ಹುಡುಕಿ

TOPSHOT-UKRAINE-RUSSIA-CONFLICT-WAR-ANNIVERSARY TOPSHOT-UKRAINE-RUSSIA-CONFLICT-WAR-ANNIVERSARY  (AFP or licensors)

ಮಾಸ್ಕೋ ಧರ್ಮಕ್ಷೇತ್ರದ ಉಪ ಪ್ರಧಾನ ಗುರುಗಳು: ಉಕ್ರೇನ್ ಯುದ್ಧ ‘ಅಂತ್ಯಗೊಳ್ಳಲೇಬೇಕು’

ಮಾಸ್ಕೋ ಕಥೋಲಿಕ ಧರ್ಮಕ್ಷೇತ್ರದ ಉಪ ಪ್ರಧಾನ ಗುರುಗಳು (Vicar General) ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಉಕ್ರೇನ್ ಸಂಘರ್ಷದಲ್ಲಿ ಕಳೆದುಹೋದ ಅನೇಕ ಜೀವಗಳ ಕುರಿತು, ‘ಇತರರ’ ನೋವನ್ನು ಅರ್ಥಮಾಡಿಕೊಳ್ಳುವ ಸಹಾನುಭೂತಿಯ ಮಹತ್ವದ ಬಗ್ಗೆ ಹಾಗೂ ರಷ್ಯಾದ ಸಣ್ಣ ಕಥೋಲಿಕ ಸಮುದಾಯದ ಪ್ರಸ್ತುತ ಪರಿಸ್ಥಿತಿಯ ಕುರಿತು ಮಾತನಾಡಿದರು.

ಲೇಖಕರು: ಜೀನ್ -ಚಾರ್ಲ್ಸ್ ಪುಟ್ಝೋಲು

2022ರ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ನಡೆಸಿದ ಪೂರ್ಣ ಪ್ರಮಾಣದ ಆಕ್ರಮಣಕ್ಕೆ ಈಗ ನಾಲ್ಕು ವರ್ಷಗಳು ಕಳೆದಿವೆ. ಈ ದುಃಖಭರಿತ ಸಂದರ್ಭವನ್ನು ಸ್ಮರಿಸಲು, ವ್ಯಾಟಿಕನ್ ಸುದ್ದಿ ಸಂಸ್ಥೆ ಮಾಸ್ಕೋದಲ್ಲಿರುವ ದೇವಮಾತೆಯ ಮಹಾಧರ್ಮಕ್ಷೇತ್ರದ ಉಪ ಪ್ರಧಾನ ಗುರುಗಳಾದ (Vicar General)  ವಂ. ಗುರು ಕಿರಿಲ್ ಗೊರ್ಬುನೋವ್ ಅವರೊಂದಿಗೆ ಮಾತುಕತೆ ನಡೆಸಿದೆ. ಈ ಕೆಳಗೆ ಸಂದರ್ಶನವನ್ನು ಸ್ಪಷ್ಟ ಹಾಗೂ ಸಂಕ್ಷಿಪ್ತ ಲೇಖನ ರೂಪದಲ್ಲಿ ನೀಡಲಾಗಿದೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಪೂರ್ಣ ಪ್ರಮಾಣದ ಸಂಘರ್ಷ ಈಗ ಐದನೇ ವರ್ಷಕ್ಕೆ ಪ್ರವೇಶಿಸಿದೆ. ಇಂದಿನ ರಷ್ಯಾದ ಜನರ ಮನೋಭಾವ ಹೇಗಿದೆ?

