ಹುಡುಕಿ

At least one killed after overnight Russian strikes on Kyiv and surrounding districts At least one killed after overnight Russian strikes on Kyiv and surrounding districts  (ANSA)

‘ಮಾನವಕುಲಕ್ಕೆ ಅಪಮಾನ’: ಉಕ್ರೇನ್ ಯುದ್ಧದ ನಾಲ್ಕನೇ ಸ್ಮರಣೆ ಕುರಿತು ಯುಜಿಸಿಸಿ ಮುಖ್ಯಸ್ಥರ ಪ್ರತಿಕ್ರಿಯೆ

ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮಸಭೆಯ(UGCC) ಮುಖ್ಯಸ್ಥ ಹಾಗೂ ಗುರುಗಳಾದ ಮಹಾ ಧರ್ಮಾಧ್ಯಕ್ಷರಾದ ಪೂಜ್ಯ ಸ್ವಿಯಾತೋಸ್ಲಾವ್ ಶೆವ್ಚುಕ್, 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ನಡೆಸಿದ ಪೂರ್ಣ ಪ್ರಮಾಣದ ಆಕ್ರಮಣದ ಬಳಿಕ ಕಳೆದ ವರ್ಷಗಳನ್ನು ಸ್ಮರಿಸಿ ಮಾತನಾಡಿದ್ದಾರೆ. ದುರ್ಘಟನೆಗಳು ಮತ್ತಷ್ಟು ಗಂಭೀರವಾಗುತ್ತಿದ್ದರೂ, ಉಕ್ರೇನ್ ಜನರು ಪ್ರತಿರೋಧವನ್ನು ಮುಂದುವರಿಸುತ್ತಿದ್ದು, ಅಂತರರಾಷ್ಟ್ರೀಯ ಐಕ್ಯತೆಯ ಬೆಂಬಲಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಲೇಖಕರು: ಸ್ವೀತ್ಲಾನಾ ದುಖೋವಿಚ್

ರಷ್ಯಾ ಉಕ್ರೇನ್ ಮೇಲೆ ನಡೆಸಿದ ಪೂರ್ಣ ಪ್ರಮಾಣದ ಸೈನಿಕ ಆಕ್ರಮಣದ ನಾಲ್ಕನೇ ಸ್ಮರಣೆ “ದುಃಖಕರ” ಮತ್ತು “ಮಾನವಕುಲಕ್ಕೆ ಲಜ್ಜಾಸ್ಪದ” ಘಟನೆ ಎಂದು ಕೀವ್–ಹಾಲಿಚ್‌ನ ಮಹಾ ಧರ್ಮಾಧ್ಯಕ್ಷರಾದ ಪೂಜ್ಯ ಸ್ವಿಯಾತೋಸ್ಲಾವ್ ಶೆವ್ಚುಕ್ ತಿಳಿಸಿದ್ದಾರೆ. ಈ ಸಂದರ್ಶನದಲ್ಲಿ ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮಸಭೆಯ ಮುಖ್ಯಸ್ಥ   ಗುರುಗಳಾದ ಅವರು, “ಆರಂಭವಾಗಲೇ ಬಾರದಿದ್ದ” ಈ ಯುದ್ಧದ ನಾಲ್ಕು ವರ್ಷದ ವಾಸ್ತವಿಕತೆ ಮತ್ತು ಪರಿಣಾಮಗಳನ್ನು ಅವಲೋಕಿಸಿದ್ದಾರೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: ಪೂಜ್ಯರೇ, ಉಕ್ರೇನ್‌ನಲ್ಲಿ ಆರಂಭವಾದ ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಲ್ಕು ವರ್ಷಗಳು ಕಳೆದಿವೆ. ಈ ಸಂದರ್ಭ ನೀವು ಏನು ಹೇಳಲು ಬಯಸುತ್ತೀರಿ?

ಮಹಾ ಧರ್ಮಾಧ್ಯಕ್ಷ ಸ್ವಿಯಾತೋಸ್ಲಾವ್ ಶೆವ್ಚುಕ್: ಇದು ನಿಜಕ್ಕೂ ದುಃಖಭರಿತ ಸ್ಮರಣೆ ಎಂದು ನಾನು ಹೇಳುತ್ತೇನೆ. ಯುರೋಪಿನಲ್ಲಿ ನಾಲ್ಕು ವರ್ಷಗಳ ಕಾಲ ಯುದ್ಧ ಮುಂದುವರಿಯುತ್ತದೆ ಎಂದು ಯಾರೂ ಕಲ್ಪಿಸಿರಲಿಲ್ಲ. ನಾವು ನಾಲ್ಕು ವರ್ಷಗಳ ಬಗ್ಗೆ ಮಾತನಾಡುವಾಗ, ಅದು ಕೇವಲ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣವನ್ನು ಸೂಚಿಸುತ್ತದೆ. ವಾಸ್ತವದಲ್ಲಿ, ಈ ಯುದ್ಧವು 2014ರಲ್ಲಿ ಕ್ರಿಮಿಯಾ ಮತ್ತು ಪೂರ್ವ ಡೋನ್ಬಾಸ್‌ನ ಭಾಗಗಳ ಆಕ್ರಮಣದಿಂದಲೇ ಆರಂಭವಾಯಿತು.

ಇಂದು ನಾವು ನಿಜವಾದ ದುರ್ಘಟನೆಯನ್ನು ಎದುರಿಸುತ್ತಿದ್ದೇವೆ, ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ನಾಗರಿಕರ ಸಾವು-ಗಾಯಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. 2022ರಲ್ಲಿ ಆಕ್ರಮಣ ಆರಂಭವಾದ ಸಮಯದಲ್ಲೂ ಪರಿಸ್ಥಿತಿ ಇಷ್ಟು ಭೀಕರವಾಗಿರಲಿಲ್ಲವೆಂದು ನಾನು ಹೇಳಬಹುದು. ವಿಶೇಷವಾಗಿ ಈ ಚಳಿಗಾಲದಲ್ಲಿ, ಉಕ್ರೇನ್ ರಾಜಧಾನಿಯಲ್ಲಿ ಪರಿಸ್ಥಿತಿ ಹೆಚ್ಚು ಕಷ್ಟಕರವಾಗಿದೆ.

