ಹುಡುಕಿ

2026.03.13 Concerto del “Requiem” 2026.03.13 Concerto del “Requiem” 

ವಾರ್ಸಾ ಚೇಂಬರ್ ಓಪೆರಾ ಗಾಯನ ಮತ್ತು ವಾದ್ಯವೃಂದದಿಂದ ರೋಮಿನಲ್ಲಿ ಮೊಝಾರ್ಟ್‌ನ ಶೋಕಗೀತೆಯ ಪ್ರತಿಧ್ವನಿ

ಮೊಝಾರ್ಟ್‌ನ ಡಿ ಮೈನರ್ ಶೋಕಗೀತೆ ರೋಮಿನ ಜಗದ್ಗುರುಗಳ ಬಸಿಲಿಕಾ-ಸಂತ ಮರಿಯಾ ಮಜ್ಜೋರೇಯಲ್ಲಿ ವಾರ್ಸಾ ಚೇಂಬರ್ ಓಪೆರಾದ ಗಾಯನ ಮತ್ತು ವಾದ್ಯವೃಂದದ ಪ್ರದರ್ಶನದಲ್ಲಿ ಪ್ರತಿಧ್ವನಿಸಿತು. ಅತಿಯಾದ ವ್ಯಾಖ್ಯಾನಾತ್ಮಕ ಭಾರದಿಂದ ಮುಕ್ತಗೊಂಡ ಈ ಕೃತಿ ಹೊಸ ಸ್ಪಷ್ಟತೆಯೊಂದಿಗೆ ಮೂಡಿಬಂದು, ಜೀವನ, ಮರಣ ಮತ್ತು ನಿರೀಕ್ಷೆಯ ಕುರಿತು ಚಿಂತಿಸುವ ಮಹಾಕೃತಿಯ ಸಹಜ ಮಾನವೀಯತೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು.

ಲೇಖಕರು:  ಮಾರ್ಕೊ ಡಿ ಬತ್ತಿಸ್ತಾ

ಗುರುವಾರ ಸಂಜೆ ಮೊಝಾರ್ಟ್‌ನ ಡಿ ಮೈನರ್ ಶೋಕಗೀತೆ ರೋಮಿನ ಜಗದ್ಗುರುಗಳ ಬಸಿಲಿಕಾ-ಸಂತ ಮರಿಯಾ ಮಜ್ಜೋರೇಯಲ್ಲಿ ಪ್ರತಿಧ್ವನಿಸಿತು. ಈ ಸಂಗೀತ ಕಾರ್ಯಕ್ರಮವನ್ನು ವಾರ್ಸಾ ಚೇಂಬರ್ ಓಪೆರಾದ ಗಾಯನ ಮತ್ತು ವಾದ್ಯವೃಂದ ಪ್ರದರ್ಶಿಸಿತು.

 ತಪಸ್ಸು ಕಾಲದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ವಿಶೇಷ ಸಂಕೇತಾತ್ಮಕ ಮಹತ್ವವಿತ್ತು. ತಪಸ್ಸು ಕಾಲವು ಸಾಮಾನ್ಯವಾಗಿ ಮಾನವ ಜೀವನದ ನಾಜೂಕು ಮತ್ತು ಅಸ್ಥಿರತೆಯ ಕುರಿತು ಆಲೋಚಿಸುವ ಸಮಯವಾಗಿದೆ. ಕ್ರೈಸ್ತಧರ್ಮದ ಅತ್ಯಂತ ಮಹತ್ವದ ಬಸಿಲಿಕಾಗಳಲ್ಲಿ ಒಂದರಲ್ಲಿ ಮೊಝಾರ್ಟ್‌ನ ಅಂತಿಮ ಸಂಗೀತ ಕೃತಿಯನ್ನು ಪ್ರದರ್ಶಿಸುವುದು ಅದರ ವಿಶ್ವವ್ಯಾಪಕತೆಯನ್ನು ಉಲ್ಲೇಖಿಸಿತು ಮತ್ತು ಪೋಲಿಷ್ ಜನರು ಹಾಗೂ ರೋಮಿನ ಲಿತರ್ಜಿಕಲ್ ಪರಂಪರೆಯ ನಡುವಿನ ಆತ್ಮಿಕ ಬಾಂಧವ್ಯವನ್ನು ಒತ್ತಿಹೇಳಿತು.

