“ಯುದ್ದ ವಿಡಿಯೋ ಗೇಮಿನಂತಾದಾಗ”: ಪ್ರಧಾನ ಧರ್ಮಾಧ್ಯಕ್ಷರಾದ ಡೇವಿಡ್ ಎಚ್ಚರಿಕೆ
ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ
ಮಧ್ಯಪ್ರಾಚ್ಯದ ಸಂಘರ್ಷದ ಸುದ್ದಿಗಳನ್ನು ಅನುಸರಿಸಿದ ಬಳಿಕ, ಅಮೇರಿಕಾ ಮತ್ತು ಇಸ್ರಾಯೇಲ್ ಇರಾನ್ ವಿರುದ್ಧ ಮಾಡಿದ ದಾಳಿಯನ್ನು“ಮುಂಚಿತ ದಾಳಿ” ಎಂದು ವರ್ಣಿಸಿದ ಧರ್ಮಾಧ್ಯಕ್ಷರು ಸೇನಾ ಕ್ರಮದ ರೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಮಿತವಾದ ಸೇನಾ ಕ್ರಮವೆಂದು ಹೇಳಲಾಗಿದ್ದ ದಾಳಿ, ಈಗ ವೇಗವಾಗಿ ವಿಸ್ತಾರಗೊಳ್ಳುತ್ತಿರುವ ಪ್ರಾದೇಶಿಕ ಸಂಘರ್ಷವಾಗಿ ರೂಪಾಂತರಗೊಳ್ಳುತ್ತಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಅಲೆಗಳ ಮೂಲಕ ಪ್ರತಿದಾಳಿ ನಡೆಸಿತು. ಈ ದಾಳಿಗಳು ಕೇವಲ ಇಸ್ರಾಯೇಲ್ ಮಾತ್ರವಲ್ಲದೆ ಗಲ್ಫ್ ಪ್ರದೇಶದಲ್ಲಿರುವ ಅಮೇರಿಕಾ ಸೇನಾ ನೆಲೆಗಳನ್ನು ಕೂಡ ಗುರಿಯಾಗಿಸಿಕೊಂಡವು. ಟರ್ಕಿಯ ಮೇಲೆ ವಾಯು ರಕ್ಷಣಾ ವ್ಯವಸ್ಥೆಗಳು ಕ್ಷಿಪಣಿಗಳನ್ನು ತಡೆದವು ಎಂದು ವರದಿಯಾಗಿದೆ, ಸೈಪ್ರಸ್‌ನಲ್ಲಿರುವ ಬ್ರಿಟಿಷ್ ಸೇನಾ ನೆಲೆ ಮೇಲೆಯೂ ಡ್ರೋನ್ ದಾಳಿ ನಡೆದಿರುವ ಮಾಹಿತಿ ಬಂದಿದೆ. ಇದೇ ವೇಳೆ ಇಸ್ರಾಯೇಲ್ ದಕ್ಷಿಣ ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ ವಿರುದ್ಧ ತನ್ನ ದಾಳಿಗಳನ್ನು ವಿಸ್ತರಿಸಿದೆ. ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಈ ಸಂಘರ್ಷವು ಈಗಾಗಲೇ ಒಂದು ಡಜನ್‌ಗಿಂತ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ.
ಪರದೆಗಳ ಮೂಲಕ ನಡೆಯುವ ಯುದ್ಧ
ಈ ಪರಿಸ್ಥಿತಿಯನ್ನು ಹದಗೆಡಿಸುತ್ತಿರುವುದು ಸಂಘರ್ಷದ ಪ್ರಮಾಣ ಮಾತ್ರವಲ್ಲ, ಅದನ್ನು ನಡೆಸುವ ವಿಧಾನವೂ ಆಗಿದೆ ಎಂದು ಪ್ರಧಾನ ಧರ್ಮಾಧ್ಯಕ್ಷ ಡೇವಿಡ್ ಹೇಳಿದರು. ಇಂದಿನ ಯುದ್ಧದ ಬಹುಭಾಗ ಡಿಜಿಟಲ್ ನಿಯಂತ್ರಣ ವ್ಯವಸ್ಥೆಗಳು, ಡ್ರೋನ್‌ಗಳು, ಉಪಗ್ರಹಗಳು ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ನಡೆಯುತ್ತಿದೆ.
