ಹುಡುಕಿ

2022.09.30 Sunday Gospel Reflections 2022.09.30 Sunday Gospel Reflections 

ದೇವನ ದಿನದ ಚಿಂತನೆ: ಪುನರುತ್ಥಾನದ ನಿಶ್ಚಿತತೆ

ಧರ್ಮಸಭೆ ತಪಸ್ಸು ಕಾಲದ ಐದನೇ ಭಾನುವಾರವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ವಂ. ಗುರು ಲೂಕ್ ಗ್ರೆಗೊರಿ, OFM ಅವರು “ಪುನರುತ್ಥಾನದ ನಿಶ್ಚಿತತೆ” ಎಂಬ ವಿಷಯದ ಕುರಿತು ಚಿಂತನೆಯನ್ನು ಹಂಚಿಕೊಂಡಿದ್ದಾರೆ.

ಲೇಖಕರು:ವಂ. ಗುರು ಲೂಕ್ ಗ್ರೆಗೊರಿ, OFM

ಅನಿಶ್ಚಿತತೆ ಮತ್ತು ದುಃಖಗಳಿಂದ ಗುರುತಿಸಲ್ಪಟ್ಟಿರುವ ಈ ಕಾಲದಲ್ಲಿ, ಪುನರುತ್ಥಾನದ ವಾಗ್ದಾನವು ಅನೇಕರಿಗೆ ಭರವಸೆಯ ಬೆಳಕಾಗಿ ನಿಂತಿದೆ. ಇಂದಿನ ಯೋವಾನ್ನನ ಸುವಾರ್ತೆಯಲ್ಲಿ ಕಂಡುಬರುವ ಕಥೆ—ಕ್ರಿಸ್ತನು ಲಾಜರನನ್ನು ಸತ್ತವರೊಳಗಿಂದ ಎಬ್ಬಿಸಿದ ಘಟನೆ—ನಂಬಿಕೆಯ ಶಕ್ತಿಗೆ ಮತ್ತು ಮರಣದಾಚೆಯ ಜೀವದ ದೈವಿಕ ಭರವಸೆಗೆ ಆಳವಾದ ಸಾಕ್ಷಿಯಾಗಿದೆ.

ಬೆಥನಿಯ ಹಿನ್ನೆಲೆಯಲ್ಲಿರುವ ಈ ಘಟನೆಯು ಲಾಜರನ ಅಸ್ವಸ್ಥತೆಯ ದುಃಖದ ಸುದ್ದಿಯಿಂದ ಆರಂಭವಾಗುತ್ತದೆ. ಅವನ ಸಹೋದರಿಯರಾದ ಮರಿಯ ಮತ್ತು ಮಾರ್ತ ಅವರು ಯೇಸುವಿಗೆ ತುರ್ತು ಸಂದೇಶ ಕಳುಹಿಸಿ, ಶೀಘ್ರವಾಗಿ ಬರಬೇಕೆಂದು ಬೇಡಿಕೊಳ್ಳುತ್ತಾರೆ. ಆದರೆ ಯೇಸು ತಕ್ಷಣ ಪ್ರತಿಕ್ರಿಯಿಸುವುದಿಲ್ಲ. ಬದಲಾಗಿ, “ಈ ಕಾಯಿಲೆ ಮರಣಕ್ಕಾಗಿ ಬಂದುದಲ್ಲ, ದೇವರ ಮಹಿಮೆಗೋಸ್ಕರ ಬಂದಿದೆ. ಇದರ ಮೂಲಕ ದೇವರ ಪುತ್ರನಿಗೆ ಮಹಿಮೆ ಉಂಟಾಗಲಿದೆ,” ಎಂದು ನುಡಿದರು.  ಈ ಆರಂಭಿಕ ವಿಳಂಬವು ಒಂದು ಗಂಭೀರ ಪ್ರಶ್ನೆಯನ್ನು ಎಬ್ಬಿಸುತ್ತದೆ: ಏಕೆ ಮೆಸ್ಸೀಯನು ತನ್ನ ಮಧ್ಯಪ್ರವೇಶವನ್ನು ಮುಂದೂಡಿದನು? ಇದರ ಉತ್ತರವು ಈ ಘಟನೆಯಲ್ಲೇ ಕ್ರಮೇಣ ಹೊರಹೊಮ್ಮುತ್ತದೆ, ದೈವಿಕ ಉದ್ದೇಶ ಮತ್ತು ಮಾನವೀಯ ಭಾವನೆಗಳು ಒಂದಕ್ಕೊಂದು ಜೋಡಿಸಿಕೊಂಡಿರುವುದನ್ನು ತೆರೆದಿಡುತ್ತದೆ.

