ಹುಡುಕಿ

Aftermath of an Israel-U.S. strike on a police station in Tehran Aftermath of an Israel-U.S. strike on a police station in Tehran  (KHAHI)

ಪ್ರಧಾನ ಗುರು ಕ್ಯೂಪಿಚ್: “ಯುದ್ಧಗಳನ್ನು ತಪ್ಪಿಸುವ ನಾವು ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು”

ವ್ಯಾಟಿಕನ್ ಮಾಧ್ಯಮಕ್ಕೆ ನೀಡಿದ ವಿಶಾಲವಾದ ಸಂದರ್ಶನದಲ್ಲಿ, ಚಿಕಾಗೋ ಮಹಾಧರ್ಮಾಧ್ಯಕ್ಷರಾದ ಪ್ರಧಾನ ಗುರು ಬ್ಲೇಸ್ ಕ್ಯೂಪಿಚ್ ವಿದೇಶಗಳಲ್ಲಿ ಅನಗತ್ಯ ಸೇನಾಉದ್ವಿಗ್ನತೆಯನ್ನು ತಪ್ಪಿಸಲು ನಿಯಂತ್ರಣ ಅಗತ್ಯವಿದೆ ಎಂದು ಕರೆ ನೀಡಿದರು. ಅಮೆರಿಕಾದೊಳಗೆ ಜನರನ್ನು ವಿಭಜಿಸುತ್ತಿರುವ ಧ್ರುವೀಕರಣವನ್ನು ಮೀರಿ, ಎಲ್ಲ ಜನರ ಮಾನವ ಗೌರವವನ್ನು ಕಾಪಾಡುವ ಅಗತ್ಯವಿದೆ, ಕಾನೂನು ಮತ್ತು ಮಾನವ ಹಕ್ಕುಗಳು ಪರಸ್ಪರ ವಿರೋಧಿಯಾಗದೆ, ಪರಸ್ಪರ ಹೊಂದಾಣಿಕೆಯಲ್ಲಿ ಉಳಿಯುವ ರೀತಿಯನ್ನು ನಾವು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

"ಒಮ್ಮೆ ದಾಳಿಗಳ ಮೂಲಕ ನೀವು ದ್ವೇಷ-ಅಳಿವಿನ ಬಾಗಿಲು ತೆರೆಯುತ್ತಿದ್ದರೆ, ಅದನ್ನು ಮತ್ತೆ ಮುಚ್ಚುವುದು ತುಂಬಾ ಕಷ್ಟ. ಪರಿಸ್ಥಿತಿಗಳು ಬಹಳ ವೇಗವಾಗಿ ನಿಯಂತ್ರಣ ತಪ್ಪುವ ಸಾಧ್ಯತೆಯಿದೆ."

ವ್ಯಾಟಿಕನ್ ಮಾಧ್ಯಮಕ್ಕೆ ನೀಡಿದ ವಿಶಾಲವಾದ ಸಂದರ್ಶನದಲ್ಲಿ ಚಿಕಾಗೋ ಮಹಾಧರ್ಮಾಧ್ಯಕ್ಷರಾದ ಪ್ರಧಾನ ಗುರು ಬ್ಲೇಸ್ ಕ್ಯೂಪಿಚ್ ಈ ಎಚ್ಚರಿಕೆಯನ್ನು ನೀಡಿದರು. ಜಾಗತಿಕ ಮಟ್ಟದಲ್ಲಿಯೂ ಹಾಗೂ ದೇಶೀಯ ಪರಿಸ್ಥಿತಿಗಳಲ್ಲಿಯೂ ಉಂಟಾಗುತ್ತಿರುವ ಉದ್ವಿಗ್ನತೆಗಳ ಕುರಿತು ಅವರು ಚಿಂತನೆ ವ್ಯಕ್ತಪಡಿಸಿದರು.

ಶನಿವಾರ ಅಮೆರಿಕ ಮತ್ತು ಇಸ್ರಾಯೇಲ್ ಸಂಯುಕ್ತವಾಗಿ ನಡೆಸಿದ ದಾಳಿಗಳು ತೆಹ್ರಾನ್ ಮತ್ತು ಇರಾನ್‌ನ ಹಲವಾರು ನಗರಗಳನ್ನು ತಾಕಿದ ನಂತರ, ಇರಾನ್ ಗಲ್ಫ್ ಪ್ರದೇಶದ ವಿವಿಧ ಸ್ಥಳಗಳ ಮೇಲೆ ಪ್ರತಿದಾಳಿಗಳನ್ನು ನಡೆಸಿತು. ಈ ದಾಳಿಗಳು ವಿಮಾನ ನಿಲ್ದಾಣಗಳು, ಕಟ್ಟಡಗಳು, ಬಂದರುಗಳು ಮತ್ತು ಹಲವಾರು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡವು. ವಿಶೇಷವಾಗಿ ದೋಹಾ, ಮನಾಮಾ ಮತ್ತು ಕುವೈತ್ ನಗರಗಳಲ್ಲಿ ಈ ದಾಳಿಗಳು ಸಂಭವಿಸಿದವು.

ಭಾನುವಾರದ ಏಂಜಲಸ್ ಪ್ರಾರ್ಥನೆಯ ವೇಳೆ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ, “ಅಪಾರ ಪ್ರಮಾಣದ ದುರಂತ ಸಂಭವಿಸುವ ಸಾಧ್ಯತೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ,” ಹಿಂಸಾಚಾರದ ಚಕ್ರವು ಮರಳಿ ಸರಿಪಡಿಸಲಾಗದ ಆಳವಾದ ಅಗುಳಿಯಾಗಿ ಮಾರ್ಪಡುವ ಮೊದಲು ಅದನ್ನು ನಿಲ್ಲಿಸುವ ನೈತಿಕ ಹೊಣೆಗಾರಿಕೆಯನ್ನು ಸಂಬಂಧಿಸಿದ ಎಲ್ಲ ಪಕ್ಷಗಳು ವಹಿಸಿಕೊಳ್ಳಬೇಕು ಎಂದು ಅವರು ಹೃದಯಂಗಮ ಮನವಿ ಮಾಡಿದರು.

ಈ ಸಂಭಾಷಣೆಯಲ್ಲಿ ಪ್ರಧಾನ ಗುರು ಕ್ಯೂಪಿಚ್ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ನಾಟಕೀಯ ಘಟನೆಗಳ ಬಗ್ಗೆ ಹಾಗೂ ವಿಶ್ವದ ಸಮಗ್ರ ಪರಿಸ್ಥಿತಿಯ ಕುರಿತು ಚಿಂತನೆ ವ್ಯಕ್ತಪಡಿಸಿ, ನೈತಿಕ ಹೊಣೆಗಾರಿಕೆಯತ್ತ ಕರೆ ನೀಡುವ ಧ್ವನಿಯ ಮಹತ್ವವನ್ನೂ ವಿವರಿಸಿದರು.

ಅಮೆರಿಕಾದೊಳಗೆ ಕಂಡುಬರುವ ವಿಭಜನೆಯ ಬಗ್ಗೆ ಹಾಗೂ ಆ ಸವಾಲುಗಳ ನಡುವೆಯೂ ಜನರನ್ನು ಏಕತೆಯತ್ತ ಕರೆದೊಯ್ಯುವ ಸಾಮರ್ಥ್ಯದ ಕುರಿತು ತಿಳಿಸಿದರು. ವಿಶೇಷವಾಗಿ ಗಡಿಗಳ ಬಳಿ ಎದುರಾಗುತ್ತಿರುವ ಸವಾಲುಗಳ ಮಧ್ಯೆ ಸಮಾಜದ ಪ್ರತಿಕ್ರಿಯೆಗಳನ್ನೂ ವಿವರಿಸಿದರು. ಕೊನೆಯಲ್ಲಿ, ಚಿಕಾಗೋ ನಗರವು ವಿಶ್ವಕ್ಕೆ ತನ್ನ ಮೊದಲ ಜಗದ್ಗುರುಗಳನ್ನು ನೀಡಿರುವುದು ಆ ನಗರಕ್ಕೂ ಹಾಗೂ ಅಲ್ಲಿನ ಧರ್ಮಸಭೆಗೆ ಏನರ್ಥ ಎನ್ನುವುದನ್ನು ವಿವರಿಸಿ, ಇದರಿಂದ ಸ್ಥಳೀಯ ಧಾರ್ಮಿಕ ಸಮುದಾಯದ ಬದುಕಿನ ಮೇಲೆ ಉಂಟಾಗುತ್ತಿರುವ ಪರಿಣಾಮಗಳನ್ನೂ ಅವರು ಪ್ರತಿಬಿಂಬಿಸಿದರು.

