ಭಾನುವಾರದ ಶುಭಸಂದೇಶದ ಧ್ಯಾನ: ಅಂಧಕಾರದಿಂದ ಬೆಳಕಿನೆಡೆಗೆ
ಲೇಖಕರು: ವಂ. ಗುರು ಎಡ್ಮಂಡ್ ಪವರ್, OSB
ಹಿಂದಿನ ಭಾನುವಾರದ ಸಮಾರ್ಯ ಮಹಿಳೆಯ ಘಟನೆ ಮತ್ತು ಮುಂದಿನ ಭಾನುವಾರದ ಲಾಜರನ ಘಟನೆಗಳ ನಡುವೆ, ಇಂದು ನಾವು ತಪಸ್ಸು ಕಾಲ ಮತ್ತು ದೀಕ್ಷಾಸ್ನಾನದ ಆಧ್ಯಾತ್ಮಿಕ ಪ್ರಯಾಣವನ್ನು ಸೂಚಿಸುವ ಮೂರು ಸಂಕೇತ ವ್ಯಕ್ತಿಗಳಲ್ಲಿ ಎರಡನೆಯವನನ್ನು ಧ್ಯಾನಿಸುತ್ತೇವೆ — ಜನನದಿಂದಲೇ ಅಂಧನಾಗಿದ್ದ ಒಬ್ಬ ಮನುಷ್ಯನನ್ನು. ಯೋವಾನ್ನ 9ನೇ ಅಧ್ಯಾಯದಲ್ಲಿರುವ ಈ ವಿವರಣೆ, ಪ್ರಭುವಿನ ಪಾಡಿನ ವಿವರಣೆಯನ್ನು ಬಿಟ್ಟರೆ, ಸುವಾರ್ತೆಗಳಲ್ಲಿರುವ ಅತ್ಯಂತ ದೀರ್ಘವಾದ ನಿರಂತರ ಕಥನವಾಗಿದೆ.
ಈ ಸಂಪೂರ್ಣ ಅಧ್ಯಾಯವು ನೋಡುವುದು ಮತ್ತು ಅದರ ಆಳವಾದ ಅರ್ಥದ ಮೇಲೆ ಕೇಂದ್ರೀಕರಿಸಿದೆ — ಅಂಧತ್ವದಿಂದ ದೃಷ್ಟಿಗೆ, ದೃಷ್ಟಿಯಿಂದ ಆತ್ಮೀಯ ಅರಿವಿಗೆ ಆಗುವ ಪರಿವರ್ತನೆ. ಆದ್ದರಿಂದಲೇ ಅಧ್ಯಾಯ ಸರಳವಾದ ಮಾತಿನಿಂದ ಆರಂಭವಾಗುತ್ತದೆ: “ಯೇಸುಸ್ವಾಮಿ ನಡೆದು ಹೋಗುತ್ತಿದ್ದಾಗ, ಒಬ್ಬ ಹುಟ್ಟು ಕುರುಡನನ್ನು ಕಂಡರು.” ಮೊದಲ ದೃಷ್ಟಿ ಪ್ರಭು ಯೇಸು ಕ್ರಿಸ್ತರದೇ. ನಾವು ಅವರನ್ನು ನೋಡಲು ಸಾಧ್ಯವಾಗುವ ಮೊದಲೇ ಅವರು ನಮ್ಮನ್ನು ನೋಡುತ್ತಾರೆ, ನಮ್ಮನ್ನು ಗಮನಿಸುತ್ತಾರೆ.
ಅವರು ಏನು ನೋಡುತ್ತಾರೆ? ಒಬ್ಬ ಯುವಕನನ್ನು. ಅವನು ಯುವಕನೇ ಇರಬೇಕು; ಏಕೆಂದರೆ ಅವನ ತಂದೆ-ತಾಯಿಗಳು ಇನ್ನೂ ಜೀವಂತವಾಗಿದ್ದು, ಅವನು ತನ್ನ ವಿಷಯಕ್ಕೆ ತಾನೇ ಉತ್ತರಿಸಲು ಸಾಕಷ್ಟು ವಯಸ್ಸಾಗಿದೆ ಎಂದು ಹೇಳುತ್ತಾರೆ. ಅವನು ಬಹಳ ನೋವು ಅನುಭವಿಸಿದ್ದಾನೆ — ಸಮಾಜದಲ್ಲಿ ತಿರಸ್ಕೃತನಾಗಿ ಬದುಕುತ್ತಿದ್ದಾನೆ; ಶಿಷ್ಯರ ದೃಷ್ಟಿಯಲ್ಲಿಯೂ ಪಾಪಿ ಎಂದು ಊಹಿಸಲ್ಪಟ್ಟವನು; ಇತರರ ದಯೆಯ ಮೇಲೆ ಅವಲಂಬಿತನಾಗಿದ್ದವನು. ಆದರೆ ಅವನು ಬುದ್ಧಿವಂತನು; ಗಮನ ಸೆಳೆಯಲು ಯತ್ನಿಸುವವನಲ್ಲ; ಅಸತ್ಯವನ್ನು ಸಹಿಸಲಾರನು; ತನ್ನ ಕಥೆಯನ್ನು ಸರಳವಾಗಿ ಮತ್ತು ಸ್ಪಷ್ಟವಾಗಿ ಹೇಳುತ್ತಾನೆ; ಸ್ವಲ್ಪ ಉತ್ಸಾಹವೂ ಅವನಲ್ಲಿ ಕಾಣುತ್ತದೆ.
