ಶಾಂತಿಗಾಗಿ ಕ್ರೈಸ್ತರು ಮತ್ತು ಮುಸ್ಲಿಮರು ಒಟ್ಟಾಗಿ ಪ್ರಾರ್ಥಿಸಲಿ: ಧರ್ಮಾಧ್ಯಕ್ಷರಾದ ಬೆರಾರ್ಡಿ ಅವರ ಮನವಿ
ಲೇಖಕರು: ಲಿಂಡಾ ಬೋರ್ಡೊನಿ
“ಯುದ್ಧದ ನೋವು ಮತ್ತು ಅನಿಶ್ಚಿತತೆಯಿಂದ ಗುರುತಿಸಲ್ಪಟ್ಟ ಈ ಕಠಿಣ ದಿನಗಳಲ್ಲಿ,” ಬಹರೈನ್ ರಾಜ್ಯದ ಜನತೆ, ಅದರ ರಾಜಮನೆತನ, ಸರ್ಕಾರದ ಸದಸ್ಯರು, ನಾಗರಿಕರು ಹಾಗೂ ಅಲ್ಲಿನ ಎಲ್ಲಾ ನಿವಾಸಿಗಳನ್ನು ಉದ್ದೇಶಿಸಿ ಪೂಜ್ಯ ಧರ್ಮಾಧ್ಯಕ್ಷರಾದ ಅಲ್ಡೊ ಬೆರಾರ್ಡಿ ಸಂದೇಶ ನೀಡಿದರು.
ತಾವು ಪ್ರತಿನಿಧಿಸುವ ಕಥೋಲಿಕ ಕ್ರೈಸ್ತ ಸಮುದಾಯದ ಪರವಾಗಿ ಮಾತನಾಡಿದ ಉತ್ತರ ಅರೇಬಿಯಾದ ಪ್ರೇಷಿತ ಪ್ರತಿನಿಧಿ ಮಾರ್ಚ್ 5ರಂದು ಪ್ರಕಟಿಸಿದ ಹೇಳಿಕೆಯಲ್ಲಿ, ಕ್ರೈಸ್ತರು ಮತ್ತು ಮುಸ್ಲಿಮರು ತಮ್ಮ ತಮ್ಮ ಆಧ್ಯಾತ್ಮಿಕ ಭಕ್ತಿ ಮತ್ತು ಪ್ರಾಯಶ್ಚಿತ್ತದ ಸಮಯವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ಯುದ್ಧ ಆರಂಭವಾಗಿದೆ ಎಂದು ಅವರು ಹೇಳಿದರು.
ರಂಜಾನ್ ಮತ್ತು ತಪಸ್ಸು ಕಾಲದ ಸಂದರ್ಭದಲ್ಲೇ ಯುದ್ಧ
“ಈ ಯುದ್ಧದ ಆರಂಭವು ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳ ಅತ್ಯಂತ ಮಹತ್ವದ ಧಾರ್ಮಿಕ ಕಾಲದಲ್ಲಿ ಆರಂಭವಾಗಿದೆ: ಮುಸ್ಲಿಮರಿಗಾಗಿ ಪವಿತ್ರ ರಂಜಾನ್ ತಿಂಗಳು ಮತ್ತು ಕ್ರೈಸ್ತರಿಗಾಗಿ ನಾಲ್ವತ್ತು ದಿನಗಳ ತಪಸ್ಸು ಕಾಲದ ದಿನಗಳು ಪ್ರಾರ್ಥನೆ,ದಾನ,ಪ್ರಾಯಶ್ಚಿತ್ತದ ಕಾಲ ಎಂದು ಧರ್ಮಾಧ್ಯಕ್ಷರು ಹೇಳಿದರು. ಮುಂದುವರಿದು, “ಈ ಎರಡು ಪವಿತ್ರ ಕಾಲಗಳು ಯಾದೃಚ್ಛಿಕವಾಗಿ ಅಲ್ಲ, ದೈವೇಚ್ಛೆಯಂತೆ ಈ ವರ್ಷ ಒಂದೇ ದಿನ ಫೆಬ್ರವರಿ 18ರಂದು ಆರಂಭವಾಗಿವೆ” ಎಂದು ಹೇಳಿದರು.
ಧರ್ಮಾಧ್ಯಕ್ಷ ಬೆರಾರ್ಡಿ ಮುಸ್ಲಿಮರು ಮತ್ತು ಕ್ರೈಸ್ತರು ತಮ್ಮ ಆತ್ಮೀಯಆಧ್ಯಾತ್ಮಿಕ ಪ್ರಯಾಣವನ್ನು ಒಂದೇ ಸಮಯದಲ್ಲಿ ಆರಂಭಿಸಿದ್ದಾರೆ ಎಂದು ಸ್ಮರಿಸಿದರು. ಯುದ್ಧವು “ನಮ್ಮ ಜೀವನದ ದುರ್ಬಲತೆ ಮತ್ತು ಈ ಭೂಮಿಯ ಮೇಲಿನ ನಮ್ಮ ಅಸ್ತಿತ್ವದ ಕ್ಷಣಿಕತೆಯನ್ನು ಇನ್ನಷ್ಟು ಸ್ಪಷ್ಟವಾಗಿ ತೋರಿಸುತ್ತದೆ. ಇದು ನಮ್ಮ ತಪ್ಪುಗಳಿಗಾಗಿ ಮತ್ತು ಲೋಕದ ಪಾಪಗಳಿಗಾಗಿ ಉಪವಾಸ ಮತ್ತು ಪಶ್ಚಾತ್ತಾಪದ ಮೂಲಕ ಸಂಪೂರ್ಣ ಹೃದಯದಿಂದ ದೇವರ ಕಡೆಗೆ ತಿರುಗಬೇಕಾದ ಅಗತ್ಯವನ್ನು” ನಮಗೆ ನೆನಪಿಸುತ್ತದೆ ಎಂದು ಅವರು ಹೇಳಿದರು.
