ಹುಡುಕಿ

2026.02.14 Poland:History of the Venerable Sister Dulcissima(Helena)Hoffmann of the Congregation of the Sisters of Mary Immaculate 2026.02.14 Poland:History of the Venerable Sister Dulcissima(Helena)Hoffmann of the Congregation of the Sisters of Mary Immaculate 

ಪೋಲ್ಯಾಂಡ್‌: ಸಹೋದರಿ ದುಲ್ಚಿಸ್ಸಿಮಾ ಜನನದ 116ನೇ ವಾರ್ಷಿಕೋತ್ಸವ

2026ರ ಫೆಬ್ರವರಿ 7ರಂದು ಪೋಲ್ಯಾಂಡ್‌ನಲ್ಲಿ ವಿಶ್ವಾಸಿಗಳು ಸಹೋದರಿ ಮರಿಯಾ ದುಲ್ಚಿಸ್ಸಿಮಾ ಎಂದು ಪರಿಚಿತರಾದ ದೇವರ ಸೇವಕಿ ಹೆಲೆನಾ ಹೋಫ್‌ಮನ್ ಜನನದ 116ನೇ ವಾರ್ಷಿಕೋತ್ಸವವನ್ನು ಸ್ಮರಿಸಿದರು. ಯೇಸು ಕ್ರಿಸ್ತನ ಶಿಲುಬೆಯೊಂದಿಗೆ ಏಕೀಕೃತವಾದ ಪ್ರೀತಿಗೆ ಸಾಕ್ಷಿಯಾದ ಅವರ ಕಿರು ಜೀವನ, ದುಃಖದ ಅರ್ಥವನ್ನು ಅರಸುವ ಹಾಗೂ ದೇವರ ಮೇಲಿನ ನಿಷ್ಠೆಯನ್ನು ಕಾಯ್ದುಕೊಳ್ಳಲು ಬಯಸುವ ಅನೇಕರಿಗೆ ಪ್ರೇರಣೆಯಾಗಿದೆ.

ಲೇಖಕರು: ಏಂಜೆಲಾ ರ್ವೆಜೌಲಾ  ಮತ್ತು ಸಹೋದರಿ ಕ್ರಿಸ್ಟಿನ್ ಮಸಿವೋ, CPS– ವ್ಯಾಟಿಕನ್

2026ರಲ್ಲಿ ದೇವರ ಸೇವಕಿ ಸಹೋದರಿ ಮರಿಯಾ ದುಲ್ಚಿಸ್ಸಿಮಾ ಅವರ ಜನನದ 116ನೇ ವಾರ್ಷಿಕೋತ್ಸವವು ಭಕ್ತಿಪೂರ್ಣ ಪ್ರಾರ್ಥನೆಗಳು ಮತ್ತು ಕೃತಜ್ಞತೆಯ ಆಚರಣೆಯೊಂದಿಗೆ ಗುರುತಿಸಲ್ಪಟ್ಟಿತು. ಅವರ ಆಧ್ಯಾತ್ಮಿಕ ಜೀವನದ ಪರಂಪರೆಯನ್ನು ಸ್ಮರಿಸುತ್ತಾ, ಧನ್ಯೀಕರಣದ ಕೃಪೆ ಶೀಘ್ರವಾಗಲೆಂದು ವಿಶ್ವಾಸಿಗಳು ದೇವರಲ್ಲಿ ಮನವಿ ಸಲ್ಲಿಸಿದರು. ಮಕ್ಕಳು, ಧಾರ್ಮಿಕ ಸಹೋದರ–ಸಹೋದರಿಯರು, ಸಾಮಾನ್ಯ ವಿಶ್ವಾಸಿಗಳು ಹಾಗೂ ಅವರ ಮಧ್ಯಸ್ಥಿಕೆಯಿಂದ ಕೃಪೆಗಳನ್ನು ಅನುಭವಿಸಿದವರು ಈ ಭಕ್ತಿಯ ಕ್ಷಣದಲ್ಲಿ ಒಂದಾಗಿ ಸೇರಿದರು.

