ಅಸ್ಸಿಸಿ: ಸಂತ ಫ್ರಾನ್ಸಿಸ್ ಅವಶೇಷಗಳಿಗೆ ಸಾವಿರಾರು ಯಾತ್ರಿಕರ ಭಕ್ತಿ ವಂದನೆ
ಲೇಖಕರು: ಕ್ರಿಸ್ಟೋಫರ್ ವೆಲ್ಸ್
ಭಾನುವಾರ ಜಗತ್ತಿನ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 18 ಸಾವಿರ ಯಾತ್ರಿಕರು ಮತ್ತು ಸಂದರ್ಶಕರು ಅಸ್ಸಿಸಿಯ ಸಂತ ಫ್ರಾನ್ಸಿಸ್ ಅವರ ಪವಿತ್ರ ಅವಶೇಷಗಳ ಮುಂದೆ ಸರದಿ ಸಾಲಿನಲ್ಲಿ ಸಾಗುತ್ತಾ, ಧರ್ಮಸಭೆಯ ಇತಿಹಾಸದಲ್ಲಿ ಅತ್ಯಂತ ಪ್ರೀತಿಸಲ್ಪಟ್ಟ ಸಂತಗಳಲ್ಲಿ ಒಬ್ಬರಾದ ಅವರ ಪ್ರಮುಖ ಅವಶೇಷಗಳಿಗೆ ಅಪೂರ್ವವಾಗಿ ಭಕ್ತಿ ವಂದನೆ ಸಲ್ಲಿಸುವ ಅವಕಾಶವನ್ನು ಪಡೆದರು.
ಅಸ್ಸಿಸಿಯ “ಪೊವರೆಲ್ಲೋ”—ಅಂದರೆ “ಸಣ್ಣ ದರಿದ್ರನು” ಎಂದು ಕರೆಯಲ್ಪಡುವ ಸಂತ ಫ್ರಾನ್ಸಿಸ್ ಅವರ ನಿಧನದ 8ನೇ ಶತಮಾನ ಸ್ಮರಣೆಯ ಅಂಗವಾಗಿ, ಅವರ ಅಸ್ಥಿಪಂಜರ ಅವಶೇಷಗಳನ್ನು ಅವರ ಸ್ವಗೃಹ ಪಟ್ಟಣದಲ್ಲಿ ಇರುವ ಅವರಿಗೆ ಸಮರ್ಪಿತ ಬಸಿಲಿಕಾದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. 1230ರಲ್ಲಿ ಅವರ ದೇಹವನ್ನು ಬಸಿಲಿಕಾದ ಭೂಗುಹೆಯಲ್ಲಿ ಸಮಾಧಿ ಮಾಡಿದ ಬಳಿಕ ಮೊದಲ ಬಾರಿಗೆ ಈ ಅವಶೇಷಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತಿದೆ.
ಈ ಪ್ರದರ್ಶನವು ಈ ವರ್ಷದ ಫೆಬ್ರವರಿ 22ರಿಂದ ಮಾರ್ಚ್ 22ರವರೆಗೆ—ಒಟ್ಟು ಒಂದು ತಿಂಗಳ ಕಾಲ ಮುಂದುವರಿಯಲಿದೆ.
ಸ್ಮರಣೆ ಮತ್ತು ಆನಂದದ ವಾತಾವರಣ
ಫ್ರಾನ್ಸಿಸ್ಕನ್ ಗುರುಗಳಾದ ವಂ. ಗುರು. ಜೂಲಿಯೊ ಸೆಸಾರಿಯೋ ಸಂತ ಫ್ರಾನ್ಸಿಸ್ ಅವರ ಅವಶೇಷಗಳ ದರ್ಶನದ ಮೊದಲ ದಿನಕ್ಕೆ ಅಸ್ಸಿಸಿಗೆ ಆಗಮಿಸಿದ ಸಾವಿರಾರು ಯಾತ್ರಿಕರು “ಸ್ಮರಣೆಯೂ ಆನಂದವೂ ತುಂಬಿದ ವಾತಾವರಣದಲ್ಲಿ, ಸಂತ ಫ್ರಾನ್ಸಿಸ್ ಅವರ ಪವಿತ್ರ ಅವಶೇಷಗಳಿಗೆ ಭಕ್ತಿ ವಂದನೆ ಸಲ್ಲಿಸುವಾಗ, ಹೃದಯದ ಮೌನದಲ್ಲಿ ಅವರ ಒಳ್ಳೆಯತನದ ಮೃದು ಸ್ಪರ್ಶವು ಅನುಭವವಾಗಿ, ಅದು ಬದುಕನ್ನು ಧೈರ್ಯಗೊಳಿಸಿ ಆತ್ಮಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ” ಎಂಬ ಅನುಭವವನ್ನು ಹಂಚಿಕೊಂಡರು.
