2025.11.20  Lebanese Association of the Knights of Malta (Order of Malta Lebanon) 2025.11.20 Lebanese Association of the Knights of Malta (Order of Malta Lebanon) 

ಲೆಬನಾನ್‌ನಲ್ಲಿ ಹೊಸ ಸ್ಥಳಾಂತರ ಸಂಕಷ್ಟಕ್ಕೆ ಪ್ರತಿಕ್ರಿಯಿಸಿದ ಆರ್ಡರ್ ಆಫ್ ಮಾಲ್ಟಾ

ಲೆಬನಾನ್ ಮೇಲೆ ಇಸ್ರಾಯೇಲ್ ನಡೆಸುತ್ತಿರುವ ದಾಳಿಗಳ ಪರಿಣಾಮವಾಗಿ ಐದು ಲಕ್ಷಕ್ಕಿಂತ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆಯಬೇಕಾಗಿದೆ. ಈಗಾಗಲೇ ಗಂಭೀರ ಮಾನವೀಯ ಸಂಕಷ್ಟವನ್ನು ಎದುರಿಸುತ್ತಿರುವ ದೇಶದಲ್ಲಿ ಈ ಹೊಸ ಬೆಳವಣಿಗೆ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಸ್ಥಳಾಂತರಗೊಂಡ ಕುಟುಂಬಗಳಿಗೆ ವೈದ್ಯಕೀಯ ಸೇವೆ, ಆಶ್ರಯ ಸಹಾಯ ಮತ್ತು ಮಾನಸಿಕ-ಸಾಮಾಜಿಕ ಬೆಂಬಲವನ್ನು ಒದಗಿಸಲು ಆರ್ಡರ್ ಆಫ್ ಮಾಲ್ಟಾ ಲೆಬನಾನ್ (ಮಾಲ್ಟಾ ಲೆಬನಾನ್ ಸಾರ್ವಭೌಮ ಸೇನಾ ದಳ) ದೇಶದಾದ್ಯಂತ ಕಾರ್ಯಪ್ರವೃತ್ತವಾಗಿದೆ.

ಲೇಖಕರು: ಆಗಸ್ಟಿನ್ ಅಸ್ತಾ ಮತ್ತು ಲಿಂಡಾ ಬೊರ್ಡೋನಿ

ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರಾಯೇಲ್ ನಡೆಸುತ್ತಿರುವ ದಾಳಿಗಳು ಹಾಗೂ ಇರಾನ್ ಪಡೆಗಳ ಪ್ರತಿದಾಳಿಗಳ ನಡುವೆ, ಲೆಬನಾನ್‌ನಲ್ಲಿ ಹೆಜ್ಬೊಲ್ಲಾವನ್ನು ಗುರಿಯಾಗಿಸಿಕೊಂಡು ಇಸ್ರಾಯೇಲ್ ನಡೆಸಿದ ದಾಳಿಗಳಲ್ಲಿ ಯುದ್ಧದ ಮೊದಲ ಎಂಟು ದಿನಗಳಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದು, ಸುಮಾರು 1,000 ಜನರು ಗಾಯಗೊಂಡಿದ್ದಾರೆ. ಈ ಹಿಂಸಾಚಾರದ ಪರಿಣಾಮವಾಗಿ ಐದು ಲಕ್ಷಕ್ಕಿಂತ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ಪಲಾಯನಗೊಳ್ಳಬೇಕಾಗಿದೆ. ಈ ಸಂಕಷ್ಟದ ಸಮಯದಲ್ಲಿ ಜನತೆಗೆ ನೆರವಾಗುತ್ತಿರುವ ಮಾನವೀಯ ಸಂಸ್ಥೆಗಳಲ್ಲಿ ಆರ್ಡರ್ ಆಫ್ ಮಾಲ್ಟಾ ಲೆಬನಾನ್ ಪ್ರಮುಖವಾಗಿದೆ.

