ಹುಡುಕಿ

2025.08.23 Meeting Rimini padre Faltas 2025.08.23 Meeting Rimini padre Faltas 

ಯುದ್ಧದ ಗದ್ದಲವು ಶಾಂತಿಯ ಧ್ವನಿಯನ್ನು ಮೌನಗೊಳಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ವಂ. ಗುರು ಇಬ್ರಾಹಿಂ ಫಾಲ್ತಾಸ್

ಪವಿತ್ರ ಭೂಮಿಯ ಪಾಲಕ ಶಾಲೆಗಳ ಮುಖ್ಯಸ್ಥರಾದ ವಂ. ಗುರು ಇಬ್ರಾಹಿಂ ಫಾಲ್ತಾಸ್, ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಹಿಂಸಾಚಾರ ಭುಗಿಲೆದ್ದಿರುವುದನ್ನು ಕುರಿತು ವಿಷಾದ ವ್ಯಕ್ತಪಡಿಸಿ, ಯುದ್ಧಕ್ಕೆ ನಾವು ನೀಡುವ ಅಮಾನುಷ ಕಾರಣಗಳನ್ನು ಮಕ್ಕಳು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಲೇಖಕರು: ವಂ. ಗುರು ಇಬ್ರಾಹಿಂ ಫಾಲ್ತಾಸ್

ಜೆರುಸಲೇಮಿನಲ್ಲಿ ಭಯವು ಸ್ಪಷ್ಟವಾಗಿ ಅನುಭವಿಸಬಹುದಾದ ವಾಸ್ತವವಾಗಿದೆ. ಖಾಲಿ ಬೀದಿಗಳು, ಪ್ರವೇಶಿಸಲಾಗದ ಆರಾಧನಾ ಸ್ಥಳಗಳು, ಹಳೆಯ ನಗರದ ಮುಚ್ಚಲ್ಪಟ್ಟ ಅಂಗಡಿಗಳು, ಮತ್ತು ಪವಿತ್ರ ಭೂಮಿಯ ಅನೇಕ ನಗರಗಳಲ್ಲಿ ಗಾಯಗಳು ಹಾಗೂ ಧ್ವಂಸ — ಇವೆಲ್ಲವೂ ಮತ್ತೆ ಈ ರಕ್ತಸಾಕ್ಷಿಯ ಭೂಮಿಯ ವೇದನೆಯ ಚಿತ್ರಗಳಾಗಿವೆ. ಅವು ಸ್ಪಷ್ಟವಾಗಿ ಕಾಣುವ ಗಾಯಗಳೂ, ಕಾಣದ ನೋವಿನ ಗುರುತುಗಳೂ ಆಗಿದ್ದು, ಅಂತ್ಯವಿಲ್ಲದ ಯುದ್ಧದ ಹೊಸ ಹಾಗೂ ಮರುಕಳಿಸಿದ ಸ್ಫೋಟದಿಂದ ಉಂಟಾದ ಪೀಡೆ ಮತ್ತು ಮನೋವ್ಯಥೆಯನ್ನು ಬಿಚ್ಚಿಡುತ್ತವೆ.

ಬತ್ತಿಹೋದ ನಗರದ ಮೌನವನ್ನು ಮುರಿಯುವುದು ಸೈರನ್‌ಗಳ ಶಬ್ದ. ಅವು ಮತ್ತಷ್ಟು ಮರಣ ಮತ್ತು ವಿನಾಶ ತರುವ ಕ್ಷಿಪಣಿಗಳ ನಿರೀಕ್ಷೆಯಲ್ಲಿನ ಆತಂಕವನ್ನು ಹೆಚ್ಚಿಸುತ್ತವೆ. ಭಯವು ಮತ್ತೆ ಬಲವಾಗಿ ಮರಳಿತು — ಅಥವಾ ಅದು ಎಂದಿಗೂ ನಿಜವಾಗಿ ಮಾಯವಾಗಿರಲಿಲ್ಲ — ಶನಿವಾರ ಬೆಳಿಗ್ಗೆ. ಅದು ಆ ದುಃಖಕರ ಅಕ್ಟೋಬರ್ 7, 2023ರಂತಹ ಮತ್ತೊಂದು ಶನಿವಾರವಾಗಿತ್ತು.

