ಹುಡುಕಿ

2026.03.04 FABC General conference 2022 Bangkok, Thailand 2026.03.04 FABC General conference 2022 Bangkok, Thailand 

ಮಧ್ಯಪ್ರಾಚ್ಯದಲ್ಲಿ ತಕ್ಷಣದ ಯುದ್ಧ ವಿರಾಮಕ್ಕೆ ಏಷ್ಯಾದ ಧರ್ಮಾಧ್ಯಕ್ಷರುಗಳ ಕರೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರವು ಜಾಗತಿಕ ಮಟ್ಟದಲ್ಲಿ “ಅಗಣಿತ ಮಾನವೀಯ ಮತ್ತು ಆರ್ಥಿಕ ಪರಿಣಾಮಗಳನ್ನು” ಉಂಟುಮಾಡುವ ಅಪಾಯವಿದೆ ಎಂದು ಎಚ್ಚರಿಸುತ್ತಾ, ಏಷ್ಯಾದ ಧರ್ಮಾಧ್ಯಕ್ಷರುಗಳು ತಕ್ಷಣವೇ ಯುದ್ಧ ವಿರಾಮಕ್ಕೆ ಕರೆ ನೀಡಿದ್ದಾರೆ.

LiCAS ವರದಿ

ಏಷ್ಯಾ ಧರ್ಮಾಧ್ಯಕ್ಷರುಗಳ ಮಹಾಸಭೆಯ ಒಕ್ಕೂಟವಾದ Federation of Asian Bishops’ Conferences (FABC) ಇದರ ಕೇಂದ್ರ ಸಮಿತಿ ಮಾರ್ಚ್ 3ರಂದು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಪ್ರಕಟಣೆ ಹೊರಡಿಸಿ ಮಧ್ಯಪ್ರಾಚ್ಯದಲ್ಲಿ ತಕ್ಷಣದ ಯುದ್ಧ ವಿರಾಮವನ್ನು ಕೋರಿತು.

ಏಷ್ಯಾದ ಧರ್ಮಾಧ್ಯಕ್ಷರುಗಳು “ಮಧ್ಯಪ್ರಾಚ್ಯದಲ್ಲಿ ಮತ್ತೆ ಉಲ್ಬಣಗೊಂಡಿರುವ ಹಿಂಸಾಚಾರದ ಕುರಿತು ಆಳವಾದ ದುಃಖ ಮತ್ತು ಗಂಭೀರ ಚಿಂತೆಯನ್ನು” ವ್ಯಕ್ತಪಡಿಸಿದರು. ಇತ್ತೀಚಿನ ಬಾಂಬ್ ದಾಳಿ ಮತ್ತು ಪ್ರತೀಕಾರಾತ್ಮಕ ದಾಳಿಗಳ ಚಕ್ರವು ಜಾಗತಿಕ ಹಾಗೂ ಪ್ರಾದೇಶಿಕ ಶಕ್ತಿಗಳನ್ನು ಒಳಗೊಂಡಿರುವುದನ್ನು ಅವರು ಉಲ್ಲೇಖಿಸಿದರು.

“ಇತ್ತೀಚಿನ ಬಾಂಬ್ ದಾಳಿ ಮತ್ತು ಪ್ರತೀಕಾರದ ಕ್ರಮಗಳು—ಜಾಗತಿಕ ಹಾಗೂ ಪ್ರಾದೇಶಿಕ ಶಕ್ತಿಗಳ ಭಾಗವಹಿಸುವಿಕೆಯಿಂದ—ಪ್ರದೇಶವನ್ನೂ ಜಗತ್ತನ್ನೂ ಅಗಣಿತ ಮಾನವೀಯ ಮತ್ತು ಆರ್ಥಿಕ ಪರಿಣಾಮಗಳಿರುವ ಸಂಘರ್ಷದತ್ತ ತಳ್ಳುವ ಅಪಾಯವನ್ನು ಹೊಂದಿವೆ,” ಎಂದು ಪ್ರಕಟಣೆ ತಿಳಿಸಿದೆ.

