TOPSHOT-LEBANON-ISRAEL-IRAN-US-WAR TOPSHOT-LEBANON-ISRAEL-IRAN-US-WAR  (AFP or licensors)

ಪೂರ್ವದ ಸುದ್ದಿಗಳು – ಮಾರ್ಚ್ 6, 2026

ಲೌವ್ರ ಡಿ ಓರಿಯಂಟ್ (L’Œuvre d’Orient) ಸಹಯೋಗದಲ್ಲಿ ತಯಾರಾದ ಈ ವಾರದ ಪೂರ್ವದ ಧರ್ಮಸಭೆಗಳ ಸುದ್ದಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅದರ ಪರಿಣಾಮವಾಗಿ ಲೆಬನಾನ್, ಇರಾಕ್ ಮತ್ತು ಪವಿತ್ರ ಭೂಮಿಯ ಸಮುದಾಯಗಳು ಎದುರಿಸುತ್ತಿರುವ ಪರಿಸ್ಥಿತಿಯನ್ನು ನಾವು ಗಮನಿಸುತ್ತೇವೆ.

ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಹಿಂಸಾಚಾರದ ಅಲೆ ಎದ್ದಿದ್ದು—ಇರಾನ್, ಲೆಬನಾನ್, ಇರಾಕ್ ಮತ್ತು ಪವಿತ್ರ ಭೂಮಿಯನ್ನು ತಟ್ಟಿದೆ. ಈಗಾಗಲೇ ಗಂಭೀರ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಪ್ರದೇಶದಲ್ಲಿ ಇದು ಇನ್ನಷ್ಟು ಅಸ್ಥಿರತೆಯನ್ನು ಉಂಟುಮಾಡುತ್ತಿದೆ.

ಲೆಬನಾನ್

ಲೆಬನಾನ್ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಇಸ್ರಾಯೇಲ್ ನಡೆಸಿದ ದಾಳಿಗಳಲ್ಲಿ ಕನಿಷ್ಠ 123 ಜನರು ಸಾವನ್ನಪ್ಪಿದ್ದು, 683 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಲೆಬನಾನ್‌ನಿಂದ 60,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ಪಲಾಯನಗೊಂಡಿದ್ದಾರೆ. ಅವರಲ್ಲಿ ಅನೇಕರು ಬೈರೂತ್ ನಗರಕ್ಕೆ, ಅದರ ದಕ್ಷಿಣ ಉಪನಗರಗಳತ್ತ ತೆರಳುತ್ತಿದ್ದಾರೆ; ಈ ಪ್ರದೇಶಗಳು ಸತತ ಬಾಂಬ್ ದಾಳಿಗೆ ಒಳಗಾಗಿವೆ.

ಶಾಲೆಗಳು ಮುಚ್ಚಲ್ಪಟ್ಟಿದ್ದರೂ, ಹಲವಾರು ಕ್ರೈಸ್ತ ಸಂಸ್ಥೆಗಳು ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡಲು ಮುಂದಾಗಿವೆ. ಡಾಟರ್ಸ್ ಆಫ್ ಚಾರಿಟಿ, ಲಿಬಾಮಿ ಸಂಘಟನೆ, ಮತ್ತು ಸೆಕ್ರೆಡ್ ಹಾರ್ಟ್ಸ್ ಸನ್ಯಾಸಿನಿಯರ ಆಶ್ರಮ ತಮ್ಮ ಖಾಲಿ ಶಾಲೆಗಳಲ್ಲಿ ನೂರಾರು ಕುಟುಂಬಗಳನ್ನು ವಸತಿಗೊಳಿಸಲು ಯೋಜಿಸಿವೆ. ಗಾಯಗೊಂಡವರಿಗೆ ಅವರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಗೈಟಾವಿ ಆಸ್ಪತ್ರೆ ಸಂಘರ್ಷದಲ್ಲಿ ಗಂಭೀರವಾಗಿ ಸುಟ್ಟ ಗಾಯಗಳೊಂದಿಗೆ ಬಂದವರನ್ನು ಸ್ವೀಕರಿಸಲು ಸಿದ್ಧತೆ ನಡೆಸುತ್ತಿದೆ. ಈ ನಡುವೆ ದೇಶವು ಹೆಚ್ಚುತ್ತಿರುವ ಆಂತರಿಕ ಉದ್ವಿಗ್ನತೆಯ ನಡುವೆಯೇ ಆಘಾತಗೊಂಡ ಸ್ಥಿತಿಯಲ್ಲಿ ಇದೆ.

ಇರಾಕ್

ಎರ್ಬಿಲ್‌ನಲ್ಲಿ ಅಮೇರಿಕಾ ಸೇನಾ ನೆಲೆಗಳು ಮತ್ತು ವಿಮಾನ ನಿಲ್ದಾಣ ಪ್ರದೇಶವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ ಜನರು ಬಹುತೇಕ ಕಟ್ಟುನಿಟ್ಟಿನ ನಿಯಂತ್ರಣದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದುವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಆದರೆ ಕಳೆದ ಕೆಲವು ದಿನಗಳಲ್ಲಿ ಈ ಪ್ರದೇಶವು 100ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸಿದೆ. ನಿನವೆ ಸಮತಟ್ಟು ಪ್ರದೇಶ ಮತ್ತು ಇರಾಕ್‌ನ ಮಧ್ಯಭಾಗದಲ್ಲಿ ಇರಾನ್ ಪರ ಸೇನಾ ಗುಂಪುಗಳಿಗೆ ಸಂಬಂಧಿಸಿದ ಘಟನೆಗಳು ಮತ್ತೆ ಅಸುರಕ್ಷಿತ ಭಾವನೆಯನ್ನು  ಹುಟ್ಟುಹಾಕುತ್ತಿವೆ.

ಪವಿತ್ರ ಭೂಮಿ

ಜೆರುಸಲೇಮ್ ಮತ್ತು ಪವಿತ್ರ ಭೂಮಿಯ ಇತರೆ ಭಾಗಗಳಲ್ಲಿ ಕ್ರೈಸ್ತ ಸಂಸ್ಥೆಗಳು ಹಾಗೂ ಆರೋಗ್ಯ ಸೇವಾ ಸಂಸ್ಥೆಗಳು ಹೆಚ್ಚುತ್ತಿರುವ ನಾಗರಿಕ ಅಗತ್ಯಗಳನ್ನು ಎದುರಿಸುತ್ತಿವೆ. ಭಯ ಮತ್ತು ಅನಿಶ್ಚಿತತೆಯ ವಾತಾವರಣದಲ್ಲಿ ಜನರಿಗೆ ನೆರವು ನೀಡುವ ಕೆಲಸದಲ್ಲಿ ಅವುಗಳು ತೊಡಗಿವೆ. ಈ ಎಲ್ಲಾ ಘಟನೆಗಳು ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಕಷ್ಟಗಳಿಗೆ ಮತ್ತಷ್ಟು ಸೇರ್ಪಡೆಯಾಗಿದ್ದು, ಈ ಪ್ರದೇಶದ ರಚನಾತ್ಮಕ ದುರ್ಬಲತೆ ಹಾಗೂ ಅಸ್ಥಿರತೆಯನ್ನು ಇನ್ನಷ್ಟು ಹದಗೆಡಿಸುತ್ತಿವೆ. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

06 ಮಾರ್ಚ್ 2026, 19:29