ಜೆರುಸಲೇಮ್‌ನಲ್ಲಿ ಯುದ್ಧದ ಮಧ್ಯೆ ಬದುಕುತ್ತಿರುವ ಬೆನೆಡಿಕ್ಟಿನ್ ಗುರುಗಳು
ವ್ಯಾಟಿಕನ್ ವರದಿ
ಮಾರ್ಚ್ 3ರಂದು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಕಳುಹಿಸಿದ ಧ್ವನಿ ಸಂದೇಶದಲ್ಲಿ, ಜೆರುಸಲೇಮ್‌ನ ಡಾರ್ಮಿಷನ್ ಮಠದ ಮಠಾಧೀಶರು ನಿಕೋಡೆಮಸ್ ಶ್ನಾಬೆಲ್ ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ಆರಂಭವಾದ ಹಿಂಸಾಚಾರದ ಹಿನ್ನೆಲೆಯಲ್ಲಿ ಬೆನೆಡಿಕ್ಟಿನ್ ಗುರುಗಳ ಅನುಭವವನ್ನು ವಿವರಿಸಿದರು.
ಫೆಬ್ರವರಿ 28ರಂದು ಇಸ್ರಾಯೇಲ್ ಮತ್ತು ಅಮೆರಿಕ ಸಂಯುಕ್ತವಾಗಿ ಬಾಂಬ್ ದಾಳಿ ಆರಂಭಿಸಿದಾಗ, ಡಾರ್ಮಿಷನ್ ಮಠದ ಸಂಪೂರ್ಣ ಗುರುಗಳ ಸಮುದಾಯ ಜೆರುಸಲೇಮ್‌ನಿಂದ ಸುಮಾರು 170 ಕಿಲೋಮೀಟರ್ ದೂರದಲ್ಲಿರುವ ಗಲಿಲಾಯ ಸಮುದ್ರದ ತಬ್ಗಾ ಪ್ರಿಯೊರಿಯಲ್ಲಿ ಇತ್ತು.
“ಶುಕ್ರವಾರದಿಂದ ನಾವು ಅಲ್ಲೇ ಅಧ್ಯಾಯ ಸಭೆಗಳನ್ನು ನಡೆಸುತ್ತಿದ್ದೇವೆ. ಅದು ಗುರುಗಳ ಸಂಸತ್ತಿನಂತಿದೆ,” ಎಂದು ಮಠಾಧೀಶರು ವಿವರಿಸಿದರು.
ಆ ಸಮಯದಲ್ಲಿ ಸಮುದಾಯದ ವಾತಾವರಣದಲ್ಲಿ ಒಂದು ಎಚ್ಚರಿಕೆಯ ಭರವಸೆ ಇತ್ತು. ಏಕೆಂದರೆ ಫೆಬ್ರವರಿ ತಿಂಗಳಿನಿಂದ ಮೊದಲ ಬಾರಿಗೆ ಪಶ್ಚಿಮ ಮತ್ತು ಮಧ್ಯ ಯೂರೋಪಿನಿಂದ ಬಂದ ಯಾತ್ರಿಕರ ಗುಂಪುಗಳನ್ನು ಮತ್ತೆ ಸ್ವಾಗತಿಸಲು ಸಾಧ್ಯವಾಗಿತ್ತು.
“ಒಂದು ಸಣ್ಣ ಭರವಸೆ ಕಾಣಿಸುತ್ತಿತ್ತು. ಬಹುಶಃ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆಯೇ ಎಂಬ ಭಾವನೆ ಮೂಡಿತ್ತು. ವಿಶೇಷವಾಗಿ ಕ್ರೈಸ್ತ ಸಮುದಾಯಕ್ಕೆ ಪ್ರವಾಸೋದ್ಯಮ ಬಹಳ ಮುಖ್ಯ. ಇಸ್ರಾಯೇಲ್ ಮತ್ತು ಪ್ಯಾಲೆಸ್ಟೈನ್ ಪ್ರದೇಶದಲ್ಲಿರುವ ಕ್ರೈಸ್ತರಲ್ಲಿ ಸುಮಾರು 60 ಶೇಕಡಾ ಜನರು ಪ್ರವಾಸೋದ್ಯಮದ ಮೇಲೆ ಅವಲಂಬಿಸಿದ್ದಾರೆ,” ಎಂದು ಅವರು ಹೇಳಿದರು.
