2022.08.04 Trasfigurazione di Bellini 2022.08.04 Trasfigurazione di Bellini 

ಭಾನುವಾರದ ಶುಭಸಂದೇಶದ ಚಿಂತನೆ: ‘ಪರ್ವತದ ಅನುಭವ ಮತ್ತು ಮಠದ ಅಡುಗೆಮನೆಗಳು’

ಧರ್ಮಸಭೆ ತಪಸ್ಸು ಕಾಲದ ಎರಡನೇ ಭಾನುವಾರವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಜೆನ್ನಿ ಕ್ರಾಸ್ಕಾ ಅವರು “ಪರ್ವತದ ಅನುಭವ ಮತ್ತು ಮಠದ ಅಡಿಗೆಮನೆಗಳು” ಎಂಬ ವಿಷಯದ ಮೇಲೆ ಚಿಂತನೆಯನ್ನು ಹಂಚಿಕೊಂಡಿದ್ದಾರೆ.

ಲೇಖಕರು: ಜೆನ್ನಿ ಕ್ರಾಸ್ಕ

ತಪಸ್ಸು ಕಾಲದ ಈ ಎರಡನೇ ಭಾನುವಾರದಲ್ಲಿ, ಧರ್ಮಸಭೆ ರೂಪಾಂತರದ ವೃತ್ತಾಂತವನ್ನು ಪ್ರಕಟಿಸುತ್ತದೆ. ಯೇಸು ಪೇತ್ರ, ಯಾಕೋಬ ಮತ್ತು ಯೋವಾನ್ನರನ್ನು ಉನ್ನತ ಪರ್ವತದ ಮೇಲೆ ಕರೆದೊಯ್ದು, ಅವರ ಮುಂದೆ ರೂಪಾಂತರ ಹೊಂದಿದರು. ಮಹಿಮೆಯ ಬೆಳಕಿನಲ್ಲಿ ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು; ಅವರ ವಸ್ತ್ರಗಳು ಬಿಳುಪಾಗಿ ಹೊಳೆದವು. ಶಿಷ್ಯರು ಯೇಸು ನಿಜವಾಗಿ ಯಾರು ಎಂಬುದನ್ನು ಒಂದು ಕ್ಷಣದ ಮಟ್ಟಿಗೆ ಕಾಣುವ ಅನುಭವ ಪಡೆದರು. ಈ ಘಟನೆ ಪ್ರಕಟನೆಯೂ ಆಗಿತ್ತು, ಸಿದ್ಧತೆಯೂ ಆಗಿತ್ತು — ಕ್ರಿಸ್ತನ ದಿವ್ಯ ಪುತ್ರತ್ವದ ಪ್ರಕಟನೆ; ಮತ್ತು ಶಿಲುಬೆಯ ಸಂಕಟವನ್ನು ಎದುರಿಸಲು ಸಿದ್ಧತೆಯ ಆರಂಭವಾಗಿತ್ತು.

ಪೇತ್ರನ ಪ್ರತಿಕ್ರಿಯೆ ಗಮನಾರ್ಹ. “ಪ್ರಭುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ನೀವು ಇಚ್ಚಿಸಿದರೆ ಇಲ್ಲಿ ಮೂರು ಗುಡಾರಗಳನ್ನು ಕಟ್ಟುತ್ತೇನೆ…” ಎಂಬುದು ಅವನ ಮನೋಭಾವ.  ಆ ಪರ್ವತ ಅನುಭವದಲ್ಲೇ ಅವನು ಉಳಿಯಲು ಬಯಸುತ್ತಾನೆ; ಆ ಪ್ರಕಾಶದ ಮತ್ತು ಸಾಂತ್ವನದ ಕ್ಷಣವನ್ನು ಉಳಿಸಿಕೊಳ್ಳಲು ಬಯಸುತ್ತಾನೆ. ಆದರೆ ತಂದೆಯ ಧ್ವನಿ ಮಧ್ಯೆ ಬರುತ್ತದೆ: “ಈತನು ನನ್ನ ಪ್ರಿಯ ಪುತ್ರನು… ಈತನ ಮಾತನ್ನು ಕೇಳಿರಿ.” ಆ ಆದೇಶ ಕಟ್ಟಲು ಅಲ್ಲ, ಕೇಳಲು. ಮಹಿಮೆಯನ್ನು ಹಿಡಿದುಕೊಳ್ಳಲು ಅಲ್ಲ, ಮಗನನ್ನು ಅನುಸರಿಸಿ ಪರ್ವತದಿಂದ ಇಳಿದು ಜೆರುಸಲೇಮಿನತ್ತ ನಡೆಯಲು.