“ಒಂದು ಖಂಡವಾಗಿ ನಾವು ಈ ಸಂಘರ್ಷದ ಕುರಿತು ವಿಶೇಷ ಕಳವಳ ಹೊಂದಿದ್ದೇವೆ,” ಎಂದು ಧರ್ಮಾಧ್ಯಕ್ಷರುಗಳು ಹೇಳಿದರು.

ಈ ಸಂದರ್ಭದಲ್ಲಿ, ಪೂಜ್ಯ ಜಗದ್ಗುರು 14ನೇ ಲಿಯೋ ಅವರು ನೀಡಿರುವ ಶಾಂತಿ ಮನವಿಯನ್ನು ಕೂಡ ಅವರು ಉಲ್ಲೇಖಿಸಿ, “ನಾಶ, ನೋವು ಮತ್ತು ಮರಣವನ್ನು ಬಿತ್ತುವ ಬೆದರಿಕೆಗಳು ಅಥವಾ ಆಯುಧಗಳ ಮೇಲೆ ಶಾಂತಿಯನ್ನು ನಿರ್ಮಿಸಲು ಸಾಧ್ಯವಿಲ್ಲ,” ಎಂದು ಅವರು ಹೇಳಿದರು.

“ಭಯದಿಂದ ಸ್ಥಿರತೆ ಉಂಟಾಗುವುದಿಲ್ಲ; ಹಿಂಸಾಚಾರದಿಂದ ನ್ಯಾಯ ಸ್ಥಾಪನೆಯಾಗುವುದಿಲ್ಲ. ನಿಷ್ಠಾವಂತ, ಹೊಣೆಗಾರಿಕೆಯುತ ಮತ್ತು ನಿರಂತರ ಸಂವಾದ ಮಾತ್ರ ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿಯ ದಾರಿಯನ್ನು ತೆರೆಯಬಲ್ಲದು,” ಎಂದು ಧರ್ಮಾಧ್ಯಕ್ಷರುಗಳು ಹೇಳಿದರು.

ಏಷ್ಯಾದ ಧಾರ್ಮಿಕ ವೈವಿಧ್ಯತೆ ಹಾಗೂ ಬಡಜನರ ದೈನಂದಿನ ಹೋರಾಟಗಳ ಹಿನ್ನೆಲೆಯನ್ನು ಉಲ್ಲೇಖಿಸುತ್ತಾ, ಜನಾಂಗಗಳ ನಡುವೆ ನ್ಯಾಯ ಮತ್ತು ಪರಸ್ಪರ ವಿಶ್ವಾಸವೇ ಶಾಂತಿಯ ಮೂಲ ಎಂದು ಅವರು ಹೇಳಿದರು.

“ಶಾಂತಿ ಎಂದರೆ ಯುದ್ಧದ ಅಭಾವ ಮಾತ್ರವಲ್ಲ. ಅದು ನ್ಯಾಯದ ಫಲ, ಸಂವಾದದ ಕಾರ್ಯ ಮತ್ತು ಜನಾಂಗಗಳ ನಡುವೆ ವಿಶ್ವಾಸವನ್ನು ಧೈರ್ಯದಿಂದ ನಿರ್ಮಿಸುವ ಪ್ರಕ್ರಿಯೆಯಾಗಿದೆ,” ಎಂದು ಅವರು ಹೇಳಿದರು.

ಯುದ್ಧವು ಬಡವರು, ಸ್ಥಳಾಂತರಿತರು, ಮಕ್ಕಳು ಮತ್ತು ಭವಿಷ್ಯದ ತಲೆಮಾರುಗಳು ಮುಂತಾದ ಅತೀ ಅಸುರಕ್ಷಿತ ವರ್ಗಗಳನ್ನು ಹೆಚ್ಚು ಗಾಯಗೊಳಿಸುತ್ತದೆ,” ಎಂದು   ಎಚ್ಚರಿಸಿದರು.