ಏಕಾಏಕಿ ಮುರಿದುಬಿದ್ದ ನಾಜೂಕಾದ ಭರವಸೆ
ಜೆರುಸಲೇಮ್‌ನ ಸಿಯೋನ್ ಪರ್ವತದಲ್ಲಿರುವ ಮಠದಲ್ಲಿ ಗುರುಗಳಷ್ಟೇ ಅಲ್ಲದೆ,ಪಾರ್ಕಿಂಗ್ ಸಿಬ್ಬಂದಿಯಿಂದ ಹಿಡಿದು ಮಠದ ಅಂಗಡಿಯ ವ್ಯಾಪಾರಿಯವರೆಗೆ 24 ಸ್ಥಳೀಯ ಉದ್ಯೋಗಿಗಳು ಸಹ ಕೆಲಸ ಮಾಡುತ್ತಿದ್ದಾರೆ .
“ಇತ್ತೀಚೆಗೆ ಶುಕ್ರವಾರದವರೆಗೂ ನಮ್ಮ ಮಾತುಕತೆಗಳಲ್ಲಿದ್ದದ್ದು ಒಂದೇ ವಿಷಯ: ಯಾತ್ರಿಕರ ಮೂಲಕ ನಾವು ಮತ್ತೆ ನಮ್ಮ ಸಿಬ್ಬಂದಿಯ ವೇತನ ಮತ್ತು ನಿರ್ವಹಣಾ ವೆಚ್ಚಗಳನ್ನು ಭರಿಸಬಹುದೇನೋ,” ಎಂದು ಭರವಸೆ ಇತ್ತು. ಆದರೆ ಆ ನಾಜೂಕಾದ ಭರವಸೆ ಶನಿವಾರ ಬೆಳಿಗ್ಗೆ ಏಕಾಏಕಿ ಮುರಿದುಬಿತ್ತು. ಸಭೆಯ ಮಧ್ಯದಲ್ಲಿ ರಾಕೆಟ್ ಎಚ್ಚರಿಕೆಯ ಸೈರನ್ ಮೊಳಗಿತು. ತಕ್ಷಣವೇ ಎಲ್ಲರೂ ಏರ್-ರೇಡ್ ಶೆಲ್ಟರ್‌ಗೆ ತೆರಳಬೇಕಾಯಿತು. ಅಲ್ಲಿ ಸುಮಾರು 60 ಜನರು ಎರಡು ಗಂಟೆಗಳ ಕಾಲ ಆಶ್ರಯ ಪಡೆದರು.
ಅವರಲ್ಲಿ ಗುರುಗಳು, ಮಠದ ಸಿಬ್ಬಂದಿ, ಅಮೆರಿಕ ಮತ್ತು ಹಾಂಗ್ ಕಾಂಗ್‌ನ ಸ್ವಯಂಸೇವಕರು, ಫಿಲಿಪ್ಪೀನ್ಸ್ ಮೂಲದ ಧಾರ್ಮಿಕ ಸಹೋದರಿಯರು, ಪ್ಯಾಲೆಸ್ಟೀನಿಯನ್ ಬಸ್ ಚಾಲಕ ಮತ್ತು “ಐದು ರೊಟ್ಟಿಗಳು ಮತ್ತು ಎರಡು ಮೀನುಗಳ ಅದ್ಭುತ” ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಫ್ರೆಂಚ್ ಯಾತ್ರಿಕರ ಗುಂಪು ಸೇರಿದ್ದರು.
