ಮಧ್ಯಪ್ರಾಚ್ಯದ ಕ್ರೈಸ್ತ ಸಮುದಾಯಗಳಲ್ಲಿ ಆತಂಕ ಮತ್ತು ಅನಿಶ್ಚಿತತೆ
ಲೇಖಕರು: ಒಲಿವಿಯರ್ ಬೊನ್ನೆಲ್
ಇರಾನ್, ಇಸ್ರಾಯೇಲ್ ಮತ್ತು ಅಮೇರಿಕ ನಡುವಿನ ಯುದ್ಧ ಮುಂದುವರಿದಿರುವಾಗ, ಅದರ ಆಘಾತ ತರಂಗಗಳು ಸಂಪೂರ್ಣ ಪ್ರದೇಶದಲ್ಲಿ ಹರಡುತ್ತಿವೆ. ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಲ್ಕು ವಾರಗಳ ಸೈನಿಕ ಕಾರ್ಯಾಚರಣೆಯನ್ನು ಘೋಷಿಸಿದರೆ, ಅದಕ್ಕೆ ಪ್ರತಿಯಾಗಿ ಇರಾನ್ ನೂರಾರು ಪ್ರತೀಕಾರಾತ್ಮಕ ದಾಳಿಗಳನ್ನು ನಡೆಸಿದೆ.
ಈ ಹೊಸ ಸಂಘರ್ಷದ ಹಂತವು ನಿಯಂತ್ರಣ ತಪ್ಪುವ ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ಮಾರ್ಚ್ 1ರಂದು ಭಾನುವಾರದ ಏಂಜಲಸ್ ಪ್ರಾರ್ಥನೆಯ ಸಂದರ್ಭದಲ್ಲಿ, ಪೂಜ್ಯ ಜಗದ್ಗುರುಗಳು 14ನೇ ಲಿಯೋ “ನಾಯಕರು ಹಿಂಸಾಚಾರದ ಚಕ್ರವನ್ನು ಅದು ಮರಳಿಸಲಾಗದ ಅಂಧಕೂಪವಾಗುವ ಮೊದಲು ನಿಲ್ಲಿಸಬೇಕು” ಎಂದು ಮನವಿ ಮಾಡಿದರು. ಮಧ್ಯಪ್ರಾಚ್ಯದ ಅನೇಕ ಕ್ರೈಸ್ತರು ಕೂಡ ಅವರ ಜೀವನ ಪರಿಸ್ಥಿತಿಗಳು ವಿಭಿನ್ನವಾಗಿದ್ದರೂ ಇದೇ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ.
“ಇತ್ತೀಚಿನ ಘಟನೆಗಳು ಮಧ್ಯಪ್ರಾಚ್ಯವನ್ನು ಆಳವಾಗಿ ನಡುಗಿಸಿವೆ—ಇರಾನ್, ಪವಿತ್ರ ಭೂಮಿ, ಲೆಬನಾನ್, ಇರಾಕ್ ಹಾಗೂ ಇಡೀ ಪ್ರದೇಶದಲ್ಲಿ. ಹಿಂಸಾಚಾರದ ಹೊಸ ಉಲ್ಬಣದ ಬಗ್ಗೆ ಲೌವ್ರೆ ಡಿ ಓರಿಯಂಟ್ (L’Œuvre d’Orient) ಸಂಸ್ಥೆ ಗಂಭೀರ ಚಿಂತೆ ವ್ಯಕ್ತಪಡಿಸುತ್ತದೆ,” ಎಂದು ಸಂಸ್ಥೆ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
“ಈ ಬೆಳಿಗ್ಗೆ ಲೆಬನಾನ್‌ನ ಜನರು ಆಘಾತ ಮತ್ತು ಅಸಹನೆಯ ವಾತಾವರಣದಲ್ಲಿ ಎದ್ದಿದ್ದಾರೆ; ಜೊತೆಗೆ ದಣಿವು ಮತ್ತು ಕೋಪವೂ ಕಾಣಿಸುತ್ತಿದೆ,” ಎಂದು ಲೆಬನಾನ್ ಮತ್ತು ಸಿರಿಯಾದ ಸಂಯೋಜಕ ವಿನ್ಸೆಂಟ್ ಜೆಲೋ ಹೇಳಿದರು.
