‘ದ್ವಿಕರೆ’: ಅಲ್ಜೀರಿಯಾದ 19 ರಕ್ತಸಾಕ್ಷಿಗಳ ಕುರಿತು ಪ್ಯಾರಿಸ್‌ನಲ್ಲಿ ಪ್ರದರ್ಶನ
ಲೇಖಕರು:ಲೋರೆಂಝೋ ಫಜ್ಜಿನಿ
ಪ್ಯಾರಿಸ್ ನಗರದ ಮಧ್ಯಭಾಗದಲ್ಲಿ ನಡೆಯುತ್ತಿರುವ ಪ್ರದರ್ಶನವು ಉತ್ತರ ಆಫ್ರಿಕಾದ ಅಲ್ಜೀರಿಯಾ ದೇಶದಲ್ಲಿ 1994ರಿಂದ 1996ರ ನಡುವೆ ಹತ್ಯೆಗೀಡಾದ 19 ರಕ್ತಸಾಕ್ಷಿಗಳ ಕಥೆಯನ್ನು ವಿವರಿಸುತ್ತದೆ.
ಕೋಲೆಜ್ ದೆ ಬರ್ನಾರ್ದಿನ್ ಎಂಬ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯುತ್ತಿರುವ ‘ದ್ವಿಕರೆ’: ಅಲ್ಜೀರಿಯಾದ 19 ರಕ್ತಸಾಕ್ಷಿಗಳು' (Called Twice: The Martyrs of Algeria) ಎಂಬ ಪ್ರದರ್ಶನವು ಇಪ್ಪತ್ತು ಫಲಕಗಳು ಮತ್ತು ಎರಡು ವಿಡಿಯೋ ಪ್ರದರ್ಶನಗಳನ್ನು ಒಳಗೊಂಡಿದೆ. ವ್ಯಾಟಿಕನ್ ಪ್ರಕಟಣಾ ಸಂಸ್ಥೆ (LEV) ಮತ್ತು ಓಯಾಸಿಸ್ ಪ್ರತಿಷ್ಠಾನವು ಇದನ್ನು ರೂಪಿಸಿ ಆಯೋಜಿಸಿವೆ. ಪ್ಯಾರಿಸ್ ಧರ್ಮಸಭೆಯ ಈ ಸಾಂಸ್ಕೃತಿಕ ಕೇಂದ್ರದಲ್ಲಿ ವಾರಪೂರ್ತಿ ಪ್ರದರ್ಶನ ತೆರೆದಿರುತ್ತದೆ.
2008ರಲ್ಲಿ ಪೂಜ್ಯ ಜಗದ್ಗುರುಗಳಾದ 16ನೆ ಬೆನೆಡಿಕ್ಟ್ ಅವರು ಈ ಕೇಂದ್ರವನ್ನು ಉದ್ಘಾಟಿಸಿದ್ದರು. ದೇವರ ಹುಡುಕಾಟ ಮತ್ತು ಸಂಸ್ಕೃತಿಯ ನಡುವಿನ ಸಂಬಂಧದ ಕುರಿತು ಅವರು ಅಲ್ಲಿ ಮಹತ್ವದ ಭಾಷಣವನ್ನೂ ಮಾಡಿದ್ದರು.
ಅಂಧಕಾರದ ದಶಕ ಮತ್ತು ತಿಬಿರಿನ್ ಸನ್ಯಾಸಿಗಳ ಅಪಹರಣ
ಅಲ್ಜೀರಿಯಾದ ಈ 19 ರಕ್ತಸಾಕ್ಷಿಗಳು, ಅಲ್ಜೀರಿಯಾದ ಜನರ ನಡುವೆ ದೇವರ ಹುಡುಕಾಟದ ಸಾಕ್ಷಿಗಳಾಗಿ ಕಾಣಿಸಿಕೊಂಡರು. ಅವರು ದೇಶದ “ಅಂಧಕಾರದ ದಶಕ”ವೆಂದು ಕರೆಯಲ್ಪಡುವ ಅಲ್ಜೀರಿಯಾ ಅಂತರ್ಯುದ್ಧದ ಸಮಯದಲ್ಲಿ ಜನರೊಂದಿಗೆ ಏಕತೆಯಿಂದ ನಿಂತಿದ್ದರು. ಆ ಹಿಂಸಾತ್ಮಕ ಅವಧಿಯಲ್ಲಿ ಸುಮಾರು 1,50,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಹಿಂಸೆಗೆ ವಿರೋಧ ವ್ಯಕ್ತಪಡಿಸಿದ ಅನೇಕ ಇಮಾಮರು, ಬೌದ್ಧಿಕರು ಮತ್ತು ಪತ್ರಕರ್ತರೂ ಸಹ ಆ ಹಿಂಸೆಗೆ ಬಲಿಯಾಗಿದ್ದರು.