 

ವ್ಯಾಟಿಕನ್ ಸುದ್ದಿ ಸಂಸ್ಥೆ: ಪೂಜ್ಯರೇ, ಶಾಂತಿಗೆ ಜಗದ್ಗುರು ಲಿಯೋ ಅವರ ಕೊಡುಗೆ ಏನು? ಭಾನುವಾರದ ಏಂಜಲಸ್ ಭಾಷಣದಲ್ಲಿ ಪೂಜ್ಯ ತಂದೆ ಅತ್ಯಂತ ಹೃದಯಂಗಮ ಮನವಿಯನ್ನು ಮಾಡಿದರು. ಇಂದಿನ ಜಾಗತಿಕ ಉದ್ವಿಗ್ನತೆಯ ನಡುವೆ ಅವರ ಧ್ವನಿ ಎಷ್ಟು ಮಹತ್ವದ್ದಾಗಿದೆ?

ಪ್ರಧಾನ ಗುರು ಬ್ಲೇಸ್ ಕ್ಯೂಪಿಚ್: ಪೂಜ್ಯ ತಂದೆ ಮಾಡುತ್ತಿರುವುದು ಬಹಳ ಸರಳವಾದದ್ದು. ದ್ವಿತೀಯ ವಿಶ್ವಯುದ್ಧದ ನಂತರ ರಾಷ್ಟ್ರಗಳು ಒಪ್ಪಿಕೊಂಡಿದ್ದ ಸಿದ್ಧಾಂತಗಳನ್ನು ಅವರು ಮತ್ತೆ ನೆನಪಿಸುತ್ತಿದ್ದಾರೆ. ಈ ಎಂಟು ದಶಕಗಳ ಅವಧಿಯಲ್ಲಿ ವಿಶ್ವಸಂಸ್ಥೆ ಹಾಗೂ ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಮೂಲಕ ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ರಾಷ್ಟ್ರಗಳ ಸ್ವಾಯತ್ತತೆಯನ್ನು ಕಾಪಾಡುವ ವಿಧಾನವನ್ನು ನಾವು ರೂಪಿಸಿಕೊಂಡಿದ್ದೇವೆ.

ಈ ಅವಧಿಯಲ್ಲಿ ರಾಷ್ಟ್ರಗಳ ನಡುವಿನ ಉದ್ವಿಗ್ನತೆಗಳು, ಸಂಘರ್ಷಗಳು ಮತ್ತು ವಿವಾದಗಳನ್ನು ನಿರ್ವಹಿಸುವ ಒಂದು ರೀತಿಯ ಸಾಮರ್ಥ್ಯವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಈ ಪ್ರಕ್ರಿಯೆಯಲ್ಲಿ ಮಾನವ ಹಕ್ಕುಗಳ ಗೌರವ ಮತ್ತು ರಾಷ್ಟ್ರಗಳ ಸ್ವಾಯತ್ತತೆಯ ಗೌರವ ಎಂಬ ಎರಡು ಪ್ರಮುಖ ಅಂಶಗಳು ಸೇರಿವೆ. ಪೂಜ್ಯ ತಂದೆ ನಮ್ಮನ್ನು ಮತ್ತೆ ಆ ಸಿದ್ಧಾಂತಗಳತ್ತ ನಡೆಸುತ್ತಿದ್ದಾರೆ. ನಾವು ಅವುಗಳನ್ನು ಕಳೆದುಕೊಳ್ಳಬಾರದು ಎಂಬುದನ್ನು ಅವರು ನೆನಪಿಸುತ್ತಿದ್ದಾರೆ. ವಾಸ್ತವವಾಗಿ ನಾವು ಆ ಒಮ್ಮತವನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದೇವೆ. ಅದನ್ನು ತಪ್ಪಿಸಲು ಅವರು ಮಾಡುತ್ತಿರುವ ಪ್ರಯತ್ನ ಬಹಳ ಮಹತ್ವದ್ದಾಗಿದೆ.

ನನ್ನ ಅಭಿಪ್ರಾಯದಲ್ಲಿ ಅವರು ಅನೇಕ ಜನರ ಪರವಾಗಿ ಮಾತನಾಡುತ್ತಿದ್ದಾರೆ. ಆ ಒಮ್ಮತ ಕುಸಿದರೆ ಏನಾಗಬಹುದು ಎಂಬ ಭಯವನ್ನು ಹೊಂದಿರುವ ಅನೇಕ ಜನರ ಕಳವಳವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: ಇತ್ತೀಚಿನ ಮಧ್ಯಪ್ರಾಚ್ಯದ ಘಟನೆಗಳ ಹಿನ್ನೆಲೆಯಲ್ಲಿ ವಿಶ್ವವು ಭಾರೀ ಉದ್ವಿಗ್ನತೆ ಮತ್ತು ಭಯದ ದಿನಗಳನ್ನು ಅನುಭವಿಸುತ್ತಿದೆ. ಈ ದಿನಗಳ ಅನುಭವ ನಿಮಗೆ ಹೇಗಾಗುತ್ತಿದೆ? ಮತ್ತು ಈ ಸಮಯದಲ್ಲಿ ನಿಮ್ಮ ಪ್ರಾರ್ಥನೆ ಏನು?

ಪ್ರಧಾನ ಗುರು ಕ್ಯೂಪಿಚ್: ನಾನು ನ್ಯೂಯಾರ್ಕ್ ಮಹಾಧರ್ಮಾಧ್ಯಕ್ಷರಾದ ಪ್ರಧಾನ ಗುರು ಜೋಸೆಫ್ ಟೋಬಿನ್ ಮತ್ತು ವಾಷಿಂಗ್ಟನ್‌ನ ಪ್ರಧಾನ ಗುರು ರಾಬರ್ಟ್ ಮ್ಯಾಕ್‌ಎಲ್ರಾಯ್ ಅವರೊಂದಿಗೆ ಸೇರಿ ಈ ವಿಷಯಗಳ ಬಗ್ಗೆ ಒಂದು ಪ್ರಕಟಣೆಯನ್ನು ಹೊರಡಿಸಿದ್ದೆವು. ಅಮೆರಿಕ ಕ್ರಮಗಳನ್ನು ಕೈಗೊಳ್ಳುತ್ತಿದ್ದ ಸಮಯದಲ್ಲಿ — ಉದಾಹರಣೆಗೆ ಗ್ರೀನ್‌ಲ್ಯಾಂಡ್ ಸಂಬಂಧಿಸಿದ ವಿಷಯಗಳ ಅಥವಾ ವೆನೆಜುಯೆಲಾ ಸಂಬಂಧಿಸಿದ ವಿಷಯಗಳ  ವಿಚಾರಗಳ ಬಗ್ಗೆ ನಾವು ಮಾತಾಡಿದ್ದೆವು.

ನಮ್ಮ ಹೇಳಿಕೆಯೇನೆಂದರೆ, ನಾವು ದಿಕ್ಕು ಬದಲಿಸದಿದ್ದರೆ ಇನ್ನಷ್ಟು ಘಟನೆಗಳು ಸಂಭವಿಸಬಹುದು. ಮತ್ತು ಈಗ ನಾವು ಅದನ್ನು ನೋಡುತ್ತಿದ್ದೇವೆ. ಈ ಘಟನೆಗಳು ಜನರ ಜೀವನಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತಿವೆ.

