2025.04.15 Caritas Internationalis Two Year Anniversary of Conflict in Sudan 2025.04.15 Caritas Internationalis Two Year Anniversary of Conflict in Sudan  (CAFOD)

ಒಂದು ವರ್ಷದ ನಂತರ ಬ್ರಿಟನ್ ನೆರವು ಕಡಿತ: ನೆರವಿನ ಹೂಡಿಕೆ ಶಾಂತಿಗೆ ದಾರಿ

ಕಥೋಲಿಕ ವಿದೇಶಿ ಅಭಿವೃದ್ಧಿ ಸಹಾಯ ಸಂಸ್ಥೆಯ ( Catholic Agency for Overseas Development, CAFOD) ಅಭಿಯಾನ ಹಾಗೂ ಸಂವಹನ ನಿರ್ದೇಶಕರು, ಜಾಗತಿಕ ಮಟ್ಟದಲ್ಲಿ ನೆರವು ಕಡಿತಗಳಿಂದ ಸಮುದಾಯಗಳ ಮೇಲೆ ಉಂಟಾಗಿರುವ ನಕಾರಾತ್ಮಕ ಪರಿಣಾಮಗಳನ್ನು ಗಮನಕ್ಕೆ ತಂದಿದ್ದಾರೆ.

ಲೇಖಕರು: ಕೀಲ್ ಗಸ್ಸಿ

2025 ಫೆಬ್ರವರಿ 25ರಂದು ಯುಕೆಯ ಪ್ರಧಾನಮಂತ್ರಿ ಕಿಯರ್ ಸ್ಟಾರ್ಮರ್ ರಕ್ಷಣಾ ವೆಚ್ಚವನ್ನು ಹೆಚ್ಚಿಸಿ ಅಭಿವೃದ್ಧಿ ನೆರವನ್ನು ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಇಂಗ್ಲೆಂಡ್ ಮತ್ತು ವೇಲ್ಸ್‌ನ ಕಥೋಲಿಕ ಧರ್ಮಸಭೆಯ ಅಧಿಕೃತ ನೆರವು ಸಂಸ್ಥೆಯಾದ CAFOD ತೀವ್ರ ವಿಷಾದ ವ್ಯಕ್ತಪಡಿಸಿತು. ಸಂಸ್ಥೆಯ ಮುಖ್ಯಸ್ಥ ಕ್ರಿಸ್ಟಿನ್ ಅಲೆನ್ ಆ ವೇಳೆ ಈ ನಿರ್ಧಾರದಿಂದ ಅತೀ ದುರ್ಬಲ ಪ್ರದೇಶಗಳಲ್ಲಿ ಇನ್ನಷ್ಟು ಜನರು ಪ್ರಾಣ ಕಳೆದುಕೊಳ್ಳುವ ಹಾಗೂ ಹಲವರ ಜೀವನೋಪಾಯ ಹಾನಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು.

ಒಂದು ವರ್ಷದ ಬಳಿಕ CAFOD ನ ಪ್ರಚಾರ ಮತ್ತು ಸಂವಹನ ನಿರ್ದೇಶಕರಾದ ನೀಲ್ ಥೋರ್ನ್ಸ್, ನೆರವು ಕಡಿತದ ಪರಿಣಾಮ ಜಾಗತಿಕ ಮಟ್ಟದಲ್ಲಿ ಗಂಭೀರ ಮತ್ತು ದೀರ್ಘಕಾಲಿಕ ಪರಿಣಾಮ ಉಂಟಾಗಿದೆ ಎಂದು ವಾಟಿಕನ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನ್ಯಾಯವೇ ಶಾಂತಿಯ ಮಾರ್ಗ

ಥೋರ್ನ್ಸ್ ಅಭಿಪ್ರಾಯದಲ್ಲಿ, ಅಸ್ಥಿರ ಜಗತ್ತಿನಲ್ಲಿ ರಕ್ಷಣೆಗೆ ಹೆಚ್ಚಿನ ಹಣ ಬೇಕೆಂಬ ಕಾರಣದಿಂದ ನೆರವು ಕಡಿತ ಮಾಡಲಾಯಿತು. ಆದರೆ ಪೂಜ್ಯ ಜಗದ್ಗುರುಗಳಾದ 4ನೆ ಪಾಲ್  ಹೇಳಿದಂತೆ ಶಾಂತಿಯ ಮಾರ್ಗ ನ್ಯಾಯದ ಮೂಲಕವೇ ಸಾಧ್ಯ. ಸಮಾಜದಲ್ಲಿ ಸ್ಥಿರತೆ, ಸಮಾನತೆ ಮತ್ತು ಮೂಲಭೂತ ಅಗತ್ಯಗಳ ಲಭ್ಯತೆ ಹೆಚ್ಚಿದಾಗ ಮಾತ್ರ ಶಾಂತಿ ಬಲವಾಗುತ್ತದೆ.