ವ್ಯಾಟಿಕನ್ ರೇಡಿಯೊಗೆ ಮಾತನಾಡಿದ ಆರ್ಡರ್ ಆಫ್ ಮಾಲ್ಟಾ ಲೆಬನಾನ್‌ನ ಅಭಿವೃದ್ಧಿ ಮತ್ತು ಸಂವಹನ ವಿಭಾಗದ ನಿರ್ದೇಶಕಿ ಓಮೈಮಾ ಫರಾಹ್, ಸಹಾಯ ಪಡೆಯುತ್ತಿರುವ ಜನರು ಭಯಭೀತರಾಗಿದ್ದು, ಮನನೊಂದಿರುವುದಾಗಿ ಹೇಳಿದರು. ಮತ್ತೆ ಇದೇ ರೀತಿಯ ಸಂಕಷ್ಟವನ್ನು ಎದುರಿಸಬೇಕಾಗಿರುವುದನ್ನು ಅವರು ನಂಬಲಾರದೆ ಇರುವ ಸ್ಥಿತಿಯಲ್ಲಿದ್ದಾರೆ ಎಂದೂ ಅವರು ಹೇಳಿದರು.

ಈಗಾಗಲೇ ಹಿಂದಿನ ಸಂಘರ್ಷಗಳಿಂದ ಸಾವಿರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡಿರುವ ಪರಿಸ್ಥಿತಿಯಲ್ಲಿ, ಈ ಹೊಸ ಸ್ಥಳಾಂತರ ಸಂಕಷ್ಟದ ಅಗತ್ಯಗಳನ್ನು ಪೂರೈಸುವುದು ಸಹಾಯ ಕಾರ್ಯಕರ್ತರಿಗೆ ದೊಡ್ಡ ಸವಾಲಾಗಿದೆ ಎಂದು ಅವರು ವಿವರಿಸಿದರು.

“ಇಂದು ಲೆಬನಾನ್ ಮತ್ತೆ ಒಂದು ದೊಡ್ಡ ಸಂಕಷ್ಟವನ್ನು ಎದುರಿಸುತ್ತಿದೆ. ದೇಶವನ್ನು ಮತ್ತೊಮ್ಮೆ ಹೊಡೆಯುತ್ತಿರುವ ನಿರಂತರ ಯುದ್ಧದ ಪರಿಣಾಮವಾಗಿ  ಭಾರೀ ಸ್ಥಳಾಂತರ ಸಂಕಷ್ಟ ಎದುರಾಗಿದೆ,” ಎಂದು ಫರಾಹ್ ಹೇಳಿದರು. ಈ ಘಟನೆ 2024ರಲ್ಲಿ ನಡೆದ ಸಂಘರ್ಷದ ಎರಡು ವರ್ಷಗಳೊಳಗೆ ಮತ್ತೆ ಸಂಭವಿಸಿರುವುದನ್ನು ಅವರು ನೆನಪಿಸಿದರು.

ಫರಾಹ್ ಅವರ ಪ್ರಕಾರ, ಕಳೆದ ಗುರುವಾರ ಸಂಜೆ ಬೈರೂತ್‌ನ ದಕ್ಷಿಣ ಉಪನಗರಗಳ ದೊಡ್ಡ ಭಾಗವನ್ನು ಹಾಗೂ ದಕ್ಷಿಣ ಲೆಬನಾನ್‌ನ ಹಲವಾರು ಗ್ರಾಮಗಳನ್ನು ಖಾಲಿ ಮಾಡಲು ನೀಡಿದ ಸೂಚನೆಯ ನಂತರ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ.

“ಇದು ಒಂದು ಅಥವಾ ಎರಡು ಪಕ್ಕದ ಪ್ರದೇಶಗಳನ್ನು ಮಾತ್ರವಲ್ಲ, ಸಂಪೂರ್ಣ ಪ್ರದೇಶವನ್ನೇ ಖಾಲಿ ಮಾಡಲು ನೀಡಿದ ಮೊದಲ ಸೂಚನೆ,” ಎಂದು ಅವರು ಹೇಳಿದರು. “ಇದರ ಪರಿಣಾಮವಾಗಿ ಸುಮಾರು ಐದು ಲಕ್ಷ ಜನರು ಸ್ಥಳಾಂತರಗೊಂಡಿದ್ದು, ಅವರಲ್ಲಿ ಹಲವರು ಎಲ್ಲಿಗೆ ಹೋಗಬೇಕು ಎಂಬುದೇ ತಿಳಿಯದೆ ರಸ್ತೆಗಳಲ್ಲೇ ಉಳಿದಿದ್ದಾರೆ.”