1910ರ ಫೆಬ್ರವರಿ 7ರಂದು ಪೋಲ್ಯಾಂಡ್‌ನ ಜ್ಗೊಡಾ (ಇಂದಿನ ಶ್ವಿಯೆಂತೊಖ್ಲೋವಿಚೆ ಭಾಗ) ಎಂಬ ಪಟ್ಟಣದಲ್ಲಿ ಲೋಹಕಾರರ ಕುಟುಂಬದಲ್ಲಿ ಹೆಲೆನಾ ಹೋಫ್‌ಮನ್ ಜನಿಸಿದರು. ಸಿಸಿಲಿಯನ್ ಮೂಲದ ಅವರ ತಾಯಿಯ ಆಳವಾದ ನಂಬಿಕೆ ಬಾಲ್ಯದಿಂದಲೇ ಹೆಲೆನಾಳ ಆಧ್ಯಾತ್ಮಿಕ ಜೀವನವನ್ನು ರೂಪಿಸಿತು; ಮಾನವೀಯ ದುಃಖದತ್ತ ವಿಶೇಷ ಕರುಣೆ ಮತ್ತು ಸ್ಪಂದನೆ ಅವರ ಹೃದಯದಲ್ಲಿ ಬೇಗನೆ ಅರಳಿತು.

ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದ ಹೆಲೆನಾ ಜರ್ಮನ್ ಹಾಗೂ ಪೋಲಿಷ್ ಭಾಷೆಗಳಲ್ಲಿ ಪ್ರವೀಣತೆ ಗಳಿಸಿ, ನಾಟಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದರು. ಪವಿತ್ರ ಪರಮ ಪ್ರಸಾದ, ಕನ್ಯಾ ಮರಿಯಾ ಹಾಗೂ ಸಂಸ್ಕಾರಗಳತ್ತ ಅವರ ಭಕ್ತಿ ದಿನದಿಂದ ದಿನಕ್ಕೆ ಗಾಢವಾಗುತ್ತಾ, ಅವರ ಜೀವನವನ್ನು ಸಂಪೂರ್ಣವಾಗಿ ದೇವರ ಪ್ರೀತಿಯ ಮಾರ್ಗದಲ್ಲಿ ನಡೆಸಿತು. 

ತರಬೇತಿ ಮತ್ತು ಸಮರ್ಪಿತ ಜೀವನ

ಹೆಲೆನಾ ಅವರ ಆಧ್ಯಾತ್ಮಿಕ ಮಾರ್ಗದರ್ಶಕರು ಅವರನ್ನು ಕ್ರಿಸ್ತನನ್ನು ಹತ್ತಿರದಿಂದ ಅನುಸರಿಸುವ ಜೀವನದತ್ತ ದಾರಿ ತೋರಿಸಿದರು. ಮೊದಲ ಪವಿತ್ರ ಪರಮ ಪ್ರಸಾದವನ್ನು ಸ್ವೀಕರಿಸಿದ ನಂತರ ಪಡೆದ ಆಳವಾದ ಅನುಭವವು ಅವರ ನಂಬಿಕೆಯನ್ನು ಮತ್ತಷ್ಟು ದೃಢಗೊಳಿಸಿತು. ಸಂತ ತೆರೆಸಾ ಆಫ್ ಲಿಸಿಯೆ ಅವರ ಜೀವನದಿಂದ ಪ್ರೇರಣೆಯನ್ನು ಪಡೆದ ಹೆಲೆನಾ, ಪ್ರಾರ್ಥನೆ ಮತ್ತು ದಾನಶೀಲತೆಯಲ್ಲಿ ನೆಲೆಗೊಂಡ ಕ್ರೈಸ್ತ ಜೀವನವನ್ನು ಅಪ್ಪಿಕೊಂಡರು.

1927ರಲ್ಲಿ ಅವರು ಅಮಲೋತ್ಸಭವ ಮಾತೆಯ ಸಭೆಗೆ ಸೇರ್ಪಡೆಗೊಂಡು “ಅತ್ಯಂತ ಮಧುರಳು” ಎಂಬ ಅರ್ಥ ಹೊಂದಿರುವ ಸಹೋದರಿ ಮರಿಯಾ ದುಲ್ಚಿಸ್ಸಿಮಾ ಎಂಬ ಧಾರ್ಮಿಕ ಹೆಸರನ್ನು ಸ್ವೀಕರಿಸಿದರು. ಇದು ಕ್ರಿಸ್ತನೊಂದಿಗೆ ಅವರ ಮೃದು ಮತ್ತು ಆಳವಾದ ಏಕತೆಯನ್ನು ಪ್ರತಿಬಿಂಬಿಸಿತು.