ಯೇಸು ಅಂತಿಮವಾಗಿ ಬೆಥನಿಗೆ ಆಗಮಿಸಿದಾಗ, ಲಾಜರನು ಈಗಾಗಲೇ ನಾಲ್ಕು ದಿನಗಳಿಂದ ಸಮಾಧಿಯಲ್ಲಿ ಇಡಲ್ಪಟ್ಟಿದ್ದನು. ಮರಿಯ ಮತ್ತು ಮಾರ್ತ ಅವರ ದುಃಖವು ನಷ್ಟದ ಭಾರವನ್ನು ಅನುಭವಿಸಿದ ಪ್ರತಿಯೊಬ್ಬರ ಮನಸ್ಸನ್ನು ಆಳವಾಗಿ ಸ್ಪರ್ಶಿಸುತ್ತದೆ. ಅವರು ಯೇಸುವಿಗೆ ಹೇಳಿದ ಮಾತುಗಳು ಪರಿಚಿತವಾದ ನೋವಿನ ಪ್ರತಿಧ್ವನಿಯಂತೆ ಕೇಳಿಸುತ್ತವೆ: “ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ. ಈ ಕ್ಷಣದಲ್ಲಿ, ಅವರ ದುಃಖದ ತೀವ್ರತೆ ಮಾನವನು ನಿರಾಶೆ ಮತ್ತು ಆಶಾಭಂಗದ ವಿರುದ್ಧ ನಡೆಸುವ ನಿಜವಾದ ಹೋರಾಟವನ್ನು ತೆರೆದಿಡುತ್ತದೆ.

ಆದರೆ, ಅವರ ಈ ದುಃಖದ ಮಧ್ಯೆಯೇ ಒಂದು ಆಳವಾದ ಧಾರ್ಮಿಕ ಸತ್ಯ ಹೊರಹೊಮ್ಮುತ್ತದೆ. ಯೇಸು ಮಾರ್ತಳಿಗೆ,  “ಪುನರುತ್ಥಾನವೂ ಜೀವವೂ ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು” ಎಂದು ಧೈರ್ಯ ನೀಡುತ್ತಾರೆ. ಈ ಹೇಳಿಕೆ ಕ್ರೈಸ್ತ ನಂಬಿಕೆಯ ಸಾರವನ್ನು ಒಳಗೊಂಡಿದೆ—ಕ್ರಿಸ್ತನಲ್ಲಿ ಇರುವ ನಂಬಿಕೆಯ ಮೂಲಕ ನಿತ್ಯಜೀವದ ಭರವಸೆ. ಇದು ಕೇವಲ ದೈಹಿಕ ಅಸ್ತಿತ್ವವನ್ನು ಮೀರಿ, ಮರಣವು ಅಂತ್ಯವಲ್ಲ, ಆದರೆ ವಾಗ್ದಾನಗೊಂಡ ನಿತ್ಯಜೀವದತ್ತ ಸಾಗುವ ಒಂದು ಮಾರ್ಗವೆಂಬ ಗಾಢವಾದ ಭರವಸೆಯನ್ನು ವಿಶ್ವಾಸಿಗಳಿಗೆ ನೀಡುತ್ತದೆ.

ಈ ಕಥನದ ಭಾವನಾತ್ಮಕ ಶಿಖರವು ಯೇಸು ಸಮಾಧಿಯ ಕಡೆಗೆ ಸಾಗುವಾಗ ಕಾಣಿಸುತ್ತದೆ. ತನ್ನ ಸುತ್ತಲಿನ ದುಃಖದಿಂದ ಸ್ಪಂದಿಸಿ ಅವರು ಅಳುತ್ತಾರೆ—ಮಾನವ ವೇದನೆಗೆ ಅವರು ಹೊಂದಿರುವ ಆಳವಾದ ಸಹಾನುಭೂತಿಯನ್ನು ಸ್ಪಷ್ಟವಾಗಿ ತೋರಿಸುವ ಕ್ಷಣ.

