ಹುಡುಕಿ

2026.03.13 Catholic faithful of Myanmar 2026.03.13 Catholic faithful of Myanmar   (Cardinal Charles Maung Bo of Myanmar)

ಮಯನ್ಮಾರ್ ಮಹಾಧರ್ಮಾಧ್ಯಕ್ಷರಿಂದ ಮಾರ್ಚ್ 26ರಂದು ವಿಶ್ವಶಾಂತಿಗಾಗಿ ಉಪವಾಸ-ಪ್ರಾರ್ಥನೆಗೆ ಕರೆ

ಮಯನ್ಮಾರ್ ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಮಾರ್ಚ್ 26 ಗುರುವಾರವನ್ನು ಪ್ರಾರ್ಥನೆ ಮತ್ತು ಉಪವಾಸದ ದಿನವಾಗಿ ಆಚರಿಸಲು ಮ್ಯಾನ್ಮಾರ್ ಕಥೋಲಿಕ ಮಹಾಧರ್ಮಾಧ್ಯಕ್ಷರು ವಿಶ್ವಾಸಿಗಳನ್ನು ಆಹ್ವಾನಿಸಿದ್ದಾರೆ.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

ಮಯನ್ಮಾರ್ ಕಥೋಲಿಕ ಮಹಾಧರ್ಮಾಧ್ಯಕ್ಷರ ಪರಿಷತ್ (CBCM) ಮಾರ್ಚ್ 26 ಗುರುವಾರವನ್ನು ಮ್ಯಾನ್ಮಾರ್ ದೇಶಕ್ಕಾಗಿ ವಿಶೇಷವಾಗಿ ತೀವ್ರ ಪ್ರಾರ್ಥನೆ ಮತ್ತು ಉಪವಾಸದ ದಿನವೆಂದು ಘೋಷಿಸಿದೆ. ಎಲ್ಲಾ ವಿಶ್ವಾಸಿಗಳು ಇದನ್ನು ಆಚರಿಸಬೇಕೆಂದು ಅವರು ಪ್ರೋತ್ಸಾಹಿಸಿದ್ದಾರೆ.

“ದೇವರ ಮಕ್ಕಳು” ಎಂದು ಉದ್ದೇಶಿಸಿ ಬರೆದ ಪತ್ರದಲ್ಲಿ, ಮಯನ್ಮಾರ್ ಕಥೋಲಿಕ ಮಹಾಧರ್ಮಾಧ್ಯಕ್ಷರ ಪರಿಷತ್ತಿನ ಅಧ್ಯಕ್ಷರಾದ ಪ್ರಧಾನ ಗುರು ಚಾರ್ಲ್ಸ್ ಬೋ ಹಾಗೂ ಪರಿಷತ್ತಿನ ಕಾರ್ಯದರ್ಶಿ ಮಹಾಧರ್ಮಾಧ್ಯಕ್ಷರಾದ ಪೂಜ್ಯ ನೋಯೆಲ್ ಸಾವ್ ನಾ ಅವ್ ತಮ್ಮ ಸಂಕಷ್ಟದಲ್ಲಿರುವ ರಾಷ್ಟ್ರಕ್ಕಾಗಿ ಈ ಮನವಿಯನ್ನು ಮಾಡಿದ್ದಾರೆ.

