾನ್ನಿಧ್ಯ ಮತ್ತು ಪವಿತ್ರ ಪರಮ ಪ್ರಸಾದವನ್ನು ತಲುಪಿಸುತ್ತಿದ್ದಾರೆ. ಮಾರ್ಚ್ ತಿಂಗಳು ಮಹಿಳೆಯರ ತಿಂಗಳಾಗಿ ಆಚರಿಸಲ್ಪಡುವ ಈ ಸಂದರ್ಭದಲ್ಲಿ, ಧರ್ಮಸಭೆ ನಿರ್ಲಕ್ಷಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವವರನ್ನು ಸ್ಮರಿಸುತ್ತಿದೆ.

ಪಪುವಾ ನ್ಯೂಗಿನಿಯಾದ ಸೈಡಿಯಾ–ಅಲೋಟೌದಲ್ಲಿರುವ ಪವಿತ್ರ ಹೃದಯ ಮಾತೆಯ ಧರ್ಮಕೇಂದ್ರದ  ಗುರುಗಳಾದ ವಂ ಗುರು ಜೆ.ಆರ್. ಅರೆಝಾ, ಬಸಿಲಾಕಿಯ ಸಂತ ಜೋಸೆಫ್ ಧರ್ಮಕೇಂದ್ರದ ಮಹಿಳೆಯರು ಸೇವೆ ಮತ್ತು ಕರುಣೆಯ ಮೂಲಕ ನಂಬಿಕೆಯ ಶಕ್ತಿಯುತ ಸಾಕ್ಷಿಯನ್ನು ನೀಡುತ್ತಿರುವುದನ್ನು ಹಂಚಿಕೊಂಡಿದ್ದಾರೆ.

“ಧರ್ಮಕೇಂದ್ರದ ಸಮುದಾಯ ಜೀವನದಲ್ಲಿ ಮಹಿಳೆಯರು ಯಾವಾಗಲೂ ಸಕ್ರಿಯರಾಗಿದ್ದಾರೆ,” ಎಂದು ವಂ ಗುರು ಜೆ.ಆರ್. ಹೇಳಿದರು. “ವಿವಿಧ ಚಟುವಟಿಕೆಗಳು ಮತ್ತು ಜೀವನೋಪಾಯ ಕಾರ್ಯಕ್ರಮಗಳ ಮೂಲಕ ಅವರು ಏಕತೆ ಮತ್ತು ಸಬಲೀಕರಣವನ್ನು ಉತ್ತೇಜಿಸುತ್ತಿದ್ದಾರೆ. ಈ ತಪಸ್ಸು ಕಾಲದಲ್ಲಿ ಅವರು ತಮ್ಮ ನಂಬಿಕೆಯನ್ನು ಇನ್ನಷ್ಟು ಗಾಢಗೊಳಿಸಲು ದಯೆಯ ಕೃತ್ಯಗಳನ್ನು ಜೀವನದಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಿದ್ದಾರೆ. ವಿಶೇಷವಾಗಿ ದ್ವೀಪದಾದ್ಯಂತ ಇರುವ ರೋಗಿಗಳು ಮತ್ತು ವೃದ್ಧರನ್ನು ಭೇಟಿ ಮಾಡುವ ಮೂಲಕ ಅವರು ಕರುಣೆಯ ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.”

ತ್ಯಾಗದ ಪಯಣ

ಈ ಸೇವೆಗೆ ಸಮರ್ಪಣೆ ಮತ್ತು ತ್ಯಾಗ ಅಗತ್ಯವಿದೆ ಎಂದು ವಂ ಗುರು ಜೆ.ಆರ್. ವಿವರಿಸಿದರು. “ಅವರು ಭೇಟಿ ನೀಡುವ ಅನೇಕ ಮನೆಗಳು ದೂರದ ಪ್ರದೇಶಗಳಲ್ಲಿ ಇವೆ,ಅಲ್ಲಿಗೆ ತಲುಪಲು ಮಹಿಳೆಯರು ದ್ವೀಪದ ಕಿರಿದಾದ ದಾರಿಗಳಲ್ಲಿ ಎರಡು ರಿಂದ ಮೂರು ಗಂಟೆಗಳವರೆಗೆ ನಡೆದು ಹೋಗಬೇಕಾಗುತ್ತದೆ.” ದೂರ ಮತ್ತು ಕಷ್ಟಗಳಿದ್ದರೂ ಮಹಿಳೆಯರು ಸಂತೋಷದಿಂದಲೇ ಈ ಪಯಣವನ್ನು ಕೈಗೊಳ್ಳುತ್ತಾರೆ.

“ಅವರು ರೋಗಿಗಳೊಂದಿಗೆ ಸಮಯ ಕಳೆಯುತ್ತಾರೆ, ಅವರ ಮಾತುಗಳನ್ನು ಆಲಿಸುತ್ತಾರೆ, ಅವರೊಂದಿಗೆ ಪ್ರಾರ್ಥಿಸುತ್ತಾರೆ ಮತ್ತು ಸರಳ ಆಹಾರವನ್ನು ಹಂಚಿಕೊಳ್ಳುತ್ತಾರೆ. ಅವರ ಸಾನ್ನಿಧ್ಯವು ಸಾಂತ್ವನವನ್ನು ನೀಡುತ್ತದೆ. ವೃದ್ಧರು ಮತ್ತು ರೋಗಿಗಳು ಮರೆಯಲ್ಪಟ್ಟಿಲ್ಲ ಎಂಬುದನ್ನು ಅದು ಅವರಿಗೆ ನೆನಪಿಸುತ್ತದೆ.”