ಬಂಕರ್‌ನಲ್ಲಿ ಸಹೋದರತ್ವ
ಬಾಂಬ್ ದಾಳಿಗಳ ನಡುವೆಯೂ ಬಂಕರ್ ಬಹಳ ಸುರಕ್ಷಿತವಾಗಿತ್ತು ಎಂದು ಮಠಾಧೀಶರು ವಿವರಿಸಿದರು. “ನಾವು ಕಿಟಕಿಗಳನ್ನು ಬಿಗಿಯಾಗಿ ಮುಚ್ಚಿದ್ದರೂ ರಾಕೆಟ್‌ಗಳ ಉಡಾವಣೆಯ ಶಬ್ದ ಕೇಳಿಸುತ್ತಿತ್ತು. ನೆಲ ಸ್ವಲ್ಪ ಕಂಪಿಸುತ್ತಿತ್ತು. ಹೊರಗೆ ಏನಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಅನುಭವಿಸಬಹುದಾಗಿತ್ತು,” ಎಂದು ಅವರು ಹೇಳಿದರು.
ಆದರೆ ಬಂಕರ್‌ನಲ್ಲಿ ಮೌನ ಆವರಿಸಲಿಲ್ಲ. ಅದು ಸಹೋದರತ್ವ ಮತ್ತು ಪ್ರಾರ್ಥನೆಯ ಸ್ಥಳವಾಗಿ ಮಾರ್ಪಟ್ಟಿತು. ನಾವು ವಿವಿಧ ಭಾಷೆಗಳಲ್ಲಿ ಹಾಡಿದ್ದೇವೆ ಮತ್ತು ಪ್ರಾರ್ಥಿಸಿದ್ದೇವೆ . ಇರಾನ್‌ನ ಜನರಿಗಾಗಿಯೂ ಬೇಡುತ್ತಿದ್ದೇವೆ,” ಎಂದು ಮಠಾಧೀಶರು ಹೇಳಿದರು.
ಅಲ್ಲಿ ಇದ್ದ ಯಾತ್ರಿಕರಲ್ಲಿ ಒಬ್ಬ ತನ್ನ 19ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ಯುವತಿಯೋರ್ವರಿದ್ದರು. ಅಲ್ಲಿದ್ದವರು ಎಲ್ಲರೂ ತಮ್ಮ ತಮ್ಮ ಭಾಷೆಗಳಲ್ಲಿ “ಹ್ಯಾಪಿ ಬರ್ತ್‌ಡೇ” ಹಾಡಿದರು. “ಇದು ವಿಚಿತ್ರವಾಗಿ ಕೇಳಿಸಬಹುದು, ಆದರೆ ಅದು ಒಳ್ಳೆಯ ಅನುಭವವಾಗಿತ್ತು,” ಎಂದು ಅವರು ಹೇಳಿದರು.
ಅಪರಿಚಿತರಾದರೂ ಒಂದೇ ನಂಬಿಕೆಯ ಬೇರುಗಳನ್ನು ಹಂಚಿಕೊಂಡಿರುವ ಸಮುದಾಯವಾಗಿ ಒಟ್ಟಾಗಿ ಪ್ರಾರ್ಥಿಸುವುದು ಅತ್ಯಂತ ಸುಂದರ ಅನುಭವವಾಗಿತ್ತು ಎಂದು ಅವರು ವಿವರಿಸಿದರು.
ಜೆರುಸಲೇಮ್‌ನ ನಿರ್ಜನ ಬೀದಿಗಳು
ಶನಿವಾರ ಮಠಾಧೀಶರು ಮತ್ತು ಅವರ ಗುರುಗಳಲ್ಲಿ ಹೆಚ್ಚಿನವರು ಜೆರುಸಲೇಮ್‌ಗೆ ಮರಳಿದರು. ಆ ಸಮಯದಲ್ಲಿ ಪವಿತ್ರ ನಗರದ ಬೀದಿಗಳು ಬಹುತೇಕ ಖಾಲಿಯಾಗಿದ್ದವು.
