ಹುಡುಕಿ

ತೈಬೆಹ್, ಪಶ್ಚಿಮ ದಂಡೆಯ ಸಂಪೂರ್ಣ ಕ್ರಿಶ್ಚಿಯನ್ ಪಟ್ಟಣ ಮತ್ತು ಸಮುದಾಯ. ತೈಬೆಹ್, ಪಶ್ಚಿಮ ದಂಡೆಯ ಸಂಪೂರ್ಣ ಕ್ರಿಶ್ಚಿಯನ್ ಪಟ್ಟಣ ಮತ್ತು ಸಮುದಾಯ. 

ತೈಬೆಹ್: ಪಶ್ಚಿಮ ತೀರದ ಕ್ರೈಸ್ತ ಪಟ್ಟಣದ ಮೇಲೆ ಮತ್ತೆ ವಸಾಹತಿಗಳ ದಾಳಿಗಳು

ಲೆಬನಾನ್‌ನಲ್ಲಿ ಇಸ್ರಾಯೇಲ್ ದಾಳಿಗಳು ಮುಂದುವರಿಯುತ್ತಿರುವ ಸಂದರ್ಭದಲ್ಲೇ, ಪಶ್ಚಿಮ ತೀರದಲ್ಲಿ ಯಹೂದಿ ವಸತಿಗಾರರ ದಾಳಿಗಳು ಮತ್ತೆ ತೀವ್ರಗೊಂಡಿದ್ದು, ಪ್ಯಾಲೆಸ್ತೀನಿಯ ನಾಗರಿಕರು ಮತ್ತು ಗ್ರಾಮಗಳ ಮೇಲೆ ಹಿಂಸಾಚಾರ ಹೆಚ್ಚುತ್ತಿದೆ. ಈ ಬೆಳವಣಿಗೆಗಳು ಈಗ ಆ ಪ್ರದೇಶದ ಏಕೈಕ ಸಂಪೂರ್ಣ ಕ್ರೈಸ್ತ ಪಟ್ಟಣವಾಗಿರುವ ತೈಬೆಹನ್ನೂ ನೇರವಾಗಿ ತಾಕುತ್ತಿವೆ.

ಲೇಖಕರು:ಅಲೆಕ್ಸಾಂಡ್ರಾ ಶಿರಗಾಂತ್ ಅಂಡ್ ಲಿಂಡಾ ಬೋರ್ಡೊನಿ

ಇಸ್ರಾಯೇಲ್ ಸಚಿವ ಸಂಪುಟವು ವಸತಿಗಳ ವಿಸ್ತರಣೆಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರಗಳು ಈಗಾಗಲೇ ಸೂಕ್ಷ್ಮ ಸಮತೋಲನದಲ್ಲಿದ್ದ ಪಶ್ಚಿಮ ತೀರದ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿವೆ. ಈ ಹಿನ್ನೆಲೆಯಲ್ಲಿ ವಸಾಹತಿಗಳ ಸಮನ್ವಯಿತ ದಾಳಿಗಳು ಹೆಚ್ಚಾಗುತ್ತಿದ್ದು, ಜೆರೂಸಲೇಮ್‌ನ ಪೂರ್ವ ಭಾಗದಲ್ಲೂ ರಾಮಲ್ಲಾಹ್‌ನ ಉತ್ತರ ಭಾಗದಲ್ಲೂ ಇರುವ ತೈಬೆಹ್ ಪಟ್ಟಣವೂ ಇದರಿಂದ ತಪ್ಪಿಸಿಕೊಳ್ಳಲಿಲ್ಲ.

ಪಶ್ಚಿಮ ತೀರದ ಕೊನೆಯ ಸಂಪೂರ್ಣ ಕ್ರೈಸ್ತ ಪ್ಯಾಲೆಸ್ತೀನಿಯ ಪಟ್ಟಣವೆಂದು ಗುರುತಿಸಲ್ಪಡುವ ತೈಬೆಹ್ ಕಳೆದ ಕೆಲವು ತಿಂಗಳಿಂದ ನಿರಂತರ ದಾಳಿಗಳಿಗೆ ಒಳಗಾಗಿದೆ. ಮನೆಗಳು, ಆಸ್ತಿಪಾಸ್ತಿಗಳ ಮೇಲೆ ನಡೆದ ದಾಳಿಗಳ ಸಂಖ್ಯೆ ಹೆಚ್ಚುತ್ತಲೇ ಬಂದಿದೆ. 2025ರ ಜೂನ್‌ನಿಂದ ಈ ದಾಳಿಗಳ ಪ್ರಮಾಣದಲ್ಲಿ ಸ್ಪಷ್ಟ ಏರಿಕೆ ಕಂಡುಬಂದಿದ್ದು, ಕಳೆದ ಎರಡು ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರ ಹಂತಕ್ಕೆ ತಲುಪಿದೆ.

