ಗಾಮೋ ಪ್ರದೇಶದ ಪ್ರಳಯಕಾರಿ ಪ್ರವಾಹದ ಪೀಡಿತರೊಂದಿಗೆ ಐಕ್ಯತೆ ವ್ಯಕ್ತಪಡಿಸಿದ ಇಥಿಯೋಪಿಯಾದ ಮಹಾಧರ್ಮಾಧ್ಯಕ್ಷರು
ಲೇಖಕರು: ಬೆಝವಿತ್ ಬೊಗಾಲೆ – ಅಡ್ಡಿಸ್ ಅಬಾಬ
ಇಥಿಯೋಪಿಯಾ ಕಥೋಲಿಕ ಮಹಾಧರ್ಮಾಧ್ಯಕ್ಷರ ಪರಿಷತ್ತು (CBCE) ದಕ್ಷಿಣ ಇಥಿಯೋಪಿಯಾದ ಗಾಮೋ ಪ್ರದೇಶದಲ್ಲಿ ಮಾರ್ಚ್ 11ರಂದು ಸಂಭವಿಸಿದ ಭೀಕರ ಭೂಕುಸಿತಗಳು ಮತ್ತು ಪ್ರವಾಹಗಳ ಕುರಿತು ತೀವ್ರ ದುಃಖವನ್ನು ವ್ಯಕ್ತಪಡಿಸಿದೆ. ಈ ದುರಂತದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದು, ಹಲವಾರು ಕುಟುಂಬಗಳು ಮನೆ-ಮಠಗಳನ್ನು ಕಳೆದುಕೊಂಡು ಸ್ಥಳಾಂತರಗೊಂಡಿದ್ದಾರೆ..
ಈ ವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಮಹಾಧರ್ಮಾಧ್ಯಕ್ಷರು ಈ ಭಾರೀ ಪ್ರಮಾಣದ ದುರಂತದ ಕುರಿತು“ಆಳವಾದ ದುಃಖ”ವನ್ನು ವ್ಯಕ್ತಪಡಿಸಿ, ಜೀವಹಾನಿಯ ಜೊತೆಗೆ, ತಮ್ಮ ಮನೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳ ನೋವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.
ಸಂತ್ರಸ್ತರಿಗೆ ತಕ್ಷಣದ ಮಾನವೀಯ ನೆರವನ್ನು ಒದಗಿಸಲು ಎಲ್ಲ ಸತ್ಸಂಕಲ್ಪದ ಜನರು ಒಂದಾಗಿ ಕಾರ್ಯನಿರ್ವಹಿಸಬೇಕೆಂದು ಮಹಾಧರ್ಮಾಧ್ಯಕ್ಷರು ಕರೆ ನೀಡಿದ್ದಾರೆ.
ಧರ್ಮಸಭೆಯ ಪ್ರತಿಕ್ರಿಯೆ: ಧಾರ್ಮಿಕ ಸೇವೆ ಮತ್ತು ಮಾನವೀಯ ನೆರವು
ದಕ್ಷಿಣ ಇಥಿಯೋಪಿಯಾ ಪ್ರಾದೇಶಿಕ ರಾಜ್ಯದ ಅಧ್ಯಕ್ಷರ ಕಚೇರಿಯಿಂದ ಹೊರಡಿಸಿದ ಪ್ರಕಟಣೆಯ ಪ್ರಕಾರ, 80 ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, ನೂರಾರು ಜನರು ಸ್ಥಳಚ್ಯುತರಾಗಿ ಸಮುದಾಯಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ಮಾರ್ಚ್ 15ರಂದು, ಪ್ರಾದೇಶಿಕ ಸರ್ಕಾರ ಮೃತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಇಥಿಯೋಪಿಯಾ ಕಥೋಲಿಕ ಧರ್ಮಸಭೆ ಸೋಡ್ಡೋ ಪ್ರೇಷಿತ ಧರ್ಮಪ್ರಾಂತ್ಯದ ಮೂಲಕ ತ್ವರಿತ ನೆರವು ಕಾರ್ಯಗಳನ್ನು ಪ್ರಾರಂಭಿಸಿದೆ.