ಇರಾನ್ ವಿರುದ್ಧ ನಡೆದ ಈ ಇತ್ತೀಚಿನ ಹಸ್ತಕ್ಷೇಪದಲ್ಲಿ ಈಗಾಗಲೇ ಸುಮಾರು ಸಾವಿರ ಜನರು ಮೃತಪಟ್ಟಿದ್ದಾರೆ. ನಾವು ಸಮಸ್ಯೆಗಳನ್ನು ಪರಿಹರಿಸಲು ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವ ಒಂದೇ ವಿಧಾನವನ್ನು ಅನುಸರಿಸುತ್ತಿರುವುದನ್ನು ನೋಡುತ್ತಿದ್ದೇವೆ. ನಾವು ಈ ದಾರಿಗೆ ಕಾಲಿಟ್ಟರೆ, ಮರಳಿ ಬರುವುದು ಬಹಳ ಕಷ್ಟವಾಗುವ ಮಾರ್ಗವಾಗಿದೆ.

ಈ ಸಮಯದಲ್ಲಿ ಅದು ಇನ್ನಷ್ಟು ಸ್ಪಷ್ಟವಾಗಿ ಕಾಣಿಸುತ್ತಿದೆ. ಜನರು ಭಯದಲ್ಲಿದ್ದಾರೆ. ಈ ಘಟನೆಗಳು ಹೇಗೆ ಅಂತ್ಯಗೊಳ್ಳಲಿವೆ ಎಂಬುದನ್ನು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಪರಿಸ್ಥಿತಿಗಳು ಬಹಳ ಬೇಗ ನಿಯಂತ್ರಣ ತಪ್ಪಬಹುದು.

ವ್ಯಾಟಿಕನ್ ಸುದ್ದಿ ಸಂಸ್ಥೆ: ಇಂದು ಅನೇಕರು ಯುದ್ಧವು ಮತ್ತೆ ಅಂತಾರಾಷ್ಟ್ರೀಯ ವಿವಾದಗಳನ್ನು ಪರಿಹರಿಸುವ ಒಂದು ಸಾಮಾನ್ಯ ವಿಧಾನವಾಗಿದೆ ಎಂದು ಒಪ್ಪಿಕೊಳ್ಳುತ್ತಿರುವಂತೆ ಕಾಣುತ್ತದೆ. ಈ ರೀತಿಯಾಗಿ ಯೋಚಿಸುವವರಿಗೆ ನೀವು ಏನು ಹೇಳುತ್ತೀರಿ?

ಪ್ರಧಾನ ಗುರು ಕ್ಯೂಪಿಚ್: ಮಾನವಕುಲವು ಹಿಂದೆ ಈ ಮಾರ್ಗದಲ್ಲಿ ಸಾಗಿದ ಅನುಭವವಿದೆ. ಮೊದಲ ವಿಶ್ವಯುದ್ಧವು ಸಾರಾಯೇವೊ ನಗರದಲ್ಲಿ ಆರ್ಚ್‌ಡ್ಯೂಕ್ ಹತ್ಯೆಯಿಂದ ಆರಂಭವಾಯಿತು. ಆ ನಂತರ ಆಸ್ಟ್ರಿಯಾ ಸಾಮ್ರಾಜ್ಯದ ಪರವಾಗಿ ಫ್ರಾಂಜ್ ಜೋಸೆಫ್ ಯುದ್ಧ ಘೋಷಿಸಿದರು. ಅವರಿಗೆ ಅದು ಒಂದು ಸಮಸ್ಯೆಗೆ ತ್ವರಿತ ಪರಿಹಾರವಾಗಬಹುದು ಎಂಬ ಭಾವನೆ ಇತ್ತು.

ಆದರೆ ಅದು ವರ್ಷಗಳ ಕಾಲ ಮುಂದುವರಿದ ಭೀಕರ ಯುದ್ಧವಾಯಿತು. ಲಕ್ಷಾಂತರ ಜನರು ತಮ್ಮ ಜೀವಗಳನ್ನು ಕಳೆದುಕೊಂಡರು. ಆದ್ದರಿಂದ ಒಮ್ಮೆ ನೀವು ಆ ಬಾಗಿಲು ತೆರೆಯುತ್ತಿದ್ದರೆ ಅದನ್ನು ಮತ್ತೆ ಮುಚ್ಚುವುದು ಬಹಳ ಕಷ್ಟ.

ವ್ಯಾಟಿಕನ್ ಸುದ್ದಿ ಸಂಸ್ಥೆ: ನಿಮ್ಮ ಅಭಿಪ್ರಾಯದಲ್ಲಿ ಒಂದು ಸ್ವಾಯತ್ತ ರಾಷ್ಟ್ರದ ಮೇಲೆ ಸೇನಾ ದಾಳಿ ನಡೆಸುವುದು ನ್ಯಾಯಸಮ್ಮತವೇ? ಯಾವ ಸಂದರ್ಭಗಳಲ್ಲಿ ಅದು ಸಮರ್ಥನೀಯವಾಗಬಹುದು?

ಪ್ರಧಾನ ಗುರು ಕ್ಯೂಪಿಚ್: ತಕ್ಷಣದ ಮತ್ತು ಸ್ಪಷ್ಟವಾದ ಅಪಾಯ ಇದ್ದರೆ ಮಾತ್ರ ಅಂತಹ ಕ್ರಮಗಳನ್ನು ಪರಿಗಣಿಸಬಹುದು. ಆದರೆ ಅಂತಹ ಅಪಾಯ ಇಲ್ಲದಿದ್ದರೆ ಅದು ಬಹಳ ಪ್ರಶ್ನಾರ್ಹವಾಗುತ್ತದೆ. ನನ್ನ ತಿಳುವಳಿಕೆಯ ಪ್ರಕಾರ ಇತ್ತೀಚಿನ ಘಟನೆಗಳಲ್ಲಿ ಅಂತಹ ತಕ್ಷಣದ ಅಪಾಯದ ಲಕ್ಷಣಗಳು ಸ್ಪಷ್ಟವಾಗಿರಲಿಲ್ಲ. ಇರಾನ್‌ನ ಅಣು ಸಾಮರ್ಥ್ಯವನ್ನು ಕೆಲವು ತಿಂಗಳುಗಳ ಹಿಂದೆ ನಡೆದ ಬಾಂಬ್ ದಾಳಿಗಳಿಂದ ಕುಗ್ಗಿಸಲಾಗಿದೆ ಎಂದು ನಮಗೆ ತಿಳಿಸಲಾಗಿದೆ.

ರಾಷ್ಟ್ರದ ಸ್ವಾಯತ್ತತೆ ಅತ್ಯಂತ ಮಹತ್ವದ್ದಾಗಿದೆ. ಉಕ್ರೇನ್ ಯುದ್ಧದಲ್ಲಿಯೂ ಇದೇ ವಿಷಯ ಕಂಡುಬರುತ್ತದೆ. ಒಂದು ರಾಷ್ಟ್ರದ ಸ್ವಾಯತ್ತತೆಯ ಸಿದ್ಧಾಂತವನ್ನು ಉಲ್ಲಂಘಿಸಿದಾಗ, ನಂತರ ಯಾವುದೇ ಕಾರಣವನ್ನು ನೀಡಿಕೊಂಡು ಯುದ್ಧ ಆರಂಭಿಸುವುದು ಸುಲಭವಾಗುತ್ತದೆ. ದ್ವಿತೀಯ ವಿಶ್ವಯುದ್ಧದ ನಂತರ ನಿರ್ಮಾಣವಾದ ಜಾಗತಿಕ ಒಮ್ಮತದ ಪ್ರಮುಖ ಅಂಶವೇ ಈ ಸಿದ್ಧಾಂತ. ಅದನ್ನು ನಾವು ಕಾಪಾಡಬೇಕು.