ವಂ. ಗುರು ಕಿರಿಲ್ ಗೊರ್ಬುನೋವ್: ರಷ್ಯಾದಲ್ಲಿರುವ ನಮ್ಮ ಅತಿ ಸಣ್ಣ ಕಥೋಲಿಕ ಸಮುದಾಯದ ಪರವಾಗಿ ಮಾತನಾಡುವುದು ನನಗೆ ಗೌರವದ ವಿಷಯ. ಬಹುಜನರು ಊಹಿಸುವುದಕ್ಕಿಂತ ನಮ್ಮ ಸಮುದಾಯ ತುಂಬಾ ಚಿಕ್ಕದು. ಒಟ್ಟು ಜನಸಂಖ್ಯೆಯಲ್ಲಿ ನಾವು 1% ಕ್ಕಿಂತಲೂ ಕಡಿಮೆ, ಹಾಗೂ ನಿಯಮಿತವಾಗಿ ಧರ್ಮಾಚರಣೆ ಮಾಡುವವರ ಸಂಖ್ಯೆ ಇನ್ನೂ ಕಡಿಮೆ. ಐತಿಹಾಸಿಕ ಕಾರಣಗಳಿಂದ ರಷ್ಯಾದಲ್ಲಿ ಕಥೋಲಿಕ ಧರ್ಮಸಭೆಯನ್ನು ಕೆಲವೊಮ್ಮೆ ಅನುಮಾನದಿಂದ ನೋಡುವುದು ಕಂಡುಬರುತ್ತದೆ—ವಿದೇಶಿಗಳ ಧರ್ಮಸಭೆ, ರಷ್ಯಾ ಸಂಸ್ಕೃತಿಗೆ ಸೇರಿದುದಲ್ಲ ಎಂಬ ಭಾವನೆ ಇದೆ. ಇದು ರಷ್ಯಾದ ಕಥೋಲಿಕರಿಗೆ ಸವಾಲಾಗಿದೆ: ಒಂದು ಕಡೆ ರಷ್ಯಾ ಸಂಸ್ಕೃತಿ ಮತ್ತು ಭಾಷೆಯವರಾಗಿದ್ದು, ಮತ್ತೊಂದೆಡೆ ವಿಶ್ವವ್ಯಾಪಿ ಕಥೋಲಿಕ ಧರ್ಮಸಭೆಯ ಭಾಗವಾಗಿರಬೇಕು.

ಈ ಸಂದರ್ಭದಲ್ಲಿಯೂ ರಷ್ಯಾದ ಜನರು, ವಿಶೇಷವಾಗಿ ಕಥೋಲಿಕರು, ಈ ಸಂಘರ್ಷದ ಬಗ್ಗೆ ಒಂದೇ ಮನೋಭಾವ ಹೊಂದಿದ್ದಾರೆ—ಯುದ್ಧ ಕೊನೆಗೊಳ್ಳಬೇಕು. ಈ ಸಂಘರ್ಷದಲ್ಲಿ ಕಳೆದುಹೋಗಿರುವ ಅನೇಕ ಜೀವಗಳು ಅದರ ಸಾಕ್ಷಿ. ಹಿಂಸಾಚಾರದ ಮತ್ತೆ ಮೇಲಾಗುತ್ತಿದೆ. ಆದ್ದರಿಂದ ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿಯೊಂದಿಗೆ ಈ ಸಂಘರ್ಷ ಅಂತ್ಯಗೊಳ್ಳಬೇಕು ಎಂಬುದು ರಷ್ಯಾದ ಕಥೋಲಿಕರ ಆಶೆ ಮತ್ತು ನಿರೀಕ್ಷೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: ಕಳೆದ ನಾಲ್ಕು ವರ್ಷಗಳಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಸಮಾಧಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಸಾವುಗಳ ಸಂಖ್ಯೆ ರಷ್ಯಾದ ಜನರ ಮನೋಭಾವವನ್ನು ಹೇಗೆ ಪ್ರಭಾವಿಸುತ್ತದೆ?

