2026.01.26 Caritas arcidiocesi alle vittime di inondazioni Programma Portoghese 2026.01.26 Caritas arcidiocesi alle vittime di inondazioni Programma Portoghese 

ಕಾರಿತಾಸ್ ಯುರೋಪ: ಮಾನವೀಯ ವ್ಯವಸ್ಥೆಯಲ್ಲಿ ಅಧಿಕಾರದ ಮೂಲಭೂತ ಸಮತೋಲನಕ್ಕೆ ಕರೆ

ಕಾರಿತಾಸ್ ಯುರೋಪ ಬಿಡುಗಡೆ ಮಾಡಿದ ಹೊಸ ವರದಿ, ಮಾನವೀಯ ವ್ಯವಸ್ಥೆಯೊಳಗಿನ ಅಧಿಕಾರದ ಮೂಲಭೂತ ಪುನರ್‌ಸಮತೋಲನಕ್ಕೆ ಕರೆ ನೀಡಿದೆ. ನಿರ್ಧಾರ ಪ್ರಕ್ರಿಯೆಯ ಅಂಚಿನಿಂದ ಸ್ಥಳೀಯ ಸಂಸ್ಥೆಗಳು ನಿಜವಾದ ನಾಯಕತ್ವದ ಸ್ಥಾನಗಳಿಗೆ ಸಾಗಬೇಕು ಎಂದು ವರದಿ ತಿಳಿಸಿದೆ.

ಲೇಖಕರು: ಲಿಂಡಾ ಬೋರ್ಡೊನಿ

ಮಾರ್ಚ್ 2, ಸೋಮವಾರ ಪ್ರಕಟಗೊಂಡ ಈ ವರದಿಗೆ "ಮಾನವೀಯ ಕಾರ್ಯಚಟುವಟಿಕೆಗಳಲ್ಲಿ ಸ್ಥಳೀಯ ನಾಯಕತ್ವವನ್ನು ಮುನ್ನಡೆಸುವುದು: ಪ್ರಗತಿ, ಸವಾಲುಗಳು ಮತ್ತು ಅವಕಾಶಗಳ ವಿಶ್ಲೇಷಣೆ" (Advancing local leadership in humanitarian action: Tracking progress, challenges and opportunities) ಎಂಬ ಶೀರ್ಷಿಕೆ ನೀಡಲಾಗಿದೆ.

ಇದು 2023ರ ವರದಿಯ ಮುಂದುವರಿಕೆಯಾಗಿ ಹೊರಬಂದಿದ್ದು, ಜಾಗತಿಕ ಮಟ್ಟದಲ್ಲಿ ನೀಡಲಾದ ಭರವಸೆಗಳು ಮತ್ತು ನೆಲಮಟ್ಟದ ಸ್ಥಳೀಯ ಮಾನವೀಯ ಸಂಸ್ಥೆಗಳ ವಾಸ್ತವ ಪರಿಸ್ಥಿತಿಯ ನಡುವಿನ ಅಂತರವನ್ನು ಉಲ್ಲೇಖಿಸುತ್ತದೆ.

ವ್ಯಾಟಿಕನ್ ಸುದ್ದಿಗೆ ಮಾತನಾಡಿದ ಕಾರಿತಾಸ್ ಯುರೋಪ ಮಾನವೀಯ ವಕಾಲತ್ತು ಅಧಿಕಾರಿ ಅಬ್ರಿಯೆಲ್ ಶೀಫೆಲರ್ಸ್, ಸ್ಥಳೀಕರಣದ ಬಗ್ಗೆ ವರ್ಷಗಳ ಬದ್ಧತೆಗಳಿದ್ದರೂ ಪ್ರಗತಿ ಅಸಮಾನವಾಗಿದೆ ಎಂದು ಹೇಳಿದರು.

