ಯುದ್ಧದಿಂದ ಬಳಲುತ್ತಿರುವ ಉಕ್ರೇನ್‌ಗಾಗಿ ಕಾರಿತಾಸ್‌ನ ಪ್ರಾರ್ಥನೆ ಮತ್ತು ಕಾರ್ಯರೂಪದ ಏಕತೆ
ಲೇಖಕರು: ಸ್ವೀತ್ಲಾನಾ ದುಖೋವಿಚ್
ದುಃಖ, ನಿರೀಕ್ಷೆ ಮತ್ತು ಏಕತೆಯಿಂದ ತುಂಬಿದ ವಾತಾವರಣದಲ್ಲಿ, ಫೆಬ್ರವರಿ 24ರಂದು ಮಂಗಳವಾರ ಕೀವ್‌ನ ಗ್ರೀಕ್-ಕಥೋಲಿಕ ಪುನರುತ್ಥಾನದ ಪ್ರಧಾನ ದೇವಾಲಯದಲ್ಲಿ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಕಾರಿತಾಸ್(Caritas) ಉಕ್ರೇನ್ (ಗ್ರೀಕ್-ಕಥೋಲಿಕ ಧರ್ಮಸಭೆ) ಮತ್ತು ಕಾರಿಟಾಸ್-ಸ್ಪೆಸ್ ಉಕ್ರೇನ್ (ರೋಮನ ಕಥೋಲಿಕ ಧರ್ಮಸಭೆ) ಸಂಸ್ಥೆಗಳು, ಕಾರಿತಾಸ್(Caritas) ಇಂಟರ್ನ್ಯಾಷನಾಲಿಸ್ ಮತ್ತುಕಾರಿತಾಸ್(Caritas) ಯೂರೋಪ್ ಪಾಲುದಾರರೊಂದಿಗೆ ಸೇರಿ ಆಯೋಜಿಸಿದ್ದವು. ಫೆಬ್ರವರಿ 24, 2022ರಂದು ಆರಂಭವಾದ ರಷ್ಯಾದ ಸಂಪೂರ್ಣ ದಾಳಿಯ ಸ್ಮರಣಾ ದಿನದಂದು ಆಚರಿಸಲ್ಪಡುವ ರಾಷ್ಟ್ರೀಯ ಪ್ರಾರ್ಥನಾ ದಿನದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಉಕ್ರೇನಿನ ಜಗದ್ಗುರುಗಳ ರಾಯಭಾರಿ ಆಗಿರುವ ಮಹಾಧರ್ಮಾಧ್ಯಕ್ಷರಾದ ಪೂಜ್ಯ ವಿಸ್ವಾಲ್ದಾಸ್ ಕುಲ್ಬೋಕಾಸ್, ಕಾರಿತಾಸ್-ಸ್ಪೆಸ್(Caritas-Spec) ಉಕ್ರೇನ್ ಅಧ್ಯಕ್ಷರಾದ ಮೋನ್ಸಿನಿಯರ್ ಒಲೆಕ್ಸಾಂಡರ್ ಯಾಝ್ಲೋವೆಟ್ಸ್ಕಿ, ಕಾರ್ಯನಿರ್ವಾಹಕ ನಿರ್ದೇಶಕರಾದ ವಂ. ಗುರು ವ್ಯಾಚೆಸ್ಲಾವ್ ಹ್ರಿನೆವಿಚ್ ಹಾಗೂ ಕಾರಿತಾಸ್(Caritas) ಉಕ್ರೇನ್‌ನ ನೆಟ್‌ವರ್ಕ್ ಮತ್ತು ಐಡೆಂಟಿಟಿ ನಿರ್ದೇಶಕರಾದ ವಂ. ಗುರು ಆಂಡ್ರಿಯ್ ನಾಹಿರ್ನಿಯಾಕ್ ಭಾಗವಹಿಸಿದ್ದರು.
