ಟಿಮೋರ್-ಲೆಸ್ಟೆ: ಆರಂಭಿಕ ಪವಿತ್ರ ಅಭಿಷೇಕ ಬಲಿಪೂಜೆಯಲ್ಲಿ ನಿಸ್ವಾರ್ಥ ಸೇವೆಗೆ ಕರೆ
ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ
ಪವಿತ್ರ ಬಲಿಪೂಜೆಯನ್ನು ಮುನ್ನಡೆಸಿದ ಮಹಾಧರ್ಮಾಧ್ಯಕ್ಷ ವರ್ಜಿಲಿಯೋ ಅವರು, “500 ವರ್ಷಗಳಿಗೂ ಹೆಚ್ಚು ಕಾಲ ಇಲ್ಲಿ ಸೇವೆ ಸಲ್ಲಿಸಿದ ಧಾರ್ಮಿಕರಿಂದ ಸೇವಾದರ್ಶಿಗಳಿಂದ ನಾವು ಕಲಿಯುತ್ತೇವೆ. ನಮ್ಮ ದೇಶಕ್ಕಾಗಿ ತಮ್ಮ ಜೀವನವನ್ನು ಅರ್ಪಿಸಿದವರಿಂದ ಇಂದಿಗೂ ನಾವು ಪಾಠಗಳನ್ನು ಪಡೆಯುತ್ತೇವೆ. ಅವರು ತೋರಿದ ನಿಸ್ವಾರ್ಥ ಸೇವೆಯ ಮಾದರಿಯನ್ನು ನಾವು ಪ್ರತಿದಿನ ಒಪ್ಪಿಕೊಳ್ಳುವ ಮತ್ತು ಬದುಕುವ ನಂಬಿಕೆಯ ಮಾದರಿಯಾಗಿ ನೋಡಬೇಕು,” ಎಂದು ಹೇಳಿದರು. ಪವಿತ್ರ ವಾರದ ಸಿದ್ಧತೆಯಲ್ಲಿರುವ ಧರ್ಮಸಭೆಯ ಭಾಗವಾಗಿ, 2026ರ ಮಾರ್ಚ್ 26ರಂದು ಡಿಲಿ ಮಹಾಧರ್ಮಕ್ಷೇತ್ರದ ವಿಶ್ವಾಸಿಗಳು ಪ್ರಧಾನ ದೇವಾಲಯದಲ್ಲಿ ಪವಿತ್ರ ಅಭಿಷೇಕ ಬಲಿಪೂಜೆಗೆ ಸೇರಿದ್ದರು.
ಸಾಮಾನ್ಯವಾಗಿ ಪವಿತ್ರ ಗುರುವಾರದಂದು ನಡೆಯುವ ಈ ಬಲಿಪೂಜೆಯನ್ನು, ಧಾರ್ಮಿಕ ಕಾರ್ಯಗಳ ಕಾರಣಗಳಿಂದ ಮುಂಚಿತವಾಗಿ ಆಚರಿಸಲಾಯಿತು. ಈ ಬಲಿಪೂಜೆಯಲ್ಲಿ ಗುರುಗಳು, ಡೀಕನ್‌ಗಳು, ಅಭಿಷಿಕ್ತರು, ಗುರುದೀಕ್ಷಾಭ್ಯರ್ಥಿಗಳು ಮತ್ತು ವಿಶ್ವಾಸಿಗಳು ತಮ್ಮ ಧರ್ಮಾಧ್ಯಕ್ಷರೊಂದಿಗೆ ಏಕತೆಯ ದೃಶ್ಯರೂಪವಾಗಿ ಭಾಗವಹಿಸಿದರು. ಈ ಆಚರಣೆಯ ಕೇಂದ್ರಬಿಂದು ಪವಿತ್ರ ಅಭಿಷೇಕದ ಎಣ್ಣೆಯ ಅಭಿಷೇಕವಾಗಿದ್ದು, ಇದು ವರ್ಷದಾದ್ಯಂತ ಸಂಸ್ಕಾರಗಳಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಗುರುಗಳ ವಾಗ್ದಾನಗಳ ನವೀಕರಣವೂ ನೆರವೇರಿತು.