ರೋಗಿಗಳ ಬಳಿಗೆ ಪವಿತ್ರ ಪರಮ ಪ್ರಸಾದ

ಹಲವಾರು ವಾರಗಳ ಕಾಲ ಈ ಭೇಟಿಗಳು ನಡೆದ ಬಳಿಕ ಮಹಿಳೆಯರು ತಮ್ಮ ಸೇವೆಯ ವಿಷಯವನ್ನು ವಂ ಗುರು ಜೆ.ಆರ್. ಅವರಿಗೆ ತಿಳಿಸಿದರು. “ಅವರು ಮಾಡುತ್ತಿರುವ ಕಾರ್ಯದ ಬಗ್ಗೆ ಕೇಳಿದಾಗ ಅವರ ಸಮರ್ಪಣೆ ನನಗೆ ಆಳವಾದ ಸ್ಪೂರ್ತಿಯನ್ನು ನೀಡಿತು,” ಎಂದು ವಂ ಗುರು ಜೆ.ಆರ್. ಹೇಳಿದರು. ಅವರ ಈ ಕರುಣೆಯ ಸೇವೆಗೆ ಬೆಂಬಲ ನೀಡುವ ಉದ್ದೇಶದಿಂದ ಅವರು ಮಹಿಳೆಯರೊಂದಿಗೆ ಒಂದು ಭೇಟಿಗೆ ತೆರಳಿದರು.

“ನಾವು ಒಟ್ಟಿಗೆ ಧರ್ಮಕೇಂದ್ರಕ್ಕೆ ಸೇರಿದ ಕನಿಷ್ಠ  ಎಂಟು ರೋಗಿಗಳನ್ನು ಭೇಟಿಯಾದೆವು,” ಎಂದು ಅವರು ನೆನಪಿಸಿಕೊಂಡರು. “ನಾವು ಅವರೊಂದಿಗೆ ಸಮಯ ಕಳೆದೆವು, ಒಟ್ಟಿಗೆ ಪ್ರಾರ್ಥಿಸಿದೆವು ಮತ್ತು ಅವರಿಗೆ ಪವಿತ್ರ ಪರಮ ಪ್ರಸಾದವನ್ನು ತಲುಪಿಸುವ ಅವಕಾಶ ನನಗೆ ದೊರೆಯಿತು.” ಧರ್ಮಕೇಂದ್ರದಿಂದ ದೂರವಿರುವ ಅನೇಕ ರೋಗಿಗಳಿಗೆ ಪವಿತ್ರ ಪರಮ ಪ್ರಸಾದವನ್ನು ಸ್ವೀಕರಿಸುವುದು ಅಪಾರ ಸಂತೋಷ ಮತ್ತು ಕೃತಜ್ಞತೆಯ ಕ್ಷಣವಾಗಿತ್ತು.

ಕರುಣೆಯ ಮೂಲಕ ಜೀವಂತವಾಗುವ ನಂಬಿಕೆ

ಈ ಭೇಟಿಗಳನ್ನು ನಿಷ್ಠೆಯಿಂದ ಆಯೋಜಿಸಿ ನೆರವೇರಿಸುತ್ತಿರುವ ಮಹಿಳೆಯರ ಬಗ್ಗೆ ವಂ ಗುರು ಜೆ.ಆರ್. ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. “ಈ ಮಹಿಳೆಯರಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ, ಅವರ ಕರುಣೆ ಮತ್ತು ಸಮರ್ಪಣೆಯ ಮೂಲಕ ಅತ್ಯಂತ ಅಗತ್ಯದಲ್ಲಿರುವವರಿಗೆ ಅವರು ನೈತಿಕ, ದೈಹಿಕ ಮತ್ತು ಆಧ್ಯಾತ್ಮಿಕ ಬೆಂಬಲವನ್ನು ನೀಡುತ್ತಿದ್ದಾರೆ.”

ಅವರ ಮೌನವಾದರೂ ಶಕ್ತಿಯುತವಾದ ಸೇವೆ, ನಂಬಿಕೆ ಕೇವಲ ಮಾತಿನಲ್ಲಿ ಅಲ್ಲ, ದಯೆ ಮತ್ತು ಪ್ರೀತಿಯ ಕಾರ್ಯಗಳ ಮೂಲಕ ಬದುಕಿನಲ್ಲಿ ವ್ಯಕ್ತವಾದಾಗಲೇ ಅದು ನಿಜವಾಗಿ ಜೀವಂತವಾಗುತ್ತದೆ ಎಂಬುದನ್ನು ನೆನಪಿಸುತ್ತದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

09 ಮಾರ್ಚ್ 2026, 08:35