ಇಂಡೋನೇಷ್ಯಾದ ಧರ್ಮಸಭೆ ಮಾನವ ಕಳ್ಳಸಾಗಣೆ ವಿರುದ್ಧ ಹೋರಾಟವನ್ನು ಬಲಪಡಿಸುತ್ತಿದೆ
ಲೇಖಕರು: ವಂ. ಗುರು ಕಶ್ಮೀರ್ ನೇಮ,SVD
ಪೂರ್ವ ಇಂಡೋನೇಷ್ಯಾದ ಫ್ಲೋರೆಸ್ ಪ್ರದೇಶದಲ್ಲಿರುವ ಕಥೋಲಿಕ ಧರ್ಮಸಭೆ, ಸಿಕ್ಕಾ ಪ್ರಾಂತ್ಯದ ಒಂದು ನೈಟ್‌ಕ್ಲಬ್‌ನಲ್ಲಿ ಶೋಷಣೆಗೆ ಒಳಗಾದರೆಂದು ಹೇಳಲಾಗಿರುವ 13 ಯುವತಿಯರನ್ನು ರಕ್ಷಿಸಿದ ಬಳಿಕ ಮಾನವ ಕಳ್ಳಸಾಗಣೆ ವಿರುದ್ಧದ ತನ್ನ ಕಾರ್ಯಚಟುವಟಿಕೆಗಳನ್ನು ತೀವ್ರಗೊಳಿಸಿದೆ.
17ರಿಂದ 26 ವರ್ಷದೊಳಗಿನ ಈ ಯುವತಿಯರು ಪಶ್ಚಿಮ ಜಾವಾದ ಮೂಲದವರಾಗಿದ್ದು, ದೈಹಿಕ ಹಿಂಸೆ, ಲೈಂಗಿಕ ಶೋಷಣೆ ಹಾಗೂ ಗಂಭೀರ ಕಾರ್ಮಿಕ ದೌರ್ಜನ್ಯವನ್ನು ಅನುಭವಿಸಿದ್ದಾಗಿ ತಿಳಿದು, 2026ರ ಜನವರಿಯಲ್ಲಿ ರಕ್ಷಣೆಗೆ ಮೊರೆ ಹೋದರು. ಪ್ರಸ್ತುತ ಅವರು Tim Relawan untuk Kemanusiaan Flores (TRUK-F) ನಡೆಸುವ ಸುರಕ್ಷಿತ ಆಶ್ರಯಗೃಹದಲ್ಲಿ ವಾಸಿಸುತ್ತಿದ್ದು, ಈ ಮಾನವೀಯ ಜಾಲಕ್ಕೆ ದಿವೈನ್ ವರ್ಡ್ ಸಭೆ (SVD) ಹಾಗೂ ಪವಿತ್ರ ಆತ್ಮರ ಸೇವಕಿಯರ ಮಿಷನರಿ ಸಹೋದರಿಯರ ಸಭೆ (SSpS) ಬೆಂಬಲ ನೀಡುತ್ತಿದೆ.
ಈ ಆಶ್ರಯದಲ್ಲಿ ಯುವತಿಯರಿಗೆ ಮಾನಸಿಕ ಹಾಗೂ ಧಾರ್ಮಿಕ ಪಾಲನಾ ಸಹಾಯ ಒದಗಿಸಲಾಗುತ್ತಿದ್ದು, ನ್ಯಾಯಾಂಗ ಪ್ರಕ್ರಿಯೆ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಕಾನೂನು ಸಹಾಯವನ್ನೂ ನೀಡಲಾಗುತ್ತಿದೆ.