ಮೊಝಾರ್ಟ್‌ನ ಸಂಗೀತದ ಮೂಲ ಸತ್ವದತ್ತ ಮರಳಿಕೆ

ಆಡಮ್ ಬನಾಶಾಕ್ ಅವರ ನಿರ್ದೇಶನದಲ್ಲಿ ಗಾಯನ ಮತ್ತು ವಾದ್ಯವೃಂದವು ಈ ಕೃತಿಯ ಮೂಲ ಸತ್ವದ ಮೇಲೆ ಕೇಂದ್ರೀಕರಿಸಿದ ವ್ಯಾಖ್ಯಾನವನ್ನು ನೀಡಿತು. ಆ ಕಾಲಘಟ್ಟದ ವಾದ್ಯಗಳನ್ನು ಬಳಸುವುದರಿಂದ ವೋಲ್ಫ್‌ಗಾಂಗ್ ಅಮಾಡಿಯಸ್ ಮೊಝಾರ್ಟ್‌ನ ಸಂಗೀತದ ಮೂಲ ಧ್ವನಿಯ ವಾತಾವರಣವನ್ನು ಪುನರುಜ್ಜೀವನಗೊಳಿಸಲಾಯಿತು. ಇದರಿಂದ ಈ ಕೃತಿಯ ಆಂತರಿಕ ಮತ್ತು ಧ್ಯಾನಾತ್ಮಕ ಸ್ವಭಾವ ಸ್ಪಷ್ಟವಾಗಿ ಹೊರಹೊಮ್ಮಿತು. ಸಂಗೀತ ಇತಿಹಾಸದ ಭವ್ಯ ಸ್ಮಾರಕವಲ್ಲದೆ, ಈ ಶೋಕಗೀತೆ ಒಂದು ಜೀವಂತ ಕೃತಿಯಾಗಿ — ನೇರ, ಮಾನವೀಯ ಮತ್ತು ಆಳವಾದ ಭಾವಪ್ರಕಟನೆಯೊಂದಿಗೆ — ಶ್ರೋತೃಗಳ ಮುಂದೆ ಮೂಡಿಬಂದಿತು.

  ಶೋಕಗೀತೆಯ ಹಿಂದೆ ಇರುವ ಕಥೆ

ಸಂಗೀತ ಇತಿಹಾಸದಲ್ಲಿ ಮೊಝಾರ್ಟ್‌ನ ಶೋಕಗೀತೆಗೆ ಸಮಾನವಾದ ಪ್ರಸಿದ್ಧಿ ಪಡೆದ ಕೃತಿಗಳು ವಿರಳ. ಇದರ ಕಥೆ 1791ರಲ್ಲಿ ಆರಂಭವಾಯಿತು. ಫ್ರಾಂಝ್ ವಾನ್ ವಾಲ್ಸೆಗ್ ತನ್ನ ಮೃತ ಪತ್ನಿಯನ್ನು ಸ್ಮರಿಸಲು ಈ ಕೃತಿಯನ್ನು ಮೊಝಾರ್ಟ್‌ಗೆ ಆಜ್ಞಾಪಿಸಿದರು. ಆಗಲೇ ದಿ ಮ್ಯಾಜಿಕ್ ಫ್ಲೂಟ್ ಮತ್ತು ಲಾ ಕ್ಲೆಮೆನ್ಜಾ ದಿ ಟಿಟೊ ಕೃತಿಗಳ ರಚನೆಯಿಂದ ಖ್ಯಾತರಾಗಿದ್ದ  ಮೊಝಾರ್ಟ್ ತುರ್ತಾಗಿಈ ಕೃತಿಯ ಮೇಲೆ ಕೆಲಸ ಮಾಡುತ್ತಿದ್ದರೂ, 1791ರ ಡಿಸೆಂಬರ್ 5ರಂದು ಕೇವಲ 35ನೇ ವಯಸ್ಸಿನಲ್ಲಿ ಅವರು ನಿಧನರಾದರು. ಕೃತಿ ಅಪೂರ್ಣವಾಗಿಯೇ ಉಳಿಯಿತು. ನಂತರ ಅವರ ವಿದ್ಯಾರ್ಥಿ ಫ್ರಾಂಝ್ ಜಾವರ್ ಸೂಸ್ಮಾಯರ್ ಮೊಝಾರ್ಟ್‌ನ ಕರಡುಗಳನ್ನು ಆಧರಿಸಿ ಅದನ್ನು ಪೂರ್ಣಗೊಳಿಸಿದರು.

