ಪೂಜ್ಯ ಧರ್ಮಾಧ್ಯಕ್ಷರಾದ ಬರಾರ್ದಿ: ‘ಈ ಹಿಂಸಾಚಾರದ ಚಕ್ರದ ಸುಳಿಯೊಳಗೆ ನಾವು ಎಳೆಯಲ್ಪಡದಂತೆ ಪ್ರಾರ್ಥಿಸಬೇಕು’
ಲೇಖಕರು: ಒಲಿವಿಯರ್ ಬೊನ್ನೆಲ್
ಬಹ್ರೈನ್‌ನ ಅವಾಲಿಯಲ್ಲಿರುವ ತನ್ನ ಧರ್ಮಕ್ಷೇತ್ರ ನಿವಾಸದಿಂದ ಮಾತನಾಡಿದ ಉತ್ತರ ಅರೇಬಿಯಾದ ಪ್ರೇಷಿತ ಪ್ರತಿನಿಧಿಯಾದ ಪೂಜ್ಯ ಧರ್ಮಾಧ್ಯಕ್ಷರಾದ ಅಲ್ಡೋ ಬರಾರ್ದಿ, ಪ್ರದೇಶದಲ್ಲಿ ಯುದ್ಧ ಪರಿಸ್ಥಿತಿ ಹೊಸ ಹಂತವನ್ನು ತಲುಪಿರುವುದರಿಂದ ತಮ್ಮ ಗಂಭೀರ ಆತಂಕವನ್ನು ವ್ಯಕ್ತಪಡಿಸಿದರು.
ಇಸ್ರಾಯೇಲ್ ಮತ್ತು ಅಮೆರಿಕಾ ಇರಾನ್ ಮೇಲೆ ವಾಯು ದಾಳಿಗಳನ್ನು ನಡೆಸಿದ್ದು, ಅದಕ್ಕೆ ಪ್ರತಿಯಾಗಿ ಇಸ್ಲಾಮಿಕ್ ಗಣರಾಜ್ಯವು ಹಲವಾರು ಗಲ್ಫ್ ರಾಷ್ಟ್ರಗಳತ್ತ ಕ್ಷಿಪಣಿ ದಾಳಿ ನಡೆಸಿದೆ. ಈ ರಾಷ್ಟ್ರಗಳಲ್ಲಿ ಅಮೆರಿಕಾ ಸೇನಾ ನೆಲೆಗಳೂ ಇರುವುದಾಗಿ ತಿಳಿದುಬಂದಿದೆ.
ಫೆಬ್ರವರಿ 28, ಶನಿವಾರ — ಬಾಂಬ್ ದಾಳಿಗಳ ಮೊದಲ ದಿನವೇ — ಧರ್ಮಾಧ್ಯಕ್ಷ ಬರಾರ್ದಿ ತಮ್ಮ ಧರ್ಮಕ್ಷೇತ್ರ ವ್ಯಾಪ್ತಿಯಲ್ಲಿರುವ ಗುರುಗಳು ಮತ್ತು ಧಾರ್ಮಿಕ ಸಹೋದರ ಸಹೋದರಿಯರಿಗೆ ಪ್ರಕಟಣೆ ಕಳುಹಿಸಿದರು. ಅವರ ಧರ್ಮಕ್ಷೇತ್ರ ಅರೇಬಿಯಾ ಉಪಖಂಡದ ನಾಲ್ಕು ರಾಷ್ಟ್ರಗಳನ್ನು (ಕುವೈತ್, ಸೌದಿ ಅರೇಬಿಯಾ, ಬಹ್ರೈನ್ ಮತ್ತು ಕತಾರ್) ಒಳಗೊಂಡಿದೆ.
