‘ಇದು ನಮ್ಮ ಯುದ್ಧವಲ್ಲ, ಆದರೆ ನಮ್ಮನ್ನೂ ಗುರಿಯಾಗಿಸಲಾಗುತ್ತಿದೆ’: ಇರಾಕಿ ಕುರ್ದಿಸ್ತಾನದಲ್ಲಿ ಬಾಂಬ್ ದಾಳಿಗಳು
ಲೇಖಕರು: ಜೋಸೆಫ್ ತಲ್ಲೋಚ್
ಕಳೆದ ವಾರದಿಂದ ಇರಾನ್ ಸೇನೆಗಳು ಇರಾಕ್‌ನ ಅರೆ-ಸ್ವಾಯತ್ತ ಕುರ್ಡಿಸ್ತಾನ್ ಪ್ರದೇಶದಲ್ಲಿರುವ ಕುರ್ಡಿಷ್ ಗುಂಪುಗಳನ್ನು ಗುರಿಯಾಗಿಸಿಕೊಂಡು ಸೈನಿಕ ಕಾರ್ಯಾಚರಣೆ ಆರಂಭಿಸಿವೆ.
ಬುಧವಾರ ಸಂಜೆ ಇರಾಕಿ ಕುರ್ದಿಸ್ತಾನದ ರಾಜಧಾನಿಯಾದ ಎರ್ಬಿಲ್‌ನಲ್ಲಿ ಇರುವ ಚಾಲ್ಡಿಯನ್ ಧರ್ಮಸಭೆಗೆ ಸೇರಿದ ಕಟ್ಟಡಗಳು ದಾಳಿಗೆ ಒಳಗಾದವು. ಸ್ಥಳೀಯ ಮಹಾಧರ್ಮಪ್ರಾಂತ್ಯದ ಪ್ರಕಾರ ಇದು “ಡ್ರೋನ್ ದಾಳಿಯಂತಿದೆ” ಎಂದು ಹೇಳಲಾಗಿದೆ. ಈ ಕಟ್ಟಡಗಳು ಎರ್ಬಿಲ್ ನಗರದ ಕ್ರೈಸ್ತ ಉಪನಗರವಾದ ಅಂಕಾವಾ ಪ್ರದೇಶದಲ್ಲಿವೆ. ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅಂಕಾವಾ ನಿವಾಸಿ ದಿಲಾನ್ ಆದಮತ್ ಹೇಳುವಂತೆ, ಐಸಿಸ್(ISIS) ವಿರುದ್ಧದ ಯುದ್ಧದಂತಹ ಹಿಂದಿನ ಸಂಘರ್ಷಗಳಿಗಿಂತ ಈಗಿನ ಕ್ಷಿಪಣಿ ದಾಳಿಗಳ ಸಂದರ್ಭದಲ್ಲಿ “ಸ್ಪಷ್ಟವಾದ ಮುಂಚೂಣಿ ರೇಖೆಯೇ ಇಲ್ಲ; ತಪ್ಪಿಸಿಕೊಳ್ಳಲು ಸುರಕ್ಷಿತ ಸ್ಥಳವೇ ಇಲ್ಲ.”
ಇರಾಕಿ ಕುರ್ದಿಸ್ತಾನ, ಅಮೆರಿಕಾ-ಇಸ್ರಾಯೇಲ್-ಇರಾನ್ ನಡುವಿನ ಸಂಘರ್ಷದಲ್ಲಿ ಭಾಗಿಯಾಗಿಲ್ಲದಿದ್ದರೂ, “ನಮ್ಮ ನೆಲದಲ್ಲಿ ಎರಡೂ ಬದಿಯ ಹಿತಾಸಕ್ತಿದಾರರು ಇರುವುದರಿಂದ ನಾವು ಎರಡೂ ಬದಿಗಳಿಂದ ಗುರಿಯಾಗುತ್ತಿದ್ದೇವೆ,” ಎಂದು ಅವರು ಹೇಳಿದರು.