ಮಹಾಧರ್ಮಾಧ್ಯಕ್ಷರ ಪರಿಷತ್ತಿನ ಹಿರಿಯ ನಾಯಕರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿ, ತುರ್ತು ಅಗತ್ಯಗಳನ್ನು ಪರಿಶೀಲಿಸಿ, ಸ್ಥಳೀಯ ಧರ್ಮಸಭೆಯ ಸೇವಾ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದು ಪ್ರಕಟಣೆ ಒತ್ತಿಹೇಳುತ್ತದೆ. ಬದುಕುಳಿದಿರುವವರ ನೆರವಿಗೆ ವಿಶ್ವಾಸಿಗಳೂ ಹಾಗೂ ಎಲ್ಲ ಇಥಿಯೋಪಿಯನ್ನರೂ ಒಂದಾಗಿ ನಿಲ್ಲಬೇಕೆಂದು ಮಹಾಧರ್ಮಾಧ್ಯಕ್ಷರು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಶೋಕಾಚರಣೆಯ ಸಮಯದಲ್ಲಿ ಪ್ರಾರ್ಥನೆಗೆ ಕರೆ
ಸಂತ ಪೌಲರ “ದುಃಖಿಸುವವರೊಂದಿಗೆ ದುಃಖಿಸಿರಿ” (ರೋಮ 12:15) ಎಂಬ ವಾಕ್ಯವನ್ನು ಉಲ್ಲೇಖಿಸಿ, ಮಹಾಧರ್ಮಾಧ್ಯಕ್ಷರು ದೇಶದಾದ್ಯಂತ ಇರುವ ವಿಶ್ವಾಸಿಗಳನ್ನು ನೋವು ಅನುಭವಿಸುತ್ತಿರುವವರೊಂದಿಗೆ ಆಧ್ಯಾತ್ಮಿಕವಾಗಿ ಒಂದಾಗಲು ಆಹ್ವಾನಿಸಿದರು.
FDRE(ಇಥಿಯೋಪಿಯಾ ಸಂಯುಕ್ತ ಪ್ರಜಾಸತ್ತಾತ್ಮಕ ಗಣರಾಜ್ಯ) ಜನಪ್ರತಿನಿಧಿಗಳ ಸದನ ಘೋಷಿಸಿದ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯ ಅವಧಿಯಲ್ಲಿ, ಧರ್ಮಸಭೆ ವಿಶ್ವಾಸಿಗಳನ್ನು ಪವಿತ್ರ ಬಲಿಪೂಜೆ ಅರ್ಪಿಸಲು, ಮೃತರಿಗಾಗಿ ಪ್ರಾರ್ಥಿಸಲು ಹಾಗೂ ಸಂತ್ರಸ್ತ ಸಮುದಾಯಗಳಿಗೆ ಸಹಾಯವನ್ನು ವಿಸ್ತರಿಸಲು ಪ್ರೇರೇಪಿಸಿದೆ.
ಮಹಾಧರ್ಮಾಧ್ಯಕ್ಷರು ಎಲ್ಲಾ ಶೋಕಾಚರಿಸುವ ಕುಟುಂಬಗಳಿಗೆ, ಮೃತರಾದವರ ಬಂಧುಗಳಿಗೆ ಹಾಗೂ ಇಥಿಯೋಪಿಯಾ ಜನತೆಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿ, ದೇವರು ತನ್ನ ಕರುಣೆಯಿಂದ ಅಗಲಿದವರ ಆತ್ಮಗಳನ್ನು ಸ್ವಾಗತಿಸಲಿ, ಬದುಕುಳಿದವರಿಗೆ ಅರೋಗ್ಯ, ಶಕ್ತಿ ಮತ್ತು ಸಾಂತ್ವನವನ್ನು ನೀಡಲೆಂದು ಪ್ರಾರ್ಥಿಸಿದರು.
ರಾಷ್ಟ್ರದ ರಕ್ಷಣೆಗಾಗಿ “ನಮ್ಮ ಪ್ರಭು ಯೇಸು ಕ್ರಿಸ್ತನು ನಮ್ಮ ರಾಷ್ಟ್ರವನ್ನು ರಕ್ಷಿಸಲಿ” ಎಂದು ಪ್ರಾರ್ಥನೆಯೊಂದಿಗೆ ಸಂದೇಶ ಸಮಾಪ್ತಿಯಾಯಿತು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).