People gather to mark the fourth anniversary of the full-scale Russian invasion in Irpin People gather to mark the fourth anniversary of the full-scale Russian invasion in Irpin 

ಉಕ್ರೇನ್ ಯುದ್ಧದ ನಾಲ್ಕು ವರ್ಷಗಳ ಕಹಿ ಸ್ಮರಣೆ: “ಇದು ಜೀವಂತ ಪಾಸ್ಕಾ ಕಥೆ”

ರಷ್ಯಾದ ಉಕ್ರೇನ್ ಮೇಲಿನ ಪೂರ್ಣ ಪ್ರಮಾಣದ ಆಕ್ರಮಣದ ನಾಲ್ಕನೇ ಸ್ಮರಣೆಯ ಸಂದರ್ಭದಲ್ಲಿ, ವ್ಯಾಟಿಕನ್ ಸುದ್ದಿ ಸಂಸ್ಥೆ, ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮಸಭೆಯ ಫಿಲಡೆಲ್ಫಿಯಾದ ಮಹಾ ಧರ್ಮಾಧ್ಯಕ್ಷರೊಂದಿಗೆ ಮಾತುಕತೆ ನಡೆಸಿದೆ. ಭಾರೀ ದುಃಖದ ಮಧ್ಯೆಯೂ ಉಕ್ರೇನ್ ಜನರು ತೋರಿಸುತ್ತಿರುವ ಸಹನೆ, ನಂಬಿಕೆ ಹಾಗೂ ಧೈರ್ಯದ ಸಾಕ್ಷಿಯನ್ನು ಅವರು ಹಂಚಿಕೊಂಡಿದ್ದಾರೆ.

ಲೇಖಕರು: ಕೀಲ್ ಗಸ್ಸಿ

ನಾಲ್ಕು ವರ್ಷಗಳ ಹಿಂದೆ ಫೆಬ್ರವರಿ 24ರಂದು, ಈಗಾಗಲೇ ಎಂಟು ವರ್ಷಗಳಿಂದ ಮುಂದುವರಿದಿದ್ದ ತೀವ್ರ ಸಂಘರ್ಷವನ್ನು ಮತ್ತಷ್ಟು ವಿಸ್ತರಿಸಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿತು.

ಕಳೆದ ನಾಲ್ಕು ವರ್ಷಗಳಲ್ಲಿ ಸಾವು-ನೋವುಗಳ ಸಂಖ್ಯೆಯೂ ಧ್ವಂಸವೂ ಗಣನೀಯವಾಗಿ ಹೆಚ್ಚಾಗಿದೆ. ವಿಶ್ವ ಸಂಸ್ಥೆಯ ನಿರಾಶ್ರಿತರ ಆಯುಕ್ತರ ಅಂದಾಜು ಪ್ರಕಾರ ಸುಮಾರು 59 ಲಕ್ಷ ಜನರು ದೇಶವನ್ನು ತೊರೆದು ವಲಸೆ ಹೋದಿದ್ದಾರೆ. Relief Web ವರದಿಯಂತೆ 15,000ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ. ಯುದ್ಧಕ್ಕೂ ಮುನ್ನ 4.2 ಕೋಟಿ ಜನಸಂಖ್ಯೆಯಿದ್ದ ದೇಶದಲ್ಲಿ ಸುಮಾರು ನಾಲ್ಕರಲ್ಲಿ ಒಂದು ಭಾಗ ಜನರನ್ನು ಕಳೆದುಕೊಂಡಂತಾಗಿದೆ.

ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಮಾತನಾಡಿದ ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮಸಭೆಯ ಫಿಲಡೆಲ್ಫಿಯಾದ ಮಹಾ ಧರ್ಮಾಧ್ಯಕ್ಷರಾದ ಮೆಟ್ರೋಪಾಲಿಟನ್ ಬೋರಿಸ್ ಗುಡಿಯಾಕ್, ಈ ಕಠಿಣ ಸಮಯದಲ್ಲಿಯೂ ಉಕ್ರೇನ್ ಜನರು ತಮ್ಮ ಗುರುತನ್ನು ಬಲಪಡಿಸಿ ಪರಸ್ಪರ ಸಂಬಂಧಗಳನ್ನು ಗಾಢಗೊಳಿಸಿದ್ದಾರೆ ಎಂದು ಹೇಳಿದರು. ಈ ಸಂಬಂಧಗಳೇ ಇಂತಹ ದಾಳಿಯನ್ನು ಎದುರಿಸಲು ಮುಖ್ಯ ಸಾಧನಗಳಾಗಿವೆ ಎಂದು ಅವರು ತಿಳಿಸಿದರು.

ತಾಪಮಾನ ಮತ್ತು ವಿದ್ಯುತ್ ಕೊರತೆ, ನಿರಂತರ ಬಾಂಬ್ ದಾಳಿಗಳ ನಡುವೆಯೂ ಜಾಗತಿಕ ಬೆಂಬಲವು ಉಕ್ರೇನ್ ಜನರಿಗೆ ಎಷ್ಟು ಮಹತ್ವದ್ದೆಂದು ಮೆಟ್ರೋಪಾಲಿಟನ್ ವಿವರಿಸಿದರು. ಜಗದ್ಗುರುಗಳ ಧ್ವನಿಯಿಂದ ಹಿಡಿದು ವಿಶ್ವದ ವಿವಿಧ ದೇಶಗಳಲ್ಲಿ ಸಂಗ್ರಹವಾಗುವ ಸಹಾಯಧನಗಳವರೆಗೆ ಎಲ್ಲವೂ ಜನರಿಗೆ ಧೈರ್ಯ ನೀಡುತ್ತಿದೆ. “ಉಕ್ರೇನ್ ಜನರು ಇನ್ನೂ ನಿಂತಿದ್ದಾರೆ — ದಣಿದವರಾದರೂ ನಂಬಿಕೆಯಲ್ಲಿ ಸ್ಥಿರರಾಗಿದ್ದು, ದೇವರ ಸತ್ಯವೇ ಜಯಶೀಲವಾಗಲಿದೆ ಎಂಬ ಭರವಸೆಯಲ್ಲಿ ಬದುಕುತ್ತಿದ್ದಾರೆ,” ಎಂದು ಅವರು ಹೇಳಿದರು.

ಈ ಕೆಳಗೆ ಸಂದರ್ಶನವನ್ನು ಸ್ಪಷ್ಟ ಹಾಗೂ ಸಂಕ್ಷಿಪ್ತ ರೂಪದಲ್ಲಿ ಲೇಖನ ರೂಪದಲ್ಲಿ ನೀಡಲಾಗಿದೆ.

ಪ್ರಶ್ನೆ: ಫೆಬ್ರವರಿ 24 ರಷ್ಯಾದ ಉಕ್ರೇನ್ ಮೇಲಿನ ಪೂರ್ಣ ಪ್ರಮಾಣದ ಆಕ್ರಮಣದ ದುಃಖಸ್ಮರಣೆಯ ದಿನವಾಗಿದೆ. ಈ ಸಂದರ್ಭದಲ್ಲಿ ಜನರಿಗೆ ನೀವು ಏನು ಹೇಳಲು ಬಯಸುತ್ತೀರಿ?