“ಕಂಪ್ಯೂಟರ್ ಗೇಮಿನೋಪಾದಿಯಾಗಿ, ದೂರದಲ್ಲಿರುವ ನಿಯಂತ್ರಣ ಕೇಂದ್ರಗಳಿಂದ ಸೈನಿಕರು ಪರದೆಗಳತ್ತ ನೋಡುತ್ತಿರುತ್ತಾರೆ; ಅಲ್ಲಿ ನಕ್ಷೆಗಳು, ರಡಾರ್ ಸಂಕೇತಗಳು ಹಾಗೂ ಆಲ್ಗೊರಿದಮ್ ಮೂಲಕ ಗುರುತಿಸಲಾದ ಗುರಿಗಳು ಕಂಪ್ಯೂಟರ್ ಗೇಮಿನಲ್ಲಿರುವ ಚಿಹ್ನೆಗಳಂತೆ ಚಲಿಸುತ್ತಿರುವಂತೆ ಕಾಣುತ್ತವೆ. ಒಂದು ಕರ್ಸರ್ ಚಲಿಸುತ್ತದೆ. ಒಂದು ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ. ಒಂದು ಕ್ಲಿಕ್ ಮಾಡಲಾಗುತ್ತದೆ. ಮತ್ತು ಕ್ಷಿಪಣಿ ಹಾರಿಸಲಾಗುತ್ತದೆ,” ಎಂದು ಅವರು ಹೇಳಿದರು. ಇಂತಹ ತಂತ್ರಜ್ಞಾನವು ಯುದ್ಧವನ್ನು ಸ್ವಚ್ಛ ಹಾಗೂ ನಿಯಂತ್ರಿತ ಕಾರ್ಯವೆಂದು ಕಾಣಿಸುವ ಭ್ರಮೆಯನ್ನು ಉಂಟುಮಾಡಬಹುದು. ಆದರೆ ಆ ಕ್ಷಿಪಣಿ ಗುರಿಯನ್ನು ತಲುಪಿದ ನಂತರ ಏನಾಗುತ್ತದೆ ಎಂಬುದನ್ನು ಪರದೆ ತೋರಿಸುವುದಿಲ್ಲ.
ತೆರಬೇಕಾದ ಜೀವಬೆಲೆ
ಭೂಮಿಯ ಮೇಲೆ ಇರುವವರು ಸಾಮಾನ್ಯ ಜನರು ಎಂದು ಅವರು ಹೇಳಿದರು. “ಜನರಲ್‌ಗಳ ಲೆಕ್ಕಾಚಾರಗಳಿಗೂ ರಾಜಕೀಯ ನಾಯಕರ ಮಹತ್ವಾಕಾಂಕ್ಷೆಗಳಿಗೂ ಸಂಬಂಧವಿಲ್ಲದ ಜೀವಗಳು—ತಮ್ಮ ಹಾಸಿಗೆಯಲ್ಲಿ ಮಲಗಿರುವ ಮಕ್ಕಳು, ಊಟ ಸಿದ್ಧಪಡಿಸುತ್ತಿರುವ ತಾಯಂದಿರು, ಆಶ್ರಯಕ್ಕೆ ಓಡಲು ಸಾಕಷ್ಟು ವೇಗವಾಗಿ ಓಡಲಾರದೆ ಇರುವ ವೃದ್ಧರು.” ಕ್ಷಿಪಣಿಗಳು ವಾಯು ರಕ್ಷಣಾ ವ್ಯವಸ್ಥೆಗಳನ್ನು ದಾಟಿದಾಗ ಅವು ಆಕಾಶದಲ್ಲಿ ಅಳಿದು ಹೋಗುವುದಿಲ್ಲ. ಅವು ಸ್ಫೋಟಗೊಳ್ಳುವುದು “ಜನರು ವಾಸಿಸುವ ಸ್ಥಳಗಳಲ್ಲಿ—ಅಪಾರ್ಟ್‌ಮೆಂಟ್ ಕಟ್ಟಡಗಳಲ್ಲಿ, ಆಸ್ಪತ್ರೆಗಳಲ್ಲಿ, ಹೋಟೆಲ್‌ಗಳಲ್ಲಿ, ಜನಸಂದಣಿ ತುಂಬಿದ ಬೀದಿಗಳಲ್ಲಿ.ಮತ್ತು ಹೊಗೆ ಕಡಿಮೆಯಾದ ಬಳಿಕ ಕಾಣುವ ಮೃತರು ಪರದೆಯ ಮೇಲಿನ ಸಂಕೇತಗಳಲ್ಲ. ಅವರು ಮಾನವರು,” ಎಂದು ಪ್ರಧಾನ ಧರ್ಮಾಧ್ಯಕ್ಷರಾದ ಡೇವಿಡ್ ಹೇಳಿದರು.