ಭೌತಿಕ ತರ್ಕವನ್ನು ಮೀರುವಂತಹ ಒಂದು ಕ್ರಿಯೆಯಲ್ಲಿ, ಮಾರ್ತಳು ದೇಹದ ಕುಸಿತದಿಂದ ಉಂಟಾಗುವ ವಾಸನೆ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದರೂ, ಯೇಸು ಕಲ್ಲನ್ನು ತೆರೆಯುವಂತೆ ಆಜ್ಞಾಪಿಸುತ್ತಾರೆ. ಈ ಕ್ರಿಯೆ ನಂಬಿಕೆ ಮತ್ತು ಪುನರುತ್ಥಾನದ ಸಂಗಮವನ್ನು ಸೂಚಿಸುತ್ತದೆ, ಅಲ್ಲಿ ಮಾನವ ಮಿತಿಗಳು ದೈವಿಕ ಶಕ್ತಿಗೆ ತಲೆಬಾಗುತ್ತವೆ. ಅಧಿಕಾರಭರಿತ ಧ್ವನಿಯಲ್ಲಿ ಯೇಸುಪ್ರಭು ಅಧಿಕಾರವಾಣಿಯಿಂದ ಲಾಜರನನ್ನು  “ಹೊರಗೆ ಬಾ!” ಎಂದು ಕರೆಯುತ್ತಾರೆ.ಕೂಡಲೇ ಸತ್ತ ಲಾಜರನು ಸಮಾಧಿಯ ಬಟ್ಟೆಗಳಲ್ಲಿ ಬಂಧಿತನಾಗಿಯೇ,ಪುನರುತ್ಥಾನದ ನೈಜತೆಯ ಜೀವಂತ ಸಾಕ್ಷಿಯಾಗಿ ಹೊರಗೆ ಬರುತ್ತಾನೆ. ಈ ಅದ್ಭುತ ಘಟನೆ ಲಾಜರನಿಗೆ ಜೀವವನ್ನು ಮರಳಿ ನೀಡುವುದಷ್ಟೇ ಅಲ್ಲ, ಯೇಸುವಿನ ಸ್ವಂತ ಪುನರುತ್ಥಾನಕ್ಕೂ ಪೂರ್ವಸೂಚನೆ ನೀಡುತ್ತದೆ—ಇದು ಕ್ರೈಸ್ತ ನಂಬಿಕೆಯ ಮೂಲಸ್ತಂಭವಾಗಿದೆ.

ಈ ಅದ್ಭುತದ ಪರಿಣಾಮಗಳು ಲಾಜರನ ಸಮಾಧಿಯಾಚೆಗೂ ವ್ಯಾಪಿಸುತ್ತವೆ. ಇದು ಜೀವ, ಮರಣ ಮತ್ತು ನಂಬಿಕೆಯ ಬಗ್ಗೆ ವಿಶ್ವಾಸಿಗಳನ್ನು ತಮ್ಮ ಅರಿವನ್ನು ಮರುಪರಿಶೀಲಿಸಲು ಆಹ್ವಾನಿಸುತ್ತದೆ. ಪುನರುತ್ಥಾನದ ಭರವಸೆ ಆಳವಾದ ನಂಬಿಕೆಗೆ ಕರೆಯುತ್ತದೆ, ಜೀವನದ ಅನಿವಾರ್ಯ ಸವಾಲುಗಳನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದನ್ನು ಪರಿವರ್ತಿಸುತ್ತದೆ.

ನಿರಾಶೆಯ ಕ್ಷಣಗಳಲ್ಲಿ, ನಷ್ಟದ ಎದುರು ಅಥವಾ ಜೀವನದ ಪರೀಕ್ಷೆಗಳ ನಡುವೆ ನಿಂತಾಗ, ಯೇಸುವಿನ ಮಾತುಗಳು ಮತ್ತೆ ಪ್ರತಿಧ್ವನಿಸುತ್ತವೆ: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ.” ಈ ಕಥನ ನಮ್ಮ ಸ್ವಂತ ನಂಬಿಕೆಗಳ ಬಗ್ಗೆ ಚಿಂತಿಸಲು ನಮಗೆ ಆಹ್ವಾನ ನೀಡುತ್ತದೆ. ಅಪಾರ ದುಃಖ ಮತ್ತು ಅನಿಶ್ಚಿತತೆಯ ನಡುವೆ ನಿಂತರೂ, ನಾವು ಪುನರುತ್ಥಾನದ ವಾಗ್ದಾನವನ್ನು ನಂಬಲು ಸಿದ್ಧರಿದ್ದೇವೇ?

ಕತ್ತಲಿನಿಂದ ತುಂಬಿದಂತೆ ಕಾಣುವ ಈ ಲೋಕದಲ್ಲಿ, ಈ ಸುವಾರ್ತೆಯ ಸಂದೇಶವು ನಮಗೆ ನೆನಪಿಸುವುದು ಏನೆಂದರೆ, ನಂಬಿಕೆ ಎಂಬುದು ವಾಸ್ತವದಿಂದ ತಪ್ಪಿಸಿಕೊಳ್ಳುವ ಮಾರ್ಗವಲ್ಲ; ಅದು ಅದರೊಂದಿಗಿನ ಆಳವಾದ ಹೊಂದಾಣಿಕೆ—ಕ್ರಿಸ್ತನ ಮೂಲಕ ನಿರಾಶೆಯ ಮೇಲೆ ಆಶೆ ಜಯ ಸಾಧಿಸುತ್ತದೆ ಮತ್ತು ಮರಣದ ಮೇಲೆ ಜೀವ ವಿಜಯ ಹೊಂದುತ್ತದೆ ಎಂಬ ದೃಢ ನಂಬಿಕೆ.