ಮೆಟ್ರೋಪಾಲಿಟನ್ ಬೋರಿಸ್ ಗುಡಿಯಾಕ್: ಇತ್ತೀಚೆಗೆ ನಾನು ಎರಡು ವಾರಗಳ ಕಾಲ ಉಕ್ರೇನ್‌ಗೆ ಭೇಟಿ ನೀಡಿ ಸುಮಾರು ಹನ್ನೆರಡು ಪಟ್ಟಣಗಳು, ನಗರಗಳು ಹಾಗೂ ಸುಮಾರು 40 ಮಾನವೀಯ ಯೋಜನೆಗಳು ಮತ್ತು ಧರ್ಮಸಭೆಯ ಸಂಸ್ಥೆಗಳನ್ನು ಭೇಟಿಯಾಗಿದ್ದೇನೆ. ಅಲ್ಲಿ ಸ್ಪಷ್ಟವಾದ ವಿರುದ್ಧ ಚಿತ್ರಣ ಕಂಡುಬಂತು.

ಒಂದು ಕಡೆ ಗಾಯ, ಸಾವು ಮತ್ತು ಧ್ವಂಸ ಕಂಡುಬರುತ್ತಿದೆ; ಮತ್ತೊಂದು ಕಡೆ ಧರ್ಮಸಭೆ ಸುವಾರ್ತಾತ್ಮಕ ಪ್ರೀತಿಯೊಂದಿಗೆ ವೀರ ಸೇವೆಯನ್ನು ತೋರಿಸುತ್ತಿದೆ. ದುಃಖ ಅನುಭವಿಸುವ ಜನರೊಂದಿಗೆ ಧರ್ಮಸಭೆ ನಿಜವಾಗಿಯೂ ನಿಂತಿದೆ — ಧರ್ಮಾಧ್ಯಕ್ಷರು, ಗುರುಗಳು, ಧಾರ್ಮಿಕರು ಹಾಗೂ ಸಾಮಾನ್ಯ ವಿಶ್ವಾಸಿಗಳು ಎಲ್ಲರೂ ಸೇರಿಕೊಂಡಿದ್ದಾರೆ.

ಕಳೆದ ತಿಂಗಳಲ್ಲಿ ದಾಳಿಕೋರರು ಜನರನ್ನು ಚಳಿಯಿಂದ ಭಯಭೀತಗೊಳಿಸಲು ಯತ್ನಿಸಿದ್ದಾರೆ: ವಿದ್ಯುತ್ ಕೇಂದ್ರಗಳು ಹಾಗೂ ಶಕ್ತಿಸೌಕರ್ಯಗಳನ್ನು ಧ್ವಂಸಗೊಳಿಸಿ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿದ್ದಾರೆ. ಇದರ ಪರಿಣಾಮವಾಗಿ ಬಿಸಿನೀರು ಪೂರೈಕೆ ನಿಂತು, ಉಷ್ಣತೆಯ ಕೊರತೆ ಉಂಟಾಯಿತು.

ವಿಶೇಷವಾಗಿ ಸುಮಾರು ನಾಲ್ಕು ಮಿಲಿಯನ್ ಜನಸಂಖ್ಯೆಯ ರಾಜಧಾನಿ ಕೀವ್‌ನಲ್ಲಿ ಇದು ಸ್ಪಷ್ಟವಾಗಿ ಕಂಡುಬಂತು. 200ರಿಂದ 1,000ರವರೆಗೆ ದೊಡ್ಡ ಅಪಾರ್ಟ್‌ಮೆಂಟ್ ಕಟ್ಟಡಗಳು ವಿದ್ಯುತ್ ರಹಿತವಾಗಿದ್ದು, ಅದರೊಂದಿಗೆ ಉಷ್ಣತೆಯೂ ಲಭ್ಯವಾಗಲಿಲ್ಲ. ಆದರೂ ಜನರು ಧೈರ್ಯದಿಂದ ಮುಂದುವರಿದರು.

ಕೆಲವರು ತಾತ್ಕಾಲಿಕವಾಗಿ ನಗರ ತೊರೆದರೂ, ಇತರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೆರವಾದರು. ದುರಸ್ತಿ ಕಾರ್ಯಕರ್ತರು ವೀರರಂತೆ ಕಾರ್ಯನಿರ್ವಹಿಸಿದರು; ಪ್ರತಿಯೊಂದು ದಾಳಿ ನಂತರ ಅವರು ವ್ಯವಸ್ಥೆಗಳನ್ನು ಮರುಸ್ಥಾಪಿಸಲು ದುಡಿಯುತ್ತಿದ್ದರು. ಹೀಗಾಗಿ ಅಪಾರ ನೋವಿನ ನಡುವೆ ಧೈರ್ಯ, ನಂಬಿಕೆ ಮತ್ತು ಆತ್ಮಸ್ಥೈರ್ಯವೂ ಸ್ಪಷ್ಟವಾಗಿ ಗೋಚರಿಸುತ್ತದೆ. 

ಪ್ರಶ್ನೆ: ನಾಲ್ಕು ವರ್ಷಗಳು ಕಳೆದಿವೆ. ಜನರ ಮನೋಭಾವ ಹೇಗಿದೆ? ಪರಿಸ್ಥಿತಿ ಹೇಗಿದೆ?

ಮೆಟ್ರೋಪಾಲಿಟನ್ ಬೋರಿಸ್ ಗುಡಿಯಾಕ್: ಯುದ್ಧ ಆರಂಭವಾಗಿ 12 ವರ್ಷಗಳಾದರೂ ಹಾಗೂ ಪೂರ್ಣ ಪ್ರಮಾಣದ ಆಕ್ರಮಣಕ್ಕೆ ನಾಲ್ಕು ವರ್ಷಗಳಾದರೂ ಉಕ್ರೇನ್ ಜನರು ದಣಿವಿನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಂದಿನ ಜನಸಂಖ್ಯೆ 35 ವರ್ಷಗಳ ಹಿಂದೆ ಇದ್ದ ಪ್ರಮಾಣದ ಸುಮಾರು 55 ಶೇಕಡ ಮಾತ್ರ ಉಳಿದಿದೆ. ಅಪಾರ ಅಪಾಯದ ಕಾರಣ ಅನೇಕರು ದೇಶ ತೊರೆದಿದ್ದಾರೆ. ನಿರಂತರ ಬಾಂಬ್ ದಾಳಿಗಳು, ಎಚ್ಚರಿಕಾ ಸೈರನ್‌ಗಳು, ರಾತ್ರಿ ವೇಳೆ ಬಾಂಬ್ ಆಶ್ರಯಗಳಿಗೆ ಓಡುವ ಅಗತ್ಯ — ಇವೆಲ್ಲವು ಜನರ ಮನಸ್ಸಿನ ಮೇಲೆ ಭಾರವಾಗಿವೆ.

ಮನೋವೈದ್ಯರು ಲಕ್ಷಾಂತರ ಜನರು ಯುದ್ಧಾನಂತರದ ಮಾನಸಿಕ ಆಘಾತವನ್ನು ಅನುಭವಿಸುತ್ತಿದ್ದಾರೆ ಎಂದು ಸೂಚಿಸುತ್ತಾರೆ. ಕೋವಿಡ್‌ನ ಎರಡು ವರ್ಷಗಳ ಬಳಿಕ ಬಂದ ಈ ನಾಲ್ಕು ವರ್ಷಗಳ ಯುದ್ಧದಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ಮಕ್ಕಳಿಗೆ ಆರು ವರ್ಷಗಳಿಂದ ಸಾಮಾನ್ಯ ಶಿಕ್ಷಣ ಸಿಗಲಿಲ್ಲ. ಈ ಯುದ್ಧದ ಪರಿಣಾಮಗಳು ಸ್ಪಷ್ಟವಾಗಿವೆ.