ಆದಮತ್ ಎರ್ಬಿಲ್‌ನಲ್ಲಿ ಜನಿಸಿ, ಫ್ರಾನ್ಸ್‌ನಲ್ಲಿ ಬೆಳೆದವರು; ನಂತರ ದೊಡ್ಡವರಾದ ಮೇಲೆ ಮತ್ತೆ ಇರಾಕ್‌ಗೆ ಮರಳಲು ತೀರ್ಮಾನಿಸಿದರು. The Return ಎಂಬ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆ ವಿದೇಶಗಳಲ್ಲಿ ವಾಸಿಸುವ ಇರಾಕಿ ಕ್ರೈಸ್ತರು ತಮ್ಮ ಪೂರ್ವಜರ ಭೂಮಿಗೆ ಮರಳಲು ನೆರವು ನೀಡುತ್ತದೆ. ಇತ್ತೀಚಿನ ಸಂಘರ್ಷವು ಜಗತ್ತಿನ ಅತ್ಯಂತ ಹಳೆಯ ಕ್ರೈಸ್ತ ಸಮುದಾಯಗಳಲ್ಲಿ ಒಂದಾದ ಇರಾಕಿ ಕ್ರೈಸ್ತರ ಬದುಕಿನ ಮೇಲೆ ಇನ್ನಷ್ಟು ಅಪಾಯವನ್ನುಂಟುಮಾಡಬಹುದು ಎಂದು ಅವರು ಎಚ್ಚರಿಸಿದರು.
ವ್ಯಾಟಿಕನ್ ಸುದ್ದಿ ಸಂಸ್ಥೆ: ಬುಧವಾರ ರಾತ್ರಿ ನೀವು ವಾಸಿಸುವ ಎರ್ಬಿಲ್‌ನ ಕ್ರೈಸ್ತ ಪ್ರದೇಶವಾದ ಅಂಕಾವಾದಲ್ಲಿ ಸ್ಫೋಟಗಳು ಸಂಭವಿಸಿದವು. ಇದರ ಬಗ್ಗೆ ವಿವರಿಸುತ್ತೀರಾ?
ದಿಲಾನ್ ಆದಮತ್: ಸಂಜೆ ಸುಮಾರು ಎಂಟು ಗಂಟೆಗೆ ಸ್ವಲ್ಪ ಮುಂಚೆ ನಾವು ಸುಮಾರು 10 ರಿಂದ 20 ಸ್ಫೋಟಗಳ ಶಬ್ದವನ್ನು ಕೇಳಿದ್ದೇವೆ. ಅದು ಎರ್ಬಿಲ್ ವಿಮಾನ ನಿಲ್ದಾಣದಲ್ಲಿರುವ ಅಮೆರಿಕನ್ ಸೇನಾ ನೆಲೆಯಿಂದ ಹೊರಡಿಸಿದ ವಿಮಾನವಿರೋಧಿ ಕ್ಷಿಪಣಿಗಳ ಶಬ್ದ ಮತ್ತು ಅವು ತಡೆದ ಡ್ರೋನ್ ಅಥವಾ ಕ್ಷಿಪಣಿಗಳ ಸ್ಫೋಟಗಳ ಮಿಶ್ರಣವಾಗಿತ್ತು.
ನಂತರ ಕೆಲವು ಅವಶೇಷಗಳು ಅಂಕಾವಾದಲ್ಲಿರುವ ಚಾಲ್ಡಿಯನ್ ಧರ್ಮಕೇಂದ್ರ ನಿರ್ವಹಿಸುವ ವಸತಿ ಕಟ್ಟಡಗಳ ಮೇಲೆ ಬಿದ್ದವು ಎಂದು ತಿಳಿಯಿತು. ಇನ್ನಷ್ಟು ಅವಶೇಷಗಳು ಸಮೀಪದಲ್ಲಿರುವ ಒಂದು ಕಾನ್ವೆಂಟ್ ಮೇಲೂ ಬಿದ್ದವು, ಅಲ್ಲಿ ಕೆಲವು ಸನ್ಯಾಸಿನಿಯರು ವಾಸಿಸುತ್ತಿದ್ದಾರೆ. ಸೌಭಾಗ್ಯವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ಆದರೆ ಅದು ತುಂಬಾ ಭಯಾನಕ ಘಟನೆ. ಚಾಪೆಲ್ ಪಕ್ಕದ ಕಟ್ಟಡದಲ್ಲಿ ದೊಡ್ಡ ರಂಧ್ರ ಉಂಟಾಯಿತು. ಇದು ನಾನು ವಾಸಿಸುವ ಸ್ಥಳದಿಂದ ಕೇವಲ ಕೆಲವು ನೂರು ಮೀಟರ್ ದೂರದಲ್ಲೇ ನಡೆದಿದೆ.