ಅದರ ಅರ್ಥ, ಯಾವ ದೇಶದಲ್ಲಿದ್ದರೂ ಪ್ರತಿಯೊಬ್ಬರಿಗೂ ಸ್ಥಿರ ಹಾಗೂ ವಿಶ್ವಾಸಾರ್ಹ ಜೀವನ ವಾತಾವರಣವನ್ನು ನಿರ್ಮಿಸುವುದು. ಹೆಚ್ಚುವರಿ ರಕ್ಷಣಾ ವೆಚ್ಚದಿಂದ ಅದು ಸಾಧ್ಯವಲ್ಲ; ಬದಲಾಗಿ ನೆರವಿನ ಹೂಡಿಕೆಯಿಂದಲೇ ಶಾಂತಿ ನಿರ್ಮಾಣವಾಗುತ್ತದೆ ಎಂದು ಥೋರ್ನ್ಸ್ ವಿವರಿಸಿದರು.

ಸಮಾಜದಲ್ಲಿ ಸ್ಥಿರತೆ, ಸೌಹಾರ್ದತೆ ಹಾಗೂ ಶಾಂತಿಯನ್ನು ನಿರ್ಮಿಸುವುದೇ ನೆರವಿನ ಉದ್ದೇಶ. ಆದರೆ ನೆರವು ಕಡಿತವು ಜಾಗತಿಕ ಶಾಂತಿಗೆ ಹೇಗೆ ಸಂಬಂಧಿಸಿದೆ ಎಂಬ ಪ್ರಶ್ನೆಗೆ ಅವರು ಗಂಭೀರ ಉದಾಹರಣೆಗಳನ್ನು ನೀಡಿದರು. UKಯ ನೆರವು ಕಡಿತದ ಪರಿಣಾಮವಾಗಿ ಬಡ ಪ್ರದೇಶಗಳಲ್ಲಿ ಸುಮಾರು 29 ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ಉಂಟಾಗಿದೆ. ಜೊತೆಗೆ 1.2 ಕೋಟಿ ಜನರು ಸ್ವಚ್ಛ ನೀರು ಮತ್ತು ಸ್ವಚ್ಛತಾ ಸೌಲಭ್ಯಗಳಿಂದ ದೂರವಾಗುವ ಸಾಧ್ಯತೆ ಇದೆ.

ಮೂಲಭೂತ ಅಗತ್ಯಗಳು ಮತ್ತು ನೆರವು ಲಭ್ಯವಿಲ್ಲದಾಗ ಹಿಂಸೆ ಮತ್ತು ಅಸ್ಥಿರತೆ ಹೆಚ್ಚುವ ಸಾಧ್ಯತೆ ಇದೆ. ಕೆಲವು ದೇಶಗಳಲ್ಲಿ ಜನರು ಬದುಕಿಗಾಗಿ ನೆರವಿನ ಮೇಲೆ ಅವಲಂಬಿತರಾಗಿದ್ದಾರೆ; ಅದು ನಿಂತರೆ ಸಂಘರ್ಷ, ಹವಾಮಾನ ಸಂಕಷ್ಟ ಅಥವಾ ಇತರೆ ಕಾರಣಗಳಿಂದ ಜೀವನೋಪಾಯಕ್ಕೆ ಪರ್ಯಾಯ ಮಾರ್ಗಗಳು ದೊರೆಯದ ಸ್ಥಿತಿ ಉಂಟಾಗಬಹುದು.

ಈ ಎಲ್ಲಾ ಅಂಶಗಳು ಅಸ್ಥಿರತೆಯನ್ನು ಹೆಚ್ಚಿಸುತ್ತವೆ. ಒಂದು ದೇಶದಲ್ಲಿ ಅಸ್ಥಿರತೆ ಹೆಚ್ಚಿದರೆ ಅದು ಹಿಂಸೆಗೆ ಕಾರಣವಾಗುತ್ತದೆ; ಆ ಹಿಂಸೆ ಜನರನ್ನು ವಲಸೆ ಹೋಗುವಂತೆ ಮಾಡುತ್ತದೆ, ಇದರಿಂದ ಮತ್ತಷ್ಟು ಅಸ್ಥಿರತೆ ಉಂಟಾಗುತ್ತದೆ ಎಂದು ಥೋರ್ನ್ಸ್ ವಿವರಿಸಿದರು.

