2026,03.15 La fraternità Tiberiade di oggi, foto 2026,03.15 La fraternità Tiberiade di oggi, foto 

ಪ್ರಾರ್ಥನೆಯ ಸಾಕ್ಷಿ: ತಮ್ಮ ಮುಸ್ಲಿಂ ನೆರೆಹೊರೆಯವರಿಗಾಗಿ ಪ್ರಾರ್ಥಿಸುವ ಮಹಿಳೆಯರು

ಪ್ಯಾರಿಸ್ ನಗರದ ಹೊರವಲಯದಲ್ಲಿರುವ ಕ್ಲಿಷಿ ಸೂ ಬುಆ ಪ್ರದೇಶದಲ್ಲಿ, “ಟಿಬೇರಿಯಾಡ್” ಸಹೋದರತ್ವದ ಫ್ರಾನ್ಸಿಸ್ಕನ್ ಮಿಷನರಿ ಆಫ್ ಮೇರಿ ಸಹೋದರಿಯರು ಬಹುಸಾಂಸ್ಕೃತಿಕ ಮತ್ತು ಬಹುರಾಷ್ಟ್ರೀಯ ಸನ್ನಿವೇಶದಲ್ಲಿ ನಿಷ್ಠೆಯಿಂದ ತಮ್ಮ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಫ್ರಾನ್ಸ್ ದೇಶದಲ್ಲಿ ಈ ರೀತಿಯ ಸಾಮಾಜಿಕ ವಾಸ್ತವಿಕತೆ ಹಲವು ಬಾರಿ ಸಂವೇದನಾಶೀಲ ವಿಷಯವಾಗಿದ್ದರೂ, ಅವರು ಮೌನ ಪ್ರಾರ್ಥನೆಯ ಸಾಕ್ಷಿಗಳಾಗಿ ಉಳಿದಿದ್ದಾರೆ.

ಲೇಖಕರು: ಸಹೋದರಿ ಕ್ಯೋಂಗ್-ಹಾ ಇಮ್

ಈ ಸಹೋದರಿಯರು ತಮ್ಮ ಸೇವೆಯನ್ನು ಒಂದು HLM (ಕಡಿಮೆ ಬಾಡಿಗೆ ನಿವಾಸ) ಕಟ್ಟಡದ 13ನೇ ಮಹಡಿಯಲ್ಲಿ ಆರಂಭಿಸಿದರು, ಅಲ್ಲಿ ಬಹುಪಾಲು ಜನರು ಮುಸ್ಲಿಂ ಸಮುದಾಯದವರಾಗಿದ್ದರು. 2007ರಲ್ಲಿ ಅವರು ಆ ಕಟ್ಟಡವನ್ನು ತೊರೆಯಬೇಕಾದಾಗ, ಅವರ ನೆರೆಹೊರೆಯವರು ದುಃಖದಿಂದ, “ಈಗ ನಮ್ಮನ್ನು ಯಾರು ಕಾಯುವರು?” ಎಂದು ಪ್ರಶ್ನಿಸಿದರು. “ನಾವು ಅವರಿಗಾಗಿ ಪ್ರಾರ್ಥನೆಯ ಮಹಿಳೆಯರಾಗಿ ಇದ್ದೆವು,” ಎಂದು ಸಹೋದರಿ ಜೊಲಾ ನೋವೋಶಿಯೆಲ್ಸ್ಕಾ ಅವರು ನೆನಪಿಸಿಕೊಂಡರು.

1994ರಿಂದ ಸೇನ್-ಸಾಂತ್-ಡೆನಿ ಪ್ರದೇಶದಲ್ಲಿ ಇರುವ ಈ ಸಹೋದರತ್ವವು, ಸಂಕೀರ್ಣ ಸಾಮಾಜಿಕ ಸನ್ನಿವೇಶದಲ್ಲಿಯೂ ನಿಷ್ಠೆಯಿಂದ ಉಳಿದಿದೆ. ವಿಭಿನ್ನ ಸಂಸ್ಕೃತಿ ಮತ್ತು ರಾಷ್ಟ್ರಗಳ ಜನರೊಂದಿಗೆ ಏಕತೆಯಲ್ಲಿ ನಿಂತು, ಹತ್ತಿರದಲ್ಲಿರುವವರಿಗೂ ದೂರದಲ್ಲಿರುವವರಿಗೂ ಪ್ರಾರ್ಥನೆ ಸಲ್ಲಿಸುವ ಮೂಲಕ, ಅವರು ಪ್ರಾರ್ಥನೆಯ ಮಹಿಳೆಯರಾಗಿ ಪರಿಚಿತರಾದರು.