“ಜೆರುಸಲೇಮ್‌ನಲ್ಲಿ ನಾವು ಈಗ ಧಾರ್ಮಿಕ ಅಧ್ಯಯನ ವರ್ಷದೊಳಗಿದ್ದೇವೆ. ಇಲ್ಲಿ ಇಸ್ಲಾಮಿಕ್ ತತ್ವಶಾಸ್ತ್ರ ವಿದ್ಯಾರ್ಥಿಗಳೊಂದಿಗೆ ಸೇರಿ ಮುಸ್ಲಿಂ-ಕ್ರೈಸ್ತ ಅಧ್ಯಯನ ವಾರಗಳನ್ನು ನಡೆಸುತ್ತಿದ್ದೇವೆ. ಅಂದರೆ ನಾವು ಜರ್ಮನಿಯಿಂದ ಬಂದ ಕ್ರೈಸ್ತ ಮತ್ತು ಇಸ್ಲಾಮಿಕ್ ತತ್ವಶಾಸ್ತ್ರ ವಿದ್ಯಾರ್ಥಿಗಳೊಂದಿಗೆ ನಿಜವಾದ ಅಂತರ್ಧರ್ಮ ಸಮುದಾಯದಂತೆ ಬದುಕುತ್ತಿದ್ದೇವೆ,ಈ ಪರಿಸ್ಥಿತಿಯ ನಡುವೆಯೂ ಅವರು ಜೆರುಸಲೇಮ್‌ನಲ್ಲಿ ಉಳಿದು ಪ್ರಾರ್ಥನೆಯಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ.
ಅವರು ಹೇಳುವಂತೆ, ಈ ಸಂದರ್ಭದಲ್ಲಿ, ಮಾನವ ಪದಗಳು ವಿಫಲವಾಗುವ ಸಮಯಗಳಲ್ಲಿ ಕೀರ್ತನೆಗಳ ಶಕ್ತಿ ಹೊಸ ರೀತಿಯಲ್ಲಿ ಅನುಭವವಾಗುತ್ತಿದೆ. ಸಾಂಪ್ರದಾಯಿಕವಾಗಿ ಮೇರಿಯ ನಿದ್ರಾವಸ್ಥೆಯ ಸ್ಥಳವೆಂದು ಪೂಜಿಸಲ್ಪಡುವ ದೇವಾಲಯದ ಕೆಳಭಾಗವನ್ನು ಚೆನ್ನಾಗಿ ರಕ್ಷಿಸಲಾಗಿರುವುದರಿಂದ ಗುರುಗಳು ತಮ್ಮ ಎಲ್ಲಾ ಪ್ರಾರ್ಥನಾ ಸಮಯವನ್ನು ಭೂಗತ ಕೋಣೆ ಕಳೆಯುತ್ತಿದ್ದಾರೆ
"ಭಾನುವಾರದ ಪ್ರಾರ್ಥನೆಯ ಸಮಯದಲ್ಲಿ, ಜೆರುಸಲೆಮ್ ಬಳಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು ದಾಳಿ ಮಾಡುವುದನ್ನು ನಾವು ಗಮನಿಸಿದ್ದೇವೆ; ಆ ಸಮಯದಲ್ಲಿ ದೇಶ ಎಷ್ಟು ಚಿಕ್ಕದಾಗಿದೆ ಎಂಬುದನ್ನು ನೀವು ನಿಜವಾಗಿಯೂ ಗ್ರಹಿಸಬಹುದು" ಎಂದು ಮಠಾಧೀಶರು ಹಂಚಿಕೊಂಡರು.