“ಇನ್ನೂ ಕಡಿಮೆ ಅವಧಿಯ ಯೋಜನೆ ಆಧಾರಿತ ಅನುದಾನಗಳ ಮೇಲೆ ಅವಲಂಬನೆ ಮುಂದುವರಿದಿದೆ. ಸ್ಥಳೀಯ ಸಂಸ್ಥೆಗಳು ನಾಯಕತ್ವದ ಬದಲು ಜಾರಿಗೆ ತರುವವರಾಗಿ ಮಾತ್ರ ಕಾಣಲ್ಪಡುತ್ತಿವೆ,” ಎಂದು ಅವರು ಹೇಳಿದರು. “ಕಾರ್ಯಕ್ರಮಗಳನ್ನು ಸಂಯುಕ್ತವಾಗಿ ರೂಪಿಸುವ ಮನೋಭಾವ ಕಡಿಮೆ ಇದೆ; ನಿರ್ಧಾರ ಪ್ರಕ್ರಿಯೆ ಸ್ಥಾನಗಳಲ್ಲಿ ಸ್ಥಳೀಯ ಸಂಸ್ಥೆಗಳನ್ನು ಇರಿಸುವ ಪ್ರವೃತ್ತಿ ಇನ್ನೂ ಬಲವಾಗಿಲ್ಲ.”

ಸ್ಥಳೀಯ ನಾಯಕತ್ವದ “ಜೀವಂತ ವಾಸ್ತವಿಕತೆ”

ವರದಿ ಅಧಿಕೃತ ಬಿಡುಗಡೆ ಕಾರ್ಯಕ್ರಮದಲ್ಲಿ ಕಾರಿತಾಸ್ ಯುರೋಪ ಅಧ್ಯಕ್ಷ ಮೊನ್ಸಿನಿಯರ್ ಮೈಕೆಲ್ ಲಾಂಡೌ (Monsignor Michael Landau), ಸ್ಥಳೀಯ ನಾಯಕತ್ವವು ಧರ್ಮಸಭೆಯ ಸಾಮಾಜಿಕ ಧ್ಯೇಯದ ಅಂತರಂಗ ಭಾಗವಾಗಿದೆ ಎಂದು ಒತ್ತಿಹೇಳಿದರು.

“ನಮಗೆ ಸ್ಥಳೀಯ ನಾಯಕತ್ವವು ಕೇವಲ ಆಶಯವಲ್ಲ; ಮಾನವ ವ್ಯಕ್ತಿಯ ಗೌರವವೇ ಕೇಂದ್ರವಾಗಿರುವ ಜೀವಂತ ವಾಸ್ತವಿಕತೆ,” ಎಂದು ಅವರು ಹೇಳಿದರು. ಆದರೆ, ವಿಶಾಲ ಮಾನವೀಯ ವ್ಯವಸ್ಥೆಯಲ್ಲಿ ಈ ತತ್ವ “ಇನ್ನೂ ಸಮರ್ಪಕವಾಗಿ ಗುರುತಿಸಲ್ಪಟ್ಟಿಲ್ಲ, ಸೂಕ್ತ ಸಂಪನ್ಮೂಲಗಳನ್ನು ಪಡೆದಿಲ್ಲ, ಮತ್ತು ಸಾಕಷ್ಟು ವಿಶ್ವಾಸಕ್ಕೆ ಪಾತ್ರವಾಗಿಲ್ಲ” ಎಂದು ಅವರು ಒಪ್ಪಿಕೊಂಡರು.

ಈ ವರದಿ “ವಿಶೇಷವಾಗಿ ಕಠಿಣ ಹಂತ”ದಲ್ಲಿ ಹೊರಬಂದಿದೆ ಎಂದು ಲಾಂಡೌ ಹೇಳಿದರು. USAID ಸೇರಿದಂತೆ ಹಲವಾರು ಯುರೋಪಿಯನ್ ದಾನಿಗಳ ಅನುದಾನ ಕಡಿತಗಳಿಂದ ದೂರವ್ಯಾಪಿ ಪರಿಣಾಮಗಳು ಉಂಟಾಗಿವೆ. ಸ್ಥಳೀಯ ಮತ್ತು ರಾಷ್ಟ್ರೀಯ ಸಂಸ್ಥೆಗಳೇ ಹೆಚ್ಚಿನ ಹೊರೆ ಹೊರುತ್ತಿವೆ,” ಎಂದು ವಿಶ್ಲೇಷಣೆ ತೋರಿಸುತ್ತದೆ ಎಂದು ಹೇಳಿದರು.