ತಪಸ್ಸು ಕಾಲ ನಮ್ಮನ್ನೂ ಇದೇ ಲಯಕ್ಕೆ ಆಹ್ವಾನಿಸುತ್ತದೆ: ಏರಿಕೆ, ಭೇಟಿ, ಇಳಿಕೆ. ನಾವು ಪರ್ವತ ಅನುಭವಗಳಾದ ಪ್ರಾರ್ಥನೆಯಲ್ಲಿ ಸ್ಪಷ್ಟತೆ, ಬಲಿಪೂಜೆಯ ಸೌಂದರ್ಯ, ದೇವರ ಸಮೀಪತೆಯನ್ನು ಆಳವಾಗಿ ಅನುಭವಿಸುವ ಕ್ಷಣಗಳನ್ನು ಬಯಸುತ್ತೇವೆ. ಆದರೆ ನಮ್ಮ ಜೀವನದ ಬಹುಪಾಲು ದಿವ್ಯ ಪ್ರಕಾಶದಲ್ಲಿ ಅಲ್ಲ, ಕೆಲಸದ ಹೊರೆ, ಕುಟುಂಬದ ಜವಾಬ್ದಾರಿ ಮತ್ತು ಮೌನ ತ್ಯಾಗಗಳಿಂದ ಕೂಡಿದ ಸಾಮಾನ್ಯ ಕಣಿವೆಗಳಲ್ಲಿ ಸಾಗುತ್ತದೆ.

ಇಲ್ಲಿ 17ನೇ ಶತಮಾನದ ಫ್ರೆಂಚ್ ಕಾರ್ಮೆಲ್ ಸಭೆಯ ಸಾಮಾನ್ಯ ಸಹೋದರರಾಗಿದ್ದ ಸಹೋದರ ಲಾರೆನ್ಸ್ ಅವರ ಜ್ಞಾನವು ಪ್ರಕಾಶಿಸುತ್ತದೆ. “ದೇವರ ಸನ್ನಿಧಿಯ ಅಭ್ಯಾಸ” ಎಂಬ ತಮ್ಮ ಕೃತಿಯಲ್ಲಿ, ಪರಿಶುದ್ಧತೆ ಅಸಾಧಾರಣ ದರ್ಶನಗಳು ಅಥವಾ ಆಧ್ಯಾತ್ಮಿಕ ಉನ್ನತ ಅನುಭವಗಳಿಗೆ ಮಾತ್ರ ಸೀಮಿತವಲ್ಲ ಎಂದು ಅವರು ಬೋಧಿಸುತ್ತಾರೆ. ಮಠದ ಅಡಿಗೆಮನೆಯಲ್ಲಿ ಪಾತ್ರೆ ತೊಳೆಯುವ ಸರಳ ಕಾರ್ಯದಲ್ಲಿಯೇ, ಪ್ರೀತಿಯಿಂದ ಮಾಡಿದ ಪ್ರತಿಯೊಂದು ಕೆಲಸದಲ್ಲಿ ದೇವರ ಮಹಿಮೆ ತುಂಬಬಹುದು ಎಂಬುದನ್ನು ಅವರು ಅನುಭವಿಸಿದರು. ತಾಬೋರ್ ಪರ್ವತದಲ್ಲಿ ದಿವ್ಯ ಪ್ರಕಾಶದಲ್ಲಿ ತೇಜಸ್ವಿಯಾಗಿ ತೋರ್ಪಟ್ಟ ಅದೇ ಕ್ರಿಸ್ತನು, ದಿನನಿತ್ಯದ ಕರ್ತವ್ಯಗಳ ಮೌನ ಪುನರಾವರ್ತನೆಯಲ್ಲಿ ಸಹ ಹಾಜರಾಗಿದ್ದಾನೆ.

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಸಹೋದರ ಲಾರೆನ್ಸ್ ಅವರ ಈ ಚಿಕ್ಕ ಗ್ರಂಥವನ್ನು ವಿಶೇಷವಾಗಿ ಮೆಚ್ಚಿದ್ದಾರೆ. ಏಕೆಂದರೆ ನಮ್ಮ ಕಾಲವು ಚಂಚಲತೆಯಿಂದ ಮತ್ತು ಗಮನಚ್ಯುತಿಯಿಂದ ಕೂಡಿದೆ. ನಾವು ತೀವ್ರ ಆಧ್ಯಾತ್ಮಿಕ ಅನುಭವಗಳಿಗಾಗಿ ಅಥವಾ ವಿಶೇಷ ಕ್ಷಣಗಳಿಗಾಗಿ ಹಂಬಲಿಸುತ್ತೇವೆ; ಆದರೆ ಹೃದಯವನ್ನು ರೂಪಾಂತರಿಸುವ ಸ್ಥಿರ, ವಿನಮ್ರ ಜಾಗೃತಿಯನ್ನು ನಿರ್ಲಕ್ಷಿಸುತ್ತೇವೆ. ರೂಪಾಂತರ ಘಟನೆಯು ಯೇಸು ಯಾರು ಎಂಬುದನ್ನು ಪ್ರಕಟಿಸುತ್ತದೆ; ಸಹೋದರ ಲಾರೆನ್ಸ್ ಅವರು ಅವರೊಂದಿಗೆ ನಿರಂತರವಾಗಿ ಹೇಗೆ ಉಳಿಯಬೇಕು ಎಂಬುದನ್ನು ಕಲಿಸುತ್ತಾರೆ.