ಅಂತರರಾಷ್ಟ್ರೀಯ ಪಾಲುದಾರರ ಪ್ರತಿನಿಧಿಗಳು ಮತ್ತು ಕಾರಿತಾಸ್ ಇಂಟರ್ನ್ಯಾಷನಾಲಿಸ್ ಹಾಗೂ ಕಾರಿತಾಸ್ ಯೂರೋಪ್‌ನ ಪ್ರತಿನಿಧಿಗಳೂ ನೇರವಾಗಿ ಮತ್ತು ಆನ್‌ಲೈನ್ ಮೂಲಕ ಭಾಗವಹಿಸಿದರು. ಯುದ್ಧದಿಂದ ಬಳಲುತ್ತಿರುವ ಜನತೆಗೆ ಪ್ರಾರ್ಥನೆ ಮತ್ತು ಕಾರ್ಯರೂಪದ ಸಹಾಯದ ಮೂಲಕ ಬೆಂಬಲ ನೀಡುತ್ತಿರುವ ದಯೆಯ ಜಾಲವನ್ನು ಈ ಹಾಜರಾತಿ ಪ್ರತಿಬಿಂಬಿಸಿತು.
“ನಿಜವಾದ” ಕಾರಿಟಾಸ್
ಪ್ರಾರ್ಥನಾ ಸೇವೆಯ ಆರಂಭದಲ್ಲಿ ಕಾರಿತಾಸ್ ಇಂಟರ್ನ್ಯಾಷನಾಲಿಸ್ ಮಹಾಸಚಿವ ಅಲಿಸ್ಟೈರ್ ಡಟನ್ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು. ಕಳೆದ ನಾಲ್ಕು ಕಠಿಣ ವರ್ಷಗಳಲ್ಲಿ ಜನರ ಅಗತ್ಯಗಳಿಗೆ ಸ್ಪಂದಿಸಲು ನಿರಂತರವಾಗಿ ಶ್ರಮಿಸಿದ ಉಕ್ರೇನ್‌ನ ಕಾರಿತಾಸ್ ಕಾರ್ಯಕರ್ತರಿಗೆ ಅವರು ಆಳವಾದ ಕೃತಜ್ಞತೆ ವ್ಯಕ್ತಪಡಿಸಿದರು.
“ರಷ್ಯಾ ಮತ್ತೊಮ್ಮೆ ಉಕ್ರೇನ್ ಮೇಲೆ ದಾಳಿ ನಡೆಸಿದ ಸುದ್ದಿ ಕೇಳಿದ ಕ್ಷಣವನ್ನು ನಮ್ಮಲ್ಲಿ ಹಲವರು ಇನ್ನೂ ನೆನಪಿಸಿಕೊಂಡಿರಬಹುದು. ಯುರೋಪಿನ ಪೂರ್ವ ಗಡಿಗಳಲ್ಲಿ ಮತ್ತೊಮ್ಮೆ ಯುದ್ಧ ಸಿಡಿಯಿತು. ನಮ್ಮ ಉಕ್ರೇನಿಯನ್ ಸಹೋದರರು ಅಪಾರ ವೇದನೆ ಅನುಭವಿಸಿದ್ದಾರೆ,” ಎಂದು ಅವರು ಹೇಳಿದರು. “ನಾವು ನಾಲ್ಕು ವರ್ಷದ ಯುದ್ಧವನ್ನು ಆಳವಾದ ದುಃಖದೊಂದಿಗೆ ಸ್ಮರಿಸುತ್ತೇವೆ. ಈ ನೋವನ್ನು ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ, ಆದರೆ ನಾವು ನಿಮ್ಮೊಂದಿಗಿರುವ ನಮ್ಮ ಏಕತೆಯನ್ನು ತೋರಿಸಬಹುದು.”
