ಹುಡುಕಿ

LEBANON-ISRAEL-US-IRAN-WAR LEBANON-ISRAEL-US-IRAN-WAR  (AFP or licensors)

ಲೆಬನಾನ್‌ನಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ನಡುವೆ ಸ್ಥಳಾಂತರಗೊಂಡ ವಲಸೆ ಕಾರ್ಮಿಕರಿಗೆ JRS ನೆರವು

ಲೆಬನಾನ್‌ನಲ್ಲಿ ಹಿಂಸಾಚಾರ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಲಕ್ಷಾಂತರ ಜನರು ಸ್ಥಳಾಂತರಗೊಳ್ಳುತ್ತಿದ್ದಾರೆ. ಆಶ್ರಯ, ಆಹಾರ ಮತ್ತು ಮಾನಸಿಕ-ಸಾಮಾಜಿಕ ನೆರವಿನ ಅಗತ್ಯ ಹೆಚ್ಚುತ್ತಿರುವುದರಿಂದ ಮಾನವೀಯ ಸಂಸ್ಥೆಗಳು ತುರ್ತು ನೆರವು ಕಾರ್ಯಗಳನ್ನು ಆರಂಭಿಸಿವೆ.

ಲೇಖಕರು:ಜಿಯಾದಾ ಅಕ್ವಿಲಿನೋ ಮತ್ತು ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ

ಅಮೆರಿಕ ಮತ್ತು ಇಸ್ರಾಯೇಲ್ ಇರಾನ್ ಮೇಲೆ ನಡೆಸುತ್ತಿರುವ ದಾಳಿಗಳು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿ 1,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸರ್ಕಾರ, ಸೈನ್ಯ ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆದ ಬಾಂಬ್ ದಾಳಿಗಳ ಪರಿಣಾಮವಾಗಿ ನೂರಾರು ಮಂದಿ ಗಾಯಗೊಂಡಿದ್ದು, ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ನಿವಾಸಗಳಿಂದ ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ.

ಶನಿವಾರ ಆರಂಭವಾದ ಸಂಯುಕ್ತ ದಾಳಿಯ ನಂತರ ಸಂಘರ್ಷವು ಇನ್ನಷ್ಟು ವಿಸ್ತರಿಸುತ್ತಿದೆ. ಇಸ್ರಾಯೇಲ್ ಲೆಬನಾನ್ ಮೇಲೆ ದಾಳಿಗಳನ್ನು ಹೆಚ್ಚಿಸಿದ್ದು, ಗಲ್ಫ್ ಪ್ರದೇಶದಲ್ಲಿ ಇರಾನ್ ಪ್ರತಿದಾಳಿ ನಡೆಸುತ್ತಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಇದರ ಪರಿಣಾಮ ಜಾಗತಿಕ ಮಟ್ಟದಲ್ಲಿಯೂ ರಾಜಕೀಯ ವಿಭಜನೆಗಳು ಗಾಢವಾಗುತ್ತಿವೆ.

ವ್ಯಾಟಿಕನ್ ಸುದ್ದಿ ಸಂಸ್ಥೆಯ ಜಿಯಾದಾ ಅಕ್ವಿಲಿನೋ ಅವರಿಗೆ ಮಾತನಾಡಿದ ಜೆಸ್ಯೂಟ್ ಸಭೆಯ ವಂ. ಗುರು. ಡ್ಯಾನಿಯಲ್ ಕೊರ್ರೂ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರದೇಶದ ಜೆಸ್ಯೂಟ್ ನಿರಾಶ್ರಿತರ ಸೇವೆಯ (Jesuit Refugee Service-JRS) ಪ್ರಾದೇಶಿಕ ನಿರ್ದೇಶಕರು, ಲೆಬನಾನ್ ರಾಜಧಾನಿಯ ಸುತ್ತಮುತ್ತ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿರುವುದಾಗಿ ವಿವರಿಸಿದರು.

