ಹುಡುಕಿ

Mexican drug lord Nemesio Oseguera, commonly known as "El Mencho," killed in military operation, triggering blockades in Mexico Mexican drug lord Nemesio Oseguera, commonly known as "El Mencho," killed in military operation, triggering blockades in Mexico 

ಮೆಕ್ಸಿಕೋ ದೇಶದಲ್ಲಿ ಹಿಂಸಾಚಾರದ ಹಿನ್ನೆಲೆ, ಧರ್ಮಾಧ್ಯಕ್ಷರರಿಂದ ಶಾಂತಿಗೆ ಕರೆ

ಸೈನಿಕ ಕಾರ್ಯಾಚರಣೆಯಲ್ಲಿ ಮೆಕ್ಸಿಕನ್ ಮಾದಕವಸ್ತು ಗುಂಪಿನ ನಾಯಕರ ಹತ್ಯೆಯ ನಂತರ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ಉಂಟಾದ ಹಿನ್ನೆಲೆ, ಮೆಕ್ಸಿಕೋ ದೇಶದ ಪೂಜ್ಯ ಧರ್ಮಾಧ್ಯಕ್ಷರು ಶಾಂತಿ, ಪ್ರಾರ್ಥನೆ ಮತ್ತು ವಿವೇಕವನ್ನು ಪಾಲಿಸುವಂತೆ ಕರೆ ನೀಡಿದ್ದು, ಈ ಅವಧಿಯಲ್ಲಿ ಅನಾವಶ್ಯಕ ಪ್ರಯಾಣಗಳನ್ನು ತಪ್ಪಿಸಲು ಎಚ್ಚರಿಕೆ ನೀಡಿದ್ದಾರೆ.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

‘ನಾನು ಶಾಂತಿಸಮಾಧಾನವನ್ನು ನಿಮಗೆ ಬಿಟ್ಟುಹೋಗುತ್ತೇನೆ; ನನ್ನ ಶಾಂತಿಸಮಾಧಾನವನ್ನು ನಿಮಗೆ ಕೊಡುತ್ತೇನೆ. ಈ ಲೋಕವು ಕೊಡುವ ರೀತಿಯಲ್ಲಿ ನಾನದನ್ನು ನಿಮಗೆ ಕೊಡುವುದಿಲ್ಲ. ನೀವು ಹೃದಯದಲ್ಲಿ ಕಳವಳಗೊಳ್ಳದಿರಿ, ಭಯಪಡಬೇಡಿ. (ಯೋವಾನ್ನ 14:27)

ಈ ದೈವವಾಕ್ಯದ ಆತ್ಮವನ್ನು ಆಧಾರವಾಗಿಸಿಕೊಂಡು, ಮೆಕ್ಸಿಕೋ ದೇಶದ ಪೂಜ್ಯ ಧರ್ಮಾಧ್ಯಕ್ಷರು ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ “ ತೀರ್ಥಯಾತ್ರಿಕರಾಗಿ ಸಾಗುತ್ತಿರುವ ಮೆಕ್ಸಿಕೋದ ದೇವ ಜನರಿಗೆ” ಎಂಬ ಪಾಲನಾ ಪತ್ರವನ್ನು ಪ್ರಕಟಿಸಿದ್ದಾರೆ.

ಮೆಕ್ಸಿಕನ್ ಧರ್ಮಾಧ್ಯಕ್ಷರ ಸಭೆಯ ಅಧ್ಯಕ್ಷರಾದ ಪೂಜ್ಯ ಧರ್ಮಾಧ್ಯಕ್ಷ ರಾಮೋನ್ ಕ್ಯಾಸ್ಟ್ರೊ ಕ್ಯಾಸ್ಟ್ರೊ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಪೂಜ್ಯ ಧರ್ಮಾಧ್ಯಕ್ಷ ಹೆಕ್ಟರ್ ಎಂ. ಪೆರೆಸ್ ವಿಲ್ಲಾರ್ರಿಯಲ್ ಸಹಿ ಮಾಡಿದ ಈ ಪತ್ರದಲ್ಲಿ, ರಾಷ್ಟ್ರಕ್ಕೆ ಅಗತ್ಯವಾದ ಶಾಂತಿಗಾಗಿ ಪ್ರಾರ್ಥನೆಗಳನ್ನು ಹೆಚ್ಚಿಸಲು ವಿಶ್ವಾಸಿಗಳಿಗೆ ಮನವಿ ಮಾಡಲಾಗಿದೆ. ಜೊತೆಗೆ, ದೇಶದಲ್ಲಿ ಉದ್ಭವಿಸಿರುವ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಅನಾವಶ್ಯಕ ಪ್ರಯಾಣಗಳನ್ನು ತಪ್ಪಿಸಿ ಜಾಗರೂಕತೆಯಿಂದ ನಡೆದುಕೊಳ್ಳುವಂತೆ ಧರ್ಮಸಭೆ ಎಚ್ಚರಿಕೆ ನೀಡಿದೆ. 