“ಅನುದಾನ ಕುಗ್ಗಿದಾಗ ಪಾಲುದಾರಿಕೆಗಳು ವ್ಯವಹಾರಿಕ ಸ್ವರೂಪ ಪಡೆಯುತ್ತವೆ; ಅಪಾಯಗಳನ್ನು ಕೆಳಮಟ್ಟಕ್ಕೆ ತಳ್ಳಲಾಗುತ್ತದೆ; ಕಡಿಮೆ ಸಂಪನ್ಮೂಲಗಳೊಂದಿಗೆ ಹೆಚ್ಚು ಕಾರ್ಯನಿರ್ವಹಿಸಲು ಸ್ಥಳೀಯ ಸಂಸ್ಥೆಗಳನ್ನು ನಿರೀಕ್ಷಿಸಲಾಗುತ್ತದೆ. ಇದು ಅನ್ಯಾಯಕರವೂ, ದೀರ್ಘಾವಧಿಯಲ್ಲಿ ಸ್ಥಿರವಲ್ಲ.”

ಅನುದಾನ ಕಡಿತದ ಹೊರೆ

ಸಂವಾದದಲ್ಲಿ ಶೀಫೆಲರ್ಸ್ ಅವರು, ಕಳೆದ ಒಂದು ವರ್ಷದಿಂದ ಮಾನವೀಯ ಅನುದಾನ ಕುಗ್ಗುತ್ತಿರುವ ಪರಿಣಾಮ ಸ್ಥಳೀಯ ಸಂಸ್ಥೆಗಳೇ “ಅತ್ಯಧಿಕ ಹೊರೆ ಹೊರುತ್ತಿವೆ” ಎಂದು ಹೇಳಿದರು.

“ಸಂಪನ್ಮೂಲಗಳು ಕುಗ್ಗುತ್ತಿರುವುದರಿಂದ ಸ್ಥಳೀಯ ಸಂಸ್ಥೆಗಳು ಅಸುರಕ್ಷಿತ ಸ್ಥಿತಿಗೆ ತಳ್ಳಲ್ಪಡುತ್ತಿವೆ,” ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ಸಂಸ್ಥೆಗಳಿಗಿಂತ ರಾಷ್ಟ್ರೀಯ ಸಂಸ್ಥೆಗಳು ಹೆಚ್ಚು ಸ್ಪರ್ಧೆ ಮತ್ತು ಹೆಚ್ಚಿನ ಅಪಾಯಗಳನ್ನು ಎದುರಿಸುತ್ತಿವೆ, ವಿಶೇಷವಾಗಿ ಸಂಸ್ಥೆಯ ದೀರ್ಘಕಾಲಿಕ ಸ್ಥಿರತೆಯ ವಿಚಾರದಲ್ಲಿ, ಮೂಲಸೌಕರ್ಯ ವೆಚ್ಚ ಹಂಚಿಕೆ ಮತ್ತು ಅಪಾಯ ಹಂಚಿಕೆ ಇನ್ನೂ ಪ್ರಮುಖ ಕೊರತೆಗಳಾಗಿವೆ.

“ಮೂಲ ವೆಚ್ಚಗಳ ಹಂಚಿಕೆ ಮತ್ತು ಅಪಾಯ ಹಂಚಿಕೆಯ ವಿಷಯದಲ್ಲಿ ಇನ್ನೂ ಸಮರ್ಪಕ ವ್ಯವಸ್ಥೆ ರೂಪುಗೊಂಡಿಲ್ಲ,” ಎಂದು ಅವರು ಹೇಳಿದರು.

ವೆಚ್ಚ ಪರಿಣಾಮಕಾರಿತ್ವಕ್ಕಿಂತ ಮೀರಿ ನ್ಯಾಯ ಮತ್ತು ಸ್ವಯಂನಿರ್ಣಯ

ಸ್ಥಳೀಕರಣವನ್ನು ಬಹುಪಾಲು ವೆಚ್ಚ ಪರಿಣಾಮಕಾರಿತ್ವದ ದೃಷ್ಟಿಯಿಂದ ವಿವರಿಸಲಾಗುತ್ತದೆ. ಆದರೆ ಕಾರಿತಾಸ್ ಯುರೋಪ ಪ್ರಕಾರ, ವಿಷಯ ಅದಕ್ಕಿಂತ ಆಳವಾಗಿದೆ.