ಪ್ರಶ್ನೆ: ಉದಾಹರಣೆಗೆ, ಕೀವ್‌ನಲ್ಲಿರುವ ನಿಮ್ಮ ಪ್ರಧಾನ ದೇವಾಲಯದ ಸುತ್ತಮುತ್ತ ವಾಸಿಸುವ ಜನರು ಈ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಿದ್ದಾರೆ? ಈ ಸವಾಲುಗಳನ್ನು ಎದುರಿಸಲು ಧರ್ಮಸಭೆ ಹೇಗೆ ಸಹಾಯ ಮಾಡುತ್ತಿದೆ?

ಮಹಾ ಧರ್ಮಾಧ್ಯಕ್ಷ ಸ್ವಿಯಾತೋಸ್ಲಾವ್ ಶೆವ್ಚುಕ್: ಕೀವ್ ನಿಜವಾದ ದುರ್ಘಟನೆಯನ್ನು ಅನುಭವಿಸುತ್ತಿದೆ. ಕೆಲವರು ಈಗ ಇದನ್ನು “ಖೋಲೊಡೊಮೋರ್” ಎಂದು ಕರೆಯುತ್ತಿದ್ದಾರೆ — ಉಕ್ರೇನಿಯನ್ ಪದ ಖೋಲೋಡ್ ಅಂದರೆ “ಚಳಿ”. ನಾವು ಎಲ್ಲರೂ ಕೃತಕ ದುರ್ಭಿಕ್ಷದ ಮೂಲಕ ನಡೆದ ಜನಾಂಗಹತ್ಯೆಯನ್ನು ಸೂಚಿಸುವ “ಹೋಲೊಡೊಮೋರ್” ಎಂಬ ಪದವನ್ನು ತಿಳಿದಿದ್ದೇವೆ; ಆದರೆ ಈಗ ಚಳಿಗಾಲದ ಕಠಿಣತೆಯೊಂದಿಗೆ ಸಂಬಂಧಿಸಿದ ಮತ್ತೊಂದು ವಿಧದ ದುಃಖಕರ ಸ್ಥಿತಿಯನ್ನು ಎದುರಿಸುತ್ತಿದ್ದೇವೆ.

ಈ ಚಳಿಗಾಲ ಕಳೆದ ದಶಕದಲ್ಲೇ ಅತ್ಯಂತ ಕಠಿಣವಾಗಿದೆ: ಕೀವ್‌ನಲ್ಲಿ ತಾಪಮಾನ ಮೈನಸ್ ಇಪ್ಪತ್ತು ಡಿಗ್ರಿವರೆಗೆ ಕುಸಿದಿದೆ. ರಷ್ಯಾ ಸೇನೆ ಉಕ್ರೇನ್ ನಗರಗಳ ಪ್ರಮುಖ ಮೂಲಸೌಕರ್ಯಗಳನ್ನು, ವಿಶೇಷವಾಗಿ ರಾಜಧಾನಿಯನ್ನು, ಕ್ರಮಬದ್ಧವಾಗಿ ಧ್ವಂಸಗೊಳಿಸುತ್ತಿದೆ.

ಸುಮಾರು ನಾಲ್ಕು ಮಿಲಿಯನ್ ಜನಸಂಖ್ಯೆಯುಳ್ಳ ಕೀವ್ ಯುರೋಪಿನ ದೊಡ್ಡ ರಾಜಧಾನಿಗಳಲ್ಲಿ ಒಂದಾಗಿದೆ. ಇಲ್ಲಿ ಹೀಟಿಂಗ್ ಮತ್ತು ವಿದ್ಯುತ್ ವ್ಯವಸ್ಥೆಗಳು ಕೇಂದ್ರೀಕೃತವಾಗಿವೆ. ಪ್ರತಿ ಪ್ರದೇಶಕ್ಕೂ ತನ್ನದೇ ವಿದ್ಯುತ್ ಕೇಂದ್ರವಿದ್ದು, ಅದು ಕಟ್ಟಡಗಳಿಗೆ ವಿದ್ಯುತ್ ಮತ್ತು ಬಿಸಿ ನೀರನ್ನು ಪೂರೈಸುತ್ತದೆ. ನಮ್ಮ ಪ್ರದೇಶದಲ್ಲಿ ಅನಿಲವಿಲ್ಲ; ಅಡುಗೆಗೂ ಹಾಗೂ ಕುಡಿಯುವ ನೀರನ್ನು ಒಂಬತ್ತು ಅಥವಾ ಇಪ್ಪತ್ತು ಮಹಡಿ ಕಟ್ಟಡಗಳಿಗೆ ಎತ್ತಲು ವಿದ್ಯುತ್ ಅಗತ್ಯ. ಈ ಚಳಿಗಾಲದಲ್ಲಿ ಸೋವಿಯತ್ ಕಾಲದಲ್ಲಿ ನಿರ್ಮಿತವಾಗಿದ್ದ ಅನೇಕ ವಿದ್ಯುತ್ ಕೇಂದ್ರಗಳು ಧ್ವಂಸಗೊಂಡವು. ತಾಪಮಾನ ಮೈನಸ್ ಇಪ್ಪತ್ತು ಡಿಗ್ರಿಗೆ ಇಳಿದಾಗ ವಿದ್ಯುತ್ ಹಾಗೂ ಬಿಸಿ ನೀರನ್ನು ಪೂರೈಸುವುದು ಅಸಾಧ್ಯವಾಯಿತು; ಕೊಳವೆಗಳು ಹಿಮವಾಗಿಬಿದ್ದು ಸಿಡಿದವು ಮತ್ತು ಸ್ವಚ್ಛತಾ ವ್ಯವಸ್ಥೆಗಳಿಗೂ ಭಾರೀ ಹಾನಿಯಾಯಿತು. ಮೂರು ಸಾವಿರ ಜನರು ವಾಸಿಸುವ ಕಟ್ಟಡವನ್ನು ಕಲ್ಪಿಸಿ ನೋಡಿ: ಮನೆಗಳೊಳಗಿನ ಎಲ್ಲವೂ ಹಿಮವಾಗಿರುತ್ತದೆ, ಒಳಗಿನ ತಾಪಮಾನ ಹೊರಗಿನ ತಾಪಮಾನಕ್ಕಿಂತ ಕೆಲವೇ ಡಿಗ್ರಿ ಹೆಚ್ಚಿರುತ್ತದೆ, ಸ್ನಾನಗೃಹಗಳನ್ನು ಬಳಸಲು ಸಾಧ್ಯವಿಲ್ಲ. ಅನೇಕರು ತಮ್ಮ ಮನೆಗಳಲ್ಲೇ ಸಿಲುಕಿಕೊಂಡು ಎಲ್ಲಿ ಹೋಗಬೇಕು ಎಂದು ತಿಳಿಯದೆ ಉಳಿದಿದ್ದಾರೆ.