ವಿವೇಕ ಮತ್ತು ಪ್ರಾರ್ಥನೆಗೆ ಆಹ್ವಾನ

“ನಮ್ಮ ದೇಶದ ವಿವಿಧ ಭಾಗಗಳಲ್ಲಿ ಅಪರಾಧ ಗುಂಪಿನ ನಾಯಕರ ವಿರುದ್ಧ ನಡೆದ ಕಾರ್ಯಾಚರಣೆಯ ಪ್ರತಿಕ್ರಿಯೆಯಾಗಿ ನಡೆಯುತ್ತಿರುವ ಹಿಂಸಾಚಾರದ ಮಧ್ಯೆ, ನಿಮ್ಮ ಪ್ರತಿಯೊಬ್ಬರಿಗೂ, ನಿಮ್ಮ ಕುಟುಂಬಗಳಿಗೂ ಹಾಗೂ ಸಮುದಾಯಗಳಿಗೂ ಹತ್ತಿರವಾಗಿರಲು ನಾವು ಬಯಸುತ್ತೇವೆ; ನಿಮ್ಮ ಚಿಂತೆಗಳನ್ನು ಹಂಚಿಕೊಳ್ಳುತ್ತಾ ವಿವೇಕಯುತರಾಗಿರಲು ಮತ್ತು ಪ್ರಾರ್ಥನೆಗೆ ನಿಮ್ಮನ್ನು ಆಹ್ವಾನಿಸುತ್ತೇವೆ” ಎಂದು ಕರೆ ನೀಡಿದ್ದಾರೆ.

“ಧಾರ್ಮಿಕ ಸೇವಾ ಹಾಗೂ ಸಹೋದರತ್ವದ ಮನೋಭಾವದೊಂದಿಗೆ, ವೈಯಕ್ತಿಕ ಹಾಗೂ ಸಮುದಾಯ ಭದ್ರತಾ ಕ್ರಮಗಳನ್ನು ಬಲಪಡಿಸಿ, ಅಗತ್ಯವಿರುವ ಸಂದರ್ಭದಲ್ಲಿ ಮನೆಗಳಲ್ಲೇ ಉಳಿದುಕೊಳ್ಳಿ ಮತ್ತು ಅನಾವಶ್ಯಕ ಪ್ರಯಾಣಗಳನ್ನು ತಪ್ಪಿಸಿ, ನಾಗರಿಕ ಅಧಿಕಾರಿಗಳ ಸೂಚನೆಗಳನ್ನು ಸದಾ ಪಾಲಿಸಿರಿ” ಎಂದು ಮನವಿ ಮಾಡಿದ್ದಾರೆ.

ಮೆಕ್ಸಿಕನ್  ಧರ್ಮಾಧ್ಯಕ್ಷರ ಸಭೆ ವಿಶ್ವಾಸಿಗಳನ್ನು “ನಮ್ಮ ರಾಷ್ಟ್ರಕ್ಕೆ ಅತ್ಯಂತ ಅಗತ್ಯವಾದ ಶಾಂತಿಗಾಗಿ—ಕುಟುಂಬಗಳಲ್ಲಿ, ಧರ್ಮಕೇಂದ್ರಗಳಲ್ಲಿ, ಭಾನುವಾರದ ಪವಿತ್ರ ಬಲಿಪೂಜೆಯಲ್ಲಿ ಹಾಗೂ ಪ್ರತಿಯೊಂದು ಸಮುದಾಯದಲ್ಲಿಯೂ ಪ್ರಾರ್ಥನೆಗಳನ್ನು ತೀವ್ರಗೊಳಿಸಲು” ಆಹ್ವಾನಿಸಿದೆ. 

ಶಾಂತಿಯ ರಾಣಿಯಾದ ಗ್ವಾಡಲೂಪೆಯ ಮಾತೆಗೆ ಮೆಕ್ಸಿಕೋ ಸಮರ್ಪಣೆ

ಈ ಮನೋಭಾವದೊಂದಿಗೆ, ಮೆಕ್ಸಿಕೋ ದೇಶದ ಪೂಜ್ಯ ಧರ್ಮಾಧ್ಯಕ್ಷರು ತಮ್ಮ ಪ್ರಾರ್ಥನೆ “ಇತಿಹಾಸದ ಪ್ರಭುವೂ ಹಾಗೂ ಶಾಂತಿಯ ರಾಜನಾದ ಯೇಸು ಕ್ರಿಸ್ತನಿಗೆ ವಿಶ್ವಾಸಭರಿತ ಮನವಿ ಆಗಿರಲಿ; ಜೊತೆಗೆ ಸೌಹಾರ್ದ ಮತ್ತು ಸಹೋದರತ್ವದ ಬೀಜ ಬಿತ್ತುವ ಬದ್ಧತೆಯೂ ಆಗಿರಲಿ” ಎಂಬ ಆಶೆಯನ್ನು ವ್ಯಕ್ತಪಡಿಸಿದ್ದಾರೆ.

