ಹುಡುಕಿ

2026.03.06 Don Bosco - El Houssoun jbeil lebanon sfollati 2026.03.06 Don Bosco - El Houssoun jbeil lebanon sfollati 

ಲೆಬನಾನ್‌ನಲ್ಲಿ ಬಾಂಬ್ ದಾಳಿಯಿಂದ ಪಲಾಯನಗೊಳ್ಳುವ ಕುಟುಂಬಗಳಿಗೆ ಆಶ್ರಯ ಕೇಂದ್ರಗಳನ್ನು ತೆರೆದಿರುವ ಸಲೇಶಿಯನ್ ಗುರುಗಳು

ಮಧ್ಯಪ್ರಾಚ್ಯದಲ್ಲಿ ಯುದ್ಧ ವಿಸ್ತರಿಸುತ್ತಿರುವ ಸಂದರ್ಭದಲ್ಲಿ, ಡಾನ್ ಬೊಸ್ಕೊ ಸಲೇಶಿಯನ್ ಗುರುಗಳು ಲೆಬನಾನ್‌ನಲ್ಲಿ ಬಾಂಬ್ ದಾಳಿಯಿಂದ ಸ್ಥಳಾಂತರಗೊಂಡ ನಾಗರಿಕರಿಗೆ ಆಶ್ರಯ ಒದಗಿಸಲು ತಮ್ಮ ಮುಚ್ಚಲ್ಪಟ್ಟ ಶಾಲೆಗಳನ್ನು ತಾತ್ಕಾಲಿಕ ಆಶ್ರಯ ಕೇಂದ್ರಗಳಾಗಿ ಮಾರ್ಪಡಿಸಿದ್ದಾರೆ.

LiCAS ವರದಿ

ಮಧ್ಯಪ್ರಾಚ್ಯದಲ್ಲಿ ಮತ್ತೆ ಹೆಚ್ಚಾದ ಹಿಂಸಾಚಾರದಿಂದ ಲೆಬನಾನ್‌ನ ಕೆಲವು ಭಾಗಗಳಲ್ಲಿ ಸಲೇಶಿಯನ್ ಶಾಲೆಗಳು ಮುಚ್ಚಲ್ಪಟ್ಟಿದ್ದು, ಅನೇಕ ಕುಟುಂಬಗಳು ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಬಾಂಬ್ ದಾಳಿಯಿಂದ ಪಲಾಯನಗೊಳ್ಳುತ್ತಿರುವ ನಾಗರಿಕರಿಗೆ ಆಶ್ರಯ ನೀಡಲು ಧರ್ಮಸಭೆಯ ಸಮುದಾಯಗಳು ಮುಂದಾಗಿವೆ.

ಏಜೆನ್ಸಿಯಾ ಇನ್ಫೋ ಸಲೇಶಿಯಾನಾ ಪ್ರಕಟಿಸಿದ ವರದಿಯ ಪ್ರಕಾರ, ಮಧ್ಯಪ್ರಾಚ್ಯದ “ಅಡೋಲೆಸೆಂಟ್ ಜೀಸಸ್” ಸಲೇಶಿಯನ್ ಪ್ರಾಂತ್ಯದ ಮುಖ್ಯಸ್ಥರಾದ ವಂ ಗುರು ಸೈಮನ್ ಜಾಕೇರಿಯನ್, “ಮಧ್ಯಪ್ರಾಚ್ಯವು ಮತ್ತೊಂದು ಗಂಭೀರ ಮತ್ತು ದುರಂತಕರ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಉದ್ವಿಗ್ನತೆ ಹೆಚ್ಚುತ್ತಿರುವಂತೆ ನಾಗರಿಕರೇ ಅತ್ಯಂತ ದುರ್ಬಲ ಸ್ಥಿತಿಗೆ ತಳ್ಳಲ್ಪಡುತ್ತಿದ್ದಾರೆ” ಎಂದು ಹೇಳಿದ್ದಾರೆ