ಅಸ್ತವ್ಯಸ್ತ ಪರಿಸ್ಥಿತಿ ಮತ್ತು ಭಯ

ಬಾಂಬ್ ದಾಳಿಗಳ ನಡುವೆ ಕುಟುಂಬಗಳು ಪಲಾಯನಗೊಳ್ಳಲು ಪ್ರಯತ್ನಿಸಿದಾಗ ಉಂಟಾದ ಅಸ್ತವ್ಯಸ್ತ ದೃಶ್ಯಗಳನ್ನು ಫರಾಹ್ ವಿವರಿಸಿದರು: “ಗೋಲಿಬಾರಿನ ಆರಂಭದಲ್ಲಿ  ರಸ್ತೆಗಳಲ್ಲಿ ಹಲವಾರು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು, ಸಾಮಾನ್ಯ ಜನರ ಪರಿಸ್ಥಿತಿ ಅತ್ಯಂತ ದುಃಖಕರವಾಗಿದೆ. ಸ್ಥಳಾಂತರಗೊಂಡ ಅನೇಕ ಕುಟುಂಬಗಳು ಇನ್ನೂ ತಮ್ಮ ಕಾರುಗಳಲ್ಲೇ ರಾತ್ರಿ ಕಳೆಯುತ್ತಿದ್ದಾರೆ. ಕೆಲವು ಕುಟುಂಬಗಳು ಹಿಂದಿನ ಯುದ್ಧಗಳಲ್ಲಿ ಅನುಭವಿಸಿದ ಕಷ್ಟಗಳ ಕಾರಣ ಆಶ್ರಯ ಕೇಂದ್ರಗಳಿಗೆ ಹೋಗಲು ಹಿಂಜರಿಯುತ್ತಿವೆ. ಮತ್ತೊಂದೆಡೆ, ಆಶ್ರಯಕ್ಕಾಗಿ ಬಂದ ಹಲವರು ಎರಡು ವರ್ಷಗಳ ಹಿಂದೆ ಬಳಸಿದ್ದ ಅದೇ ಆಶ್ರಯ ಕೇಂದ್ರಗಳಿಗೆ ಮತ್ತೆ ಹೋಗಿದ್ದಾರೆ. ಈ ಸಂಕಷ್ಟದ ಪುನರಾವರ್ತನೆ ಮಾನವೀಯ ಸಹಾಯ ಕಾರ್ಯಕರ್ತರಿಗೆ ವಿಶೇಷವಾಗಿ ನೋವುಂಟುಮಾಡುತ್ತಿದೆ. ಎರಡು ವರ್ಷಗಳ ಹಿಂದೆ ಸ್ಥಳಾಂತರಗೊಂಡಿದ್ದ ಅದೇ ಕುಟುಂಬಗಳು, ಅದೇ ಮಕ್ಕಳು ಮತ್ತೆ ಸ್ಥಳಾಂತರಗೊಂಡಿರುವುದನ್ನು ನೋಡುವುದು ಮನಸ್ಸಿಗೆ ತುಂಬಾ ನೋವುಂಟುಮಾಡುತ್ತದೆ.”

“ಇದು ಮತ್ತೆ ಏಕೆ ನಡೆಯುತ್ತಿದೆ?”

ಜನರ ಮನಸ್ಥಿತಿಯ ಮೇಲೆ ಇದರ ಭಾರೀ ಪರಿಣಾಮ ಬೀರುತ್ತಿದೆ. “ಜನರಲ್ಲಿ ಕೋಪವೂ ಇದೆ, ದುಃಖವೂ ಇದೆ, ಅನೇಕ ಪ್ರಶ್ನೆಗಳೂ ಇವೆ. 