ವ್ಯಾಟಿಕನ್ ಸುದ್ದಿ ಸಂಸ್ಥೆ: ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಅಂತರರಾಷ್ಟ್ರೀಯ ರಾಜತಾಂತ್ರಿಕ ಪ್ರತಿನಿಧಿಗಳಿಗೆ ನೀಡಿದ “ವಿಶ್ವದ ಸ್ಥಿತಿ” ಕುರಿತ ಭಾಷಣದ ಹತ್ತು ದಿನಗಳ ನಂತರ, ನೀವು ಹೇಳಿದಂತೆ, ನೀವು ಮತ್ತು ಇನ್ನಿಬ್ಬರು ಅಮೆರಿಕನ್ ಪ್ರಧಾನ ಗುರುಗಳು ಸೇರಿ ಯುದ್ಧವನ್ನು ತಿರಸ್ಕರಿಸುವ ಮತ್ತು ಅಮೆರಿಕದ ವಿದೇಶಾಂಗ ನೀತಿ ಶಾಂತಿ, ಮಾನವ ಗೌರವ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಆಧಾರದ ಮೇಲೆ ರೂಪುಗೊಳ್ಳಬೇಕು ಎಂದು ಒತ್ತಾಯಿಸುವ ಸಂಯುಕ್ತ ಪ್ರಕಟಣೆಯನ್ನು ಹೊರಡಿಸಿದ್ದೀರಿ. ಆ ಪತ್ರದಲ್ಲಿ ವೆನೆಜುವೆಲಾ, ಉಕ್ರೇನ್ ಮತ್ತು ಗ್ರೀನ್‌ಲ್ಯಾಂಡ್‌ನಲ್ಲಿ ನಡೆದ ಘಟನೆಗಳು ಸೇನಾ ಶಕ್ತಿಯ ಬಳಕೆ ಮತ್ತು “ಶಾಂತಿ” ಎಂಬ ಪದದ ಅರ್ಥದ ಕುರಿತು ಮೂಲಭೂತ ಪ್ರಶ್ನೆಗಳನ್ನು ಎಬ್ಬಿಸುತ್ತವೆ ಎಂದು ಹೇಳಲಾಗಿದೆ. ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ನಡೆದ ದಾಳಿಗಳ ಬೆಳಕಿನಲ್ಲಿ ಈ ಪ್ರಶ್ನೆಗಳು ಇನ್ನಷ್ಟು ಗಂಭೀರವಾಗಿ ಎದುರಾಗುತ್ತಿವೆ. ಈ ಹಿನ್ನೆಲೆದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಕ್ರಮಗಳ ಬದಲು ರಾಜತಾಂತ್ರಿಕ ಸಂವಾದವನ್ನು ಉತ್ತೇಜಿಸಲು ಧರ್ಮಸಭೆ ಯಾವ ರೀತಿಯ ಪಾತ್ರವನ್ನು ವಹಿಸಬೇಕು ಎಂದು ನೀವು ಭಾವಿಸುತ್ತೀರಿ?

ಪ್ರಧಾನ ಗುರು ಬ್ಲೇಸ್ ಕ್ಯೂಪಿಚ್: ನಿಜವಾಗಿ ನೋಡಿದರೆ, ಜಗತ್ತಿನ ವಿವಿಧ ಭಾಗಗಳಲ್ಲಿ ನಮ್ಮ ರಾಜತಾಂತ್ರಿಕ ಕೇಂದ್ರಗಳ ಮೂಲಕ ನಡೆಯುತ್ತಿರುವ ಸಂಪೂರ್ಣ ರಾಜತಾಂತ್ರಿಕ ಪ್ರಯತ್ನಗಳಿವೆ. ಅವು ಅತ್ಯಂತ ಮಹತ್ವದ್ದಾಗಿವೆ. ಇವು ಕೇವಲ ಜನರನ್ನು ಒಂದಾಗಿ ತರಲು ಮಾತ್ರ ಸಹಾಯ ಮಾಡುವುದಿಲ್ಲ; ನೇರ ಮಾಹಿತಿಯನ್ನು — ಪ್ರಥಮ ಹಸ್ತ ಮಾಹಿತಿಯನ್ನು — ನಮಗೆ ಒದಗಿಸುತ್ತವೆ. ಇಂತಹ ಮಾಹಿತಿ ಈಗಿನ ಪರಿಸ್ಥಿತಿಯಲ್ಲಿ ಅತ್ಯಂತ ಪ್ರಮುಖವಾಗಿದೆ.

ಈ ವಿಷಯವನ್ನು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಜನವರಿ 9ರಂದು ರಾಜತಾಂತ್ರಿಕ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಆ ಭಾಷಣದ ಕೇಂದ್ರಭಾಗದಲ್ಲಿ ಅವರು ಹೇಳಿದ ಒಂದು ಪ್ರಮುಖ ವಾಕ್ಯವಿತ್ತು. ಅದು ಏನೆಂದರೆ, ನಾವು ಈಗ ಒಂದು ರೀತಿಯ “ಸಾಪೇಕ್ಷತೆಯ ಯುಗ”ಕ್ಕೆ ಪ್ರವೇಶಿಸುತ್ತಿದ್ದೇವೆ — ಅಲ್ಲಿ ಸತ್ಯವು ಅಭಿಪ್ರಾಯದ ವಿಷಯವಾಗುತ್ತಿದೆ.

ಅಂದರೆ ಸತ್ಯವನ್ನು ಕೇವಲ ಒಂದು ಅಭಿಪ್ರಾಯದ ಮಟ್ಟಕ್ಕೆ ಇಳಿಸಲಾಗುತ್ತಿದೆ. ನಾವು ನಿಜವಾದ ಸತ್ಯವನ್ನು ಹೇಳುವ ಬದ್ಧತೆಯನ್ನು ಕಳೆದುಕೊಂಡರೆ, ನಾವು ಒಂದು ಭ್ರಮೆಯ ಜಗತ್ತಿನಲ್ಲಿ ಬದುಕುವ ಪರಿಸ್ಥಿತಿ ಉಂಟಾಗಬಹುದು ಎಂದು ನಾನು ಭಾವಿಸುತ್ತೇನೆ. ಆ ಕಾರಣದಿಂದಲೇ ಜಗದ್ಗುರುಗಳ ಅಧಿಕಾರ ಪೀಠ( Holy See)  ಜಗತ್ತಿನ ಉಳಿದ ರಾಷ್ಟ್ರಗಳನ್ನು ನಿಜವಾಗಿ ಸತ್ಯವಾಗಿರುವುದನ್ನು ಒಪ್ಪಿಕೊಳ್ಳುವಂತೆ ಕರೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಜನರು “ಅಭಿಪ್ರಾಯ” ಅಥವಾ “ಕಪಟ ಸುದ್ದಿಗಳು” ಎಂದು ಕರೆಯುವ ಮಾಹಿತಿಗಳ ಆಧಾರದ ಮೇಲೆ ನಡೆಯುವುದಕ್ಕಿಂತ, ವಾಸ್ತವದಲ್ಲಿ ಸತ್ಯವಾಗಿರುವುದನ್ನು ಗುರುತಿಸಲು ಮತ್ತು ಒಪ್ಪಿಕೊಳ್ಳಲು ಜಗತ್ತನ್ನು ಆಹ್ವಾನಿಸುವುದು ಅದರ ಕರ್ತವ್ಯವಾಗಿದೆ. 

ವ್ಯಾಟಿಕನ್ ಸುದ್ದಿ ಸಂಸ್ಥೆ: ಅಮೆರಿಕದ ಸಮಾಜದಲ್ಲಿಯೂ ಹಾಗೆಯೇ ಧರ್ಮಸಭೆಯೊಳಗೂ ಈಗ ಸಾಕಷ್ಟು ಧ್ರುವೀಕರಣ ಕಂಡುಬರುತ್ತಿದೆ ಎಂಬಂತೆ ತೋರುತ್ತದೆ. ವಿಭಜನೆಯ ಬದಲು ಏಕತೆಯ ಶಕ್ತಿಯಾಗಲು ಧರ್ಮಸಭೆ ಹೇಗೆ ಕಾರ್ಯನಿರ್ವಹಿಸಬಹುದು ಅಥವಾ ಹೇಗೆ ರೂಪುಗೊಳ್ಳಬಹುದು? ಮತ್ತು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಹೆಚ್ಚಿನ ಏಕತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತಿದ್ದಾರೆ ಎಂದು ನೀವು ಭಾವಿಸುತ್ತೀರಿ?

