LEBANON-ISRAEL-IRAN-US-WAR-DISPLACED LEBANON-ISRAEL-IRAN-US-WAR-DISPLACED  (AFP or licensors)

ಮಧ್ಯಪ್ರಾಚ್ಯದಲ್ಲಿ ಸಾಮಾನ್ಯ ಜನರು ಯುದ್ಧದ ಬೆಲೆಯನ್ನು ತೆರುತ್ತಿದ್ದಾರೆ: ಗುಡ್ ಶೆಫರ್ಡ್ ಸಹೋದರಿಯರ ಎಚ್ಚರಿಕೆ

ಇರಾನ್ ಹಾಗೂ ಮಧ್ಯಪ್ರಾಚ್ಯದಾದ್ಯಂತ ಹಿಂಸಾಚಾರ ತೀವ್ರಗೊಳ್ಳುತ್ತಿರುವ ಹಿನ್ನೆಲೆ, ಲೆಬನಾನ್ ಸೇರಿದಂತೆ ಪ್ರದೇಶದ ಹಲವೆಡೆ ಸಾಮಾನ್ಯ ಜನರೇ ಯುದ್ಧದ ಅತಿ ದೊಡ್ಡ ಬೆಲೆ ತೆರುತ್ತಿದ್ದಾರೆ ಎಂದು ಗುಡ್ ಶೆಫರ್ಡ್ ಸಹೋದರಿಯರು ಎಚ್ಚರಿಸಿದ್ದಾರೆ.

LiCAS ವರದಿ

ಪ್ರಕಟಿಸಿದ ಹೇಳಿಕೆಯಲ್ಲಿ, ಸಾಮಾನ್ಯವಾಗಿ “ಗುಡ್ ಶೆಫರ್ಡ್ ಸಹೋದರಿಯರು” ಎಂದು ಪರಿಚಿತರಾದ (Our Lady of Charity of the Good Shepherd)ಅವರ್ ಲೇಡಿ ಆಫ್ ಚಾರಿಟಿ ಆಫ್ ದ ಗುಡ್ ಶೆಫರ್ಡ್ ಸಭೆ, ಕಳೆದ ಒಂದು ವಾರದಲ್ಲಿ ಮಾತ್ರ ಲೆಬನಾನ್‌ನಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿಸಿದೆ. ಅನೇಕ ಕುಟುಂಬಗಳು ಯಾವುದೇ ಸಾಮಗ್ರಿಯಿಲ್ಲದೆ ಆಶ್ರಯ ಕೇಂದ್ರಗಳಿಗೆ ತಲುಪುತ್ತಿರುವುದಾಗಿ ಅವರು ತಿಳಿಸಿದ್ದಾರೆ.

“ಇರಾನ್ ಮತ್ತು ಮಧ್ಯಪ್ರಾಚ್ಯದಾದ್ಯಂತ ಹೆಚ್ಚುತ್ತಿರುವ ಹಿಂಸಾಚಾರದ  ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದೆ” ಎಂದು ಸಹೋದರಿಯರು ಹೇಳಿದ್ದಾರೆ. “ವಿಶೇಷವಾಗಿ ಯುವತಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾಮಾನ್ಯ ನಾಗರಿಕರೇ ಅತಿ ದೊಡ್ಡ ಬೆಲೆ ತೆರುತ್ತಿದ್ದಾರೆ. “ಸೈನಿಕ ಕ್ರಮಗಳು ವೇಗವಾಗಿ ತೀವ್ರಗೊಳ್ಳುತ್ತಿರುವುದು ಅನೇಕ ಜೀವಗಳಿಗೆ ತಕ್ಷಣದ ಅಪಾಯವನ್ನುಂಟುಮಾಡುತ್ತಿದ್ದು, ಈಗಾಗಲೇ ದುರ್ಬಲವಾಗಿರುವ ಮಾನವೀಯ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಲೆಬನಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮ ಸಹೋದರಿಯರು ಹಾಗೂ ಸಹಭಾಗಿಗಳು ಈ ಸಂಘರ್ಷದಿಂದ ಸ್ಥಳಾಂತರಗೊಂಡ ಜನರ ದೊಡ್ಡ ಅಲೆಗೆ ನೆರವಾಗಲು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಭೆ ತಿಳಿಸಿದೆ.