ಭಾನುವಾರದ ವಿಶ್ವಾಸಿಗಳ ಪ್ರಾರ್ಥನೆಗಳ ಸಮಯದಲ್ಲಿ, ಬೆನೆಡಿಕ್ಟಿನ್ ಗುರುಗಳು ಯುದ್ಧದಿಂದ ಬಾಧಿತರಾದ ಎಲ್ಲರನ್ನೂ,ಹಿಂಸಾಚಾರ ನಡೆಸುತ್ತಿರುವವರೂ ಮತ್ತು ಅಧಿಕಾರದಲ್ಲಿರುವವರೂ ಸೇರಿ ಸ್ಮರಿಸಿದರು.
ಮಠಾಧೀಶರು ಶ್ನಾಬೆಲ್ ವಿವರಿಸುತ್ತಾ : “ಕೆಲವರ ಮೇಲೆ ನಾನು ವೈಯಕ್ತಿಕವಾಗಿ ಆದಿಕಾಂಡ ಅಧ್ಯಾಯ 3ರಲ್ಲಿ ಹೇಳಿರುವ ಮಾತುಗಳನ್ನು ಉಲ್ಲೇಖಿಸುತ್ತಾ: ಬೂದಿಯ ಶಿಲುಬೆಯ ಗುರುತು ಹಾಕಬೇಕೆಂದು ಅನಿಸುತ್ತದೆ. ‘ಮಾನವನೇ, ನೀನು ಧೂಳಾಗಿದ್ದೀಯ; ಧೂಳಿಗೆ ಮರಳುವವನು.’ ಕೆಲವರು ಮರಣಶೀಲರು ಮತ್ತು ಅವರ ಜೀವನಕ್ಕೂ ಒಂದು ಅಂತ್ಯವಿದೆ ಎಂಬ ಸತ್ಯವನ್ನು, ವಾಸ್ತವಿಕತೆಯನ್ನು ಮರೆತಿರುವಂತೆ ನನಗೆ ಕಾಣುತ್ತದೆ” ಎಂದು ಹಂಚಿಕೊಂಡರು.
ಯುದ್ಧವು ಮುಖವಾಡವನ್ನು ಕಳಚುತ್ತದೆ
ಡಾರ್ಮಿಷನ್ ಮಠದ ಸಭಾಪಾಲಕರಾಗಿ ಮಠಾಧೀಶರು ಈಗ ತಮ್ಮನ್ನು ಗಂಭೀರ ಸವಾಲಿನ ನಡುವೆ ಕಂಡುಕೊಳ್ಳುತ್ತಿದ್ದಾರೆ. “ಯುದ್ಧವು ನಿಮ್ಮ ಮುಖವಾಡವನ್ನು ಕಳಚುತ್ತದೆ. ನೀವು ಸಂಪೂರ್ಣವಾಗಿ ಬಯಲಾಗಿರುವಂತೆ ಕಾಣುತ್ತೀರಿ. ದೈನಂದಿನ ಜೀವನದಲ್ಲಿ ನಾವು ಧರಿಸುವ ಎಲ್ಲಾ ಕವಚಗಳು ಒಡೆದುಹೋಗುತ್ತವೆ. ಆಗ ನಿಮ್ಮ ಆಸೆಗಳು, ನಿಮ್ಮ ಭಯಗಳು ಮತ್ತು ನಿಮ್ಮ ಚಿಂತೆಗಳು ನಿಮ್ಮ ಮುಂದೆ ನಿಂತಿರುತ್ತವೆ. ಆ ಕ್ಷಣದಲ್ಲಿ ನನಗೆ ತಿಳಿಯಿತು — ಈ ಸಮಯದಲ್ಲಿ ನಮ್ಮ ಪ್ರಮುಖ ಕರೆಯು ಗುರುಗಳಾಗಿ ಜನರೊಂದಿಗೆ ಇರುವುದು: ಅವರನ್ನು ಆಲಿಸುವುದು, ಅವರಿಗೆ ಧೈರ್ಯ ನೀಡುವುದು ಮತ್ತು ಅವರೊಂದಿಗೆ ಪ್ರಾರ್ಥಿಸುವುದು.”