ಅಂತಿಮವಾಗಿ ಜಗತ್ತಿನಲ್ಲಿ ಹೆಚ್ಚಿನ ನ್ಯಾಯ ಮತ್ತು ಕಡಿಮೆ ಅಸಮಾನತೆ ಇದ್ದರೆ, ದಾರಿದ್ರ್ಯದ ಮೂಲ ಕಾರಣಗಳನ್ನು ಎದುರಿಸಿದರೆ, ಸ್ಥಿರತೆ ಹಾಗೂ ಸೌಹಾರ್ದತೆಯ ಸಮಾಜಗಳು ರೂಪುಗೊಳ್ಳುತ್ತವೆ ಎಂದು CAFOD ಸಮರ್ಥನಾ ನಿರ್ದೇಶಕ ಒತ್ತಿ ಹೇಳಿದರು.

ನೆರವಿನ ಕಡಿತದಿಂದ ಲಿಂಗ ಅಸಮಾನತೆ ಹೆಚ್ಚಳ

ಕಳೆದ ಒಂದು ವರ್ಷದ ನೆರವು ಕಡಿತದ ಪರಿಣಾಮ ಮಹಿಳೆಯರು ಮತ್ತು ಬಾಲಕಿಯರು ಅತ್ಯಂತ ಹೆಚ್ಚು ಹೊಡೆತ ಅನುಭವಿಸಿದ್ದಾರೆ. Equal Measures 2030 ವರದಿ ಪ್ರಕಾರ, 2019ರಿಂದ 2022ರ ಅವಧಿಯಲ್ಲಿ ಸುಮಾರು 40% ದೇಶಗಳು ಲಿಂಗ ಸಮಾನತೆಯಲ್ಲಿ ಯಾವುದೇ ಪ್ರಗತಿ ಸಾಧಿಸದೇ, ಕೆಲವೆಡೆ ಹಿನ್ನಡೆಯನ್ನೂ ಕಂಡಿವೆ, ಇದರಿಂದ ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ಮಹಿಳೆಯರು ಪ್ರಭಾವಿತರಾಗಿದ್ದಾರೆ.

ಹಿಂದಿನ ನೆರವು ಕಡಿತಗಳ ಅನುಭವವನ್ನು ಉಲ್ಲೇಖಿಸಿದ ಥೋರ್ನ್ಸ್, ನೆರವು ಕಡಿತವಾದಾಗ ಮೊದಲಿಗೆ ಶಿಕ್ಷಣ ಕ್ಷೇತ್ರವೇ ಹೊಡೆತ ಅನುಭವಿಸುತ್ತದೆ ಎಂದು ಹೇಳಿದರು. ಶಿಕ್ಷಣ ಬಜೆಟ್ ಕಡಿಮೆಯಾದಾಗ ಅದರ ಪರಿಣಾಮ ನೇರವಾಗಿ ಮಹಿಳೆಯರು ಮತ್ತು ಬಾಲಕಿಯರ ಮೇಲೆ ಬೀಳುತ್ತದೆ ಎಂಬುದು ಸ್ಪಷ್ಟವಾಗಿದೆ.

ಭವಿಷ್ಯದತ್ತ ದೃಷ್ಟಿ

ಒಂದು ವರ್ಷದ ಆತ್ಮಪರಿಶೀಲನೆಯ ನಂತರವೂ CAFOD ನ ನಿಲುವು ಬದಲಾಗಿಲ್ಲ ಎಂದು ಥೋರ್ಸ್ ತಿಳಿಸಿದ್ದಾರೆ. ನೆರವು ನಿಧಿಗಳ ಕಡಿತವು ಯುನೈಟೆಡ್ ಕಿಂಗ್‌ಡಮ್‌ನ ಪ್ರತಿಷ್ಠೆಗೆ ಹಾನಿ ಉಂಟುಮಾಡಿದಷ್ಟೇ ಅಲ್ಲ, ಅದು ಸಾಧಿಸಲು ಉದ್ದೇಶಿಸಿದ್ದ ಫಲಿತಾಂಶವನ್ನೂ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ.

ಆದರೆ 2026  ಯುನೈಟೆಡ್ ಕಿಂಗ್‌ಡಮ್‌ಗೆ ಮಹತ್ವದ ತಿರುವಾಗಬಹುದು. ಈ ವರ್ಷ ನವೆಂಬರ್‌ನಲ್ಲಿ G20 ನೇತೃತ್ವವನ್ನು UK ವಹಿಸಿಕೊಳ್ಳಲಿದೆ ಮತ್ತು ಮೇ ತಿಂಗಳಲ್ಲಿ ಜಾಗತಿಕ ಪಾಲುದಾರಿಕೆ ಸಮ್ಮೇಳನವನ್ನು ಆತಿಥ್ಯ ವಹಿಸಲಿದೆ.

