Ucraina: Zuppi, tacciano armi, basta bombardamenti, serve dialogo Ucraina: Zuppi, tacciano armi, basta bombardamenti, serve dialogo  (ANSA)

ಉಕ್ರೇನ್ ಯುದ್ಧದ ನಾಲ್ಕನೇ ದುಃಖಸ್ಮರಣೆ: ಆಯುಧಗಳು ಮೌನವಾಗಲಿ ಎಂಬ ಧರ್ಮಸಭೆಯ ಕರೆ

ಇಟಾಲಿಯನ್ ಧರ್ಮಾಧ್ಯಕ್ಷರ ಸಭೆಯ ಅಧ್ಯಕ್ಷರಾದ ಪ್ರಧಾನ ಗುರು ಮತ್ತಿಯೋ ಮಾರಿಯಾ ಜುಪ್ಪಿ, ಉಕ್ರೇನ್ ಯುದ್ಧ ಆರಂಭವಾದ ನಾಲ್ಕನೇ ದುಃಖಸ್ಮರಣೆಯ ಸಂದರ್ಭದಲ್ಲಿ, ಸಂತ್ ಎಜಿದಿಯೋ ಸಭೆಯ ವತಿಯಿಂದ ರೋಮಿನಲ್ಲಿ ಆಯೋಜಿಸಲಾದ ಶಾಂತಿ ಪ್ರಾರ್ಥನಾ ಜಾಗರಣೆಯು ಅಧ್ಯಕ್ಷತೆ ವಹಿಸಿದರು.

ಲೇಖಕರು: ಗುಗ್ಲಿಯೆಲ್ಮೊ ಗಲ್ಲೋನೆ

“ನಾವು ದಣಿವಿಲ್ಲದೆ ಸದಾ ಹೇಗೆ ಪ್ರಾರ್ಥಿಸಬಹುದು?”  ಉಕ್ರೇನ್ ಶಾಂತಿಯಿಗಾಗಿ ಸಂತ ಎಜಿದಿಯೋ ಸಭೆ ಆಯೋಜಿಸಿದ್ದ ಪ್ರಾರ್ಥನಾ ಜಾಗರಣೆಯಲ್ಲಿ ಪ್ರಧಾನ ಗುರು ಮತ್ತಿಯೋ ಮಾರಿಯಾ ಜುಪ್ಪಿ ಈ ಪ್ರಶ್ನೆಯನ್ನು ಹಂಚಿಕೊಂಡರು. 2026ರ ಫೆಬ್ರವರಿ 24ರಂದು, ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ನಾಲ್ಕನೇ ದುಃಖಸ್ಮರಣೆಯ ಸಂದರ್ಭದಲ್ಲಿ, ರೋಮಿನ ಟ್ರಾಸ್ಟೆವೇರೆಯ ಸಂತ ಮರಿಯಾ ಪೇಪಾಲ್ ಬಸಿಲಿಕಾದಲ್ಲಿ ಈ ಪವಿತ್ರ ಪೂಜಾವಿಧಿ ನಡೆಯಿತು.

ಕಾಯುವುದಕ್ಕೆ ಅಭ್ಯಾಸವಿಲ್ಲದ ಇಂದಿನ ಯುಗದಲ್ಲಿ, ಪ್ರಾರ್ಥನೆ ಸಹನೆ ಮತ್ತು ಸ್ಥೈರ್ಯವನ್ನು ಬೇಡುತ್ತದೆ ಎಂದು ಇಟಾಲಿಯನ್ ಧರ್ಮಾಧ್ಯಕ್ಷರ ಸಭೆಯ ಅಧ್ಯಕ್ಷರಾದ ಅವರು ಗಮನಿಸಿದರು. ಪ್ರಾರ್ಥನೆ ಎಂದರೆ ಕೈಬಿಡದೇ ಇರುವುದು, ಅಭ್ಯಾಸದ ನಿರ್ಲಕ್ಷ್ಯ ಮತ್ತು ನಿರಾಶೆಗೆ ಒಳಗಾಗದಿರುವುದು ಎಂದು ಅವರು ವಿವರಿಸಿದರು. ಅಂತಿಮವಾಗಿ, ಪ್ರಾರ್ಥನೆ ದುಷ್ಟತನದ ವಿರುದ್ಧ, ಯುದ್ಧದ ವಿರುದ್ಧ ಹಾಗೂ “ನಿರ್ಲಕ್ಷ್ಯದ ಜಾಗತೀಕರಣ” ಎಂಬ ಮಾನವೀಯತೆಯನ್ನು ಕುಗ್ಗಿಸುವ ಮನೋಭಾವದ ವಿರುದ್ಧ ನಡೆಯುವ ಮೌನವಾದ ಪ್ರತಿರೋಧವೇ ಆಗಿದೆ ಎಂದು ಅವರು ಹೇಳಿದರು.

