VATICAN-POPE-CONSISTORY VATICAN-POPE-CONSISTORY  (AFP or licensors)

‘ಯುದ್ಧವೇ ಪರಿಹಾರವಲ್ಲ’-ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಸಾಕೊ

ಇಸ್ರೇಲ್-ಅಮೇರಿಕಾದ ವಾಯುದಾಳಿಗಳಿಗೆ ಪ್ರತಿಯಾಗಿ ಇರಾನ್, ಇರಾಕ್‌ನ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಬಾಗ್ದಾದ್‌ನ ಚಾಲ್ಡಿಯನ್ (Patriarch)ಧರ್ಮಸಭೆಯ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಲೂಯಿಸ್ ರಫಾಯೇಲ್ ಸಾಕೊ ಅವರು ವ್ಯಾಪಕ ಪ್ರಾದೇಶಿಕ ಯುದ್ಧದ ಅಪಾಯದ ಬಗ್ಗೆ ಗಂಭೀರ ಚಿಂತೆ ವ್ಯಕ್ತಪಡಿಸಿ, ಇರಾಕ್‌ನ ಧಾರ್ಮಿಕ ನಾಯಕರು ಶಾಂತಿಯ ಪರವಾಗಿ ಧ್ವನಿ ಎತ್ತಬೇಕೆಂದು ಕರೆ ನೀಡಿದ್ದಾರೆ.

ಲೇಖಕರು:ಒಲಿವಿಯರ್ ಬೊನ್ನೆಲ್ ಮತ್ತು ಜಾನ್-ಚಾರ್ಲ್ಸ್ ಪುಟ್ಜೊಲು

ಕಳೆದ ವಾರದಿಂದ ಮಧ್ಯಪೂರ್ವದ ಅನೇಕ ದೇಶಗಳಂತೆ ಇರಾಕ್ ಕೂಡ ಇರಾನ್ ನಡೆಸಿದ ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ಎದುರಿಸಿದೆ. ಇವು ಇಸ್ರಾಯೇಲ್-ಅಮೇರಿಕಾದ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ ನಡೆದವು.

ಸ್ವಾಯತ್ತ ಕುರ್ದಿಸ್ತಾನ್ ಪ್ರದೇಶದ ರಾಜಧಾನಿಯಾದ ಎರ್ಬಿಲ್ ಈ ದಾಳಿಗಳ ತೀವ್ರ ಪರಿಣಾಮವನ್ನು ಅನುಭವಿಸಿದೆ. ಆದರೆ ದಕ್ಷಿಣದ ಬಸ್ರಾ ನಗರದ ತೈಲ ಕ್ಷೇತ್ರಗಳಿಂದ ಬಾಗ್ದಾದ್ ವಿಮಾನ ನಿಲ್ದಾಣದವರೆಗೆ ದೇಶದ ವಿವಿಧ ಭಾಗಗಳು ಗುರಿಯಾಗಿವೆ. ಪ್ರಾದೇಶಿಕ ಮಟ್ಟದಲ್ಲಿ ದೊಡ್ಡ ಯುದ್ಧದ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಾಗ್ದಾದ್‌ನ ಚಾಲ್ಡಿಯನ್ ಧರ್ಮಸಭೆಯ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಲೂಯಿಸ್ ರಫಾಯೇಲ್ ಸಾಕೊ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

“ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷನಾಗಿ ನಾನು ತುಂಬಾ ಚಿಂತೆಯಲ್ಲಿದ್ದೇನೆ,” ಎಂದು ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. “ಈ ಯುದ್ಧ ಯಾವ ದಿಕ್ಕಿಗೆ ಸಾಗಲಿದೆ ಎಂಬುದನ್ನು ಯಾರಿಗೂ ತಿಳಿದಿಲ್ಲ.” 2003ರಲ್ಲಿ ಅಮೇರಿಕಾದ ದಾಳಿಯ ನಂತರ ಉಂಟಾದ ಗೊಂದಲ, ಅಸ್ಥಿರತೆ, ಪ್ರತೀಕಾರ ಮತ್ತು ಹಿಂಸಾಚಾರವನ್ನು ಸ್ಮರಿಸುತ್ತಾ, “ನಾವು ಇದನ್ನೆಲ್ಲಾ ಹಿಂದೆ ಕೂಡ ಅನುಭವಿಸಿದ್ದೇವೆ,” ಎಂದು ಅವರು ಹೇಳಿದ್ದಾರೆ.