ಜನರು ಭಯಭೀತರಾಗಿದ್ದಾರೆ, ಏಕೆಂದರೆ ಈ ದಾಳಿಗಳು ಸಂಪೂರ್ಣ ಅಪ್ರತೀಕ್ಷಿತವಾಗಿವೆ. ಐಸಿಸ್(ISIS) ವಿರುದ್ಧದ ಯುದ್ಧದಂತಹ ಹಿಂದಿನ ಸಂಘರ್ಷಗಳಲ್ಲಿ ಮುಂಚೂಣಿ ರೇಖೆ ಇತ್ತು. ಈಗ ಅಂತಹ ಯಾವುದೇ ರೇಖೆಯಿಲ್ಲ. ಕ್ಷಿಪಣಿಗಳು ಎಲ್ಲಿಯಾದರೂ ಬಿದ್ದುವು. ವಿಶೇಷವಾಗಿ ಅಂಕಾವಾದಲ್ಲಿ ಇದು ಇನ್ನಷ್ಟು ಭಯಾನಕವಾಗಿದೆ, ಏಕೆಂದರೆ ಇದು ಈಗ ಇರಾಕ್‌ನಲ್ಲಿಯೇ ಅತಿ ದೊಡ್ಡ ಕ್ರೈಸ್ತ ವಸತಿ ಪ್ರದೇಶವಾಗಿದೆ, ಬಹುಶಃ ಸಂಪೂರ್ಣ ಮಧ್ಯಪ್ರಾಚ್ಯದಲ್ಲಿಯೂ ಕೂಡ. ಇದು ಎರ್ಬಿಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಅಮೆರಿಕನ್ ಸೇನಾ ನೆಲೆಗೆ ಕೆಲವೇ ನೂರು ಮೀಟರ್ ದೂರದಲ್ಲಿದೆ.
ಪ್ರಶ್ನೆ: ಈ ಕ್ಷಣದಲ್ಲಿ ಎರ್ಬಿಲ್ ಮತ್ತು ಸಾಮಾನ್ಯವಾಗಿ ಇರಾಕ್‌ನಲ್ಲಿ ಜನರ ಮನಸ್ಥಿತಿ ಹೇಗಿದೆ?
ದಿಲಾನ್ ಆದಮತ್: ಇಲ್ಲಿನ ಜನರು ಸಂಕಷ್ಟ ಮತ್ತು ಯುದ್ಧಗಳಿಗೆ ಒಗ್ಗಿಕೊಂಡಿದ್ದಾರೆ. 2003ರ ಯುದ್ಧ, 1991ರ ಯುದ್ಧ, ಮತ್ತು 2006-2008ರ ಅಂತರ್ಯುದ್ಧದ ಸಮಯದಲ್ಲಿ ಅವರು ಇನ್ನೂ ಭೀಕರ ಪರಿಸ್ಥಿತಿಗಳನ್ನು ಕಂಡಿದ್ದಾರೆ. ಅವರು ಪರಿಸ್ಥಿತಿಗೆ ಹೊಂದಿಕೊಳ್ಳುವುದನ್ನು ಕಲಿತಿದ್ದಾರೆ. ವಿದ್ಯುತ್ ಇಲ್ಲದ ಸಂದರ್ಭದಲ್ಲೂ ಹೇಗೆ ಬದುಕಬೇಕು ಎಂಬುದನ್ನು ಅವರಿಗೆ ಗೊತ್ತಿದೆ. ಅದರ ನಡುವೆಯೂ ಜೀವನ ಮುಂದುವರಿಯುತ್ತದೆ. ಜನರು ಕೆಲಸಕ್ಕೆ ಹೋಗುತ್ತಿರುವುದನ್ನು ನೋಡಬಹುದು. ಸೂಪರ್ ಮಾರ್ಕೆಟ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಜನರನ್ನು ಕಾಣಬಹುದು. ಆದರೆ ಎಲ್ಲರೂ ಮುಂದಿನ ಹಂತ ಏನಾಗಬಹುದು ಮುಂದಿನ ದಿನಗಳಲ್ಲಿ ಅಥವಾ ವಾರಗಳಲ್ಲಿ ಏನಾಗಬಹುದು ಎಂಬುದನ್ನು ಕಾಯುತ್ತಿದ್ದಾರೆ. ಇದು ನಮ್ಮ ಯುದ್ಧವಲ್ಲ. ಆದರೂ ನಾವು ಇದರಲ್ಲಿ ಒಳಗೊಂಡಿದ್ದೇವೆ. ಏಕೆಂದರೆ ನಮ್ಮ ನೆಲದಲ್ಲಿ ಎರಡೂ ಬದಿಯ ಜನರು ಇದ್ದಾರೆ. ಸಾಮಾನ್ಯವಾಗಿ ಜನರು ಇದರಿಂದ ಸಂತೋಷದಲ್ಲಿಲ್ಲ. ಆದರೆ ನೀವು ಊಹಿಸುವಷ್ಟು ಆತಂಕದಲ್ಲಿಯೂ ಇಲ್ಲ; ಅವರು ಶಾಂತವಾಗಿಯೇ ಇದ್ದಾರೆ.