“ಇಸ್ರಾಯೇಲಿನೊಂದಿಗೆ ಯುದ್ಧ ಎಂದರೇನು ಎಂಬುದು ಇಲ್ಲಿ ಜನರಿಗೆ ತಿಳಿದಿದೆ. ಒಂದು ವರ್ಷಾರ್ಧದ ಹಿಂದೆ ಪೇಜರ್ ದಾಳಿಗಳು (2024 ಅಕ್ಟೋಬರ್ 17ರಂದು ಇಸ್ರಾಯೇಲ್ ಹಿಜ್ಬುಲ್ಲಾ ಸದಸ್ಯರ ಪೇಜರ್ ಮತ್ತು ವಾಕಿ-ಟಾಕಿ ಸಾಧನಗಳ ಮೇಲೆ ನಡೆಸಿದ ದಾಳಿ) ಮತ್ತು ನಸ್ರಲ್ಲಾ ಅವರ ಸಾವಿನ ನಂತರ ನಡೆದ ಘಟನೆಗಳನ್ನು ಮತ್ತೆ ಅನುಭವಿಸುತ್ತಿರುವಂತೆ ಅವರಿಗೆ ಅನಿಸುತ್ತದೆ,” ಎಂದು ಅವರು ಹೇಳಿದರು.
“ಆ ಬಳಿಕ ನಡೆದ ಯುದ್ಧದಲ್ಲಿ ಲೆಬನಾನ್‌ನಲ್ಲಿ ಸುಮಾರು 1.2 ಮಿಲಿಯನ್ ಜನರು ಸ್ಥಳಾಂತರಿತರಾದರು ಮತ್ತು ಭಾರೀ ಹಾನಿ ಉಂಟಾಯಿತು,” ಎಂದು ಜೆಲೋ ನೆನಪಿಸಿದರು.
ಲೆಬನಾನ್‌ನಲ್ಲಿ ಆತಂಕ
ಸೋಮವಾರ ಬೆಳಿಗ್ಗೆ ಬೆಯ್ರೂತ್‌ನಲ್ಲಿ ಶಾಲೆಗಳು ಮುಚ್ಚಲ್ಪಟ್ಟಿದ್ದವು, ಏಕೆಂದರೆ ಇಸ್ರಾಯೇಲ್ ದಾಳಿಗಳು ರಾಜಧಾನಿಯ ದಕ್ಷಿಣ ಉಪನಗರಗಳನ್ನು ಗುರಿಯಾಗಿಸಿಕೊಂಡಿದ್ದವು. ಇಸ್ರಾಯೇಲ್ ಸೇನೆ ನೀಡಿದ ಸ್ಥಳಾಂತರ ಸೂಚನೆಗಳ ನಂತರ ದಕ್ಷಿಣ ಲೆಬನಾನ್‌ನ ಅನೇಕ ಗ್ರಾಮಗಳಿಂದ ಸಾವಿರಾರು ಜನರು ಪಲಾಯನ ಮಾಡಿದ್ದಾರೆ. ಪ್ರದೇಶದಾದ್ಯಂತ ಆತಂಕ ಸ್ಪಷ್ಟವಾಗಿ ಕಾಣುತ್ತಿದೆ.
“ನಮ್ಮ ಸಹಭಾಗಿತ್ವದ, ದಾಟರ್ಸ್ ಆಫ್ ಚಾರಿಟಿ ನಡೆಸುತ್ತಿರುವ ಶಾಲೆ ಹಿಂದಿನ ವರ್ಷವೇ ಹಾನಿಗೊಳಗಾಗಿತ್ತು. ಈಗ ಮತ್ತೆ ಭಯದ ವಾತಾವರಣದಲ್ಲಿದೆ,” ಎಂದು ಜೆಲೋ ಹೇಳಿದರು.
