ಜೆರುಸಲೇಮಿನಲ್ಲಿರುವ ಪವಿತ್ರ ಸಮಾಧಿ ದೇವಾಲಯದ ಪ್ರವೇಶದ್ವಾರ ಜೆರುಸಲೇಮಿನಲ್ಲಿರುವ ಪವಿತ್ರ ಸಮಾಧಿ ದೇವಾಲಯದ ಪ್ರವೇಶದ್ವಾರ  (AFP or licensors)

ಗರಿಗಳ ಭಾನುವಾರದ ಪಾರಂಪರಿಕ ಮೆರವಣಿಗೆ ರದ್ದು: ಯುದ್ಧದ ಹಿನ್ನೆಲೆಯಲ್ಲಿ ಜೆರೂಸಲೇಮಿನಲ್ಲಿ ನಿರ್ಧಾರ

ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಯುದ್ಧ ಪರಿಸ್ಥಿತಿಯ ಹಿನ್ನೆಲೆ, ಒಲಿವ್ ಬೆಟ್ಟದಿಂದ ಜೆರೂಸಲೇಮಿನತ್ತ ನಡೆಯುವ ಗರಿಗಳ ಭಾನುವಾರದ ಪಾರಂಪರಿಕ ಮೆರವಣಿಗೆಯನ್ನು ಈ ವರ್ಷ ರದ್ದುಪಡಿಸಲಾಗಿದೆ.

ಲೇಖಕರು: ಬಿಯಾತ್ರಿಸ್ ಗುರೆರಾ

ಜೆರೂಸಲೇಮಿನ ಲ್ಯಾಟಿನ್ ಧರ್ಮಪ್ರಾಂತ್ಯದ ಮುಖ್ಯಸ್ಥರಾದ ಪ್ರಧಾನ ಗುರು ಪೂಜ್ಯ ಪಿಯರ್ಬತ್ತಿಸ್ತ ಪಿಜ್ಜಬಲ್ಲಾ ಅವರು ಈ ವಿಷಯವನ್ನು ಘೋಷಿಸಿದ್ದು, ಮೆರವಣಿಗೆಯ ಬದಲು ನಗರಾದಿಗಾಗಿ ಪ್ರಾರ್ಥನೆಯ ಕ್ಷಣವನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಆ ಪ್ರಾರ್ಥನೆ ನಡೆಯುವ ಸ್ಥಳವನ್ನು ನಂತರ ನಿರ್ಧರಿಸಲಾಗುತ್ತದೆ.

ಪವಿತ್ರ ಗುರುವಾರದ ಅಭ್ಯಂಗ ತೈಲ ಆಶೀರ್ವಾದ ಬಲಿಪೂಜೆಯನ್ನೂ ಮುಂದೂಡಲಾಗಿದೆ. ಸಾಮಾನ್ಯವಾಗಿ ಪವಿತ್ರ ಸಮಾಧಿ ದೇವಾಲಯದಲ್ಲಿ ನಡೆಯುವ ಈ ಆಚರಣೆ, ಪರಿಸ್ಥಿತಿ ಸುಧಾರಿಸಿದ ಬಳಿಕ—ಬಹುಶಃ ಪುನರುತ್ಥಾನ ಮಹೋತ್ಸವದ ಅವಧಿಯಲ್ಲಿ—ನಡೆಯಲಿದೆ ಎಂದು ಅವರು ವಿವರಿಸಿದರು.

ಸಾಮಾನ್ಯ ಸಾರ್ವಜನಿಕ ಆಚರಣೆಗಳು ಸಾಧ್ಯವಿಲ್ಲ

“ಇತ್ತೀಚಿನ ದಿನಗಳ ಘಟನೆಗಳು ಮತ್ತು ಯುದ್ಧದಿಂದ ಉಂಟಾದ ನಿರ್ಬಂಧಗಳು ತಕ್ಷಣದ ಸುಧಾರಣೆಗೆ ಯಾವುದೇ ಸೂಚನೆ ನೀಡುತ್ತಿಲ್ಲ,” ಎಂದು ಪ್ರಧಾನ ಗುರುಗಳಾದ ಪೂಜ್ಯರು ಹೇಳಿದರು.