 ‘ಇದು ಮತ್ತೆ ಏಕೆ ನಡೆಯುತ್ತಿದೆ?’ ಇದೇ ಜನರ ದೊಡ್ಡ ಪ್ರಶ್ನೆಯಾಗಿದೆ. ‘ಲೆಬನಾನ್ ಜನರು ಇಷ್ಟು ನೋವು ಮತ್ತು ದುಃಖವನ್ನು ಅನುಭವಿಸಲು ಬಾಧ್ಯರಲ್ಲ’ ಎಂದು ಅವರು ಹೇಳಿದರು.

ಲೆಬನಾನ್‌ನಲ್ಲಿ ಆರ್ಡರ್ ಆಫ್ ಮಾಲ್ಟಾ ಸೇವೆ

2024ರ ಸಂಘರ್ಷದ ಸಮಯದಲ್ಲಿ ಆರ್ಡರ್ ಆಫ್ ಮಾಲ್ಟಾ ಲೆಬನಾನ್ ದೇಶದಾದ್ಯಂತ ಸುಮಾರು 80 ಆಶ್ರಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿತ್ತು. ಈಗ ಮತ್ತೆ ಅದರ ತಂಡಗಳು ಹೆಚ್ಚುತ್ತಿರುವ ಅಗತ್ಯಗಳಿಗೆ ಪ್ರತಿಕ್ರಿಯಿಸಲು ಸಜ್ಜಾಗಿವೆ.

“ಸಾಮಾಜಿಕ ವ್ಯವಹಾರಗಳ ಸಚಿವಾಲಯ ಮತ್ತು ಸಾರ್ವಜನಿಕ ಆರೋಗ್ಯ ಸಚಿವಾಲಯದಿಂದ ನಮಗೆ ನೀಡಲ್ಪಟ್ಟ ಆಶ್ರಯ ಕೇಂದ್ರಗಳಲ್ಲಿ ಸೇವೆ ನೀಡಲು ನಾವು ನಮ್ಮ ಸಿಬ್ಬಂದಿ ಮತ್ತು ತಂಡಗಳನ್ನು ಮರುನಿಯೋಜಿಸುತ್ತಿದ್ದೇವೆ,” ಎಂದು ಫರಾಹ್ ಹೇಳಿದರು.

ಸಂಸ್ಥೆಯ ಪ್ರಮುಖ ಬಲವೆಂದರೆ ದೇಶದಾದ್ಯಂತ ಅದರ ವಿಸ್ತೃತ ಹಾಜರಾತಿ ಎಂದು ಅವರು ಹೇಳಿದರು. “ಲೆಬನಾನ್‌ನ ಅತಿ ಉತ್ತರದಿಂದ ಅತಿ ದಕ್ಷಿಣದವರೆಗೆ, ಬೆಕಾ ಪ್ರದೇಶದಲ್ಲೂ ಹಾಗೂ ಬೈರೂತ್ ಸುತ್ತಮುತ್ತಲೂ ನಾವು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದೇವೆ,” ಎಂದು ಅವರು ಹೇಳಿದರು. “ಸುಮಾರು 60 ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಒಳಗೊಂಡ ನಮ್ಮ ಜಾಲವು ಈ ದೊಡ್ಡ ಸಂಕಷ್ಟಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಲು ಸಹಾಯ ಮಾಡುತ್ತಿದೆ.”

ದಕ್ಷಿಣ ಲೆಬನಾನ್‌ನಲ್ಲಿ ಸಂಸ್ಥೆ, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಮೊಬೈಲ್(ಚಲಿಸುವ) ವೈದ್ಯಕೀಯ ಘಟಕಗಳನ್ನು ನಡೆಸುತ್ತಿದ್ದು, ಸಾಮಾನ್ಯವಾಗಿ ಸುಮಾರು 40 ಗ್ರಾಮಗಳಿಗೆ ಸೇವೆ ನೀಡುತ್ತದೆ. ಆದರೆ ನಿರಂತರ ಬಾಂಬ್ ದಾಳಿಗಳು ಮತ್ತು ಧ್ವಂಸದ ಕಾರಣ ಕಾರ್ಯಾಚರಣೆಗಳನ್ನು ನಿರಂತರವಾಗಿ ಹೊಂದಿಸಿಕೊಳ್ಳಬೇಕಾಗಿದೆ.