“ಇದು ಅನಿಶ್ಚಿತತೆಯ ಕಾಲಘಟ್ಟ” ಎಂದು ಅವರು ಹೇಳಿ, ಎಲ್ಲರೂ ಸುರಕ್ಷಿತ ಆಶ್ರಯಗಳಲ್ಲಿ ಇರಬೇಕು, ಏಕಮನಸ್ಸಿನಿಂದ ಪ್ರಾರ್ಥಿಸಬೇಕು ಹಾಗೂ ಸ್ಥಳೀಯ ನಾಗರಿಕ ಅಧಿಕಾರಿಗಳ ಭದ್ರತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಭಾನುವಾರದ ಏಂಜಲಸ್ ಪ್ರಾರ್ಥನೆಯ ಸಂದರ್ಭದಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಶಾಂತಿಗಾಗಿ ಮನವಿ ಮಾಡಿದ ಬಳಿಕ, ನೆಲಮಟ್ಟದ ಸ್ಥಿತಿಗತಿಗಳ ಕುರಿತು ಧರ್ಮಾಧ್ಯಕ್ಷ ಬರಾರ್ದಿ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
[ಧರ್ಮಾಧ್ಯಕ್ಷರಾದ ಬರಾರ್ದಿ:] ನಾವು, ಖಂಡಿತವಾಗಿಯೂ, ಈ ಭಾನುವಾರ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಹಸ್ತಕ್ಷೇಪವನ್ನು ನಿರೀಕ್ಷಿಸುತ್ತಿದ್ದೆವು, ಏಕೆಂದರೆ ಪರಿಸ್ಥಿತಿ ನಿಜವಾಗಿಯೂ ಅತ್ಯಂತ ಸಂಕೀರ್ಣವಾಗಿದೆ. ಈ ಪ್ರದೇಶವು ಈಗಾಗಲೇ ಭೂರಾಜಕೀಯ ಪರಿಸ್ಥಿತಿಗಳಿಂದ ಮತ್ತು ಆರ್ಥಿಕ ಪರಿಣಾಮಗಳಿಂದ ಗೊಂದಲಮಯವಾಗಿದೆ. ಈಗ ಈ ಇಸ್ರಾಯೇಲ್–ಅಮೆರಿಕಾ ಹಸ್ತಕ್ಷೇಪದಿಂದ — ನಾನು “ನರಕ” ಎಂದು ಹೇಳುವುದಿಲ್ಲ — ಆದರೆ ನಾವು ನಿರೀಕ್ಷಿಸದಂತಹ ಸ್ಥಿತಿ ಉಂಟಾಗಿದೆ.
ಇನ್ನೊಂದೆಡೆ, ಇರಾನ್ ತನ್ನ ಸಮಾಜದ ಹೃದಯಭಾಗದಲ್ಲೇ ಹೊಡೆತ ಅನುಭವಿಸಿದ ಕಾರಣ, ಅದು ನಿಯಂತ್ರಣವಿಲ್ಲದ ರೀತಿಯಲ್ಲಿ ಪ್ರತಿಕ್ರಿಯಿಸಬಹುದು ಎಂಬ ಆತಂಕವೂ ನಮ್ಮಲ್ಲಿತ್ತು. ಇದರಿಂದ ಇನ್ನಷ್ಟು ದ್ವೇಷ ಮತ್ತು ಪ್ರತೀಕಾರ ಮನೋಭಾವ ಉಕ್ಕಿಬಂದಿದೆ. ನಾವು ಈಗ “ನೀನು ನನ್ನನ್ನು ಹೊಡೆದರೆ, ನಾನು ನಿನ್ನನ್ನು ಹೊಡೆಯುತ್ತೇನೆ; ನೀನು ನನ್ನ ಮೇಲೆ ದಾಳಿ ಮಾಡಿದರೆ, ನಾನು ನಿನ್ನ ಮೇಲೆ ದಾಳಿ ಮಾಡುತ್ತೇನೆ” ಎಂಬ ತರ್ಕದ ವಲಯದಲ್ಲಿ ಸಿಲುಕಿಕೊಂಡಿದ್ದೇವೆ.
ಅನೇಕ ಗಲ್ಫ್ ನಗರಗಳು ಪ್ರತಿದಾಳಿಯಾಗಿ ಕ್ಷಿಪಣಿ ದಾಳಿಗೆ ಗುರಿಯಾಗಿವೆ. ನೀವು ಇರುವ ಬಹ್ರೈನ್‌ನಲ್ಲಿ ಮತ್ತು ಪ್ರದೇಶದ ಇತರೆ ರಾಷ್ಟ್ರಗಳಲ್ಲಿ ಪ್ರಸ್ತುತ ಪರಿಸ್ಥಿತಿ ಹೇಗಿದೆ?