ಜನರು ನೋವನ್ನು ಅನುಭವಿಸುತ್ತಿದ್ದರೂ ಇತಿಹಾಸದ ಅರಿವು ಅವರಲ್ಲಿ ಗಾಢವಾಗಿದೆ. ರಷ್ಯಾ ಆಕ್ರಮಣದ ಪ್ರತಿಯೊಂದು ಹಂತದಲ್ಲೂ ಉಕ್ರೇನಿಯನ್ ಕಥೋಲಿಕ ಧರ್ಮಸಭೆ ದಮನಕ್ಕೆ ಒಳಗಾದದ್ದು 18ನೇ, 19ನೇ ಶತಮಾನಗಳಿಂದ ಹಿಡಿದು ಝಾರ್‌ರ ಆಡಳಿತ, ಕಮ್ಯುನಿಸ್ಟ್ ಕಾಲ ಹಾಗೂ ಇಂದಿನ ಪರಿಸ್ಥಿತಿಯವರೆಗೆ ಕಂಡಿದೆ ಎಂಬ ಅರಿವು ಜನರಲ್ಲಿ ಇದೆ.

20ನೇ ಶತಮಾನದಲ್ಲಿ ಯುದ್ಧ, ನಿರ್ಮೂಲನ ಹಾಗೂ ಜನಾಂಗಹತ್ಯೆಯ ಹಸಿವಿನ ಪರಿಣಾಮವಾಗಿ ಸುಮಾರು 1.5 ಕೋಟಿ ಉಕ್ರೇನಿಯನ್ನರು ಸಾವನ್ನಪ್ಪಿದ್ದಾರೆ ಎಂಬ ಇತಿಹಾಸ ಜನರಿಗೆ ತಿಳಿದಿದೆ. 1932–1933ರ ಹೋಲೊಡೊಮೋರ್(ಹಸಿವಿನಿಂದ ಸಾವು) ಅವಧಿಯಲ್ಲಿ ಸಮೃದ್ಧ ಬೆಳೆ ಇದ್ದರೂ ಉದ್ದೇಶಪೂರ್ವಕವಾಗಿ ಉಂಟಾದ ಹಸಿವಿನಿಂದ ಸುಮಾರು 40 ಲಕ್ಷ ಜನರು ಮೃತಪಟ್ಟರು.

ಈ ಇತಿಹಾಸವನ್ನು ಜನರು ಮರೆತಿಲ್ಲ. ಆಕ್ರಮಣಕಾರರನ್ನು ಹಿಂದಕ್ಕೆ ತಳ್ಳಿದ ನಂತರ ಪತ್ತೆಯಾದ ಸಾಮೂಹಿಕ ಸಮಾಧಿಗಳನ್ನು ನೋಡಿದಾಗ, “ಅವರು ಮತ್ತೆ ಬಂದರೆ ನಮ್ಮ ಜೀವಕ್ಕೂ ಅಪಾಯ” ಎಂಬ ಗಾಢ ಭಾವನೆ ಜನರಲ್ಲಿ ಮೂಡಿದೆ. 

ಪ್ರಶ್ನೆ: ನೀವು ಉಕ್ರೇನಿಯನ್ ಕಥೋಲಿಕ ವಿಶ್ವವಿದ್ಯಾಲಯದ ಸ್ಥಾಪಕರಲ್ಲಿ ಒಬ್ಬರು. ವಿದ್ಯಾರ್ಥಿಗಳ ಸ್ಥಿತಿ ಹೇಗಿದೆ? ಅವರು ಸಂಘರ್ಷಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ?

ಮೆಟ್ರೋಪಾಲಿಟನ್ ಬೋರಿಸ್ ಗುಡಿಯಾಕ್: ಇತ್ತೀಚೆಗೆ ಮತ್ತೊಂದು ದುಃಖಕರ ಸುದ್ದಿ ನಮಗೆ ತಲುಪಿತು — ನಮ್ಮ ಸಭೆಯ 38ನೇ ಸದಸ್ಯರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ವಿಶ್ವವಿದ್ಯಾಲಯ ದುಃಖದಲ್ಲಿ ಮುಳುಗಿದೆ. ಸುಮಾರು 60 ಮಂದಿ ವಿಶ್ವವಿದ್ಯಾಲಯ ಕುಟುಂಬದ ಸದಸ್ಯರು ಮುಂಚೂಣಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿ ಇರುವವರೊಂದಿಗೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ನಿರಂತರ ಸಂಪರ್ಕದಲ್ಲಿದ್ದು, ವಿಶ್ವವಿದ್ಯಾಲಯದಲ್ಲಿ ಉಳಿದಿರುವವರು ಪರಸ್ಪರ ಏಕತೆಯಲ್ಲಿ ನಿಂತಿದ್ದಾರೆ. ಸಮುದಾಯ ಮತ್ತು ಸಹಭಾಗಿತ್ವದ ಗಾಢ ಭಾವನೆ ಸ್ಪಷ್ಟವಾಗಿದೆ.

ವಿದ್ಯಾರ್ಥಿಗಳಲ್ಲಿ ಕೆಲವರಷ್ಟೇ ಕಥೋಲಿಕರು; ದೇಶದ ಸುಮಾರು 12 ಶೇಕಡಾ ಜನರು ಕಥೋಲಿಕರಾಗಿದ್ದು, ಬಹುಪಾಲು ಪೂರ್ವ ಕಥೋಲಿಕರು. ಆದರೂ ವಿಭಿನ್ನ ಧರ್ಮಪಂಥಗಳಿಗೆ ಸೇರಿದ ವಿದ್ಯಾರ್ಥಿಗಳೆಲ್ಲರೂ ಕಥೋಲಿಕ ಸಾಮಾಜಿಕ ಬೋಧನೆಯನ್ನು ಹಾಗೂ ಪರಸ್ಪರ ಬೆಂಬಲಿಸುವ ಸಮುದಾಯ ಜೀವನವನ್ನು ಮೌಲ್ಯೀಕರಿಸುತ್ತಾರೆ.

ದಾಳಿಕೋರರು ಜನರನ್ನು ಪ್ರತ್ಯೇಕಿಸಲು ಯತ್ನಿಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪರಸ್ಪರ ಆತ್ಮೀಯತೆಯಿಂದ — ನೇರವಾಗಲಿ ಅಥವಾ ರೂಪಕವಾಗಿ — ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವಂತೆ ಒಂದಾಗಿ ನಿಂತಿದ್ದಾರೆ. ಯುದ್ಧವು ಪಾಪಗಳ ಸಂಕಲನದಂತೆ ರಾಕ್ಷಸೀಯವಾಗಿದೆ; ಗ್ರೀಕ್ ಭಾಷೆಯ “ಡಯಾಬೋಲೊಸ್” ಎಂಬ ಪದ ವಿಭಜನೆ ಎಂದರ್ಥ. ಈ ದಾಳಿ ಜನರ ನಂಬಿಕೆ, ಗುರುತು ಮತ್ತು ಸಂಬಂಧಗಳ ಮೇಲೆ ಅನುಮಾನ ಮೂಡಿಸಲು ಉದ್ದೇಶಿತವಾಗಿದೆ. ಆದರೆ ಗುರುತನ್ನು ಬಲಪಡಿಸುವ ಮತ್ತು ಸಂಬಂಧಗಳನ್ನು ಗಾಢಗೊಳಿಸುವ ಸಮುದಾಯವು ಇಂತಹ ದಾಳಿಯನ್ನು ಎದುರಿಸಲು ಅಗತ್ಯ ಸಾಧನಗಳನ್ನು ನೀಡುತ್ತದೆ.