ಶಾಂತಿಯ ಹುಡುಕಾಟದಲ್ಲಿ ಏಕತೆ
“ನಾವು ಒಟ್ಟಿಗೆ ಆರಂಭಿಸಿದ ರಂಜಾನ್ ಮತ್ತು ತಪಸ್ಸು ಕಾಲದ ಈ ಪ್ರಯಾಣವು, ಸಂಘರ್ಷದಿಂದ ಗುರುತಿಸಲ್ಪಟ್ಟ ಈ ಕಠಿಣ ಕ್ಷಣಗಳಲ್ಲಿಯೂ ನಮ್ಮನ್ನು ಒಂದಾಗಿಸಲಿ,” ಎಂದು ಅವರು ಮನವಿ ಮಾಡಿದರು. ಬಹರೈನ್ ರಾಜ್ಯದ ಜನರು ಮಾತ್ರವಲ್ಲದೆ ಸಂಪೂರ್ಣ ಮಧ್ಯಪ್ರಾಚ್ಯದ ಜನರು ಮತ್ತೆ ಶಾಂತಿಯ ದಿನಗಳಿಗೆ ಮರಳಬೇಕು ಎಂಬ ಆಶೆಯನ್ನು ಅವರು ವ್ಯಕ್ತಪಡಿಸಿದರು. ಉತ್ತರ ಅರೇಬಿಯಾದ ಪ್ರೇಷಿತ ಪ್ರತಿನಿಧಿ ಮುಂದುವರಿದು ಉಪವಾಸ ಮತ್ತು “ನಿರಂತರ ಹಾಗೂ ಸತ್ಯಸಂಧ ಪ್ರಾರ್ಥನೆ”ಗೆ ಕರೆ ನೀಡಿದರು. ಈ ಸಂಘರ್ಷದಿಂದ ದುಃಖ ಅನುಭವಿಸಿರುವವರು ಮತ್ತು ತಮ್ಮ ಪ್ರಿಯರನ್ನು ಕಳೆದುಕೊಂಡವರಿಗೆ ಸಾಂತ್ವನ ದೊರಕಲಿ ಮತ್ತು ಶಾಂತಿ ಪುನಃಸ್ಥಾಪನೆಯಾಗಲಿ ಎಂದು ದೇವರ ಮುಂದೆ ಪ್ರಾರ್ಥಿಸೋಣ ಎಂದು ಅವರು ಹೇಳಿದರು.
ಶಾಂತಿಯ ಸಾಧಕರಾಗೋಣ
ತಮ್ಮ ಸಂದೇಶವನ್ನು ಮುಕ್ತಾಯಗೊಳಿಸುತ್ತಾ “ನಾವು ಶಾಂತಿಯ ಸಾಧಕರಾಗೋಣ,” ಎಂದು ಕರೆ ನೀಡಿದರು. “ಕ್ಷಿಪಣಿಗಳ ಗರ್ಜನೆ ನಿಲ್ಲಲೆಂದು ದೇವರನ್ನು ಬೇಡೋಣ ಮತ್ತು ವಿಭಜನೆಯಿಂದ ಹಲವು ಬಾರಿ ಗುರುತಿಸಲ್ಪಟ್ಟ ಈ ಮಧ್ಯಪ್ರಾಚ್ಯದ ನೆಲದಲ್ಲಿ ನಾವು ಶಾಶ್ವತವಾಗಿ ಏಕತೆಯಲ್ಲಿ ಬದುಕಲು ಸಾಧ್ಯವಾಗಲಿ.”
ಗಲ್ಫ್ ಪ್ರದೇಶದಲ್ಲಿನ ಕಥೋಲಿಕ ಸಮುದಾಯ
ಉತ್ತರ ಅರೇಬಿಯಾದ ಪ್ರೇಷಿತ ಧರ್ಮಕ್ಷೇತ್ರ ಬಹರೈನ್, ಕುವೈತ್, ಖತರ್ ಮತ್ತು ಸೌದಿ ಅರೇಬಿಯಾದಲ್ಲಿ ವಾಸಿಸುವ ಕಥೋಲಿಕರಿಗೆ ಸೇವೆ ಸಲ್ಲಿಸುತ್ತಿದೆ. ಇಲ್ಲಿ ಇರುವ ಕಥೋಲಿಕ ಸಮುದಾಯವು ಬಹುತೇಕ ಏಷ್ಯಾ, ಆಫ್ರಿಕಾ ಮತ್ತು ಇತರ ಪ್ರದೇಶಗಳಿಂದ ಬಂದ ವಲಸೆ ಕಾರ್ಮಿಕರಿಂದ ರೂಪುಗೊಂಡಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).