ವಂ. ಗುರು ಕಿರಿಲ್ ಗೊರ್ಬುನೋವ್: ಎಲ್ಲಾ ರಷ್ಯಾದ ಜನರ ಪರವಾಗಿ ಮಾತನಾಡಲು ನನಗೆ ಸಾಧ್ಯವಿಲ್ಲ. ಆದರೆ ಗುರುವಾಗಿ ನನಗೆ ಭೇಟಿಯಾಗುವ ಜನರ ಬಗ್ಗೆ ಹೇಳಬಹುದು. ಕೆಲವರು ನಿರಾಕರಣೆಯ ಮನೋಭಾವದಲ್ಲಿದ್ದಾರೆ. ದುರ್ಭಾಗ್ಯವಶಾತ್, ಅನೇಕರು ನಡೆಯುತ್ತಿರುವ ವಾಸ್ತವಿಕತೆಯನ್ನು ಮನಸ್ಸಿನಿಂದ ದೂರ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. “ನಾವು ಇದರಲ್ಲಿ ಏನೂ ಮಾಡಲಾರವು, ನಮ್ಮಿಂದ ಏನೂ ಬದಲಾಯಿಸಲಾಗದು; ಎಲ್ಲವೂ ಸರಿಯಾಗಿದ್ದ ಕಾಲಕ್ಕೆ ಮರಳಿ ಹೋಗೋಣ” ಎಂಬ ನಿರೀಕ್ಷೆ ಇರುತ್ತದೆ. ಆದರೆ ಅದು ಸಾಧ್ಯವಿಲ್ಲ.

2014ರಿಂದಲೇ ಮೂರನೇ ಮಹಾಯುದ್ಧದ ಬಗ್ಗೆ ಒಂದೊಂದಾಗಿ ಮಾತನಾಡಲು ಪ್ರಾರಂಭಿಸಿದ್ದ

ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರ ಧೈರ್ಯದಿಂದ ನಾನು ಯಾವಾಗಲೂ ಪ್ರಭಾವಿತನಾಗಿದ್ದೆ.ಅಂದು ಈ ಮಾತುಗಳು ಅನೇಕರಿಗೆ ವಿಚಿತ್ರವಾಗಿ ತೋರಿತು, ಅವು ಪ್ರವಾದನೆಯ ಮಾತುಗಳಾಗಿದ್ದವು. ಈ ವಾಸ್ತವಿಕತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಗುರುವಾಗಿ ನಾನು ಜನರಿಗೆ “ಏನೂ ನಡೆಯುತ್ತಿಲ್ಲ ಎಂಬಂತೆ ನಡೆದುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಬೇಕಾಗುತ್ತದೆ.

ಮತ್ತೊಂದೆಡೆ, ಕೆಲವು ಜನರಿಗೆ ಈ ಯುದ್ಧವೇ ಸಂಪೂರ್ಣ ಮನಸ್ಸನ್ನು ಆವರಿಸಿದೆ. ಅವರು ಭರವಸೆ ಕಳೆದುಕೊಳ್ಳುತ್ತಾರೆ, ನಿರಾಶೆಗೆ ಒಳಗಾಗುತ್ತಾರೆ. ದೇವರು ದಯಾಳು ಮತ್ತು ಒಳ್ಳೆಯವನು ಎಂದು ಧರ್ಮಸಭೆ ಬೋಧಿಸುವುದು ಸತ್ಯವೇ ಎಂದು ಪ್ರಶ್ನಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ನಾವು ರಕ್ಷಣೆಯ ಇತಿಹಾಸವನ್ನೂ, ಪವಿತ್ರ ಗ್ರಂಥದ ಸಂದೇಶವನ್ನೂ ನೋಡುವುದು ಅಗತ್ಯ. ಅನ್ಯಾಯದ ಪಾತ್ರ ತುಂಬಿ ಹರಿದಾಗ ಬದಲಾವಣೆ ಅಗತ್ಯವಾಗುತ್ತದೆ ಎಂದು ಪವಿತ್ರ ಗ್ರಂಥ ಹೇಳುತ್ತದೆ—ರಾಜಕೀಯ ನಾಯಕರು ಮಾತ್ರವಲ್ಲ, ಪ್ರತಿಯೊಬ್ಬರ ಜೀವನವೂ ಬದಲಾಗಬೇಕು.

