2026.02.28 Webinar on Social Media and Vocation Promotion 2026.02.28 Webinar on Social Media and Vocation Promotion 

ದೈವಕರೆಗಳ ಧ್ಯೇಯ ಕ್ಷೇತ್ರವಾಗಿ ಸಾಮಾಜಿಕ ಮಾಧ್ಯಮ:ಕಾರ್ಯಾಗಾರ

ಡಿಜಿಟಲ್ ಪರಿಸರವನ್ನು ಸಮರ್ಥವಾಗಿ ಎದುರಿಸುವ ಅಗತ್ಯದ ಹಿನ್ನೆಲೆ, ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ವೆಬಿನಾರ್‌ನಲ್ಲಿ ಸಾಮಾಜಿಕ ಮಾಧ್ಯಮವು ಸಾಕ್ಷ್ಯ, ಜೊತೆಗಾರಿಕೆ ಮತ್ತು ಸಮುದಾಯ ವಿವೇಚನೆಗಾಗಿ ನಿಜವಾದ ಧ್ಯೇಯ ಕ್ಷೇತ್ರವಾಗಬಹುದು ಎಂಬ ವಿಚಾರವನ್ನು ಆಳವಾಗಿ ಚರ್ಚಿಸಲಾಯಿತು.

ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ

ಇಂದಿನ ಜಗತ್ತಿನಲ್ಲಿ ಆನ್‌ಲೈನ್‌ನಲ್ಲಿ ಹಾಜರಾಗುವುದು ಒಂದು ಆಯ್ಕೆ ಮಾತ್ರವಲ್ಲ — ಅದು ಭೇಟಿಯ, ಸಂವಾದದ, ಹುಡುಕಾಟದ ಸ್ಥಳವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಇರುವುದೆಂದರೆ, ಯುವಜನರು ತಮ್ಮ ಪ್ರಶ್ನೆಗಳೊಂದಿಗೆ, ಕನಸುಗಳೊಂದಿಗೆ ಮತ್ತು ಆಶೆಗಳೊಂದಿಗೆ ಪ್ರವೇಶಿಸುವ ಜಗತ್ತಿನಲ್ಲೇ ನೆಲೆಸುವುದಾಗಿದೆ. ಅಲ್ಲಿ ಅವರು ಸಂಬಂಧಗಳನ್ನು ಕಟ್ಟುತ್ತಾರೆ; ತಮ್ಮ ಸಂದೇಹಗಳನ್ನು ಹಂಚಿಕೊಳ್ಳುತ್ತಾರೆ; ತಮ್ಮ ಜೀವನದ ದಿಕ್ಕನ್ನು ಹುಡುಕುತ್ತಾರೆ; ಹೊಸ ಭವಿಷ್ಯದ ಕಿಟಕಿಗಳನ್ನು ತೆರೆದುಕೊಳ್ಳುತ್ತಾರೆ.

ಈ ಆತ್ಮಸ್ಫೂರ್ತಿಯೊಂದಿಗೆ “ಸಾಮಾಜಿಕ ಮಾಧ್ಯಮ ಮತ್ತು ದೈವಕರೆಗೆ ಪ್ರೋತ್ಸಾಹ: ಡಿಜಿಟಲ್ ಜಗತ್ತಿನಲ್ಲಿ ಸಾಕ್ಷ್ಯ ಮತ್ತು ಸಮುದಾಯ” ಎಂಬ ಅಂತರರಾಷ್ಟ್ರೀಯ ಕಾರ್ಯಾಗಾರವನ್ನು ಮಲ್ಟಿಮೀಡಿಯಾ ಇಂಟರ್‌ನ್ಯಾಷನಲ್, ಅಂತಾರಾಷ್ಟ್ರೀಯ ಮಹಿಳಾ ಧಾರ್ಮಿಕ ಮುಖ್ಯಸ್ಥರ ಒಕ್ಕೂಟ (UISG) ಹಾಗೂ ಪುರುಷ ಧರ್ಮಾಧ್ಯಕ್ಷರ ಒಕ್ಕೂಟ (USG) ಸಹಯೋಗದಲ್ಲಿ ಆಯೋಜಿಸಿತು.

