ಹುಡುಕಿ

2026.01.07 Cardinal Berhaneyessus Surafel C.M., archi vescovo di Addis Ababa, etiopia 2026.01.07 Cardinal Berhaneyessus Surafel C.M., archi vescovo di Addis Ababa, etiopia 

ದ್ವೇಷ ಮತ್ತು ವಿಭಜನೆಗೆ ವಿರೋಧವಾಗಿ ನಿಲ್ಲಲು ಇಥಿಯೋಪಿಯಾದ ಧರ್ಮಾಧ್ಯಕ್ಷರ ಕರೆ

ಇಥಿಯೋಪಿಯಾದ ವಿವಿಧ ಭಾಗಗಳಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿದ ಕಥೋಲಿಕ ಧರ್ಮಾಧ್ಯಕ್ಷರು, ಸಮಾಜದಲ್ಲಿ ದ್ವೇಷವನ್ನು ತಿರಸ್ಕರಿಸಿ ವಿಭಜನೆ ಉಂಟುಮಾಡುವ ಪ್ರಯತ್ನಗಳನ್ನು ನಿರಾಕರಿಸಲು ಸದ್ಭಾವನೆಯುಳ್ಳ ಎಲ್ಲರಿಗೂ ಕರೆ ನೀಡಿದ್ದಾರೆ.

ವ್ಯಾಟಿಕನ್ ವರದಿ

ಇಥಿಯೋಪಿಯಾದ ವಿವಿಧ ಪ್ರದೇಶಗಳಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ಹಿಂಸಾಚಾರ ಮತ್ತು ಕ್ರೂರಕೃತ್ಯಗಳನ್ನು ಖಂಡಿಸಿದ ದೇಶದ ಕಥೋಲಿಕ ಧರ್ಮಾಧ್ಯಕ್ಷರು, ಯಾವುದೇ ಧಾರ್ಮಿಕ ಬೋಧನೆ, ಸಂಸ್ಕೃತಿ ಅಥವಾ ರಾಜಕೀಯ ಕಾರಣಗಳಿಂದಲೂ ಇಂತಹ ಹಿಂಸಾಚಾರವನ್ನು ನ್ಯಾಯೀಕರಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸುವ ಪ್ರಕಟಣೆಯಲ್ಲಿ, ಧರ್ಮಾಧ್ಯಕ್ಷರು ಒರೋಮಿಯಾ ಪ್ರಾಂತ್ಯದ ಆರ್ಸಿ ವಲಯದಲ್ಲಿ ಒರೊಮೊ ಲಿಬರೇಶನ್ ಆರ್ಮಿ ಸಶಸ್ತ್ರ ಸಂಘಟನೆಯು ನಡೆಸಿದ ದಾಳಿಗಳನ್ನು ಉಲ್ಲೇಖಿಸಿದರು. ಫೆಬ್ರವರಿ ಅಂತ್ಯದಲ್ಲಿ ನಡೆದ ಈ ದಾಳಿಗಳಲ್ಲಿ ಸಾವಿರಾರು ಜನರು ಸಾವಿಗೀಡಾದರು, ಹಲವರು ಗಾಯಗೊಂಡರು, ತಮ್ಮ ಮನೆಗಳನ್ನು ತೊರೆಯಬೇಕಾಯಿತು ಮತ್ತು ಕೆಲವರನ್ನು ಅಪಹರಿಸಲಾಯಿತು.

ಇಥಿಯೋಪಿಯಾದ ಕಥೋಲಿಕ ಧರ್ಮಾಧ್ಯಕ್ಷರ ಸಮಿತಿಯ ಅಧ್ಯಕ್ಷರಾದ ಪೂಜ್ಯ ಪ್ರಧಾನ ಗುರು ಬೆರ್ಹಾನೆಯೇಸುಸ್ ತಾವು ಹೊರಡಿಸಿದ ಪ್ರಕಟಣೆಯಲ್ಲಿ ಹೀಗೆ ನುಡಿದಿದ್ದಾರೆ: “ನಮ್ಮ ದೇಶದ ವಿವಿಧ ಪ್ರದೇಶಗಳಲ್ಲಿ ನಿರಪರಾಧಿಗಳ ಮೇಲೆ ನಡೆದ ಕ್ರೂರ ಮತ್ತು ಅಮಾನವೀಯ ಹತ್ಯೆಗಳು ಹಾಗೂ ಆಸ್ತಿಪಾಸ್ತಿಗಳ ನಾಶದಿಂದ ನಾವು ಆಳವಾಗಿ ದುಃಖಿತರಾಗಿದ್ದೇವೆ; ವಿಶೇಷವಾಗಿ ಆರ್ಸಿ ವಲಯದಲ್ಲಿ ಸತತವಾಗಿ ನಡೆಯುತ್ತಿರುವ ಕ್ರೂರ ಘಟನೆಗಳು ನಮಗೆ ತೀವ್ರವಾಗಿ ನೋವುಂಟುಮಾಡಿವೆ.”

ಪೂಜ್ಯರು, ಧರ್ಮಸಭೆಯು “ಈ ಅಮಾನವೀಯ ಕೃತ್ಯವನ್ನು” ತೀವ್ರವಾಗಿ ಖಂಡಿಸುತ್ತಿರುವುದನ್ನು ಮತ್ತೊಮ್ಮೆ ಒತ್ತಿಹೇಳಿ, ಕಾನೂನಿನ ಆಳ್ವಿಕೆಯನ್ನು ಕಾಪಾಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಕರೆ ನೀಡಿದರು.

ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಕ್ರೂರಕೃತ್ಯಗಳು

ಸ್ಥಳೀಯ ಮಾಧ್ಯಮ ವರದಿಗಳು ಆ ಪ್ರದೇಶದಲ್ಲಿ ಹಿಂಸಾಚಾರ ಹೆಚ್ಚುತ್ತಿರುವುದನ್ನು ಮತ್ತು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಗಳು ನಡೆಯುತ್ತಿರುವುದನ್ನು ಸೂಚಿಸುತ್ತಿವೆ. ನಾಗರಿಕರು ಹತ್ಯೆಗಳು, ಗಾಯಗಳು, ದೊಡ್ಡ ಪ್ರಮಾಣದ ಆಸ್ತಿ ನಾಶ ಮತ್ತು ಬಲವಂತದ ಸ್ಥಳಾಂತರಗಳನ್ನು ಎದುರಿಸುತ್ತಿದ್ದಾರೆ.

2026ರ ಮಾರ್ಚ್ ತಿಂಗಳ ವರದಿಯಲ್ಲಿ, ಇಥಿಯೋಪಿಯಾದ ಮಾನವ ಹಕ್ಕುಗಳ ಆಯೋಗ ಈ ಕ್ರೂರಕೃತ್ಯಗಳನ್ನು ದಾಖಲಿಸಿದೆ. ಅದರ ಪ್ರಕಾರ, ಇತ್ತೀಚೆಗೆ 34 ಆರ್ಥಡಾಕ್ಸ್ ಕ್ರೈಸ್ತರು ಹತ್ಯೆಯಾಗಿದ್ದಾರೆ, ಇದರಿಂದ ಈ ವರ್ಷ ಮಾತ್ರ ಶಿರ್ಕಾ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 164ಕ್ಕೆ ಏರಿದೆ.

ಸಾಕ್ಷಿಗಳ ಪ್ರಕಾರ, ನಿರಂತರ ಭೀತಿಯ ವಾತಾವರಣದ ನಡುವೆ ಕುಟುಂಬಗಳು ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗುತ್ತಿವೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದು, ಭಯ ಮತ್ತು ನಾಶದಿಂದ ಸ್ಥಳೀಯ ಆರ್ಥಿಕತೆ ಕೂಡ ಸ್ಥಗಿತಗೊಂಡಿದೆ. ಇದರಿಂದ ಮಾನವೀಯ ಸಂಕಷ್ಟ ಮತ್ತಷ್ಟು ಗಂಭೀರವಾಗುತ್ತಿದೆ.

ಸದ್ಭಾವನೆಯುಳ್ಳ ಎಲ್ಲರಿಗೂ ಮನವಿ

2025ರಲ್ಲಿ ಒರೋಮಿಯಾ ರಾಜ್ಯದಲ್ಲಿ ಆರಂಭವಾದ ಅಶಾಂತಿ ಮತ್ತು ಹಿಂಸಾಚಾರದ ಅಲೆ ಇದುವರೆಗೆ 1,244ಕ್ಕಿಂತ ಹೆಚ್ಚು ನಾಗರಿಕರ ಪ್ರಾಣಗಳನ್ನು ಕಿತ್ತುಕೊಂಡಿದೆ ಎಂದು ವರದಿಗಳು ಸೂಚಿಸುತ್ತವೆ.

ನಿರಪರಾಧಿಗಳ ಮೇಲೆ ನಡೆಯುವ ಯಾವುದೇ ರೀತಿಯ ಹಿಂಸಾಚಾರವನ್ನು ಧರ್ಮಾಧ್ಯಕ್ಷರು ಮತ್ತೊಮ್ಮೆ ಖಂಡಿಸಿದರು. ಈ ಸಂದರ್ಭದಲ್ಲಿ ಅವರು ಇಥಿಯೋಪಿಯನ್ ಆರ್ಥಡಾಕ್ಸ್ ತೇವಾಹೆದೋ ಧರ್ಮಸಭೆ, ಇಥಿಯೋಪಿಯನ್ ಇಸ್ಲಾಮಿಕ್ ವ್ಯವಹಾರಗಳ ಉನ್ನತ ಮಂಡಳಿ, ಹಾಗೂ ಸದ್ಭಾವನೆಯುಳ್ಳ ಎಲ್ಲಾ ಜನರೊಂದಿಗೆ ಕೈಜೋಡಿಸಿ ಕೆಲಸ ಮಾಡುವುದಾಗಿ ಹೇಳಿದರು.

“ಎಲ್ಲಾ ಇಥಿಯೋಪಿಯನ್ನರೂ ದ್ವೇಷಕ್ಕೆ ತಲೆಬಾಗದೆ ಅದನ್ನು ತಿರಸ್ಕರಿಸಬೇಕು; ಈ ದುಃಖಕರ ಘಟನೆಗಳ ಮಾರ್ಗವನ್ನು ಅನುಸರಿಸಬಾರದು; ನಮ್ಮ ಸಮಾಜದಲ್ಲಿ ವಿಭಜನೆ ಉಂಟುಮಾಡುವ ಎಲ್ಲಾ ಪ್ರಯತ್ನಗಳನ್ನು ನಿರಾಕರಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

13 ಮಾರ್ಚ್ 2026, 18:34