1996ರ ಮಾರ್ಚ್ 26 ಮತ್ತು 27ರ ಮಧ್ಯರಾತ್ರಿ ನೋಟ್ರ್ ಡಾಮ್ ದೆ ಲ್ ಅಟ್ಲಾಸ್ ಮಠದಿಂದ ಏಳು ಫ್ರೆಂಚ್ ಟ್ರ್ಯಾಪಿಸ್ಟ್ ಸನ್ಯಾಸಿಗಳನ್ನು ಅಪಹರಿಸಲಾಯಿತು. ಕೆಲ ವಾರಗಳ ಬಳಿಕ, ಅದೇ ವರ್ಷದ ಮೇ 30ರಂದು ಆ ಸನ್ಯಾಸಿಗಳನ್ನು ಹತ್ಯೆ ಮಾಡಲಾಯಿತು. ಈ ಘಟನೆಯ 30ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ರಿಮಿನಿ ಮೀಟಿಂಗ್ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಈ ಪ್ರದರ್ಶನವು ಈಗ ರೋಮ್ ಮತ್ತು ಮಿಲಾನ್ ನಗರಗಳಲ್ಲಿ ಪ್ರದರ್ಶಿತವಾಗಿದೆ. ಮುಂದಿನ ದಿನಗಳಲ್ಲಿ ಇದು ಲೂರ್ದುಸ್, ಆಕ್ಸ್ಫರ್ಡ್, ಜೆನೋವಾ ಮತ್ತು ಟುರಿನ್ ನಗರಗಳಲ್ಲಿಯೂ ಪ್ರದರ್ಶಿಸಲಾಗುತ್ತದೆ.
ಫ್ರೆಂಚ್ ಧರ್ಮಾಧ್ಯಕ್ಷರ ಸಭೆಯ ಅಧ್ಯಕ್ಷರೂ, ಪ್ಯಾರಿಸ್‌ನ ಮಹಾ ಧರ್ಮಾಧ್ಯಕ್ಷರಾದ ಪೂಜ್ಯ ಕಾರ್ಡಿನಲ್ ಜಾನ್-ಮಾರ್ಕ್ ಅವೆಲಿನರು, ಈ ಪ್ರದರ್ಶನವನ್ನು ಫ್ರಾನ್ಸ್‌ಗೆ ತರಲು ಪ್ರಮುಖ ಪಾತ್ರವಹಿಸಿದ್ದರು. ಈ 19 ರಕ್ತಸಾಕ್ಷಿಗಳ ಸ್ಮರಣೆಯನ್ನು ಜೀವಂತವಾಗಿಡಲು ಈ ಪ್ರದರ್ಶನ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
“‘Called Twice’ ಎಂಬ ಈ ಪ್ರದರ್ಶನವು ಅಲ್ಜೀರಿಯಾದ ಸಣ್ಣ ಧರ್ಮಸಭೆಯ ಜೀವನವನ್ನು ತೋರಿಸುತ್ತದೆ. ಅದು ಇಂದಿಗೂ ತುಂಬಾ ದುರ್ಬಲ ಮತ್ತು ಸಂಕಷ್ಟಕರ ಪರಿಸ್ಥಿತಿಯಲ್ಲಿದೆ. ಕ್ರಿಸ್ತನಿಗೆ ನಿಷ್ಠರಾಗಿರುವುದು ಎಂದರೆ ದಿನನಿತ್ಯದ ಜೀವನದಲ್ಲಿ ನಮ್ಮೊಂದಿಗೆ ನಡೆಯುವ ಜನರ ಜೊತೆಗೇ ಇರುವುದು. ಇದೇ ಕಾರಣಕ್ಕಾಗಿ ಈ ಧಾರ್ಮಿಕ ಪುರುಷರು ಮತ್ತು ಮಹಿಳೆಯರು ತಮ್ಮ ಜೀವವನ್ನೇ ಅರ್ಪಿಸುವ ಮಟ್ಟಿಗೆ ಅಲ್ಜೀರಿಯಾದ ಜನರೊಂದಿಗೆ ನಿಂತಿದ್ದರು,” ಎಂದು ಅವರು ಹೇಳಿದರು.