“ಮತ್ತೊಮ್ಮೆ ಈ ಪ್ರದೇಶದ ದೇಶಗಳಲ್ಲಿ ನಾಗರಿಕ ಜನಸಂಖ್ಯೆಯೇ- ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು,ಹೆಚ್ಚು ಹೊಡೆತಕ್ಕೆ ಒಳಗಾಗಲಿದ್ದಾರೆ. ದಾಳಿಗಳ ಕಾರಣದಿಂದಾಗಿ ಪ್ಯಾಲೆಸ್ತೀನ್, ಇಸ್ರಾಯೇಲ್ ಮತ್ತು ಲೆಬನಾನ್ ದೇಶಗಳಲ್ಲಿ ಇರುವ ನಮ್ಮ ಶಾಲೆಗಳನ್ನು ಮಕ್ಕಳ ಮತ್ತು ಯುವಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಮುಚ್ಚಬೇಕಾಯಿತು,” ಎಂದು ಅವರು ಹೇಳಿದರು.

ಲೆಬನಾನ್‌ನಲ್ಲಿ ಇರಾನ್‌ಗೆ ಸಂಬಂಧಿಸಿದ ವ್ಯಾಪಕ ಸಂಘರ್ಷದ ಪರಿಣಾಮವಾಗಿ ಈಗಾಗಲೇ ದುರ್ಬಲವಾಗಿದ್ದ ಮಾನವೀಯ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಂಡಿದೆ. ಸಾವಿರಾರು ಜನರು ಸ್ಥಳಾಂತರಗೊಂಡಿರುವುದಾಗಿ ವರದಿಯಾಗಿದೆ. ಜೊತೆಗೆ ಇಸ್ರಾಯೇಲ್ ಸೇನೆಯ ದಾಳಿಗಳು ಹೆಚ್ಚುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುವ ಭಯ ಉಂಟಾಗಿದೆ.

ದೇಶದ ದಕ್ಷಿಣ ಭಾಗ, ವಿಶೇಷವಾಗಿ ನಬಾತಿಯ್ಯೆ ಪ್ರದೇಶ, ಇತ್ತೀಚಿನಲ್ಲಿ ತೀವ್ರ ಬಾಂಬ್ ದಾಳಿಗೆ ಒಳಗಾಗಿದೆ. ಇದರಿಂದ ಅನೇಕ ಕುಟುಂಬಗಳು ರಾತ್ರೋರಾತ್ರಿ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗಾಗಿ ಪಲಾಯನಗೊಳ್ಳಬೇಕಾಯಿತು. ಸ್ಥಳಾಂತರಗೊಂಡ ನಾಗರಿಕರಿಗೆ ನೆರವಾಗಲು ಸಲೇಶಿಯನ್ ಗುರುಗಳು ತಮ್ಮ ಕೇಂದ್ರಗಳನ್ನು ತೆರೆದಿದ್ದಾರೆ.

ಬೈರೂತ್‌ನಿಂದ ಸುಮಾರು 30 ಕಿಲೋಮೀಟರ್ ಉತ್ತರದಲ್ಲಿರುವ ಜ್ಬೈಲ್ ಪ್ರದೇಶದ “ಡಾನ್ ಬೊಸ್ಕೊ – ಎಲ್ ಹೌಸ್ಸೌನ್” ಕೇಂದ್ರದಲ್ಲಿ ಈಗ ಸುಮಾರು 30 ಕುಟುಂಬಗಳಿಗೆ ಸೇರಿದ ಸುಮಾರು 120 ಜನರಿಗೆ ಆಶ್ರಯ ನೀಡಲಾಗಿದೆ. ಅವರಲ್ಲಿ ಸುಮಾರು 50 ಮಕ್ಕಳು ಮತ್ತು ದುರ್ಬಲ ಸ್ಥಿತಿಯಲ್ಲಿರುವ 10 ವೃದ್ಧರೂ ಸೇರಿದ್ದಾರೆ.

