KUWAIT-ISRAEL-IRAN-US-CONFLICT KUWAIT-ISRAEL-IRAN-US-CONFLICT  (AFP or licensors)

ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ: “ಅರೇಬಿಯಾದ ಮಾತೆ ನಮ್ಮನ್ನು ಕಾಪಾಡಿ ಶಾಂತಿ ಅನುಗ್ರಹಿಸಲಿ”

ಅಮೆರಿಕಾ ಮತ್ತು ಇಸ್ರಾಯೇಲ್ ಇರಾನ್ ಮೇಲೆ ನಡೆಸಿದ ದಾಳಿಗಳ ನಂತರ, ದಕ್ಷಿಣ ಅರೇಬಿಯಾದ ಪ್ರೇಷಿತ ಪ್ರತಿನಿಧಿ ಧರ್ಮಾಧ್ಯಕ್ಷ ಪಾವ್ಲೊ ಮಾರ್ಟಿನೆಲ್ಲಿ, ವಿಶ್ವಾಸಿಗಳನ್ನು ಶಾಂತಿಗಾಗಿ ಮತ್ತು ಜನರ ಕಲ್ಯಾಣಕ್ಕಾಗಿ ಪ್ರಾರ್ಥನೆಗೆ ಆಹ್ವಾನಿಸಿದರು.

ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ

ಇರಾನ್ ಮೇಲೆ ನಡೆದ ಬಾಂಬ್ ದಾಳಿಗಳ ಪರಿಣಾಮಗಳನ್ನು ಗಲ್ಫ್ ಪ್ರದೇಶ ಇನ್ನೂ ಅನುಭವಿಸುತ್ತಿರುವ ಸಂದರ್ಭದಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್, ಒಮಾನ್ ಮತ್ತು ಯೆಮೆನ್ ದೇಶಗಳಲ್ಲಿ ವಾಸಿಸುವ ಕಥೋಲಿಕ ಸಮುದಾಯಗಳಿಗೆ ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ  “ಶಾಂತಿ ಮತ್ತು ಸೌಹಾರ್ದತೆ”ಗಾಗಿ ಜಪಸರ ಪ್ರಾಥನೆ ಸಲ್ಲಿಸಲು ಮನವಿ ಮಾಡಿದರು.

ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಮಾತನಾಡಿದ ಅವರು, “ಅರೇಬಿಯಾದ ಮಾತೆಯ ಮಧ್ಯಸ್ಥಿಕೆಗೆ ಈ ಪ್ರದೇಶವನ್ನು ಒಪ್ಪಿಸಿದ್ದೇನೆ; ನಮ್ಮ ರಕ್ಷಕರು ಪೇತ್ರ ಮತ್ತು ಪೌಲರು ನಮ್ಮನ್ನು ಕಾಪಾಡಲಿ; ಸಂತ ಫ್ರಾನ್ಸಿಸ್ ಅಸ್ಸಿಸಿಯವರ ಮಧ್ಯಸ್ಥಿಕೆ ನಮಗೆ ಶಾಂತಿಯನ್ನು ನೀಡಲಿ” ಎಂದು ಹೇಳಿದರು. ಪವಿತ್ರ ಪರಮಪ್ರಸಾದದ ಆಚರಣೆಯ ಸಂದರ್ಭದಲ್ಲಿ ಕೂಡ ಅವರು “ಈ ಪ್ರದೇಶದ ಎಲ್ಲಾ ಜನರ ಶಾಂತಿ ಮತ್ತು ಭದ್ರತೆಗಾಗಿ” ಪ್ರಾರ್ಥಿಸಲು ವಿಶ್ವಾಸಿಗಳನ್ನು ವಿನಂತಿಸಿದರು.

ಪೂಜ್ಯ ಜಗದ್ಗುರುಗಳ  ಸಂದೇಶ

ಶನಿವಾರ ಆರಂಭವಾದ ಅಮೆರಿಕಾ–ಇಸ್ರಾಯೇಲ್ ಸಂಯುಕ್ತ ದಾಳಿಗಳ ನಂತರ, ಇರಾನ್ ಗಲ್ಫ್ ಪ್ರದೇಶದ ವಿವಿಧ ಭಾಗಗಳ ಮೇಲೆ ಪ್ರತಿದಾಳಿ ನಡೆಸಿತು. ದೋಹಾ, ಮನಾಮಾ ಮತ್ತು ಕುವೈತ್ ನಗರಗಳಲ್ಲಿ ವಿಮಾನ ನಿಲ್ದಾಣಗಳು, ಕಟ್ಟಡಗಳು, ಬಂದರುಗಳು ಮತ್ತು ಅನೇಕ ನಾಗರಿಕ ಸೌಕರ್ಯಗಳು ದಾಳಿಗೆ ಗುರಿಯಾದವು.