ಅನೇಕ ಕುಟುಂಬಗಳು ಇನ್ನೂ ಒಂದಾಗಿವೆ, ಆದರೆ ವಿಶೇಷವಾಗಿ ಕಥೋಲಿಕರೊಳಗಿನ ರಷ್ಯಾ–ಉಕ್ರೇನ್ ಮಿಶ್ರ ಕುಟುಂಬಗಳು ಈಗ ವಿಭಜಿತವಾಗಿವೆ ಅಥವಾ ಸಂಪೂರ್ಣವಾಗಿ ಕುಸಿದಿವೆ. ಇದು ಜನರಿಗೆ ಅಪಾರವಾದ ನೋವು ಮತ್ತು ದುಃಖದ ಮೂಲವಾಗಿದೆ, ಮತ್ತು ಅವರು ಅದನ್ನು ಸಹಿಸಿಕೊಂಡು ಬದುಕಲು ಪ್ರಯತ್ನಿಸುತ್ತಿದ್ದಾರೆ.

ವ್ಯಾಟಿಕನ್ ಸುದ್ದಿ ಸಂಸ್ಥೆ: ಈ ಸಂಘರ್ಷದ ಬಗ್ಗೆ ರಷ್ಯಾದಲ್ಲಿ ಯಾವ ರೀತಿಯ ಕಥನವನ್ನು ನೀಡಲಾಗುತ್ತಿದೆ? ರಷ್ಯಾದ ಜನರಿಗೆ ಯಾವ ಮಾಹಿತಿಗೆ ಪ್ರವೇಶವಿದೆ?

ವಂ. ಗುರು ಕಿರಿಲ್ ಗೊರ್ಬುನೋವ್: ರಷ್ಯಾದಲ್ಲಿ ಇರುವ ಕಥನವು ಈ ಸಂಘರ್ಷದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ಇತರ ದೇಶಗಳ ಕಥನದಂತೆಯೇ ಇದೆ ಎಂದು ನಾನು ಹೇಳುತ್ತೇನೆ. ಸಾಮಾನ್ಯವಾಗಿ “ಸತ್ಯ ನಮ್ಮ ಬದಿಯಲ್ಲಿದೆ; ನಾವು ಸರಿಯಾದವರು, ಇತರರು ತಪ್ಪು” ಎಂಬ ನಿಲುವು ಎಲ್ಲೆಡೆ ಕಾಣಿಸುತ್ತದೆ. ನಾನು ಇಂಗ್ಲಿಷ್, ಜರ್ಮನ್, ಇಟಾಲಿಯನ್ ಭಾಷೆಗಳಲ್ಲಿಯೂ ಸುದ್ದಿಗಳನ್ನು ಅನುಸರಿಸುವುದರಿಂದ, ಎಲ್ಲ ಬದಿಗಳಲ್ಲೂ ಒಂದೇ ರೀತಿಯ ಕಥನವನ್ನು ನೋಡುತ್ತೇನೆ—ಶತ್ರುವೇ ತಪ್ಪಿತಸ್ಥ, ಇತರರು ಕೆಟ್ಟವರು, ಅವರ ಸಂಸ್ಕೃತಿ ಕೆಟ್ಟದು, ಅವರು ಶಾಂತಿಯಾಗಿ ಬದುಕಲು ಅಥವಾ ವಿವೇಕದಿಂದ ನಡೆದುಕೊಳ್ಳಲು ಅಸಮರ್ಥರು ಎಂಬ ಅನುಮಾನ ಗಾಢವಾಗುತ್ತದೆ. ಇನ್ನೊಬ್ಬರೊಂದಿಗೆ ಶಾಂತಿಯಾಗಿ ಬದುಕುವ ಸಾಧ್ಯತೆಯ ಬಗ್ಗೆ ಆಳವಾದ ಅನುಮಾನ ಮೂಡುತ್ತದೆ. ಈ ರೀತಿಯ ಕಥನ ಎಲ್ಲ ಬದಿಗಳಲ್ಲೂ ಈಗ ಕಾಣುತ್ತಿದೆ.