ಪ್ರಧಾನ ಗುರು ಬ್ಲೇಸ್ ಕ್ಯೂಪಿಚ್: ನನ್ನ ಅಭಿಪ್ರಾಯದಲ್ಲಿ ಇದು ಅತ್ಯಂತ ಮಹತ್ವದ ಪ್ರಶ್ನೆಯಾಗಿದೆ. ಈ ವರ್ಷದ ಆರಂಭದಲ್ಲಿ ನಾವು ಮೂವರು ಪ್ರಧಾನ ಗುರುಗಳು ಸೇರಿ ಪ್ರಕಟಣೆ ಹೊರಡಿಸಿದಾಗ, ನಮ್ಮ ಜನರು ನಡೆಯುತ್ತಿರುವ ಘಟನೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದಕ್ಕೆ ಅಗತ್ಯವಾದ ಭಾಷೆಯನ್ನು ಅವರಿಗೆ ನೀಡಬೇಕು ಎಂದು ನಾವು ನಿರ್ಧರಿಸಿದ್ದೆವು.

ನನ್ನ ಅಭಿಪ್ರಾಯದಲ್ಲಿ ಪೂಜ್ಯ ತಂದೆಯವರೂ ಇದೇ ಕೆಲಸವನ್ನು ಮಾಡುತ್ತಿದ್ದಾರೆ. ಏಕೆಂದರೆ ನಾವು ವ್ಯಕ್ತಿಗಳ ಮೇಲೆ ಅಥವಾ ನಿರ್ದಿಷ್ಟ ವ್ಯಕ್ತಿತ್ವಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ ಕ್ಷಣದಿಂದಲೇ, ನಾವು ನಿಲ್ಲಬೇಕಾದ ಆ ಮೂಲಭೂತ ನೆಲೆಯನ್ನು ಕಳೆದುಕೊಳ್ಳುತ್ತೇವೆ.

ನಾವು ನಮ್ಮ ಜನರಿಗೆ ನೀಡಬಹುದಾದ ಸೇವೆ ಏನೆಂದರೆ — ಏನು ನಡೆಯುತ್ತಿದೆ ಎಂಬುದನ್ನು ಅವರಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು. ಈ ವಿಚಾರಗಳನ್ನು ಯಾವ ರೀತಿಯಲ್ಲಿ ನೋಡಬೇಕು ಮತ್ತು ಅವುಗಳ ಅರ್ಥವನ್ನು ಹೇಗೆ ರೂಪಿಸಬೇಕು ಎಂಬುದಕ್ಕೆ ಬೇಕಾದ ಭಾಷೆಯನ್ನು ಅವರಿಗೆ ನೀಡುವುದು.

ಹಾಗೆಯೇ, ನಾವು ಈ ಜಗತ್ತಿನಲ್ಲಿ ಸಾಮೂಹಿಕ ಹಿತಾಸಕ್ತಿಯ ಸಿದ್ಧಾಂತಗಳನ್ನು ಕಡೆಗಣಿಸಿದಾಗ ನಿಜವಾಗಿ ಯಾವ ವಿಷಯಗಳು ಪಣಕ್ಕಿಡಲ್ಪಡುತ್ತವೆ ಎಂಬುದನ್ನು ಅವರಿಗೆ ತಿಳಿಸಲು ಸಹಾಯ ಮಾಡುವುದು. ನಾವು ಈ ಎಲ್ಲವನ್ನು ಮಾಡಬಲ್ಲೆವೆಂದರೆ, ಮತ್ತು ಈ ತಿಳುವಳಿಕೆಯನ್ನು ನಮ್ಮ ಜನರಿಗೆ ನೀಡಬಲ್ಲೆವೆಂದರೆ, ನಾವು ಮುಂದಕ್ಕೆ ಸಾಗಲು ಸಾಧ್ಯವಾಗುತ್ತದೆ.ಆ ಸಂದರ್ಭದಲ್ಲಿ ಈ ಧ್ರುವೀಕರಣವನ್ನು ನಾವು ಮೀರಿ ಹೋಗಲು ಸಾಧ್ಯವೆಂದು ನಾನು ನಂಬುತ್ತೇನೆ. ಇದರ ಮೂಲ ಅರ್ಥ ಏನೆಂದರೆ — ನಮ್ಮ ಜನರಿಗೆ ನಿಜವಾಗಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು. ಅದೇ ಒಂದು ಮಹತ್ವದ ಕೊಡುಗೆಯಾಗಿದೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕಾದ ಧರ್ಮಸಭೆ ಅಮೆರಿಕ ಸರ್ಕಾರದ ವಲಸೆ ನೀತಿಗಳ ಕುರಿತು ಪದೇಪದೇ ಪ್ರತಿಕ್ರಿಯೆ ನೀಡಬೇಕಾದ ಪರಿಸ್ಥಿತಿಯಲ್ಲಿ ಕಂಡುಬರುತ್ತಿದೆ. ವಿಶೇಷವಾಗಿ ವಲಸಿಗರ ಪರವಾಗಿ ಧ್ವನಿಯನ್ನು ಎತ್ತಿ ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದೆ. ಈ ಸಂದರ್ಭದಲ್ಲಿ ನೀವು ಪುನಃ ದೃಢಪಡಿಸಲು ಬಯಸುವ ಮೂಲಭೂತ ಸಿದ್ಧಾಂತಗಳು ಯಾವುವು?

ಪ್ರಧಾನ ಗುರು ಬ್ಲೇಸ್ ಕ್ಯೂಪಿಚ್: ನಿಜವಾಗಿ ನೋಡಿದರೆ ಇದರ ಕೇಂದ್ರದಲ್ಲಿರುವ ಒಂದು ಮೂಲಭೂತ ವಿಷಯವೇ ನೀವು ಈಗಾಗಲೇ ಉಲ್ಲೇಖಿಸಿದದ್ದು — ಅದು ಮಾನವ ಗೌರವದ ಗೌರವ. ಇದೇ ಮುಖ್ಯ ಸಿದ್ಧಾಂತವಾಗಿದೆ. ಮಾನವ ಗೌರವವನ್ನು ಕಾಪಾಡಬೇಕು. ಅದು ಕೇವಲ ಜನರನ್ನು ಬಂಧಿಸುವ ಅಥವಾ ಒಟ್ಟುಗೂಡಿಸುವ ವಿಧಾನಗಳಲ್ಲಿ ಮಾತ್ರವಲ್ಲ, ಕುಟುಂಬಗಳನ್ನು ಬೇರ್ಪಡಿಸುವ ಸಂದರ್ಭಗಳಲ್ಲಿಯೂ ಕೂಡ ಮಾನವ ಗೌರವದ ಪ್ರಶ್ನೆ ಎದುರಾಗುತ್ತದೆ.

ಅಮೆರಿಕಾದಲ್ಲಿ ಹಲವು ವರ್ಷಗಳಿಂದ ದಾಖಲೆಗಳಿಲ್ಲದೆ ಬದುಕುತ್ತಿರುವ ಅನೇಕ ಜನರು ತಮ್ಮ ಕುಟುಂಬಗಳ ಬದುಕಿಗೂ ಹಾಗೂ ಸಮಾಜದ ಅಭಿವೃದ್ಧಿಗೂ ಹಲವಾರು ರೀತಿಯಲ್ಲಿ ಕೊಡುಗೆ ನೀಡಿದ್ದಾರೆ ಎಂಬ ಸತ್ಯವನ್ನು ನಾವು ಗೌರವಿಸದಿದ್ದರೆ, ಅದು ಮಾನವ ಗೌರವವನ್ನು ಹಾನಿಗೊಳಿಸುವುದಾಗಿದೆ. ಅದೇ ರೀತಿ, ಮಾನವರನ್ನು ಅವಮಾನಿಸುವ ಅಥವಾ ಅವರನ್ನು ಮಾನವೀಯತೆಯಿಂದ ವಂಚಿಸುವ ರೀತಿಯ ಭಾಷೆಯನ್ನು ಬಳಸಿದಾಗಲೂ ಮಾನವ ಗೌರವವನ್ನು ಉಲ್ಲಂಘಿಸಲಾಗುತ್ತದೆ. ಅದಕ್ಕಾಗಿ ನಾವು ಧ್ವನಿ ಎತ್ತಿದ್ದೇವೆ.