ಇತ್ತೀಚಿನ ಘಟನೆಗಳಲ್ಲಿ, ವಸಾಹತಿಗಳು ಪಟ್ಟಣದ ಪಶ್ಚಿಮ ಭಾಗದಲ್ಲಿರುವ ಸಿಮೆಂಟ್ ಕಾರ್ಖಾನೆ ಮತ್ತು ಕಲ್ಲುಗಣಿ ಪ್ರದೇಶವನ್ನು ಪ್ರವೇಶಿಸಿ ನಿಯಂತ್ರಣ ಸಾಧಿಸಲು ಪ್ರಯತ್ನಿಸಿರುವುದು ಗಮನಾರ್ಹವಾಗಿದೆ.

ಮಾರ್ಚ್ 19ರ ಬೆಳಿಗ್ಗೆಯಿಂದಲೇ ವಸಾಹತಿಗಳು ಈ ಪ್ರದೇಶಕ್ಕೆ ಪ್ರವೇಶಿಸಿ, ಅಲ್ಲೇ ಧಾರ್ಮಿಕ ವಿಧಿವಿಧಾನಗಳು ಮತ್ತು ಪ್ರಾರ್ಥನೆಗಳನ್ನು ನಡೆಸಿರುವುದಾಗಿ ವರದಿಯಾಗಿದೆ. ಎರಡನೇ ದಿನವೂ ಅವರ ಅತಿಕ್ರಮಣ ಮುಂದುವರಿದಿದ್ದು, ಆ ಪ್ರದೇಶದ ಮೇಲೆ ತಮ್ಮ ನಿಯಂತ್ರಣವನ್ನು ಸ್ಥಾಪಿಸುವ ಪ್ರಯತ್ನವಾಗಿ ಇದು ಕಾಣುತ್ತಿದೆ.

ಸಾಕ್ಷಿದಾರರ ಪ್ರಕಾರ, ಕಾರ್ಖಾನೆಯ ಸಂಗ್ರಹ ಟ್ಯಾಂಕ್‌ಗಳ ಮೇಲೆ ಇಸ್ರಾಯೇಲ್ ಧ್ವಜವನ್ನು ಹಾರಿಸಲಾಗಿದೆ — ಇದು ಕೇವಲ ಹಾಜರಾತಿಯಲ್ಲ, ಆಕ್ರಮಣದ ಸಂಕೇತವಾಗಿ ಕಾಣುತ್ತಿದೆ.

ತೈಬೆಹ್ ಲ್ಯಾಟಿನ್ ಧರ್ಮಕೇಂದ್ರದ ಧರ್ಮಗುರು ವಂ. ಗುರು ಬಶಾರ್ ಫವಾಡ್ಲೆ ಅವರು ಈ ಬೆಳವಣಿಗೆಯನ್ನು ಗಂಭೀರ ತಿರುವು ಎಂದು ವಿವರಿಸಿದ್ದಾರೆ. “ಮೊದಲು ದಾಳಿಗಳು ಪಟ್ಟಣದ ಪೂರ್ವ ಭಾಗಕ್ಕೆ ಸೀಮಿತವಾಗಿದ್ದವು. ಆದರೆ ಈಗ ಪಶ್ಚಿಮ ಭಾಗದಲ್ಲಿರುವ ಪ್ರಮುಖ ಸಾರ್ವಜನಿಕ ಮತ್ತು ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ,” ಎಂದು ಅವರು ಹೇಳಿದರು.

ವಸಾಹತಿಗಳು ಕಲ್ಲುಗಣಿ ಮತ್ತು ಸಿಮೆಂಟ್ ಘಟಕಕ್ಕೆ ನುಗ್ಗಿ, ಧ್ವಜ ಹಾರಿಸಿ, ನಂತರದ ದಿನವೂ ಮರಳಿ ಬಂದು ತಮ್ಮ ವಿಧಿವಿಧಾನಗಳನ್ನು ಮುಂದುವರಿಸಿರುವುದನ್ನು ಅವರು ವಿವರಿಸಿದರು. ಈ ಘಟನೆಗಳ ಬಗ್ಗೆ ಪೊಲೀಸರು ಮಾಹಿತಿ ಪಡೆದರೂ, ಅವರ ಹಸ್ತಕ್ಷೇಪ ತಾತ್ಕಾಲಿಕವಾಗಿಯೇ ಉಳಿದಿದೆ ಎಂದು ವಂ. ಗುರು ಫವಾಡ್ಲೆ ಹೇಳಿದರು.

“ನಾವು ಕರೆ ಮಾಡಿದ ಒಂದು ಗಂಟೆಯ ನಂತರ ಪೊಲೀಸರು ಬಂದರು. ಆದರೆ ಅವರು ತೆರಳಿದ ಕೆಲವೇ ನಿಮಿಷಗಳಲ್ಲಿ ವಸಾಹತಿಗಳು ಮತ್ತೆ ಬಂದರು. ಈಗ ಅವರು ನಮ್ಮ ಭೂಮಿಯಲ್ಲೇ ಇದ್ದಾರೆ,” ಎಂದು ಅವರು ವಿಷಾದಿಸಿದರು. ಈ ಬೆಳವಣಿಗೆಗಳು ಕೇವಲ ಪ್ರತ್ಯೇಕ ಘಟನೆಗಳಲ್ಲ; ವಿಶಾಲ ಪ್ರದೇಶದ ಮೇಲೆ ನಿಯಂತ್ರಣ ವಿಸ್ತರಿಸಲು ನಡೆಯುತ್ತಿರುವ ಕ್ರಮಗಳ ಭಾಗವಾಗಿರಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.

