2026.03.06 Sir James MacMillan 2026.03.06 Sir James MacMillan 

ನಿಶ್ಶಬ್ದತೆ ಮತ್ತು ಪವಿತ್ರ ಸಂಗೀತದ(ಧಾರ್ಮಿಕ ಸಂಗೀತ) ಕುರಿತು ಸರ್ ಜೇಮ್ಸ್ ಮ್ಯಾಕ್ಮಿಲನ್

ಪವಿತ್ರ ಸಂಗೀತದ ಪಾಂಟಿಫಿಕಲ್ ಸಂಸ್ಥೆಯಲ್ಲಿ ಸರ್ ಜೇಮ್ಸ್ ಮ್ಯಾಕ್ಮಿಲನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನವಾಗಿದ್ದು, ಪವಿತ್ರ ಸಂಗೀತ ರಚನೆಯಲ್ಲಿ ನಿಶ್ಶಬ್ದತೆಯ ಆತ್ಮೀಯ ಮತ್ತು ಸೃಜನಾತ್ಮಕ ಪಾತ್ರದ ಕುರಿತು ಅವರು ಉಪನ್ಯಾಸ ನೀಡಿದರು. ವ್ಯಾಟಿಕನ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಅವರು ಪರಂಪರೆ, ಪೂಜಾಕ್ರಮ ಹಾಗೂ ಸಮಕಾಲೀನ ಸಂಗೀತ ರಚನೆಗಳಲ್ಲಿ ಪೂಜ್ಯ ಜಗದ್ಗುರುಗಳಾದ 16ನೆ ಬೆನೆಡಿಕ್ಟ್ ರವರ ಪರಂಪರೆಯ ಮಹತ್ವದ ಬಗ್ಗೆ ಚಿಂತನೆ ಹಂಚಿಕೊಂಡಿದ್ದಾರೆ.

ಲೇಖಕರು; ಮಾರ್ಕೊ ಡಿ ಬತ್ತಿಸ್ತಾ ಮತ್ತು ಲಿಂಡಾ ಬೋರ್ಡೋನಿ

“ನಿಶ್ಶಬ್ದದ ಧ್ವನಿ: ಆಧುನಿಕ ಪವಿತ್ರ ಸಂಗೀತದ ಕುರಿತು ಸರ್ ಜೇಮ್ಸ್ ಮ್ಯಾಕ್ಮಿಲನ್ ಅವರ ದೃಷ್ಟಿಕೋನ” ಎಂಬುದು ಸ್ಕಾಟ್ಲ್ಯಾಂಡ್‌ನ ಪ್ರಸಿದ್ಧ ಸಂಗೀತ ಸಂಯೋಜಕ ಹಾಗೂ ವಾದ್ಯವೃಂದ ನಿರ್ದೇಶಕರಾದ ಸರ್ ಜೇಮ್ಸ್ ಮ್ಯಾಕ್ಮಿಲನ್ ನೀಡಿದ ಲೆಕ್ಟಿಯೋ ಮ್ಯಾಜಿಸ್ಟ್ರಾಲಿಸ್ ಉಪನ್ಯಾಸದ ಶೀರ್ಷಿಕೆ. ಮಾರ್ಚ್ 6ರಂದು ಪವಿತ್ರ ಸಂಗೀತದ ಪಾಂಟಿಫಿಕಲ್ ಸಂಸ್ಥೆಯಲ್ಲಿ ಅವರಿಗೆ ಪವಿತ್ರ ಸಂಗೀತ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪದವಿ( Doctorate Honoris Causa)   ನೀಡಲಾಯಿತು.

ಸರ್ ಮ್ಯಾಕ್ಮಿಲನ್ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಸ್ಕಾಟ್ಲ್ಯಾಂಡ್‌ನ ಸಾಂಸ್ಕೃತಿಕ ಪರಂಪರೆ, ಕಥೋಲಿಕ ನಂಬಿಕೆ ಮತ್ತು ಸಾಮಾಜಿಕ ನ್ಯಾಯದ ಬದ್ಧತೆಯನ್ನು ಒಂದಾಗಿಸಿಕೊಂಡ ಆಳವಾದ ಭಾವನಾತ್ಮಕ ಸಂಗೀತ ರಚನೆಗಳಿಗಾಗಿ ಪ್ರಸಿದ್ಧರಾಗಿದ್ದಾರೆ.