ನವೆಂಬರ್ ತಿಂಗಳಲ್ಲಿ ನಮ್ಮ ಧರ್ಮಾಧ್ಯಕ್ಷರ ಸಮ್ಮೇಳನ ಹೊರಡಿಸಿದ ಪ್ರಕಟಣೆಯಲ್ಲಿ ವಿಶೇಷವಾಗಿ ಒಂದು ಸಾಲು ಗಮನ ಸೆಳೆಯಿತು. ಅದರಲ್ಲಿ ನಾವು ಯಾವುದೇ ವ್ಯತ್ಯಾಸವಿಲ್ಲದೆ ವಲಸಿಗರಾಗಿದ್ದವರನ್ನು ಸಾಮೂಹಿಕವಾಗಿ ನಿರ್ದಾಕ್ಷಿಣ್ಯವಾಗಿ ಹೊರಹಾಕುವ ಕ್ರಮಗಳನ್ನು ವಿರೋಧಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಆ ಹೇಳಿಕೆ ಜಗತ್ತಿನ ಗಮನ ಸೆಳೆಯಿತು.

ಅದೇ ಸಮಯದಲ್ಲಿ ಅದು ನಮ್ಮ ಜನರಿಗೆ ಇಲ್ಲಿ ಯಾವ ವಿಷಯ ಪಣಕ್ಕಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಯಾಕೆಂದರೆ ನಿಜವಾಗಿಯೂ ಆಗುತ್ತಿದ್ದದ್ದು ಇದೇ — ಯಾವುದೇ ಭೇದವಿಲ್ಲದೆ ಜನರನ್ನು ದೊಡ್ಡ ಪ್ರಮಾಣದಲ್ಲಿ ದೇಶದಿಂದ ಹೊರಹಾಕುವ ಕ್ರಮ. ಅದರಲ್ಲೂ, ಜನರು ಇಲ್ಲಿ ಬರಲು ಕಾರಣವಾದ ವಿಭಿನ್ನ ಪರಿಸ್ಥಿತಿಗಳನ್ನು ಪರಿಗಣಿಸದೆ ಈ ಕ್ರಮ ಕೈಗೊಳ್ಳಲಾಗುತ್ತಿತ್ತು. ಇದರ ಜೊತೆಗೆ, ವಲಸೆ ವ್ಯವಸ್ಥೆಯಲ್ಲಿ ಅಗತ್ಯವಾದ ಮಹತ್ವದ ಸುಧಾರಣೆಗಳನ್ನು ಮಾಡಲು ನಾವು ಒಂದು ರಾಷ್ಟ್ರವಾಗಿ ಬಹುಕಾಲದಿಂದ ವಿಫಲವಾಗಿರುವುದೂ ಒಂದು ದೊಡ್ಡ ಸಮಸ್ಯೆಯಾಗಿದೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: ವಲಸೆ ನೀತಿಗಳು ರಾಜಕೀಯವಾಗಿ ಅತ್ಯಂತ ವಿವಾದಾತ್ಮಕ ವಿಷಯವಾಗಿದ್ದು, ಸಾರ್ವಜನಿಕ ಅಭಿಪ್ರಾಯವನ್ನು ಆಳವಾಗಿ ವಿಭಜಿಸುತ್ತಿವೆ. ಈ ಸಂದರ್ಭದಲ್ಲಿ ಕಾನೂನಿನ ಗೌರವವನ್ನು ಕಾಪಾಡುವುದನ್ನೂ ಮತ್ತು ವ್ಯಕ್ತಿಯ ಹಕ್ಕುಗಳ ಗೌರವವನ್ನು ಉಳಿಸುವುದನ್ನೂ ಒಂದೇ ಸಮಯದಲ್ಲಿ ಹೇಗೆ ಸಮನ್ವಯಗೊಳಿಸಬಹುದು?

ಪ್ರಧಾನ ಗುರು ಬ್ಲೇಸ್ ಕ್ಯೂಪಿಚ್: ನಮ್ಮ ನಿಲುವು ಮತ್ತು ಹೇಳಿಕೆಯೇನೆಂದರೆ, ಒಂದು ರಾಷ್ಟ್ರಕ್ಕೆ ತನ್ನನ್ನು ರಕ್ಷಿಸುವ ಹೊಣೆಗಾರಿಕೆಯೂ ಹಕ್ಕುಗಳೂ ಇವೆ. ಅದರಲ್ಲಿ ಅದರ ಗಡಿಗಳನ್ನು ರಕ್ಷಿಸುವುದು ಮತ್ತು ಗಡಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದೂ ಸೇರಿವೆ. ಇದು ಧರ್ಮಸಭೆಗೆ ಯಾವತ್ತೂ ಸಮಸ್ಯೆಯಾಗಿರಲಿಲ್ಲ. ಆದರೆ ಅದೇ ಸಮಯದಲ್ಲಿ, ಈ ಕ್ರಮಗಳು ಜನರ ಗೌರವವನ್ನು ಕುಗ್ಗಿಸುವ ರೀತಿಯಲ್ಲಿ ನಡೆಯಬಾರದು.

ಈ ಎರಡನ್ನೂ ಒಂದೇ ಸಮಯದಲ್ಲಿ ಉಳಿಸಿಕೊಳ್ಳಬಹುದು. ಅವು ಪರಸ್ಪರ ವಿರೋಧಿಯಾಗಿರುವುದಿಲ್ಲ. ಅವುಗಳನ್ನು ಸಮನ್ವಯದಲ್ಲಿ ಇರಿಸಿಕೊಳ್ಳಬಹುದು. ಹಿಂದೆಯೂ ನಾವು ಅದನ್ನು ಸಾಧಿಸಿದ್ದೇವೆ. ಜನರ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬಹುದು. ಜನರು ಭಯದಲ್ಲಿ ಬದುಕಬೇಕಾದ ಪರಿಸ್ಥಿತಿ ಉಂಟಾಗದಂತೆ ಖಚಿತಪಡಿಸಬಹುದು.

ಅಮೆರಿಕಾದಲ್ಲಿ ಕೆಲವು ಸಂದರ್ಭಗಳಲ್ಲಿ ನಾವು ನೋಡಿರುವಂತೆ, ಸಮುದಾಯಗಳು ಒಡೆದುಹೋಗುವ ಪರಿಸ್ಥಿತಿಯೂ ಉಂಟಾಗಿದೆ. ಉದಾಹರಣೆಗೆ ಮಿನೆಸೋಟಾ ರಾಜ್ಯದಲ್ಲಿ ಕಂಡ ಘಟನೆಗಳಂತೆಯೇ, ಜನರು “ಇದು ತಪ್ಪಾಗಿದೆ” ಎಂದು ಎದ್ದು ಹೇಳುವ ಮಟ್ಟಿಗೆ ಪರಿಸ್ಥಿತಿ ತೀವ್ರವಾಗುತ್ತದೆ. ಅದರ ಪರಿಣಾಮವಾಗಿ ನಮ್ಮ ನಗರಗಳಲ್ಲಿ ಸಾಮಾಜಿಕ ಅಶಾಂತಿಯೂ ಉಂಟಾಗುತ್ತದೆ. ಈ ವಿಷಯವನ್ನು ನಿರ್ವಹಿಸಲು ಇನ್ನೂ ಉತ್ತಮ ಮಾರ್ಗವಿದೆ. ಅದಕ್ಕಾಗಿ ನಾವು ನಿರಂತರವಾಗಿ ಶಾಸಕರಿಗೂ ಆಡಳಿತಕ್ಕೂ ಒಂದು ಮಹತ್ವದ ವಲಸೆ ಸುಧಾರಣೆಯನ್ನು ಜಾರಿಗೆ ತರಬೇಕೆಂದು ಕರೆ ನೀಡುತ್ತಿದ್ದೇವೆ. ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ, ಈ ಸಮಸ್ಯೆಯನ್ನು ನಾವೇ ಪರಿಹರಿಸಬಹುದು.