ಉದ್ಘಾಟನೆಯಲ್ಲಿ ಭಾಗವಹಿಸಿದವರು
ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ಯಾರಿಸ್‌ನ ಮಹಾ ಧರ್ಮಾಧ್ಯಕ್ಷ ಪೂಜ್ಯ ಲಾರೆಂಟ್ ಉಲ್ರಿಕ್, ವ್ಯಾಟಿಕನ್ ಬ್ಯಾಂಕ್ (IOR) ಅಧ್ಯಕ್ಷ ಜೀನ್-ಬಾಪ್ಟಿಸ್ಟ್ ದೆ ಫ್ರಾಂಸು, UNESCOದಲ್ಲಿ ಜಗದ್ಗುರುಗಳ ಅಧಿಕಾರ ಪೀಠದ ವೀಕ್ಷಕರಾದ ವಂ. ಗುರು ರೊಬೆರ್ಟೊ ಕ್ಯಾಂಪಿಸಿ, ಲಾಘುವಾಟ್-ಘರ್ದಾಯಾ ನಿವೃತ್ತ ಧರ್ಮಾಧ್ಯಕ್ಷ ಪೂಜ್ಯ ಕ್ಲೋಡ್ ರಾಲ್ಟ್, ಮತ್ತು ಫೋರಂ ಪ್ಯಾರಿಸ್ ಅಧ್ಯಕ್ಷ ಮಾರ್ಟಿನೊ ಬೊರೆಲ್ಲೊ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮನಸನ್ನು ಮುಟ್ಟಿದ ಸ್ಮರಣೆ
1996ರ ವಸಂತಕಾಲದಲ್ಲಿ, ಬೇಯಾರ್ಡ್ ಪ್ರಕಟಣಾ ಸಂಸ್ಥೆ ತಿಬಿರಿನ್ ಮಠದ ಮುಖ್ಯಸ್ಥರಾದ ವಂ.ಫ್ರೆರ್ ಕ್ರಿಸ್ತಿಯನ್ ದೆ ಶೆರ್ಜೆ ಅವರ ಪ್ರಸಿದ್ದ ಆಧ್ಯಾತ್ಮಿಕ ಪುಸ್ತಕವನ್ನು ಮೊದಲ ಬಾರಿಗೆ ಪ್ರಕಟಿಸಿತು. ಪ್ಯಾರಿಸ್ ಪ್ರದರ್ಶನದ ಸಂದರ್ಭದಲ್ಲಿ ಆ ಪಠ್ಯವನ್ನು ಖ್ಯಾತ ಲೇಖಕ ಎರಿಕ್-ಎಮ್ಯಾನುಯೆಲ್ ಶ್ಮಿಟ್ ಓದಿ ಕೇಳಿಸಿದರು.
ಬೇಯಾರ್ಡ್ ಸಂಸ್ಥೆಯ ಅಧ್ಯಕ್ಷ ಫ್ರಾಂಸ್ವಾ ಮೊರಿನಿಯೇರ್ ಅವರು, ಈ ಪ್ರದರ್ಶನವನ್ನು ಕೋಲೆಜ್ ದೆ ಬರ್ನಾರ್ದಿನ್‌ನಲ್ಲಿ ನಡೆಸಲು ಅವಕಾಶ ದೊರೆತಿರುವುದು ಸಂತೋಷದ ವಿಷಯ ಎಂದು ಹೇಳಿದರು.
“ವ್ಯಾಟಿಕನ್ ಪ್ರಕಟಣಾ ಸಂಸ್ಥೆಯೊಂದಿಗೆ ನಡೆದ ಮಾತುಕತೆಯ ನಂತರ ನಾವು ಈ ಯೋಜನೆಯನ್ನು ತಿಳಿದುಕೊಂಡೆವು. ಅಲ್ಜೀರಿಯಾದ ರಕ್ತಸಾಕ್ಷಿಗಳ ಕಥೆ ಫ್ರೆಂಚ್ ಧರ್ಮಸಭೆಯನ್ನು ಹಾಗೂ ನನ್ನಂತಹ ಅನೇಕ ಕಥೋಲಿಕರನ್ನು ಆಳವಾಗಿ ಸ್ಪರ್ಶಿಸಿದೆ,” ಎಂದು ಅವರು ಹೇಳಿದರು.