ಉಕ್ರೇನ್ ಜನರ ಧೈರ್ಯವನ್ನು ಉಲ್ಲೇಖಿಸಿದ ಅವರು, ಯುದ್ಧದಿಂದ ಉಂಟಾದ ಅಗತ್ಯಗಳಿಗೆ ಕಾರಿತಾಸ್ ಸ್ಪಷ್ಟ ಉತ್ತರವಾಗಿದೆ ಎಂದು ಹೇಳಿದರು. “ನೀವು ನಿಜವಾದ ಕಾರಿತಾಸ್. ನಿಮ್ಮ ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಂದ ಹೆಚ್ಚು ನೋವು ಅನುಭವಿಸುವ ಬಡವರಿಗೂ ಪೀಡಿತರಿಗೂ ನೀವು ಸುವಾರ್ತೆಯಂತಿದ್ದೀರಿ,” ಎಂದು ಅವರು ಹೇಳಿದರು.
ಕ್ರಿಯಾತ್ಮಕ ಪ್ರೀತಿ ಮತ್ತು ಪ್ರಾರ್ಥನೆ
ಕಾರಿತಾಸ್ ಯೂರೋಪ್ ಮಹಾಸಚಿವ ಮಾರಿಯಾ ನಿಯ್ಮನ್ ಕೂಡ ಯೂರೋಪಿನ ಜಾಲದ ಪರವಾಗಿ ಉಕ್ರೇನ್‌ನೊಂದಿಗೆ ಏಕತೆಯನ್ನು ವ್ಯಕ್ತಪಡಿಸಿದರು. “ಇಂದು ನಾವು ಜೀವ ಕಳೆದುಕೊಂಡವರನ್ನೂ, ಮನೆಗಳನ್ನು ಕಳೆದುಕೊಂಡವರನ್ನೂ, ತಮ್ಮ ಪ್ರಿಯರನ್ನು ಕಳೆದುಕೊಂಡವರನ್ನೂ ನೆನಪಿಸಿಕೊಳ್ಳುತ್ತೇವೆ. ದೇಹ ಮತ್ತು ಮನಸ್ಸಿನಲ್ಲಿ ಗಾಯಗೊಂಡವರಿಗಾಗಿ ಪ್ರಾರ್ಥಿಸುತ್ತೇವೆ. ವಿಭಜಿತ ಕುಟುಂಬಗಳಿಗಾಗಿ ಮತ್ತು ಶಾಂತಿಯ ಆಶಯದಿಂದ ಬದುಕುತ್ತಿರುವವರಿಗಾಗಿ ಪ್ರಾರ್ಥಿಸುತ್ತೇವೆ,” ಎಂದು ಅವರು ಹೇಳಿದರು.
ಉಕ್ರೇನಿನ ಜಗದ್ಗುರುಗಳ ರಾಯಭಾರಿ ಆಗಿರುವ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಕುಲ್ಬೋಕಾಸ್, ಮಾನವೀಯ ನೆರವು ಕ್ಷೇತ್ರದಲ್ಲಿ ಕಾರಿತಾಸ್ ಉಕ್ರೇನ್ ಮತ್ತು ಕಾರಿತಾಸ್-ಸ್ಪೆಸ್(Caritas-Spec) ಅತ್ಯಂತ ಸಕ್ರಿಯ ಸಂಸ್ಥೆಗಳಾಗಿವೆ ಎಂದು ಹೇಳಿದರು. ಕಾರಿಟಾಸ್ ಆಯೋಜಿಸಿದ ಈ ಪ್ರಾರ್ಥನಾ ಸಭೆ “ಕ್ರಿಯಾತ್ಮಕ ಪ್ರೀತಿ ಮತ್ತು ಪ್ರಾರ್ಥನೆ” ಎಂಬ ಎರಡು ಆಯಾಮಗಳನ್ನು ಒಟ್ಟುಗೂಡಿಸುತ್ತದೆ ಎಂದು ಅವರು ತಿಳಿಸಿದರು. “ನಮ್ಮನ್ನೆಲ್ಲ ಒಟ್ಟುಗೂಡಿಸುವ ಪ್ರಾರ್ಥನಾ ದಿನವು ಅತ್ಯಂತ ಮಹತ್ವದ್ದಾಗಿದೆ,” ಎಂದು ಅವರು ಹೇಳಿದರು.