ಆರಂಭಿಕ ಆರೋಗ್ಯ ಸಮಸ್ಯೆಗಳಿದ್ದರೂ, ಅವರು ಸಮರ್ಪಿತ ಜೀವನದ ಒಳಗಿನ ಆಧ್ಯಾತ್ಮಿಕ ಹೋರಾಟವನ್ನು ವಿನಯದಿಂದ ಅಪ್ಪಿಕೊಂಡರು. ವಂ. ಗುರು ಜೋಸೆಫ್ ಶ್ವೇಟರ್, CSsR ಹಾಗೂ ಸಹೋದರಿ ಮರಿಯಾ ಲಜಾರಿಯಾ ಸ್ಟೆಫಾನಿಕ್ ಅವರ ಮಾರ್ಗದರ್ಶನದಲ್ಲಿ ದುಃಖವನ್ನು ದೇವರ ಕೊಡುಗೆಯಾಗಿ ಸ್ವೀಕರಿಸಿ, ತಮ್ಮ ಸಮುದಾಯಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದರು. ಪೂಜ್ಯ ಜಗದ್ಗುರುಗಳು, ಗುರುಗಳು ಹಾಗೂ ತಮ್ಮ ಸಮುದಾಯದ ಸದಸ್ಯರಿಗಾಗಿ ಅವರು ನಿರಂತರ ಪ್ರಾರ್ಥನೆ ಸಲ್ಲಿಸುತ್ತಿದ್ದರು. 

ಶಿಲುಬೆ: ಪ್ರೀತಿಯ ಮಾರ್ಗ

ಸಹೋದರಿ ದುಲ್ಚಿಸ್ಸಿಮಾ ಅವರ ಆರಂಭಿಕ ವಾಗ್ದಾನಗಳ ನಂತರದ ಜೀವನವು ದೀರ್ಘಕಾಲದ ಅನಾರೋಗ್ಯದಿಂದ ಗುರುತಿಸಲ್ಪಟ್ಟಿತು—ಮೌನದಲ್ಲೇ ಅನುಭವಿಸಿದ ಒಂದು ಆಂತರಿಕ ಪರೀಕ್ಷೆ, ಅದು ಅವರ ಪಾವಿತ್ರ್ಯದ ಮೌನ ಮಾರ್ಗವಾಗಿ ರೂಪುಗೊಂಡಿತು. ಸಕ್ರಿಯ ಸಹೋದರಿಯಾಗಿ ಸೇವೆ ಸಲ್ಲಿಸಿದ್ದ ಅವರು ಹಾಸಿಗೆಗೆ ಸೀಮಿತರಾದರೂ, ಅದನ್ನೇ ತಮ್ಮ ಕರೆಯಾಗಿ ಅಪ್ಪಿಕೊಂಡರು; ದೇಹ ದುರ್ಬಲಗೊಳ್ಳುತ್ತಿದ್ದಂತೆ ಅವರ ಆಧ್ಯಾತ್ಮಿಕ ಜೀವನ ಮತ್ತಷ್ಟು ಆಳಗೊಂಡಿತು.

ಅವರಲ್ಲಿ ವಿಶೇಷವಾದ ಶಾಂತಿ ಕಂಡುಬರುತ್ತಿತ್ತು. ಅವರ ದುರ್ಬಲ ದೇಹದಿಂದಲೇ ಬೆಳಕು ಹರಿಯುವಂತಿತ್ತು. ಅವರ ಹಾಸಿಗೆ ಬಲಿಪೀಠದಂತೆ ರೂಪುಗೊಂಡು, ಮೌನದಲ್ಲಿ ಅವರು ಮಧ್ಯಸ್ಥ ಪ್ರಾರ್ಥನೆಯ ಶಕ್ತಿಯುತ ಸೇವೆಯನ್ನು ನೆರವೇರಿಸಿದರು.

1933ರಲ್ಲಿ ಬ್ರ್ಜೆಝಿಯೆ ಎಂಬ ಸ್ಥಳದಲ್ಲಿ ಅಂತಿಮ ಅಭಿಷೇಕದ ಸ್ವೀಕರಿಸಿದ ಅವರು, ತೀವ್ರವಾದ ದುಃಖದ ನಡುವೆಯೂ ರೋಗಿಗಳನ್ನು ಭೇಟಿ ಮಾಡಿ ತಮ್ಮ ಭಕ್ತಿಯಿಂದ ಸುತ್ತಮುತ್ತಲವರನ್ನು ಪ್ರೇರೇಪಿಸುತ್ತಿದ್ದರು. ತಮ್ಮ ನೋವನ್ನು ಕ್ರಿಸ್ತನ ನೋವಿನೊಂದಿಗೆ ಏಕೀಕರಿಸಿದ ಅವರು, ಕ್ರಿಸ್ತನ ಗಾಯಗಳಲ್ಲಿ ಮೌನವಾಗಿ ಪಾಲುಗೊಳ್ಳುವ ಸ್ಟಿಗ್ಮಾಟಾ ಅನುಭವವನ್ನು ಪಡೆದಿದ್ದಾರೆಂದು ನಂಬಲಾಗಿದೆ. ಇದನ್ನು ಇತರರಿಗಾಗಿ ಪ್ರಾಯಶ್ಚಿತ್ತವಾಗಿ ಸ್ವೀಕರಿಸಿ, “ನನ್ನ ಆತ್ಮನೇ, ಯೇಸು, ನನಗೆ ಜೀವವನ್ನು ನೀಡು” ಎಂದು ಅವರು ಭಕ್ತಿಯಿಂದ ಪ್ರಾರ್ಥಿಸುತ್ತಿದ್ದರು.