2026ರ ಫೆಬ್ರವರಿ 27ರಂದು ಆನ್‌ಲೈನ್‌ನಲ್ಲಿ ನಡೆದ ಈ ಕಾರ್ಯಕ್ರಮವು ವಿಶ್ವದ ವಿವಿಧ ಭಾಗಗಳಿಂದ ಸುಮಾರು 548 ಮಂದಿಯನ್ನು ಒಟ್ಟುಗೂಡಿಸಿತು. ದೈವಕರೆಗೆ ಪ್ರೋತ್ಸಾಹದಲ್ಲಿ ತೊಡಗಿರುವ ತರಬೇತುದಾರರು ಮತ್ತು ಸಂವಹನ ಕಾರ್ಯಕರ್ತರಿಗಾಗಿ ವಿಶೇಷವಾಗಿ ಇದನ್ನು ರೂಪಿಸಲಾಗಿತ್ತು ಈ ಕಾರ್ಯಾಗಾರಕ್ಕೆ UISG‌ನ ಸಂವಹನ ನಿರ್ದೇಶಕಿ ಸರ್ ತೇರೆಸ್ ರಾದ್, SDC, ಸಂಚಾಲಕಿಯಾಗಿದ್ದರು.

“ವರ್ಚುವಲ್ ಕೂಡ ವಾಸ್ತವವೇ”

ಸಾಮಾಜಿಕ ಮಾಧ್ಯಮ ಕುರಿತು ಮಾತುಕತೆಯನ್ನು ರಫಾಏಲೆ ಬುಸ್ಕೆಮಿ ಅವರು ನಡೆಸಿದರು. ಅವರು ವೃತ್ತಿಪರ ಪತ್ರಕರ್ತರಾಗಿದ್ದು, 2017ರಿಂದ ಓಪಸ್ ದೇಯಿ ಸಂಸ್ಥೆಯ ಸಂವಹನ ಮುಖ್ಯಸ್ಥರಾಗಿದ್ದಾರೆ ಮತ್ತು ಪಾಂಟಿಫಿಕಲ್ ಯುನಿವರ್ಸಿಟಿ ಆಫ್ ದಿ ಹೋಲಿ ಕ್ರಾಸ್‌ನ ಅಧ್ಯಾಪಕರಾಗಿದ್ದಾರೆ.

ಬುಸ್ಕೆಮಿ ತಮ್ಮ ಮಾತನ್ನು ಮೂರು ಮೂಲಾಧಾರಗಳೊಂದಿಗೆ ಆರಂಭಿಸಿದರು: “ವರ್ಚುವಲ್ ಕೂಡ ವಾಸ್ತವವೇ. ಸೌಂದರ್ಯವೂ ವಾಸ್ತವವೇ. ಯಾವುದನ್ನಾದರೂ ವಾಸ್ತವವಾಗಿಸುವುದು ಸಾಧನವಲ್ಲ; ಅದರ ಹಿಂದೆ ಇರುವ ವ್ಯಕ್ತಿ ಮತ್ತು ಉದ್ದೇಶ.”

ಡಿಜಿಟಲ್ ಭೇಟಿಗಳು ಮುಖಾಮುಖಿ ಭೇಟಿಗಳಿಗಿಂತ  ಕಡಿಮೆ ಅಧಿಕೃತವಾದವು ಎಂಬ ಕಲ್ಪನೆಯನ್ನು ಪ್ರಶ್ನಿಸಿ, ವಾಸ್ತವಿಕತೆಯನ್ನು ಮಾಧ್ಯಮ ನಿರ್ಧರಿಸುವುದಿಲ್ಲ; ವ್ಯಕ್ತಿಯ ಸತ್ಯನಿಷ್ಠೆಯೇ ಅದನ್ನು ನಿರ್ಧರಿಸುತ್ತದೆ ಎಂದು ಅವರು ಒತ್ತಿಹೇಳಿದರು.

ಸಾಮಾಜಿಕ ಮಾಧ್ಯಮಕ್ಕೆ ಪ್ರವೇಶಿಸುವ ಮೊದಲು ಧಾರ್ಮಿಕ ಸಮುದಾಯಗಳು ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಬೇಕೆಂದು ಅವರು ಸಲಹೆ ನೀಡಿದರು: “ಇನ್‌ಸ್ಟಾಗ್ರಾಮ್, ಟಿಕ್‌ಟಾಕ್, ಫೇಸ್‌ಬುಕ್ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ಖಾತೆ ತೆರೆಯುವ ಮೊದಲು ನಾವು ನಮ್ಮನ್ನೇ ಕೇಳಿಕೊಳ್ಳಬೇಕು: ನಾನು ಆನ್‌ಲೈನ್‌ನಲ್ಲಿ ಏನು ಮಾಡಲು ಬಯಸುತ್ತೇನೆ? ನಾನು ಏನು ಸಾಧಿಸಲು ಬಯಸುತ್ತೇನೆ? ನಾನು ಯಾರನ್ನು ತಲುಪಲು ಬಯಸುತ್ತೇನೆ?”

