ಹುಡುಕಿ

2026.03.05 Dichiarazione Patriarchi del Libano 2026.03.05 Dichiarazione Patriarchi del Libano  

ಲೆಬನಾನ್‌ನ ಕಥೋಲಿಕ ಪಿತೃಪೀಠಾಧ್ಯಕ್ಷರಿಂದ ಮತ್ತು ಧರ್ಮಾಧ್ಯಕ್ಷರಿಂದ ಶಾಂತಿಗೆ ಕರೆ

ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಹಿಂಸಾಚಾರದ ನಡುವೆ, ಲೆಬನಾನ್‌ನ ಕಥೋಲಿಕ ಪಿತೃಪೀಠಾಧ್ಯಕ್ಷರು ಮತ್ತು ಧರ್ಮಾಧ್ಯಕ್ಷರ ಸಭೆ ಪ್ರಕಟಣೆ ಹೊರಡಿಸಿ, ಉದ್ವಿಗ್ನತೆ ಹೆಚ್ಚಿದರೆ ಅದು ಮಾನವ ಗೌರವಕ್ಕೆ ಗಂಭೀರ ಧಕ್ಕೆ ಉಂಟುಮಾಡಬಹುದು ಎಂದು ಎಚ್ಚರಿಸಿದೆ. ಜೊತೆಗೆ ಸಂವಾದ, ರಾಷ್ಟ್ರೀಯ ಏಕತೆ ಮತ್ತು ಶಾಂತಿಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಪ್ರಯತ್ನಗಳನ್ನು ಕೈಗೊಳ್ಳುವಂತೆ ಕರೆ ನೀಡಿದೆ.

ವ್ಯಾಟಿಕನ್ ವರದಿ

ಲೆಬನಾನ್ ಮತ್ತು ಮಧ್ಯಪ್ರಾಚ್ಯದ ಹಲವೆಡೆ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಲೆಬನಾನ್‌ನ ಕಥೋಲಿಕ ಪಿತೃಪೀಠಾಧ್ಯಕ್ಷರು ಮತ್ತು ಧರ್ಮಾಧ್ಯಕ್ಷರ ಸಭೆ ಬಲವಾದ ಶಾಂತಿಯ ಮನವಿಯನ್ನು ಪ್ರಕಟಿಸಿದೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಗಾಢ ಚಿಂತೆಯನ್ನು ವ್ಯಕ್ತಪಡಿಸಿದ ಅವರು, ಈ ಪ್ರದೇಶವು ಇನ್ನಷ್ಟು ವ್ಯಾಪಕವಾದ ಘರ್ಷಣೆಗಳತ್ತ ಸಾಗುವ ಅಪಾಯವಿದೆ ಎಂದು ಎಚ್ಚರಿಸಿದರು. ಅಂತಹ ಬೆಳವಣಿಗೆಗಳು ಈ ಪ್ರದೇಶದ ಜನರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಮಾರ್ಚ್ 5ರಂದು ಪ್ರಕಟವಾದ ಈ ಹೇಳಿಕೆಯಲ್ಲಿ ನಿರಪರಾಧಿ ನಾಗರಿಕರು ಎದುರಿಸುತ್ತಿರುವ ಸಂಕಷ್ಟಗಳಿಗೆ ವಿಶೇಷವಾಗಿ ಗಮನ ಹರಿಸಲಾಗಿದೆ. ಸಂಘರ್ಷಗಳು ತೀವ್ರಗೊಳ್ಳುತ್ತಿರುವಂತೆ ಕುಟುಂಬಗಳ ಸ್ಥಳಾಂತರ ಹೆಚ್ಚುತ್ತಿದ್ದು, ನಾಗರಿಕರು ದಿನೇ ದಿನೇ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಧರ್ಮಾಧ್ಯಕ್ಷರು ತಿಳಿಸಿದ್ದಾರೆ.

ಈ ಸಂಕಷ್ಟದ ನೈತಿಕ ಆಯಾಮವನ್ನು ಉಲ್ಲೇಖಿಸಿದ ಧರ್ಮಾಧ್ಯಕ್ಷರು, ಹಿಂಸಾಚಾರದ ಈ ಚಕ್ರ ಮುಂದುವರಿದರೆ ಅದು ದೇವರಿಂದ ದೊರೆತ ಮಾನವ ಗೌರವಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ಎಚ್ಚರಿಸಿದರು. ಜೊತೆಗೆ ಅದು ನ್ಯಾಯ ಮತ್ತು ಸ್ಥಿರತೆಯ ಮೂಲಭೂತ ಅಡಿಪಾಯಗಳನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅವರು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಮಾತುಗಳನ್ನು ಉಲ್ಲೇಖಿಸಿ, “ಹಿಂಸಾಚಾರ ಎಂದಿಗೂ ಸರಿಯಾದ ಆಯ್ಕೆಯಾಗುವುದಿಲ್ಲ; ನಾವು ಯಾವಾಗಲೂ ಒಳ್ಳೆಯದನ್ನೇ ಆಯ್ಕೆ ಮಾಡಬೇಕು” ಎಂದು ಅವರು ಹೇಳಿದ್ದರು ಎಂದು ಧರ್ಮಾಧ್ಯಕ್ಷರು ಸ್ಮರಿಸಿದರು. ಈ ನೈತಿಕ ಕರೆಗೆ ಬೆಂಬಲ ನೀಡಿದ ಧರ್ಮಾಧ್ಯಕ್ಷರು, ಶಾಂತಿ ಯಾವುದೋ ದ್ವಿತೀಯ ಅಥವಾ ತಾತ್ಕಾಲಿಕ ಆಯ್ಕೆಯಲ್ಲ ಎಂದು ಸ್ಪಷ್ಟಪಡಿಸಿದರು. ಅದು ಮಾನವೀಯ ಕರ್ತವ್ಯವೂ ಹಾಗೂ ಸಾಮೂಹಿಕ ಹೊಣೆಗಾರಿಕೆಯೂ ಆಗಿದೆ ಎಂದು ಅವರು ಒತ್ತಿಹೇಳಿದರು.