ವಿಶ್ವವಿದ್ಯಾಲಯದ ಮಾನಸಿಕ ಆರೋಗ್ಯ ಸಂಸ್ಥೆ ಈಗ ಉಕ್ರೇನ್‌ನ ಪ್ರಥಮ ಮಹಿಳೆ ಒಲೇನಾ ಜೆಲೆನ್ಸ್ಕಾ ಆರಂಭಿಸಿದ “How Are You?” ಎಂಬ ರಾಷ್ಟ್ರಮಟ್ಟದ ಅಭಿಯಾನಕ್ಕೆ ಬೆಂಬಲ ನೀಡುತ್ತಿದೆ. ಲಕ್ಷಾಂತರ ಜನರು, ವಿಶೇಷವಾಗಿ ಮಕ್ಕಳು, ಮಾನಸಿಕ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಜನರು ಒಟ್ಟುಗೂಡಿ ಪರಸ್ಪರ ಬೆಂಬಲಿಸುವುದನ್ನು ಈ ಕಾರ್ಯಕ್ರಮ ಉತ್ತೇಜಿಸುತ್ತದೆ.

ಪ್ರಾರ್ಥನೆ, ಸಮುದಾಯ ಜೀವನ, ಮನೋವೈಜ್ಞಾನಿಕ ಸಹಯೋಗ, ವಿವಿಧ ಚಟುವಟಿಕೆಗಳು ಮತ್ತು ಸ್ವಯಂಸೇವಾ ಸೇವೆಗಳು — ಇವುಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಒಗ್ಗಟ್ಟಿನಲ್ಲಿ ಉಳಿದು ಸಮುದಾಯದ ಸದಸ್ಯರಾಗಿ ಸಮಗ್ರ ವ್ಯಕ್ತಿತ್ವದೊಂದಿಗೆ ಬದುಕಲು ನೆರವಾಗುತ್ತದೆ.

ಪ್ರಶ್ನೆ: ನೀವು ಪ್ರಸ್ತುತ ಅಮೇರಿಕಾದ ಫಿಲಡೆಲ್ಫಿಯಾದ ಅರ್ಕೆಪಾರ್ಕಿಯಲ್ಲಿ ಸೇವೆ ಸಲ್ಲಿಸುತ್ತಿದ್ದೀರಿ. ಉಕ್ರೇನ್ ಜನರಿಗಾಗಿ ಅಮೇರಿಕಾದ ನಿಮ್ಮ ಧರ್ಮಕೇಂದ್ರದ ವಿಶ್ವಾಸಿಗಳಿಗೆ ನೀವು ಏನು ಮಾಡುವಂತೆ ಪ್ರೋತ್ಸಾಹಿಸುತ್ತೀರಿ?

ಮೆಟ್ರೋಪಾಲಿಟನ್ ಬೋರಿಸ್ ಗುಡಿಯಾಕ್: ಈ 12 ವರ್ಷಗಳಲ್ಲಿ ನಾನು ಉಕ್ರೇನ್‌ಗೆ ಮಾಡಿದ ಸುಮಾರು 55ನೇ ಭೇಟಿ ಇದಾಗಿರಬಹುದು; ಕಳೆದ ನಾಲ್ಕು ವರ್ಷಗಳಲ್ಲಿ ಮಾತ್ರ 15ನೇ ಭೇಟಿ. ಅಲ್ಲಿಗೆ ನಿರಂತರವಾಗಿ ತೆರಳುವವರಿಂದ ದೊರೆಯುವ ನೇರ ಮಾಹಿತಿಯನ್ನು ನಮ್ಮ ಸಭೆಯೂ ಧರ್ಮಾಧ್ಯಕ್ಷರ ಸಮಿತಿಯೂ ಅತ್ಯಂತ ಮಹತ್ವದಿಂದ ಪರಿಗಣಿಸುತ್ತವೆ.

ನಮ್ಮ ಧರ್ಮಕೇಂದ್ರದ ಬಹುತೇಕ ವಿಶ್ವಾಸಿಗಳಿಗೆ ಉಕ್ರೇನ್‌ನೊಂದಿಗೆ ವೈಯಕ್ತಿಕ ಸಂಬಂಧವಿದೆ — ಅಲ್ಲಿ ಬಂಧುಗಳು ಇದ್ದಾರೆ. ನಮ್ಮ ಸಭಿಕರಲ್ಲಿ ಸುಮಾರು 60 ಶೇಕಡಾ ಜನರು ಉಕ್ರೇನ್ ಮೂಲದವರಾಗಿದ್ದು, ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಅಮೇರಿಕಾದಲ್ಲಿ ಸುಮಾರು 3.5 ಲಕ್ಷ ಹೊಸ ನಿರಾಶ್ರಿತರು ನೆಲೆಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ಜನರು ಪರಿಸ್ಥಿತಿಯನ್ನು ತಿಳಿದುಕೊಳ್ಳುತ್ತಾರೆ; ಆದರೂ ನೇರ ಸಾಕ್ಷ್ಯ ಮತ್ತು ಆತ್ಮೀಯ ಅನುಭವಗಳ ಹಂಚಿಕೆ ವಿಶಿಷ್ಟ ಮಹತ್ವ ಹೊಂದಿದೆ.

ಜನರ ಆತ್ಮಸ್ಥಿತಿ, ಮನೋಸ್ಥಿತಿ ಮತ್ತು ದೈಹಿಕ ಸ್ಥಿತಿ ಹೇಗಿದೆ? ಆತ್ಮೀಯ, ಮಾನಸಿಕ ಹಾಗೂ ದೈಹಿಕ ಗಾಯಗಳಿಗೆ ಹೇಗೆ ಪ್ರತಿಕ್ರಿಯಿಸಲಾಗುತ್ತಿದೆ? ಜನರು ಹೇಗೆ ತಾಳ್ಮೆಯಿಂದ ನಿಂತಿದ್ದಾರೆ? — ಇವುಗಳ ಬಗ್ಗೆ ನೇರ ಅನುಭವ ಬಹಳ ಅಗತ್ಯ.

ಆರಂಭದಿಂದಲೇ ನಾವು ಮೂರು ವಿಷಯಗಳನ್ನು ನಿರಂತರವಾಗಿ ಮನವಿ ಮಾಡುತ್ತಿದ್ದೇವೆ: ಪ್ರಾರ್ಥಿಸಿರಿ, ತಿಳಿದುಕೊಳ್ಳಿರಿ ಮತ್ತು ಇತರರಿಗೆ ತಿಳಿಸಿರಿ, ಹಾಗೂ ಸಹಭಾಗಿತ್ವದ ಮೂಲಕ ನೆರವಾಗಿರಿ. ಉಕ್ರೇನ್ ದುಃಖ ಅನುಭವಿಸುತ್ತಿದೆ. ಒಂದು ಅರ್ಥದಲ್ಲಿ ಅದು ಬಡವಾಗಿದೆ; ಆದರೆ ಮತ್ತೊಂದು ಅರ್ಥದಲ್ಲಿ ಅದು ಆತ್ಮೀಯವಾಗಿ ಸಮೃದ್ಧವಾಗಿದೆ. ಅದು ಪಾಸ್ಕಾ ಕಥೆಯನ್ನು — ಶಿಲುಬೆಯ ಮಾರ್ಗವನ್ನು — ಜೀವಿಸುತ್ತಿದೆ.