“ಎಲ್ಲರನ್ನೂ ತಲುಪುವುದು” ಅಥವಾ  “ಸುವಾರ್ತೆ ಪ್ರಸಾರ” ಮಾಡುವಂತಹ ಸಾಮಾನ್ಯ ಗುರಿಗಳನ್ನು ಅವರು ಎಚ್ಚರಿಕೆಯಿಂದ ನೋಡಬೇಕೆಂದು ಹೇಳಿದರು. ನಿರ್ದಿಷ್ಟ ಪ್ರೇಕ್ಷಕರನ್ನು ಹಾಗೂ ಸ್ಪಷ್ಟ ಉದ್ದೇಶವನ್ನು ನಿರ್ಧರಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.

ಸಾಮಾಜಿಕ ಮಾಧ್ಯಮದ ಹೃದಯ ಸಂವಹನವೇ ಎಂಬುದನ್ನು ಅವರು ಸ್ಪಷ್ಟಪಡಿಸಿದರು: “ಸಾಮಾಜಿಕ ಮಾಧ್ಯಮ ದೂರದರ್ಶನವಲ್ಲ.” ಪ್ರತಿಕ್ರಿಯಿಸದೇ ಅಥವಾ ಸಂವಾದದಲ್ಲಿ ತೊಡಗಿಸಿಕೊಳ್ಳದೇ ವಿಷಯವನ್ನು ಪ್ರಕಟಿಸಿದರೆ, “ಇಂಟರ್ನೆಟ್‌ನಲ್ಲಿ ಟಿವಿ ಮಾಡುವಂತಾಗುತ್ತದೆ,” ಎಂದು ಅವರು ಎಚ್ಚರಿಸಿದರು. ಹೀಗೆ ಮಾಡಿದರೆ ಡಿಜಿಟಲ್ ವೇದಿಕೆಗಳ ಸಂವಾದಾತ್ಮಕ ಸಾಮರ್ಥ್ಯ ಕಳೆದುಹೋಗುತ್ತದೆ.

ವೃತ್ತಿಗಳ ಬಗ್ಗೆ ಮಾತನಾಡುತ್ತಾ ಅವರು ಸ್ಪಷ್ಟವಾದ ವ್ಯತ್ಯಾಸವನ್ನು ಸೂಚಿಸಿದರು: “‘ಡಿಜಿಟಲ್‌ ಮಾಧ್ಯಮಗಳಲ್ಲಿ ಹುಟ್ಟಿದ’ ದೈವಕರೆಗಳಿವೆ ಎಂದು ನಾನು ನಂಬುವುದಿಲ್ಲ. ದೈವಕರೆ ದೇವರಿಂದ ಬರುತ್ತದೆ. ಸಾಮಾಜಿಕ ಮಾಧ್ಯಮವು ಮೊದಲ ಸಂಪರ್ಕವಾಗಬಹುದು, ಮೊದಲ ಘೋಷಣೆಯಾಗಬಹುದು. ಆದರೆ ದೈವಕರೆ ಸಮುದಾಯದಲ್ಲೇ ಪರಿಪಕ್ವವಾಗುತ್ತದೆ.”

ಸೇವೆಯ ಸ್ಥಳವಾಗಿ ಸಾಮಾಜಿಕ ಮಾಧ್ಯಮ

ಪವಿತ್ರ ಹೃದಯದ ಯೇಸುವಿನ ಸಭೆಯ ಸಹೋದರಿ ಅಮೆಲಿ ಜಾರುಸ್ ಅವರು ತಮ್ಮ ಪ್ರಾಂತ್ಯದ (ಬೆಲ್ಜಿಯಂ–ಫ್ರಾನ್ಸ್–ನೆದರ್ಲ್ಯಾಂಡ್ಸ್) ಸಂವಹನ ತಂಡದ ಅನುಭವವನ್ನು ಹಂಚಿಕೊಂಡರು. ಸಾಮಾಜಿಕ ಮಾಧ್ಯಮಕ್ಕೆ ಪ್ರವೇಶಿಸುವ ಮೊದಲು ನಡೆದ ದೀರ್ಘ ವಿವೇಚನೆಯ ಬಗ್ಗೆ ಅವರು ಹೇಳಿದ್ದು ಹೀಗಿದೆ:

“ಆರಂಭದಲ್ಲೇ ನಾವು ನಮ್ಮನ್ನು ಕೇಳಿಕೊಂಡದ್ದು ಇದು: ಈ ಜಾಲತಾಣಗಳಲ್ಲಿ ನಾವು ಯಾವ ರೀತಿಯಲ್ಲಿ ಹಾಜರಿರಬೇಕು? ಯಾವ ರೀತಿಯಲ್ಲಿ ಇರಬಾರದು?”