ಸಂಘರ್ಷದಲ್ಲಿ ಸಿಲುಕಿರುವ ಕಾರ್ಮಿಕರು
ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಫಿಲಿಪ್ಪೀನ್ಸ್ ನಾಗರಿಕರ ಕುರಿತು ಮಾತನಾಡುತ್ತಾ, ಈ ಸಂಘರ್ಷದ ಪರಿಣಾಮ ಯುದ್ಧಭೂಮಿಯನ್ನು ಮೀರಿ ಬಹಳ ದೂರವರೆಗೆ ತಲುಪುತ್ತದೆ ಎಂದು ಅವರು ಹೇಳಿದರು. ಗಲ್ಫ್ ಪ್ರದೇಶದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ವಾಸಿಸುತ್ತಿದ್ದಾರೆ. ತಮ್ಮ ಕುಟುಂಬಗಳನ್ನು ಪೋಷಿಸಲು ಅವರು ತಮ್ಮ ದೇಶಗಳನ್ನು ಬಿಟ್ಟು ಬಂದಿದ್ದಾರೆ. ಇವರಲ್ಲಿ ಮನೆಗಳಲ್ಲಿ, ಆಸ್ಪತ್ರೆಗಳಲ್ಲಿ, ಹೋಟೆಲ್‌ಗಳಲ್ಲಿ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ಫಿಲಿಪ್ಪೀನ್ಸ್ ನಾಗರಿಕರು ಇದ್ದಾರೆ.
ಸಮುದ್ರದಲ್ಲಿಯೂ ಸಾವಿರಾರು ನೌಕರರು ಅದರಲ್ಲಿ ಹಲವರು ಫಿಲಿಪ್ಪೀನ್ಸ್ ಮೂಲದವರೇ. ಹೋರ್ಮುಜ್ ಸಮುದ್ರಸಂಧಿಯನ್ನು ದಾಟುವ ಹಡಗುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪ್ರದೇಶ ಯುದ್ಧ ವಲಯವಾದರೆ, ಅಪಾಯವನ್ನು ಮೊದಲು ಎದುರಿಸುವವರು ಅವರೇ ಆಗಬಹುದು.
ಮನಃಸಾಕ್ಷಿಗೆ ಕರೆ
“ಈ ಸಂಘರ್ಷದ ಆರ್ಥಿಕ ಆಘಾತವು ಮಧ್ಯಪ್ರಾಚ್ಯವನ್ನು ಮೀರಿ ಇನ್ನೂ ದೂರವರೆಗೆ ತಲುಪುತ್ತದೆ,” ಎಂದು ಪ್ರಧಾನ ಧರ್ಮಾಧ್ಯಕ್ಷರಾದ ಡೇವಿಡ್ ಹೇಳಿದರು. “ಎಣ್ಣೆ ಮಾರ್ಗಗಳು ಅಪಾಯಕ್ಕೆ ಒಳಗಾದಾಗ ಮತ್ತು ಸಾಗಣೆ ವ್ಯತ್ಯಯಗೊಂಡಾಗ, ಅದರ ಭಾರವನ್ನು ಹೆಚ್ಚಾಗಿ ಇಂಧನವನ್ನು ಆಮದುಮಾಡುವ ಮತ್ತು ವಿದೇಶಗಳಲ್ಲಿ ಕೆಲಸ ಮಾಡುವವರ ಹಣಕಾಸಿನ ಮೇಲೆ ಅವಲಂಬಿಸಿರುವ ದುರ್ಬಲ ರಾಷ್ಟ್ರಗಳು ಹೊರುತ್ತವೆ.” ಇಂತಹ ಸಂಘರ್ಷಗಳಲ್ಲಿ ನೋವು ಯುದ್ಧಭೂಮಿಯಲ್ಲೇ ಸೀಮಿತವಾಗಿರುವುದಿಲ್ಲ.