ಉಕ್ರೇನ್ ಜನರು ಪ್ರಜಾಪ್ರಭುತ್ವ, ಧರ್ಮಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಹಾಗೂ ದೇವರಿಂದ ದೊರೆತ ಮಾನವ ಗೌರವವನ್ನು ರಕ್ಷಿಸಲು ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಅವರಿಗೆ ನೆರವು ಅಗತ್ಯ, ಆದರೆ ಕೇವಲ ದಯೆಗೆ ಪಾತ್ರರಾಗಿರುವುದರಿಂದ ಅಲ್ಲ; ಅವರು ಅಪಾರ ಬೆಲೆಗೆ ಮಹತ್ತರ ಹೋರಾಟ ನಡೆಸುತ್ತಿರುವುದರಿಂದ. ಆದ್ದರಿಂದ ವೀರ ಧೈರ್ಯದಿಂದ ನಿಂತಿರುವ ಉಕ್ರೇನ್ ಜನರೊಂದಿಗೆ ಸಹಭಾಗಿತ್ವದಲ್ಲಿ ನಿಲ್ಲುವಂತೆ, ಪ್ರಾರ್ಥನೆ ಮತ್ತು ಅರಿವಿನ ಮೂಲಕ ನೆರವಾಗುವಂತೆ ನಾವು ಎಲ್ಲರನ್ನೂ ಪ್ರೋತ್ಸಾಹಿಸುತ್ತೇವೆ. 

ಪ್ರಶ್ನೆ: ಕಳೆದ ನಾಲ್ಕು ವರ್ಷಗಳಲ್ಲಿ — ಅಥವಾ ದೀರ್ಘವಾಗಿ ಕಳೆದ 12 ವರ್ಷಗಳಲ್ಲಿ — ಪಾಶ್ಚಾತ್ಯ ರಾಷ್ಟ್ರಗಳ ಉಕ್ರೇನ್ ಕುರಿತ ದೃಷ್ಟಿಯಲ್ಲಿ ಬದಲಾವಣೆ ಕಂಡಿದೆಯೇ?

ಮೆಟ್ರೋಪಾಲಿಟನ್ ಬೋರಿಸ್ ಗುಡಿಯಾಕ್: ತಕ್ಷಣವೇ ಹೆಚ್ಚಿದ ಅರಿವು ಕಂಡುಬಂದಿದೆ. ಹಿಂದೆ ಅನೇಕ ಜನರಿಗೆ ಉಕ್ರೇನ್ ಎಲ್ಲಿದೆ, ಉಕ್ರೇನಿಯನ್ನರು ಯಾರು ಎಂಬುದೇ ಸ್ಪಷ್ಟವಾಗಿರಲಿಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಇತ್ತೀಚಿನ ಸಮೀಕ್ಷೆಯಲ್ಲಿ ಅಧ್ಯಕ್ಷ ವೋಲೊಡಿಮಿರ್ ಜೆಲೆನ್ಸ್ಕಿ ಜಾಗತಿಕವಾಗಿ ಅತ್ಯಂತ ಗೌರವಿಸಲ್ಪಡುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದು ಕೇವಲ ವೈಯಕ್ತಿಕ ಸಾಧನೆ ಅಲ್ಲ; ಅವರು ಪ್ರತಿನಿಧಿಸುವ ದೇಶದ ಸಾಕ್ಷಿಯಾಗಿದೆ. ಜನರನ್ನು ಅನುಸರಿಸಿ ನಾಯಕತ್ವ ವಹಿಸಿದ ಅವರ ಪಾತ್ರವೂ ಇಲ್ಲಿ ಸ್ಪಷ್ಟವಾಗುತ್ತದೆ. ಇಂದಿಗೆ ಅವರು ಹಾಗೂ ಉಕ್ರೇನ್ ಜನರು 20 ವರ್ಷಗಳ ಹಿಂದೆ ಇದ್ದಕ್ಕಿಂತ ಹೆಚ್ಚು ಜಾಗತಿಕ ಗಮನದ ಕೇಂದ್ರದಲ್ಲಿದ್ದಾರೆ.

ಆದಾಗ್ಯೂ ಯುದ್ಧದ ಸುದ್ದಿಯು ದಿನನಿತ್ಯದ ಸುದ್ದಿಗಳಲ್ಲಿ ಕಡಿಮೆಯಾಗುತ್ತಿರುವುದೂ ಸತ್ಯ. ಜಗತ್ತಿನ ಇತರ ಸಮಸ್ಯೆಗಳ ನಡುವೆ ಸಾಮಾನ್ಯ ಜನರಿಗೂ ಕೆಲವು ಸರ್ಕಾರಗಳಿಗೂ ಉಕ್ರೇನ್ ಪ್ರಮುಖ ವಿಷಯವಾಗಿ ಕಾಣುವುದಿಲ್ಲ. ಆದರೆ ಜಾಗತಿಕ ಬದಲಾವಣೆಯ ಕೇಂದ್ರಬಿಂದುವಾಗಿರುವ ಉಕ್ರೇನ್‌ನಲ್ಲಿ ನಡೆಯುವ ಘಟನೆಗಳು ವಿಶ್ವದ ಮೇಲೆಯೇ ಪರಿಣಾಮ ಬೀರುತ್ತವೆ ಎಂದು ನಾನು ನಂಬುತ್ತೇನೆ.

ಉಕ್ರೇನ್ ದಾಳಿಕೋರರ ಅಧೀನವಾಗಿದರೆ ಆಕ್ರಮಣವು ಬಾಲ್ಟಿಕ್ ರಾಷ್ಟ್ರಗಳು, ಪೋಲಂಡ್ ಹಾಗೂ ಯೂರೋಪಿನ ಇತರ ಭಾಗಗಳತ್ತ ವಿಸ್ತರಿಸಬಹುದು. ಹೀಗಾಗಿ ಧರ್ಮಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯ ಎಂಬ ಮೌಲ್ಯಗಳು ಕೇವಲ ಉಕ್ರೇನ್‌ನಲ್ಲಿ ಮಾತ್ರವಲ್ಲ, ವಿಶ್ವದ ಮಟ್ಟದಲ್ಲಿಯೂ ಪಣಕ್ಕಿಡಲ್ಪಟ್ಟಿವೆ ಎಂಬುದನ್ನು ನಾವು ಅರಿಯಬೇಕು. 

ಉಕ್ರೇನ್ ಒಂದು ಅರ್ಥದಲ್ಲಿ ವಿಶ್ವದ ಭಾರವನ್ನು ತನ್ನ ಭುಜಗಳ ಮೇಲೆ ಹೊತ್ತುಕೊಂಡಿರುವಂತೆ ಕಂಡುಬರುತ್ತದೆ. ಒಂದು ವರ್ಷವಷ್ಟೇ ಅಲ್ಲ, 12 ವರ್ಷಗಳ ಕಾಲ ಈ ಭಾರವನ್ನು ಹೊರುವುದೇ ಅದ್ಭುತದಂತೆ ತೋರುತ್ತದೆ.