ಏಕತೆ ಮತ್ತು ಕರೆಯ ಸಂಕೇತ
ತಮ್ಮ ಉಪನ್ಯಾಸದಲ್ಲಿ ಮಹಾಧರ್ಮಾಧ್ಯಕ್ಷ ವರ್ಜಿಲಿಯೋ ಅವರು, ಪವಿತ್ರ ಅಭಿಷೇಕ ಬಲಿಪೂಜೆ ಧರ್ಮಸಭೆಯೊಳಗಿನ ಏಕತೆಯ ಆಳವಾದ ವ್ಯಕ್ತೀಕರಣವಾಗಿದೆ ಎಂದು ಒತ್ತಿ ಹೇಳಿದರು. “ಈ ಬಲಿಪೂಜೆ ಏಕತೆಯ ಸಂಕೇತವಾಗಿದೆ. ಇದು ಗುರುಗಳು, ಧರ್ಮಾಧಿಕಾರಿಗಳು, ಧರ್ಮನಿಷ್ಠರು, ವಿದ್ಯಾರ್ಥಿಗಳು ಮತ್ತು ವಿಶ್ವಾಸಿಗಳನ್ನು ಅವರ ಧರ್ಮಾಧ್ಯಕ್ಷರೊಂದಿಗೆ ಒಂದಾಗಿಸುತ್ತದೆ,” ಎಂದು ಹೇಳಿದರು. ಗುರುಗಳಿಗೆ ತಮ್ಮ ಧರ್ಮಸೇವೆಯ ಗುರುತನ್ನು ನೆನಪಿಸಿ, ದೇವರ ಜನರಿಗೆ ಸೇವೆ ಸಲ್ಲಿಸುವ ತಮ್ಮ ಬದ್ಧತೆಯನ್ನು ಪುನಃ ದೃಢಪಡಿಸಲು ಅವರು ಕರೆ ನೀಡಿದರು. “ಗುರುಗಳು ತಮ್ಮ ಧರ್ಮಾಧ್ಯಕ್ಷರೊಂದಿಗೆ ಸೇರಿ, ವಿಧೇಯತೆಯ ವಾಗ್ದಾನಗಳನ್ನು ನವೀಕರಿಸಿ… ಮರೋಮಾಕ್ ಜನರಿಗೆ ತಮ್ಮನ್ನು ಸಮರ್ಪಿಸುವ ಆಸೆಯನ್ನು ಪುನಃ ದೃಢಪಡಿಸುತ್ತಾರೆ,” ಎಂದು ಹೇಳಿದರು. ಅದೇ ವೇಳೆ, ಧರ್ಮಾಧಿಕಾರಿಗಳು ಮತ್ತು ಧರ್ಮಸೇವೆಗೆ ಸಿದ್ಧಗೊಳ್ಳುತ್ತಿರುವವರಿಗಾಗಿ ಪ್ರಾರ್ಥಿಸಲು ವಿಶ್ವಾಸಿಗಳಿಗೆ ಆಹ್ವಾನಿಸಿದರು. ಅವರು ದೇವರ ಕೃಪೆಯ ಸಾಧನಗಳಾಗಲೆಂದು ಪ್ರಾರ್ಥಿಸಬೇಕು ಎಂದು ಹೇಳಿದರು.
ಕರೆಯ ಮೂಲಗಳಿಗೆ ಮರಳುವ ಕರೆ
ಸುವಾರ್ತೆಯ ಮೇಲೆ ಚಿಂತನೆ ನಡೆಸಿದ ಮಹಾಧರ್ಮಾಧ್ಯಕ್ಷರು, ಗುರುಗಳು ಮತ್ತು ವಿಶ್ವಾಸಿಗಳು ತಮ್ಮ ಕರೆಯ ಮೂಲವನ್ನು ಕ್ರಿಸ್ತನಲ್ಲಿ ಪುನಃ ಕಂಡುಕೊಳ್ಳಬೇಕೆಂದು ಹೇಳಿದರು. “ನಮ್ಮ ಅಭಿಷೇಕದ ದಿನದಲ್ಲಿ, ನಾವು ನಜರೇತ್‌ನ ಯೇಸುವಿನ ಕಥೆಯ ಮೂಲಕವೇ ಈ ಇತಿಹಾಸದ ಭಾಗವಾಗುತ್ತೇವೆ ಎಂದು ಒಪ್ಪಿಕೊಳ್ಳುತ್ತೇವೆ,” ಎಂದು ಹೇಳಿದರು. ಅವರು ವಿವರಿಸಿದಂತೆ, ನಿಜವಾದ ಧರ್ಮಸೇವೆ ಕ್ರಿಸ್ತನೊಂದಿಗೆ ವ್ಯಕ್ತಿಗತ ಭೇಟಿಯಿಂದ ಆರಂಭವಾಗುತ್ತದೆ; ಅದು ವ್ಯಕ್ತಿಯ ಗುರುತು ಮತ್ತು ಧರ್ಮಕಾರ್ಯವನ್ನು ಸ್ಪಷ್ಟಪಡಿಸುತ್ತದೆ. “ನಾವು ಯೇಸುವನ್ನು ಅನುಸರಿಸಿದರೆ, ನಮ್ಮ ಸೇವೆ ದೇವರ ಜನರಿಗೆ ಭರವಸೆಯ ಸೇವೆಯಾಗುತ್ತದೆ,” ಎಂದು ಅವರು ಹೇಳಿದರು. ಗುರುಗಳು ತಮ್ಮ ಜೀವನ ಮತ್ತು ಕರೆಯ ಬಗ್ಗೆ ಹೊಸ ಅರಿವಿನಿಂದ ಚಿಂತಿಸಬೇಕು ಹಾಗೂ ತಮ್ಮ ಜೀವನಯಾತ್ರೆಯಲ್ಲಿ ದೇವರ ಸಾನ್ನಿಧ್ಯವನ್ನು ಗುರುತಿಸಬೇಕು ಎಂದು ಅವರು ಪ್ರೋತ್ಸಾಹಿಸಿದರು.