ಜಾಗತಿಕ ಸಾಲ ಸಂಕಷ್ಟದ ವಿಚಾರದಲ್ಲಿ ULಯು ಪ್ರಮುಖ ಹೆಜ್ಜೆ ಇಡಬಹುದು ಎಂದು CAFOD ಪರ ಹೋರಾಟ ವಿಭಾಗದ ನಿರ್ದೇಶಕರು ಅಭಿಪ್ರಾಯಪಟ್ಟರು. ಕೆಲವು ರಾಷ್ಟ್ರಗಳು ಸಾಲ ತೀರಿಸುವ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, UKಯ ಕಾನೂನಿನಡಿ ಇರುವ ಖಾಸಗಿ ಸಾಲದಾತರ 90% ಸಾಲದ ವಿಷಯದಲ್ಲಿ ಕ್ರಮ ಕೈಗೊಂಡರೆ ದೊಡ್ಡ ಮೊತ್ತದ ಹಣ ಬಿಡುಗಡೆ ಆಗಿ, ಮಕ್ಕಳಿಗೆ ಮರುಶಿಕ್ಷಣದ ಅವಕಾಶ ದೊರೆಯಬಹುದು ಎಂದು ಅವರು ಸೂಚಿಸಿದರು.

ಇದರಿಂದ ಆರೋಗ್ಯ, ಸ್ವಚ್ಛತೆ ಮತ್ತು ಕುಡಿಯುವ ನೀರಿಗೆ ಉತ್ತಮ ಪ್ರವೇಶವೂ ಸಾಧ್ಯವಾಗುತ್ತದೆ. ನೆರವು ಕಡಿತದಿಂದ ಹಾನಿಗೊಳಗಾದ ವಿಶ್ವಾಸವನ್ನು ಪುನಃ ಸ್ಥಾಪಿಸಲು ಈ ಕ್ರಮ ನೆರವಾಗಬಹುದು ಎಂದು ಥೋರ್ಸ್ ಹೇಳಿದ್ದಾರೆ.

G20 ನೇತೃತ್ವದಲ್ಲಿಯೂ ಹಾಗೂ ಜಾಗತಿಕ ಪಾಲುದಾರಿಕೆ ಸಮ್ಮೇಳನದಲ್ಲಿಯೂ, ಅತ್ಯಂತ ಪರಿಣಾಮಕ್ಕೊಳಗಾದ ಜನರ ಧ್ವನಿಯನ್ನು UKಯು ಆಲಿಸಬೇಕು ಎಂದು ಅವರು ಒತ್ತಿಹೇಳಿದರು. ಅವರಿಗೆ ತಮ್ಮ ಅಗತ್ಯಗಳು ಸ್ಪಷ್ಟವಾಗಿದ್ದು, ತಮ್ಮ ಭವಿಷ್ಯದ ಶಿಲ್ಪಿಗಳಾಗುವ ಸಾಮರ್ಥ್ಯ ಅವರಿಗೇ ಇದೆ ಎಂದು ಅವರು ಹೇಳಿದರು.

ಕಳೆದ ಒಂದು ವರ್ಷದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ ಕಥೋಲಿಕ ಧರ್ಮಸಭೆಯ ಪ್ರತಿಕ್ರಿಯೆ ಮಹತ್ವದ್ದಾಗಿದೆ. 500 ಕ್ಕೂ ಹೆಚ್ಚು ಧರ್ಮಕೇಂದ್ರಗಳು ಸಮುದಾಯ ಚಟುವಟಿಕೆಗಳ ಮೂಲಕ ಸಾಲ ಸಮಸ್ಯೆ ಕುರಿತು ಕ್ರಮ ಕೈಗೊಳ್ಳುವಂತೆ UKಯನ್ನು ಮನವಿ ಮಾಡಿವೆ. ಅಷ್ಟೇ ಸಂಖ್ಯೆಯ ಧರ್ಮಕೇಂದ್ರಗಳು ತಮ್ಮ ಸ್ಥಳೀಯ ಸಂಸತ್ ಸದಸ್ಯರನ್ನು ಸಂಪರ್ಕಿಸಿ ನೆರವು ಕಡಿತ ಹಿಂಪಡೆಯಲು ಒತ್ತಾಯಿಸಿವೆ.

ಸಾಕಷ್ಟು ಧ್ವನಿಗಳು ಎದ್ದರೆ ಈ ನಿರ್ಧಾರ ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಥೋರ್ಸ್ ಹೇಳಿದರು. ದೀರ್ಘಾವಧಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರಬಲ್ಲ ನೆರವಿನ ಹೂಡಿಕೆಗೆ ಮತ್ತೆ ಒತ್ತು ನೀಡುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

25 ಫೆಬ್ರವರಿ 2026, 11:22