ತಮ್ಮ ಉಪನ್ಯಾಸದಲ್ಲಿ ಅವರು ನಿಶ್ಶಬ್ದತೆ, ನಂಬಿಕೆ ಹಾಗೂ ಇಂದಿನ ಕಾಲದಲ್ಲಿ ಸಂಗೀತ ಸಂಯೋಜಕರ ಪಾತ್ರದ ಕುರಿತು ಚಿಂತನೆ ವ್ಯಕ್ತಪಡಿಸಿದರು. ಪವಿತ್ರ ಸಂಗೀತ ರಚನೆಯಲ್ಲಿ ನಿಶ್ಶಬ್ದತೆಯ ಉಪಸ್ಥಿತಿ, ಸಂಗೀತದ ಆಧ್ಯಾತ್ಮಿಕ ಉದ್ದೇಶ ಮತ್ತು ಪರಂಪರೆ ಹಾಗೂ ಹೊಸತನದ ನಡುವಿನ ಸಂಬಂಧವನ್ನು ಅವರು ವಿಶೇಷವಾಗಿ ಒತ್ತಿಹೇಳಿದರು.

ಕಾರ್ಯಕ್ರಮದ ನಂತರ ಮಾರ್ಕೊ ಡಿ ಬತ್ತಿಸ್ತಾ ನಡೆಸಿದ ಸಂದರ್ಶನದಲ್ಲಿ ಸರ್ ಜೇಮ್ಸ್ ಮ್ಯಾಕ್ಮಿಲನ್ ಈ ವಿಚಾರಗಳನ್ನು ಇನ್ನಷ್ಟು ವಿವರಿಸಿ, ಪೂಜ್ಯ ಜಗದ್ಗುರುಗಳಾದ 16ನೆ ಬೆನೆಡಿಕ್ಟ್  ರವರ ಪರಂಪರೆ ಹಾಗೂ ಪೂಜಾಕ್ರಮದಲ್ಲಿ ಪವಿತ್ರ ಸಂಗೀತದ ಮಹತ್ವವನ್ನು ನೆನಪಿಸಿದರು.

ಸೃಜನಶೀಲತೆಯ ಮೂಲ-ನಿಶ್ಶಬ್ದತೆ

“ಅನೇಕ ಸಂಗೀತ ಸಂಯೋಜಕರು ತಮ್ಮ ಕಲ್ಪನೆಗೆ ನಿಶ್ಶಬ್ದತೆ ಅತ್ಯಂತ ಮೂಲಭೂತವಾದದ್ದು ಎಂದು ಒಪ್ಪಿಕೊಳ್ಳುತ್ತಾರೆ. ಅವರು ಆ ನಿಶ್ಶಬ್ದತೆಯೊಳಗೆ ಇಳಿದಾಗಲೇ ಸಂಗೀತ ಆರಂಭವಾಗುತ್ತದೆ,” ಎಂದು ಅವರು ಹೇಳಿದರು.

ಸಂಗೀತವು ಧ್ವನಿಯಾಗಿದ್ದರೂ ಅದರ ಮೂಲ “ನಮ್ಮ ಹೃದಯದ ನಿಶ್ಶಬ್ದತೆಯಲ್ಲಿದೆ” ಎಂದು ಅವರು ವಿವರಿಸಿದರು. ಈ ಚಿಂತನೆಗೆ ಅವರು ನಂಬಿಕೆಯನ್ನು ಕೂಡ ಜೋಡಿಸಿದರು. “ಕ್ರೈಸ್ತರು ತಿಳಿದುಕೊಂಡಿರುವುದು ಏನೆಂದರೆ, ನಮ್ಮ ಹೃದಯದ ಆಳದ ನಿಶ್ಶಬ್ದತೆಯಲ್ಲಿಯೇ ನಾವು ದೇವರನ್ನು ಎದುರಿಸುತ್ತೇವೆ,.”

ಪವಿತ್ರ ಸಂಗೀತದಲ್ಲಿ ಪರಂಪರೆ ಮತ್ತು ಹೊಸತನ

ಪವಿತ್ರ ಸಂಗೀತ ಬರೆಯುವುದು ಎಂದರೆ ಹಳೆಯ ಶೈಲಿಗಳನ್ನು ನಕಲಿಸುವುದಲ್ಲ ಎಂದು ಮ್ಯಾಕ್ಮಿಲನ್ ಹೇಳಿದರು. ಇಂದಿನ ಸಂಗೀತ ಸಂಯೋಜಕರು “ಆ ಪರಂಪರೆಯ ಮಹತ್ವವನ್ನು ಅರಿತುಕೊಳ್ಳಬೇಕು ಮತ್ತು ಯಾವುದೋ ರೀತಿಯಲ್ಲಿ ಸಂಗೀತ ಅದರಿಂದ ರೂಪುಗೊಳ್ಳಬಹುದು” ಎಂದು ಅವರು ಹೇಳಿದರು.