ಆಕ್ರಮಿತ ಪ್ರದೇಶಗಳಲ್ಲಿ ಇರುವ ಜನರಿಗಾಗಿ, ಕೈದಿಗಳಿಗಾಗಿ, ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗಾಗಿ, ಗಾಯಗೊಂಡವರಿಗಾಗಿ ಮತ್ತು ಯುದ್ಧದಲ್ಲಿ ಮೃತಪಟ್ಟವರಿಗಾಗಿ ಪ್ರಾರ್ಥಿಸಲು ಆಹ್ವಾನಿಸಿದರು.
ಇದು ಸಾಮಾನ್ಯವಲ್ಲ
ಸಾಮೂಹಿಕ ಪ್ರಾರ್ಥನೆಯ ನಂತರ ಕಾರಿತಾಸ್ ಉಕ್ರೇನ್ ಉಪಾಧ್ಯಕ್ಷ ಹ್ರಿಹೋರಿಯ್ ಸೆಲೆಶ್ಚುಕ್ ತಮ್ಮ ಅನುಭವ ಹಂಚಿಕೊಂಡರು. “ಇತ್ತೀಚೆಗೆ 14 ವರ್ಷ ತುಂಬಿದ ನನ್ನ ಮಗ ನಮ್ಮ ದೇಶ ಶಾಂತಿಯಲ್ಲಿದ್ದ ಕಾಲವನ್ನು ನೆನಪಿಸಿಕೊಳ್ಳಲಾರನು ಎಂಬುದು ನನಗೆ ಅರ್ಥವಾಯಿತು. ಇದು ಸಾಮಾನ್ಯವಲ್ಲ,” ಎಂದು ಅವರು ಹೇಳಿದರು. ಕೀವ್‌ನಲ್ಲಿ ಶಾಲೆಗೆ ಹೋಗುವ ಅವಕಾಶ ಇದ್ದರೂ, ಇತರ ಪ್ರದೇಶಗಳಲ್ಲಿ ಅರ್ಧ ಮಿಲಿಯನ್ ಮಕ್ಕಳಿಗೆ ಆ ಅವಕಾಶವಿಲ್ಲ ಎಂದು ಅವರು ಹೇಳಿದರು.
“ಒಬ್ಬ ವೃದ್ಧ ವ್ಯಕ್ತಿ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ಸಾವನ್ನಪ್ಪುವುದು ಸಾಮಾನ್ಯವಲ್ಲ. ಕೀವ್‌ನಲ್ಲಿ ಲಕ್ಷಾಂತರ ಜನರಿಗೆ ತಾಪಮಾನ ವ್ಯವಸ್ಥೆಯಿಲ್ಲದೆ ಉಳಿದಿರುವುದು ಸಾಮಾನ್ಯವಲ್ಲ. ಖಾರ್ಕಿವ್, ಡ್ನಿಪ್ರೊ, ಒಡೆಸಾ ಸೇರಿದಂತೆ ಅನೇಕ ನಗರಗಳಲ್ಲಿ ಸಾವಿರಾರು ಜನರು ಇನ್ನೂ ಈ ಪರಿಸ್ಥಿತಿಯಲ್ಲಿದ್ದಾರೆ,” ಎಂದು ಅವರು ಹೇಳಿದರು.
ಯುದ್ಧ ನಾಲ್ಕು ವರ್ಷಗಳ ಗಡಿಯನ್ನು ದಾಟಿದ ಬಳಿಕ ಅದು ಶೀಘ್ರದಲ್ಲೇ ಮುಗಿಯಲಿ ಎಂಬ ಆಶೆಯನ್ನು ವ್ಯಕ್ತಪಡಿಸಿ, “ಉಕ್ರೇನ್‌ನ ಅಪಾರ ಅಗತ್ಯಗಳ ನಡುವೆ ಸೇವೆಯನ್ನು ಮುಂದುವರಿಸಲು ಬೇಕಾದ ಧೈರ್ಯಕ್ಕಾಗಿ ನಾವು ದೇವರನ್ನು ಬೇಡಿಕೊಳ್ಳೋಣ. ಇಂದಿಗೂ 11 ಮಿಲಿಯನ್ ಜನರು ಅಗತ್ಯದಲ್ಲಿದ್ದಾರೆ,” ಎಂದು ಅವರು ಹೇಳಿದರು.