ಅವನಲ್ಲಿಯೇ ಪ್ರಭು ಯೇಸು ಪಾಪದ ಶಿಕ್ಷೆಯಾಗಿ ದುಃಖವನ್ನು ಅನುಭವಿಸಬೇಕೆಂಬ ಪ್ರತೀಕಾರದ ಸೀಮಿತ ತರ್ಕವನ್ನು, ನೋವು ಎಂದರೆ ಪಾಪದ ಶಿಕ್ಷೆ ಎಂಬ ಕಲ್ಪನೆಯನ್ನು ಮುರಿಯುತ್ತಾರೆ.
ಈ ಯುವಕನ ಸಂಕೇತಯಾತ್ರೆ ಕ್ರೈಸ್ತ ಜೀವನದ ಪರಿವರ್ತನೆಯ ನಕ್ಷೆಯಾಗಿದೆ. ಪ್ರಭು ಯೇಸು ಧೂಳಿನಲ್ಲಿ ತುಪ್ಪಳಿಸಿ ಮಣ್ಣನ್ನು ಅವನ ಕಣ್ಣುಗಳಿಗೆ ಹಚ್ಚಿದ ಘಟನೆ, ಮೊದಲ ಸೃಷ್ಟಿಯನ್ನು ನೆನಪಿಸುತ್ತದೆ — “ಪ್ರಭು ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿದನು” (ಆದಿಕಾಂಡ 2:7). ನಂತರ ಅಂಧನಾದ ಆ ಮನುಷ್ಯನು ಶಿಲೋವಾಮಿನ ಕೊಳಕ್ಕೆ — ಅಂದರೆ ದೀಕ್ಷಾಸ್ನಾನದ ನೀರಿಗೆ — ಕಳುಹಿಸಲ್ಪಡುತ್ತಾನೆ ಮತ್ತು ಭೌತಿಕ ದೃಷ್ಟಿಯನ್ನು ಪಡೆಯುತ್ತಾನೆ. ಈಗ ಅವನ ನೈತಿಕ ಮತ್ತು ಆಧ್ಯಾತ್ಮಿಕ ಪರಿವರ್ತನೆಯ ಪ್ರಕ್ರಿಯೆ ಆರಂಭವಾಗುತ್ತದೆ; ಧೈರ್ಯದಲ್ಲಿಯೂ ಹಾಗೂ ಸತ್ಯದ ಅರಿವಿನಲ್ಲಿಯೂ ಅವನು ಬೆಳೆಯುತ್ತಾನೆ.
ನಡೆದ ಘಟನೆಯ ನಿಜತೆಯನ್ನು ಅರಿತುಕೊಳ್ಳುವ ಅವನು ನಿಧಾನವಾಗಿ ಇನ್ನಷ್ಟು ಆಳವಾದ ಸತ್ಯವನ್ನು ತಿಳಿಯಲು ಆರಂಭಿಸುತ್ತಾನೆ. ಅಸತ್ಯ, ವಿಳಂಬ ಮತ್ತು ಅಹಂಕಾರವನ್ನು ಅವನು ಸಹಿಸಲಾರನು. ಹೀಗೆ ಅವನು ಸ್ವತಃ ಸತ್ಯ ಪ್ರಭುವನ್ನು ಅರಿಯಲು ಆರಂಭಿಸುತ್ತಾನೆ — “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ” (ಯೋವಾನ್ನ 14:6).