ಗ್ರೆಗೋರಿಯನ್ ಗಾಯನ ಮತ್ತು  ನವೋದಯ (Renaissance) ಕಾಲದ ಬಹುಸ್ವರ ಸಂಗೀತವನ್ನು ಕಥೋಲಿಕ ಸಂಗೀತ ಪರಂಪರೆಯ ಪ್ರಮುಖ ಅಸ್ತಿವಾರಗಳೆಂದು ಅವರು ಉಲ್ಲೇಖಿಸಿದರು.

ಪೂಜ್ಯ ಜಗದ್ಗುರುಗಳಾದ 16ನೆ ಬೆನೆಡಿಕ್ಟರ ಕುರಿತು ಮಾತನಾಡುತ್ತಾ, “ಇತಿಹಾಸದ ಆಳವಾದ ಸಂಗೀತ ಪರಂಪರೆಯನ್ನು ಇಂದಿನ ಸಂಗೀತ ರಚನೆಗಳೊಂದಿಗೆ ಸಂಪರ್ಕಿಸುವ ಅಗತ್ಯವನ್ನು ಅವರು ನೆನಪಿಸಿದರು. ಧರ್ಮಸಭೆಯ ಸಂಗೀತ ಪರಂಪರೆಯಿಂದ ಪ್ರೇರಣೆಯನ್ನು ಪಡೆಯಲು ಅವರು ಸಂಗೀತ ಸಂಯೋಜಕರನ್ನು ಪ್ರೋತ್ಸಾಹಿಸಿದರು” ಎಂದು ಹೇಳಿದರು.

ಪವಿತ್ರ ಸಂಗೀತ ಮತ್ತು ಪೂಜಾಕ್ರಮ

ಪವಿತ್ರ ಬಲಿಪೂಜೆಯಲ್ಲಿ ಪವಿತ್ರ ಸಂಗೀತದ ಉದ್ದೇಶದ ಕುರಿತು, “ನಾವು ಪವಿತ್ರ ಬಲಿಪೂಜೆಗೆ ಮನರಂಜನೆಗಾಗಿ ಹೋಗುವುದಿಲ್ಲ. ಪವಿತ್ರ ಸಂಗೀತವು ಪೂಜಾಕ್ರಮದೊಳಗಾಗಲಿ ಅಥವಾ ಅದರ ಹೊರಗಾಗಲಿ ನಮ್ಮ ಚಿಂತನೆಗಳು ಮತ್ತು ಪ್ರಾರ್ಥನೆಗಳನ್ನು ದೇವರ ಕಡೆಗೆ ಕೊಂಡೊಯ್ಯುವ ಮಾರ್ಗವಾಗಬೇಕು.”

ಸಂಗೀತವು ಸಭೆಯ ಪ್ರಾರ್ಥನೆಯ ಸೇವೆಯಾಗಿರಬೇಕು; ಅದು ಮನರಂಜನೆಯ ಸಾಧನವಾಗಬಾರದು ಎಂದು ಅವರು ಹೇಳಿದರು.

ಸಂಗೀತ ಭಾಷೆ ಮತ್ತು ಜವಾಬ್ದಾರಿ

ಪವಿತ್ರ ಹಾಗೂ ಲೌಕಿಕ ಸಂಗೀತದ ನಡುವೆ ತಮ್ಮ ಸಂಗೀತ ಭಾಷೆ ಬದಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮ್ಯಾಕ್ಮಿಲನ್, ತಮ್ಮ ವಿಧಾನವು “ಬಹಳ ಸುಗಮ ಮತ್ತು ಬಹುಮುಖವಾಗಿದೆ” ಎಂದು ಹೇಳಿದರು.

ಆದರೆ ಪೂಜಾಕ್ರಮಕ್ಕಾಗಿ ಸಂಗೀತ ಬರೆಯುವಾಗ ಸಂಗೀತ ಸಂಯೋಜಕರಿಗೆ ವಿಶೇಷ ಜವಾಬ್ದಾರಿ ಇದೆ ಎಂದು ಅವರು ಹೇಳಿದರು. “ಸಂಗೀತ ಸಂಯೋಜಕರು ಬರೆಯುವ ಸಂಗೀತವು ಸಭೆಯ ಆಳವಾದ ಚಿಂತನೆಗಳು, ಧ್ಯಾನ ಮತ್ತು ಪ್ರಾರ್ಥನೆಗಳನ್ನು ಹೊತ್ತುಕೊಂಡು ಹೋಗಿ ಅವುಗಳನ್ನು ದೇವರ ವೇದಿಕೆಯತ್ತ ಕೊಂಡೊಯ್ಯುವಂತಿರಬೇಕು,” ಎಂದು  ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

06 ಮಾರ್ಚ್ 2026, 19:33