ಗುರುಗಳು ಮತ್ತು ಶಾಲಾ ಸಿಬ್ಬಂದಿಯೊಂದಿಗೆ ನಾವು ಮಕ್ಕಳನ್ನು ಸಮಾಧಾನಪಡಿಸಲು ಅಗತ್ಯವಾದ ಶಶಾಂತಿಯನ್ನು ಕಾಪಾಡಲು ಪ್ರಯತ್ನಿಸಿದೆವು. ತಮ್ಮ ಮಕ್ಕಳನ್ನು ಶಾಲೆಯ ಪ್ರವೇಶದ್ವಾರದಲ್ಲಿ ಇಳಿಸಿ ಹಿಂತಿರುಗಿದ ಪೋಷಕರು ಅವರನ್ನು ಕರೆದುಕೊಂಡು ಹೋಗುವವರೆಗೂ ನಾವು ಮಕ್ಕಳ ಜೊತೆ ಇದ್ದೆವು.

ಶಿಕ್ಷಕರಿಗೆ ತಮ್ಮ ಕಣ್ಣೀರು ತಡೆಯುವುದು ಸುಲಭವಾಗಿರಲಿಲ್ಲ. ತರಗತಿಗೆ ಪ್ರವೇಶಿಸುವ ಮೊದಲು ಮಕ್ಕಳು ಒಟ್ಟಾಗಿ ಸಂತ ಫ್ರಾನ್ಸಿಸ್ ಅವರ ಸರಳ ಪ್ರಾರ್ಥನೆಯನ್ನು ಪಠಿಸಿದ್ದರೂ, ಆದರೂ ಅವರಿಗೆ ಧೈರ್ಯ ತುಂಬಬೇಕಾಗಿತ್ತು.

ಮಕ್ಕಳನ್ನು ನಾನು ನೋಡಿದೆ — ಅವರ ದುಃಖಭರಿತ ಕಣ್ಣುಗಳಲ್ಲಿ ಮರೆಯಾಗಿರುವ ಆಘಾತವನ್ನು. ಪ್ರೌಢರ ಜಾಗೃತಿ ಮತ್ತು ಹೊಣೆಗಾರಿಕೆಯ ಭಾವನೆ, ಹಿಂಸಾಚಾರ ಮರುಕಳಿಸಿದರೆ ಶಾಲೆಯ ಆತ್ಮೀಯ ಸ್ವಾಗತಮಯ ಶಾಂತಿಯಿಂದ ಮತ್ತೆ ದೂರವಾಗಬೇಕಾಗುತ್ತದೆ ಎಂಬ ಅವರ ನೋವು — ಈ ಆಲೋಚನೆಗಳು ಮತ್ತು ಚಿಂತೆಗಳು ನನ್ನ ಮನಸ್ಸು ಮತ್ತು ಹೃದಯವನ್ನು ತುಂಬಿಕೊಂಡಿವೆ.

ಪವಿತ್ರ ಸ್ಥಳಗಳ ಸಮೀಪದಲ್ಲಿ ನಾವು ಹೊರಗಿನಿಂದ ನೋಡಿದರೆ ಸಾಮಾನ್ಯ ಜೀವನ ನಡೆಸುತ್ತಿರುವಂತೆ ಕಾಣುತ್ತೇವೆ — ನಾವು ನಂಬುತ್ತೇವೆ, ಪ್ರಾರ್ಥಿಸುತ್ತೇವೆ, ನಿರೀಕ್ಷಿಸುತ್ತೇವೆ. ಆದರೆ ಯುದ್ಧದ ಕಿವಿ ಮುಚ್ಚುವ ಗದ್ದಲವು ನಮ್ಮನ್ನು ಯಾವಾಗಲೂ ನೋವಿನ ವಾಸ್ತವಿಕತೆಯತ್ತ ಹಿಂದಿರುಗಿಸುತ್ತದೆ.

ಮಕ್ಕಳು ಹಿಂಸಾಚಾರವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಹಿಂಸೆಗೆ ನೀಡುವ ಅಮಾನುಷ ಕಾರಣಗಳು ಅವರಿಗೆ ಗೊತ್ತಿಲ್ಲ. ಆದರೂ ಅವರು ದುಷ್ಟತೆಯ ಅಸಂಬದ್ಧತೆಯ ನಿರಪರಾಧ ಬಲಿಗಳಾಗುತ್ತಲೇ ಇರುತ್ತಾರೆ.