ಪ್ರಶ್ನೆ: ನೀವು ಹೇಳಿದಂತೆ ಇರಾಕ್ ಈ ಯುದ್ಧದಲ್ಲಿ ಭಾಗಿಯಾಗಿಲ್ಲ. ಆದರೆ ಅದರ ಭೌಗೋಳಿಕ ಸ್ಥಿತಿಯ ಕಾರಣದಿಂದ ಪರಿಣಾಮವನ್ನು ಅನುಭವಿಸುತ್ತಿದೆ. ನೀವು ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುವ ಭಯವನ್ನು ಹೊಂದಿದ್ದೀರಾ?
ದಿಲಾನ್ ಆದಮತ್: ಇರಾಕ್—ಪ್ರಾಚೀನ ಮೆಸೊಪೊಟೇಮಿಯಾ—ಇತಿಹಾಸದ ಕಾಲದಿಂದಲೂ ಅನೇಕ ಸಾಮ್ರಾಜ್ಯಗಳ ಮತ್ತು ವಿವಿಧ ಹಿತಾಸಕ್ತಿಗಳ ನಡುವೆ ಇರುವ ದೇಶವಾಗಿದೆ. ಇದು ಜನಾಂಗೀಯವಾಗಿಯೂ ಧಾರ್ಮಿಕವಾಗಿಯೂ ಬಹಳ ವೈವಿಧ್ಯಮಯ ದೇಶ. ನಮಗೆ ಇಷ್ಟವಾಗಲಿ ಇಲ್ಲದಿರಲಿ, ಈ ಸಂಘರ್ಷದಲ್ಲಿ ನಾವು ಯಾವುದೋ ರೀತಿಯಲ್ಲಿ ಒಳಗೊಂಡಿದ್ದೇವೆ. ಉದಾಹರಣೆಗೆ ಇರಾನ್‌ನ ಕೆಲವು ಕುರ್ದಿಶ್ ಗುಂಪುಗಳು ಇರಾನ್‌ನಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಇರಾಕೀ ಕುರ್ದಿಸ್ತಾನದಲ್ಲಿ ನೆಲೆಸಿವೆ. ಅವು ಎರ್ಬಿಲ್‌ನಿಂದ ಸುಮಾರು ಒಂದು ಗಂಟೆ ದೂರದಲ್ಲಿವೆ—ಅವರಿಗೆ ಕಚೇರಿಗಳು, ಶಿಬಿರಗಳು ಮತ್ತು ಕುಟುಂಬಗಳಿವೆ. ಇತ್ತೀಚೆಗೆ ಅವುಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಆದ್ದರಿಂದ ಮಧ್ಯದಲ್ಲಿ ಸಿಲುಕಿರುವ ನಾವು ಸಹ ಈ ಸಂಘರ್ಷದಲ್ಲಿ ಒಳಗೊಂಡಿದ್ದೇವೆ. ನಾವು ಉತ್ತಮ ಫಲಿತಾಂಶಕ್ಕಾಗಿ ಮಾತ್ರ ನಿರೀಕ್ಷಿಸಬಹುದು.