 “ತಕ್ಷಣದ ಶಸ್ತ್ರಸಂಗ್ರಾಮದ ನಿಲುಗಡೆ”ಗಾಗಿ ಕರೆ ನೀಡುತ್ತಾ, ಎಲ್ಲಾ ಪಕ್ಷಗಳು “ನೈತಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಿ, ಹೆಚ್ಚುತ್ತಿರುವ ಸಂಘರ್ಷದ ಚಕ್ರವನ್ನು ತಡೆಯಬೇಕು; ಅದು ಇನ್ನಷ್ಟು ನೋವು ಮತ್ತು ಮರಳಿಸಲಾಗದ ನಷ್ಟಗಳಿಗೆ ಕಾರಣವಾಗುತ್ತದೆ” ಎಂದು ಹೇಳಿದರು. ಜೊತೆಗೆ, ಸಂಘರ್ಷ ಪರಿಹಾರಕ್ಕೆ “ರಾಜತಾಂತ್ರಿಕತೆಯನ್ನು ಮುಖ್ಯ ಸಾಧನವಾಗಿ ಪುನಃ ಸ್ಥಾಪಿಸಬೇಕು” ಎಂದು ಅವರು ಮನವಿ ಮಾಡಿದರು.

“ಸಂವಾದ ಎಷ್ಟೇ ಕಠಿಣವಾಗಿದ್ದರೂ, ಅದು ಜನಾಂಗಗಳ ಗೌರವ ಮತ್ತು ರಾಷ್ಟ್ರಗಳ ಸ್ವಾಯತ್ತತೆಯನ್ನು ಗೌರವಿಸುವ ಏಕೈಕ ಮಾರ್ಗವಾಗಿದೆ,” ಎಂದು ಪ್ರಕಟಣೆ ತಿಳಿಸಿದೆ.

ಇದಲ್ಲದೆ, ಪ್ರದೇಶದಲ್ಲಿರುವ ಮಹತ್ವದ ಧಾರ್ಮಿಕ ಪರಂಪರೆಗಳ ನಾಯಕರು ಪರಸ್ಪರ ಸಹಕಾರದಿಂದ “ಜೀವನದ ಪಾವಿತ್ರ್ಯಕ್ಕೆ ಸಾಕ್ಷಿಯಾಗುವಂತೆ ಧರ್ಮಾಂತರ ಐಕ್ಯತೆಯನ್ನು” ಉತ್ತೇಜಿಸಲು FABC ಪ್ರೋತ್ಸಾಹ ನೀಡಿದೆ. ಜೊತೆಗೆ, “ಭೂರಾಜಕೀಯ ಲೆಕ್ಕಾಚಾರಗಳ ನಡುವೆ ಕೇಳಿಸದಂತೆ ಉಳಿಯುವ ಬಡವರ ಮತ್ತು ಯುದ್ಧದ ಸಂತ್ರಸ್ತರೊಂದಿಗೆ ನಿಲ್ಲುವ ತನ್ನ ಬದ್ಧತೆಯನ್ನು” ಪುನರುಚ್ಚರಿಸಿದೆ.

“ಈ ತಪಸ್ಸು ಕಾಲದಲ್ಲಿ ಏಷ್ಯಾದ ಎಲ್ಲ ಸ್ಥಳೀಯ ಧರ್ಮಸಭೆಗಳು ಶಾಂತಿಗಾಗಿ ಹೆಚ್ಚು ಪ್ರಾರ್ಥನೆ, ಉಪವಾಸ ಮತ್ತು ಸಹಾನುಭೂತಿಯ ಕಾರ್ಯಗಳನ್ನು ಹೆಚ್ಚಿಸಬೇಕು,” ಎಂದು ಧರ್ಮಾಧ್ಯಕ್ಷರುಗಳು ಕರೆ ನೀಡಿದರು.

ಈ ಲೇಖನವು ಮೂಲತಃ licas.news ನಲ್ಲಿ ಪ್ರಕಟವಾಗಿದೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನಧಿಕೃತ ಮರುಪ್ರಕಟಣೆ ಅನುಮತಿಸಲಾಗುವುದಿಲ್ಲ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

04 ಮಾರ್ಚ್ 2026, 07:11