ಜವಾಬ್ದಾರಿಯುತರಾಗಲು ಸಾರ್ವಜನಿಕರಿಗೆ ಕರೆ
ಈ ಘಟನೆ ಪೂರ್ವ ನೂಸಾ ತೆಂಗ್ಗಾರಾ ಪ್ರಾಂತ್ಯದಲ್ಲಿ ವ್ಯಾಪಕ ಚಿಂತೆಯನ್ನು ಹುಟ್ಟುಹಾಕಿದೆ. ಫೆಬ್ರವರಿ 9ರಂದು TRUK-F ಪ್ರಮುಖ ಪಾತ್ರವಹಿಸಿರುವ ಸಿಕ್ಕಾ ಮಾನವ ಹಕ್ಕು ಜಾಲ (Jaringan HAM Sikka) ಮೌಮೆರೆ ನಗರದಲ್ಲಿನ ಸ್ಥಳೀಯ ಶಾಸನ ಮಂಡಳಿ (DPRD) ಮುಂದೆ ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಿತು.
ಗುರುಗಳು, ಧಾರ್ಮಿಕ ಸಹೋದರಿಯರು, ಸೆಮಿನರಿ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಮಾನವ ಹಕ್ಕು ಹೋರಾಟಗಾರರು ನೈಟ್‌ಕ್ಲಬ್‌ನಲ್ಲಿ ನಡೆದಿರುವುದಾಗಿ ಆರೋಪಿಸಲಾದ ದೌರ್ಜನ್ಯಗಳ ಕುರಿತು ಸಮಗ್ರ ತನಿಖೆ ಮತ್ತು ದೃಢವಾದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಧರ್ಮಸಭೆಯ ಪ್ರತಿನಿಧಿಗಳು ತಮ್ಮ ಕ್ರಮವು ಒಂದೇ ಸಂಸ್ಥೆಯನ್ನು ಗುರಿಯಾಗಿಸಿಕೊಂಡದ್ದಲ್ಲ ಎಂದು ಸ್ಪಷ್ಟಪಡಿಸಿದರು; ಬದಲಾಗಿ ಅಸುರಕ್ಷಿತ ಕಾರ್ಮಿಕರಿಗೆ ಸಮಗ್ರ ರಕ್ಷಣೆಯನ್ನು ಖಚಿತಪಡಿಸಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದೇ ಉದ್ದೇಶ ಎಂದು ಹೇಳಿದರು. ಮನರಂಜನಾ ಕೇಂದ್ರಗಳ ಮೇಲಿನ ಮೇಲ್ವಿಚಾರಣೆಯನ್ನು ಬಲಪಡಿಸಿ, ಈಗಿರುವ ಮಾನವ ಕಳ್ಳಸಾಗಣೆ ವಿರೋಧಿ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಅವರು ಅಧಿಕಾರಿಗಳನ್ನು ಮನವಿ ಮಾಡಿದರು.
ಕಳವಳಕಾರಿ ಮರುಕಳಿಸುವ ಪ್ರವೃತ್ತಿ
SSpS ಸಭೆಯ ಸಹೋದರಿ ಫ್ರಾನ್ಸಿಸ್ಕಾ ಇಮಾಕುಲಾಟಾ, TRUK-F ನಿರ್ದೇಶಕಿ, 2000ದಿಂದಲೇ ಮಾನವ ಕಳ್ಳಸಾಗಣೆ ಬಲಿಪಶುಗಳಿಗೆ ಸಂಸ್ಥೆ ನೆರವು ನೀಡುತ್ತಿದೆ ಎಂದು ತಿಳಿಸಿದ್ದಾರೆ. ಇತ್ತೀಚಿನ ಘಟನೆ ಕೂಡ ಮರುಕಳಿಸುವತ್ತಿರುವ ಮಾದರಿಯ ಭಾಗವಾಗಿದೆ ಎಂದು ಅವರು ವಿವರಿಸಿದರು.