ಅಸ್ಸಿಸ್ಸಿಯ ಪವಿತ್ರ ಕಾನ್ವೆಂಟಿನ ಸಂವಹನ ಕಚೇರಿಯ ನಿರ್ದೇಶಕರಾದ ವಂ. ಗುರು ಸೆಸಾರಿಯೋ, ಸಂತ ಫ್ರಾನ್ಸಿಸ್ ಅವರನ್ನು ಪ್ರೀತಿಸುವ ಹಾಗೂ ಈ ಸಂದರ್ಭವನ್ನು ನಿಜವಾದ ಸಹೋದರತ್ವದ ಕ್ಷಣವಾಗಿಸಲು ಫ್ರಾನ್ಸಿಸ್ಕನ್ ಸಂನ್ಯಾಸಿ ಗುರುಗಳೊಂದಿಗೆ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
‘ಲೋಕದ ತರ್ಕ’ದಿಂದ ಮುಕ್ತವಾದ ಆತ್ಮಸ್ವಾತಂತ್ರ್ಯ
ಅವಶೇಷಗಳ ಸಾರ್ವಜನಿಕ ದರ್ಶನದ ಮೊದಲ ದಿನವು ಅಸ್ಸಿಸಿಯ ಜಗದ್ಗುರುಗಳ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುವ ಬಸಿಲಿಕಾಗಳ ಉಸ್ತುವಾರಿಗೆ ನೇಮಕಗೊಂಡ ಜಗದ್ಗುರುಗಳ ಪ್ರತಿನಿಧಿಯಾದ ಪ್ರಧಾನ ಗುರು ಆಂಜೆಲ್ ಫೆರ್ನಾಂಡೆಸ್ ಆರ್ಟಿಮೆ ಅವರಿಂದ ಅರ್ಪಿಸಲಾದ ವಿಶೇಷ ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾಯಿತು.
ತಮ್ಮ ಪ್ರಭೋದನೆಯಲ್ಲಿ ಪ್ರಧಾನ ಗುರುಗಳು ಅವರು, ಅಸ್ಸಿಸಿಯ ಸಂತ ಫ್ರಾನ್ಸಿಸ್ ಲೋಕದ ಲಾಭ-ಸ್ವಾರ್ಥಗಳ ತರ್ಕವನ್ನು ಮೀರಿ ಬದುಕಿದ ವ್ಯಕ್ತಿಯಾಗಿದ್ದರು ಎಂದು ಒತ್ತಿಹೇಳಿದರು. “ಅವರ ಸ್ವಾತಂತ್ರ್ಯವು ಸ್ವತ್ತುಗಳನ್ನು ಹುಡುಕುವುದರಲ್ಲಿ ಅಲ್ಲ, ದೇವರ ಮೇಲಿನ ಸಂಪೂರ್ಣ ನಂಬಿಕೆಯಲ್ಲಿ ನೆಲೆಗೊಂಡಿತ್ತು; ಆಳುವ ಮನೋಭಾವದಲ್ಲಿ ಅಲ್ಲ, ಸೇವೆಯ ಮನಸ್ಸಿನಲ್ಲಿ ವ್ಯಕ್ತವಾಗಿತ್ತು.”
ಈ ಫ್ರಾನ್ಸಿಸ್ಕನ್ ಆತ್ಮವನ್ನು ಅಪ್ಪಿಕೊಳ್ಳುವುದು ಭೂತಕಾಲದಲ್ಲಿ ಆಶ್ರಯ ಹುಡುಕುವುದಲ್ಲ, ಬದಲಾಗಿ ಇಂದಿನ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಕ್ರೈಸ್ತ ಜೀವನದ ಕರೆಯಾಗಿದೆ ಎಂದು ಪ್ರಧಾನ ಗುರು ಫೆರ್ನಾಂಡೆಸ್ ಆರ್ಟಿಮೆ ತಿಳಿಸಿದ್ದಾರೆ.