ಅಗತ್ಯಗಳಿಗೆ ಹೊಂದಿಕೊಳ್ಳುವುದು

“ಪ್ರವೇಶಿಸಲು ಸಾಧ್ಯವಾಗದ ಗ್ರಾಮಗಳು ಅಥವಾ ಸ್ಥಳಾಂತರಗೊಂಡವರು ಸೇರಿರುವ ಪ್ರದೇಶಗಳನ್ನು ಗಮನಿಸಿ ನಮ್ಮ ತಂಡಗಳನ್ನು ಮರುನಿಯೋಜಿಸಬೇಕಾಗಿದೆ,” ಎಂದು ಫರಾಹ್ ಹೇಳಿದರು. “ಅಗತ್ಯಗಳಿಗೆ ಅನುಗುಣವಾಗಿ ನಾವು ನಿರಂತರವಾಗಿ ಕಾರ್ಯಯೋಜನೆಯನ್ನು ಹೊಂದಿಸಿಕೊಳ್ಳುತ್ತೇವೆ.”

ಸವಾಲುಗಳ ನಡುವೆಯೂ ಸಿಬ್ಬಂದಿ ಮತ್ತು ಸ್ವಯಂಸೇವಕರ ಸಮರ್ಪಣೆಯನ್ನು ಅವರು ಮೆಚ್ಚಿ, “ನಮ್ಮ ತಂಡಗಳು ಬಡವರಿಗೂ ರೋಗಿಗಳಿಗೂ ಸೇವೆ ಸಲ್ಲಿಸುವ ಧ್ಯೇಯಕ್ಕೆ ಆಳವಾಗಿ ಬದ್ಧವಾಗಿವೆ“ಈ ಸಂದರ್ಭದಲ್ಲಿ ನಾವು ದೃಢವಾಗಿ ನಿಂತು, ನಮ್ಮ ಧ್ಯೇಯದಲ್ಲಿ ನಂಬಿಕೆ ಇಟ್ಟು, ಹೆಚ್ಚುತ್ತಿರುವ ಅಗತ್ಯಗಳಿಗೆ ಪ್ರತಿಕ್ರಿಯಿಸಬೇಕು,” ಎಂದೂ ಅವರು ಹೇಳಿದರು.

ಪ್ರಸ್ತುತ ಲೆಬನಾನ್‌ನಲ್ಲಿ ಸುಮಾರು ಐದು ಲಕ್ಷ ಜನರು ದೇಶದೊಳಗಿನ ಸ್ಥಳಾಂತರಿತರೆಂದು ನೋಂದಾಯಿಸಲ್ಪಟ್ಟಿದ್ದಾರೆ. ಆದರೆ ಇನ್ನೂ ಅನೇಕರು ನೋಂದಣಿ. ಇವರಲ್ಲಿ ಸುಮಾರು 1,17,000 ಜನರು ಆಶ್ರಯ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಇತರರು ಸುರಕ್ಷಿತವೆಂದು ಪರಿಗಣಿಸಲಾದ ಪ್ರದೇಶಗಳಲ್ಲಿ ಅಥವಾ ಬಂಧು-ಬಳಗದ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ಆರೋಗ್ಯ ಸೇವೆ