ಅವನ ಧೈರ್ಯದ ಬೆಳವಣಿಗೆ ಗಮನಾರ್ಹವಾಗಿದೆ. ಅವನು ತನ್ನ ಗುರುತನ್ನು ಮರೆಮಾಚುವುದಿಲ್ಲ: “ನಾನೇ ಆ ಮನುಷ್ಯನು” (ಯೋವಾನ್ನ 9:9) ಎಂದು ಧೈರ್ಯವಾಗಿ ಜನರ ಮುಂದೆಯೂ, ಫರಿಸಾಯರ ಮುಂದೆಯೂ ಹೇಳುತ್ತಾನೆ. ಪ್ರಭು ಯೇಸುವಿನ ಕುರಿತು ಅವನ ಅರಿವು ಕ್ರಮೇಣ ಬೆಳೆಯುತ್ತದೆ. ಮೊದಲಿಗೆ “ಯೇಸು ಎನ್ನುವ ಒಬ್ಬ ಮನುಷ್ಯನು” (ಯೋವಾನ್ನ 9:11) ಎಂದು ಹೇಳುವ ಅವನು ನಂತರ “ಅವರು ಪ್ರವಾದಿ” (ಯೋವಾನ್ನ 9:17) ಎಂದು ಘೋಷಿಸುತ್ತಾನೆ. ಕೊನೆಗೆ ಧರ್ಮಸಭೆಯ ಅಧಿಕಾರಿಗಳನ್ನು ಎದುರಿಸುವ ಧೈರ್ಯವನ್ನು ಹೊಂದುತ್ತಾನೆ. ಅವನು ಹೇಳುವ ಚುಟುಕಾದ ಮತ್ತು ತೀಕ್ಷ್ಣವಾದ ಮಾತುಗಳು ಅವರನ್ನು ಕೋಪಗೊಳಿಸುತ್ತವೆ.
ಪ್ರಭು ಯೇಸುವಿನ ಕಡೆಗೆ ಅವನ ಪ್ರಾರಂಭಿಕ ಪರಿವರ್ತನೆಗೆ ಅವನು ತೆರಬೇಕಾದ ಬೆಲೆ ಧರ್ಮಸಭೆಯಿಂದ ಹೊರಹಾಕಲ್ಪಡುವುದಾಗಿದೆ —“ಅವರು ಅವನನ್ನು ಹೊರಗೆ ತಳ್ಳಿಬಿಟ್ಟರು” (ಯೋವಾನ್ನ 9:34). ಆದರೆ ಆ ಕ್ಷಣದ ನೋವೇ ಅವನನ್ನು ಪ್ರಭು ಯೇಸು ಕ್ರಿಸ್ತರೊಂದಿಗೆ ಅಂತಿಮ ಭೇಟಿಗೆ ಕರೆದೊಯ್ಯುತ್ತದೆ. ಪ್ರಭು ಅವನನ್ನು ಕೇಳುತ್ತಾರೆ: “ನರಪುತ್ರನಲ್ಲಿ ನಿನಗೆ ವಿಶ್ವಾಸವಿದೆಯೇ?” (ಯೋವಾನ್ನ 9:35). ಅವನು ಉತ್ತರಿಸುತ್ತಾನೆ: “ಪ್ರಭುವೇ, ನಾನು ನಂಬುತ್ತೇನೆ” ಎಂದು ಹೇಳುತ್ತಾ ಅವನು ಪ್ರಭು ಯೇಸುವಿಗೆ ಅಡ್ಡಬಿದ್ದು ಅವರನ್ನು ಆರಾಧಿಸುತ್ತಾನೆ (ಯೋವಾನ್ನ 9:38).
ಈ ಧೈರ್ಯಶಾಲಿ ಮತ್ತು ತೀಕ್ಷ್ಣಬುದ್ಧಿಯ ಯುವಕನು ದೀಕ್ಷಾಸ್ನಾನ ಹಾಗೂ ಪಾಸ್ಕಾ ಪ್ರಯಾಣದಲ್ಲಿರುವ ಪ್ರತಿಯೊಬ್ಬ ಕ್ರೈಸ್ತನ ಸಂಕೇತವಾಗಿದ್ದಾನೆ. ದೇವರಿಂದ ದೃಷ್ಟಿ ಪಡೆದವನು ಅಂಧಕಾರವನ್ನು ತೊರೆದು ಬೆಳಕಿನತ್ತ ಬರುತ್ತಾನೆ. “ಲೋಕದ ಬೆಳಕಾದ ಪ್ರಭು ಯೇಸು ಕ್ರಿಸ್ತರಲ್ಲಿ” (ಯೋವಾನ್ನ 8:12) ಪ್ರಕಾಶಿತನಾಗಿ, ಅವನು ಸಾಕ್ಷಿಯಾಗುತ್ತಾನೆ ಮತ್ತು ಆರಾಧಿಸುತ್ತಾನೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).