ಈ ಪರಿಸ್ಥಿತಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ದೊಡ್ಡ ಕಟ್ಟಡಗಳ ಮುಂದೆ ಜನರು ತಮ್ಮ ಸಾಧನಗಳನ್ನು ಚಾರ್ಜ್ ಮಾಡಿಕೊಳ್ಳಲು, ಬಿಸಿ ಚಹಾ ಕುಡಿಯಲು, ಒಟ್ಟಾಗಿ ಕುಳಿತು ತಾಪಮಾನ ಪಡೆಯಲು “ಪುನಶ್ಚೇತನ ಕೇಂದ್ರಗಳನ್ನು” ಸ್ಥಾಪಿಸಲಾಗಿದೆ. ಪುನಶ್ಚೇತನ ಕೇಂದ್ರಗಳೆಂದರೆ ಜನರೇಟರ್‌ಗಳಿಂದ ತಾಪಮಾನ ನೀಡಲಾಗಿರುವ ಗುಡಾರಗಳು. ಕೆಲವರು ಅಲ್ಲಿ ರಾತ್ರಿ ಕಳೆಯುತ್ತಾರೆ. ಶಾಲೆಗಳು ಮತ್ತು ಶಿಶುಮಂದಿರಗಳನ್ನೂ ಆಶ್ರಯ ನೀಡುವಂತೆ ರೂಪಾಂತರಿಸಲಾಗಿದೆ.

ನಮ್ಮ ಮಹಾ ದೇವಾಲಯದ ಅರ್ಧ ಭೂಗತ ಆಶ್ರಯದಲ್ಲಿಯೂ ನಾವು ಪುನಶ್ಚೇತನ ಕೇಂದ್ರವನ್ನು ಆರಂಭಿಸಿದ್ದೇವೆ. ನಗರ ಜಾಲದಿಂದ ನಮಗೆ ಕೇವಲ ಎರಡು ಅಥವಾ ಮೂರು ಗಂಟೆಗಳಷ್ಟೇ ವಿದ್ಯುತ್ ದೊರೆಯುವುದರಿಂದ, ನಮ್ಮ ಜನರೇಟರ್ ಸುಮಾರು ಇಪ್ಪತ್ತು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಅನೇಕರು ಅಲ್ಲಿ ಮಲಗಿ, ವಾಸಿಸುತ್ತಿದ್ದಾರೆ; ಅವರು ಮನೆಗಳಿಗೆ ಮರಳಲು ಸಾಧ್ಯವಾಗದ ಕಾರಣ ಎಲ್ಲ ಅಗತ್ಯಗಳನ್ನು ನಾವು ಒದಗಿಸಬೇಕಾಗಿದೆ.

ಕೀವ್ ಪುರಸಭಾಧ್ಯಕ್ಷರು ಸಾಧ್ಯವಾದವರು ತಾತ್ಕಾಲಿಕವಾಗಿ ನಗರ ತೊರೆಯುವಂತೆ ವಿನಂತಿಸಿದ್ದಾರೆ; ಅಂದಾಜು ಐದು ಲಕ್ಷ ಜನರು ಈಗಾಗಲೇ ಹೊರಟಿದ್ದಾರೆ. ಆದಾಗ್ಯೂ, ಉದ್ಯೋಗ ಅಥವಾ ಬೇರೆ ಆಯ್ಕೆಯಿಲ್ಲದ ಕಾರಣ ಹಲವರು ಉಳಿದಿದ್ದಾರೆ. ಶಾಲೆಗಳು, ವಿಶ್ವವಿದ್ಯಾಲಯಗಳು, ಸೂಪರ್‌ಮಾರ್ಕೆಟ್‌ಗಳು, ಆಸ್ಪತ್ರೆಗಳು ಮತ್ತು ಔಷಧಾಲಯಗಳು ತೆರೆಯಲ್ಪಟ್ಟಿದ್ದರೂ, ಮೂಲಸೌಕರ್ಯದ ಕಾರ್ಯಕ್ಷಮತೆಯೇ ದೊಡ್ಡ ಸಮಸ್ಯೆಯಾಗಿದೆ. ಈ ಕ್ರಮಬದ್ಧ ಧ್ವಂಸ ಮುಂದುವರಿಯುತ್ತಿದೆ: ಡ್ರೋನ್‌ಗಳು ನಗರ ಮೇಲ್ಭಾಗದಲ್ಲಿ ಹಾರಾಡಿ ಇನ್ನೂ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್ ಕೇಂದ್ರಗಳನ್ನು ಗುರುತಿಸಿ, ಕ್ಷಿಪಣಿ ಮತ್ತು ನಿಖರ ದಾಳಿಗಳ ಮೂಲಕ ಅವುಗಳನ್ನು ಹೊಡೆದುರುಳಿಸುತ್ತಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು ಅನುಭವಿಸುತ್ತಿರುವ ಸ್ಥಿತಿ ಸಂಕಷ್ಟಕರವಾಗಿದೆ.

ಪ್ರಶ್ನೆ: ಪೂರ್ಣ ಪ್ರಮಾಣದ ಯುದ್ಧ ಆರಂಭವಾದ ನಂತರ ಉಕ್ರೇನ್‌ನ ಧರ್ಮಸಭೆ ಸದಾ ಜನರ ಜೊತೆಯಲ್ಲಿಯೇ ನಿಂತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಬದ್ಧತೆಯ ಹಲವು ಹಂತಗಳನ್ನು ಕಾಣಬಹುದು. ಜನರಲ್ಲಿ ಕಾಣುತ್ತಿರುವ ದಣಿವು ಎಂಬ ಲಕ್ಷಣಗಳಿಂದ ಗುರುತಿಸಲ್ಪಡುವ ಪ್ರಸ್ತುತ ಹಂತವನ್ನು ನೀವು ಹೇಗೆ ವಿವರಿಸುತ್ತೀರಿ? ಇಂದಿಗೂ ಧರ್ಮಸಭೆ ಜನರಿಗೆ ಹೇಗೆ ಬೆಂಬಲ ನೀಡಿ ಜೊತೆಗಿರುತ್ತದೆ?