ಇರಾಕ್‌ನಲ್ಲಿಯೂ ಭೀತಿ
ಲೆಬನಾನ್ ಗಡಿಗಳನ್ನು ಮೀರಿ ಭಯವು ಇನ್ನೂ ಹೆಚ್ಚಾಗಿದೆ. “ಮುಂದೆ ಏನಾಗಬಹುದು ಎಂಬುದು ಯಾರಿಗೂ ತಿಳಿದಿಲ್ಲ; ಜನರಲ್ಲಿ ದೊಡ್ಡ ಕಳವಳವಿದೆ,” ಎಂದು ಇರಾಕ್‌ನ ಎರ್ಬಿಲ್‌ನಲ್ಲಿ ಇರುವ ಲೌವ್ರೆ ಡಿ ಓರಿಯಂಟ್ (L’Œuvre d’Orient) ಕಚೇರಿಯ ನಿರ್ದೇಶಕಿ ಪಾಸ್ಕಲ್ ಕಸಾಟಿ-ಒಲಿಯೆ ಹೇಳಿದರು. ಅವರ ಪತಿ ಜೀನ್ ಕೂಡ, “ನಮ್ಮ ಸಂಪರ್ಕದಲ್ಲಿರುವವರು ಎಚ್ಚರಿಕೆಯಿಂದ ಮನೆಯಲ್ಲೇ ಉಳಿದಿದ್ದಾರೆ; ಬಾಂಬ್ ದಾಳಿಗಳು ಮುಂದುವರಿಯುತ್ತಿವೆ. ಸಂಪೂರ್ಣ ಅನಿಶ್ಚಿತತೆ ಆವರಿಸಿದೆ,” ಎಂದು ಹೇಳಿದರು.
ಅಮೇರಿಕ ಸೇನಾ ಪಡೆಗಳು ನೆಲೆಸಿರುವ ಇರಾಕಿ ಕುರ್ದಿಸ್ತಾನದ ರಾಜಧಾನಿ ಎರ್ಬಿಲ್ ಮೇಲೆ ಇತ್ತೀಚಿನ ದಿನಗಳಲ್ಲಿ ಇರಾನ್ ಹಲವು ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಪರಿಸ್ಥಿತಿ ಇನ್ನೂ ಅಸ್ಥಿರವಾಗಿರುವುದರಿಂದ, ಈ ಸಂಘರ್ಷವು ಪ್ರದೇಶದ ಕ್ರೈಸ್ತರ ಭವಿಷ್ಯಕ್ಕೆ ಯಾವ ಪರಿಣಾಮ ಉಂಟುಮಾಡಬಹುದು ಎಂಬುದನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಈ ದಾಳಿಗಳು ಸಾಮಾನ್ಯ ನಾಗರಿಕರನ್ನು ಗುರಿಯಾಗಿಸದೆ ಸೈನಿಕ ತಂತ್ರಾತ್ಮಕ ಗುರಿಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಹೇಳಲಾಗುತ್ತಿದೆ.
“ಈ ಹೊಸ ಯುದ್ಧವು ಪ್ರದೇಶದಲ್ಲಿ ಕ್ರೈಸ್ತರ ಪುನರ್‌ಸ್ಥಾಪನೆಯನ್ನು ಸುಲಭಗೊಳಿಸುವುದಿಲ್ಲ, ಇದು ಕ್ರೈಸ್ತರನ್ನು ವಲಸೆ ಹೋಗಲು ಪ್ರೇರೇಪಿಸಬಹುದು ಎಂಬ ಸಾಧ್ಯತೆಯೂ ಇದೆ. ಈಗಿನ ಪರಿಸ್ಥಿತಿಯಲ್ಲಿ ಕಾಲವೇ ನಿಂತಿರುವಂತಿದೆ,” ಎಂದು ಕಸಾಟಿ-ಒಲಿಯೆ ಹೇಳಿದರು.