ಧರ್ಮಸಭೆಯ ಸಂದೇಶದಲ್ಲಿ ಮುಖ್ಯವಾದುದು ಇದೇ ಮನೋಭಾವವನ್ನು ಮೀರಿಸಬೇಕೆಂಬುದು. ಉದಾಹರಣೆಗೆ, ಉಕ್ರೇನಿಯನ್ ಮಹಿಳೆಯರು ಪೂಜ್ಯ ಜಗದ್ಗುರುಗಳಾದ ಲಿಯೋ ಅವರನ್ನು ಭೇಟಿಯಾದಾಗ ಹೇಳಿದ ಮಾತು ನನಗೆ ತುಂಬಾ ಸ್ಪರ್ಶಿಸಿತು: “ಈ ಯುದ್ಧಕ್ಕೆ ರಷ್ಯಾದ ಜನರನ್ನು ದೋಷಾರೋಪಣೆ ಮಾಡಲು ಸಾಧ್ಯವಿಲ್ಲ, ಏಕೆಂದರೆ ನಾವು ಅವರಂತೆಯೇ ಪರಿಸ್ಥಿತಿಯಲ್ಲಿ, ಅದೇ ಮಾಹಿತಿ ವಾತಾವರಣದಲ್ಲಿ ಇದ್ದರೆ ಹೇಗೆ ನಡೆದುಕೊಳ್ಳುತ್ತಿದ್ದೆವು ಎಂಬುದನ್ನು ನಮಗೆ ತಿಳಿದಿಲ್ಲ. ಅದೇ ಸುದ್ದಿಗಳು, ಅದೇ ಕಲ್ಪನೆಗಳು ನಮಗೂ ದೊರಕಿದ್ದರೆ ನಮ್ಮ ನಿಲುವು ಹೇಗಿರುತ್ತಿತ್ತೋ ಗೊತ್ತಿಲ್ಲ.”

ಇದು ಪ್ರಾರಂಭದ ಹಂತ—ಜನರು ತಮಗೆ ತಿಳಿದಿರುವ ಮಾಹಿತಿಯಿಂದಲೇ ಸೀಮಿತರಾಗಿರುತ್ತಾರೆ ಎಂಬ ಅರಿವು. ಅಲ್ಲಿಂದ ನಾವು ಪರಸ್ಪರರನ್ನು ಆಳವಾಗಿ ತಿಳಿದುಕೊಳ್ಳುವ ಮೂಲಕ ಶಾಂತಿಯತ್ತ ಸಾಗುವ ಮಾರ್ಗವನ್ನು ಹುಡುಕಬೇಕು.

ವ್ಯಾಟಿಕನ್ ಸುದ್ದಿ ಸಂಸ್ಥೆ:  ರಷ್ಯಾದಲ್ಲಿ ಇರುವ ಸಣ್ಣ ಕಥೋಲಿಕ ಸಮುದಾಯದ ಬಗ್ಗೆ ನೀವು ಉಲ್ಲೇಖಿಸಿದ್ದೀರಿ. ಈ ಸಮುದಾಯವು ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಿದೆ?