ಲಕ್ಷಾಂತರ ಜನರ ಸ್ಥಳಾಂತರ

ವಂ. ಗುರು ಕೊರ್ರೂ ಅವರ ಪ್ರಕಾರ, ಹಿಂಸಾಚಾರದ ಪರಿಣಾಮವಾಗಿ ಬಹುಸಂಖ್ಯೆಯ ಜನರು ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಬೇಕಾಗಿದೆ. ವಿಶೇಷವಾಗಿ ದಕ್ಷಿಣ ಲೆಬನಾನ್ ಮತ್ತು ಬೈರೂತ್‌ನ ಕೆಲವು ಭಾಗಗಳಿಂದ ಜನರು ಹೊರಟು ಹೋಗುತ್ತಿದ್ದಾರೆ.

“ನಾವು ನೋಡುತ್ತಿದ್ದಂತೆಯೇ ದಕ್ಷಿಣ ಲೆಬನಾನ್ ಹಾಗೂ ದಕ್ಷಿಣ ಬೈರೂತ್ ಪ್ರದೇಶಗಳಿಂದ ಲಕ್ಷಾಂತರ ಜನರು ಸ್ಥಳಾಂತರಗೊಳ್ಳುತ್ತಿದ್ದಾರೆ,ಇವರಲ್ಲಿ ಬಹಳಷ್ಟು ಜನರು ಈಗ ರಾಜಧಾನಿಯ ಕಡೆಗೆ ಆಶ್ರಯಕ್ಕಾಗಿ ಬರುತ್ತಿದ್ದಾರೆ. ಅಧಿಕೃತ ಸಂಖ್ಯೆಗಳು ಇನ್ನೂ ದೃಢೀಕರಣದ ಹಂತದಲ್ಲಿವೆ” ಎಂದು ಅವರು ಹೇಳಿದರು.

ಈ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ಲೆಬನಾನ್ ಸರ್ಕಾರ ನೂರಾರು ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆದಿದೆ. ಸಾರ್ವಜನಿಕ ಶಾಲೆಗಳನ್ನು ತುರ್ತು ಆಶ್ರಯ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ.

ಆದರೆ ಈ ಕೇಂದ್ರಗಳು ಈಗಾಗಲೇ ತುಂಬಿ ಹೋಗಿವೆ. “300 ಕ್ಕೂ ಹೆಚ್ಚು ಸಾರ್ವಜನಿಕ ಶಾಲೆಗಳನ್ನು ಆಶ್ರಯ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ, ಆದರೆ ಅವುಗಳೆಲ್ಲವೂ ಈಗ ಸಂಪೂರ್ಣವಾಗಿ ತುಂಬಿವೆ,” ಎಂದು ವಂ. ಗುರು . ಕೊರ್ರೂ ಹೇಳಿದರು.

ವಲಸೆ ಕಾರ್ಮಿಕರಿಗೆ ಧರ್ಮಸಭೆ ಆಶ್ರಯ

ಲೆಬನಾನ್ ಮೂಲದ ಅನೇಕ ಕುಟುಂಬಗಳು ಸರ್ಕಾರಿ ಆಶ್ರಯ ಕೇಂದ್ರಗಳಲ್ಲಿ ಸ್ಥಳ ಪಡೆದಿದ್ದರೂ, ವಲಸೆ ಕಾರ್ಮಿಕರು ಮತ್ತು ಲೆಬನಾನ್ ಹೊರಗಿನ ನಿವಾಸಿಗಳು ಸಹಾಯ ಪಡೆಯಲು ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದ್ದಾರೆ.