ವ್ಯಾಟಿಕನ್ ಸುದ್ದಿ ಸಂಸ್ಥೆ: ಇಂದಿನ ಕಾಲದಲ್ಲಿ, ವಿಶೇಷವಾಗಿ ಧರ್ಮವನ್ನು ಕೆಲವೊಮ್ಮೆ ಪಕ್ಷಪಾತದ ರಾಜಕೀಯ ಉದ್ದೇಶಗಳಿಗೆ ಬಳಸುವ ಪರಿಸ್ಥಿತಿ ಕಾಣಿಸಿಕೊಳ್ಳುತ್ತಿರುವಾಗ, ಕಥೋಲಿಕ ವಿಶ್ವಾಸಿಗಳು ರಾಜಕೀಯದಲ್ಲಿ ಹೇಗೆ ಭಾಗವಹಿಸಬೇಕು?

ಪ್ರಧಾನ ಗುರು ಬ್ಲೇಸ್ ಕ್ಯೂಪಿಚ್: ನನ್ನ ಅಭಿಪ್ರಾಯದಲ್ಲಿ ನಾವು ಮೊದಲು ಖಚಿತಪಡಿಸಿಕೊಳ್ಳಬೇಕಾದ ವಿಷಯವೆಂದರೆ, ಯಾರೂ ಸಹ ಶುಭಸಂದೇಶವನ್ನು ಯಾವುದೇ ಪಕ್ಷಪಾತದ ರಾಜಕೀಯ ದೃಷ್ಟಿಕೋನಕ್ಕಾಗಿ ಬಲಿಕೊಡಬಾರದು. ನಾವು ಲೋಕಕ್ಕೆ ತರುವುದಾದರೆ ಅದು ಶುಭಸಂದೇಶವದ ಸತ್ಯಗಳು. ನಾನು ಮೊದಲು ಹೇಳಿದಂತೆ, ಧರ್ಮಸಭೆಯ ನಾಯಕರಾಗಿ ನಾವು ಮಾಡಬೇಕಾದ ಮುಖ್ಯ ಕಾರ್ಯವೆಂದರೆ ನಮ್ಮ ಜನರು ಈ ವಿಷಯಗಳನ್ನು ಯಾವ ಭಾಷೆಯಲ್ಲಿ ಚರ್ಚಿಸಬೇಕು ಎಂಬುದನ್ನು ಅವರಿಗೆ ತಿಳಿಸುವುದು.

ಯಾಕೆಂದರೆ ಅವರು ಈ ವಿಷಯಗಳನ್ನು ಕೇವಲ ಪಕ್ಷಪಾತದ ರಾಜಕೀಯದ ಭಾಷೆಯಲ್ಲಿ ಅಥವಾ ಯಾವುದಾದರೂ ನಿರ್ದಿಷ್ಟ ನೀತಿಯನ್ನು ಸಾಧಿಸಲು ಪ್ರಯತ್ನಿಸುವ ಸರ್ಕಾರದ ಭಾಷೆಯಲ್ಲಿ ಚರ್ಚಿಸಲು ಆರಂಭಿಸಿದರೆ, ನಾವು ಸರಿಯಾದ ದಾರಿಯನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ ನಾವು ಈ ಎಲ್ಲಾ ವಿಚಾರಗಳನ್ನು ಶುಭಸಂದೇಶ ನಮಗೆ ನೀಡುವ ದೃಷ್ಟಿಕೋನದ ಮೂಲಕವೇ ನೋಡಬೇಕು.

ಇದು ಧರ್ಮಾಧ್ಯಕ್ಷರ ಕರ್ತವ್ಯ, ಹಾಗೆಯೇ ಧರ್ಮಸಭೆಯ ಧರ್ಮೋಪದೇಶ ಬೋಧಕರ ಕರ್ತವ್ಯವೂ ಆಗಿದೆ. ಜನರಿಗೆ ನಾವು ಯಾರು ಎಂಬುದನ್ನು, ನಾವು ಏಕೆ ಹೇಳುವುದನ್ನು ಹೇಳುತ್ತೇವೆ ಎಂಬುದನ್ನು, ಮತ್ತು ಕ್ರೈಸ್ತರಾಗಿರುವ ನಾವು ಮಾಡುವ ಕಾರ್ಯಗಳ ಹಿಂದಿರುವ ಕಾರಣವೇನು ಎಂಬುದನ್ನು ನೆನಪಿಸುವುದು. ಇವೆಲ್ಲವೂ ಸುವಾರ್ತೆಯ ಮೂಲ ಮೌಲ್ಯಗಳ ಆಧಾರದ ಮೇಲೆ ನಿರ್ಮಿತವಾಗಿವೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: ಪ್ರಧಾನ ಗುರು ಕ್ಯೂಪಿಚ್, ನೀವು ಚಿಕಾಗೋ ನಗರದ   ಮಹಾಧರ್ಮಾಧ್ಯಕ್ಷರಾಗಿದ್ದೀರಿ. ಅದೇ ನಗರದಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಜನಿಸಿದ್ದು ಹಾಗೂ ತಮ್ಮ ಜೀವನದ ಒಂದು ಭಾಗವನ್ನು ಕಳೆದಿದ್ದಾರೆ. ವಿಶ್ವವ್ಯಾಪಿ ಧರ್ಮಸಭೆಗೆ ಜಗದ್ಗುರುವನ್ನು ನೀಡಿರುವುದು ಚಿಕಾಗೋ ನಗರಕ್ಕೆ ಏನರ್ಥ? ಹಾಗೆಯೇ “ಗಾಳಿ ನಗರ” (ವಿಂಡಿ ಸಿಟಿ) ಎಂದೇ ಕರೆಯಲಾಗುವ ಆ ನಗರವು ಜಗದ್ಗುರುಗಳ ಅಧಿಕಾರದ  ಮೊದಲ ವರ್ಷವನ್ನು ಹೇಗೆ ಅನುಭವಿಸಿದೆ?

ಪ್ರಧಾನ ಗುರು ಬ್ಲೇಸ್ ಕ್ಯೂಪಿಚ್: ನನ್ನ ಅಭಿಪ್ರಾಯದಲ್ಲಿ, ನಾವು ಓರ್ವ ಜಗದ್ಗುರುವನ್ನು ನೀಡಿದ್ದೇವೆ ಎಂದು ಹೇಳಲು  ನ್ಯಾಯಸಮ್ಮತವಾದ ಹೆಮ್ಮೆ ಇದೆ.ಅವರು ಕೇವಲ ಚಿಕಾಗೋ ಮೂಲದವರು ಎಂಬುದೇ ವಿಷಯವಲ್ಲ. ಅವರ ಜೀವನವು ಒಂದರ್ಥದಲ್ಲಿ ಚಿಕಾಗೋ ನಗರದ ಸಂಸ್ಕೃತಿಯಿಂದ ರೂಪುಗೊಂಡಿದೆ. ಅಲ್ಲಿ ಜನರು ಬಹಳ ಪರಿಶ್ರಮದಿಂದ ಕೆಲಸ ಮಾಡುತ್ತಾರೆ. ಅವರು ತಮ್ಮ ಕುಟುಂಬಗಳನ್ನು ಪ್ರೀತಿಸುತ್ತಾರೆ. ಹಾಗೆಯೇ ಆ ನಗರದ ಅಂತರರಾಷ್ಟ್ರೀಯ ವೈವಿಧ್ಯತೆಯ ಸ್ವಭಾವವನ್ನು ಮೆಚ್ಚುತ್ತಾರೆ. ಉದಾಹರಣೆಗೆ, ಚಿಕಾಗೋದಲ್ಲಿ ನಾವು 26 ಭಾಷೆಗಳಲ್ಲಿ ಪವಿತ್ರ ಬಲಿಯನ್ನು ಆಚರಿಸುತ್ತೇವೆ.