ಕಣ್ಣುಗಳ ಹಿಂದೆ ಇರುವ ಕಥೆಗಳು
ಕಾರಿತಾಸ್-ಸ್ಪೆಸ್(Caritas-Spec) ಉಕ್ರೇನ್ ಕಾರ್ಯನಿರ್ವಾಹಕ ನಿರ್ದೇಶಕರಾದ ವಂ. ಗುರು ವ್ಯಾಚೆಸ್ಲಾವ್ ಹ್ರಿನೆವಿಚ್ ತಮ್ಮ ಅನುಭವಗಳನ್ನು ಹಂಚಿಕೊಂಡರು. “ನಾನು ಕಂಡ ಅನೇಕ ಕಣ್ಣುಗಳನ್ನು ನೆನಪಿಸಿಕೊಳ್ಳುತ್ತೇನೆ. ನಿನ್ನ ಕಡೆ ನೋಡುವ ಆ ಕಣ್ಣುಗಳು — ಲೋಕವನ್ನು ಇನ್ನು ಕಾಣದಂತಾಗಿರುವವು; ಮತ್ತೆ ಬೆಳಕು ತುಂಬಿಸಬೇಕೆಂದು ಮನಸ್ಸು ಕಲುಕುವ ಆ ದೃಷ್ಟಿಗಳು — ಆದರೆ ನಿನ್ನ ಅಸಹಾಯಕತೆ ಅವುಗಳನ್ನು ಜೀವಕ್ಕೆ ಮರಳಿಸಲು ಸಾಧ್ಯವಿಲ್ಲ ಎಂಬ ಮೌನ ಸತ್ಯವನ್ನು ಮನಗಾಣಿಸುವವು.,” ಎಂದು ಅವರು ಹೇಳಿದರು.
ಖಾರ್ಕಿವ್ ಮೆಟ್ರೋ ನಿಲ್ದಾಣದಲ್ಲಿ ಜನಿಸಿದ ಶಿಶುವಿನ ಕಣ್ಣುಗಳು, ಗಡಿಯಲ್ಲಿ ನೆಲದಿಂದ ದೂರವಾಗಿರುವ ಅಜ್ಜಿಯ ಕಣ್ಣುಗಳು, ಆಶೆಯನ್ನು ಮರುಜೀವಗೊಳಿಸಲು ಪ್ರಯತ್ನಿಸಿದ ಅನೇಕ ಜನರ ಕಣ್ಣುಗಳು—ಇವುಗಳೆಲ್ಲ ತಮ್ಮ ನೆನಪುಗಳಲ್ಲಿ ಉಳಿದಿವೆ ಎಂದು ಅವರು ಹೇಳಿದರು.
“ಅವು ಅಳುವ ಕಣ್ಣುಗಳಾಗಿರಬಹುದು, ಕೃತಜ್ಞತೆಯನ್ನು ವ್ಯಕ್ತಪಡಿಸುವ ಕಣ್ಣುಗಳಾಗಿರಬಹುದು, ಆದರೆ ಅವುಗಳಲ್ಲಿ ದೇವರ ಕಣ್ಣುಗಳೂ ಇವೆ. ಮೇಲಕ್ಕೆ ದೃಷ್ಟಿ ಎತ್ತುವವರಲ್ಲಿ ನಮ್ಮ ಶಕ್ತಿ ಅಡಗಿದೆ. ದೇವರು ಎಲ್ಲವನ್ನೂ ನೋಡುತ್ತಾನೆ ಮತ್ತು ತನ್ನ ಸ್ಥಿರ ಕೈಯಿಂದ ನಮ್ಮನ್ನು ಬೆಂಬಲಿಸುತ್ತಾನೆ,” ಎಂದು ಅವರು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).