ಈ ಹಿನ್ನೆಲೆಯಲ್ಲಿ ಹಿಂಸಾಚಾರದ ಚಕ್ರವನ್ನು ತಕ್ಷಣ ನಿಲ್ಲಿಸಿ, ನಿರ್ಮಾಣಾತ್ಮಕ ಸಂವಾದ ಮತ್ತು ಹೊಣೆಗಾರಿಕೆಯ ರಾಜತಾಂತ್ರಿಕ ಕ್ರಮಗಳತ್ತ ಮರಳಬೇಕೆಂದು ಅವರು ಕರೆ ನೀಡಿದರು. ಈ ಪ್ರಯತ್ನಗಳು ಸಾಮೂಹಿಕ ಹಿತಾಸಕ್ತಿಯ ಮೇಲೂ ಮತ್ತು ಜನರು ನ್ಯಾಯ ಹಾಗೂ ಗೌರವದೊಂದಿಗೆ ಬದುಕಬೇಕೆಂಬ ಆಶೆಯ ಮೇಲೂ ಆಧಾರಿತವಾಗಿರಬೇಕು ಎಂದು ಅವರು ಹೇಳಿದರು.

ಲೆಬನಾನ್ ಅನ್ನು “ಸಂದೇಶ ಮತ್ತು ಸಹಬಾಳ್ವೆಯ ನೆಲ” ಎಂದು ವರ್ಣಿಸಿದ ಧರ್ಮಾಧ್ಯಕ್ಷರು, ದೇಶದ ರಾಜಕೀಯ ಅಧಿಕಾರಿಗಳನ್ನೂ ಉದ್ದೇಶಿಸಿ ಮಾತನಾಡಿ, ಅಧಿಕಾರದಲ್ಲಿರುವವರು ತಮ್ಮ ರಾಷ್ಟ್ರೀಯ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಸ್ವೀಕರಿಸಬೇಕು ಎಂದು ಅವರು ಹೇಳಿದರು. ಜೊತೆಗೆ ದೇಶದ ಒಳಗಿನ ಏಕತೆಯನ್ನು ಕಾಪಾಡಿ ನಾಗರಿಕ ಶಾಂತಿಯನ್ನು ಬಲಪಡಿಸುವಂತೆ ನಾಯಕರಿಗೆ ಕರೆ ನೀಡಿದರು.

ಅದೇ ವೇಳೆ ಎಲ್ಲ ಸಮುದಾಯಗಳು ಮತ್ತು ರಾಜಕೀಯ ನಾಯಕರು ಲೆಬನಾನ್ ರಾಜ್ಯ ಹಾಗೂ ಅದರ ಸಂಸ್ಥೆಗಳಿಗೆ ಬೆಂಬಲ ನೀಡಬೇಕು ಎಂದುಕರೆ ನೀಡಿದರು. ವಿಶೇಷವಾಗಿ ಶಸ್ತ್ರಾಸ್ತ್ರಗಳು ರಾಜ್ಯದ ಅಧಿಕಾರದ ಅಧೀನದಲ್ಲೇ ಇರಬೇಕು ಎಂಬ ಸಿದ್ಧಾಂತವನ್ನು ಅವರು ಒತ್ತಿಹೇಳಿದರು. ಇದರಿಂದ ರಾಜ್ಯದ ಸ್ವಾಯತ್ತತೆ ಕಾಪಾಡಲ್ಪಡುತ್ತದೆ, ರಾಷ್ಟ್ರೀಯ ಸ್ಥಿರತೆ ಬಲವಾಗುತ್ತದೆ ಮತ್ತು ರಾಷ್ಟ್ರದ ಭವಿಷ್ಯ ಅಪಾಯಕ್ಕೀಡಾಗುವುದನ್ನು ತಪ್ಪಿಸಬಹುದು ಎಂದು ಅವರು ಹೇಳಿದರು.