“ಕಥೋಲಿಕ ಧರ್ಮಸಭೆಗೆ, ಪವಿತ್ರ ತಪಸ್ಸು ಕಾಲವು ಪಶ್ಚಾತ್ತಾಪ, ಹೃದಯ ಪರಿವರ್ತನೆ ಮತ್ತು ದೇವರೊಂದಿಗೆ ಆಂತರಿಕ ಸಂಬಂಧವನ್ನು ಗಾಢಗೊಳಿಸುವ ಸಮಯವಾಗಿದೆ.” ಈ ಅವಧಿಯಲ್ಲಿ ವಿಶ್ವಾಸಿಗಳು ಪ್ರಾರ್ಥನೆ, ಉಪವಾಸ ಮತ್ತು ದಾನಧರ್ಮಕ್ಕೆ ಕರೆಯಲ್ಪಟ್ಟಿದ್ದಾರೆ ಎಂದು ಅವರು ನೆನಪಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿಯೂ ಹಾಗೂ ಮಯನ್ಮಾರಿನಲ್ಲಿಯೂ ಶಾಂತಿಗಾಗಿ ವಿಶೇಷವಾಗಿ ಪ್ರಾರ್ಥನೆ ಮಾಡುವ ಅಗತ್ಯವಿದೆ ಎಂದು ಮಹಾಧರ್ಮಾಧ್ಯಕ್ಷರು ಒತ್ತಿಹೇಳಿದರು. “ದೇವರು ತನ್ನ ಶಾಂತಿಯನ್ನು ವಿಶ್ವಕ್ಕೂ ಮತ್ತು ಮಯನ್ಮಾರಿಗೂ ನೀಡಲಿ; ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಏಕತೆಯಲ್ಲಿ ಪ್ರಗತಿ ಸಾಗಲಿ” ಎಂದು  ಪ್ರಾರ್ಥಿಸಲು ವಿಶ್ವಾಸಿಗಳನ್ನು ಆಹ್ವಾನಿಸಿದ್ದಾರೆ.

ವಿಶೇಷವಾಗಿ, ಅಸ್ಸಿಸಿಯ ಸಂತ ಫ್ರಾನ್ಸಿಸ್ ಅವರ ಶಾಂತಿಯ ಪ್ರಾರ್ಥನೆಯನ್ನು ನೆನಪಿಸಿಕೊಳ್ಳುವಂತೆ ಅವರು ವಿಶ್ವಾಸಿಗಳನ್ನು ಆಹ್ವಾನಿಸಿದ್ದಾರೆ. ಜೊತೆಗೆ ಉಪವಾಸದ ಮೂಲಕ “ಯೇಸು ಕ್ರಿಸ್ತನ ನೋವಿನೊಂದಿಗೆ ಏಕವಾಗುವಂತೆ — ನಮ್ಮ ನೋವುಗಳನ್ನು ಹೃದಯಗಳ ಪರಿವರ್ತನೆ ಮತ್ತು ಏಕತೆಗಾಗಿ ಅರ್ಪಿಸುವಂತೆ” ಅವರು ಪ್ರೋತ್ಸಾಹಿಸಿದ್ದಾರೆ.

ಇದೇ ವೇಳೆ ದಾನಧರ್ಮದ ಕಾರ್ಯಗಳನ್ನು ನೆರವೇರಿಸುವ ಮೂಲಕ “ಬಡವರಿಗೂ ದುಃಖದಲ್ಲಿರುವ ಜನರಿಗೂ ಸಹಾಯ ಮಾಡೋಣ, ದೇಣಿಗೆ ನೀಡೋಣ” ಎಂದು ಅವರು ಮನವಿ ಮಾಡಿದ್ದಾರೆ.

ಪತ್ರದ ಕೊನೆಯಲ್ಲಿ ಪ್ರಧಾನ ಗುರು ಬೋ ಮತ್ತು ಮಹಾಧರ್ಮಾಧ್ಯಕ್ಷರಾದ ಪೂಜ್ಯ ಸಾವ್ ನಾ ಅವ್ ವಿಶ್ವಾಸಿಗಳು ಶಾಂತಿಗಾಗಿ ಮಾಡುತ್ತಿರುವ ಪ್ರಾರ್ಥನೆಗಳಿಗೆ ಕೃತಜ್ಞತೆ ಸಲ್ಲಿಸಿದರು. 

“ಪೂಜ್ಯ ಜಗದ್ಗುರು 14ನೇ ಲಿಯೋ ಕೂಡ ಶಾಂತಿ ಎಂಬುದು ಪ್ರೀತಿ, ಕರುಣೆ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವಿಕೆಯನ್ನು ದಿನನಿತ್ಯದ ಜೀವನದಲ್ಲಿ ಅನುಸರಿಸುವ ಮೂಲಕ ನಿರ್ಮಿಸಲಾಗುತ್ತದೆ ಎಂದು ತಿಳಿಸುತ್ತಾರೆ” ಎಂದು ಸ್ಮರಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

14 ಮಾರ್ಚ್ 2026, 15:30