ಈ ಘಟನೆಯ ಮಹತ್ವವನ್ನು ನಾವು ಚಿಂತಿಸುವಾಗ, ಜೀವನದ ಅತ್ಯಂತ ಕತ್ತಲೆಯ ಕ್ಷಣಗಳಲ್ಲಿಯೂ ನಂಬಿಕೆಯನ್ನು ಅಪ್ಪಿಕೊಳ್ಳಲು ನಮಗೆ ಕರೆ ನೀಡುವ ಪುನರುತ್ಥಾನದ ನಿಶ್ಚಿತತೆಯನ್ನು ಹಿಡಿದುಕೊಳ್ಳೋಣ. ಲಾಜರನು ಸಮಾಧಿಯಿಂದ ಕರೆಯಲ್ಪಟ್ಟಂತೆ, ನಾವೂ ಸಹ ಕ್ರಿಸ್ತನು ನೀಡುವ ಜೀವದ ಬೆಳಕಿನತ್ತ ಹೆಜ್ಜೆ ಇಡಲು ಆಹ್ವಾನಿಸಲ್ಪಟ್ಟಿದ್ದೇವೆ, ನಮ್ಮ ನಂಬಿಕೆ ನಮಗೆ ಆ ಅಂತಿಮ ಪುನರುತ್ಥಾನದ ವಾಗ್ದಾನಕ್ಕೆ ದಾರಿ ತೋರಿಸುತ್ತದೆ ಎಂಬ ಭರವಸೆಯೊಂದಿಗೆ ಆ ಬೆಳಕಿನತ್ತ ನಡೆಯಲು ಕರೆಹೊಂದಿದ್ದೇವೆ.

ಸಾರಾಂಶವಾಗಿ, ಲಾಜರನ ಕಥನ ಪುನರುತ್ಥಾನದ ನಂಬಿಕೆ ಕೇವಲ ಕಲ್ಪಿತ ತತ್ತ್ವವಲ್ಲ, ವಿಶ್ವಾಸಿಗಳಿಗೆ ನಿಜವಾದ ಅನುಭವವಾಗಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ನಂಬಿಕೆಯಲ್ಲಿ ನಾವು ಶಕ್ತಿಯನ್ನು ಕಂಡುಕೊಳ್ಳುತ್ತೇವೆ; ಪುನರುತ್ಥಾನದಲ್ಲಿ ನಾವು ಜೀವವನ್ನು ಕಂಡುಕೊಳ್ಳುತ್ತೇವೆ.

ಈ ವಾಗ್ದಾನದ ದೃಢ ನಿಶ್ಚಿತತೆ, ನಾವು ಎದುರಿಸುವ ಯಾವುದೇ ಸವಾಲುಗಳ ಮಧ್ಯೆಯೂ, ಉದ್ದೇಶಪೂರ್ಣವಾಗಿಯೂ ಭರವಸೆಯಿಂದ ಕೂಡಿದ ಜೀವನವನ್ನು ನಡೆಸಲು ನಮ್ಮನ್ನು ಪ್ರೇರೇಪಿಸಲಿ. ಸಂಕಟದ ಸಮಯಗಳಲ್ಲಿ ಸಾಂತ್ವನವನ್ನು ಅಥವಾ ಅರ್ಥವನ್ನು ಹುಡುಕುತ್ತಿರುವವರಿಗಾಗಿ, ಪುನರುತ್ಥಾನದ ಸಂದೇಶವು ಅಚಲವಾಗಿ ಮತ್ತು ಸ್ಥಿರವಾಗಿ ಉಳಿಯುತ್ತದೆ—ಪೀಳಿಗೆಗಳಿಂದ ಪೀಳಿಗೆಗಳಿಗೆ ಸಾಗುತ್ತಿರುವ ನಂಬಿಕೆಯ ಆಧಾರವಾಗಿ, ನಂಬಲು ಆಯ್ಕೆಮಾಡುವ ಪ್ರತಿಯೊಬ್ಬರಿಗೂ ಸಾಂತ್ವನ, ದೃಢತೆ ಮತ್ತು ಭರವಸೆಯನ್ನು ನೀಡುತ್ತಾ ಮುಂದುವರಿಯುತ್ತದೆ.

ವಂ. ಗುರು ಲೂಕ್ ಗ್ರೆಗೊರಿ, OFM,ಪವಿತ್ರ ಭೂಮಿಯ ಪಾಲನಾ ವಿಭಾಗ

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

21 ಮಾರ್ಚ್ 2026, 16:14