2026.03.13 Margaret Karram 2026.03.13 Margaret Karram  (JAVIER GARCIA)

ಫೋಕೋಲಾರೆ ಚಳುವಳಿಯ ಅಧ್ಯಕ್ಷೆಯಾಗಿ ಮಾರ್ಗರೇಟ್ ಕರ್ರಾಮ್ ಮತ್ತೆ ಆಯ್ಕೆ

ಫೋಕೋಲಾರೆ ಚಳುವಳಿಯ ಅಧ್ಯಕ್ಷೆಯಾಗಿರುವ ಮಾರ್ಗರೇಟ್ ಕರ್ರಾಮ್ ಅವರನ್ನು ಮತ್ತೊಮ್ಮೆ ಐದು ವರ್ಷಗಳ ಅವಧಿಗೆ (2026–2031) ಅಧ್ಯಕ್ಷೆಯಾಗಾಗಿ ಆಯ್ಕೆ ಮಾಡಲಾಗಿದೆ. ಅರ್ಜೆಂಟೀನಾದ ವಂ. ಗುರು ರೊಬೆರ್ಟೋ ಅಲ್ಮಾದಾ ಹೊಸ ಸಹಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವ್ಯಾಟಿಕನ್ ವರದಿ

ಮಾರ್ಚ್ 12ರಂದು ನಡೆದ ಫೋಕೋಲಾರೆ ಚಳುವಳಿಯ ಸಾಮಾನ್ಯ ಮಹಾಸಭೆಯಲ್ಲಿ ಮಾರ್ಗರೇಟ್ ಕರ್ರಾಮ್ ಅವರನ್ನು ಅಂತರರಾಷ್ಟ್ರೀಯ ಫೋಕೋಲಾರೆ ಚಳುವಳಿಯ ಅಧ್ಯಕ್ಷೆಯಾಗಿಯಾಗಿ ಮರುಆಯ್ಕೆ ಮಾಡಲಾಯಿತು. ಮತದಾನ ಹಕ್ಕು ಹೊಂದಿದ್ದ 261 ಪ್ರತಿನಿಧಿಗಳಲ್ಲಿ ಎರಡು-ಮೂರನೇ ಭಾಗಕ್ಕಿಂತ ಹೆಚ್ಚು ಮತಗಳನ್ನು ಅವರು ಪಡೆದರು. ಈ ಪ್ರತಿನಿಧಿಗಳು ಐದು ಖಂಡಗಳಲ್ಲಿರುವ ಫೋಕೋಲಾರೆ ಸಮುದಾಯಗಳನ್ನು ಪ್ರತಿನಿಧಿಸುತ್ತಾರೆ.

ಆಯ್ಕೆಯ ನಂತರ  ಕರ್ರಾಮ್,ಆ ದಿನದ ಬಲಿಪೂಜೆಯಲ್ಲಿ ಓದಲಾದ ಕೀರ್ತನೆ 95ನ್ನು ಉಲ್ಲೇಖಿಸಿ;” ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ, ನಿಮ್ಮ  ಹೃದಯವನು ಕಲ್ಲಾಗಿಸಿಕೊಳ್ಳದಿರಿ” ಎಂದು ಈ ಆಯ್ಕೆಯನ್ನು ಸ್ವೀಕರಿಸಿದರು.  “ದೇವರ ಕೃಪೆಯಿಂದ ಮತ್ತು ನಿಮ್ಮ ಸಹಾಯದಿಂದ ನಾನು ಇದನ್ನು ಸ್ವೀಕರಿಸುತ್ತೇನೆ.ಈ ಹೊಸ ಕರೆಯನ್ನು ಸ್ವೀಕರಿಸುತ್ತಾ, ನಿಮ್ಮೆಲ್ಲರೊಂದಿಗೆ ಸೇರಿ ಧರ್ಮಸಭೆ, ಚಳುವಳಿ ಮತ್ತು ಮಾನವಕುಲದ ಸೇವೆಗೆ ಸಂಪೂರ್ಣ ಸಮರ್ಪಣೆಯೊಂದಿಗೆ, ದೇವರೊಂದಿಗೆ ನನ್ನ ಸಮ್ಮತಿಯನ್ನು ಮತ್ತೊಮ್ಮೆ ನವೀಕರಿಸುತ್ತೇನೆ” ಎಂದು ಹೇಳಿದರು.