ತಮ್ಮ ಸಭೆಯನ್ನು ಆಕರ್ಷಕವಾಗಿ ತೋರಿಸುವ ‘ಮೋಹದ ಪ್ರದರ್ಶನ’ದ ದಾರಿಗೆ ಹೋಗಬಾರದು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಆದರ್ಶೀಕೃತ ಅಥವಾ ಕೃತಕ ಚಿತ್ರಣವನ್ನು ನಿರ್ಮಿಸುವುದನ್ನೂ ಅವರು ತಳ್ಳಿಹಾಕಿದರು. ಅವರ ದೃಷ್ಟಿಯಲ್ಲಿ ಸಾಮಾಜಿಕ ಮಾಧ್ಯಮವು ಸ್ವಪ್ರಚಾರದ ವೇದಿಕೆ ಅಲ್ಲ: “ನಾವು ಒಂದು ವಿಷಯವನ್ನು ಬಲವಾಗಿ ಒತ್ತಿಹೇಳಿದ್ದೇವೆ: ಸಾಮಾಜಿಕ ಮಾಧ್ಯಮದಲ್ಲಿ ಇರುವುದೆಂದರೆ ನಮ್ಮನ್ನು ಮಾರಾಟ ಮಾಡುವುದು ಅಲ್ಲ; ಅದು ಸೇವೆಯ ಸ್ಥಳ.”

ಯುವಜನರು ತಮ್ಮ ಕರೆಯ ಕುರಿತ ಆಳವಾದ ಪ್ರಶ್ನೆಗಳನ್ನು ಈಗಾಗಲೇ ಡಿಜಿಟಲ್ ವಲಯದಲ್ಲೇ ಹುಡುಕುತ್ತಿದ್ದಾರೆ, ಚಿಂತಿಸುತ್ತಿದ್ದಾರೆ, ಸಂವಾದಿಸುತ್ತಿದ್ದಾರೆ ಎಂದು ಅವರು ಸೂಚಿಸಿದರು. ಆದ್ದರಿಂದ ಧಾರ್ಮಿಕ ಸಮುದಾಯಗಳು ಅಲ್ಲಿ ಸತ್ಯನಿಷ್ಠ ಹಾಜರಾತಿಯಿಂದ, ಸಹಯಾತ್ರೆಯ ಮನೋಭಾವದಿಂದ, ಅವರೊಂದಿಗೆ ನಡೆದುಕೊಳ್ಳಲು ಕರೆಯಲ್ಪಟ್ಟಿವೆ ಎಂದು ಅವರು ಹೇಳಿದರು.

ಡಿಜಿಟಲ್ ಖಂಡದಲ್ಲಿ ‘ತೆರೆದ ಮಠಪ್ರಾಂಗಣ’

ಕೊಲಂಬಿಯಾದ ರಾಷ್ಟ್ರೀಯ ದೈವಕರೆ ಪ್ರೋತ್ಸಾಹಕರಾದ ಫ್ರಾಯ್ ಡೇವಿಡ್ ಜೀಸುಸ್ ವೆಲಾಸ್ಕೆಸ್ ಕಾರ್ಡೋನಾ, OFM Conv., ಸಾಮಾಜಿಕ ಮಾಧ್ಯಮವನ್ನು ಫ್ರಾನ್ಸಿಸ್ಕನ್ ಸಹೋದರತ್ವವನ್ನು ಡಿಜಿಟಲ್ ವಲಯಕ್ಕೆ ವಿಸ್ತರಿಸುವ ಅವಕಾಶವೆಂದು ವಿವರಿಸಿದರು.

“ನಮ್ಮ ಆನ್‌ಲೈನ್ ಹಾಜರಾತಿ ಸಹೋದರರ ಹಾಜರಾತಿಯಂತೆ ಗುರುತಿಸಬಹುದಾಗಿರಲಿ ಎಂಬುದು ನಮ್ಮ ಆಶಯ,” ಎಂದು ಅವರು ಹೇಳಿದರು. ಡಿಜಿಟಲ್ ವೇದಿಕೆಗಳನ್ನು ಅವರು “ಒಂದು ರೀತಿಯ ‘ತೆರೆದ ಮಠ’ ಅಂದರೆ ಅರ್ಥವನ್ನು, ಸಾಂತ್ವನವನ್ನು ಮತ್ತು ಸಹೋದರತ್ವವನ್ನು ಹುಡುಕುತ್ತಿರುವವರತ್ತ ಶುಭಸಂದೇಶದ ಸಂತೋಷ ತಲುಪುವ ಸ್ಥಳ”ವೆಂದು ವಿವರಿಸಿದರು.