ತೈಬೆಹ್ ಪಟ್ಟಣವು ಸುಮಾರು 4,000 ಏಕರ ವಿಸ್ತೀರ್ಣ ಹೊಂದಿದ್ದು, ಈ ಪ್ರದೇಶದ ಭೌಗೋಳಿಕ ಮಹತ್ವವೇ ಅದನ್ನು ಇನ್ನಷ್ಟು ಅಪಾಯದ ಗುರಿಯಾಗಿಸಿದೆ. ಜೆರೂಸಲೇಮ್‌ನ ಪೂರ್ವ ಭಾಗದಿಂದ ಜೋರ್ಡಾನ್ ಕಣಿವೆಯವರೆಗೆ ವಿಸ್ತರಿಸುವ ಪ್ರದೇಶದಲ್ಲಿ ನಿಯಂತ್ರಣ ಸಾಧಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ತೈಬೆಹ್ ಕೂಡಾ  ಸೇರಿದೆ ಎಂಬ ಸೂಚನೆಗಳು ಗೋಚರಿಸುತ್ತಿವೆ. ಪಟ್ಟಣದ ನಿವಾಸಿಗಳು ಈಗಾಗಲೇ ಸೇನಾ ತಡೆಗೋಡೆಗಳು ಮತ್ತು ತಪಾಸಣಾ ಕೇಂದ್ರಗಳಿಂದ ಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಮಗಳಿಂದ ನಗರಗಳಿಗೆ ಸಾಗುವಿಕೆ ಸೀಮಿತವಾಗಿದ್ದು, ಸಾಮಾನ್ಯ ಜೀವನವೇ ಅಸ್ತವ್ಯಸ್ತವಾಗಿದೆ.

“ಪರಿಸ್ಥಿತಿ ತುಂಬ ಕಷ್ಟಕರವಾಗಿದೆ,” ಎಂದು ವಂ. ಗುರು ಫವಾಡ್ಲೆ ಹೇಳಿದರು. ಈ ಕಠಿಣ ಪರಿಸ್ಥಿತಿಯ ನಡುವೆಯೂ, ಸ್ಥಳೀಯ ಸಮುದಾಯವು ತನ್ನ ಧ್ವನಿಯನ್ನು ಎತ್ತುತ್ತಿದೆ. “ನಾವು ಇನ್ನೂ ನಿರೀಕ್ಷೆಯನ್ನು ಕಳೆದುಕೊಂಡಿಲ್ಲ. ನಾವು ನಾಗರಿಕ ಪ್ಯಾಲೆಸ್ತೀನಿಯ ಜನರು. ನಮಗೆ ಶಾಂತಿಯಿಂದ ಬದುಕಬೇಕು. ನ್ಯಾಯದೊಂದಿಗೆ ಬದುಕಬೇಕು,” ಎಂದು ಅವರು ಹೇಳಿದರು.

ಅವರು ಅಂತರರಾಷ್ಟ್ರೀಯ ಸಮುದಾಯವನ್ನು ನೇರವಾಗಿ ಹಸ್ತಕ್ಷೇಪ ಮಾಡಲು ಕರೆ ನೀಡಿ,“ಜಗತ್ತು ಬಂದು ಈ ಪರಿಸ್ಥಿತಿಯನ್ನು ನೋಡಬೇಕು. ಈ ಕ್ರಮಗಳನ್ನು ನಿಲ್ಲಿಸಬೇಕು. ನಮಗೆ ಭದ್ರತೆ ಮತ್ತು ಶಾಂತಿಯೊಂದಿಗೆ ಬದುಕಲು ಅವಕಾಶ ನೀಡಬೇಕು,” ಎಂದು ಅವರು ಮನವಿ ಮಾಡಿದರು.

ತೈಬೆಹ್ ಪರಿಸ್ಥಿತಿ ಕೇವಲ ಒಂದು ಪಟ್ಟಣದ ಸಮಸ್ಯೆಯಲ್ಲ; ಅದು ಭೂಮಿ, ಅಸ್ತಿತ್ವ ಮತ್ತು ಮಾನವೀಯ ಹಕ್ಕುಗಳ ಪ್ರಶ್ನೆಯಾಗಿದೆ. ಒಂದು ಕಾಲದಲ್ಲಿ ನಿಶ್ಶಬ್ದವಾಗಿ ಬದುಕುತ್ತಿದ್ದ ಸಮುದಾಯವು ಈಗ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳಲು, ಶಾಂತಿಯ ಹಕ್ಕಿಗಾಗಿ, ಭೂಮಿಯ ಹಕ್ಕಿಗಾಗಿ, ಬದುಕಿನ ಹಕ್ಕಿಗಾಗಿ ಹೋರಾಡುತ್ತಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

19 ಮಾರ್ಚ್ 2026, 19:22