“ಕೆಲವೊಮ್ಮೆ ಸ್ಥಳೀಯ ನಾಯಕತ್ವವನ್ನು ವೆಚ್ಚ ಮತ್ತು ಪರಿಣಾಮಕಾರಿತ್ವದ ಆಧಾರದ ಮೇಲೆ ಮಾತ್ರ ಚರ್ಚಿಸಲಾಗುತ್ತದೆ,” ಎಂದು ಶೀಫೆಲರ್ಸ್ ಹೇಳಿದರು. “ಆದರೆ ಇದು ನ್ಯಾಯ ಮತ್ತು ಸ್ವಯಂನಿರ್ಣಯದಲ್ಲಿ ಬೇರುಬಿಟ್ಟಿರುವ ವಿಷಯ. ನಿಜವಾದ ಸ್ಥಳೀಯ ಸ್ವಾಮ್ಯವೇ ಮುಖ್ಯ.”

ಸಂಕಷ್ಟಗಳಿಂದ ಪ್ರಭಾವಿತ ಜನರು ತಮ್ಮ ಬದುಕಿನ ನಿರ್ಧಾರಗಳಲ್ಲಿ ಪಾಲ್ಗೊಳ್ಳುವುದು ಕೇವಲ ತಾಂತ್ರಿಕ ಸುಧಾರಣೆ ಅಲ್ಲ; ಅದು ಮೂಲಭೂತ ತತ್ವ ಎಂದು ಅವರು ಹೇಳಿದರು.

ದ್ವಿಮುಖ ಜವಾಬ್ದಾರಿ ಮತ್ತು ಸಂರಚನಾ ಸುಧಾರಣೆ

ವರದಿಯಲ್ಲಿ ಪ್ರಸ್ತಾಪಿಸಲಾದ ಪ್ರಮುಖ ಬದಲಾವಣೆಗಳಲ್ಲಿ ಒಂದಾಗಿದೆ ದ್ವಿಮುಖ ಜವಾಬ್ದಾರಿ ವ್ಯವಸ್ಥೆಗಳ ರೂಪು. ಪಾಲುದಾರರು ಸಾಮರ್ಥ್ಯ ಮೌಲ್ಯಮಾಪನ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಪಾತ್ರ ಪುನರ್‌ವ್ಯಾಖ್ಯಾನ ಚರ್ಚೆಗಳಲ್ಲಿ ಮುನ್ನಡೆಯನ್ನು ವಹಿಸಬೇಕು ಎಂದು ವರದಿ ಸೂಚಿಸುತ್ತದೆ. ಅಂತರಾಷ್ಟ್ರೀಯ ಸಂಸ್ಥೆಗಳು ಪ್ರಭುತ್ವದ ನಾಯಕತ್ವದ ಬದಲು ಬೆಂಬಲಕಾರಿ ಪಾತ್ರ ವಹಿಸಬೇಕು ಎಂಬುದು ಈ ಮಾದರಿಯ ಉದ್ದೇಶ.

ಸ್ಥಳೀಯ ಸಂಸ್ಥೆಗಳು ನಿರ್ಧಾರ ಪ್ರಕ್ರಿಯೆ ಅಧಿಕಾರ ಅಸಮಾನವಾಗಿದೆ ಎಂದು ನಿರಂತರವಾಗಿ ತಿಳಿಸಿದ್ದಾರೆ; ಪಾಲುದಾರಿಕೆಗಳು ಅನೇಕ ಬಾರಿ ಕ್ರಮಾನುಗತ ಅಥವಾ ವ್ಯವಹಾರಿಕ ಸ್ವರೂಪದಲ್ಲಿವೆ ಎಂದು ಅವರು ವಿವರಿಸಿದ್ದಾರೆ. “ಅಧಿಕಾರದ ಈ ಅಂಶವನ್ನು ಬದಲಿಸುವುದು ಅನುದಾನ ಬದಲಾವಣೆಯಿಗಿಂತಲೂ ಹೆಚ್ಚು ಮೂಲಭೂತ ವಿಷಯ,” ಎಂದು ಶೀಫೆಲರ್ಸ್ ಹೇಳಿದರು.