ಗಲ್ಫ್ ದೇಶಗಳಲ್ಲಿ ಕ್ರೈಸ್ತರ ಲಾಕ್‌ಡೌನ್
ಇರಾನ್ ಪ್ರತೀಕಾರ ದಾಳಿಗಳನ್ನು ನಡೆಸಿದ ಗಲ್ಫ್ ರಾಷ್ಟ್ರಗಳಲ್ಲಿ, ಅನೇಕ ಕ್ರೈಸ್ತ ಸಮುದಾಯಗಳು ಈಗ ಲಾಕ್‌ಡೌನ್ ಸ್ಥಿತಿಯಲ್ಲಿ ಬದುಕುತ್ತಿವೆ. ಬಹ್ರೇನ್‌ನ ಸುಮಾರು 80,000 ಭಕ್ತರಿರುವ ಸಣ್ಣ ಕಥೋಲಿಕ ಸಮುದಾಯ ಸಾಧ್ಯವಾದ ಮಟ್ಟಿಗೆ ಆಧ್ಯಾತ್ಮಿಕ ಸಹಾಯ ಒದಗಿಸಲು ಪ್ರಯತ್ನಿಸುತ್ತಿದೆ. ಭದ್ರತಾ ಕಾರಣಗಳಿಂದ, ಸಾರ್ವಜನಿಕವಾಗಿ ಪವಿತ್ರ ಬಲಿಪೂಜೆ ಅಥವಾ ಯಾವುದೇ ಧರ್ಮಕೇಂದ್ರ ಚಟುವಟಿಕೆಗಳನ್ನು ನಡೆಸಲು ಅನುಮತಿ ಇಲ್ಲ.
ಮನಾಮಾದ ಪವಿತ್ರ ಹೃದಯ ದೇವಾಲಯ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ವಿವಿಧ ಭಾಷೆಗಳಲ್ಲಿ ನಡೆಯುವ ಪೂಜೆಗಳು ಮತ್ತು ಧರ್ಮೋಪದೇಶ ತರಗತಿಗಳು ಈಗ ಆನ್‌ಲೈನ್ ಮೂಲಕ ನಡೆಯುತ್ತಿವೆ.“ಈ ಕಠಿಣ ಮತ್ತು ಒತ್ತಡದ ಸಂದರ್ಭದಲ್ಲಿಯೂ ನಮ್ಮ ಭಕ್ತರನ್ನು ಆಧ್ಯಾತ್ಮಿಕ ಬಲದಿಂದ ದೂರ ಮಾಡಬಾರದು,” ಎಂದು ಧರ್ಮಕೇಂದ್ರದ ಗುರುಗಳಾದ ವಂ. ಗುರು ಫ್ರಾನ್ಸಿಸ್ ಪಿ. ಜೋಸೆಫ್ ಹೇಳಿದ್ದಾರೆ.
“ಈ ವಿಚಿತ್ರ ಮತ್ತು ಕಠಿಣ ಪರಿಸ್ಥಿತಿಯಲ್ಲಿ ಎಲ್ಲರೂ ಧೈರ್ಯದಿಂದ ಮತ್ತು ಸುರಕ್ಷಿತವಾಗಿ ಇರಬೇಕು,” ಎಂದು ಅವರು ಮನವಿ ಮಾಡಿದ್ದಾರೆ.
ಇದರಲ್ಲಿ, ದಕ್ಷಿಣ ಅರೇಬಿಯಾದ ಧರ್ಮಾಧ್ಯಕ್ಷ ಪೌಲೊ ಮಾರ್ಟಿನೆಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಕರೆ ನೀಡುತ್ತಾ, “ನಿಜವಾದ ಮತ್ತು ಹೊಣೆಗಾರಿಕೆಯುತ ಸಂವಾದವೇ ಅಗತ್ಯ. ಪರಸ್ಪರ ಬೆದರಿಕೆಗಳು ನಾಶವನ್ನು ಮಾತ್ರ ಬಿತ್ತುತ್ತವೆ; ಅವು ಶಾಂತಿ ಅಥವಾ ಸ್ಥಿರತೆಯನ್ನು ನಿರ್ಮಿಸುವುದಿಲ್ಲ,” ಎಂದು ಹೇಳಿದ್ದಾರೆ.