ವಂ. ಗುರು  ಕೊರ್ರೂ ಅವರ ಪ್ರಕಾರ, ಸರ್ಕಾರಿ ನೀತಿಯಲ್ಲಿ ವಿದೇಶಿಗರನ್ನು ಹೊರತುಪಡಿಸಲಾಗಿಲ್ಲ. ಆದರೂ ವಾಸ್ತವದಲ್ಲಿ ಅನೇಕ ವಲಸೆ ಕಾರ್ಮಿಕರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. “ ವಲಸೆ ಕಾರ್ಮಿಕರು ಲೆಬನಾನ ಮೂಲದವರಲ್ಲದವರಾದ್ದರಿಂದ ಸರ್ಕಾರಿ ಆಶ್ರಯ ಕೇಂದ್ರಗಳ ಒಳಗೆ ಬಿಡಲಾಗುತ್ತಿಲ್ಲ. ಇದು ಅಧಿಕೃತ ನೀತಿ ಅಲ್ಲ, ಆದರೆ ನೆಲಮಟ್ಟದಲ್ಲಿ ಅವರು ಪ್ರವೇಶ ಪಡೆಯುತ್ತಿಲ್ಲ,” ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ JRS ಮತ್ತು ಸ್ಥಳೀಯ ಧರ್ಮಸಭೆಯ ಸಮುದಾಯಗಳು 2024ರ ಹಿಂದಿನ ಸಂಘರ್ಷದ ಸಮಯದಲ್ಲಿ ಆರಂಭಿಸಿದ್ದ ಆಶ್ರಯ ಕೇಂದ್ರಗಳನ್ನು ಮತ್ತೆ ತೆರೆದಿವೆ. ಈ ಕೇಂದ್ರಗಳಲ್ಲಿ ಈಗ ಫಿಲಿಪ್ಪೀನ್ಸ್, ಇಥಿಯೋಪಿಯಾ, ಸುಡಾನ್, ಎರಿಟ್ರಿಯಾ, ಯೆಮನ್, ಸಿಯೆರ್ರಾ ಲಿಯೋನ್ ಮತ್ತು ನೈಜೀರಿಯಾ ದೇಶಗಳಿಂದ ಬಂದ ವಲಸೆ ಕಾರ್ಮಿಕರು ಮತ್ತು ನಿರಾಶ್ರಿತರಿಗೆ ಆಶ್ರಯ ನೀಡಲಾಗುತ್ತಿದೆ.

ತುರ್ತು ನೆರವಿಗೆ ಮಾನವೀಯ ಸೇವೆಗಳ ರೂಪಾಂತರ

ಸಾಮಾನ್ಯವಾಗಿ ನಿರಾಶ್ರಿತರು ಮತ್ತು ವಲಸೆ ಕಾರ್ಮಿಕರಿಗಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ JRS, ಈಗ ತನ್ನ ಕಾರ್ಯಗಳನ್ನು ತುರ್ತು ಮಾನವೀಯ ನೆರವಿನತ್ತ ಕೇಂದ್ರೀಕರಿಸಿದೆ.

“ನಾವು ಮಾನಸಿಕ ಆರೋಗ್ಯ ಮತ್ತು ಮಾನಸಿಕ-ಸಾಮಾಜಿಕ ನೆರವು ಕಾರ್ಯಕ್ರಮಗಳನ್ನು ಮುಂದುವರಿಸಿದ್ದೇವೆ. ಆದರೆ ಶಾಲೆಗಳು ಮುಚ್ಚಲ್ಪಟ್ಟಿರುವುದರಿಂದ ಶಿಕ್ಷಣ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ,” ಎಂದು ವಂ. ಗುರು ಕೊರ್ರೂ ವಿವರಿಸಿದರು.

“ನಮ್ಮ ಸಿಬ್ಬಂದಿಯನ್ನು ಶಿಕ್ಷಣ ಕೇಂದ್ರಗಳಿಂದ ವಲಸೆ ಕಾರ್ಮಿಕರ ಆಶ್ರಯ ಕೇಂದ್ರಗಳಿಗೆ ವರ್ಗಾಯಿಸಿದ್ದೇವೆ,ಈ ಸಂದರ್ಭದಲ್ಲಿ ಅತ್ಯಂತ ತುರ್ತು ಅಗತ್ಯಗಳು ಎಂದರೆ ಸುರಕ್ಷಿತ ಆಶ್ರಯ, ಸ್ವಚ್ಛತೆ ಮತ್ತು ಆಹಾರ ಎಂದು ಅವರು ತಿಳಿಸಿದರು.