ಅದೇ ಮಹಾಸಭೆಯಲ್ಲಿ ಅರ್ಜೆಂಟೀನಾದ ವಂ. ಗುರು ರೊಬೆರ್ಟೋ ಅಲ್ಮಾದಾ ಅವರನ್ನು ಚಳುವಳಿಯ ಹೊಸ ಸಹಾಧ್ಯಕ್ಷರಾಗಿ ಎರಡು-ಮೂರನೇ ಭಾಗದ ಬಹುಮತದಿಂದ ಆಯ್ಕೆ ಮಾಡಲಾಯಿತು. ಅವರು ಜೆಸೂಸ್ ಮೊರಾನ್ ಅವರ ಉತ್ತರಾಧಿಕಾರಿಯಾಗಿದ್ದಾರೆ. ಮೊರಾನ್ ಅವರು 2021ರ ಜೂನ್ 11ರಂದು ಸಾಮಾನ್ಯರು, ಕುಟುಂಬ ಮತ್ತು ಜೀವನದ ವಿಭಾಗ ಹೊರಡಿಸಿದ ಆದೇಶದ ಪ್ರಕಾರ ತಮ್ಮ ಎರಡನೇ ಮತ್ತು ಅಂತಿಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 

ಅಲ್ಮಾದಾ, “ದೇವರ ಕೃಪೆಯಿಂದ ಮತ್ತು ನಮ್ಮ ಮಾತೆಯ ರಕ್ಷಣೆಯಡಿಯಲ್ಲಿ ನಾನು ಈ ಆಯ್ಕೆಯನ್ನು ಸ್ವೀಕರಿಸುತ್ತೇನೆ.ನನಗೆ ನೀಡಲಾದ ಈ ಹೊಸ ಜವಾಬ್ದಾರಿಗಾಗಿ ನನ್ನ ಶಕ್ತಿ, ಬುದ್ಧಿ ಮತ್ತು ಹೃದಯವನ್ನು ಸಮರ್ಪಿಸುತ್ತೇನೆ”  ಎಂದು ಹೇಳಿದರು.

ಫೋಕೋಲಾರೆ ಚಳುವಳಿಯ ನಿಯಮಾವಳಿಗಳ ಪ್ರಕಾರ, ಈ ಚುನಾವಣೆಯನ್ನು ಜಗದ್ಗುರುಗಳ ಅಧಿಕಾರ ಪೀಠದ ಸಂಬಂಧಿತ ಸಾಮಾನ್ಯರು, ಕುಟುಂಬ ಮತ್ತು ಜೀವನದ ವಿಭಾಗ ದೃಢೀಕರಿಸಿದೆ.

ಸಂವಾದಕ್ಕೆ ಸಮರ್ಪಿತ ಜೀವನ

ಚಳುವಳಿಯ ಸ್ಥಾಪಕಿ ಕಿಯಾರಾ ಲುಬಿಚ್ ನಂತರ ಫೋಕೋಲಾರೆ ಚಳುವಳಿಯ ಮೂರನೇ ಅಧ್ಯಕ್ಷೆಯಾಗಿರುವವರು ಮಾರ್ಗರೇಟ್ ಕರ್ರಾಮ್. ಅವರು ಮೊದಲ ಬಾರಿಗೆ 2021ರಲ್ಲಿ ಈ ಹೊಣೆಗಾರಿಕೆಯನ್ನು ಸ್ವೀಕರಿಸಿದರು. ಇವರು ಡ್ಮಾರಿಯಾ ವೋಚೆ ಅವರ ಉತ್ತರಾಧಿಕಾರಿಯಾಗಿದ್ದಾರೆ; ವೋಚೆ ಅವರು 2025ರ ಜೂನ್ 20ರಂದು ನಿಧನರಾದರು.

ಇಸ್ರಾಯೇಲ್ ದೇಶದ ಹೈಫಾದಲ್ಲಿ ಜನಿಸಿದ ಕ್ರೈಸ್ತ ಅರಬ್ ಮಹಿಳೆಯಾದ ಕರ್ರಾಮ್ ಬಹುಧರ್ಮೀಯ ಪರಿಸರದಲ್ಲಿ ಬೆಳೆದರು. ವಿವಿಧ ಸಂಸ್ಕೃತಿಗಳು ಮತ್ತು ಧರ್ಮಗಳ ನಡುವೆ ಸಂವಾದ ಬೆಳೆಸುವ ಬಲವಾದ ಬದ್ಧತೆಯನ್ನು ಅವರು ಬೆಳೆಸಿಕೊಂಡರು. ಲಾಸ್ ಏಂಜೆಲಿಸ್‌ನ ಅಮೇರಿಕನ್ ಜ್ಯೂಯಿಷ್ ವಿಶ್ವವಿದ್ಯಾಲಯದಲ್ಲಿ ಅವರು ಯಹೂದಿ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಿದರು. ನಂತರ ಅವರು ಪವಿತ್ರ ಭೂಮಿಯಲ್ಲಿ ಫೋಕೋಲಾರೆ ಚಳುವಳಿಯೊಳಗೆ ಹಲವು ಜವಾಬ್ದಾರಿಗಳನ್ನು ವಹಿಸಿಕೊಂಡರು. ಜೊತೆಗೆ ಜೆರುಸಲೇಮಿನ ಇಟಲಿಯ ಮಹಾ ರಾಯಭಾರಿ ಕಚೇರಿಯಲ್ಲಿ 14 ವರ್ಷಗಳ ಕಾಲ ಕೆಲಸ ಮಾಡಿದರು.