“ಸಂಬಂಧಿತ ಅಧಿಕಾರಿಗಳೊಂದಿಗೆ ಮತ್ತು ಇತರ ಕ್ರೈಸ್ತ ಧರ್ಮಸಭೆಗಳೊಂದಿಗೆ ನಾವು ನಿರಂತರ ಸಂವಾದಲ್ಲಿದ್ದೇವೆ. ನಮ್ಮ ಕ್ರೈಸ್ತೀಯ ರಕ್ಷಣೆಯ ಮೂಲ ರಹಸ್ಯವಾದ ಈ ಮಹೋತ್ಸವವನ್ನು ಇತರ ಧರ್ಮಸಭೆಗಳೊಂದಿಗೆ, ಯಾವ ರೀತಿಯಲ್ಲಿ ಆಚರಿಸಬಹುದು ಎಂಬುದನ್ನು ಪರಿಶೀಲಿಸುತ್ತಿದ್ದೇವೆ,” ಎಂದು ಅವರು ಹೇಳಿದರು.

ಪರಿಸ್ಥಿತಿ ದಿನದಿಂದ ದಿನಕ್ಕೆ ಬದಲಾಗುತ್ತಿರುವುದರಿಂದ, ಪವಿತ್ರ ವಾರದ ಆಚರಣೆಗಳ ಬಗ್ಗೆ ಸ್ಪಷ್ಟ ಸೂಚನೆ ನೀಡುವುದು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಕಾರಣದಿಂದ ಕಾರ್ಯಕ್ರಮಗಳನ್ನು ದಿನದಿನಕ್ಕೆ ನಿರ್ಧರಿಸಬೇಕಾಗುತ್ತದೆ.

“ಆದರೆ ಒಂದು ವಿಷಯ ಈಗಲೇ ಸ್ಪಷ್ಟ—ಎಲ್ಲರಿಗೂ   ಸಾಮಾನ್ಯ ಆಚರಣೆಗಳು ನಡೆಯುವುದಿಲ್ಲ,” ಎಂದು ಅವರು ಹೇಳಿದರು. ಇದೇ ಹಿನ್ನೆಲೆಯಲ್ಲಿ ಗರಿಗಳ ಭಾನುವಾರದ ಮೆರವಣಿಗೆ ರದ್ದುಪಡಿಸಲಾಗಿದ್ದು, ಅಭ್ಯಂಗ ತೈಲ ಆಶೀರ್ವಾದ ಬಲಿಪೂಜೆ ಮುಂದೂಡಲಾಗಿದೆ.

ಆದಾಗ್ಯೂ, ಧರ್ಮಪ್ರಾಂತ್ಯದ ದೇವಾಲಯಗಳು ತೆರೆಯಲ್ಪಟ್ಟಿರುತ್ತವೆ. ಗುರುಗಳು ಮತ್ತು ಧರ್ಮಸೇವಕರು ಭಕ್ತರನ್ನು ಪ್ರಾರ್ಥನೆಗೆ ಹಾಗೂ ಪುನರುತ್ಥಾನ ಮಹೋತ್ಸವದ ಆಚರಣೆಗಳಲ್ಲಿ ಭಾಗವಹಿಸಲು ಪ್ರೇರೇಪಿಸುವಲ್ಲಿ ತಮ್ಮ ಶಕ್ತಿಮೀರಿ ಪ್ರಯತ್ನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ಯುದ್ಧದಿಂದ ಉಂಟಾದ ಮತ್ತೊಂದು ಗಾಯ

“ಈ ವರ್ಷ, ಯುದ್ಧದ ಕಾರಣದಿಂದ ಜೆರೂಸಲೇಮಿನಲ್ಲಿ ತಪಸ್ಸು ಕಾಲದ ಪಾರಂಪರಿಕ ಯಾತ್ರೆಯನ್ನು ನಡೆಸಲು ಸಾಧ್ಯವಿಲ್ಲ,” ಎಂದು ಪ್ರಕಟಣೆ ತಿಳಿಸಿದೆ.

“ಪವಿತ್ರ ಸಮಾಧಿ ಮತ್ತು ಕ್ರಿಸ್ತನ ಪಾಡುಗಳ ಪವಿತ್ರ ಸ್ಥಳಗಳಲ್ಲಿ ನಡೆಯುವ ಘನ ಆಚರಣೆಗಳನ್ನು ಕಳೆದುಕೊಂಡಿದ್ದೇವೆ. ವೈಯಕ್ತಿಕವಾಗಿ ಪ್ರಾರ್ಥನೆ ಮತ್ತು ಸಿದ್ಧತೆಯಲ್ಲಿ ತೊಡಗಿದ್ದರೂ, ಸಮೂಹವಾಗಿ ಪುನರುತ್ಥಾನ ಮಹೋತ್ಸವದತ್ತ ಸಾಗುವ ಅನುಭವವನ್ನು ಕಳೆದುಕೊಂಡಿದ್ದೇವೆ,” ಎಂದು ಪ್ರಧಾನ ಗುರುಗಳಾದ ಪೂಜ್ಯರು ಹೇಳಿದರು.