ಮಕ್ಕಳು ಒಳ್ಳೆಯತನವನ್ನಷ್ಟೇ ಅರಿತುಕೊಳ್ಳುತ್ತಾರೆ ಮತ್ತು ಗುರುತಿಸುತ್ತಾರೆ. ಇಂತಹ ಕ್ಷಣಗಳಲ್ಲಿ ಅವರು ನಡುಗುತ್ತಾರೆ — ಅವರನ್ನು ನಡುಗಿಸುವುದು ದುಷ್ಟತೆ. ಅವರಿಗೆ ತಿಳಿಯದ ಭಯವೇ ಅವರ ನಗುವನ್ನು ನಿಶ್ಶಬ್ದಗೊಳಿಸುತ್ತದೆ — ಯುದ್ಧದ ನೆಲವಾಗಿರುವ ದೇಶಗಳಲ್ಲಿ ನೋವು ಅನುಭವಿಸುವ ಮತ್ತು ಸಾವನ್ನಪ್ಪುವ ಎಲ್ಲಾ ಮಕ್ಕಳ ನಗುಗಳನ್ನು ಅದು ಆರಿಸುತ್ತದೆ. ಗಾಜಾದಲ್ಲಿ, ತೆಹ್ರಾನ್‌ನಲ್ಲಿ, ಕೀವ್‌ನಲ್ಲಿ, ತೆಲ್ ಅವೀವ್‌ನಲ್ಲಿ ಮಕ್ಕಳು ಸಾಯುತ್ತಿದ್ದಾರೆ ಮತ್ತು ನರಳುತ್ತಿದ್ದಾರೆ.

ಅವರು ಭಯಗೊಂಡಿದ್ದಾರೆ, ದುಃಖದಲ್ಲಿದ್ದಾರೆ, ಹಸಿವಿನಿಂದ ಮತ್ತು ಚಳಿಯಿಂದ ಬಳಲುತ್ತಿದ್ದಾರೆ. ತೇವಗೊಂಡ ಗುಡಾರಗಳ ಆಶ್ರಯದಲ್ಲಿ ಭಯದಿಂದ ಕಂಗಾಲಾಗಿದ್ದಾರೆ. ಅಂಧಕಾರಮಯ ಶೆಲ್ಟರ್‌ಗಳು ಮತ್ತು ಬಂಕರ್‌ಗಳಲ್ಲಿ ಪ್ರತ್ಯೇಕಗೊಂಡಿದ್ದಾರೆ. ಶಾಲೆಗಳು ಮತ್ತು ಮನೆಗಳ ಅವಶೇಷಗಳ ಕೆಳಗೆ ಹೂಣಾಗಿದ್ದಾರೆ. ಅವರು ಆಟವಾಡುವುದಿಲ್ಲ; ಪೆನ್ನು ಮತ್ತು ಬಣ್ಣದ ಪೆನ್ಸಿಲ್‌ಗಳನ್ನು ಬಳಸುವುದಿಲ್ಲ.

ಇದು ಯುದ್ಧದ ಅಮಾನುಷ ಫಲಿತಾಂಶ.

2023ರ ಅಕ್ಟೋಬರ್ 7 ನಂತರ, “ಮತ್ತೆ ಮಾನವರಾಗೋಣ” ಎಂಬ ಅನೇಕ ಮನವಿಗಳನ್ನು ಸಾಲು ಸಾಲು ವಿನಂತಿಗಳನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ಮಾಡಲಾಯಿತು.ಇಬ್ಬರು ಜಗದ್ಗುರುಗಳೂ ತೀವ್ರ ಮನವಿಯೊಂದಿಗೆ ಶಾಂತಿಗಾಗಿ ಕರೆ ನೀಡಿದರು. ನಾಗರಿಕ ಮತ್ತು ಧಾರ್ಮಿಕ ಅಧಿಕಾರಿಗಳು, ಸಾಮಾನ್ಯ ಪುರುಷರು ಮತ್ತು ಮಹಿಳೆಯರು, ಗಣ್ಯ ವ್ಯಕ್ತಿಗಳೂ ಶಾಂತಿಯ ಧ್ವನಿಯನ್ನು ಎತ್ತಿದರು.