ಪ್ರಧಾನ ಧರ್ಮಾಧ್ಯಕ್ಷರು ಡೇವಿಡ್ ಅವರ ಮಾತಿನಲ್ಲಿ, ಇದು ಒಂದು ಗಂಭೀರ ನೈತಿಕ ಪ್ರಶ್ನೆಯನ್ನು ಎತ್ತುತ್ತದೆ: ಯುದ್ಧದಿಂದ ನಿಜವಾಗಿ ಲಾಭ ಪಡೆಯುವವರು ಯಾರು? ಅದಕ್ಕೆ ಉತ್ತರಿಸುತ್ತಾ “ಖಂಡಿತವಾಗಿಯೂ ತಮ್ಮ ಮೃತರನ್ನು ಸಮಾಧಿ ಮಾಡುವ ಕುಟುಂಬಗಳು ಅಲ್ಲ. ಯುದ್ಧ ವಲಯದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ಅಲ್ಲ. ಆರ್ಥಿಕ ಆಘಾತವನ್ನು ಹೊರುವ ಬಡ ರಾಷ್ಟ್ರಗಳೂ ಅಲ್ಲ.” ಲಾಭ ಪಡೆಯುವವರು “ಆಯುಧಗಳನ್ನು ತಯಾರಿಸುವ ಕೈಗಾರಿಕೆಗಳು” ಎಂದರು. ಯುದ್ಧದ ದುರಂತವೆಂದರೆ ಅದು ತರಬಹುದಾದ ನಾಶ ಮಾತ್ರವಲ್ಲ, ಅದನ್ನು ಆರಂಭಿಸುವುದು ಎಷ್ಟು ಸುಲಭವಾಗಿದೆ ಎಂಬ ಭಯಾನಕ ವಾಸ್ತವವೂ ಆಗಿದೆ ಎಂದು ಅವರು ಹೇಳಿದರು.
ಕೆಲವು ಪ್ರಶ್ನೆಗಳು ಕೇಳಲೇಬೇಕೆಂದು ಅವರು ಹೇಳಿದರು: “ಮಾನವಕುಲವು ಯುದ್ಧದ ಈ ಹುಚ್ಚುತನದಿಂದ ಯಾವಾಗ ಎಚ್ಚರವಾಗುತ್ತದೆ? ಈ ಯುದ್ಧದ ನಿರ್ಮಾತೃಗಳನ್ನು ಯಾರು ಹೊಣೆಗಾರರನ್ನಾಗಿ ಮಾಡುತ್ತಾರೆ? ಶಕ್ತಿಶಾಲಿ ನಾಯಕರು ‘ಭದ್ರತೆ’ ಅಥವಾ ‘ಮುಂಚಿತ ಕ್ರಮ’ ಎಂಬ ಹೆಸರಿನಲ್ಲಿ ಯುದ್ಧ ಆರಂಭಿಸಿದಾಗ ಲೋಕವು ಕೇವಲ ಮೌನವಾಗಿ ನೋಡುತ್ತಲೇ ಇರುತ್ತದೆಯೇ?” ಒಂದು ಬಟನ್ ಒತ್ತುವುದರಿಂದ ನಿರ್ಧಾರಗಳು ತೆಗೆದುಕೊಳ್ಳುವ ಯುಗದಲ್ಲಿ, ಇಂತಹ ಯುದ್ಧಗಳು ಇಷ್ಟು ಸುಲಭವಾಗಿ ಹೇಗೆ ಆರಂಭವಾಗುತ್ತಿವೆ ಎಂಬುದನ್ನು ಮಾನವಕುಲ ಪ್ರಶ್ನಿಸಬೇಕಾಗಿದೆ.
ತಮ್ಮ ಮಾತುಗಳನ್ನು ಕೊನೆಗೊಳಿಸುತ್ತಾ “ಪರದೆಗಳನ್ನು ನಿಯಂತ್ರಿಸುವವರು ಮೃತದೇಹಗಳನ್ನು ಅಪರೂಪವಾಗಿ ನೋಡುತ್ತಾರೆ” ಎಂಬ ವಾಸ್ತವಿಕ ಕಹಿಯನ್ನು ಮುಂದಿಟ್ಟರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).