“ಈ ಯುದ್ಧದ ಕಠಿಣತೆ ಈಗ ನಮಗೆ ಮತ್ತೊಂದು ಭಾರವನ್ನು ತಂದಿದೆ—ನಾವು ಒಟ್ಟಾಗಿ ಗೌರವಯುತವಾಗಿ ಪುನರುತ್ಥಾನ ಮಹೋತ್ಸವವನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.

“ಇದು ಈಗಾಗಲೇ ಇರುವ ಅನೇಕ ಗಾಯಗಳಿಗೆ ಸೇರಿರುವ ಮತ್ತೊಂದು ಗಾಯ. ಆದರೂ ನಾವು ಹತಾಶರಾಗಬಾರದು. ಒಂದಾಗಿ ಸೇರಲು ಸಾಧ್ಯವಾಗದಿದ್ದರೂ, ಪ್ರಾರ್ಥನೆಯನ್ನು ಬಿಡಬಾರದು,” ಎಂದು ಅವರು ಹೇಳಿದರು.

ಮಾರ್ಚ್ 28ರಂದು ಶಾಂತಿಗಾಗಿ ಪ್ರಾರ್ಥನೆ

“ಹತಾಶರಾಗದೆ ಸದಾ ಪ್ರಾರ್ಥಿಸಿ” ಎಂಬ ಯೇಸುವಿನ ಮಾತುಗಳನ್ನು ನೆನಪಿಸಿಕೊಂಡು, ಕುಟುಂಬಗಳಲ್ಲಿ ಮತ್ತು ಧಾರ್ಮಿಕ ಸಮುದಾಯಗಳಲ್ಲಿ ಪ್ರಾರ್ಥನೆಯ ಮೂಲಕ ಈ ಕೊರತೆಯನ್ನು ಪೂರೈಸುವಂತೆ ಅವರು ಮನವಿ ಮಾಡಿದರು.

ವಿಶೇಷವಾಗಿ, ಮಾರ್ಚ್ 28ರಂದು ಎಲ್ಲರೂ ಒಂದಾಗಿ ಜಪಸರ ಪ್ರಾರ್ಥನೆಯ ಮೂಲಕ ಶಾಂತಿ ಮತ್ತು ನೆಮ್ಮದಿಗಾಗಿ ಬೇಡಿಕೊಳ್ಳುವಂತೆ ಅವರು ಆಹ್ವಾನಿಸಿದರು—ವಿಶೇಷವಾಗಿ ಯುದ್ಧದಿಂದ ಬಳಲುತ್ತಿರುವವರಿಗಾಗಿ ಪ್ರಾರ್ಥಿಸಲು ಕರೆ ನೀಡಿದರು. “ನಾವು ದೂರದಲ್ಲಿದ್ದರೂ, ದೇವರ ಪ್ರೀತಿಯ ಶಕ್ತಿ ನಮ್ಮನ್ನು ಒಂದಾಗಿ ಕೊಂಡೊಯ್ಯುತ್ತದೆ ಎಂಬ ಭರವಸೆಯೊಂದಿಗೆ, ವಿನಮ್ರ ಹೃದಯಗಳಿಂದ ಪ್ರಾರ್ಥಿಸೋಣ,” ಎಂದು ಅವರು ಹೇಳಿದರು.

ಒಟ್ಟಾಗಿ ಸೇರಲು ಸಾಧ್ಯವಾಗದಿದ್ದರೂ, ಒಂದೇ ಮನಸ್ಸಿನಲ್ಲಿ ಪ್ರಾರ್ಥಿಸುವ ದಿನವನ್ನಾಗಿ ಈ ದಿನವನ್ನು ರೂಪಿಸೋಣ ಎಂದು ಅವರು ಸೂಚಿಸಿದರು. “ಮೊದಲಿಗೆ ನಮಗೆ ಬೇಕಾಗಿರುವುದು ಹೃದಯದ ಶಾಂತಿ. ಅದನ್ನು ಕೊಡುವುದು ಪ್ರಾರ್ಥನೆಯಷ್ಟೇ,” ಎಂದು ಅವರು ಹೇಳಿದರು.

ಯಾವ ಅಂಧಕಾರಕ್ಕೂ ಅಂತಿಮ ಮಾತಿಲ್ಲ

ಶುಕ್ರವಾರ, ವಿಶ್ವದಾದ್ಯಂತದ ಭಕ್ತರು ಪವಿತ್ರ ಭೂಮಿಗೆ ನೆರವಾಗಲು ಪಾರಂಪರಿಕ ಸಂಗ್ರಹದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗುತ್ತದೆ.