ರೋಮ್ ಸಮಯ ಮಧ್ಯಾಹ್ನ 1:00ರ ಸುಮಾರಿಗೆ ಇಲ್ಲಿನ ಧರ್ಮಾಧ್ಯಕ್ಷರ ನಿವಾಸದ ಮೇಲೆ ಒಂದು ಕ್ಷಿಪಣಿ ಹಾದುಹೋಯಿತು. ಅದರ ಅವಶೇಷಗಳನ್ನು ಬಹ್ರೈನ್ ಭದ್ರತಾ ಪಡೆಗಳು ಮಧ್ಯದಲ್ಲೇ ತಡೆದರೂ, ಅವು ಪ್ರಧಾನ ದೇವಾಲಯದ ಸಮೀಪ ಬಿದ್ದವು. ಪ್ರಧಾನ ದೇವಾಲಯ ಹೊಸದಾಗಿರುವ ಕಾರಣ, ದೇವಾಲಯದ ಸಮೀಪದಲ್ಲೇ ಬೆಂಕಿ ಕಾಣಿಸಿಕೊಂಡದ್ದರಿಂದ ನಾವೂ ಭಯಪಟ್ಟೆವು
ನೆನ್ನೆಯಿಂದ ಕ್ಷಿಪಣಿ ಉಡಾವಣೆಗಳು ನಡೆಯುತ್ತಿವೆ. ಆದ್ದರಿಂದ ಯಾವುದೇ ಅಪಾಯ ತಪ್ಪಿಸಲು ನಾವು ಎಲ್ಲಾ ದೇವಾಲಯಗಳನ್ನು ಮುಚ್ಚಿದ್ದೇವೆ. ನೇರವಾಗಿ ಧರ್ಮಸಭೆ ದೇವಾಲಯಗಳು ಗುರಿಯಾಗಿಲ್ಲದಿದ್ದರೂ, ಅವಶೇಷಗಳು ಮತ್ತು ಸ್ಫೋಟಗಳು ಕಟ್ಟಡಗಳಿಗೆ ಹಾನಿ ಉಂಟುಮಾಡಬಹುದು ಹಾಗೂ ಮುಖ್ಯವಾಗಿ ಜನರಿಗೆ ಗಾಯವಾಗುವ ಸಾಧ್ಯತೆ ಇದೆ. ಪರಿಸ್ಥಿತಿ ಮುಂದುವರಿಯುತ್ತಿದೆ — ನಿರಂತರವಾಗಿ ಎಚ್ಚರಿಕೆ ಸೈರನ್‌ಗಳು ಮೊಳಗುತ್ತಿವೆ. ಹೀಗಾಗಿ ಎಲ್ಲರೂ ಮನೆಯಲ್ಲೇ ಉಳಿದಿದ್ದಾರೆ. ಭದ್ರತಾ ಕಾರಣಗಳಿಂದ ಹೊರಗೆ ಹೋಗುವುದಿಲ್ಲ. ಜೀವನದ ವೇಗ ಕುಂಠಿತಗೊಂಡಿದ್ದು, ನಮ್ಮ ದೇವಾಲಯಗಳು ಮುಚ್ಚಲ್ಪಟ್ಟಿವೆ.
ಗುರುಗಳು ಪ್ರತಿಸಂಜೆ ಶಾಂತಿಗಾಗಿ ಪವಿತ್ರ ಬಲಿಪೂಜೆ ಸಲ್ಲಿಸುತ್ತಿದ್ದಾರೆ; ಪ್ರತಿಯೊಂದು ಧರ್ಮಕೇಂದ್ರದಲ್ಲಿ ಎಲ್ಲ ಗುರುಗಳು ಸೇರಿ ಶಾಂತಿಯ ಬಲಿಪೂಜೆ ಸಲ್ಲಿಸಬೇಕು ಎಂದು ನಾನು ವಿನಂತಿಸಿದ್ದೆ. ಮನಾಮಾ ಮತ್ತು ಕುವೈತ್‌ನಿಂದ ಇದು ವೀಡಿಯೋ ಮೂಲಕ ನಡೆಯುತ್ತಿದೆ. ಜನರು ಭಾಗವಹಿಸಲು ಆಸಕ್ತಿ ವ್ಯಕ್ತಪಡಿಸಿದರೂ, ನಾವು ಯಾವುದೇ ಅಪಾಯ ತೆಗೆದುಕೊಳ್ಳಲು ಇಷ್ಟಪಡುತ್ತಿಲ್ಲ.