ಶಾಂತಿ ಮತ್ತು ಸಂವಾದಕ್ಕೆ ಮನವಿ

ಹಿಂಸಾಚಾರದಿಂದ ಭಯ ಮತ್ತು ಅನಿಶ್ಚಿತತೆ ಹೆಚ್ಚುತ್ತಿರುವುದಾದರೂ, ಅನೇಕ ಸ್ಥಳಾಂತರಗೊಂಡ ಕುಟುಂಬಗಳು ತಮ್ಮ ಮನೆಗಳಿಗೆ ಮರಳುವ ಭರವಸೆಯನ್ನು ಇನ್ನೂ ಕಳೆದುಕೊಂಡಿಲ್ಲ. “ಲೆಬನಾನ್ ಜನರು ತಮ್ಮ ಭೂಮಿಯನ್ನು ಪ್ರೀತಿಸುತ್ತಾರೆ. ಅವರು ಅಲ್ಲಿ ಶಾಂತಿಯುತವಾಗಿ ಬದುಕಲು ಬಯಸುತ್ತಾರೆ,” ಎಂದು ವಂ. ಗುರು. ಕೊರ್ರೂ ಹೇಳಿದರು.

ಅವರು ಮಧ್ಯಪ್ರಾಚ್ಯದಲ್ಲಿ ಶಾಂತಿಗಾಗಿ ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ಅವರ ಪ್ರಾರ್ಥನಾ ಮನವಿಯನ್ನು ಸ್ವಾಗತಿಸಿ, ಜಗದ್ಗುರುಗಳ ಮಾತುಗಳನ್ನು ಸ್ಥಳೀಯ ಸಮುದಾಯಗಳು ಹೃತ್ಪೂರ್ವಕವಾಗಿ ಸ್ವೀಕರಿಸಿವೆ ಎಂದು ಅವರು ಹೇಳಿದರು. “ನಾವು ಅವರೊಂದಿಗೆ ಪ್ರಾರ್ಥಿಸುತ್ತಿದ್ದೇವೆ,” ಎಂದು ಅವರು ಹೇಳಿದರು.

ಅವರು ಅಂತಾರಾಷ್ಟ್ರೀಯ ನಾಯಕರಿಗೆ ಮನವಿ ಮಾಡುತ್ತಾ, “ಹಿಂಸಾಚಾರ ಇಷ್ಟಕ್ಕೆ ನಿಲ್ಲಬೇಕು. ರಾಜತಾಂತ್ರಿಕ ಸಂವಾದ ಮತ್ತೆ ಆರಂಭವಾಗಬೇಕು. ವಿವಿಧ ರಾಷ್ಟ್ರಗಳ ನಡುವಿನ ಸಂಬಂಧಗಳ ಭವಿಷ್ಯ ಕುರಿತು ತೆರೆದ ಮಾತುಕತೆಗಳು ನಡೆಯಬೇಕು. ಸರ್ಕಾರದ ನಾಯಕರು ತಮ್ಮ ಜನರ ಅಗತ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕು.”

“ಜನರಿಗೆ ಶಾಂತಿ ಮತ್ತು ಸ್ಥಿರತೆ ಅಗತ್ಯ. ಆಗ ಮಾತ್ರ ಅವರು ತಮ್ಮ ಕುಟುಂಬಗಳನ್ನು ನೋಡಿಕೊಳ್ಳಬಹುದು, ನಾಗರಿಕ ಸಮಾಜವನ್ನು ನಿರ್ಮಿಸಬಹುದು ಮತ್ತು ಈ ಪ್ರದೇಶದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ನಡುವೆ ಒಟ್ಟಾಗಿ ಬದುಕಬಹುದು,” ಎಂದು ಅವರು ಹೇಳಿದರು.

“ಜನರು ಶಾಂತಿ ಮತ್ತು ಸ್ಥಿರತೆಯಲ್ಲಿ ಬದುಕಲು ಸಾಧ್ಯವಾಗಬೇಕು.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

04 ಮಾರ್ಚ್ 2026, 12:06