“ಧರ್ಮಸಭೆ ಕೇಳುವುದು ಒಂದೇ — ಆಯುಧಗಳು ಮೌನವಾಗಲಿ”

“ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ  ಹೇಳಿದಂತೆ, ಧರ್ಮಸಭೆಯ ಬೇಡಿಕೆ ಬಹಳ ಸರಳ: ಗನ್‌ಗಳು ಮೌನವಾಗಲಿ, ಯುದ್ಧ ವಿರಾಮ ಜಾರಿಯಾಗಲಿ, ಶಾಂತಿಯತ್ತ ಒಂದು ನಿಜವಾದ ದಾರಿ ತೆರೆಯಲಿ,” ಎಂದು ಪ್ರಧಾನ ಗುರು ಮತ್ತಿಯೋ ಮರಿಯಾ ಜುಪ್ಪಿ ಹೇಳಿದರು.

ಮೂರನೇ ವರ್ಷದ ಸ್ಮರಣೆಯನ್ನು ಉಲ್ಲೇಖಿಸಿ ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಹೇಳಿದ್ದಂತೆ, ಈ ನಾಲ್ಕು ವರ್ಷಗಳು ಮಾನವಕುಲಕ್ಕೆ ನೋವು ಮತ್ತು ಲಜ್ಜೆಯ ನೆನಪಾಗಿವೆ, “ಇಂದು ಆ ಲಜ್ಜೆ ಇನ್ನಷ್ಟು ಭಾರವಾಗಿಯೇ ಅನುಭವವಾಗುತ್ತಿದೆ” ಎಂದರು.

ಯುದ್ಧಗಳಿಗೆ ಅಂತ್ಯ ಆಯುಧಗಳಿಂದ ಬರುವುದಿಲ್ಲ, ಅದು ಸಂವಾದದಿಂದ ಮಾತ್ರ ಸಾಧ್ಯ ಎಂದು ಅವರು ಪುನರುಚ್ಚರಿಸಿದರು. ಈ ನಂಬಿಕೆಯನ್ನು ವಾಸ್ತವವಾಗಿಸಲು ಎಲ್ಲರ ಸಹಕಾರ ಅಗತ್ಯವಿದ್ದು, ವಿಶೇಷವಾಗಿ ಯುರೋಪ್ ತನ್ನ ಹೊಣೆಗಾರಿಕೆಯನ್ನು ಅರಿಯಬೇಕು.

ಒಟ್ಟಾಗಿ ನಡೆದು ಸಾಮೂಹಿಕ ಗುರಿಗಾಗಿ ಕಾರ್ಯನಿರ್ವಹಿಸುವ ಮನೋಭಾವವನ್ನು ಮರುಜೀವಂತಗೊಳಿಸುವುದು ಅಗತ್ಯ ಎಂದು ಅವರು ಒತ್ತಿಹೇಳಿದರು. “ನಾವು ಸಾಧಿಸಬೇಕಾದ ಏಕೈಕ ಜಯ — ಶಾಂತಿಯ ಪಾಸ್ಕ,” ಎಂದು ಪ್ರಧಾನ ಗುರು ಜುಪ್ಪಿ ಹೇಳಿದರು. ಈ ಜಯ ನಿರಂತರ ಪ್ರಾರ್ಥನೆಯಲ್ಲಿನ ಧೈರ್ಯದಿಂದ ಬರುತ್ತದೆ; ಅದು ನಮ್ಮನ್ನು ನಿರಾಸೆಯಿಂದ ಹೊರತಂದು, ನೋವಿನ ಕೂಗನ್ನು ಕೇಳುವ ಹೃದಯವನ್ನು ನೀಡುತ್ತದೆ ಎಂದು ಅವರು ವಿವರಿಸಿದರು.