ಪ್ರಶ್ನೆ: ನೀವು ಅರಮಾಯಿಕ್ ಭಾಷೆ ಮಾತನಾಡುವ ಕ್ರೈಸ್ತ ಸಮುದಾಯದ ಸದಸ್ಯರು. ಈಗಿನ ಈ ಸಂಘರ್ಷ ಇರಾಕ್‌ನ ಕ್ರೈಸ್ತರಿಗೆ ಯಾವ ಅರ್ಥ ಹೊಂದಿದೆ?
ದಿಲಾನ್ ಆದಮತ್: ಇದು ತುಂಬಾ ದುಃಖಕರವಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ದೊಡ್ಡ ಭಯವೇನೆಂದರೆ ಕ್ರೈಸ್ತರು ಭರವಸೆ ಕಳೆದುಕೊಳ್ಳಲು ಆರಂಭಿಸಬಹುದು. ಇರಾನ್-ಇರಾಕ್ ಯುದ್ಧವಾಗಲಿ, ಕುವೈತ್ ಯುದ್ಧವಾಗಲಿ, 2003ರ ಯುದ್ಧವಾಗಲಿ ಅಥವಾ ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಯುದ್ಧವಾಗಲಿ—ಈ ಯುದ್ಧಗಳಲ್ಲಿ ಯಾವುದೂ ಇರಾಕ್ ಕ್ರೈಸ್ತರ ಯುದ್ಧಗಳಾಗಿರಲಿಲ್ಲ. ಆದರೂ ಕಳೆದ 25 ವರ್ಷಗಳಲ್ಲಿ ನಾವು ನಮ್ಮ ಜನಸಂಖ್ಯೆಯ 90 ಶೇಕಡಾವರೆಗೆ ಕಳೆದುಕೊಂಡಿದ್ದೇವೆ. ಇಲ್ಲಿ ಉಳಿದಿರುವವರು ಹೆಚ್ಚಿನ ನಿರೀಕ್ಷೆ ಇಲ್ಲದೆ ಬದುಕುತ್ತಿದ್ದಾರೆ. ನಾನು ಈಗ ಏಳು ವರ್ಷಗಳಿಂದ ಇರಾಕ್‌ನಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿ ಇರುವ ಕ್ರೈಸ್ತರು ಎಲ್ಲರೂ ತಮ್ಮ ಹೋರಾಟದ ಮುಂದಿನ ಅಧ್ಯಾಯ ಯಾವಾಗ ಬರುತ್ತದೆ ಎಂದು ಕಾಯುತ್ತಿರುವಂತೆ ಕಾಣುತ್ತಾರೆ. ನನಗೆ ಇರುವ ದೊಡ್ಡ ಭಯವೆಂದರೆ ನಾವು ಭರವಸೆ ಕಳೆದುಕೊಳ್ಳಬಹುದು—ಅದು ಈಗಾಗಲೇ ನಡೆಯುತ್ತಿದೆ. ಅದರಿಂದ ಪರಿಣಾಮಗಳು ಭೀಕರವಾಗಬಹುದು. ಜಗತ್ತಿನ ಮೊದಲ ಕ್ರೈಸ್ತ ಸಮುದಾಯಗಳಲ್ಲಿ ಒಂದನ್ನು ,ಅರಮಾಯಿಕ್ ಭಾಷೆಯನ್ನು ಮಾತನಾಡುವ ಸಮುದಾಯವನ್ನು ನಾವು ಕಳೆದುಕೊಳ್ಳಬಹುದು.ಇನ್ನೂ ಈಗ ದೇಶದ 4.6 ಕೋಟಿ ಜನರಲ್ಲಿ ಕೇವಲ ಸುಮಾರು 1.3 ಲಕ್ಷ ಕ್ರೈಸ್ತರು ಮಾತ್ರ ಉಳಿದಿದ್ದಾರೆ. ಈ ಸಂಘರ್ಷವು ಇನ್ನಷ್ಟು ವಲಸೆಗೆ ಕಾರಣವಾಗಬಹುದು ಮತ್ತು ಇರಾಕ್‌ನ ಕ್ರೈಸ್ತ ಸಮುದಾಯ ಸಂಪೂರ್ಣವಾಗಿ ಅಳಿದುಹೋಗುವ ಅಪಾಯವನ್ನು ಹೆಚ್ಚಿಸಬಹುದು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).