ಮಹಾ ಧರ್ಮಾಧ್ಯಕ್ಷ ಸ್ವಿಯಾತೋಸ್ಲಾವ್ ಶೆವ್ಚುಕ್: ನಾವೆಲ್ಲರೂ ಒಂದೇ ಜನರು; ನಾವು ಒಟ್ಟಿಗೆ ನೋವು ಅನುಭವಿಸುತ್ತಿದ್ದೇವೆ. ನಾನು ಕೀವ್‌ನ ನಾಗರಿಕನು; ಚಳಿ “ನೀವು ಗುರುವೇ ಅಥವಾ ಧರ್ಮಾಧ್ಯಕ್ಷರೇ?” ಅಥವಾ “ನೀವು ಯಾವ ಧರ್ಮಸಭೆಗೆ ಸೇರಿದ್ದೀರಿ?” ಎಂದು ಕೇಳುವುದಿಲ್ಲ. ಈ ದುರ್ಘಟನೆಯ ಮುಂದೆ ನಾವು ಎಲ್ಲರೂ ಸಮಾನರು. ಆದ್ದರಿಂದ ನಾವು ಏಕತೆಯಿಂದ ಉಳಿದು ಪರಸ್ಪರ ಸಹಾಯಮಾಡಲು ಮತ್ತು ಈ ಪರಿಸ್ಥಿತಿಯಲ್ಲಿ ಕ್ರೈಸ್ತರಾಗಿ ಹೇಗೆ ಬದುಕಬೇಕು ಎಂಬ ಅರ್ಥವನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ.

ಈ ಸಂದರ್ಭದಲ್ಲಿ ಕೆಲವು ವಿಶೇಷ ಅಂಶಗಳಿವೆ. ಸರ್ಕಾರ ಯುದ್ಧ ಪ್ರದೇಶಗಳಿಂದ ಬಲವಂತದ ಸ್ಥಳಾಂತರವನ್ನು ಆದೇಶಿಸಿದಾಗ ಜನರು ಖಾರ್ಕಿವ್, ಚೆರ್‌ನಿಹಿವ್ ಅಥವಾ ಸುಮಿ ಮೊದಲಾದ ಹತ್ತಿರದ ದೊಡ್ಡ ನಗರಗಳಿಗೆ ಸ್ಥಳಾಂತರಗೊಳ್ಳಲು ಇಷ್ಟಪಡುತ್ತಾರೆ. ಬಾಂಬ್ ದಾಳಿಗಳ ಉದ್ದೇಶ ಜನರನ್ನು ಮನೋಬಲ ಕಳೆದುಕೊಳ್ಳುವಂತೆ ಮಾಡಿ ತಮ್ಮ ಮನೆಗಳನ್ನು ತೊರೆಯುವಂತೆ ಮಾಡುವುದು ಎಂಬುದು ಸ್ಪಷ್ಟ. ಕೆಲ ವಿಶ್ಲೇಷಕರು ನಾಗರಿಕರಿಲ್ಲದ ಬಫರ್ ವಲಯವನ್ನು ನಿರ್ಮಿಸುವುದೇ ಇದರ ಗುರಿ ಎಂದು ಹೇಳುತ್ತಾರೆ. ಆದರೂ ಜನರು ಉಳಿದಿದ್ದಾರೆ; ಓಡಿಹೋಗುತ್ತಿಲ್ಲ. ಮಕ್ಕಳೂ ವೃದ್ಧರೂ ಇರುವ ಸ್ಥಳಗಳಿಗೆ ಸಹಾಯ ತಲುಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಶತ್ರು, ಉಕ್ರೇನ್ ಜನರು ಓಡಿಹೋಗುತ್ತಾರೆ ಎಂದು ನಿರೀಕ್ಷಿಸಿದ್ದಿರಬಹುದು; ಆದರೆ ಅದು ನಡೆದಿಲ್ಲ.

ಕೀವ್‌ನಿಂದ ಕಾಣುವ ಮತ್ತೊಂದು ಅಂಶವೆಂದರೆ ದಣಿವು ನಿರಾಶೆ ಅಥವಾ ಶರಣಾಗತಿಯ ರೂಪ ಪಡೆಯುತ್ತಿಲ್ಲ; ನಿರಂತರ ಕ್ಷಿಪಣಿ ದಾಳಿಗಳ ನಡುವೆಯೇ ಪ್ರತಿರೋಧದ ಮನೋಭಾವ ಹೆಚ್ಚುತ್ತಿದೆ. ಇದನ್ನು ವಿವರಿಸಲು ಸಾಧ್ಯವಿಲ್ಲ, ಆದರೆ ನನ್ನ ಮಹಾ ದೇವಾಲಯದಲ್ಲಿ ನಡೆದ ಒಂದು ಘಟನೆ ಹೇಳಬಹುದು. ಸದಾ ಪೂಜಾವಿಧಿಯಲ್ಲಿ ಭಾಗವಹಿಸುವ ಐದು ವರ್ಷದ ಬಾಲಕನನ್ನು “ನಿನ್ನ ಮನೆಯಲ್ಲಿ ಚಳಿಯೇ?” ಎಂದು ಕೇಳಿದಾಗ ಅವನು “ನಾನು ಚಳಿಯನ್ನು ಗೆಲ್ಲಬಲ್ಲೆ ಎಂದರೆ ಉಕ್ರೇನ್ ಕೂಡ ಗೆಲ್ಲುತ್ತದೆ” ಎಂದು ಉತ್ತರಿಸಿದ. ಅವನು ಗಟ್ಟಿಯಾದ ಬಟ್ಟೆ ಧರಿಸಿದ್ದರಿಂದ ಮನೆಯಲ್ಲಿ ಚಳಿ ಇದ್ದದ್ದು ಸ್ಪಷ್ಟವಾಗಿತ್ತು; ಆದರೂ ಅವನು ತನ್ನನ್ನು ಹೀರೋ ಎಂದು ಭಾವಿಸಿದ್ದ. ನನ್ನಿಗೆ ಇದು ಆ ಕುಟುಂಬದ ಧ್ವನಿಯಷ್ಟೇ ಅಲ್ಲ, ಸಂಪೂರ್ಣ ಜನರ ಧ್ವನಿಯಾಗಿದೆ. ಪುನಶ್ಚೇತನ ಕೇಂದ್ರಗಳಲ್ಲಿ ಜನರು ನಗುತ್ತಾ ಹಾಡುತ್ತಾರೆ; ಹಿಮಗೊಂಡ ಕಟ್ಟಡಗಳ ಮುಂದೆ ಸಂಗೀತ ವಾದ್ಯಗಳನ್ನು ಬಾರಿಸಿ ನೃತ್ಯ ಮಾಡುತ್ತಾರೆ. ಇದನ್ನು ನೋಡಿದರೆ ನಮಗೂ ಆಶ್ಚರ್ಯವಾಗುತ್ತದೆ.