ಸಂತ ಎಜಿದಿಯೋ ಸಭೆಯ ನಿರಂತರ ಸೇವೆ

ಈ ಹಿನ್ನೆಲೆಯಲ್ಲೇ ಉಕ್ರೇನ್‌ಗೆ ಸಂತ ಎಜಿದಿಯೋ ಸಭೆಯು ನೀಡುತ್ತಿರುವ ಐಕ್ಯತೆ ಮತ್ತು ಮಾನವೀಯ ಸೇವೆ ವಿಶೇಷ ಮಹತ್ವ ಪಡೆದುಕೊಂಡಿದೆ. 1991ರಿಂದಲೇ ಈ ಸಮುದಾಯ ಉಕ್ರೇನ್‌ನಲ್ಲಿ ಸಕ್ರಿಯವಾಗಿರುವುದರಿಂದ, ರಷ್ಯಾ ಆಕ್ರಮಣ ಆರಂಭವಾದ ಕ್ಷಣದಿಂದಲೇ ವಿಶಾಲ ಮಾನವೀಯ ನೆರವು ಜಾಲವನ್ನು ತ್ವರಿತವಾಗಿ ಸ್ಥಾಪಿಸಲು ಸಾಧ್ಯವಾಯಿತು.

ಇಂದು ಸಂತ ಎಜಿದಿಯೋ ಸಭೆಯು ಆಂತರಿಕವಾಗಿ ಸ್ಥಳಾಂತರಗೊಂಡವರಿಗಾಗಿ ಐದು ಕೇಂದ್ರಗಳನ್ನು ನಡೆಸುತ್ತಿದೆ — ಕೀವ್‌ನಲ್ಲಿ ಮೂರು, ಲ್ವಿವ್‌ನಲ್ಲಿ ಒಂದು, ಮತ್ತು ಇವಾನೋ-ಫ್ರಾಂಕಿವ್ಸ್ಕ್‌ನಲ್ಲಿ ಒಂದು. ಜೊತೆಗೆ ಮುಂಚೂಣಿ ಪ್ರದೇಶಗಳ ಸಮೀಪದಲ್ಲಿರುವ ಕ್ರಾಮಟೋರ್ಸ್ಕ್, ನಿಕೊಪೋಲ್, ಖಾರ್ಕಿವ್ ಹಾಗೂ ಸುಮಿ ಪ್ರದೇಶಗಳಲ್ಲಿ ಸಹ ನೆರವು ವಿತರಣೆ ಮುಂದುವರಿದಿದೆ.

ಯುದ್ಧ ಆರಂಭದಿಂದ ಇಂದಿನವರೆಗೆ 213 ನೆರವು ಸಾಗಣೆಗಳು ಕಳುಹಿಸಲ್ಪಟ್ಟಿದ್ದು, ಒಟ್ಟು ಸುಮಾರು 4,450 ಟನ್ ಮಾನವೀಯ ನೆರವು ಒದಗಿಸಲಾಗಿದೆ. ಸುಮಾರು 7,50,000 ಜನರು ಆಹಾರ, ಬಟ್ಟೆ ಮತ್ತು ಸ್ವಚ್ಛತಾ ಸಾಮಗ್ರಿಗಳ ನೆರವು ಪಡೆದಿದ್ದರೆ, 20 ಲಕ್ಷಕ್ಕೂ ಹೆಚ್ಚು ಜನರು ವೈದ್ಯಕೀಯ ಸಹಾಯದಿಂದ ಲಾಭ ಹೊಂದಿದ್ದಾರೆ.