2025ರಲ್ಲಿ ಇರಾನ್‌ನೊಂದಿಗೆ ನಡೆದ ಹಿಂದಿನ ಯುದ್ಧದಂತೆ, ಈ ಬಾರಿ ಕೂಡ ಫಿಲಿಪ್ಪೀನ್ಸ್ ಮೂಲದ ಒಬ್ಬ ವಲಸೆ ಕಾರ್ಮಿಕ ಇರಾನ್‌ನ ಪ್ರತಿದಾಳಿ ದಾಳಿಯಲ್ಲಿ ಮೃತಪಟ್ಟಿದ್ದಾರೆ.
“ಇದು ಮತ್ತೆ ನನಗೆ ಸ್ಪಷ್ಟವಾಗಿ ಕಾಣುತ್ತಿದೆ. ಸಾವಿರಾರು ವಲಸೆ ಕಾರ್ಮಿಕರು — ಮುಖ್ಯವಾಗಿ ಫಿಲಿಪ್ಪೀನ್ಸ್, ಭಾರತ ಮತ್ತು ಶ್ರೀಲಂಕಾದ ಮಹಿಳೆಯರು, ಬಹುಪಾಲು ಕಥೋಲಿಕ ವಿಶ್ವಾಸಿಗಳು ಆಶ್ರಯ ಕೇಂದ್ರಗಳಿಗೆ ಹೋಗುವುದಿಲ್ಲ. ಏಕೆಂದರೆ ಅವರು ವೃದ್ಧರು ಅಥವಾ ಅಂಗವಿಕಲರನ್ನು ನೋಡಿಕೊಳ್ಳುತ್ತಿದ್ದಾರೆ ಮತ್ತು ಅವರಿಗೆ ಒಪ್ಪಿಸಲಾದವರ ಜೊತೆಗೇ ಆ ಕ್ಷಣಗಳಲ್ಲಿ ಉಳಿಯುತ್ತಾರೆ.
ನನ್ನ ದೃಷ್ಟಿಯಲ್ಲಿ ಇದು ಯುದ್ಧದ ಕಳಪೆ ಮತ್ತು ಅಶುದ್ಧ ಸ್ವರೂಪವನ್ನು ತೋರಿಸುತ್ತದೆ. ಈ ನಿರಪರಾಧಿ ಜನರು ಈ ಆಧುನಿಕ ಗುಲಾಮರಾಗಿ ತಮ್ಮ ಜೀವಗಳಿಂದಲೇ ಬೆಲೆ ಕಟ್ಟುತ್ತಿದ್ದಾರೆ.”
“ಯುದ್ಧ ನಿಜಕ್ಕೂ ಅಶುದ್ಧ”
ಅವರು ಒತ್ತಿಹೇಳುತ್ತಾ, ಮರೆತುಹೋಗುತ್ತಿರುವ ಈ ಜನರೂ ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟವರೇ. ಆದರೂ ಅವರ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸುವುದಿಲ್ಲ — ಆದರೆ ಈಗ ಅವರು ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಮಧ್ಯಪ್ರಾಚ್ಯದ ಬಹುಭಾಗಗಳು ಈಗ ದುಃಖ ಅನುಭವಿಸುತ್ತಿವೆ. ಜನರು ಮಾನಸಿಕವಾಗಿ ಆಘಾತಕ್ಕೊಳಗಾಗುತ್ತಿದ್ದಾರೆ. ಯುದ್ಧವು ಜೀವಗಳನ್ನು ನಾಶಮಾಡುತ್ತದೆ ಮತ್ತು ಜಗತ್ತನ್ನು ಯಾವ ರೀತಿಯಲ್ಲೂ ಉತ್ತಮಗೊಳಿಸುವುದಿಲ್ಲ.