ಈ ಎಲ್ಲವೂ ಪೂಜ್ಯ ತಂದೆಯವರ ವ್ಯಕ್ತಿತ್ವದ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ. ಇದರಿಂದ ನಮಗೆ ದೊಡ್ಡ ಹೆಮ್ಮೆ ಇದೆ. ಜೂನ್ 14ರಂದು ಚಿಕಾಗೋ ವೈಟ್ ಸಾಕ್ಸ್ ಕ್ರೀಡಾಂಗಣದಲ್ಲಿ ಒಂದು ಆಚರಣೆಯನ್ನು ಆಯೋಜಿಸಲಾಯಿತು. ಸಾವಿರಾರು ಜನರು ಅದರಲ್ಲಿ ಭಾಗವಹಿಸಿದರು. ಅವರಲ್ಲಿ ಕೆಲವರು ಕಥೋಲಿಕ ವಿಶ್ವಾಸಿಗಳೇ ಆಗಿರಲಿಲ್ಲ; ಆದರೆ ಅವರು ಪೂಜ್ಯ ತಂದೆಯವರ ಆಯ್ಕೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲು ಅಲ್ಲಿ ಬಂದಿದ್ದರು. ಅದರ ಜೊತೆಗೆ, ಇದು ಅನೇಕ ಜನರಿಗೆ — ವಿಶೇಷವಾಗಿ ಯುವಜನರಿಗೆ — ತಮ್ಮ ವಿಶ್ವಾಸದ ಅರ್ಥವನ್ನು ಮತ್ತೆ ಆಲೋಚಿಸಲು ಒಂದು ಅವಕಾಶವನ್ನು ನೀಡಿದೆ. ಅವರು ತಯಾರಿಸಿದ ಒಂದು ವೀಡಿಯೊ ಸಂದೇಶದ ಮೂಲಕ ಯುವಜನರನ್ನು ಉದ್ದೇಶಿಸಿ ಮಾತನಾಡಿದ್ದರು, ಮತ್ತು ನಾವು ಆ ಸಂದೇಶವನ್ನು ಪ್ರದರ್ಶಿಸಿದ್ದೇವೆ. ಕಳೆದ ವಾರ ನಡೆದ “ರೈಟ್ ಆಫ್ ಎಲೆಕ್ಷನ್” ವಿಧಿಯ ಸಂದರ್ಭದಲ್ಲಿ, ನಾಲ್ಕು ಕಾರ್ಯಕ್ರಮಗಳಲ್ಲಿ ನಾವು ಗಮನಿಸಿದ ಒಂದು ವಿಷಯವೆಂದರೆ — 20ರಿಂದ 35 ವರ್ಷ ವಯಸ್ಸಿನ ಯುವಜನರಲ್ಲಿ 20 ಶೇಕಡಾ ಹೆಚ್ಚಳ ಕಂಡುಬಂದಿತ್ತು. ಅವರು ಸ್ನಾನದೀಕ್ಷೆ ಸ್ವೀಕರಿಸಲು ಅಥವಾ ಧರ್ಮಸಭೆಯೊಂದಿಗೆ ಸಂಪೂರ್ಣ ಸಮಾಗಮಕ್ಕೆ ಬರಲು ನಿರ್ಧರಿಸಿದ್ದರು. ಹೀಗಾಗಿ ಜನರೊಳಗೆ ಏನೋ ಒಂದು ಚಲನೆ ನಡೆಯುತ್ತಿದೆ ಎಂದು ನನಗೆ ಅನಿಸುತ್ತದೆ. ಅದು ಪರಿಶುದ್ಧ ಆತ್ಮನ ಕಾರ್ಯವೆಂದು ನಾನು ನಂಬುತ್ತೇನೆ. ಆದರೆ ಅದೇ ಸಮಯದಲ್ಲಿ ಪೂಜ್ಯ ತಂದೆಯವರ ಆಯ್ಕೆಯೂ ಈ ಚೈತನ್ಯಕ್ಕೆ ಕಾರಣವಾಗಿದೆ ಎಂದು ನಾನು ಭಾವಿಸುತ್ತೇನೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: ಪೂಜ್ಯರೇ ನೀವು ಇನ್ನೇನ್ನಾದರೂ ಹೇಳಲು ಬಯಸುವಿರಾ?

ಪ್ರಧಾನ ಗುರು ಬ್ಲೇಸ್ ಕ್ಯೂಪಿಚ್: ವಿಶ್ವದ ಈ ಅಶಾಂತ ಮತ್ತು ಉದ್ವಿಗ್ನ ಸಮಯಗಳಲ್ಲಿ ನಾವು ಕ್ರೈಸ್ತರಾಗಿ ಶುಭಸಂದೇಶದ ನೆರಳಿನಲ್ಲಿಯೇ ಉಳಿಯಬೇಕು ಎಂಬುದನ್ನು ನಾನು ವಿಶೇಷವಾಗಿ ಒತ್ತಿಹೇಳಲು ಬಯಸುತ್ತೇನೆ. ಅದೇ ನಮಗೆ ಬೆಳಕಾಗುತ್ತದೆ. ಮುಂದೆ ಸಾಗಬೇಕಾದ ದಾರಿ ಯಾವುದು ಎಂಬುದರ ಬಗ್ಗೆ ನಮಗೆ ಸ್ಪಷ್ಟತೆ ಇರದಿರಬಹುದು, ಅಥವಾ ಕೆಲವೊಮ್ಮೆ ನಾವು ಗೊಂದಲದಲ್ಲಿರಬಹುದು. ಆದರೆ ಯೇಸು ಹೇಳಿದ ಮಾತನ್ನು ನಾವು ನೆನಪಿಸಿಕೊಳ್ಳಬೇಕು: “ನಾನೇ ಮಾರ್ಗ.” ಆದ್ದರಿಂದ ನಾವು ಕಿವಿಗೊಡಬೇಕಾದದ್ದು ಪಕ್ಷಪಾತದ ರಾಜಕೀಯ ಮಾತುಗಳಿಗೆ ಅಲ್ಲ, ಅಥವಾ ಯಾವುದಾದರೂ ದೇಶದ ನಿರ್ದಿಷ್ಟ ರಾಜಕೀಯ ಕಾರ್ಯಕ್ರಮದ ಆಕ್ರೋಶಭರಿತ ವಾದಗಳಿಗೆ ಅಲ್ಲ. ಬದಲಾಗಿ, ಶುಭಸಂದೇಶ ನಮಗೆ ಹೇಳುವ ಸತ್ಯದ ಸಮೀಪದಲ್ಲೇ ಉಳಿಯಬೇಕು. ಧರ್ಮಸಭೆಯ ನಾಯಕತ್ವದಲ್ಲಿ ಇರುವವರಾಗಿ ನಮ್ಮ ಕರ್ತವ್ಯವೆಂದರೆ ನಮ್ಮ ಜನರಿಗೆ ನಾವು ನಿಜವಾಗಿ ಏನು ನಂಬುತ್ತೇವೆ ಮತ್ತು ಏಕೆ ಅದನ್ನು ನಂಬುತ್ತೇವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುವುದು. ನಾವು ಶುಭಸಂದೇಶದ ನೆರಳಿನಲ್ಲಿಯೇ  ಉಳಿದರೆ, ವಿಶ್ವ ರಾಜಕೀಯದಲ್ಲಿಯೂ ಮತ್ತು ಜಗತ್ತಿನ ಘಟನೆಗಳ ಮೇಲೆಯೂ ನಾವು ಪ್ರಭಾವ ಬೀರುವ ಸಾಧ್ಯತೆಯನ್ನು ಹೊಂದಿರುತ್ತೇವೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

05 ಮಾರ್ಚ್ 2026, 12:53