2018.09.28 International week of the Deaf and Sign Language 2018.09.28 International week of the Deaf and Sign Language 

ಘಾನಾ: ಶ್ರವಣ ದೋಷವಿರುವ ವಿಶ್ವಾಸಿಗಳೊಂದಿಗೆ ಒಂದಾಗುವ ಮತ್ತು ಸಹಭಾಗಿತ್ವ ನೀಡುತ್ತಿರುವ ಧರ್ಮಸಭೆ

ಘಾನಾದ ಧರ್ಮಸಭೆ, ಶ್ರವಣ ದೋಷವಿರುವ ಮತ್ತು ಕಡಿಮೆ ಕೇಳುವ ವಿಶ್ವಾಸಿಗಳು ಧರ್ಮಸಭೆಯ ಆರಾಧನಾ ಜೀವನದಿಂದ ದೂರವಾಗದಂತೆ ಅಕ್ರಾದಲ್ಲಿ ಸಂತ ಮಾರ್ಟಿನ್ ಶ್ರವಣ ದೋಷವಿರುವರವರ ಸೇವಾ ಸಂಸ್ಥೆಯನ್ನು ಸ್ಥಾಪಿಸಿದೆ.

ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೋ, CPS 

ವ್ಯಾಟಿಕನ್‌ ಫೀಡೆಸ್‌ ಸುದ್ದಿ ಸಂಸ್ಥೆ ತಿಳಿಸಿದಂತೆ, ಘಾನಾದ ರಾಜಧಾನಿ ಅಕ್ರಾದ ಉಪನಗರವಾದ ಮದೀನಾದಲ್ಲಿ ಆರಂಭವಾದ ಸರಳವಾದ ಧಾರ್ಮಿಕ ಪಾಲನೆಯ ಮುಂದಾಳತ್ವವು ಇಂದು ಶ್ರವಣ ದೋಷವಿರುವ ಕಥೋಲಿಕ ವಿಶ್ವಾಸಿಗಳೊಂದಿಗೆ ಒಂದಾಗುವ ಮತ್ತು ಸಹಭಾಗಿತ್ವ ಒದಗಿಸುವ ಮಹತ್ವದ ಸೇವೆಯಾಗಿ ಬೆಳೆಯುತ್ತಿದೆ.

ಸೊಸೈಟಿ ಆಫ್ ಆಫ್ರಿಕಾ ಮಿಷನ್ಸ್ (SMA) ಸಂಘಕ್ಕೆ ಸೇರಿದ ವಂ. ಗುರು ರೆನೆ ಯಾವೊ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸೇವೆ, ಸಮಾಜದಲ್ಲಿ ಮೂಲೆಗುಂಪಾಗಿರುವವರಿಗೂ ಸುವಾರ್ತೆ ತಲುಪಬೇಕು ಎಂಬ ಧರ್ಮಸಭೆಯ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ. ಅವರು 2020ರ ನವೆಂಬರ್‌ನಲ್ಲಿ ಅಕ್ರಾದ ಮದೀನಾದಲ್ಲಿ ಶ್ರವಣ ದೋಷವಿರುವವರಿಗಾಗಿ ಧಾರ್ಮಿಕ ಪಾಲನಾ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದರು. ಆಗಿನಿಂದ ಇದು ಕಿವುಡರು ಮತ್ತು ಕಡಿಮೆ ಕೇಳುವ ವಿಶ್ವಾಸಿಗಳ ಹೆಚ್ಚುತ್ತಿರುವ ಸಮೂಹಕ್ಕೆ ಸೇವೆ ನೀಡುತ್ತಿರುವ ಚೈತನ್ಯಮಯ ಧಾರ್ಮಿಕ ಕಾರ್ಯವಾಗಿ ಬೆಳೆಯುತ್ತಿದೆ.

“ಆರಂಭದಲ್ಲಿ ನನಗೆ ಕಚೇರಿ ಇರಲಿಲ್ಲ. ಧರ್ಮಕೇಂದ್ರದ ಹತ್ತಿರದ ಮರದ ಕೆಳಗೆ ಕುಳಿತು ಸೇವೆ ಮಾಡುತ್ತಿದ್ದೆ. ನಂತರ ಧರ್ಮಕೇಂದ್ರದ ವಿಶ್ವಾಸಿಗಳು ಮರದ ಕೆಳಗೆ ಕೆಲಸ ಮಾಡುವುದು ಸರಿಯಲ್ಲ ಎಂದು ಹೇಳಿ ನನಗೆ ಸಣ್ಣ ಕಚೇರಿ ವ್ಯವಸ್ಥೆ ಮಾಡಿದರು,” ಎಂದು ವಂ. ಗುರು ಯಾವೊ ನೆನಪಿಸಿಕೊಂಡರು.