ಈ ಅಂಕಿಅಂಶಗಳು ಯುದ್ಧ ದೀರ್ಘವಾಗುತ್ತಾ ಹೋಗುತ್ತಿದ್ದಂತೆ, ನೋವಿನ ಮಧ್ಯೆಯೂ ಕಡಿಮೆಯಾಗದ ಮಾನವೀಯ ಬದ್ಧತೆಯ ಜೀವಂತ ಸಾಕ್ಷಿಯಾಗಿವೆ.

ಯುದ್ಧದ ಗಾಯಗಳಿಂದ ರಕ್ತಸ್ರಾವವಾಗುತ್ತಿರುವ ಉಕ್ರೇನ್

ಉಕ್ರೇನ್‌ನಲ್ಲಿ ಸಂತ ಎಜಿದಿಯೋ ಸಭೆಯ ಸೇವೆಯನ್ನು ಸ್ಮರಿಸುತ್ತಾ, ಪ್ರಧಾನ ಗುರು ಜುಪ್ಪಿ “ಭದ್ರತೆ, ನಿರಾಶೆಯ ಮಧ್ಯೆ ಆಶೆಯ ಬೆಳಕು, ಹಾಗೂ ಶೀತದ ನಡುವೆ ಉಷ್ಣತೆ” ಎಂಬ ಮೂರು ಅನುಭವಗಳನ್ನು ವಿಶೇಷವಾಗಿ ಉಲ್ಲೇಖಿಸಿದರು. ಡೋನ್‌ಬಾಸ್‌ನಿಂದ ಸ್ಥಳಾಂತರಗೊಂಡು ಈಗ ಕೀವ್‌ನಲ್ಲಿ ಆಶ್ರಯ ಪಡೆದಿರುವ ನಾದಿಯಾ ಎಂಬ ಮಹಿಳೆಯ ಕಥೆಯನ್ನು ಅವರು ಹಂಚಿಕೊಂಡರು. ಸಂತ ಎಜಿದಿಯೋ ಸಭೆಯ ಸಹಕಾರದ ಮೂಲಕ, “ನಮ್ಮ ಪ್ರತಿಯೊಬ್ಬರ ಜೀವನದಲ್ಲಿಯೂ ಮೊದಲ ಆದ್ಯತೆ ಇತರರ ಜೀವವೇ ಆಗಿದೆ” ಎಂಬ ಸತ್ಯವನ್ನು ಅವಳು ಅರಿತುಕೊಂಡಿದ್ದಾಳೆ ಎಂದು ಹೇಳಿದರು.

ಪ್ರಧಾನ ಗುರು ಜುಪ್ಪಿ ತಮ್ಮ ಸಂದೇಶವನ್ನು ಗಾಢವಾದ ಆತ್ಮೀಯ ಮನವಿಯೊಂದಿಗೆ ಮುಕ್ತಾಯಗೊಳಿಸಿದರು:

“ಪ್ರಪಂಚವು ಪ್ರೀತಿಯ ಕೊರತೆಯಿಂದ ನಿಧಾನವಾಗಿ ಕ್ಷೀಣಿಸುತ್ತಿದೆ. ಮಾನವೀಯ ದ್ವೇಷವೇ ಅದನ್ನು ನಾಶಮಾಡುತ್ತಿದೆ. ಆದ್ದರಿಂದ ಪರಮೇಶ್ವರನು ತನ್ನ ಪವಿತ್ರ ಕೃಪೆಯ ಉಷ್ಣ ಮಳೆಯನ್ನ ಆಕಾಶದಿಂದ ಸುರಿಸಲಿ ಎಂದು ನಾವು ನಿರಂತರ ಪ್ರಾರ್ಥಿಸೋಣ. ಆ ಕೃಪೆಯ ಉಷ್ಣ ಮಳೆಯ ಪ್ರತಿಯೊಂದು ಹನಿಯಾಗಲು ನಾವು ಪ್ರತಿಯೊಬ್ಬರೂ ಸಾಧ್ಯವಿದೆ. ನಮ್ಮ ಪ್ರೀತಿಯ ಮೂಲಕ ಪ್ರೀತಿಯ ಕೊರತೆಯನ್ನು ಎದುರಿಸುವುದು ನಮ್ಮ ಕೈಯಲ್ಲಿದೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

25 ಫೆಬ್ರವರಿ 2026, 11:35