ಪವಿತ್ರ ಭೂಮಿಯ ಕರೆ
ಪವಿತ್ರ ಭೂಮಿಯಲ್ಲಿಯೂ ಕಳೆದ ಕೆಲವು ದಿನಗಳು ಸೈರನ್‌ಗಳ ಶಬ್ದದಿಂದ ಕೂಡಿದ್ದವು, ಏಕೆಂದರೆ ಇರಾನ್ ಕ್ಷಿಪಣಿಗಳು ಇಸ್ರಾಯೇಲ್ ರಾಜ್ಯದತ್ತ ಹಾರಿದ್ದವು. ಜೆರುಸಲೇಮಿನ ಫ್ರೆಂಚ್ ಬೈಬಲ್ ಶಾಲೆಯಲ್ಲಿ, ಅರ್ಧ ಭೂಗರ್ಭದಲ್ಲಿರುವ ಪೂಜಾಸಾಮಗ್ರಿ ಗೃಹ ಮಾರ್ಗವು ಡೊಮಿನಿಕನ್ ಸಹೋದರರು, ವಿದ್ಯಾರ್ಥಿಗಳು ಮತ್ತು ಭೇಟಿದಾರರಿಗೆ ಆಶ್ರಯ ಸ್ಥಳವಾಗಿತ್ತು.
ಶಾಂತಿಗಾಗಿ ಪವಿತ್ರ ಬಲಿಪೂಜೆಗಳನ್ನು “ಯುದ್ಧ ಅಥವಾ ನಾಗರಿಕ ಅಶಾಂತಿಯ ಸಂದರ್ಭದ” ವಿಶೇಷ ಪೂಜಾಪುಸ್ತಕಗಳನ್ನು ಬಳಸಿ ಆಚರಿಸಲಾಗಿದೆ ಎಂದು ಸಹೋದರ ಒಲಿವಿಯೆ ಪೊಕ್ವಿಯೊನ್, ಜೆರುಸಲೇಮಿನ ಫ್ರೆಂಚ್ ಬೈಬಲ್ ಮತ್ತು ಪುರಾತತ್ವ ಶಾಲೆಯ ನಿರ್ದೇಶಕರು ತಿಳಿಸಿದ್ದಾರೆ.
“ಶನಿವಾರದಿಂದಲೇ ಒಂದು ಎಚ್ಚರಿಕೆಯ ನಂತರ ಮತ್ತೊಂದು ಎಚ್ಚರಿಕೆ ಬರುತ್ತಿದೆ,” ಎಂದು ಅವರು ಹೇಳಿದರು. “ಈ ಸಂದರ್ಭಗಳಲ್ಲಿ ಪಠ್ಯಗಳನ್ನು ಅದರ ಇತಿಹಾಸಿಕ ಹಿನ್ನೆಲೆಯೊಂದಿಗೆ ಅಧ್ಯಯನ ಮಾಡುವುದು ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಸಂಘರ್ಷಗಳು ರಕ್ಷಣಾ ಇತಿಹಾಸದ ಭಾಗವಾಗಿವೆ. ಶಾಂತಿಯ ರಾಜನಾದ ಕ್ರಿಸ್ತನು ಈ ಸಂಘರ್ಷಗಳ ಮಧ್ಯದಲ್ಲಿ ಹೇಳುವ ಸಂದೇಶವನ್ನು ಇದು ನಮಗೆ ನೆನಪಿಸುತ್ತದೆ,” ಎಂದು ಅವರು ಹೇಳಿದರು.
ಇರಾನ್ ಕಡೆಗೆ ಕಣ್ಣುಗಳು ತಿರುಗಿರುವಾಗ ಮತ್ತು ರಡಾರ್ ವ್ಯವಸ್ಥೆಗಳು ಆಕಾಶವನ್ನು ಗಮನಿಸುತ್ತಿರುವಾಗಲೂ, ಪವಿತ್ರ ಭೂಮಿ ತನ್ನ ನೋವನ್ನು ಮುಂದುವರಿಸುತ್ತಿದೆ. ವಿಶೇಷವಾಗಿ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಹಿಂಸಾಚಾರ ಮುಂದುವರಿಯುತ್ತಿದ್ದು, ಕ್ರೈಸ್ತ ಗ್ರಾಮ ತೈಬೆಹ್ ನಿರಂತರ ಕಿರುಕುಳವನ್ನು ಎದುರಿಸುತ್ತಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).