“ಜನರು ಈಗ ಯುದ್ಧದ ಸುದ್ದಿಯನ್ನು ಕ್ರೀಡಾ ಪಂದ್ಯವೆಂಬಂತೆ ಉತ್ಸಾಹದಿಂದ ಅನುಸರಿಸುವುದನ್ನು ನೋಡಿದಾಗ ನನಗೆ ಅಸಹಜವೆನಿಸುತ್ತದೆ. ಇದು ಫುಟ್ಬಾಲ್ ಪಂದ್ಯವಲ್ಲ. ಎರಡು ರಾಷ್ಟ್ರಗಳ ನಡುವಿನ ಕ್ರೀಡಾ ಸ್ಪರ್ಧೆಯೂ ಅಲ್ಲ. ಯುದ್ಧ ನಿಜಕ್ಕೂ ಅಶುದ್ಧ.”
ಮಾರ್ಚ್ 3ರ ಮಧ್ಯಾಹ್ನ ಪೊಲೀಸರು ಡಾರ್ಮಿಷನ್ ಮಠಕ್ಕೆ ಬಂದು ಅದನ್ನು ಮುಚ್ಚುವಂತೆ ಆದೇಶಿಸಿದರು. “ಇನ್ನು ಮಠವನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸಲು ಅನುಮತಿ ಇಲ್ಲ. ಇದು ನನಗೆ ಕಠಿಣವಾಗಿ ತೋರುತ್ತದೆ, ಏಕೆಂದರೆ ದೇಶದಲ್ಲಿ ಇನ್ನೂ ಹೊರಟು ಹೋಗಲಾಗದ ಯಾತ್ರಿಕರ ಗುಂಪುಗಳಿವೆ. ನಮ್ಮ ದೇವಾಲಯ, ನಮ್ಮ ಕ್ಯಾಂಟೀನ್ ಮತ್ತು ನಮ್ಮ ಅಂಗಡಿ ಕಾರ್ಯನಿರ್ವಹಿಸುತ್ತಿದ್ದವು. ಗುರುಗಳು ಅಲ್ಲಿ ಇದ್ದೆವು ನಮಗೆ ಅಲ್ಪ ಸಮಾಧಾನವಿತ್ತು. ಈಗ ಈ ಪುಟ್ಟ ಸಹಾಯವನ್ನು ಮಾಡಲಾಗದು,” ಎಂದು ಮಠಾಧೀಶರು ಹೇಳಿದರು.
ಮಠಾಧೀಶರು ಧರ್ಮಸಭೆಯನ್ನು ಒಂದು ನೌಕೆಗೆ ಹೋಲಿಸಿ, “ಈ ದುಃಖದ ಸಮುದ್ರದಲ್ಲಿ ಅದು ರಕ್ಷಣೆಯ ನೌಕೆಯಂತೆ. ಈಗ ನಾವು ಮಾಡಬಹುದಾದದ್ದು ಜನರಿಗಾಗಿ ಸಮುದಾಯವಾ ಪ್ರಾರ್ಥಿಸುವುದಷ್ಟೇ. ಜನರು ಬಂದು ಪ್ರಾರ್ಥಿಸುವ ಸ್ಥಳವಾಗಿ, ಸ್ವಲ್ಪ ನೆಮ್ಮದಿಯಾಗಿ ಉಸಿರಾಡುವ ಸ್ಥಳವಾಗಿ ಸುರಕ್ಷಿತತೆಯನ್ನು ಅನುಭವಿಸಲು ಸಾಧ್ಯವಾಗುವ ಸ್ಥಳವಾಗಿ ನಾವು ಇನ್ನು ಉಳಿಯಲಾರದೆ ಇರುವುದೇ ನನಗೆ ನೋವಾಗುತ್ತದೆ. "
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).