ಯೂರೋಪ್ ಎದುರಿಸಬೇಕಾಗಿದ್ದ ಸಂಕಷ್ಟಗಳನ್ನು ಮುಂಚಿತವಾಗಿ ಅರಿತಿದ್ದರೂ, ಅವರು ಭಯದಿಂದಲ್ಲ, ಬದಲಾಗಿ ಆಳವಾದ ನಿಷ್ಠೆಯಿಂದ ಪ್ರತಿಕ್ರಿಯಿಸಿದರು—ಧರ್ಮಸಭೆ, ಜಗದ್ಗುರುಗಳು ಹಾಗೂ ಸಂಕಷ್ಟದಲ್ಲಿದ್ದ ಲೋಕದತ್ತ ಅವರ ಪ್ರೀತಿ ಅಚಲವಾಗಿ ಉಳಿಯಿತು. 

ಅವರ ನಿಷ್ಠೆಯ ಸಾಕ್ಷಿ

1935ರ ಏಪ್ರಿಲ್ 18ರಂದು ಸಹೋದರಿ ಮರಿಯಾ ದುಲ್ಚಿಸ್ಸಿಮಾ ಶಾಶ್ವತ ಅಭಿಷೇಕ ಸ್ವೀಕರಿಸಿ, ಕೇವಲ ಒಂದು ವರ್ಷದ ನಂತರ 1936ರ ಮೇ 18ರಂದು ಬ್ರ್ಜೆಝಿಯೆ ನಾದ್ ಓದ್ರಾ ಎಂಬ ಸ್ಥಳದಲ್ಲಿ 26ನೇ ವಯಸ್ಸಿನಲ್ಲಿ ಪ್ರಭುವಿನಲ್ಲಿ ವಿಶ್ರಮಿಸಿದರು.

ದೇವರ ಕರುಣೆಯ ಮೇಲೆ ಪೂರ್ಣ ನಂಬಿಕೆಯಿಂದ, ದೇವರ ಚಿತ್ತವೆಂದು ಅಂತ್ಯವನ್ನು ವಿನಯದಿಂದ ಸ್ವೀಕರಿಸಿದ ಅವರು, ಧರ್ಮಕೇಂದ್ರ ದೇವಾಲಯದ ಹಳೆಯ ಸಮಾಧಿಯಲ್ಲಿ ಅಂತ್ಯಸಂಸ್ಕಾರ ಹೊಂದಿದರು. ತಮ್ಮ ಜೀವನಕಾಲದಲ್ಲಿಯೇ ವಿಶ್ವಾಸಿಗಳಿಂದ ಅಪಾರ ಗೌರವ ಮತ್ತು ಪ್ರೀತಿ ಪಡೆದಿದ್ದರು.

ಸಹೋದರಿ ಮರಿಯಾ ದುಲ್ಚಿಸ್ಸಿಮಾ ಅವರ ಅಸಾಧಾರಣ ಜೀವನದ ಸ್ಮರಣೆ ಇಂದಿಗೂ ಜೀವಂತವಾಗಿದೆ. ಅವರ ಸಮಾಧಿಯ ಮೇಲಿರುವ ಹೂಗಳು ಒಣಗದಂತೆ ಕಾಣುತ್ತವೆ; ಬೆಳಗುವ ದೀಪಗಳು ಆರದಂತೆ ಭಕ್ತಿಯ ನಿರಂತರ ಸಾಕ್ಷಿಯಾಗಿವೆ.