ಪ್ರಲೋಭನೆಗಳ ಮೇಲೆ ಜಯ
ಯೇಸು ಕ್ರಿಸ್ತನು ಬೆಂಗಾಡಿನಲ್ಲಿ ಪ್ರಲೋಭನೆಗಳನ್ನು ಎದುರಿಸಿದ ಸುವಾರ್ತೆಯ ಘಟನೆಯನ್ನು ಸ್ಮರಿಸಿದ ಪ್ರಧಾನ ಗುರು ಆಂಜೆಲ್ ಫೆರ್ನಾಂಡೆಸ್ ಆರ್ಟಿಮೆ, ಅಸ್ಸಿಸಿಯ ಸಂತ ಫ್ರಾನ್ಸಿಸ್ ಕೂಡ ಇದೇ ಪ್ರಲೋಭನೆಗಳನ್ನು ಅನುಭವಿಸಿದ್ದರೂ, ಅಹಂಕಾರ, ಸಂಪತ್ತಿನ ಸಂಗ್ರಹಣೆ ಹಾಗೂ ಸ್ವಯಂಸಾಕ್ಷಾತ್ಕಾರದ ಮಾರ್ಗವನ್ನು ಆರಿಸದೆ, ವಿನಮ್ರತೆ, ದಾರಿದ್ರ್ಯ ಮತ್ತು ವಿಧೇಯತೆಯ ದಾರಿಯನ್ನು ಆಯ್ಕೆ ಮಾಡಿಕೊಂಡರು ಎಂದು ಹೇಳಿದರು. ಸಂತ ಫ್ರಾನ್ಸಿಸ್ “ದೇವನನ್ನೇ ಏಕೈಕ ಆರಾಧ್ಯನಾಗಿ ಆರಿಸಿಕೊಂಡರು” ಎಂದು ಅವರು ಒತ್ತಿಹೇಳಿದರು.
ಪ್ರಲೋಭನೆಗಳ ಮೇಲೆ ಜಯವು ಮಾನವನನ್ನು ತನ್ನೊಳಗೆ ಸೀಮಿತಗೊಳಿಸುವುದಿಲ್ಲ; ಬದಲಾಗಿ ಇತರರತ್ತ ತೆರೆಯುತ್ತದೆ ಎಂದು ಪ್ರಧಾನ ಗುರುಗಳು ವಿವರಿಸಿದರು. ಕ್ರಿಸ್ತನು ಬೆಂಗಾಡಿನಿಂದ ಹೊರಬಂದು ದೇವರಾಜ್ಯವನ್ನು ಘೋಷಿಸಿದಂತೆ, ಸಂತ ಫ್ರಾನ್ಸಿಸ್ ಕೂಡ ಪ್ರಭುವನ್ನು ಅನುಸರಿಸಿ ಪ್ರಲೋಭನೆಗಳನ್ನು ಜಯಿಸಿ ಕುಷ್ಟರೋಗಿಯನ್ನು ಅಪ್ಪಿಕೊಂಡು ತಮ್ಮ ಸಹೋದರ-ಸಹೋದರಿಯರನ್ನು ಸ್ವೀಕರಿಸಿದರು ಎಂದು ಅವರು ಹೇಳಿದರು.
ಪವಿತ್ರ ಗ್ರಂಥ ವಾಚನಗಳು ಮತ್ತು ಸಂತ ಫ್ರಾನ್ಸಿಸ್ ಅವರ ಅವಶೇಷಗಳ ಭಕ್ತಿ ವಂದನೆಯ ನಡುವಿನ ಸಂಬಂಧವನ್ನು ವಿವರಿಸುತ್ತಾ, ಇದು ಕೇವಲ ಸ್ಮರಣೆಯ ಕ್ರಿಯೆಯಲ್ಲ; ಬದಲಾಗಿ “ಶಕ್ತಿಯುತ ಹಾಗೂ ಸ್ಪಷ್ಟ ಆಹ್ವಾನ” ಎಂದು ಅವರು ಹೇಳಿದರು. ನಮ್ಮೊಳಗಿನ : “ನನ್ನ ಬೆಂಗಾಡು ಯಾವುದು? ನನ್ನೊಳಗೆ ನೆಲೆಸಿರುವ ಪ್ರಲೋಭನೆ ಯಾವುದು? ನಂಬಿಕೆಯ ಹೆಜ್ಜೆ ಇಡುವಂತೆ ಕರ್ತನು ನನಗೆ ಯಾವ ಕಡೆ ಕರೆಯುತ್ತಾನೆ?” ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಆಹ್ವಾನಿಸುತ್ತದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).