“ಕ್ರಿಸ್ತನ ಪಾಡು, ಮರಣ ಮತ್ತು ಪುನರುತ್ಥಾನವನ್ನು ಸ್ಮರಿಸುವ ಈ ಪುನರುತ್ಥಾನ ಮಹೋತ್ಸವ ನಮಗೆ ಒಂದು ಸತ್ಯವನ್ನು ನೆನಪಿಸುತ್ತದೆ—ಯಾವ ಅಂಧಕಾರವೂ, ಯುದ್ಧದ ಅಂಧಕಾರವೂ ಸಹ, ಅಂತಿಮ ಮಾತು ಹೇಳುವುದಿಲ್ಲ. ಖಾಲಿ ಸಮಾಧಿ ಜೀವವು ದ್ವೇಷದ ಮೇಲೆ ಜಯ ಸಾಧಿಸಿದೆ ಎಂಬ ಮುದ್ರೆಯಾಗಿದೆ,” ಎಂದು ಅವರು ಹೇಳಿದರು.

“ಈ ಭರವಸೆ ನಮ್ಮ ಹೆಜ್ಜೆಗಳನ್ನು ಬೆಳಗಲಿ ಮತ್ತು ನಮ್ಮ ಆಶೆಯನ್ನು ಉಳಿಸಲಿ,” ಎಂದು ಅವರು ಕರೆ ನೀಡಿದರು.

ಪವಿತ್ರ ಸ್ಥಳಗಳಲ್ಲಿ ನಿರಂತರ ಪ್ರಾರ್ಥನೆ 

ಇತ್ತೀಚಿನ ದಿನಗಳಲ್ಲಿ, ಪವಿತ್ರ ಭೂಮಿಯ ಪಾಲಕರು ನೀಡಿದ ಪ್ರಕಟಣೆಯಲ್ಲಿ, ಪವಿತ್ರ ಸಮಾಧಿ ದೇವಾಲಯದಲ್ಲಿರುವ ಗುರುಗಳು “ಹಗಲು-ರಾತ್ರಿ ಯಾವುದೇ ವಿರಾಮವಿಲ್ಲದೆ ಆಚರಣೆಗಳು, ವಿಧಿಗಳು ಮತ್ತು ಪ್ರಾರ್ಥನೆಗಳನ್ನು ಮುಂದುವರಿಸುತ್ತಿದ್ದಾರೆ” ಎಂದು ತಿಳಿಸಲಾಗಿದೆ.

“ಭದ್ರತಾ ಕಾರಣಗಳಿಂದ ಪ್ರವೇಶವನ್ನು ನಿರ್ಬಂಧಿಸಿದರೂ, ಪವಿತ್ರ ಸ್ಥಳಗಳಲ್ಲಿ ಪ್ರಾರ್ಥನೆ ನಿರಂತರವಾಗಿ ನಡೆಯುತ್ತಿದೆ,” ಎಂದು ಪ್ರಕಟಣೆ ತಿಳಿಸಿದೆ.

ಪವಿತ್ರ ಭೂಮಿಯಲ್ಲಿ ಶತಮಾನಗಳಿಂದ ಇರುವ ಅವರ ಉಪಸ್ಥಿತಿ ಮತ್ತು ಅಲ್ಲಿಂದ ದೇವರ ಸನ್ನಿಧಿಗೆ ಏರುವ ಪ್ರಾರ್ಥನೆ— ಸಂಪೂರ್ಣ ಧರ್ಮಸಭೆಯ ಪರವಾಗಿ ಮತ್ತು ಸಮಸ್ತ ಮಾನವಕುಲದ ಹಿತಕ್ಕಾಗಿ ಅರ್ಪಿತವಾಗಿದೆ.

“ಇಂತಹ ಸಂಕಷ್ಟದ ಕ್ಷಣಗಳಲ್ಲಿ, ಈ ಉಪಸ್ಥಿತಿ ಪ್ರತಿಯೊಬ್ಬ ದೀಕ್ಷಾಸ್ನಾನ ಹೊಂದಿದ ವಿಶ್ವಾಸಿಯ ನಂಬಿಕೆ, ಭರವಸೆ ಮತ್ತು ಬೇಡಿಕೆಯನ್ನು ಸ್ಪಷ್ಟಗೊಳಿಸುತ್ತದೆ. ಈ ಪವಿತ್ರ ಸ್ಥಳಗಳಿಂದ ಜನರ ನಡುವೆ ಶಾಂತಿ ಮತ್ತು ಸಮವಾದಕ್ಕಾಗಿ ಪ್ರಾರ್ಥನೆ ನಿರಂತರವಾಗಿ ಏರುತ್ತಲೇ ಇರುತ್ತದೆ,” ಎಂದು ಅವರು ತಿಳಿಸಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

23 ಮಾರ್ಚ್ 2026, 18:25