ಸ್ಥಳಾಂತರಗೊಂಡ ಸಮುದಾಯಗಳಲ್ಲಿ ಅಗತ್ಯಗಳು ಬಹಳ ಹೆಚ್ಚಿರುವುದರಿಂದ ಮಾನವೀಯ ತಂಡಗಳು ವೈದ್ಯಕೀಯ ಸಲಹೆ, ಅಗತ್ಯ ಔಷಧಿಗಳು — ವಿಶೇಷವಾಗಿ ದೀರ್ಘಕಾಲದ ಕಾಯಿಲೆ ಹೊಂದಿರುವವರಿಗೆ — ಹಾಗೂ ಮಾನಸಿಕ-ಸಾಮಾಜಿಕ ಬೆಂಬಲವನ್ನು ಒದಗಿಸುತ್ತಿವೆ ಎಂದು ಫರಾಹ್ ಹೇಳಿದರು. “ನಾವು ಸ್ವಚ್ಛತಾ ಕಿಟ್‌ಗಳು, ಮಕ್ಕಳಿಗಾಗಿ ಮನೋಸಾಮಾಜಿಕ ಸಹಾಯ ಕಿಟ್‌ಗಳು ಮತ್ತು ಚಳಿಗಾಲದ ನೆರವು ಕಿಟ್‌ಗಳನ್ನು ವಿತರಿಸುತ್ತಿದ್ದೇವೆ,” ಎಂದು ಅವರು ಹೇಳಿದರು. “ಈ ಸಂಕಷ್ಟದಿಂದ ದುಷ್ಪರಿಣಾಮಕ್ಕೆ ಒಳಗಾಗಿರುವವರಲ್ಲಿ ಮಕ್ಕಳು ಪ್ರಮುಖರು.”

ಆಹಾರ ಮತ್ತು ಆಶ್ರಯ

ಆಹಾರ ಸಹಾಯವೂ ಪ್ರಮುಖವಾಗಿದೆ. ಮೂಲಭೂತ ಅಗತ್ಯಗಳನ್ನು ಪೂರೈಸಲು ಹೋರಾಡುತ್ತಿರುವ ಕುಟುಂಬಗಳಿಗೆ ಸಂಸ್ಥೆ ಬಿಸಿ ಊಟ ಮತ್ತು ಆಹಾರ ಪ್ಯಾಕೆಟ್‌ಗಳನ್ನು ಒದಗಿಸುತ್ತಿದೆ. ಅನೇಕ ಆಶ್ರಯ ಕೇಂದ್ರಗಳು ತಾತ್ಕಾಲಿಕ ವಾಸಸ್ಥಳಗಳಾಗಿ ಮಾರ್ಪಡಿಸಲ್ಪಟ್ಟ ಶಾಲೆಗಳಾಗಿವೆ. “ಪ್ರತಿ ತರಗತಿ ಕೊಠಡಿಯೂ ಕನಿಷ್ಠ 10 ರಿಂದ 12 ಜನರು ನೆಲದ ಮೇಲೆ ಮಲಗುವ ಸಣ್ಣ ಸ್ಥಳವಾಗುತ್ತದೆ,” ಎಂದು ಅವರು ಹೇಳಿದರು. “ಒಂದು ಮಹಡಿಯಲ್ಲಿರುವ ಕುಟುಂಬಗಳು ಒಂದೇ ಶೌಚಾಲಯ ಮತ್ತು ಅಡುಗೆ ಸ್ಥಳವನ್ನು ಹಂಚಿಕೊಳ್ಳಬೇಕಾಗುತ್ತದೆ. ಆದ್ದರಿಂದ ಸ್ವಚ್ಛತೆ ದೊಡ್ಡ ಸಮಸ್ಯೆಯಾಗಿದೆ.”

ಅನಿಶ್ಚಿತತೆ

ಅನೇಕ ಲೆಬನಾನ್ ನಾಗರಿಕರಿಗೆ, ಅತ್ಯಂತ ದೊಡ್ಡ ಭಾರವೇ ಅನಿಶ್ಚಿತತೆಯಾಗಿದೆ. “ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ, ಅದರಲ್ಲಿಯೂ ಅತ್ಯಂತ ಕಳವಳಕಾರಿಯಾದ ಸಂಗತಿ ಏನೆಂದರೆ, ಜನರಿಗೆ ಈ ಸಂಕಷ್ಟದ ಅಂತ್ಯ ಕಾಣುತ್ತಿಲ್ಲ. ಇದರಿಂದ ಸ್ಥಳಾಂತರಗೊಂಡ ಕುಟುಂಬಗಳಲ್ಲಿಯೂ ಅವರನ್ನು ಆಶ್ರಯಿಸುತ್ತಿರುವ ಸಮುದಾಯಗಳಲ್ಲಿಯೂ ನಿರಾಶೆ ಮತ್ತು ಕೋಪ ಹೆಚ್ಚುತ್ತಿದೆ.” 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

09 ಮಾರ್ಚ್ 2026, 12:45