2021ರಲ್ಲಿ ಪಶ್ಚಿಮ ಜಾವಾದ 17 ಅಪ್ರಾಪ್ತ ವಯಸ್ಕರು ಸಿಕ್ಕಾ ಪ್ರದೇಶದ ಮನರಂಜನಾ ಕೇಂದ್ರಗಳಲ್ಲಿ ಶೋಷಣೆಗೆ ಒಳಗಾದರೆಂದು ಆರೋಪಿಸಲಾಯಿತು. 2024ರಲ್ಲಿ ಮೌಮೆರೆ ಮೂಲದ ಎಂಟು ಪುರುಷರನ್ನು ಪೂರ್ವ ಕಾಲಿಮಂತಾನ್‌ನ ತಾಳೆ ಎಣ್ಣೆ ತೋಟಗಳಲ್ಲಿ ಕೆಲಸಕ್ಕೆ ಕಳುಹಿಸಲಾಗಿದ್ದು, ಅವರಲ್ಲಿ ಒಬ್ಬರು ಮೃತಪಟ್ಟರು ಎಂಬ ಮಾಹಿತಿ ದೊರಕಿದೆ. ಪ್ರಸ್ತುತ ಪ್ರಕರಣ ಕಾನೂನು ತನಿಖೆಯಲ್ಲಿಯೇ ಮುಂದುವರಿಯುತ್ತಿದೆ.
“ಉನ್ನತ ವೇತನ, ಉಚಿತ ವಸತಿ ಹಾಗೂ ಉತ್ತಮ ಉದ್ಯೋಗದ ಭರವಸೆ ನೀಡುವುದು ಸಾಮಾನ್ಯ ವಿಧಾನ,” ಎಂದು ಸಹೋದರಿ ಇಮಾಕುಲಾಟಾ ತಿಳಿಸಿದ್ದಾರೆ. ಯುವತಿಯರನ್ನು ನೈಟ್‌ಲೈಫ್ ಕೇಂದ್ರಗಳಲ್ಲಿ ಗಾಯಕಿಯರಾಗಿ ಕೆಲಸ ನೀಡುವ ಹೆಸರಿನಲ್ಲಿ ಸೆಳೆಯಲಾಗುತ್ತದೆ; ಇನ್ನಿತರರನ್ನು ಫ್ಲೋರೆಸ್ ಹೊರಗಿನ ಸ್ಥಿರ ಉದ್ಯೋಗದ ಭರವಸೆ ನೀಡುವ ಏಜೆಂಟರು ಮೋಸಗೊಳಿಸುತ್ತಾರೆ.
ಮಹಿಳೆಯರು ಮತ್ತು ಮಕ್ಕಳು, ವಿಶೇಷವಾಗಿ ಕಡಿಮೆ ಶಿಕ್ಷಣ ಹಾಗೂ ಆರ್ಥಿಕ ಅವಕಾಶಗಳ ಕೊರತೆಯಿರುವವರು, ಅತ್ಯಂತ ಅಸುರಕ್ಷಿತರಾಗಿದ್ದಾರೆ ಎಂದು ಅವರು ಒತ್ತಿಹೇಳಿದರು. ಆದರೆ ಉದ್ಯೋಗಕ್ಕಾಗಿ ವಲಸೆ ಹೋಗುವ ಬಡತನದ ಒತ್ತಡದಿಂದ ಪುರುಷರೂ ಅಪಾಯಕ್ಕೆ ಒಳಗಾಗುತ್ತಾರೆ. “ಒಬ್ಬ ಪುರುಷ ಮೃತಪಟ್ಟಾಗ ಅಥವಾ ಗಂಭೀರ ಹಾನಿಗೊಳಗಾದಾಗ ಅದರ ಪರಿಣಾಮವನ್ನು ಸಂಪೂರ್ಣ ಕುಟುಂಬವೇ ಅನುಭವಿಸುತ್ತದೆ,” ಎಂದು ಅವರು ಹೇಳಿದರು.