ಆದರೆ ಉತ್ತರಗಳು ಬಂದಿಲ್ಲ; ಬಂದಿದ್ದರೂ ಅವು ಗಾಜಾ, ಪವಿತ್ರ ಭೂಮಿ ಮತ್ತು ವರ್ಷಗಳಿಂದ ಯುದ್ಧ ಹಾಗೂ ಹಿಂಸಾಚಾರದಿಂದ ಪೀಡಿತ ಇತರ ಪ್ರದೇಶಗಳಲ್ಲಿ ಇನ್ನೂ ಫಲಿತಾಂಶ ಅಥವಾ ಪರಿಹಾರ ನೀಡಿಲ್ಲ.

ಶಾಂತಿಯ ಮನವಿಗಳಿಗೆ ಯಾರು ಪ್ರತಿಕ್ರಿಯಿಸಬೇಕಾಗಿತ್ತು? ಗಾಯಗೊಂಡ ಮಾನವೀಯತೆಗೆ ಯಾವ ಮಾನವೀಯತೆ ಸ್ಪಂದಿಸುತ್ತದೆ?

ನಿರಪರಾಧಿಗಳ ಮೂಲಭೂತ ಹಕ್ಕುಗಳು ವರ್ಷಗಳ ಕಾಲ ತುಳಿಯಲ್ಪಡುತ್ತಲೇ ಇದ್ದರೆ, ಮತ್ತು ಅಂತರರಾಷ್ಟ್ರೀಯ ಸಮುದಾಯದ ಕರ್ತವ್ಯಗಳು ಯುದ್ಧದ ಆರ್ಥಿಕತೆಯ ಹಿತಾಸಕ್ತಿಗಳ ಆಧಾರದ ಮೇಲೆ ಹಾಗೂ ನೋವು ಅನುಭವಿಸುವವರತ್ತ ನಿರ್ಲಕ್ಷ್ಯದಿಂದ ನಿರ್ವಹಿಸಲ್ಪಟ್ಟರೆ, ಈ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ.

ಗಾಜಾದಲ್ಲಿ, ಶಾಂತಿಯ ಹಕ್ಕಿನಿಂದ ವಂಚಿತರಾದ ಮಕ್ಕಳು ಸಹಾಯ ಮತ್ತು ಶಿಕ್ಷಣ ಪಡೆಯಬೇಕಾದ ಬದಲು, ಆಹಾರ ಮತ್ತು ಹಾಸಿಗೆಗಳಿಗಾಗಿ ಮರುಮಾರಾಟ ಮಾಡಲು ಸಾಧ್ಯವಾಗುವ ವಸ್ತುಗಳನ್ನು ಅವಶೇಷಗಳ ನಡುವೆ ಹುಡುಕಬೇಕಾದ ದಾರುಣ ಪರಿಸ್ಥಿತಿಯಲ್ಲಿದ್ದಾರೆ.

ಮಕ್ಕಳು ಧೂಳಿನ ನಡುವೆ ಮತ್ತು ಇತರ ನಿರಪರಾಧಿಗಳ ಸ್ಮೃತಿಗಳ ನಡುವೆ ತೋಡುತ್ತಿರುವಾಗ ಅವರಿಗೆ ಬೆಂಬಲ ನೀಡುವ ಮತ್ತು ನೆರವಾಗುವ ಮಾನವೀಯತೆ ಯಾವುದು? ಅವರನ್ನು ಇನ್ನೂ ಯಾರು ನೆನಪಿಸಿಕೊಳ್ಳುತ್ತಾರೆ?

ಭದ್ರತೆಯನ್ನು ಹುಡುಕುತ್ತ ಸಮುದ್ರದಲ್ಲಿ ಜೀವ ಕಳೆದುಕೊಂಡವರತ್ತ ನೆರವು ತಲುಪದಂತೆ ತಡೆಯುವ ಮಾನವೀಯತೆ ಯಾವುದು? ಈಗ ಆ ಸಮುದ್ರವೇ ಮತ್ತೆ ಮೇಲಕ್ಕೆ ತರುತ್ತಿರುವುದು ದೇಹಗಳನ್ನೂ, ಭರವಸೆಯ ಕನಸುಗಳನ್ನೂ. ಅಸಹನೀಯ ಹಿಂಸಾಚಾರ ಮತ್ತು ವೇದನೆಗೆ ಅಂತ್ಯ ಬರುವ ನಿರೀಕ್ಷೆಯಲ್ಲಿ ಕಾಯುತ್ತಿರುವವರಿಗೆ ಸ್ವಲ್ಪವಾದರೂ ವಿಶ್ರಾಂತಿ ಮತ್ತು ಉಸಿರಾಟದ ಅವಕಾಶ ನೀಡಬಹುದಾದ ಒಪ್ಪಂದಗಳ ಕಾಲಮಿತಿ ಮತ್ತು ಷರತ್ತುಗಳನ್ನು ಗೌರವಿಸದ ಮಾನವೀಯತೆ ಯಾವುದು?