ದರ್ಶನದ ಪ್ರಕಾಶ ಕ್ಷೀಣಿಸಿದ ನಂತರ, ಯೇಸು ಶಿಷ್ಯರನ್ನು ಸ್ಪರ್ಶಿಸಿ ಹೇಳುತ್ತಾರೆ: “ಎದ್ದು ನಿಲ್ಲಿರಿ; ಭಯಪಡಬೇಡಿ.” ಅವರು ಮೇಲೆದ್ದು ನೋಡಿದಾಗ, “ಯೇಸುವೊಬ್ಬರೇ ಹೊರತು ಮತ್ತಾರೂ ಕಾಣಿಸಲಿಲ್ಲ.” ಇದೇ ತಪಸ್ಸು ಕಾಲದ ಹೃದಯ: ಯೇಸುವೊಬ್ಬರನ್ನೇ ಕಾಣುವುದು. ರೂಪಾಂತರದ ವೈಭವವಲ್ಲ, ಮೋಶೆ ಮತ್ತು ಎಲೀಯರೂ ಅಲ್ಲ, ಆದರೆ ಪ್ರಭು ಯೇಸು ಕ್ರಿಸ್ತ ಮಾತ್ರ ಪಾಡುಗಳಲ್ಲಿ, ಮೌನದಲ್ಲಿ, ಪವಿತ್ರ ಪರಮ ಪ್ರಸಾದದಲ್ಲಿ, ನಮ್ಮ ಎದುರಿನ ನೆರೆಹೊರೆಯವರಲ್ಲಿ ಹಾಜರಿರುವರು.

ಪರ್ವತವು ಮಹತ್ವದ್ದಾಗಿದೆ. ನಮಗೆ ಪ್ರಾರ್ಥನೆಯ ಕ್ಷಣಗಳೂ ಬೇಕು; ಆರಾಧನೆಯ ಸಮಯವೂ ಬೇಕು; ವಚನಪಠಣದ ಮೌನವೂ  ಬೇಕು —ಪರದೆ ತೆರೆದು ದೇವರ ಮಹಿಮೆ ಸ್ಪಷ್ಟವಾಗುವ ಅನುಭವಗಳೂ ಬೇಕು. ಆದರೆ ಅಲ್ಲಿ ಗುಡಾರಗಳನ್ನು ಕಟ್ಟಲಾಗುವುದಿಲ್ಲ. ಬದಲಾಗಿ, ನಾವು ಇಳಿಯುವಾಗ ಆ ಬೆಳಕನ್ನು ನಮ್ಮೊಳಗೆ ಹೊತ್ತುಕೊಂಡು ಇಳಿಯಬೇಕು. ಅಡಿಗೆಮನೆಯಲ್ಲಿ, ಕಚೇರಿಯಲ್ಲಿ, ಧರ್ಮಸಭೆಯ ಸಭೆಗಳಲ್ಲಿ, ಅಥವಾ ಕರುಣೆಯ ಕಾರ್ಯಗಳಲ್ಲಿ ದೇವರ ಸನ್ನಿಧಿಯನ್ನು ಅಭ್ಯಾಸಿಸಿದರೆ, ಪ್ರತಿಯೊಂದು ಸ್ಥಳವೂ ತಾಬೋರ್ ಪರ್ವತದಂತಾಗುತ್ತದೆ.

ತಂದೆಯ ಆಜ್ಞೆ ಇನ್ನೂ ಪ್ರತಿಧ್ವನಿಸುತ್ತದೆ: “ಈತನ ಮಾತನ್ನು ಕೇಳಿರಿ.” ಕೇಳುವುದು ಎಂದರೆ ಪ್ರತಿಯೊಂದು ಪರಿಸ್ಥಿತಿಯಲ್ಲೂ ಜಾಗೃತರಾಗಿರುವುದು. ಕೇಳುವುದು ಎಂದರೆ ಶಿಲುಬೆಯ ದಾರಿಯಲ್ಲಿ ಅವರ ಮೇಲೆ ವಿಶ್ವಾಸವಿಡುವುದು. ದಿನದಿಂದ ದಿನಕ್ಕೆ ಕೇಳುತ್ತಾ ನಡೆಯುವುದು ಎಂದರೆ ಪರ್ವತದ ಮೇಲಿನ ಕ್ಷಣಿಕ ಪ್ರಕಾಶದಲ್ಲಿ ವ್ಯಕ್ತವಾದ ಮಹಿಮೆ, ನಮ್ಮ ಸಾಮಾನ್ಯ ಜೀವನದ ಮೌನ ಜಾಲದಲ್ಲಿ ನಿಧಾನವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಕಂಡುಹಿಡಿಯುವುದು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

27 ಫೆಬ್ರವರಿ 2026, 18:53