ಕೊನೆಯಲ್ಲಿ, ಪೂಜ್ಯ ಧರ್ಮಾಧ್ಯಕ್ಷರು ಶಾಂತಿಯ ರಾಣಿಯಾದ ಗ್ವಾಡಲೂಪೆಯ ಮಾತೆಯ ಮಧ್ಯಸ್ಥಿಕೆಗೆ ಸಂಪೂರ್ಣ ಮೆಕ್ಸಿಕೋ ದೇಶವನ್ನು ಸಮರ್ಪಿಸಿ, “ಅವರು ತಮ್ಮ ಹೊದಿಕೆಯಲ್ಲಿ ನಮ್ಮನ್ನು ಮರೆಮಾಚಿ, ನಮ್ಮ ಕುಟುಂಬಗಳನ್ನು ರಕ್ಷಿಸಿ, ನ್ಯಾಯ, ಶಾಂತಿ ಮತ್ತು ಭರವಸೆಯ ಮಾರ್ಗಗಳನ್ನು ನಿರ್ಮಿಸಲು ನೆರವಾಗಲಿ” ಎಂದು ಪ್ರಾರ್ಥಿಸಿದ್ದಾರೆ. ಇದೇ ವೇಳೆ, ಪ್ರಭುವಿನ ಶಕ್ತಿಗಾಗಿ ಪ್ರಾರ್ಥಿಸಿ, “ಈ ಕಠಿಣ ಕ್ಷಣಗಳನ್ನು ವಿವೇಕ, ಏಕತೆ, ಸಹಾನುಭೂತಿ ಮತ್ತು ನಂಬಿಕೆಯೊಂದಿಗೆ ಎದುರಿಸಲು ಅನುಗ್ರಹಿಸಲಿ” ಎಂಬ ಬಿನ್ನಹವನ್ನೂ ಸಲ್ಲಿಸಿದ್ದಾರೆ.

‘ಎಲ್ ಮೆಂಚೋ’ ಹತ್ಯೆಯ ಬಳಿಕ ಭುಗಿಲೆದ್ದ ಹಿಂಸಾಚಾರ 

ರಾಯಿಟರ್ಸ್ ವರದಿ ಪ್ರಕಾರ, ಮೆಕ್ಸಿಕೋ ಭದ್ರತಾ ಪಡೆಗಳು ಸೈನಿಕ ಕಾರ್ಯಾಚರಣೆಯಲ್ಲಿ ಪ್ರಭಾವಶಾಲಿ ಜಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್‌ನ ನಾಯಕ ನೆಮೆಸಿಯೋ ರೂಬೆನ್ ಒಸೆಗುೆರಾ ಸರ್ವಾಂಟೆಸ್, ಅಲಿಯಾಸ್ ‘ಎಲ್ ಮೆಂಚೋ’ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿವೆ. ಈ ಕಾರ್ಯಾಚರಣೆ ದೇಶದ ಅತ್ಯಂತ ಭೀತಿದಾಯಕ ಅಪರಾಧ ಗುಂಪುಗಳಲ್ಲೊಂದಕ್ಕೆ ದೊಡ್ಡ ಹೊಡೆತವೆಂದು ಪರಿಗಣಿಸಲಾಗಿದೆ.

ಅವರ ಸಾವು ಮೆಕ್ಸಿಕೋ ಅಧಿಕಾರಿಗಳು ಹಾಗೂ ಅಮೆರಿಕಾ–ಮೆಕ್ಸಿಕೋ ಭದ್ರತಾ ಸಹಕಾರಕ್ಕೆ ಮಹತ್ವದ ಜಯವೆಂದು ಹೇಳಲ್ಪಟ್ಟಿದ್ದರೂ, ಅದರ ನಂತರ ಕಾರ್ಟೆಲ್ ವ್ಯಾಪಕ ಪ್ರತೀಕಾರಾತ್ಮಕ ಹಿಂಸಾಚಾರವನ್ನು ಪ್ರಾರಂಭಿಸಿದೆ. ವಿವಿಧ ಮೆಕ್ಸಿಕನ್ ರಾಜ್ಯಗಳಲ್ಲಿ ರಸ್ತೆ ತಡೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಗಳು ವರದಿಯಾಗಿವೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

23 ಫೆಬ್ರವರಿ 2026, 21:12