ಆದಾಗ್ಯೂ ನೋವು ಹೆಚ್ಚುತ್ತಿದೆ — ಅನೇಕರ ಮರಣ ಮತ್ತು ಗಾಯಗಳಿಂದ. ಉಕ್ರೇನ್‌ನ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಿಷನ್ ಪ್ರಕಾರ 2025ರಲ್ಲಿ ನಾಗರಿಕರ ಮರಣ ಪ್ರಮಾಣ ಯುದ್ಧ ಆರಂಭವಾದ ಬಳಿಕ ಅತ್ಯಧಿಕವಾಗಿತ್ತು. 2024ರೊಂದಿಗೆ ಹೋಲಿಸಿದರೆ ನಾಗರಿಕರ ಸಾವು-ಗಾಯಗಳು 31% ಹೆಚ್ಚಿದರೆ, 2023ರೊಂದಿಗೆ ಹೋಲಿಸಿದರೆ 70% ಹೆಚ್ಚಿವೆ. ಶಾಂತಿ ಒಪ್ಪಂದಗಳ ಕುರಿತು ಚರ್ಚೆಗಳು ಹೆಚ್ಚಾಗುವಷ್ಟೂ ಉಕ್ರೇನ್ ನೆಲದಲ್ಲಿ ರಕ್ತಪಾತವೂ ಹೆಚ್ಚುತ್ತಿದೆ. ವಿಶ್ವದ ಶಕ್ತಿಶಾಲಿಗಳು ಒತ್ತಡದ ಬಗ್ಗೆ ಚರ್ಚಿಸುತ್ತಿರುವಾಗ ಜನರು ನೋವು ಅನುಭವಿಸುತ್ತಿದ್ದಾರೆ. ನಾವು ಎದುರಿಸುತ್ತಿರುವ ಹಾಗೂ ಜೊತೆಗಿರುವ ವಾಸ್ತವಿಕತೆ ಇದೇ.

ಇನ್ನೊಂದು ಅಂಶವೆಂದರೆ ಬಾಂಬ್ ದಾಳಿಗಳ ಸಂದರ್ಭದಲ್ಲಿ ಜನರ ಭಯ ಕ್ರಮೇಣ ಕಡಿಮೆಯಾಗುತ್ತಿದೆ; ಅವರು ಅದಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ, ಏಕೆಂದರೆ ಕೆಲವೊಮ್ಮೆ ಇತರರ ನೋವಿನ ಬಗ್ಗೆ ಸಂವೇದನೆ ಕಡಿಮೆಯಾಗಬಹುದು. ಆದ್ದರಿಂದ ಪ್ರತಿಯೊಂದು ನೋವಿನಲ್ಲಿಯೂ ಕ್ರಿಸ್ತನ ನೋವೇ ಅಡಗಿದೆ ಎಂಬ ಅರಿವಿನಿಂದ ಮಾನವ ನೋವಿಗೆ ಗೌರವ ನೀಡುವ ಧಾರ್ಮಿಕ ಮನೋಭಾವವನ್ನು ಧರ್ಮಸಭೆ ಸದಾ ಪೋಷಿಸಬೇಕು.

ಪ್ರಶ್ನೆ: ಬಹುಶಃ ಗುರುಗಳೂ ಧಾರ್ಮಿಕ ಜೀವನಕ್ಕೆ ಸಮರ್ಪಿತರಾದವರೂ ಆಳವಾದ ಸಹಾನುಭೂತಿಯನ್ನು ಅನುಭವಿಸುತ್ತಿರಬಹುದು; ಏಕೆಂದರೆ ಅವರ ಕುಟುಂಬಗಳಲ್ಲಿಯೂ ಶೋಕದ ಅನುಭವಗಳಿವೆ…

ಮಹಾ ಧರ್ಮಾಧ್ಯಕ್ಷ ಸ್ವಿಯಾತೋಸ್ಲಾವ್ ಶೆವ್ಚುಕ್: ಖಂಡಿತವಾಗಿಯೂ, ಉಕ್ರೇನ್‌ನಲ್ಲಿ ಸಹೋದರ, ಸಹೋದರಿ, ತಂದೆ-ತಾಯಿ ಅಥವಾ ಮಗುವನ್ನು ಕಳೆದುಕೊಂಡ ನೋವು ಅನುಭವಿಸದ ಕುಟುಂಬವೆಂಬುದೇ ಇಲ್ಲ. ಧರ್ಮಾಧ್ಯಕ್ಷರ ಸೀನೋಡ್ ನಂತರ ನಾವು ಗುರುಗಳಿಗೂ ಧಾರ್ಮಿಕ ಜೀವನಕ್ಕೆ ಸಮರ್ಪಿತರಾದವರಿಗೂ ಬೆಂಬಲ ನೀಡುವ ವಿಶೇಷ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ಅವರ ಸ್ಥಿತಿಯನ್ನು ತಿಳಿಯಲು ಪ್ರಶ್ನಾವಳಿಯನ್ನು ನೀಡಿದ್ದೇವೆ. ಆಸಕ್ತಿಕರವಾಗಿ ಬಹುಮಂದಿ ವಿಶ್ರಾಂತಿ ಅಥವಾ ರಜೆ ಬೇಕಿಲ್ಲ ಎಂದು ಹೇಳಿದ್ದಾರೆ. ಮೊದಲಿಗೆ ಇದು ಶ್ಲಾಘನೀಯವೆಂದು ನನಗೆ ತೋಚಿತು; ಆದರೆ ಮನೋವೈದ್ಯರು ಇದು ಮಾನಸಿಕ ಗಾಯದ ಲಕ್ಷಣವೆಂದು ವಿವರಿಸಿದರು. ಮನಃಸ್ಥಿತಿಯಲ್ಲಿ ಅವರು ತಮ್ಮ ಧರ್ಮಕೇಂದ್ರ ಅಥವಾ ಸಮುದಾಯವನ್ನು ಬಿಟ್ಟು ಹೋಗಲು ಹೆದರುತ್ತಿದ್ದಾರೆ, ಏಕೆಂದರೆ ತಮ್ಮ ಗೈರುಹಾಜರಿಯಲ್ಲಿ ಏನಾದರೂ ದುರ್ಘಟನೆ ನಡೆಯಬಹುದು ಎಂಬ ಭಯ ಇದೆ.