ಅಪಾರ ನೋವಿನ ಮಧ್ಯೆಯೂ ದೇವರು ಕಾರ್ಯನಿರ್ವಹಿಸುತ್ತಿರುವುದನ್ನು ನಾವು ಕಾಣುತ್ತೇವೆ. ಸಮುದಾಯದ ದುಃಖ, ದಿನನಿತ್ಯದ ನೋವುಗಳ ನಡುವೆಯೂ ಆಶೆಯ ಕಿರಣ ಉಳಿದಿದೆ. 50,000ಕ್ಕೂ ಅಧಿಕ  ಅಂಗವಿಕಲರಿದ್ದಾರೆ; ಪ್ರತಿದಿನವೂ ಸುಮಾರು 100 ಉಕ್ರೇನಿಯನ್ನರು ಸಾವನ್ನಪ್ಪುತ್ತಿರುವ ಸಾಧ್ಯತೆ ಇದೆ ಹಾಗೂ ಅನೇಕರು ಗಾಯಗೊಂಡಿದ್ದಾರೆ. ಗಾಯಗಳ ಗುರುತುಗಳಿಂದ ತುಂಬಿರುವ ನಗರಗಳನ್ನು ನೋಡಿದಾಗ ಆ ನೋವಿನ ಭಾರ ಸ್ಪಷ್ಟವಾಗುತ್ತದೆ; ಆದರೂ ದೇವರ ಕಾರ್ಯವು ಗೋಚರಿಸುತ್ತದೆ.

ಪೂರ್ಣ ಪ್ರಮಾಣದ ಆಕ್ರಮಣದ ಆರಂಭದ ದಿನಗಳಲ್ಲಿ ಉಕ್ರೇನ್‌ಗೆ ಯಾರೂ ಅವಕಾಶ ನೀಡಲಿಲ್ಲ. ಮೂರು ದಿನಗಳಲ್ಲಿ ಅಥವಾ ಮೂರು ವಾರಗಳಲ್ಲಿ ದೇಶ ಶರಣಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಸಂಭವಿಸಲಿಲ್ಲ. ಇದು ಪವಿತ್ರ ಬೈಬಲ್ಲಿನ ಗೋಲಿಯಾತ್ ವಿರುದ್ಧ ನಿಂತ ದಾವೀದನ  ಚರಿತ್ರೆಯಂತಿದೆ. ಇದು ದೇವರ ಸಾನ್ನಿಧ್ಯ ಮತ್ತು ಶಕ್ತಿಯನ್ನು ಸೂಚಿಸುವ ಚರಿತ್ರೆಯಾಗಿದೆ.

ಈ ಪರಿಸ್ಥಿತಿಯಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ: “ನಾವೇಕೆ ದುಃಖಿಸಬೇಕು? ನನ್ನ ಮಗ ಏಕೆಸಾಯಬೇಕಾಯಿತು? ನನ್ನ ಮನೆ ಬಿಟ್ಟು ಏಕೆ ಹೊರಡಬೇಕಾಯಿತು?” 

ಸುಮಾರು 1.4 ಕೋಟಿ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಮುಂಚೂಣಿ ಪ್ರದೇಶದಲ್ಲಿ ಇರುವ ಪತಿಯರಿಂದ ದೂರವಾಗಿ ಇಟಲಿ, ಜರ್ಮನಿ ಅಥವಾ ಇತರ ದೇಶಗಳಲ್ಲಿ  ಬದುಕುತ್ತಿರುವವರ ಮಹಿಳಾ ನಿರಾಶ್ರಿತರ ನೋವು ಗಾಢವಾಗಿದೆ. ಆದರೂ ದೇವರ ಸತ್ಯವು ಅಂತಿಮವಾಗಿ ಜಯಶೀಲವಾಗಲಿದೆ ಎಂಬ ನಂಬಿಕೆ ಉಳಿದಿದೆ. ಆ ನಂಬಿಕೆಯಲ್ಲಿ ನಾವು ಪ್ರಾರ್ಥಿಸುತ್ತೇವೆ ಮತ್ತು ಸಾಕ್ಷಿಯಾಗಲು ಪ್ರಯತ್ನಿಸುತ್ತೇವೆ.

ನನ್ನ ತಂದೆ-ತಾಯಿಯವರೂ ದ್ವಿತೀಯ ಮಹಾಯುದ್ಧದ ನಿರಾಶ್ರಿತರಾಗಿದ್ದರು. ಅವರು ಯೌವನದಲ್ಲೇ ಯುದ್ಧದ ಆರು ವರ್ಷಗಳನ್ನು ಅನುಭವಿಸಿ ನಂತರ ಐದು ವರ್ಷ ನಿರಾಶ್ರಿತರಾಗಿ ಬದುಕಿದರು. ಎಲ್ಲವನ್ನೂ ಕಳೆದುಕೊಂಡಿದ್ದರು; ನನ್ನ ತಾಯಿ ತಮ್ಮ ತಾಯಿ ಹಾಗೂ ಸಹೋದರಿಯನ್ನು ಕಳೆದುಕೊಂಡರು, ತಂದೆಯವರು ಕುಟುಂಬದ ಏಕೈಕ ವ್ಯಕ್ತಿಯಾಗಿ ದೇಶ ತೊರೆದರು.

ಅಮೇರಿಕಾದಲ್ಲಿ ಅವರು ಹೊಸ ಜೀವನ ಆರಂಭಿಸಿ ದೇಶಕ್ಕೆ ಮಹತ್ವದ ಕೊಡುಗೆ ನೀಡಿದರು. ಯುದ್ಧದ ಸಂದರ್ಭದಲ್ಲಿ 60 ಲಕ್ಷ ಉಕ್ರೇನಿಯನ್ನರು ಸಾವನ್ನಪ್ಪಿದರೂ ದೇಶವು ಮತ್ತೆ ಬದುಕಿಗೆ ಮರಳಿತು. 1980ರ ದಶಕದಲ್ಲಿ ಅಣ್ವಸ್ತ್ರಗಳಿಂದ ಶಸ್ತ್ರಸಜ್ಜಿತ ಮಹಾಶಕ್ತಿಯಾಗಿದ್ದ ಸೋವಿಯತ್  ಕುಸಿದದ್ದು ದೇವರ ಸತ್ಯದ ಜಯದ ಉದಾಹರಣೆಯಾಗಿದೆ ಎಂದು ಸಂತ ಜಾನ್ ಪಾಲ್ II ಅರಿತುಕೊಂಡಿದ್ದರು.

ದೇವರ ಸತ್ಯ ಅಂತಿಮವಾಗಿ ಜಯಿಸುತ್ತದೆ; ಸ್ವಾತಂತ್ರ್ಯವು ಮರಳಿ ಬಲಪಡುತ್ತದೆ. ನಮ್ಮ ಕರೆಗೆ ನಿಷ್ಠರಾಗಿರಬೇಕು. ನಾವು ನಮ್ಮ ಜೀವನಕಾಲದಲ್ಲಿ ಅದರ ಫಲಿತಾಂಶವನ್ನು ಕಾಣದಿದ್ದರೂ ಸತ್ಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. 

ಪ್ರಶ್ನೆ:ಮಾನವೀಯ ನೆರವು, ನೈತಿಕ ಹಾಗೂ ಆತ್ಮೀಯ ಬೆಂಬಲದ ದೃಷ್ಟಿಯಿಂದ ಪವಿತ್ರ ಪೀಠ ಮತ್ತು ಉಕ್ರೇನ್ ನಡುವಿನ ಸಂಬಂಧ ಹೇಗಿದೆ?