ಅಂತರಧರ್ಮ ಸಂವಾದಕ್ಕೆ ನೀಡಿದ ತಮ್ಮ ಕೊಡುಗೆಯಿಗಾಗಿ ಅವರು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿದ್ದಾರೆ. ಅವರಿಗೆ ಮೌಂಟ್ ಸಿಯೋನ್ ಪ್ರಶಸ್ತಿ (2013) ಮತ್ತು ಸಾಂತಾ ರಿತಾ ಪ್ರಶಸ್ತಿ (2016) ಲಭಿಸಿವೆ.

2014ರಲ್ಲಿ ಅವರು ವ್ಯಾಟಿಕನ್ ಉದ್ಯಾನವನಗಳಲ್ಲಿ ನಡೆದ ಶಾಂತಿಯ ಪ್ರಾರ್ಥನೆ ಕಾರ್ಯಕ್ರಮದಲ್ಲಿ, ಪೂಜ್ಯ ಜಗದ್ಗುರುಗಳು 14ನೇ ಲಿಯೋ ಹಾಗೂ ಇಸ್ರಾಯೇಲ್ ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷರೊಂದಿಗೆ ಭಾಗವಹಿಸಿದ್ದರು. 2021ರಲ್ಲಿ ಅಧ್ಯಕ್ಷೆಯಾಗಿದ ನಂತರ ಅವರು ಚಳುವಳಿಯ ಸಾರ್ವತ್ರಿಕ ಮತ್ತು ಅಂತರಧರ್ಮ ಸಂವಾದದ ಬದ್ಧತೆಯನ್ನು ಉತ್ತೇಜಿಸಿದ್ದಾರೆ. 2023ರಲ್ಲಿ ಅವರನ್ನು ಸಾಮಾನ್ಯರು, ಕುಟುಂಬ ಮತ್ತು ಜೀವನದ ವಿಭಾಗದ ಸದಸ್ಯೆಯಾಗಿ ನೇಮಕ ಮಾಡಲಾಯಿತು. ಅವರು ಏಷ್ಯಾ, ಅಮೆರಿಕಾ, ಯೂರೋಪ್ ಮತ್ತು ಪೆಸಿಫಿಕ್ ಪ್ರದೇಶಗಳಲ್ಲಿ ವ್ಯಾಪಕವಾಗಿ ಪ್ರಯಾಣಿಸಿ ಫೋಕೋಲಾರೆ ಸಮುದಾಯಗಳು ಮತ್ತು ಸಂವಾದದಲ್ಲಿ ತೊಡಗಿರುವ ಸಂಸ್ಥೆಗಳನ್ನು ಭೇಟಿ ಮಾಡಿದ್ದಾರೆ.

ಹೊಸ ಸಹಾಧ್ಯಕ್ಷರು

ಅರ್ಜೆಂಟೀನಾದ ಫೋಕೋಲಾರೆ ಗುರುಗಳಾದ ವಂ. ರೊಬೆರ್ಟೋ ಅಲ್ಮಾದಾ, ಮನೋವೈದ್ಯ ಹಾಗೂ ಮನೋಚಿಕಿತ್ಸಕರಾಗಿದ್ದಾರೆ. ಅವರು ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ಉರುಗ್ವೆ ಮತ್ತು ಪರಾಗ್ವೆಯಲ್ಲಿ ಅರ್ಥ ಆಧಾರಿತ ಚಿಕಿತ್ಸೆ (ಲೋಗೊಥೆರಪಿ) ಶಾಲೆಯನ್ನು ಉತ್ತೇಜಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಪ್ರದೇಶಗಳಿಗಾಗಿ ಕಾರ್ಯನಿರ್ವಹಿಸುವ ಸೋಫಿಯಾ ವಿಶ್ವವಿದ್ಯಾಲಯ ಸಂಸ್ಥೆ ಹಾಗೂ ಇಟಲಿಯ ಕಾಸೆರ್ತಾದ ಲೋಗೋಸ್ ಸಂಸ್ಥೆಗಳಿಗೆ ಸಂಬಂಧಿಸಿದ ಆಧ್ಯಾತ್ಮಿಕ ಮತ್ತು ಮಾನಸಿಕ ಮಾರ್ಗದರ್ಶನ ಕಾರ್ಯಕ್ರಮಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.