ಕ್ಲಿಷಿ ಸೂ ಬುಆ ಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ, ಪ್ಯಾರಿಸ್ ಹೊರವಲಯಗಳಲ್ಲಿಯೂ ಇದೇ ವಾಸ್ತವಿಕೆ ಕಂಡುಬರುತ್ತದೆ. ಈ ಸನ್ನಿವೇಶದಲ್ಲಿ ಕ್ರೈಸ್ತರು ಅಲ್ಪಸಂಖ್ಯಾತರಾಗಿದ್ದರೂ, “ಟಿಬೇರಿಯಾಡ್” ಸಹೋದರತ್ವವು ಎಲ್ಲರಿಗೂ — ಯಾರೇ ಆಗಿರಲಿ — ಸ್ವಾಗತ ಮತ್ತು ಭೇಟಿಯ ಸ್ಥಳವನ್ನು ಒದಗಿಸುತ್ತದೆ.

ಸ್ಥಳೀಯ ಕ್ರೈಸ್ತರಾದ ಬರ್ನಾರ್ಡ್ ಪೇಯ್ರೆಬೆಸ್  “ನಾನು ಪ್ರತಿದಿನ ಸಹೋದರಿಯರನ್ನು ನೋಡಲಿಲ್ಲ. ಆದರೆ ಅವರು ಅಲ್ಲಿ ಇದ್ದಾರೆ ಎಂಬ ಅರಿವು ನನಗೆ ನೆಮ್ಮದಿಯನ್ನು ನೀಡುತ್ತಿತ್ತು. ಅವರ ದಯೆ ಮತ್ತು ಜನರೊಂದಿಗೆ ಅವರ ಸಂಬಂಧ ಬೆಚ್ಚನೆಯದು ಅವರು ಇತರರಂತೆ ಮಾತನಾಡುವುದಿಲ್ಲಆದರೆ ಅವರ ಸಾನಿಧ್ಯ ವಿಶೇಷವಾಗಿತ್ತು ಎಂದು ಹೇಳುತ್ತಾರೆ”

ವರ್ಷಗಳಿಂದ, ಸಹೋದರಿಯರು ಯುವಜನರೊಂದಿಗೆ ಪ್ರಾರ್ಥನಾ ಮಂದಿರ ಸೇವೆ, ಧರ್ಮೋಪದೇಶಮತ್ತು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಹೋದರಿ ಅಲೆಕ್ಸಾಂದ್ರಿನ್ ಲೆಫೇವ್ರ್, ಈ ಸಹೋದರತ್ವದ ಸ್ಥಾಪಕ ಸದಸ್ಯರಲ್ಲಿ ಒಬ್ಬರು, ಸೆಕೋರ್ಸ್ ಕ್ಯಾಥೋಲಿಕ್ (Secours Catholique) ಸಹಯೋಗದಲ್ಲಿ ಕ್ಲಿಷಿ ಸೂ ಬುಆ ಪ್ರದೇಶದಲ್ಲಿ ಮೊದಲ ಶಿಕ್ಷಣ ಸಹಾಯ ಕಾರ್ಯಕ್ರಮವನ್ನು ಆರಂಭಿಸಿದರು. ಇಂದಿಗೂ ಈ ಕಾರ್ಯಕ್ರಮವು ಕಡಿಮೆ ಆದಾಯದ ಕುಟುಂಬಗಳ ಮಕ್ಕಳಿಗೆ ಸಹಾಯ ಮಾಡುತ್ತಿದ್ದು, ಪ್ಯಾರಿಸ್ ನಗರಕ್ಕೆ ಭೇಟಿ ನೀಡುವಂತಹ ಅನುಭವಗಳನ್ನೂ ಒದಗಿಸುತ್ತದೆ.

ಆರಂಭದಿಂದಲೇ ಸಹೋದರಿಯರು ಸರಳ ಜೀವನ ನಡೆಸುವ ಪ್ರಾರ್ಥನೆಯ ಮಹಿಳೆಯರಾಗಿ ಪರಿಚಿತರಾಗಿದ್ದರು. ಆದರೆ ದಿನನಿತ್ಯ ಜೀವನದಲ್ಲಿ ಸಣ್ಣ ಅಪಾರ್ಥಮತ್ತು ಉದ್ವಿಗ್ನತೆಯ ಸಂಕೇತಗಳು ಕಂಡುಬರುತ್ತಿದ್ದವು. “ನಾವು ಮೊದಲಿಗೆ ಬಂದಾಗ, ಯುವಜನರು ನಮ್ಮನ್ನು ಅನುಮಾನದಿಂದ ನೋಡುತ್ತಿದ್ದರು. ಕೆಲವೊಮ್ಮೆ ನಮ್ಮ ಪ್ರತಿಕ್ರಿಯೆ ನೋಡಲು ಪ್ರಚೋದಿಸುತ್ತಿದ್ದರು. ಆದರೆ ಅದು ಗಂಭೀರವಾಗಿರಲಿಲ್ಲ,” ಎಂದು ಸಹೋದರಿ ಜೊಲಾ ಹೇಳಿದರು. 2022ರಿಂದ ಅವರು ಈ ಸಮುದಾಯದ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ.