ನನಗೂ ಉಕ್ರೇನ್ ತೊರೆಯುವುದು ಕಷ್ಟವೇ; ಕೀವ್‌ನ ಇತ್ತೀಚಿನ ಘಟನೆಗಳ ಸುದ್ದಿ ಸದಾ ನನ್ನ ಬಳಿ ಬರುತ್ತಲೇ ಇರುತ್ತದೆ. “ನೀವು ರೋಮ್‌ನಲ್ಲಿ ಇದ್ದರೂ ಕೀವ್ ಮೇಲೆ ಬಾಂಬ್ ದಾಳಿ ನಡೆದಾಗ ನೋವು ಅನುಭವಿಸುತ್ತೀರಾ? ಅದು ಮಾನಸಿಕ ಗಾಯದ ಲಕ್ಷಣ,” ಎಂದು ಒಬ್ಬ ಮನೋವೈದ್ಯರು ನನಗೆ ಹೇಳಿದರು.

ಆದ್ದರಿಂದ “ಗಾಯಗಳ ಗುಣಮುಖತೆ” ಎಂಬ ಕಾರ್ಯಕ್ರಮದ ಮೂಲಕ ನಾವು ಗುರುಗಳಿಗೆ ಸಹಕಾರ ನೀಡುತ್ತಿದ್ದೇವೆ. ತಮ್ಮ ನೋವನ್ನು ಅನುಭವಿಸಿ ಅದನ್ನು ಜಯಿಸಿದವರು “ಗಾಯಗೊಂಡ ಚಿಕಿತ್ಸಕರಾಗಿ” ಇತರರ ನೋವನ್ನು ಅರ್ಥಮಾಡಿಕೊಂಡು ಅವರನ್ನು ಮಾನಸಿಕ ಹಾಗೂ ಮನೋವೈಜ್ಞಾನಿಕ ಗುಣಮುಖತೆಯತ್ತ ನಡೆಸುತ್ತಾರೆ.

ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ನಮ್ಮ ಬದ್ಧತೆಯ ಕೇಂದ್ರದಲ್ಲಿದೆ. ನಾವು ಇದುವರೆಗೆ ಅನುಭವಿಸದ ಅನುಭವವನ್ನು ಈಗ ಪಡೆದುಕೊಳ್ಳುತ್ತಿದ್ದೇವೆ; ಇದು ಇದೇ ರೀತಿಯ ದುಃಖವನ್ನು ಅನುಭವಿಸದ ಇತರ ಧರ್ಮಸಭೆಗಳಿಗೆ ಸಹ ಸಂಪತ್ತಾಗಬಹುದು. ಜನರನ್ನು ದೇವರತ್ತ, ಕ್ರಿಸ್ತನತ್ತ  ಆತ್ಮೀಯ ಮಾತ್ರವಲ್ಲ, ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೂಲವಾದ ರಕ್ಷಕನತ್ತ  ಹತ್ತಿರವಾಗಿಸಲು ಈ ಅನುಭವ ನೆರವಾಗುತ್ತದೆ.

ಪ್ರಶ್ನೆ: ಕಳೆದ ನಾಲ್ಕು ವರ್ಷಗಳಲ್ಲಿ ಉಕ್ರೇನ್ ಧರ್ಮಸಭೆ ವಿಶ್ವವ್ಯಾಪಿ ಧರ್ಮಸಭೆಯ ಐಕ್ಯತೆಯನ್ನು ಅನೇಕ ರೀತಿಯಲ್ಲಿ ಅನುಭವಿಸಿದೆ. ಈ ಸಮೀಪತೆಯ ಕೆಲವು ವಿಶೇಷ ಉದಾಹರಣೆಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೀರಾ?

ಮಹಾ ಧರ್ಮಾಧ್ಯಕ್ಷ ಸ್ವಿಯಾತೋಸ್ಲಾವ್ ಶೆವ್ಚುಕ್: ಈ ನಾಲ್ಕು ವರ್ಷಗಳಲ್ಲಿ ನಾವು ವಿಶ್ವವ್ಯಾಪಿ ಧರ್ಮಸಭೆಯಿಂದ ಅಪಾರ ಸ್ನೇಹ ಸಹಕಾರವನ್ನು ಅನುಭವಿಸಿದ್ದೇವೆ. ವಿಶೇಷವಾಗಿ ಸ್ಮರಣೀಯ ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಹಾಗೂ ಈಗಿನ ಪೂಜ್ಯ ಜಗದ್ಗುರುಗಳಾದ ಲಿಯೋ ಅವರ ಪ್ರೋತ್ಸಾಹದಿಂದ ಈ ಬೆಂಬಲ ದೊರಕಿದೆ. ಪವಿತ್ರ ತಂದೆಯವರಿಗೂ ಕ್ರಿಸ್ತನಲ್ಲಿ ಇರುವ ಸಹೋದರ ಸಹೋದರಿಯರಿಗೂ, ಸದ್ಭಾವನೆಯುಳ್ಳ ಎಲ್ಲಾ ಜನರಿಗೂ ನಾವು ಹೃತ್ಪೂರ್ವಕ ಕೃತಜ್ಞರಾಗಿದ್ದೇವೆ.