ಗಾಯಕರು, ಗಾಯನ-ವಾದ್ಯವೃಂದ ಮತ್ತು ಸಂಸ್ಥೆಗಳ ಬೆಂಬಲ

ಈ ಪ್ರದರ್ಶನದಲ್ಲಿ ಸಮತೋಲನ ಮತ್ತು ಭಾವಪೂರ್ಣತೆಯಿಂದ ಕೂಡಿದ ನಾಲ್ವರು ಗಾಯಕರು ಭಾಗವಹಿಸಿದರು: ಸೋಪ್ರಾನೋ ಅಲೆಕ್ಸಾಂಡ್ರಾ ಓಲ್ಚಿಕ್, ಮೇಜೊ-ಸೋಪ್ರಾನೋ ಜೊಯಾನ್ನಾ ಮೊತುಲೆವಿಚ್, ಟೆನರ್ ಅದ್ರಿಯನ್ ದೊಮರೆಕಿ ಮತ್ತು ಬಾಸ್ ಆರ್ಥುರ್ ಜಾಂಡಾ. ಗಾಯನ ಮತ್ತು ವಾದ್ಯವೃಂದದೊಂದಿಗೆ ಅವರು ಸಾಮಾನ್ಯವಾಗಿ ಮೊಝಾರ್ಟ್‌ನ ಆಧ್ಯಾತ್ಮಿಕ ಒಡಂಬಡಿಕೆ ಎಂದು ಪರಿಗಣಿಸಲ್ಪಡುವ ಸಂಗೀತಕ್ಕೆ ಸ್ವರ ನೀಡಿದರು — ಕಾಲವನ್ನು ಮೀರಿ ಇಂದಿನ ಕೇಳುಗರ ಹೃದಯಗಳೊಂದಿಗೆ ನೇರವಾಗಿ  ಮಾತನಾಡುವುದೇ ಆ ಸಂಗೀತ.

 ಈ ಕಾರ್ಯಕ್ರಮವನ್ನು ಜಗದ್ಗುರುಗಳ ಅಧಿಕಾರ ಪೀಠದ ಬಳಿಯ ಪೋಲಂಡ್ ರಾಯಭಾರ ಕಚೇರಿ, ರಾಯಭಾರಿ ಅಡಮ್ ಕ್ವಿಯಾಟ್ಕೋವ್ಸ್ಕಿ ಅವರ ನೇತೃತ್ವದಲ್ಲಿ, ಜೊತೆಗೆ ಮಾಝೋವಿಯಾ ಪ್ರಾಂತ್ಯದ ಅಧ್ಯಕ್ಷ ಅಡಮ್ ಸ್ಟ್ರುಜಿಕ್ ಮತ್ತು ವಾರ್ಸಾ ಚೇಂಬರ್ ಓಪೆರಾದ ನಿರ್ದೇಶಕಿ ಅಲಿಚಿಯಾ ವೇಂಗೊರ್ಜೆವ್ಸ್ಕಾ-ವಿಸ್ಕರ್ಡ್ ಅವರ ಸಹಕಾರದಿಂದ ಆಯೋಜಿಸಲಾಯಿತು. ಈ ಸಂಗೀತ ಕಾರ್ಯಕ್ರಮವನ್ನು ಪ್ರಧಾನ ಗುರು ರೋಲಾಂಡಾಸ್ ಮಕ್ರಿಕಾಸ್, ಜಗದ್ಗುರುಗಳ ಬಸಿಲಿಕಾ-ಸಂತ ಮರಿಯಾ ಮಜ್ಜೋರೇಯ ಮುಖ್ಯಾಧ್ಯಕ್ಷರ ಸಹಯೋಗದಲ್ಲಿ ನಡೆಸಲಾಯಿತು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

13 ಮಾರ್ಚ್ 2026, 18:55