“ಕುಟುಂಬಗಳು ಯಾವುದೇ ಸಾಮಗ್ರಿಯಿಲ್ಲದೆ ಆಶ್ರಯ ಕೇಂದ್ರಗಳಿಗೆ ಬರುತ್ತಿವೆ. ಅವರಿಗೆ ತುರ್ತಾಗಿ ಆಹಾರ, ಮೂಲಭೂತ ವೈದ್ಯಕೀಯ ನೆರವು ಮತ್ತು ಸುರಕ್ಷಿತ ವಾಸಸ್ಥಳ ಅಗತ್ಯವಾಗಿದೆ,” ಎಂದು ಅವರು ಹೇಳಿದ್ದಾರೆ. “ಜನರು ದಣಿದಿದ್ದಾರೆ, ಭಯಭೀತರಾಗಿದ್ದಾರೆ ಮತ್ತು ಹಿಂದಿನ ಯುದ್ಧಗಳ ನೋವನ್ನು ಮತ್ತೆ ಅನುಭವಿಸುತ್ತಿದ್ದಾರೆ.”

ಬೈರೂತ್‌ನಲ್ಲಿ ಸ್ಥಳಾಂತರಗೊಂಡ ಸಿಬ್ಬಂದಿ ಮತ್ತು ಸಹೋದರಿಯರ ಸುರಕ್ಷತೆಯನ್ನು ಖಚಿತಪಡಿಸುವುದರ ಜೊತೆಗೆ, ಸೇಂಟ್ ಆಂಟೋನ್ ಡಿಸ್ಪೆನ್ಸರಿ ಹಾಗೂ ಗುಡ್ ಶೆಫರ್ಡ್ ಮಿಷನ್ ಮೂಲಕ ತುರ್ತು ವೈದ್ಯಕೀಯ ಮತ್ತು ಮಾನಸಿಕ-ಸಾಮಾಜಿಕ ನೆರವು ಒದಗಿಸಲಾಗುತ್ತಿದೆ ಎಂದು ಗುಡ್ ಶೆಫರ್ಡ್ ಸಭೆ ತಿಳಿಸಿದೆ.

ಸಂಕಷ್ಟ ಮತ್ತಷ್ಟು ವಿಸ್ತರಿಸದಂತೆ ತಡೆಯಲು ಅಂತರರಾಷ್ಟ್ರೀಯ ಸಮುದಾಯ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಹೋದರಿಯರು ಮನವಿ ಮಾಡಿದ್ದಾರೆ. “ಗುಡ್ ಶೆಫರ್ಡ್‌ನ ಅವರ್ ಲೇಡಿ ಆಫ್ ಚಾರಿಟಿಯ ಸದಸ್ಯರಾಗಿ, ಈ ಸಂಕಷ್ಟಕ್ಕೆ ನ್ಯಾಯಸಮ್ಮತ ಮತ್ತು ಅಹಿಂಸಾತ್ಮಕ ಪರಿಹಾರ ಅಗತ್ಯವೆಂದು ನಾವು ನಂಬುತ್ತೇವೆ,” ಎಂದು ಅವರು ಹೇಳಿದ್ದಾರೆ.

“ತಕ್ಷಣ ಯುದ್ಧವಿರಾಮವನ್ನು ಜಾರಿಗೆ ತಂದು, ನಾಗರಿಕರ ರಕ್ಷಣೆಗೆ ಕ್ರಮ ಕೈಗೊಂಡು, ಪ್ರತೀಕಾರದ ಹಾದಿಯಿಂದ ಹಿಂದೆ ಸರಿದು ಸಂವಾದ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಪರಿಹಾರವನ್ನು ಹುಡುಕಬೇಕು,” ಎಂದು  ತುರ್ತು ಮನವಿ ಮಾಡಿದ್ದಾರೆ.

ಈ ಸಂಘರ್ಷದಿಂದ ಬಾಧಿತರಾದವರ ಸುರಕ್ಷತೆಗಾಗಿ ಹಾಗೂ ಪ್ರದೇಶದಲ್ಲಿ ಶಾಶ್ವತ ಶಾಂತಿ ಸ್ಥಾಪನೆಗಾಗಿ ಜಗತ್ತಿನಾದ್ಯಂತ ಇರುವ ಗುಡ್ ಶೆಫರ್ಡ್ ಸಭೆಯ ಸದಸ್ಯರನ್ನು ಪ್ರಾರ್ಥನೆಗೆ ಆಹ್ವಾನಿಸಲಾಗಿದೆ.

ಈ ಲೇಖನವು ಮೂಲತಃ licas.news ನಲ್ಲಿ ಪ್ರಕಟವಾಗಿದೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನಧಿಕೃತ ಮರುಪ್ರಕಟಣೆ ಅನುಮತಿಸಲಾಗುವುದಿಲ್ಲ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

10 ಮಾರ್ಚ್ 2026, 18:29