ಮೆಟ್ರೋಪಾಲಿಟನ್ ಬೋರಿಸ್ ಗುಡಿಯಾಕ್: ನಿಖರ ಸಂಖ್ಯೆಯನ್ನು ತಿಳಿಯದಿದ್ದರೂ, ಪೂಜ್ಯ ಜಗದ್ಗುರುಗಳು ಫ್ರಾನ್ಸಿಸ್ ಉಕ್ರೇನ್ ಕುರಿತು ಸುಮಾರು 400 ಬಾರಿ ಮಾತನಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ — ಬಹುತೇಕ ಪ್ರತಿಯೊಂದು ಬುಧವಾರದ ಸಾರ್ವಜನಿಕ ಭೇಟಿ ಮತ್ತು ಭಾನುವಾರದ ಏಂಜೆಲಸ್ ಸಂದೇಶಗಳಲ್ಲಿ. ಅವರು “ರಕ್ತಸಾಕ್ಷಿ ಉಕ್ರೇನ್” ಮತ್ತು ದುಃಖ ಅನುಭವಿಸುವ ಉಕ್ರೇನ್‌ಗಾಗಿ ವಿಶ್ವವನ್ನು ಪ್ರಾರ್ಥನೆಗೆ ಕರೆಯುತ್ತಿದ್ದರು. ಇದು ಅತ್ಯಂತ ಮಹತ್ವದ್ದಾಗಿದೆ. ಪ್ರಾರ್ಥನೆ ಪರ್ವತಗಳನ್ನೂ ಕದಲಿಸುತ್ತದೆ. ಈ ಮನವಿಗಳು ಉಕ್ರೇನ್‌ನ ನೋವನ್ನು ಜಗತ್ತಿನ ಕಣ್ಣೆದುರು ಇರಿಸಿವೆ.

ಪೂಜ್ಯ ಜಗದ್ಗುರುಗಳು ಯುದ್ಧ ಕೈದಿಗಳ ಬಿಡುಗಡೆಗಾಗಿ ಪ್ರಯತ್ನಿಸಿದರು. ಯುದ್ಧದ ಸಂದರ್ಭದಲ್ಲಿ ಅಪಹರಣಗೊಂಡ ಮಕ್ಕಳನ್ನು ಮರಳಿ ತರುವ ಕಾರ್ಯದಲ್ಲೂ ಪವಿತ್ರ ಪೀಠ ತೊಡಗಿಕೊಂಡಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ 20,000ಕ್ಕೂ ಅಧಿಕ ಮಕ್ಕಳನ್ನು ಅಪಹರಿಸಲಾಗಿದೆ, ಆದರೆ ನಿಜವಾದ ಸಂಖ್ಯೆ ಇನ್ನೂ ಹೆಚ್ಚಿನದಾಗಿದೆ. ಪವಿತ್ರ ಪೀಠವು ಸೇನೆಯ ಶಕ್ತಿಯಲ್ಲ; ಅದು ಕರುಣೆಯ ಕೇಂದ್ರವಾಗಿದೆ — ಸುವಾರ್ತೆಯ ಸಂದೇಶ, ಪ್ರಾರ್ಥನೆ ಮತ್ತು ಆಶೀರ್ವಾದಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಆತ್ಮೀಯ ಸಾಧನಗಳು ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ.

ಪೂಜ್ಯ ಜಗದ್ಗುರು ಲಿಯೋ ತಮ್ಮ ಅಧಿಕಾರದ ಆರಂಭದ ದಿನಗಳಲ್ಲಿಯೇ ಪೂರ್ವ ಕಥೋಲಿಕರನ್ನು ಬುಧವಾರದ ಮೊದಲ ಸಾರ್ವಜನಿಕ ಭೇಟಿಯಲ್ಲಿ ಸ್ವಾಗತಿಸಿದರು. ಆ ದಿನಗಳಲ್ಲಿ ನಡೆದ ಜೂಬಿಲಿ ಸಂದರ್ಭದಲ್ಲಿ ಪೂರ್ವ ಕಥೋಲಿಕರಿಗೆ ವಿಶೇಷ ಗಮನ ನೀಡಲಾಯಿತು. ಅಧ್ಯಕ್ಷ ಜೆಲೆನ್ಸ್ಕಿ ಅವರು ಜಗದ್ಗುರುಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮೊದಲ ರಾಷ್ಟ್ರಾಧ್ಯಕ್ಷರಾಗಿದ್ದು, ನಂತರ ಅವರನ್ನು ಭೇಟಿಯಾದ ಮೊದಲ ನಾಯಕರೂ ಆಗಿದ್ದರು. ಜಗದ್ಗುರುಗಳು ಲಿಯೋ ಅನ್ಯಾಯವನ್ನು ಸೂಚಿಸಿ ನ್ಯಾಯ ಹಾಗೂ ನ್ಯಾಯಸಮ್ಮತ ಶಾಂತಿಯ ಅಗತ್ಯವನ್ನು ಒತ್ತಿಹೇಳಿದ್ದಾರೆ.

ಪವಿತ್ರ ಪೀಠ ಮತ್ತು ಅದರ ವಿಭಾಗಗಳು ಮೌನವಾಗಿ ಸಹಾಯ ಮಾಡುವ ಕಾರ್ಯದಲ್ಲಿಯೂ ತೊಡಗಿವೆ — ಇದಕ್ಕಾಗಿ ನಾವು ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಉದಾಹರಣೆಗೆ, ಕ್ರಕೋವಿನ ಪ್ರಧಾನ ಗುರು ಗ್ರೆಗೊರ್ಜ್ ರ್ಯಸ್ ಮಹಾ ಧರ್ಮಾಧ್ಯಕ್ಷ ಸ್ವಿಯಾತೋಸ್ಲಾವ್ ಶೆವ್ಚುಕ್ ಅವರ ಸಂದೇಶಕ್ಕೆ ತಕ್ಷಣ ಸ್ಪಂದಿಸಿ ಶಕ್ತಿಸಂಕಷ್ಟವನ್ನು ಎದುರಿಸಲು ಜನರೇಟರ್‌ಗಳಿಗಾಗಿ ಸಹಾಯ ಸಂಗ್ರಹವನ್ನು ಘೋಷಿಸಿದರು.

ಈ ಯೋಜನೆಯನ್ನು ಪೂಜ್ಯ ಜಗದ್ಗುರುಗಳು ಶ್ಲಾಘಿಸಿದ ನಂತರ ಸಂಪೂರ್ಣ ಪೋಲಿಷ್ ಧರ್ಮಾಧ್ಯಕ್ಷರ ಸಮಿತಿ ಸಹಾಯ ಸಂಗ್ರಹಕ್ಕೆ ಕೈಜೋಡಿಸಿತು. ಒಬ್ಬ ಮಹಾಧರ್ಮಾಧ್ಯಕ್ಷರ ಪ್ರಯತ್ನವನ್ನು ಜಗದ್ಗುರುಗಳು ಮೆಚ್ಚಿದ ಒಂದೇ ಮಾತು ರಾಷ್ಟ್ರಮಟ್ಟದ ಐಕ್ಯತಾ ಕಾರ್ಯವಾಗಿ ರೂಪಾಂತರಗೊಂಡು ಅನೇಕ ಜೀವಗಳನ್ನು ಉಳಿಸಲು ನೆರವಾಯಿತು. 