ಕುಟುಂಬ ಸದಸ್ಯರ ಸ್ಮರಣೆ
ಈ 19 ಸಾಕ್ಷಿದಾರರ ಕುಟುಂಬ ಸದಸ್ಯರೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2008ರ ಡಿಸೆಂಬರ್ 8ರಂದು ಅಲ್ಜೀರಿಯಾದ ಓರಾನ್ ನಗರದಲ್ಲಿ ಇವರನ್ನು ಧನ್ಯರೆಂದು ಘೋಷಿಸಲಾಯಿತು. ದೇವರಿಗೂ ಸಹೋದರರಿಗೂ ನಿಷ್ಠೆಯಿಂದ ತಮ್ಮ ಜೀವವನ್ನೇ ಅರ್ಪಿಸಿದವರಾಗಿ ಅವರು ಸ್ಮರಿಸಲ್ಪಟ್ಟರು.
ತಿಬಿರಿನ್ ಮಠದ ಮುಖ್ಯಸ್ಥರಾದ ಫ್ರೆರ್ ಕ್ರಿಸ್ತಿಯನ್ ಅವರ ಅಳಿಯ ಬ್ರುನೊ ದೆ ಶೆರ್ಜೆ, ಈ ಪ್ರದರ್ಶನ ಮತ್ತು 2010ರಲ್ಲಿ ಬಿಡುಗಡೆಯಾದ “Of Gods and Men” ಎಂಬ ಚಿತ್ರ ನಡುವಿನ ಸಂಬಂಧವನ್ನು ವಿವರಿಸಿದರು.
“ಈ ಪ್ರದರ್ಶನವು ತನ್ನದೇ ರೀತಿಯಲ್ಲಿ ಆ ಚಿತ್ರದಂತೆ ಕೆಲಸ ಮಾಡುತ್ತದೆ. ತಿಬಿರಿನ್ ಸನ್ಯಾಸಿಗಳ ಸಂದೇಶವನ್ನು ಜಗತ್ತಿಗೆ ಹೇಳುತ್ತದೆ,” ಎಂದು ಅವರು ಹೇಳಿದರು. ಮುಂದುವರೆದು, “ಟ್ರ್ಯಾಪಿಸ್ಟ್ ಸನ್ಯಾಸಿಗಳು ಲೋಕಕ್ಕೆ ಗೊತ್ತಾಗದೆ ಮೌನವಾಗಿ ಬದುಕಬೇಕಾಗಿತ್ತು. ಆದರೆ ಅವರ ದುಃಖಕರ ಮರಣವು ಅವರನ್ನು ಸಂಪೂರ್ಣ ಜಗತ್ತಿಗೆ ಪರಿಚಯಿಸಿತು. ಇದು ಕ್ರಿಸ್ತನಿಗೆ, ಧರ್ಮಸಭೆಗೆ ಮತ್ತು ಅಲ್ಜೀರಿಯಾದ ಜನರಿಗೆ ಅರ್ಪಿಸಿದ ಅವರ ಜೀವನದ ಸಾಕ್ಷಿಯಾಗಿದೆ,” ಎಂದು ಹೇಳಿದರು.
ಅವರ ಸಾಕ್ಷಿಯ ಪರಂಪರೆ
ಈ “Called Twice” ಪ್ರದರ್ಶನವು ಮೇ 8ರಂದು ಆಚರಿಸಲ್ಪಡುವ ಅಲ್ಜೀರಿಯಾದ ರಕ್ತಸಾಕ್ಷಿಗಳ ಧಾರ್ಮಿಕ ಹಬ್ಬದ ಅಂಗವಾಗಿ,ಮೇ 8 ರಿಂದ 10ರವರೆಗೆ ಮತ್ತೆ ಪ್ಯಾರಿಸ್‌ನಲ್ಲಿ ನಡೆಯಲಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).