ಪವಿತ್ರ ಗ್ರಂಥ ಮತ್ತು ಪರಂಪರೆಯಲ್ಲಿ ನೆಲೆಸಿರುವ ಜೀವನ
ಮಹಾಧರ್ಮಾಧ್ಯಕ್ಷರು ಪವಿತ್ರ ಶಾಸ್ತ್ರ ಮತ್ತು ಪರಂಪರೆ ಕ್ರೈಸ್ತ ಜೀವನ ಮತ್ತು ಧರ್ಮಸೇವೆಯ ಆಧಾರವೆಂದು ಹೇಳಿದರು. ಗುರುಗಳು ಮತ್ತು ವಿಶ್ವಾಸಿಗಳು ದೇವರ ವಾಕ್ಯವನ್ನು ಪ್ರತಿದಿನ ಓದಿ, ಧ್ಯಾನಿಸಿ, ಜೀವನದಲ್ಲಿ ಅನುಸರಿಸಬೇಕು ಎಂದು ಅವರು ಒತ್ತಿ ಹೇಳಿದರು. “ನಾವು ಲೋಕದಲ್ಲಿ ಸೇವೆ ಮಾಡಲು ಹೊರಟಾಗ, ಪವಿತ್ರ ಗ್ರಂಥವೇ ನಮ್ಮ ಮಾರ್ಗದರ್ಶಕವಾಗುತ್ತದೆ,” ಎಂದು ಹೇಳಿದರು.
ನಜರೇತ್‌ನಲ್ಲಿ ಯೇಸು ಮಾಡಿದ ಘೋಷಣೆಯನ್ನು ಉಲ್ಲೇಖಿಸಿ, ಪ್ರತಿಯೊಬ್ಬ ಕ್ರೈಸ್ತನಿಗೂ ನೀಡಲ್ಪಟ್ಟ ಧರ್ಮಕಾರ್ಯವನ್ನು ಅವರು ನೆನಪಿಸಿದರು:“ದೇವರ ಆತ್ಮ ನನ್ನ ಮೇಲೆ ಇದೆ… ಬಡವರಿಗೆ ಶುಭಸಂದೇಶ ಸಾರಲು… ಬಂಧಿತರರಿಗೆ ವಿಮೋಚನೆ ಘೋಷಿಸಲು… ಪೀಡಿತರನ್ನು ಬಿಡುಗಡೆ ಮಾಡಲು ಅವರೆನ್ನನು ಅಭಿಷೇಕಿಸಿದ್ದಾರೆ..”
ಗುರುತ್ವದ ದಾನ ಮತ್ತು ಹೊಣೆಗಾರಿಕೆ
ಗುರುತ್ವವು ದೇವರಿಂದ ನೀಡಲ್ಪಟ್ಟ ಅಮೂಲ್ಯ ದಾನವೆಂದು ಮಹಾಧರ್ಮಾಧ್ಯಕ್ಷರು ವಿವರಿಸಿದರು. “ಗುರುತ್ವಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸೋಣ. ಇದು ದೇವರ ಜನರಿಗಾಗಿ ನಮಗೆ ನೀಡಲ್ಪಟ್ಟ ಅಮೂಲ್ಯ ದಾನವಾಗಿದೆ,” ಎಂದು ಹೇಳಿದರು. ಗುರುಗಳು ತಮ್ಮ ದಿನನಿತ್ಯದ ಧರ್ಮಸೇವೆಯಲ್ಲಿ ಈ ದಾನ ಜೀವನವನ್ನು ಹೇಗೆ ಜೀವಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ಕರೆ ನೀಡಿದರು. “ನಾವು ಕೆಲವೊಮ್ಮೆ ದುರ್ಬಲರಾಗಿದ್ದರೂ, ದೇವರು ನಮ್ಮೊಂದಿಗೆ ಇರುತ್ತಾನೆ,” ಎಂದು ಅವರು ನೆನಪಿಸಿದರು. ಪವಿತ್ರ ಅಭಿಷೇಕದ ಎಣ್ಣೆಯ ಅಭಿಷೇಕವು ಪರಿವರ್ತನೆ ಮತ್ತು ನಿರಂತರ ಸೇವೆಯ ಸಂಕೇತವಾಗಿದ್ದು, ಧರ್ಮಸಭೆಯ ಜೀವನದಲ್ಲಿ ದೇವರ ಸಾನ್ನಿಧ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಸಹೋದರತ್ವ ಮತ್ತು ಸೇವೆಗೆ ಕರೆ