ಈ ಐಕ್ಯತೆಯ ಪ್ರವಾಹ ಏರುಪೇರುಗಳನ್ನು ಕಂಡಿತು. ಯುದ್ಧದ ಆರಂಭದಲ್ಲಿ ಯುರೋಪಿನ ವಿವಿಧ ದೇಶಗಳಿಂದ ಮತ್ತು ವಿಶ್ವದ ಅನೇಕ ಭಾಗಗಳಿಂದ ಮಾನವೀಯ ಸಹಾಯ ಅಪಾರವಾಗಿ ಹರಿದುಬಂದಿತು. ಆದರೆ 2025ರಲ್ಲಿ ಈ ಸಹಾಯ ಬಹುತೇಕ ಕುಂಠಿತವಾಯಿತು. ಬದುಕು ಸಾಗಿಸಲು ಅಗತ್ಯವಿರುವವರಿಗೆ ನೆರವು ಒದಗಿಸುವ ಯೋಜನೆಗಳಿಗೆ ಅನುಮೋದನೆ ಪಡೆಯುವುದೇ ಕಷ್ಟವಾಯಿತು. 2025ರ ಆರಂಭದಲ್ಲಿ ಉಕ್ರೇನ್‌ನಲ್ಲಿ ಸುಮಾರು 50 ಲಕ್ಷ ಜನರು ಆಹಾರ ಅಭಾವವನ್ನು ಎದುರಿಸುತ್ತಿದ್ದರು; ಆದರೆ ಕೇವಲ 25 ಲಕ್ಷ ಜನರಿಗೆ ಮಾತ್ರ ನೆರವು ತಲುಪಿತು. ಈ ತೀವ್ರ ಶೀತ ಹಾಗೂ ಸಂಕಷ್ಟಗಳಿಂದ ಕೂಡಿದ ಚಳಿಗಾಲದಲ್ಲಿ ಜನರ ನೋವು ಮತ್ತು ಅವರ ಪ್ರತಿರೋಧದ ಚಿತ್ರಗಳು 2022ರ ಫೆಬ್ರವರಿ-ಮಾರ್ಚ್ ದಿನಗಳನ್ನು ನೆನಪಿಸುವಂತೆ ಮತ್ತೆ ಅಂತರರಾಷ್ಟ್ರೀಯ ಐಕ್ಯತೆಯನ್ನು ಜೀವಂತಗೊಳಿಸಿತು.

ಒಂದು ವಿಶೇಷ ಘಟನೆ ನೆನಪಿಗೆ ಬರುತ್ತದೆ. ಕೀವ್‌ನಲ್ಲಿ ಬಾಂಬ್ ದಾಳಿ ನಡೆದ ಬಳಿಕ ನಾನು ಸ್ನೇಹಿತರಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ. ಒಂದು ದಾಳಿಯ ನಂತರದ ಚಿತ್ರವನ್ನು ಕಳುಹಿಸಿ, “ಕೀವ್‌ನಲ್ಲಿ ಮತ್ತೊಂದು ನರಕಸಮಾನ ರಾತ್ರಿ ಕಳೆದಿದೆ; ತಾಪಮಾನ ಮೈನಸ್ ಇಪ್ಪತ್ತು ಡಿಗ್ರಿ; ಜೀವ, ಮಾನವೀಯತೆ ಮತ್ತು ಐಕ್ಯತೆಯ ಹೋರಾಟ ಮುಂದುವರಿಯುತ್ತಿದೆ,” ಎಂದು ಬರೆದಿದ್ದೆ. ಇದನ್ನು ಸ್ವೀಕರಿಸಿದವರಲ್ಲಿ ಕ್ರಾಕೋವ್ ಮಹಾಧರ್ಮಾಧ್ಯಕ್ಷರಾದ ಪ್ರಧಾನ ಗುರು ಗ್ರ್ಜೆಗೊರ್ಜ್ ರಿಸ್ ಕೂಡ ಇದ್ದರು. ಅವರು ತಕ್ಷಣ ಸಹಕಾರ ವ್ಯಕ್ತಪಡಿಸಿದರು. ಮುಂದಿನ ಭಾನುವಾರ ಕೀವ್‌ಗಾಗಿ ಸಂಗ್ರಹ ಘೋಷಿಸಿ ನನ್ನ ಸಂದೇಶವನ್ನು ಸಾರ್ವಜನಿಕಗೊಳಿಸಿದರು. ಮೂರು ದಿನಗಳಲ್ಲಿ ಕಾರಿತಾಸ್ ಖಾತೆಗೆ 10 ಲಕ್ಷ ಝ್ಲೋಟಿ (ಸುಮಾರು 2.35 ಲಕ್ಷ ಯುರೋ) ಸಂಗ್ರಹವಾಯಿತು. ನಾಲ್ಕು ದಿನಗಳಲ್ಲಿ ಜನರೇಟರ್‌ಗಳನ್ನು ಹೊತ್ತ ಮೊದಲ ಟ್ರಕ್‌ಗಳು ಕೀವ್ ಕಡೆ ಹೊರಟವು. ಈ ಘಟನೆಯನ್ನು ಸ್ಮರಿಸಿ ನಾನು “Bis dat qui cito dat” — ತ್ವರಿತವಾಗಿ ಕೊಡುವವನು ದ್ವಿಗುಣವಾಗಿ ಕೊಟ್ಟವನಾಗುತ್ತಾನೆ — ಎಂಬ ಲ್ಯಾಟಿನ್ ಮಾತನ್ನು ನೆನಪಿಸಿಕೊಂಡೆ. ಆ ಜನರೇಟರ್‌ಗಳು ಜೀವಗಳನ್ನು ಉಳಿಸಲು ತುರ್ತಾಗಿ ಅಗತ್ಯವಿದ್ದವು.

ಈ ಸ್ವಯಂಸ್ಫೂರ್ತಿ ಐಕ್ಯತೆಯನ್ನು ಪೂಜ್ಯ ಜಗದ್ಗುರುಗಳೂ ಗುರುತಿಸಿ ತಕ್ಷಣ ನೆರವಾದವರನ್ನು ಕೃತಜ್ಞತೆಯಿಂದ ಸ್ಮರಿಸಿದರು. ಬಳಿಕ ಪೋಲ್ಯಾಂಡ್ ಧರ್ಮಾಧ್ಯಕ್ಷರ ಸಭೆ ಮತ್ತು ಇತರ ಯುರೋಪಿನ ಧರ್ಮಸಭೆಗಳು, ವಿಶೇಷವಾಗಿ ಕಾರಿತಾಸ್ ಮುಖಾಂತರ ಇಟಾಲಿಯನ್ ಧರ್ಮಾಧ್ಯಕ್ಷರ ಸಭೆಯೂ ಮಾನವೀಯ ನೆರವಿಗೆ ಕೊಡುಗೆ ನೀಡಿತು.