“ಮುಂದಿನ ಕೆಲವು ಗಂಟೆಗಳು ಮತ್ತು ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುವುದು ಖಚಿತ,” ಎಂದು ಸಲೇಶಿಯನ್ ಸಮುದಾಯ ತಿಳಿಸಿದೆ. “ಈ ಜನರಿಗೆ ಬೆಚ್ಚಗಿನ ಬಟ್ಟೆಗಳು, ಆಹಾರ, ನೀರ ಮುಂತಾದ ಮೂಲಭೂತ ಅಗತ್ಯಗಳನ್ನು ಒದಗಿಸಬೇಕಾಗಿದೆ— ಈಗ ನಾವು ಅವನ್ನೇ ಮುಖ್ಯವಾಗಿ ಗಮನಿಸುತ್ತಿದ್ದೇವೆ,” ಎಂದು ಅವರು ಹೇಳಿದರು.

ಸುರಕ್ಷಿತ ಸ್ಥಳ ತಲುಪಲು ಅನೇಕ ಸ್ಥಳಾಂತರಗೊಂಡ ಕುಟುಂಬಗಳು ದೀರ್ಘ ಪ್ರಯಾಣವನ್ನು ಎದುರಿಸಬೇಕಾಯಿತು. ಬಾಂಬ್ ದಾಳಿಯಿಂದ ಪಲಾಯನಗೊಳ್ಳುತ್ತಿದ್ದ ಜನರ ಭಾರೀ ಸಂಚಾರದಿಂದಾಗಿ ಕೇವಲ 110 ಕಿಲೋಮೀಟರ್ ದೂರವನ್ನು ಕ್ರಮಿಸಲು ಕೆಲವರಿಗೆ 16 ಗಂಟೆಗಳವರೆಗೆ ಪ್ರಯಾಣ ಮಾಡಬೇಕಾಯಿತು.

ಕೇಂದ್ರದ ತರಗತಿ ಕೊಠಡಿಗಳನ್ನು ತ್ವರಿತವಾಗಿ ಆಶ್ರಯ ಸ್ಥಳಗಳಾಗಿ ಪರಿವರ್ತಿಸಲಾಗಿದೆ. ಅಲ್ಲಿ ಹಾಸಿಗೆಗಳು, ಹೊದಿಕೆಗಳು ಮತ್ತು ಮಾನವೀಯ ನೆರವು ಸಾಮಗ್ರಿಗಳನ್ ವ್ಯವಸ್ಥೆ ಮಾಡಲಾಗಿದೆ. ಸಲೇಶಿಯನ್ ಗುರುಗಳು, ಸಿಬ್ಬಂದಿ ಮತ್ತು ಸ್ವಯಂಸೇವಕರು ಕುಟುಂಬಗಳಿಗೆ ನೆರವು ಒದಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ನಡುವೆ ಪಶ್ಚಿಮ ತೀರ ಪ್ರದೇಶದಲ್ಲಿಯೂ ಇಂಧನ ಕೊರತೆ ಹೆಚ್ಚುತ್ತಿರುವ ಬಗ್ಗೆ ವಂ ಗುರು ಜಾಕೇರಿಯನ್ ಎಚ್ಚರಿಸಿ, “ಪಶ್ಚಿಮ ತೀರದಲ್ಲಿ ಇಂಧನದ ಕೊರತೆ ಕುರಿತು ನಮಗೂ ಚಿಂತೆಯಿದೆ. ಅನೇಕ ಕುಟುಂಬಗಳಿಗೆ ಮನೆ ಬಿಸಿ ಮಾಡಲು ಅಥವಾ ಅಡುಗೆ ಮಾಡಲು ಯಾವುದೇ ವ್ಯವಸ್ಥೆಯಿಲ್ಲ. ನಮ್ಮ ಕ್ರೆಮಿಸಾನ್ ಸಮುದಾಯಕ್ಕೂ ಇದೇ ಪರಿಸ್ಥಿತಿ ಎದುರಾಗಿದೆ,” ಎಂದು ಹೇಳಿದರು.

ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದ್ದರೂ ಸಂಕಷ್ಟದಿಂದ ಬಳಲುತ್ತಿರುವವರಿಗೆ ನೆರವು ನೀಡುವ ಬದ್ಧತೆಯನ್ನು ಸಲೇಶಿಯನ್ ಸಮುದಾಯಗಳು ಪುನರುಚ್ಚರಿಸಿವೆ. “ನಾವು ಮತ್ತೆ ಸಂಕೀರ್ಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಆದರೆ ಸಲೇಶಿಯನ್ ಗುರುಗಳು, ನಮ್ಮೊಂದಿಗೆ ಕೆಲಸ ಮಾಡುವ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನೊಳಗೊಂಡ ನಮ್ಮ ಸಂಪೂರ್ಣ ಜಾಲ ಲೆಬನಾನ್, ಪ್ಯಾಲೆಸ್ತೀನ್ ಮತ್ತು ಇಸ್ರಾಯೇಲ್ ದೇಶಗಳ ಸಮುದಾಯಗಳಿಗೆ ಸಾಧ್ಯವಾದಷ್ಟು ಬೇಗ ನೆರವು ನೀಡಲು ಸಿದ್ಧವಾಗಿದೆ,” ಎಂದು ವಂ ಗುರು ಜಾಕೇರಿಯನ್ ಹೇಳಿದರು.

ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಇರುವ ಸಲೇಶಿಯನ್ ಮಿಷನ್ ಕಚೇರಿ “ಮಿಸಿಯೋನೇಸ್ ಸಲೇಶಿಯಾನಾಸ್” ಮಧ್ಯಪ್ರಾಚ್ಯದ ಸಲೇಶಿಯನ್ ಜಾಲದೊಂದಿಗೆ ಸಹಕಾರದ ಮೂಲಕ ಮಾನವೀಯ ನೆರವನ್ನು ಸಂಗ್ರಹಿಸುವ ಕಾರ್ಯವನ್ನು ಸಂಯೋಜಿಸುತ್ತಿದೆ.

“ಇದು ಕೇವಲ ಹೊದಿಕೆಗಳು ಅಥವಾ ರೊಟ್ಟಿ ಒದಗಿಸುವ ವಿಷಯವಲ್ಲ; ಈಗ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಜನರಿಗೆ ಭರವಸೆಯನ್ನು ನೀಡುವುದಾಗಿದೆ,” ಎಂದು ಮಿಸಿಯೋನೇಸ್ ಸಲೇಶಿಯಾನಾಸ್ ನಿರ್ದೇಶಕರಾದ ವಂ ಗುರು ಲೂಯಿಸ್ ಮಾನುವೆಲ್ ಮೊರಲ್ ಹೇಳಿದರು.

ಶಾಂತಿಗಾಗಿ ಮಾಡಿದ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಮನವಿಯನ್ನು ಸಹ ಸ್ಮರಿಸಿ, ಹಿಂಸಾಚಾರದ ಚಕ್ರವು ಅಪರಿವರ್ತನೀಯ ಸುಳಿಯಾಗುವ ಮೊದಲು ಅದನ್ನು ನಿಲ್ಲಿಸಲು ಮಾರ್ಗ ಹುಡುಕಬೇಕು ಎಂದು ಅವರು ಹೇಳಿದರು. ಜೊತೆಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಂವಾದದ ಮಾರ್ಗವನ್ನು ಅನುಸರಿಸುವಂತೆ ಅವರು ಕರೆ ನೀಡಿದರು.

ಈ ಲೇಖನವು ಮೂಲತಃ Licas News ನಲ್ಲಿ ಪ್ರಕಟವಾಗಿದೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನಧಿಕೃತ ಮರುಪ್ರಕಟಣೆ ಅನುಮತಿಸಲಾಗುವುದಿಲ್ಲ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

06 ಮಾರ್ಚ್ 2026, 19:01