ವಂ. ಗುರು ಕಿರಿಲ್ ಗೊರ್ಬುನೋವ್: ಸಾಮಾನ್ಯವಾಗಿ ನೋಡಿದರೆ, ಜೀವನ ಹೇಗೋ ಮುಂದುವರಿಯುತ್ತಿದೆ ಎಂದು ಹೇಳಬಹುದು. ಧರ್ಮಸಭೆಗೆ ಅತ್ಯಂತ ಮುಖ್ಯವಾದದ್ದು ಸಂಸ್ಕಾರಗಳು, ಸಮೂಹ ಪ್ರಾರ್ಥನೆ ಮತ್ತು ಪವಿತ್ರ ಪೂಜೆ. ಅವುಗಳು ಸಾಮಾನ್ಯವಾಗಿ ನಡೆಯುತ್ತಿವೆ. ಆದರೆ ಈ ಸಂದರ್ಭವು ಧರ್ಮಸಭೆಯ ಏಕತೆಯ ಮಹತ್ವವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಏಕೆಂದರೆ ಧರ್ಮಸಭೆಯೊಳಗೆ ಪವಿತ್ರ ಪೂಜೆ, ನೈತಿಕ ಪ್ರಶ್ನೆಗಳು, ಭವಿಷ್ಯದ ಧರ್ಮಸಭೆಯ ರೂಪ, ವಿವಿಧ ಸೇವೆಗಳ ಕುರಿತು ಈಗಾಗಲೇ ಕೆಲವು ಭಿನ್ನಾಭಿಪ್ರಾಯಗಳಿವೆ.

ಆದರೆ ಇಂತಹ ಸಶಸ್ತ್ರ ಸಂಘರ್ಷವು ಕೂಡ ವಿಭಜನೆಯ ಮೂಲವಾಗುತ್ತದೆ. ಜನರು ಕೆಲವೊಮ್ಮೆ ಆಳವಾದ ಭಿನ್ನಾಭಿಪ್ರಾಯಗಳಿಗೆ ಒಳಗಾಗುತ್ತಾರೆ. ನಾನು ಮಾಸ್ಕೋದಲ್ಲಿರುವ ದೊಡ್ಡ ಧರ್ಮಕ್ಷೇತ್ರದ ಪ್ರಧಾನ ಧರ್ಮಕೇಂದ್ರದಲ್ಲಿ ವಾಸಿಸುತ್ತಿರುವುದರಿಂದ ಅದು ಅಷ್ಟು ಸ್ಪಷ್ಟವಾಗಿ ಕಾಣದಿರಬಹುದು. ಆದರೆ ಸಾಮಾನ್ಯವಾಗಿ ಚಿಕ್ಕ ಕಥೋಲಿಕ ಧರ್ಮಕೇಂದ್ರಗಳಲ್ಲಿ ಈ ವಿಭಜನೆ ಸಮುದಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಈ ಸಂದರ್ಭದಲ್ಲಿ ಮುಖ್ಯವಾದುದು—ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರರನ್ನು ಒಪ್ಪಿಕೊಳ್ಳುವುದು, ಒಂದಾಗಿ ಪ್ರಾರ್ಥಿಸುವುದು, ದೇವರು ನಮ್ಮನ್ನು ವಿಭಜಿಸುವ ಸಂಗತಿಗಳಿಗಿಂತ ಮಹಾನ್ ಎಂಬುದನ್ನು ಅರಿತುಕೊಳ್ಳುವುದು. ದೇವರ ಪ್ರೀತಿ ಎಲ್ಲಕ್ಕಿಂತ ದೊಡ್ಡದು; ರಕ್ಷಣೆಯ ಕುರಿತು ಅವರ ಯೋಜನೆ ಎಲ್ಲರಿಗೂ ಒಂದೇ. ದೇವರು ನಮ್ಮನ್ನು ವಿಭಿನ್ನ ದೃಷ್ಟಿಯಿಂದ ನೋಡುವುದಿಲ್ಲ; ಎಲ್ಲರನ್ನೂ ರಕ್ಷಿಸಲು ಬಯಸುತ್ತಾನೆ. ಈ ಸತ್ಯವನ್ನು ಕೇವಲ ಕಲ್ಪನೆಯಾಗಿ ಅಲ್ಲ, ಹೃದಯದಿಂದ ಸ್ವೀಕರಿಸಿ, ಇತರರನ್ನು ದೇವರ ಕಣ್ಣಿನಿಂದ ನೋಡುವುದು ಅತ್ಯಂತ ಮುಖ್ಯವಾಗಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).



27 ಫೆಬ್ರವರಿ 2026, 00:11