ಪ್ರಶ್ನೆ: ನೀವು ಉಕ್ರೇನ್‌ಗೆ ಭೇಟಿ ನೀಡಿದಾಗ ಜಗದ್ಗುರುಗಳ ಮಾತುಗಳ ಕುರಿತು ಜನರು ಪ್ರತಿಕ್ರಿಯಿಸುತ್ತಾರೆಯೇ? ಅವರ ಪರಿಸ್ಥಿತಿಯನ್ನು ಕುರಿತು ಜಗದ್ಗುರುಗಳು ಮಾತನಾಡುವುದನ್ನು ಕೇಳುವುದು ಅವರಿಗೆ ಎಷ್ಟು ಮಹತ್ವದ್ದಾಗಿದೆ?

ಮೆಟ್ರೋಪಾಲಿಟನ್ ಬೋರಿಸ್ ಗುಡಿಯಾಕ್: ಇದು ಅತ್ಯಂತ ಮಹತ್ವದ್ದಾಗಿದೆ. ಜಾಗತಿಕ ಕಥೋಲಿಕರ ಐಕ್ಯತೆಯ ಭಾವನೆ ಜನರಲ್ಲಿ ಗಾಢವಾಗಿದೆ. ಉಕ್ರೇನ್‌ನಿಂದ ಅಮೇರಿಕಾಕ್ಕೆ ಮರಳುವಾಗ ಅಲ್ಲಿನ ಜನರು ಅಮೇರಿಕಾದ ಕಥೋಲಿಕರಿಗೆ ತಮ್ಮ ಕೃತಜ್ಞತೆಯನ್ನು ತಿಳಿಸಬೇಕೆಂದು ನನ್ನನ್ನು ಕೇಳುತ್ತಾರೆ. ಕಥೋಲಿಕ ಮಾಧ್ಯಮಗಳು ಪರಿಸ್ಥಿತಿಯನ್ನು ಸ್ಪಷ್ಟವಾಗಿ ಪ್ರಸ್ತುತಪಡಿಸುತ್ತಿದ್ದು, ವಿವಿಧ ಕಾರಿಟಸ್ ಸಂಸ್ಥೆಗಳು, ಧರ್ಮಪ್ರಾಂತ್ಯಗಳು, ವ್ಯಕ್ತಿಗಳು ಹಾಗೂ ಧರ್ಮಕೇಂದ್ರಗಳು ಅನೇಕ ರೀತಿಯಲ್ಲಿ ಉಕ್ರೇನ್‌ನ ದುಃಖಿತ ಜನರಿಗೆ ನೆರವಾಗಿವೆ — ಇದನ್ನು ಜನರು ಹೃದಯಪೂರ್ವಕವಾಗಿ ಮೆಚ್ಚುತ್ತಾರೆ.

ಜನರು ಸದಾ “ಧನ್ಯವಾದಗಳನ್ನು ತಿಳಿಸಿ” ಎಂದು ಹೇಳುತ್ತಾರೆ. ಆದ್ದರಿಂದ ನಿಮ್ಮ ಪ್ರಾರ್ಥನೆಗೆ, ಪರಿಸ್ಥಿತಿಯನ್ನು ತಿಳಿದುಕೊಂಡು ಬೆಂಬಲಿಸಿದಕ್ಕೆ ಹಾಗೂ ಉಕ್ರೇನ್ ಜನರೊಂದಿಗೆ ಸಹಭಾಗಿತ್ವದಲ್ಲಿ ನಿಂತಿರುವುದಕ್ಕೆ ನಾನು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಉಕ್ರೇನ್‌ನ ಕ್ರೈಸ್ತರು ಹಾಗೂ ವಿಶ್ವಾಸಿಗಳು ದಣಿದವರಾದರೂ ನಂಬಿಕೆಯಲ್ಲಿ ಸ್ಥಿರರಾಗಿದ್ದು, ದೇವರ ಸತ್ಯವೇ ಜಯಶೀಲವಾಗಲಿದೆ ಎಂಬ ಭರವಸೆಯಲ್ಲಿ ನಿಂತಿದ್ದಾರೆ ಎಂಬುದನ್ನು ಅವರು ಅರಿತುಕೊಂಡಿದ್ದಾರೆ. 

ಪ್ರಶ್ನೆ: ತಪಸ್ಸು ಕಾಲದ ಈ ಅವಧಿಯಲ್ಲಿ ಉಕ್ರೇನ್ ಜನರಿಗಾಗಿ ಜನರು ಏನು ಮಾಡಬಹುದು?

ಮೆಟ್ರೋಪಾಲಿಟನ್ ಬೋರಿಸ್ ಗುಡಿಯಾಕ್: ತಪಸ್ಸು ಕಾಲವು, ಪಶ್ಚಾತ್ತಾಪದ ಈ ಅವಧಿಯ ಮುಖ್ಯ ಆಧ್ಯಾತ್ಮಿಕ ಅಭ್ಯಾಸಗಳಿಗೆ ಮರಳುವ ಸಮಯವಾಗಿದೆ. ಪ್ರಾರ್ಥನೆ, ಉಪವಾಸ ಮತ್ತು ದಾನಶೀಲತೆ. ಬಡವರಿಗಾಗಿ ನೆರವು ಸಂಗ್ರಹಗಳಲ್ಲಿ ಭಾಗವಹಿಸಲು ಇದು ಸೂಕ್ತ ಸಮಯ. ಉದಾಹರಣೆಗೆ ಅಮೇರಿಕಾದಲ್ಲಿ ಬೂದಿ ಬುಧವಾರದ ಸಂಗ್ರಹವು ಪೂರ್ವ ಯೂರೋಪಿನ ಧರ್ಮಸಭೆಗಾಗಿ ಮೀಸಲಾಗಿದೆ. ಅನೇಕ ಕಥೋಲಿಕ ರಾಷ್ಟ್ರಗಳಲ್ಲಿ ತಪಸ್ಸು ಕಾಲದ ಅವಧಿಯಲ್ಲಿ ದುಃಖ ಅನುಭವಿಸುವ ಜನರೊಂದಿಗೆ ಜಾಗತಿಕ ಐಕ್ಯತೆಯನ್ನು ತೋರಿಸಲು ವಿಶ್ವಾಸಿಗಳಿಗೆ ಅವಕಾಶಗಳು ಲಭ್ಯವಾಗುತ್ತವೆ.

ದುಃಖವು ಕೇವಲ ಉಕ್ರೇನ್‌ನಲ್ಲಷ್ಟೇ ಇಲ್ಲ; ಜಗತ್ತಿನ ಅನೇಕ ಭಾಗಗಳಲ್ಲಿ ಜನರು ನೋವನ್ನು ಅನುಭವಿಸುತ್ತಿದ್ದಾರೆ. ಉಕ್ರೇನ್ ಜನರೂ ಇತರರಿಗಾಗಿ ಪ್ರಾರ್ಥಿಸಿ ಸಾಧ್ಯವಾದಲ್ಲಿ ನೆರವಾಗಲು ಪ್ರಯತ್ನಿಸುತ್ತಾರೆ. ದೇವರಲ್ಲಿ ನಮ್ಮ ಸಾಮೂಹಿಕ ಯಾತ್ರೆಯ ಅರಿವಿನ ಮೂಲಕ ನಾವು ಪರಸ್ಪರ ಬೆಂಬಲಿಸಿ ಒಟ್ಟಾಗಿ ನಿಂತಿರುತ್ತೇವೆ. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

24 ಫೆಬ್ರವರಿ 2026, 17:24