ಸಹೋದರಿಯರ ಉಪಸ್ಥಿತಿ ಈ ಸಾಮಾಜಿಕ ಸವಾಲುಗಳ ನಡುವೆ ನಿರಂತರ ಸಾಕ್ಷಿಯಾಗಿದೆ. ಅವರ ನೆರೆಹೊರೆಯವರೊಂದಿಗೆ ಇರುವ ಗೌರವಪೂರ್ಣ ಮತ್ತು ಸ್ನೇಹಪೂರ್ಣ ಸಂಬಂಧವು ಅವರ ಬದುಕಿನ ಪ್ರಮುಖ ಭಾಗವಾಗಿದೆ. ಜೊತೆಗೆ, ಕೆಲವು ಸಂದರ್ಭಗಳಲ್ಲಿ ಅನಿರೀಕ್ಷಿತ ಏಕತೆಯೂ ವ್ಯಕ್ತವಾಗುತ್ತದೆ.

2016ರಲ್ಲಿ ಗುರು ಹಮೆಲ್ ಅವರನ್ನು ಭಯೋತ್ಪಾದಕರು ಹತ್ಯೆ ಮಾಡಿದಾಗ, ಕೆಲವು ಮುಸ್ಲಿಂ ಯುವಕರು ದೇವಾಲಯಕ್ಕೆ ಬಂದು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು. “ಇಸ್ಲಾಂ ಶಾಂತಿಯ ಧರ್ಮ,” ಎಂದು ಅವರು ಹೇಳಿದರು. ಈ ಘಟನೆ ವಿಭಿನ್ನ ಧರ್ಮಗಳ ನಡುವಿನ ಸಹಾನುಭೂತಿಯ ಸಂಕೇತವಾಯಿತು ಎಂದು ಸಹೋದರಿ ಲೆಯ ಬಕೋಆರಿವೆಲೊ ಹೇಳಿದರು, ಅವರು 2022ರವರೆಗೆ ಈ ಸಹೋದರತ್ವದ ಹೊಣೆಗಾರರಾಗಿದ್ದರು.

ಇಂದು, “ಟಿಬೇರಿಯಾಡ್” ಸಹೋದರತ್ವದ ಸೇವೆ — ಜನರನ್ನು ಸ್ವಾಗತಿಸುವುದು, ಅವರ ಮಾತುಗಳನ್ನು ಕೇಳುವುದು, ಪ್ರಾರ್ಥಿಸುವುದು ಮತ್ತು ಆರ್ ಲೇಡಿ ಆಫ್ ದ ಏಂಜಲ್ಸ್ ಮರಿಯಮ್ಮನ ತೀರ್ಥಸ್ಥಳವನ್ನು ಜೀವಂತವಾಗಿಡುವುದು — ಇವುಗಳ ಮೇಲೆ ಕೇಂದ್ರೀಕೃತವಾಗಿದೆ.

ಬರ್ನಾರ್ಡ್ ಪೇಯ್ರೆಬೆಸ್ ಅವರು “23ನೆ ಸಂತ ಜಾನರ ದೇವಾಲಯ ನಿರ್ಮಾಣವಾದಾಗ ಮತ್ತು ಸಹೋದರಿಯರು ಇಲ್ಲಿ ಬರುತ್ತಾರೆ ಎಂದು ತಿಳಿದಾಗ ನನಗೆ ತುಂಬ ಸಂತೋಷವಾಯಿತು. ಅವರು ಏನು ಮಾಡುತ್ತಾರೆ ಎಂಬುದು ನನಗೆ ತಿಳಿದಿಲ್ಲ, ಆದರೆ ಅವರು ಯಾರು ಎಂಬುದು ನನಗೆ ತಿಳಿದಿದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುವುದಿಲ್ಲ; ಆದರೆ ಜನರನ್ನು ಭೇಟಿ ಮಾಡುವುದು ಮತ್ತು ಅವರ ಮಾತುಗಳನ್ನು ಕೇಳುವುದು ಮುಖ್ಯ. ಅವರನ್ನು ನೋಡಿದಾಗ, ಪ್ರಭು ಯೇಸು ನೆನಪಾಗುತ್ತಾರೆ" ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ನಗರದ ಹೃದಯದಲ್ಲಿ, ನಿರೀಕ್ಷಿಸದ ಭೇಟಿಗಳ ಮೂಲಕ, ಈ “ಪ್ರಾರ್ಥನೆಯ ಮಹಿಳೆಯರು” ತಮ್ಮ ನೆರೆಹೊರೆಯವರೊಂದಿಗೆ ಬಾಂಧವ್ಯವನ್ನು ಕಟ್ಟಿಕೊಂಡು, ಯಾರೇ ಆಗಿರಲಿ ಅವರಿಗಾಗಿ ಮೌನವಾಗಿ ಪ್ರಾರ್ಥಿಸುತ್ತಲೇ ಇರುತ್ತಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

17 ಮಾರ್ಚ್ 2026, 19:04