ಅಂತರರಾಷ್ಟ್ರೀಯ ಸಮುದಾಯವನ್ನೂ ಉದ್ದೇಶಿಸಿ ಮಾತನಾಡಿದ ಧರ್ಮಾಧ್ಯಕ್ಷರು, ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳುವುದನ್ನು ತಡೆಯಲು ಜಾಗತಿಕ ಸಂಸ್ಥೆಗಳು ತಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು. ದೀರ್ಘಕಾಲಿಕ ಶಾಂತಿ ನ್ಯಾಯದ ಮೇಲೂ ಹಾಗೂ ಎಲ್ಲಾ ಜನರ ಗೌರವ ಮತ್ತು ಹಕ್ಕುಗಳ ಗೌರವದ ಮೇಲೂ ನಿರ್ಮಾಣವಾಗಬೇಕು ಎಂದು ಅವರು ಒತ್ತಿಹೇಳಿದರು.

ಧರ್ಮಾಧ್ಯಕ್ಷರು ನಂತರ ವಿಶ್ವಾಸಿಗಳಿಗೂ ಹಾಗೂ ಸತ್ಸಂಕಲ್ಪ ಹೊಂದಿರುವ ಎಲ್ಲರಿಗೂ ಮನವಿ ಮಾಡಿ, ಸಂಘರ್ಷದಿಂದ ಬಳಲುತ್ತಿರುವವರೊಂದಿಗೆ ಏಕತೆಯನ್ನು ತೋರಿಸುವಂತೆ ಕರೆ ನೀಡಿದರು. ತಮ್ಮ ಸ್ವಗ್ರಾಮಗಳನ್ನು ತೊರೆಯದೆ ದೃಢವಾಗಿ ಉಳಿದುಕೊಂಡಿರುವ ತಮ್ಮ ಸಹೋದರರು ಮತ್ತು ಸಹೋದರಿಯರಿಗೆ ನೆರವು ನೀಡುವಂತೆ ಸಮುದಾಯಗಳನ್ನು ಅವರು ಪ್ರೋತ್ಸಾಹಿಸಿದರು. ಜೊತೆಗೆ ಲೆಬನಾನ್ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲೆಂದು, ನಿರಪರಾಧಿ ನಾಗರಿಕರ ಸುರಕ್ಷತೆಗೆ ಮತ್ತು ನಾಯಕರು ನಾಶದ ಬದಲು ಸಂವಾದದ ಮಾರ್ಗವನ್ನು ಆಯ್ಕೆ ಮಾಡುವಂತೆ ಪ್ರಾರ್ಥನೆ ಮುಂದುವರಿಸಬೇಕೆಂದು ಅವರು ಹೇಳಿದರು.

ತಮ್ಮ ಹೇಳಿಕೆಯಲ್ಲಿ ಧರ್ಮಾಧ್ಯಕ್ಷರು ಮತ್ತು ಪಿತೃಪೀಠಾಧ್ಯಕ್ಷರು ಸ್ಥಳಾಂತರಗೊಂಡ ನಾಗರಿಕರನ್ನು ಸ್ವಾಗತಿಸುವ ಅಗತ್ಯವನ್ನೂ ಪುನರುಚ್ಚರಿಸಿದರು. “ನಾನು ಅನ್ಯನಾಗಿದ್ದಾಗ ನೀವು ನನ್ನನ್ನು ಸ್ವಾಗತಿಸಿದ್ದೀರಿ,” ಎಂದು ಮತ್ತಾಯನ ಶುಭಸಂದೇಶದಲ್ಲಿ ಪ್ರಭುಯೇಸು ಹೇಳಿದ ಮಾತನ್ನು ಅವರು ಉಲ್ಲೇಖಿಸಿ,ತಮ್ಮ ಮನೆಗಳಿಂದ ಅನಿವಾರ್ಯವಾಗಿ ದೂರ ಹೋಗಬೇಕಾದವರಿಗೆ ಆತಿಥ್ಯ ನೀಡುವುದು ಸುವಾರ್ತೆಯಲ್ಲೇ ಬೇರೂರಿರುವ ಕ್ರೈಸ್ತ ಮೌಲ್ಯವಾಗಿದೆ ಎಂದು ಅವರು ನೆನಪಿಸಿದರು.

ತಮ್ಮ ಪ್ರಕಟಣೆಯನ್ನು ಮುಕ್ತಾಯಗೊಳಿಸುತ್ತಾ, ಧರ್ಮಾಧ್ಯಕ್ಷರು ಲೆಬನಾನ್, ಮಧ್ಯಪ್ರಾಚ್ಯ ಮತ್ತು ಸಂಪೂರ್ಣ ಜಗತ್ತನ್ನು ದೇವರ ದಿವ್ಯ ಸಂರಕ್ಷಣೆಗೆ ಒಪ್ಪಿಸಿದರು. ಸಂಕಷ್ಟದಲ್ಲಿರುವ ಈ ಜಗತ್ತಿಗೆ ದೇವರು ಸಮ್ಮಿಲನದ ವರವನ್ನೂ ಶಾಶ್ವತ ಶಾಂತಿಯನ್ನೂ ನೀಡಲಿ ಎಂದು ಅವರು ಪ್ರಾರ್ಥಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

05 ಮಾರ್ಚ್ 2026, 15:33