ಈ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರಗಳಿಲ್ಲ. ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಹೇಳುವಂತೆ, ದುಷ್ಟತೆಯು ನಮ್ಮ ಕಾಲದ ಪರಮ ಪಾತ್ರಧಾರಿಯಾಗದಂತೆ ತಡೆಯುವ ನೈತಿಕ ಹೊಣೆಗಾರಿಕೆಯನ್ನು ಹೊತ್ತಿರುವವರ ಮಾನವೀಯತೆ ಈ ಪ್ರಶ್ನೆಗಳಿಗೆ ಸ್ಪಂದಿಸುತ್ತಿಲ್ಲ.

ಪವಿತ್ರ ಭೂಮಿಯಲ್ಲಿ ನಾನು ಬದುಕಿ ಕಂಡ ಅನುಭವಗಳು ಇನ್ನೂ ನನ್ನೊಳಗೆ ಒಂದು ನಿಶ್ಶಬ್ದ ನಂಬಿಕೆಯನ್ನು ಜೀವಂತವಾಗಿರಿಸುತ್ತವೆ. ಮಾನವನ ಹೃದಯದಲ್ಲಿ — ಪೂರ್ವಗ್ರಹಗಳಿಲ್ಲದೆ, ಗಡಿ ರೇಖೆಗಳಿಲ್ಲದೆ ನೆರೆಯವನನ್ನು ಪ್ರೀತಿಸುವ ಆ ಹೃದಯದಲ್ಲಿ — ಭರವಸೆಯ ಜ್ವಾಲೆ ಇನ್ನೂ ಆರಿಲ್ಲ. ಸಂಕಟದ ಕ್ಷಣದಲ್ಲಿ ಸ್ನೇಹದಿಂದ ಮುಂದಾಗುವ ಒಂದು ಕೈ, ತೀರ್ಪಿಲ್ಲದೆ ಕೇಳುವ ಒಂದು ಕಿವಿ, ಆತ್ಮದ ನೋವನ್ನು ಮಿಡಿಯುವ ಒಂದು ಅಪ್ಪುಗೆ — ಇವೆಲ್ಲವೂ ನನಗೆ ಮಾನವೀಯತೆಯ ನಿಜವಾದ ಮುಖವನ್ನು ತೋರಿಸುತ್ತವೆ.

ಪ್ರತಿ ಮಾನವನು ತನ್ನನ್ನು ಗುರುತಿಸಿಕೊಳ್ಳಬೇಕಾದ ಮಾನವೀಯತೆ ಇದೇ. ಅಂತರರಾಷ್ಟ್ರೀಯ ಸಮುದಾಯ ಪ್ರತಿನಿಧಿಸಬೇಕಾದ ಮಾನವೀಯತೆ ಇದೇ.

ಹಕ್ಕುಗಳು ಮತ್ತು ಕರ್ತವ್ಯಗಳು, ಹೊಣೆಗಾರಿಕೆ ಮತ್ತು ಗೌರವ — ಇವು ಮಾನವೀಯತೆಯನ್ನು ಉಳಿಸಿಕೊಳ್ಳಲು ಅಗತ್ಯವಾದ ಮೂಲಭೂತ ಅಂಶಗಳು. ನಂಬಿಕೆ, ವಿಶ್ವಾಸ ಮತ್ತು ಭರವಸೆಯನ್ನು ಉಳಿಸಲು ಅವು ಅವಶ್ಯಕ. ಯುದ್ಧದ ಗದ್ದಲವನ್ನು ಮೌನಗೊಳಿಸಿ, ಶಾಂತಿಯ ಧ್ವನಿಗೆ ಅವಕಾಶ ನೀಡಲು ಅವು ಅಗತ್ಯ.

ಪವಿತ್ರ ಭೂಮಿಯ ಪಾಲಕ ಶಾಲೆಗಳ ಮುಖ್ಯಸ್ಥರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

01 ಮಾರ್ಚ್ 2026, 19:49