ಕಾನೂನುಗಳು ಮತ್ತು ಸವಾಲುಗಳು
ಮಾನವ ಕಳ್ಳಸಾಗಣೆ ನಿರ್ಮೂಲನೆಗಾಗಿ ಇಂಡೋನೇಷ್ಯಾ 2007ರ ಸಂಖ್ಯೆ 21ರ ಕಾನೂನನ್ನು ಜಾರಿಗೆ ತಂದಿದ್ದು, ಸಂತ್ರಸ್ತರ ರಕ್ಷಣೆಗೆ ಹಾಗೂ ಕಳ್ಳಸಾಗಣೆಯನ್ನು ತಡೆಯಲು ಪ್ರಾದೇಶಿಕ ನಿಯಮಾವಳಿಗಳನ್ನೂ ರೂಪಿಸಿದೆ. ಆದರೆ ಇದರ ಅನುಷ್ಠಾನವು ಎಲ್ಲೆಡೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸಹೋದರಿ ಫ್ರಾನ್ಸಿಸ್ಕಾ ಇಮಾಕುಲಾಟಾ ಗಮನಿಸಿದ್ದಾರೆ.
“ಸಂತ್ರಸ್ತರನ್ನು ಸದಾ ಗೌರವದಿಂದ ನೋಡಲಾಗುವುದಿಲ್ಲ; ಕೆಲ ಸಂದರ್ಭಗಳಲ್ಲಿ ಅವರನ್ನು ಕಳಂಕಿತಗೊಳಿಸಲಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ. ಸರ್ಕಾರದ ಆಶ್ರಯಗೃಹಗಳ ಕೊರತೆ ಹಾಗೂ ಶೋಷಣೆ ನಡೆಯಬಹುದಾದ ಉದ್ಯೋಗ ಸ್ಥಳಗಳ ಮೇಲಿನ ಅಪರ್ಯಾಯ ಮೇಲ್ವಿಚಾರಣೆ ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಅವರು ಸೂಚಿಸಿದರು.
ಸುರಕ್ಷಿತ ಆಶ್ರಯ ನೀಡುವುದನ್ನು ಮೀರಿಸಿ TRUK-F ಕಾನೂನು ವಕಾಲತ್ತು, ಮನೋವೈಕಲ್ಯ ಪರಿಹಾರ ಸಲಹೆ, ತಾಯ್ನಾಡಿಗೆ ಮರಳುವ ಸಹಾಯ, ಶೈಕ್ಷಣಿಕ ಬೆಂಬಲ ಮತ್ತು ಆರ್ಥಿಕ ಸಬಲೀಕರಣ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಜೊತೆಗೆ ಸಮುದಾಯ ಜಾಗೃತಿಗಾಗಿ ಕಾರ್ಯಾಗಾರಗಳು ಹಾಗೂ ಅಭಿಯಾನಗಳನ್ನು ನಡೆಸಿ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಗೌರವವನ್ನು ಉತ್ತೇಜಿಸುತ್ತದೆ.
“ದುಃಖ ಅನುಭವಿಸುವವರಲ್ಲಿ ನಾವು ಕ್ರಿಸ್ತನ ಮುಖವನ್ನು ಕಾಣುತ್ತೇವೆ,” ಎಂದು ಸಹೋದರಿ ಇಮಾಕುಲಾಟಾ ಹೇಳಿದ್ದಾರೆ. ಅನುಮಾನಾಸ್ಪದ ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ನಾಗರಿಕರು ವರದಿ ಮಾಡುವಂತೆ ಅವರು ಮನವಿ ಮಾಡಿದ್ದು, ಮುಂದಾಗುವವರಿಗೆ ರಾಷ್ಟ್ರೀಯ ಕಾನೂನು ರಕ್ಷಣೆಯನ್ನು ಗೌಪ್ಯತೆಯನ್ನು ಖಚಿತಪಡಿಸುತ್ತದೆ ಎಂದು ಒತ್ತಿಹೇಳಿದರು.