ಉದಾಹರಣೆಗೆ ಕತಾರ್‌ನಲ್ಲಿ, ಪೊಲೀಸ್ ಅಧಿಕಾರಿಗಳು ದೇವಾಲಯವನ್ನು ಮುಚ್ಚಿದ್ದಾರೆ; ಸಂಪೂರ್ಣ ಧಾರ್ಮಿಕ ವಲಯವನ್ನು ಬಂದ್ ಮಾಡಲಾಗಿದೆ — ಯಾರೂ ಒಳಗೆ ಹೋಗುವಂತಿಲ್ಲ, ಹೊರಗೂ ಬರುವಂತಿಲ್ಲ. ಧಾರ್ಮಿಕ ಕಟ್ಟಡಗಳ ಸಮೀಪವೂ ಅವಶೇಷಗಳು ಬಿದ್ದಿವೆ. ಎಲ್ಲರೂ ಪ್ರಾರ್ಥನೆಯಲ್ಲಿ ನಿರತರಾಗಿದ್ದು, ಪರಿಸ್ಥಿತಿ ಶಾಂತವಾಗುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.
ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಹಿಂಸಾಚಾರದ ಚಕ್ರವು “ಹಿಂತಿರುಗಲಾರದ ಪ್ರಪಾತಕ್ಕೆ” ಇಳಿಯುವ ಮೊದಲು ಅದನ್ನು ನಿಲ್ಲಿಸುವುದು ನಾಯಕರ ನೈತಿಕ ಹೊಣೆಗಾರಿಕೆ ಎಂದು ಹೇಳಿದ್ದಾರೆ. ನೀವು ಇರುವ ಸ್ಥಳದಲ್ಲಿ ಆ ಅಪಾಯವನ್ನು ಅನುಭವಿಸುತ್ತಿದ್ದೀರಾ?
ಹೌದು. ಏಕೆಂದರೆ ನಿಮಗೆ ತಿಳಿದಿರುವಂತೆ, ಜಗತ್ತಿನ ಈ ಭಾಗದಲ್ಲಿ ಅಸಮಾಧಾನಗಳು ಆಳವಾಗಿ ಬೇರೂರಿವೆ; ಅವು ಶತಮಾನಗಳ ಇತಿಹಾಸ ಹೊಂದಿವೆ. ಇಂತಹ ಸಂದರ್ಭಗಳಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಾಗ, ಜನಾಂಗಗಳ ಗೌರವ ಮತ್ತು ಸ್ವಾಭಿಮಾನಕ್ಕೆ ಹೊಡೆತ ಬಿದ್ದಾಗ, ಮತ್ತು ದಾಳಿಗಳು ಹಿಂಸಾತ್ಮಕವಾಗಿ ನಡೆದಾಗ, ಪ್ರತಿಕ್ರಿಯೆಯೂ ಸಮಾನವಾಗಿ ಹಿಂಸಾತ್ಮಕವಾಗುತ್ತದೆ.
ಖಂಡಿತವಾಗಿ, ನಾವು ಹಿಂಸಾಚಾರದ ಚಕ್ರವ್ಯೂಹಕ್ಕೆ ಪ್ರವೇಶಿಸುತ್ತಿದ್ದೇವೆ; ಅದು ನಮ್ಮನ್ನು ಎಲ್ಲಿ ಕೊಂಡೊಯ್ಯಬಹುದು ಎಂಬುದು ನಮಗೆ ತಿಳಿದಿಲ್ಲ. ಪ್ರತೀಕಾರ ಮತ್ತು ಪರಸ್ಪರ ಹಿಂಸಾಚಾರದ ಚಕ್ರದಲ್ಲಿ ನಾವು ಒಳಗೆಳೆಯಲ್ಪಡುವ ಅಪಾಯವಿದೆ; ಅದು ನಮ್ಮನ್ನೆಲ್ಲಾ ತನ್ನೊಳಗೆ ಎಳೆದುಹಾಕಬಹುದು.
ಶಾಂತಿ ಪುನಃ ಸ್ಥಾಪನೆಯಾಗಲಿ ಮತ್ತು ನಾವು ಈ ಹಿಂಸಾಚಾರದ ಚಕ್ರದಲ್ಲಿ ಒಳಗೆಳೆಯಲ್ಪಡದಿರಲಿ ಎಂದು ನಾವು ಪ್ರಾರ್ಥಿಸಬೇಕು. ಎರಡೂ ದೇಶಗಳೂ ತಮಗೆ ದಾಳಿ ನಡೆದಿದೆ ಎಂಬ ಭಾವನೆಯಿಂದ ಯುದ್ಧಕ್ಕೆ ಇಳಿದರೆ, ಸಂಪೂರ್ಣ ಪ್ರದೇಶವೇ ಸ್ಫೋಟಗೊಳ್ಳುವ ಅಪಾಯ ಉಂಟಾಗುತ್ತದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).