ಅವರ ಧಾರ್ಮಿಕ ಸೇವೆ ವಿಶೇಷವಾಗಿ ನ್ಯೂ ಫ್ಯಾಮಿಲೀಸ್ ಚಳುವಳಿ ಮೂಲಕ ಕುಟುಂಬ ಸೇವೆಯ ಮೇಲೆ ಕೇಂದ್ರೀಕೃತವಾಗಿತ್ತು. ದಂಪತಿಗಳು ಮತ್ತು ಸಮುದಾಯಗಳನ್ನು ಬೆಂಬಲಿಸುವ ಕಾರ್ಯದಲ್ಲಿ ಅವರು ತೊಡಗಿಕೊಂಡಿದ್ದಾರೆ. ಜೊತೆಗೆ ಹಲವಾರು ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ಗುರುಗಳು, ಧಾರ್ಮಿಕ ಸಮುದಾಯಗಳು ಮತ್ತು ಕಥೋಲಿಕ ಶಿಕ್ಷಣತಜ್ಞರಿಗೆ ಮಾರ್ಗದರ್ಶನ ನೀಡಿದ್ದಾರೆ.

ಮುಂದುವರಿಯಲಿರುವ ಸಾಮಾನ್ಯ ಮಹಾಸಭೆ 

ಮಾರ್ಚ್ 1ರಿಂದ 21ರವರೆಗೆ ನಡೆಯುತ್ತಿರುವ ಫೋಕೋಲಾರೆ ಸಾಮಾನ್ಯ ಮಹಾಸಭೆ ಮುಂದಿನ ದಿನಗಳಲ್ಲಿ ಚಳುವಳಿಯ ಸಾಮಾನ್ಯ ಸಲಹೆಗಾರರ ಆಯ್ಕೆ ಹಾಗೂ ಅದರ ನಿಯಮಾವಳಿಗಳಲ್ಲಿ ಸಾಧ್ಯವಿರುವ ತಿದ್ದುಪಡಿ ಕುರಿತು ಚರ್ಚೆಗಳೊಂದಿಗೆ ಮುಂದುವರಿಯಲಿದೆ. ಮಾರ್ಚ್ 21ರಂದು ಮಹಾಸಭೆಯಲ್ಲಿ ಭಾಗವಹಿಸಿದವರು ಮತ್ತು ವೀಕ್ಷಕರು ಪೂಜ್ಯ ಜಗದ್ಗುರು 14ನೇ ಲಿಯೋ ಅವರನ್ನು ಖಾಸಗಿಯಾಗಿ ಭೇಟಿ ಮಾಡಲಿದ್ದಾರೆ.

ಫೋಕೋಲಾರೆ ಚಳುವಳಿ

‘ಫೋಕೋಲಾರೆ’ ಎಂಬ ಪದಕ್ಕೆ ಕನ್ನಡದಲ್ಲಿ ‘ಅಗ್ಗಿಕುಂಡ’ ಅಥವಾ ‘ಒಲೆಯ ಬೆಂಕಿ’ ಎಂಬ ಅರ್ಥವಿದೆ — ಅದು ಮನೆಗೆ ಉಷ್ಣತೆ ಮತ್ತು ಒಗ್ಗಟ್ಟು ನೀಡುವ ಬೆಂಕಿಯನ್ನು ಸೂಚಿಸುತ್ತದೆ. 1943ರಲ್ಲಿ ಇಟಲಿಯ ಕಿಯಾರಾ ಲುಬಿಚ್ ಆರಂಭಿಸಿದ ಈ ಕಥೋಲಿಕ ಚಳುವಳಿ, ಜನರ ನಡುವೆ ಪ್ರೀತಿ, ಏಕತೆ ಮತ್ತು ಸಹೋದರತ್ವವನ್ನು ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತದೆ. ವಿವಿಧ ಧರ್ಮಗಳು ಮತ್ತು ಸಂಸ್ಕೃತಿಗಳ ಜನರು ಶಾಂತಿಯೊಂದಿಗೆ ಬದುಕಲು ಪ್ರೇರೇಪಿಸುವುದೇ ಇದರ ಮುಖ್ಯ ಧ್ಯೇಯವಾಗಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

13 ಮಾರ್ಚ್ 2026, 19:29