ಧಾರ್ಮಿಕ ಪಾಲನಾ ಕಾರ್ಯಭಾರ ಹಾಗೂ ಗುರಿ
SVD ಸಭೆಯ ವಂ. ಗುರು ಒಟ್ಟೋ ಗುಸ್ತಿ ನೆಡೆಗೋಂಗ್ ಮದುಂಗ್, ಲೆಡಲೆರೊದಲ್ಲಿನ Institut Filsafat dan Teknologi Kreatif ಸಂಸ್ಥೆಯ ರೆಕ್ಟರ್ ಹಾಗೂ TRUK-F ಸದಸ್ಯರು, ಮಾನವ ಕಳ್ಳಸಾಗಣೆ ವಿರುದ್ಧ ಧರ್ಮಸಭೆಯ ಬದ್ಧತೆ ಅದರ ಪಾಲನಾ ಸ್ವಭಾವದಲ್ಲೇ ನೆಲೆಗೊಂಡಿದೆ ಎಂದು ತಿಳಿಸಿದ್ದಾರೆ.
“ಮಾನವ ಕಳ್ಳಸಾಗಣೆ ಮಾನವತೆಯ ವಿರುದ್ಧದ ಅಪರಾಧವಾಗಿದ್ದು, ಫ್ಲೋರೆಸ್ ಪ್ರದೇಶವನ್ನು ಇನ್ನೂ ತೀವ್ರವಾಗಿ ಪ್ರಭಾವಿಸುತ್ತದೆ,” ಎಂದು ಅವರು ಹೇಳಿದರು. ಸ್ಥಳೀಯ ನಿವಾಸಿಗಳನ್ನು ಇಂಡೋನೇಷ್ಯಾದ ಇತರ ಪ್ರದೇಶಗಳು ಹಾಗೂ ವಿದೇಶಗಳ ತೋಟಗಳಲ್ಲಿ ಕೆಲಸಕ್ಕೆ ಸೆಳೆಯಲಾಗುತ್ತಿದೆ; ಜೊತೆಗೆ ಇತರ ಪ್ರಾಂತ್ಯಗಳಿಂದ ಬಂದವರೂ ಫ್ಲೋರೆಸ್‌ನಲ್ಲಿ ಬಲಿಯಾಗಿರುವುದು ಕಂಡುಬರುತ್ತಿದೆ.
“ಜನರ ಜೀವನದಲ್ಲಿ ಆಳವಾಗಿ ನೆಲೆಯೂರಿರುವ ಧರ್ಮಸಭೆಯಾಗಿರುವ ನಾವು ನಿರ್ಲಕ್ಷ್ಯವಾಗಿರಲು ಸಾಧ್ಯವಿಲ್ಲ,” ಎಂದು ವಂ. ಗುರು ಮದುಂಗ್ ಹೇಳಿದರು. “ಮಾನವ ಗೌರವ ಮತ್ತು ನ್ಯಾಯವನ್ನು ಗೌರವಿಸುವ, ಸಮಾಜ ನಿರ್ಮಾಣಕ್ಕೆ ನೆರವಾಗುವ, ದೇವರ ವಿಮೋಚಕ ಪ್ರೀತಿಯ ಸಂಕೇತ ಹಾಗೂ ಸಾಧನವಾಗಿರಲು ಧರ್ಮಸಭೆ ಕರೆಯಲ್ಪಟ್ಟಿದೆ.”
ಬಡತನ, ಭ್ರಷ್ಟಾಚಾರ, ದುರ್ಬಲ ಕಾನೂನು ಜಾರಿಗೊಳಿಕೆ ಹಾಗೂ ಸೀಮಿತ ಸಾಮಾಜಿಕ ಪರಿವರ್ತನೆ ಮುಂತಾದ ಸಂರಚನಾ ಅಂಶಗಳು ಕಳ್ಳಸಾಗಣೆಗೆ ಕಾರಣವಾಗುತ್ತಿವೆ ಎಂದು ಅವರು ಗುರುತಿಸಿದರು. ಬಡವರ ಪರವಾದ ಧರ್ಮಸಭೆಯ ವಿಶೇಷ ಆಯ್ಕೆ ಅದರ ಗುರಿಯ ಅವಿಭಾಜ್ಯ ಹಾಗೂ ಅಚಲ ಆಯಾಮವಾಗಿದೆ ಎಂಬುದನ್ನು ಅವರು ನೆನಪಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).