ಇಂದು ನಾವು ಹಣಕಾಸಿನ ನೆರವನ್ನು ಮೀರಿ ಸಾಗುವ ಐಕ್ಯತೆಯನ್ನು ಅನುಭವಿಸುತ್ತಿದ್ದೇವೆ. ಯುರೋಪಿನ ಪ್ರತಿಯೊಂದು ಧರ್ಮಕೇಂದ್ರವೂ ಕೀವ್‌ನ ನೋವನ್ನು ಸ್ಮರಿಸಿ ಮಾತನಾಡುವುದು ನಮಗೆ ದೊಡ್ಡ ವರವಾಗಿದೆ; ಏಕೆಂದರೆ ಕ್ರೈಸ್ತ ಸ್ಮರಣೆ ಮತ್ತು ಪ್ರಾರ್ಥನೆ ಮನಸ್ಸುಗಳನ್ನು ಹಾಗೂ ಹೃದಯಗಳನ್ನು ಸ್ಪಂದಿಸಲು ಸಾಧ್ಯವಾಗಿಸಿದೆ. ಉಕ್ರೇನ್‌ನಲ್ಲಿ ಅನೇಕ ಜೀವಗಳನ್ನು ಉಳಿಸಲು ಕೈಜೋಡಿಸಿದ ಎಲ್ಲರಿಗೂ ನಾವು ಆಳವಾದ ಕೃತಜ್ಞತೆಯನ್ನು ಅರ್ಪಿಸುತ್ತೇವೆ.

ಪ್ರಶ್ನೆ: ಪೂಜ್ಯರೇ, ಈ ನಾಲ್ಕನೇ ಸ್ಮರಣೆಯ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಸಮುದಾಯಕ್ಕೂ ಹಾಗೂ ವಿಶ್ವದ ವಿಶ್ವಾಸಿಗಳಿಗೂ ನೀವು ಯಾವ ಸಂದೇಶವನ್ನು ನೀಡಲು ಇಚ್ಛಿಸುತ್ತೀರಿ?

ಮಹಾ ಧರ್ಮಾಧ್ಯಕ್ಷ ಸ್ವಿಯಾತೋಸ್ಲಾವ್ ಶೆವ್ಚುಕ್: ಈ ಯುದ್ಧದ ನಾಲ್ಕನೇ ಸ್ಮರಣೆ ಮಾನವಕೋಟಿಗೆ ಲಜ್ಜಾಸ್ಪದ ಘಟನೆಯಾಗಿದೆ ಎಂದು ನಾನು ಭಾವಿಸುತ್ತೇನೆ. ನಾಲ್ಕು ವರ್ಷಗಳ ಕಾಲ ದಾಳಿಕೋರರ ಘಾತಕ ಹಸ್ತವನ್ನು ತಡೆಯಲು ಅಂತರರಾಷ್ಟ್ರೀಯ ಸಮುದಾಯ ವಿಫಲವಾಗಿರುವುದು ನೋವುಂಟುಮಾಡುವ ಸಂಗತಿ. ಕೆಲ ಇತಿಹಾಸಕಾರರು ನಮ್ಮ ಭೂಭಾಗಗಳಲ್ಲಿ ನಡೆದ ದ್ವಿತೀಯ ಮಹಾಯುದ್ಧವು ಇಂದಿನ ರಷ್ಯಾದ ಉಕ್ರೇನ್ ವಿರುದ್ಧದ ಆಕ್ರಮಣಕ್ಕಿಂತಲೂ ಕಡಿಮೆ ಅವಧಿಯಲ್ಲಿ ಮುಗಿದಿತ್ತು ಎಂದು ಸೂಚಿಸಿದ್ದಾರೆ. ಆರಂಭವಾಗಲೇ ಬಾರದ ಈ ಯುದ್ಧ ಈಗ ಅಂತ್ಯಗೊಳ್ಳಲೇಬೇಕು.

ಆದ್ದರಿಂದ ಈ ದುಃಖಭರಿತ ದಿನದಲ್ಲಿ ನಾನು ಎಲ್ಲರಿಗೂ, ದೇವರ ಮುಂದೆ ಹಾಗೂ ತಮ್ಮ ಮನಸ್ಸಿನ ಮುಂದೆ ಶಾಂತಿಯನ್ನು ನಿರ್ಮಿಸುವ ಸಂಕಲ್ಪ ಮಾಡಿಕೊಳ್ಳುವಂತೆ ಮನವಿ ಮಾಡುತ್ತೇನೆ. ರಾಜಕೀಯ ನಾಯಕರು ತಮ್ಮ ಕರ್ತವ್ಯವನ್ನು ನೆರವೇರಿಸಬೇಕು; ಧರ್ಮಸಭೆಯ ಸೇವಕರು ಮತ್ತು ರಾಜತಾಂತ್ರಿಕರು, ಕ್ರೈಸ್ತ ರಾಜತಾಂತ್ರಿಕರೂ ಸೇರಿದಂತೆ, ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಸೈನಿಕರು, ಸ್ವಯಂಸೇವಕರು — ಪ್ರತಿಯೊಬ್ಬರೂ ತಮ್ಮ ಪಾಲನ್ನು ನಿಭಾಯಿಸಲು ಕರೆಯಲ್ಪಟ್ಟಿದ್ದಾರೆ. ದಾಳಿಕೋರರನ್ನು ತಡೆಯಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಾವು ಮಾಡಬೇಕು.

ಅನಂತರ ಮತ್ತೊಂದು ಕಾಲ ಬರುತ್ತದೆ — ಗಾಯಗಳ ಗುಣಮುಖತೆ ಮತ್ತು ಯುದ್ಧದಿಂದ ಧ್ವಂಸವಾದುದನ್ನು ಮರುನಿರ್ಮಿಸುವ ಕಾಲ.ಅದು ಇನ್ನೊಂದು ಅಧ್ಯಾಯವಾಗಿರುತ್ತದೆ.

“Orate pro nobis” — ನಮಗಾಗಿ ಪ್ರಾರ್ಥಿಸಿರಿ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

23 ಫೆಬ್ರವರಿ 2026, 21:22