ಫೀಡೆಸ್‌ಗೆ ನೀಡಿದ ಹೇಳಿಕೆಯಲ್ಲಿ, ತಾವು ಸ್ಥಾಪಿಸಿದ ಸಂತ ಮಾರ್ಟಿನ್ ಕಿವುಡರ ಸೇವೆಯ ಚಟುವಟಿಕೆಗಳನ್ನು ಮುಂದುವರಿಸಲು ಧರ್ಮಕೇಂದ್ರದ ವಿಶ್ವಾಸಿಗಳ ದಾನಶೀಲತೆ ಮತ್ತು ಸಣ್ಣ ಸಹಾಯಧನಗಳು ಸಹಕಾರ ನೀಡುತ್ತಿವೆ ಎಂದು ಅವರು ಹೇಳಿದರು. ಈ ಧಾರ್ಮಿಕ ಪಾಲನೆಯ ಸೇವೆಯ ಕೇಂದ್ರದಲ್ಲಿ ಐಕಮತ್ಯ ಇದೆ. ಆಧ್ಯಾತ್ಮಿಕ ಮಾರ್ಗದರ್ಶನದ ಜೊತೆಗೆ ಸಾಮಾಜಿಕ ತೊಡಗಿಸಿಕೊಳ್ಳುವಿಕೆ ಮತ್ತು ಶಿಕ್ಷಣಾತ್ಮಕ ಕಾರ್ಯಕ್ರಮಗಳನ್ನು ಇದು ಒಟ್ಟುಗೂಡಿಸುತ್ತದೆ.

ಧರ್ಮಕೇಂದ್ರದ ಸ್ವಾಗತಿಸುವ-ಸ್ವೀಕರಿಸುವ ಸಮುದಾಯ

ವಂ. ಗುರು ಯಾವೊ ಅವರ ಸೇವೆಯ ಪ್ರಮುಖ ಗುರಿ, ಕಿವುಡ ವಿಶ್ವಾಸಿಗಳನ್ನು ಧರ್ಮಸಭೆಯ ಜೀವನದ ಎಲ್ಲಾ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಸೇರಿಸುವುದಾಗಿದೆ. ಧರ್ಮಕೇಂದ್ರದ ಸದಸ್ಯರಿಗೆ ಸಂಕೇತ ಭಾಷೆಯ ತರಬೇತಿ ನೀಡಲಾಗುತ್ತದೆ, ಇದರಿಂದ ಪರಸ್ಪರ ಸಂವಹನ ಸುಲಭವಾಗುತ್ತದೆ ಮತ್ತು ಈ ಸೇವೆ ಮುಂದುವರಿಯಲು ಸಹಕಾರಿಯಾಗುತ್ತದೆ.

ಈ ಪ್ರಯತ್ನಗಳು ಕಿವುಡರು ಮತ್ತು ಕೇಳುವ ವಿಶ್ವಾಸಿಗಳು ಪರಸ್ಪರ ಮುಕ್ತವಾಗಿ ಸಂಪರ್ಕ ಹೊಂದುವ ವಾತಾವರಣವನ್ನು ನಿರ್ಮಿಸುತ್ತವೆ. ಇದರಿಂದ ಪರಸ್ಪರ ಗೌರವ ಮತ್ತು ಅರ್ಥಮಾಡಿಕೊಳ್ಳುವಿಕೆಯನ್ನು ಆಧಾರವಾಗಿಟ್ಟುಕೊಂಡ ಸಮುದಾಯ ರೂಪುಗೊಳ್ಳುತ್ತದೆ.

ವಂ. ಗುರು ಯಾವೊ ಅವರ ಧಾರ್ಮಿಕ ದೃಷ್ಟಿಕೋನವು ವಿಭಜನೆಯ ಬದಲು ಏಕತೆಯನ್ನು ಒತ್ತಿ ಹೇಳುತ್ತದೆ. “ನಾನು ಕಿವುಡರಿಗಾಗಿ ಪ್ರತ್ಯೇಕವಾಗಿ ಪವಿತ್ರ ಬಲಿಪೂಜೆ ಆಚರಣೆ ನಡೆಸಲು ಬಯಸುವುದಿಲ್ಲ, ಅವರು ಈಗಾಗಲೇ ಸಾಕಷ್ಟು ಹೊರತಳ್ಳಲ್ಪಟ್ಟ ಅನುಭವ ಹೊಂದಿದ್ದಾರೆ. ನಾವು ಅವರಿಗಾಗಿ ಮಾತ್ರ ಬಲಿಪೂಜೆ ಆಚರಿಸಿದರೆ, ಅವರನ್ನು ಕೇಳುವ ವಿಶ್ವಾಸಿಗಳ ಸಮುದಾಯದಿಂದ ಇನ್ನಷ್ಟು ದೂರ ಮಾಡುತ್ತೇವೆ. ನಾವು ಎಲ್ಲರೂ ಒಟ್ಟಾಗಿ ಕ್ರಿಸ್ತನ ದೇಹವಾಗಿ ಪ್ರಾರ್ಥಿಸಬೇಕು.”

ಈ ಬದ್ಧತೆಯ ಮೂಲಕ ಸಂತ ಮಾರ್ಟಿನ್ ಕಿವುಡರ ಸೇವೆ, ಸಾಮರ್ಥ್ಯ ಏನೇ ಇರಲಿ ಪ್ರತಿಯೊಬ್ಬರಿಗೂ ಪ್ರಭುವಿನ ಭೋಜನದ ಮೇಜಿನಲ್ಲಿ ಸ್ಥಾನ ಒದಗಿಸುವ ಧರ್ಮಸಭೆಯ ಸಾಕ್ಷಿಯಾಗಿ ಮುಂದುವರಿಯುತ್ತಿದೆ. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

11 ಮಾರ್ಚ್ 2026, 18:53