ಸಹಯಾತ್ರೆಯ ಧರ್ಮಸಭೆಯ ದೃಷ್ಟಿಯಲ್ಲಿ, ಗುರುಗಳ ನಡುವೆ ಸಹೋದರತ್ವ ಮತ್ತು ಜನರೊಂದಿಗೆ ಹತ್ತಿರದ ಸಂಬಂಧದ ಮಹತ್ವವನ್ನು ಮಹಾಧರ್ಮಾಧ್ಯಕ್ಷರು ಒತ್ತಿ ಹೇಳಿದರು. “ನಾವು ಸಹಯಾತ್ರೆಯ ಆತ್ಮದ ಕಾಲದಲ್ಲಿ ಬದುಕುತ್ತಿದ್ದೇವೆ… ನಿಮ್ಮ ಸೇವೆಯನ್ನು ಜನರೊಂದಿಗೆ ಹತ್ತಿರವಾಗಿಯೂ, ಸಹಗುರುಗಳೊಂದಿಗೆ ಐಕ್ಯತೆಯಲ್ಲಿಯೂ ನಿರ್ವಹಿಸಿ,” ಎಂದು ಹೇಳಿದರು.
ಪೂಜ್ಯ ಜಗದ್ಗುರು 14ನೆ ಲಿಯೋರವರ ಬೋಧನೆಯನ್ನು ಉಲ್ಲೇಖಿಸಿ, ಗುರುಗಳು ಪ್ರಾರ್ಥನೆ, ಅಧ್ಯಯನ ಮತ್ತು ಸಮುದಾಯ ಜೀವನದ ಮೂಲಕ ನಿಜವಾದ ಸಂಬಂಧಗಳನ್ನು ಬೆಳೆಸಬೇಕು ಎಂದು ಹೇಳಿದರು. “ಧರ್ಮಸಭೆಯಲ್ಲಿ ಅಧಿಕಾರವನ್ನು ಹುಡುಕುವುದಲ್ಲ, ಸೇವೆ ಮತ್ತು ವಿನಯದ ಆತ್ಮವನ್ನು ಅಳವಡಿಸಿಕೊಳ್ಳುವುದು ಮುಖ್ಯವೆಂದು ಪೂಜ್ಯ ಜಗದ್ಗುರುಗಳು ನೆನಪಿಸುತ್ತಾರೆ,” ಎಂದು ಹೇಳಿದರು.
ಧರ್ಮಕಾರ್ಯದ ಸಾಕ್ಷ್ಯ
ಟಿಮೋರ್-ಲೆಸ್ಟೆಯಲ್ಲಿ ಹಲವು ತಲೆಮಾರುಗಳಿಂದ ಸೇವೆ ಸಲ್ಲಿಸಿದ ಧಾರ್ಮಿಕ ಸೇವಾದರ್ಶಿಗಳನ್ನು ಮಹಾಧರ್ಮಾಧ್ಯಕ್ಷರು ನೆನಪಿಸಿದರು. ಅವರಲ್ಲಿ ಅನೇಕರೂ ತಮ್ಮ ನಂಬಿಕೆಯ ಸಾಕ್ಷಿಯಾಗಿ ಜೀವತ್ಯಾಗ ಮಾಡಿದ್ದಾರೆ. “500 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸಿದ ಧಾರ್ಮಿಕರಿಂದ ನಾವು ಕಲಿಯುತ್ತೇವೆ… ಅವರ ನಿಸ್ವಾರ್ಥ ಸೇವೆಯ ಮಾದರಿಯನ್ನು ನಾವು ಅನುಸರಿಸೋಣ,” ಎಂದು ಹೇಳಿದರು.
ಅಂತಿಮವಾಗಿ, ವಿಶ್ವಾಸಿಗಳು ಕ್ರಿಸ್ತನ ಧರ್ಮಕಾರ್ಯಕ್ಕೆ ತಮ್ಮ ಬದ್ಧತೆಯನ್ನು ಸಹನೆ, ತ್ಯಾಗ ಮತ್ತು ಭಕ್ತಿಯೊಂದಿಗೆ ನವೀಕರಿಸಬೇಕೆಂದು ಅವರು ಕರೆ ನೀಡಿದರು.
ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ)