ಹುಡುಕಿ

Smoke rises following an explosion, after Israel and the U.S. launched strikes on Iran, in Tehran Smoke rises following an explosion, after Israel and the U.S. launched strikes on Iran, in Tehran 

ಯುದ್ಧದ ಚಿತ್ರಣ ಕುರಿತು “ಆತ್ಮಸಾಕ್ಷಿಗೆ ಕರೆ” ಎಂಬ ಹೇಳಿಕೆ ನೀಡಿರುವ ಮಹಾಧರ್ಮಾಧ್ಯಕ್ಷರಾದ ಕ್ಯೂಪಿಚ್

ಶಿಕಾಗೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಬ್ಲೇಸ್ ಕ್ಯೂಪಿಚ್, ಯುದ್ಧದ ದುರಂತವನ್ನು ಗೇಮಿನೋಪಾದಿಯಲ್ಲಿ ಚಿತ್ರಿಸಲಾಗುತ್ತಿರುವ ಹಿನ್ನೆಲೆಯಲ್ಲಿ “ಆತ್ಮಸಾಕ್ಷಿಗೆ ಕರೆಗೆ” (A Call to Conscience) ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಯುದ್ಧದ ಭಯಾನಕ ಪರಿಣಾಮಗಳನ್ನು ನಾವು ಎಷ್ಟು ಹೆಚ್ಚು ಗಮನಿಸದೆ ಉಳಿಯುತ್ತೇವೋ, ಅಷ್ಟು ಹೆಚ್ಚು ದೇವರು ನಮಗೆ ನೀಡಿರುವ ಅತ್ಯಮೂಲ್ಯವಾದ ವರವಾದ ಮಾನವೀಯತೆಯನ್ನು ಕಳೆದುಕೊಳ್ಳುವ ಅಪಾಯ ಎದುರಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ವ್ಯಾಟಿಕನ್ ವರದಿ

ಇರಾನ್ ಸಂಬಂಧಿಸಿದ ಪ್ರಸ್ತುತ ಸಂಘರ್ಷದ ಮಾನವೀಯ ಬೆಲೆಯನ್ನು ಉಲ್ಲೇಖಿಸಿ ಪ್ರಕಟಿಸಿದ ಈ ಹೇಳಿಕೆಯಲ್ಲಿ, ಶಿಕಾಗೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾದ ಪೂಜ್ಯರು ಯುದ್ಧವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರದರ್ಶಿಸುವ ವಿಧಾನವನ್ನು “ಅಸಹ್ಯಕರವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಬಾಂಬ್ ದಾಳಿಗಳನ್ನು ಉಲ್ಲೇಖಿಸಿ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಕ್ಯೂಪಿಚ್, “ಅಮೆರಿಕಾ ಮತ್ತು ಇಸ್ರಾಯೇಲ್ ಕ್ಷಿಪಣಿಗಳ ದಾಳಿಗಳ ನಂತರ ಹಲವು ದಿನಗಳ ಬಾಂಬ್ ದಾಳಿಗಳ ಪರಿಣಾಮವಾಗಿ ಸಾವಿರಕ್ಕೂ ಹೆಚ್ಚು ಇರಾನಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ವೈಟ್ ಹೌಸ್‌ನ ಅಧಿಕೃತ X ಖಾತೆಯಲ್ಲಿ ಜನಪ್ರಿಯ ಆಕ್ಷನ್ ಚಲನಚಿತ್ರಗಳ ದೃಶ್ಯಗಳನ್ನು ಇರಾನ್ ಮೇಲೆ ನಡೆದ ನೈಜ ದಾಳಿಗಳ ದೃಶ್ಯಗಳೊಂದಿಗೆ ಸೇರಿಸಿ ಒಂದು ವಿಡಿಯೋವನ್ನು ಗುರುವಾರ ಸಂಜೆ ಪ್ರಕಟಿಸಲಾಗಿದೆ.” ಆ ವಿಡಿಯೋಗೆ “JUSTICE THE AMERICAN WAY” ಎಂಬ ಶೀರ್ಷಿಕೆ ನೀಡಲಾಗಿತ್ತು. ನೈಜ ಯುದ್ಧ ಮತ್ತು ನೈಜ ಮಾನವೀಯ ನೋವನ್ನು ಗೇಮಿನಂತೆ ಪ್ರದರ್ಶಿಸುವುದು ಅತ್ಯಂತ ಅಸಹ್ಯಕರವಾದದ್ದು" ಎಂದು ಹೇಳಿದ್ದಾರೆ.

“ತಾಯಂದಿರು, ತಂದೆಯರು ಮತ್ತು ಮಕ್ಕಳು ಸೇರಿ ನೂರಾರು ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಆ ದಿನ ಶಾಲೆಗೆ ಹೋಗಿದ್ದ ಕಾರಣದಿಂದಲೇ ಸಾವಿಗೀಡಾದ ಅನೇಕ ಮಕ್ಕಳು ಸೇರಿದ್ದಾರೆ. ಆರು ಅಮೆರಿಕನ್ ಸೈನಿಕರೂ ಮೃತಪಟ್ಟಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಈ ಪೋಸ್ಟ್ ಅವರ ಗೌರವವನ್ನೂ ಹಾಳು ಮಾಡಿದೆ. ಲಕ್ಷಾಂತರ ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ,” ಎಂದು ಮಹಾಧರ್ಮಾಧ್ಯಕ್ಷರಾದ ಪೂಜ್ಯ ಕ್ಯೂಪಿಚ್ ತಿಳಿಸಿದ್ದಾರೆ. ಮಧ್ಯಪ್ರಾಚ್ಯದಾದ್ಯಂತ ಇನ್ನೂ ಲಕ್ಷಾಂತರ ಜನರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಯುದ್ಧಭೂಮಿ ಮತ್ತು ಲಿವಿಂಗ್ ರೂಂ (ಮನೆಯ) ನಡುವಿನ ಅಂತರ

ತಮ್ಮ ಹೇಳಿಕೆಯಲ್ಲಿ ಪ್ರಧಾನ ಧರ್ಮಾಧ್ಯಕ್ಷರು ಸಂಘರ್ಷವನ್ನು ಸಾರ್ವಜನಿಕರು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ರೂಪಿಸುವಲ್ಲಿ ಮಾಧ್ಯಮ ಮತ್ತು ತಂತ್ರಜ್ಞಾನದ ಪಾತ್ರವನ್ನು ಕುರಿತು ಚಿಂತನೆ ವ್ಯಕ್ತಪಡಿಸಿದ್ದಾರೆ.

“ಯುದ್ಧಭೂಮಿ ಮತ್ತು ಮನೆಯ ನಡುವಿನ ಅಂತರ ಬಹಳ ಮಟ್ಟಿಗೆ ಕಡಿಮೆಯಾಗಿದೆ, ನಾವು ಎದುರಿಸುತ್ತಿರುವ ನೈತಿಕ ಸಂಕಷ್ಟವು ಯುದ್ಧದಲ್ಲಿ ಮಾತ್ರವಲ್ಲ, ಯುದ್ಧವನ್ನು ನಾವು ವೀಕ್ಷಕರಾಗಿ ಹೇಗೆ ನೋಡುತ್ತೇವೆ  ಎಂಬುದರಲ್ಲಿಯೂ ಇದೆ; ಏಕೆಂದರೆ ಈಗ ಯುದ್ಧವು ವೀಕ್ಷಕರಿಗಾಗಿ ನಡೆಯುವ ಕ್ರೀಡೆ ಅಥವಾ ವಿಡಿಯೋ ಗೇಮ್ ನಂತಾಗಿದೆ,” ಎಂದು ಅವರು ಹೇಳಿದ್ದಾರೆ.

ಮಹಾಧರ್ಮಾಧ್ಯಕ್ಷರು ಹೇಳುವಂತೆ, ಇಂದಿನ ದಿನಗಳಲ್ಲಿ ಪತ್ರಕರ್ತರೂ ಸಹ ಯುದ್ಧವನ್ನು “ಗೇಮಿನಂತೆ ಚಿತ್ರಿಸುವ” ಪದಪ್ರಯೋಗವನ್ನು ಬಳಸುತ್ತಿದ್ದಾರೆ. ಈ ರೀತಿಯ ಭಾಷೆ ನೈಜ ಜನರ ಮಾನವೀಯತೆಯನ್ನು ಮರೆಯುವಂತೆ ಮಾಡುತ್ತದೆ ಎಂದು ಅವರು ವಿಷಾದಿಸಿದ್ದಾರೆ.

“ಒಂದು ‘ಹಿಟ್’ ಎಂದರೆ ಅಂಕಪಟ್ಟಿಯಲ್ಲಿ ಅಂಕಗಳನ್ನು ಸೇರಿಸುವುದಲ್ಲ; ಅದು ದುಃಖದಲ್ಲಿ ಮುಳುಗಿರುವ ಒಂದು ಕುಟುಂಬ. ಮನರಂಜನೆ ಮತ್ತು ಲಾಭವನ್ನು ಕರುಣೆಗಿಂತ ಮೇಲುಗೈಗೊಳಿಸುವಾಗ, ಅವರ ನೋವನ್ನು ನಾವು ನಿರ್ಲಕ್ಷಿಸುತ್ತೇವೆ ಎಂಬುದನ್ನು ಮರೆಯಬಾರದು” ಎಂದು “ಗಂಭೀರ ನೈತಿಕ ವೈಫಲ್ಯ”ವೆಂದು ಕಾಣುವ ಈ ಸ್ಥಿತಿಯನ್ನು ಖಂಡಿಸಿದ್ದಾರೆ.

ಯುದ್ಧಕ್ಕೆ ತೆರಬೇಕಾದ ಬೆಲೆಯ ಕುರಿತು ಸಂವೇದನಾ ಅಭಾವ

ಇರಾನ್ ಜನರ ನೋವನ್ನು “ನಮ್ಮ ಮನರಂಜನೆಗೆ ಬಳಸುವಂತೆ ಕಾಣುವ ಅಮೇರಿಕಾ ಸರ್ಕಾರದ ಮನೋಭಾವವನ್ನು” ಖಂಡಿಸಿ, ಮಹಾಧರ್ಮಾಧ್ಯಕ್ಷರು “ಈ ರೀತಿಯ ಮನೋಭಾವದಿಂದ “ನಮ್ಮ ಸೇನೆಯ ವಿನಾಶಕಾರಿ ಶಕ್ತಿಯನ್ನು ನೋಡಿ ನಾವು ಉತ್ಸಾಹಗೊಳ್ಳುವಾಗ, ನಮ್ಮ ಮಾನವೀಯತೆಯನ್ನು ಕಳೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

“ಸ್ಫೋಟಗಳ ‘ದೃಶ್ಯ ವೈಭವಕ್ಕೆ’ ನಾವು ಆಕರ್ಷಿತರಾಗುತ್ತೇವೆ,” ಈ ವರ್ತನೆಯ ಬೆಲೆ ಬಹುಮಟ್ಟಿಗೆ ನಮಗೆ ಗೋಚರವಾಗುವುದೇ ಇಲ್ಲ, ಏಕೆಂದರೆ ನಾವು ಯುದ್ಧದ ನಿಜವಾದ ಬೆಲೆಯ ಬಗ್ಗೆ ಸಂವೇದನೆ ಕಳೆದುಕೊಂಡಿದ್ದೇವೆ” ಎಂದು ಅವರು ಸೂಚಿಸಿದ್ದಾರೆ.

“ಯುದ್ಧದ ಭಯಾನಕ ಪರಿಣಾಮಗಳ ಬಗ್ಗೆ ನಾವು ಎಷ್ಟು ಹೆಚ್ಚು ಕಣ್ಣುಮುಚ್ಚಿಕೊಂಡಿರುತ್ತೇವೋ, ಅಷ್ಟು ಹೆಚ್ಚು ದೇವರು ನಮಗೆ ನೀಡಿದ ಅತ್ಯಮೂಲ್ಯವಾದ ವರವಾದ  ನಮ್ಮ ಮಾನವೀಯತೆಯನ್ನು  ಅಪಾಯಕ್ಕೆ ಒಳಪಡಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.

ತಮ್ಮ ಮಾತನ್ನು ಮುಕ್ತಾಯಗೊಳಿಸುತ್ತಾ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಕ್ಯೂಪಿಚ್, “ಅಮೇರಿಕಾದ ಜನರು ಇದಕ್ಕಿಂತ ಉತ್ತಮರು ಎಂದು ನನಗೆ ತಿಳಿದಿದೆ. ನಡೆಯುತ್ತಿರುವುದು ಮನರಂಜನೆ ಅಲ್ಲ, ಅದು ಯುದ್ಧ ಎಂಬುದನ್ನು ಅರಿಯುವ ಸಾಮರ್ಥ್ಯ ನಮಗಿದೆ. ಇರಾನ್ ಜನರು ಜೀವಿಸುತ್ತಿರುವ ರಾಷ್ಟ್ರ, ನಮ್ಮ ಮನರಂಜನೆಗಾಗಿ ಆಡಲಾಗುವ ವಿಡಿಯೋ ಗೇಮ್ ಅಲ್ಲ” ಎಂದು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

08 ಮಾರ್ಚ್ 2026, 12:20