1999ರಲ್ಲಿ ಅವರ ಧನ್ಯೀಕರಣಕ್ಕಾಗಿ ಧರ್ಮಪ್ರಾಂತ್ಯ ಮಟ್ಟದ ಪ್ರಕ್ರಿಯೆ ಆರಂಭವಾಗಿ 2019ರಲ್ಲಿ ಪೂರ್ಣಗೊಂಡಿದ್ದು, ವ್ಯಾಟಿಕನ್ ಹಂತದ ಪ್ರಕ್ರಿಯೆ ಮುಂದುವರಿಯುತ್ತಿದೆ. 

ನಮ್ಮ ಕಾಲಕ್ಕೆ ಭರವಸೆಯ ಬೆಳಕು

2026ರ ಫೆಬ್ರವರಿ 7ರಂದು ಆಚರಿಸಲಾದ 116ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅನೇಕ ವಿಶ್ವಾಸಿಗಳು ಸಹೋದರಿ ದುಲ್ಚಿಸ್ಸಿಮಾ ಅವರ ಮಧ್ಯಸ್ಥಿಕೆಗೆ ಪ್ರಾರ್ಥಿಸಲು ಒಂದಾಗಿ ಸೇರಿದರು. ಅವರ ಈ ಸಮಾಗಮವೇ ಇಂದಿಗೂ ಜೀವಂತವಾಗಿರುವ ಅವರ ಆಧ್ಯಾತ್ಮಿಕ ಪರಂಪರೆಯ ಸಾಕ್ಷಿಯಾಯಿತು.

ಸಹೋದರಿ ದುಲ್ಚಿಸ್ಸಿಮಾ ಪರಂಪರೆಯ ಸಾಮಾನ್ಯ ಕಲ್ಪನೆಗಳಿಗೆ ವಿರುದ್ಧವಾದ ಸಾಕ್ಷಿಯನ್ನು ನೀಡಿದರು—ಪವಿತ್ರತೆ ಲೋಕಕ್ಕೆ ಗೋಚರಿಸುವ ಅಸಾಮಾನ್ಯ ಸಾಧನೆಗಳಲ್ಲೇ ಅಲ್ಲ, ಪ್ರತಿದಿನವೂ ದೇವರಿಗೆ “ಇಲ್ಲಿದ್ದೇನೆ” ಎಂದು ನಿಷ್ಠೆಯಿಂದ ಹೇಳುವ ಸರಳ ಬದುಕಿನಲ್ಲಿ ಹುಟ್ಟುತ್ತದೆ ಎಂಬುದನ್ನು ಅವರು ಬೋಧಿಸಿದರು; ಕಣ್ಣೀರಿನ ಮಧ್ಯೆಯೂ ದೇವರತ್ತ ತೋರುವ ಆ ನಿಷ್ಠೆಯೇ ಪವಿತ್ರತೆಯ ಮೂಲವೆಂದು ತೋರಿಸಿದರು.

ಅವರ ಕಿರು ಹಾಗೂ ಮೌನ ಜೀವನವನ್ನು ಕೃಪೆಯು ಪ್ರಕಾಶಮಾನ ಬೆಳಕಾಗಿ ರೂಪಾಂತರಿಸಿದಂತೆ, ಅವರ ಜೀವನ ಇನ್ನೂ ಪ್ರಕಾಶಿಸುತ್ತಿದೆ. ಶಿಲುಬೆಯ ನೆರಳು ನಮಗೆ ನಿಜವಾದ ಕ್ರೈಸ್ತ ಜೀವನವು ದುಃಖವಿಲ್ಲದ ಜೀವನವಲ್ಲ; ದುಃಖಕ್ಕಿಂತ ಬಲವಾದ ಪ್ರೀತಿಯ ಸಾಕ್ಷಿಯೇ ಕ್ರೈಸ್ತ ಜೀವನವೆಂದು ನೆನಪಿಸುತ್ತದೆ.

ಮೌನ ಸಾಕ್ಷಿಯಾದ ಸಹೋದರಿ ದುಲ್ಚಿಸ್ಸಿಮಾ ಇಂದಿಗೂ ಕ್ರೈಸ್ತರನ್ನು ಸ್ವರ್ಗದತ್ತ ದಾರಿ ತೋರಿಸುತ್ತಾ—ನಂಬಲು, ಸಹಿಸಲು ಮತ್ತು ಅಳತೆಯಿಲ್ಲದ ಪ್ರೀತಿಯನ್ನು ಬದುಕಲು ಆಹ್ವಾನಿಸುತ್ತಿದ್ದಾರೆ. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

23 ಫೆಬ್ರವರಿ 2026, 21:14