ಪರಿಸ್ಥಿತಿ ಮತ್ತಷ್ಟು ಉಗ್ರವಾಗುವ ಭೀತಿ

ಇರಾನ್ ಬೆಂಬಲಿತ ಶಿಯಾ ನಾಗರಿಕ ಸಶಸ್ತ್ರ ಪಡೆಗಳು ಇನ್ನೂ ಬಹುತೇಕ ನೇರವಾಗಿ ಭಾಗವಹಿಸದಿದ್ದರೂ, ಇರಾಕ್ ಸಮಾಜ ಎದುರಿಸಬಹುದಾದ ಅಪಾಯಗಳ ಬಗ್ಗೆ ಸಾಕೊ ಎಚ್ಚರಿಸಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಸುಮಾರು 60 ಶೇಕಡಾ ಮಂದಿ ಶಿಯಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

“ನಾವು ಇರಾನ್‌ನ ನೆರೆಯ ದೇಶವಾಗಿರುವುದರಿಂದ ಮತ್ತು ಅನೇಕ ಇರಾಕಿಗಳು ಶಿಯಾ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಭಯದಲ್ಲಿದ್ದೇವೆ. ಇದು ಎರಡು ರೀತಿಯ ಚಿಂತೆಗಳನ್ನು ಹುಟ್ಟಿಸುತ್ತದೆ,” ಎಂದು ಅವರು ಹೇಳಿದರು. “ಈ ಪರಿಸ್ಥಿತಿ ಇನ್ನಷ್ಟು ಉಗ್ರವಾಗಿ, ನಮ್ಮನ್ನು ದೊಡ್ಡ ಪ್ರಾದೇಶಿಕ ಯುದ್ಧದೊಳಗೆ ಎಳೆಯುವ ಸಾಧ್ಯತೆ ಇದೆ,” ಎಂದು ಪ್ರಧಾನ ಧರ್ಮಾಧ್ಯಕ್ಷರು ಮುಂದುವರಿಸಿದರು. ಗಲ್ಫ್ ರಾಷ್ಟ್ರಗಳು, ಟರ್ಕಿ ಮತ್ತು ಅಜರ್ಬೈಜಾನ್ ಮೇಲೂ ದಾಳಿಗಳು ನಡೆದಿರುವುದನ್ನು ಅವರು ಉಲ್ಲೇಖಿಸಿದರು. “ಯುದ್ಧವೇ ಪರಿಹಾರವಲ್ಲ,” ಎಂದು ಅವರು ಒತ್ತಿಹೇಳಿ, “ಈ ಸಮಸ್ಯೆಗಳಿಗೆ ಪರಿಹಾರ ನೀಡುವುದು ರಾಜತಾಂತ್ರಿಕ ಮಾತುಕತೆಯೇ.”

ಚಾಲ್ಡಿಯನ್ ಧರ್ಮಸಭೆಯ ಮುಖ್ಯಸ್ಥರು ಇರಾಕ್‌ನ ಕ್ರೈಸ್ತ ಸಮುದಾಯಗಳ ಸ್ಥಿತಿಯ ಬಗ್ಗೆ ಕೂಡ ಆತಂಕ ವ್ಯಕ್ತಪಡಿಸಿದರು. ವಿಶೇಷವಾಗಿ ದಶಕದ ಹಿಂದೆ ಐಸಿಸ್(ISIS) ಆಕ್ರಮಣಕ್ಕೊಳಗಾದ ಐತಿಹಾಸಿಕ ನಿನವೆ ಸಮತಟ ಪ್ರದೇಶದ ಕ್ರೈಸ್ತರ ಕುರಿತು ಅವರು ಉಲ್ಲೇಖಿಸಿ,“ಕ್ರೈಸ್ತರು ತುಂಬಾ ಭಯದಲ್ಲಿದ್ದೇವೆ. ನಿನವೆ ಸಮತಟ ಪ್ರದೇಶವನ್ನು ದಾಳಿ ಮಾಡಲು ಆರಂಭಿಸಿದರೆ, ಅಲ್ಲಿ ಇರುವ ಸುಮಾರು ಐವತ್ತು ಸಾವಿರ ಕ್ರೈಸ್ತರು ತಮ್ಮ ಮನೆಗಳನ್ನು ತೊರೆಯಬೇಕಾಗುತ್ತದೆ — ಈ ಬಾರಿ ಅವರು ಮರಳಿ ಬರಲಾರರು,” ಎಂದು ಅವರು ಎಚ್ಚರಿಸಿದರು.

ಶಾಂತಿಯ ಪರವಾಗಿ ಧ್ವನಿ

“ಪ್ರತಿ ಭಾನುವಾರದ ಪವಿತ್ರ ಬಲಿಪೂಜೆಯಲ್ಲಿ ಶಾಂತಿಗಾಗಿ ಪ್ರಾರ್ಥಿಸಲು, ಎಚ್ಚರಿಕೆಯಿಂದ ಇರಲು ಮತ್ತು ಧೈರ್ಯವನ್ನೂ ನಿರೀಕ್ಷೆಯನ್ನೂ ಕಳೆದುಕೊಳ್ಳದಿರಲು ನಾನು ಕ್ರೈಸ್ತರಿಗೆ ಹೇಳಿದ್ದೇನೆ,” ಎಂದು ಸಾಕೊ ಹೇಳಿದರು. ಇರಾಕ್‌ನ ಇತರ ಧಾರ್ಮಿಕ ನಾಯಕರಿಗೂ ಅವರು ಉದ್ವಿಗ್ನತೆಯನ್ನು ತಗ್ಗಿಸಲು ಸಹಕರಿಸುವಂತೆ ಕರೆ ನೀಡಿದರು. “ಪೂರ್ವ ಜಗದ್ಗುರು ಫ್ರಾನ್ಸಿಸ್ ಇರಾಕ್‌ಗೆ ಭೇಟಿ ನೀಡಿದಾಗ ಮತ್ತು ಆಯತೊಲ್ಲಾ ಅಲ್-ಸಿಸ್ತಾನಿಯವರನ್ನು ಭೇಟಿಯಾದಾಗ ಮಾಡಿದಂತೆ, ಶಾಂತಿ ಮತ್ತು ಸಹೋದರತ್ವದ ಪರವಾಗಿ ಧ್ವನಿ ಎತ್ತುವಂತೆ ನಾನು ಮುಸ್ಲಿಂ ನಾಯಕರಿಗೆ ವಿನಂತಿಸಿದ್ದೇನೆ,” ಎಂದು ಅವರು ಹೇಳಿದರು.

2021ರ ಮಾರ್ಚ್ 6ರಂದು ಪವಿತ್ರ ನಗರ ನಜಾಫ್‌ನಲ್ಲಿ ನಡೆದ ಆ ಐತಿಹಾಸಿಕ ಭೇಟಿಯು ಇರಾಕ್‌ನಲ್ಲಿ ಧರ್ಮಾಂತರ ಸಹಬಾಳ್ವೆಗೆ ಮಹತ್ವದ ಕ್ಷಣವಾಗಿದೆ. “ಅದು ಅತ್ಯಂತ ಮಹತ್ವದ ಭೇಟಿಯಾಗಿತ್ತು,” ಎಂದು ಸಾಕೊ ನೆನಪಿಸಿಕೊಂಡರು. “ಅಲ್-ಸಿಸ್ತಾನಿ ‘ನಾವು ನಿಮ್ಮ ಭಾಗ, ನೀವು ನಮ್ಮ ಭಾಗ’ ಎಂದು ಹೇಳಿದ್ದರು. ಅದೇ ರೀತಿ ಜಗದ್ಗುರು ಫ್ರಾನ್ಸಿಸ್ ಕೂಡ ‘ನಾವು ಸಹೋದರರು’ ಎಂದು ಹೇಳಿದ್ದರು.

ಮಾರ್ಚ್ 4ರಂದು ಪ್ರದೇಶದಾದ್ಯಂತ ಬಾಂಬ್ ದಾಳಿಗಳು ಮುಂದುವರಿದಿದ್ದ ಸಂದರ್ಭದಲ್ಲಿ, ಆಯತೊಲ್ಲಾ ಅಲ್-ಸಿಸ್ತಾನಿ ತಮ್ಮದೇ ಹೇಳಿಕೆಯಲ್ಲಿ ಯುದ್ಧ ವಿಸ್ತರಿಸುವ ಭೀತಿಯನ್ನು ವ್ಯಕ್ತಪಡಿಸಿದರು. ಅವರು ಅಂತಾರಾಷ್ಟ್ರೀಯವಾಗಿ ಪ್ರಭಾವಿ ಪಾತ್ರಧಾರಿಗಳು ಮತ್ತು ಜಗತ್ತಿನ ರಾಷ್ಟ್ರಗಳು, ವಿಶೇಷವಾಗಿ ಇಸ್ಲಾಮಿಕ್ ರಾಷ್ಟ್ರಗಳು, ಈ ಸಂಘರ್ಷವನ್ನು ತಕ್ಷಣ ಅಂತ್ಯಗೊಳಿಸಲು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಇರಾನ್‌ನ ಅಣು ಪ್ರಶ್ನೆಗೆ ನ್ಯಾಯಸಮ್ಮತ ಮತ್ತು ಶಾಂತಿಯುತ ಪರಿಹಾರ ಕಂಡುಹಿಡಿಯಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ಕರೆ ನೀಡಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

07 ಮಾರ್ಚ್ 2026, 16:41