ಮುಂದಿನ ಹಂತವಾಗಿ, ಇತ್ತೀಚಿನ ಸಾಧನೆಗಳನ್ನು ರಕ್ಷಿಸುವುದು ಮತ್ತು ವ್ಯವಸ್ಥಾತ್ಮಕ ಅಡೆತಡೆಗಳನ್ನು ನಿವಾರಿಸುವುದು ಅಗತ್ಯ ಎಂದು ಕಾರಿತಸ್ ಯುರೋಪ ಕರೆ ನೀಡಿದೆ. ಅಪಾಯ ಹಂಚಿಕೆ ಪದ್ಧತಿಗಳನ್ನು ಬಲಪಡಿಸುವುದು, ಅಲ್ಪಾವಧಿ ಯೋಜನೆಗಳ ಬದಲು ದೀರ್ಘಾವಧಿ ಪಾಲುದಾರಿಕೆಗಳನ್ನು ಉತ್ತೇಜಿಸುವುದು ಮತ್ತು ದಾನಿಗಳ ನೀತಿಗಳನ್ನು ಸಂರಚನಾ ಸುಧಾರಣೆಯೊಂದಿಗೆ ಹೊಂದಿಸುವುದು ಅವಶ್ಯಕ ಎಂದು ವರದಿ ಸೂಚಿಸಿದೆ.

ಪೂಜ್ಯ ಜಗದ್ಗುರುಗಳ ಮನವಿಗಳು ಮತ್ತು ಸಂಕಷ್ಟಗಳ ರಾಜಕೀಯ ಆಯಾಮ

ಪೂಜ್ಯ ಜಗದ್ಗುರುಗಳ ಮನವಿಗಳ ಪರಿಣಾಮದ ಕುರಿತು ಮಾತನಾಡಿದ ಶೀಫೆಲರ್ಸ್, ನಿರ್ಲಕ್ಷಿತ ಸಂಕಷ್ಟಗಳು ಬಹುಪಾಲು ರಾಜಕೀಯ ನಿರ್ಧಾರಗಳ ಪರಿಣಾಮವೆಂದು ಹೇಳಿದರು.

“ಅನೇಕ ಬಾರಿ ಸಂಕಷ್ಟಗಳು ಮರೆತುಹೋಗುವುದಿಲ್ಲ; ಅವುಗಳನ್ನು ನಿರ್ಲಕ್ಷಿಸಲಾಗುತ್ತದೆ,” ಎಂದು ಅವರು ಹೇಳಿದರು. ದೀರ್ಘಕಾಲಿಕ ಸಂಕಷ್ಟಗಳಲ್ಲಿ ಮಾನವೀಯ ನೆರವೊಂದೇ ಸಾಕಾಗುವುದಿಲ್ಲ; ರಾಜತಾಂತ್ರಿಕ ಸಂವಾದ ಮತ್ತು ಶಾಂತಿನಿರ್ಮಾಣ ಪ್ರಯತ್ನಗಳು ಸಹ ಅಗತ್ಯವೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿ, ಸಮುದಾಯ ಮಟ್ಟದಲ್ಲಿ ಸಾಮಾಜಿಕ ಏಕತೆಯನ್ನು ಬಲಪಡಿಸುವಲ್ಲಿ ಸ್ಥಳೀಯ, ವಿಶೇಷವಾಗಿ ಧಾರ್ಮಿಕ ಆಧಾರಿತ ಸಂಸ್ಥೆಗಳ ಪಾತ್ರ ಅಮೂಲ್ಯವೆಂದು ಅವರು ಹೇಳಿದರು.

ಮೊನ್ಸಿನಿಯರ್ ಮೈಕೆಲ್ ಲಾಂಡೌ ಸಹ ಬಿಡುಗಡೆ ಸಮಾರಂಭದಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರಿತಾಸ್ ವಿಧಾನವು ಏಕತೆ ಮತ್ತು ಅಂಗ ಸಂಸ್ಥಾ ತತ್ವಗಳ ಮೇಲೆ ಆಧಾರಿತವಾಗಿದೆ ಎಂದು ಅವರು ಹೇಳಿದರು.ಅಂದರೆ ಪ್ರಭಾವಿತ ಜನರಿಗೆ ಸಾಧ್ಯವಾದಷ್ಟು ಸಮೀಪದಲ್ಲೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

02 ಮಾರ್ಚ್ 2026, 16:37