ಭಾನುವಾರದ ಏಂಜಲಸ್ ಸಂದರ್ಭದಲ್ಲಿ ಪೂಜ್ಯ ಜಗದ್ಗುರುಗಳು ಮಧ್ಯಪ್ರಾಚ್ಯದಲ್ಲಿ ಶಾಂತಿಯಿಗಾಗಿ ಪ್ರಾರ್ಥನೆಗೆ ಕರೆ ನೀಡಿದರು. ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ, “ನಿನ್ನೆ ಪೂಜ್ಯ ಜಗದ್ಗುರುಗಳು ಉಚ್ಚರಿಸಿದ ಮಾತುಗಳು ಅತ್ಯಂತ ಮಹತ್ವದ್ದಾಗಿದ್ದವು. ಅವರು ನಾವು ಎದುರಿಸುತ್ತಿರುವ ನಿಜವಾದ ವಿಷಯವನ್ನು ಸ್ಪಷ್ಟವಾಗಿ ಉಲ್ಲೇಖಿಸಿದರು; ಅವರ ಮಾತುಗಳು ನಮ್ಮನ್ನು ಆಳವಾಗಿ ಸ್ಪರ್ಶಿಸಿವೆ” ಎಂದು ಹೇಳಿದರು.

ಜನರ “ಹಿತ”ದ ಕುರಿತು ಪೂಜ್ಯ ಜಗದ್ಗುರುಗಳು ಒತ್ತಿಹೇಳಿದ ವಿಷಯವನ್ನು ಅವರು “ತೂಕವಿರುವ, ಸ್ಪಷ್ಟ ಮತ್ತು ನಿಖರವಾದ ಪದಗಳು” ಎಂದು ವಿವರಿಸಿದರು. “ರಾಜತಾಂತ್ರಿಕತೆ ಮತ್ತು ಸಂವಾದದಿಂದ ಮತ್ತೆ ಪ್ರಾರಂಭಿಸಬೇಕು, ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸಲು ನಮ್ಮ ಮುಂದಿರುವ ಎಲ್ಲಾ ಅಡೆತಡೆಗಳನ್ನು ದೂರ ಮಾಡಬೇಕು” ಎಂಬ ಪೂಜ್ಯ ಜಗದ್ಗುರುಗಳ ಮನವಿಯನ್ನು ಅವರು ಪುನರುಚ್ಚರಿಸಿದರು.

ಜನರ ಹಿತ

ಸಾಮಾನ್ಯ ಜನರ ದಿನನಿತ್ಯದ ಬದುಕಿನ ಕುರಿತು ಮಾತನಾಡಿದ ಧರ್ಮಾಧ್ಯಕ್ಷರು, “ಪ್ರತಿ ದಿನವೂ ಸಮಸ್ಯೆಗಳನ್ನು ಎದುರಿಸುವ ಜನರ ಬಗ್ಗೆ ನಾವು ಚಿಂತಿಸಬೇಕು. ಅವರಿಗೆ ಆಹಾರ, ಶಾಲೆ ಅಥವಾ ಉದ್ಯೋಗ, ಕುಟುಂಬದ ಜೀವನವನ್ನು ವ್ಯವಸ್ಥಿತಗೊಳಿಸುವ ಪ್ರಶ್ನೆಗಳು ಎದುರಾಗುತ್ತವೆ” ಎಂದು ಹೇಳಿದರು.

“ನ್ಯಾಯದ ಆಧಾರದ ಮೇಲೆ ಶಾಂತ ಜೀವನವನ್ನು ಹಾರೈಸುವ ಜನರ ದಿನನಿತ್ಯದ ಜೀವನ ಮತ್ತು ಕಲ್ಯಾಣವನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಮುಖ್ಯ” ಎಂದು ಅವರು ಸೇರಿಸಿದರು.

ಪ್ರಾರ್ಥನೆಯಲ್ಲಿ ಏಕತೆ

ಕಥೋಲಿಕ ಸಮುದಾಯಗಳಿಗೆ ತಮ್ಮ ಮನವಿಯನ್ನು ಮುಂದುವರೆಸಿದ ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ, ಎಲ್ಲರೂ ಪ್ರಾರ್ಥನೆಯಲ್ಲಿ ಏಕತೆಯಿಂದ ಉಳಿಯುವಂತೆ ಕರೆ ನೀಡಿದರು. “ಪ್ರತಿ ದಿನ ಜಪಸರ ಪ್ರಾಥನೆ ಸಲ್ಲಿಸಲು ಮನವಿ ಮಾಡಿ; ನಾವು ಏಕಾಂಗಿಗಳಲ್ಲ ಎಂಬ ಭಾವನೆ ಇಲ್ಲದೆ, ಸದಾ ಪ್ರಾರ್ಥನೆಯಲ್ಲಿ ಒಂದಾಗಿ ಇರಬೇಕು” ಎಂದು ಅವರು ಹೇಳಿದರು.

“ನಾವು ಸದಾ ಒಟ್ಟಿಗಿದ್ದೇವೆ. ನಾವು ಒಟ್ಟಾಗಿ ಪ್ರಾರ್ಥಿಸುತ್ತೇವೆ. ನಾವು ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ,” ಎಂದು ಅವರು ಭರವಸೆ ನೀಡಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

02 ಮಾರ್ಚ್ 2026, 16:31