ತಮ್ಮ ಸಂವಹನವು ದೈನಂದಿನ ಜೀವನದಲ್ಲಿ ನೆಲೆಯೂರಿದೆ ಎಂದು ಅವರು ಒತ್ತಿಹೇಳಿದರು: “ನಾವು ಆನ್‌ಲೈನ್‌ನಲ್ಲಿ ‘ಕಾಣಿಸಿಕೊಳ್ಳಲು’ ಅಲ್ಲ; ಸೇವೆ ಮಾಡಲು ಇದ್ದೇವೆ.” ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಯೂಟ್ಯೂಬ್ ಮತ್ತು ವಾಟ್ಸ್ಆಪ್ ಮೂಲಕ ಅವರು ಆರಂಭಿಕ ಸಂಪರ್ಕವನ್ನು ನಿರ್ಮಿಸುತ್ತಾರೆ; ಅದು ನಂತರ ವೈಯಕ್ತಿಕ ಜೊತೆಗಾರಿಕೆ ಮತ್ತು ದೈವಕರೆಯ ಪಯಣಗಳತ್ತ ದಾರಿ ಮಾಡಿಕೊಡುತ್ತದೆ.

ಸಮುದಾಯದ ವಿವೇಚನೆ ಮತ್ತು ಡಿಜಿಟಲ್ ವಿವೇಕ

ಸುಒರೆ ಓಪೆರಾಯೆ ದೆಲ್ಲಾ ಸಂತಾ ಕಾಸಾ ದಿ ನಜರೇತ್ ಸಭೆಯ ಸಹೋದರಿ ಮಾರ್ತಾ ಅರಿಚಿ ಮತ್ತು ಸರ್ ಅನಿತಾ ಸ್ಬೆರ್ನಾ ಅವರು ತಮ್ಮ ಸಭೆಯ ಸಂವಹನ ವಿಧಾನವನ್ನು ಹಂಚಿಕೊಂಡರು. “ಜನರ ಹತ್ತಿರವಾಗಿರಬೇಕು, ಅವರು ಬದುಕುತ್ತಿರುವ ವಾಸ್ತವದ ಭಾಗವಾಗಿರಬೇಕು, ಮತ್ತು ನಮ್ಮೊಳಗೆ ಜೀವಂತವಾಗಿರುವುದನ್ನು, ಅಂತಿಮವಾಗಿ ಶುಭಸಂದೇಶವನ್ನು ಹಂಚಿಕೊಳ್ಳಬೇಕು” ಎಂಬುದೇ ಅವರ ಆಶಯ ಎಂದು ಅವರು ವಿವರಿಸಿದರು.

ತಮ್ಮ ಸಂವಹನವನ್ನು ಒಬ್ಬ ವ್ಯಕ್ತಿಯ ಸುತ್ತ ಕೇಂದ್ರಿಕರಿಸುವ ಬದಲು, ಸಮುದಾಯದ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಪುಟಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. “ನಾವು ‘ಇಂಟರ್ನೆಟ್‌ನಲ್ಲಿ ಟಿವಿ’ ಆಗಬಾರದು; ಒಂದೇ ವ್ಯಕ್ತಿತ್ವದ ಸುತ್ತ ಕಥೆಯನ್ನು ಕಟ್ಟಿಕೊಳ್ಳಬಾರದು” ಎಂದು ಅವರು ಸ್ಪಷ್ಟಪಡಿಸಿದರು.

ಪ್ರಕಟಣೆಗೆ ಮೊದಲು ಪ್ರತಿಯೊಂದು ವಿಷಯವನ್ನೂ ಸಂದೇಶದ ಏಕತೆಯನ್ನು ಕಾಪಾಡಲು ಮತ್ತು ಅನಗತ್ಯ ಅಪಾಯಗಳನ್ನು ತಪ್ಪಿಸಲು ಕೂಲಂಕುಷವಾಗಿ  ಪರಿಶೀಲಿಸಲಾಗಿರುತ್ತದೆ.

ಸಮಯದ ಅತಿಯಾದ ವ್ಯಯ, ಅತಿಯಾಗಿ ತೋರಿಸಿಕೊಳ್ಳುವ ಪ್ರವೃತ್ತಿ, ಮತ್ತು ‘ಲೈಕ್ಸ್’ ಹಾಗೂ ಪ್ರಸಿದ್ಧಿಯ ಮೂಲಕ ತೃಪ್ತಿ ಹುಡುಕುವ ಪ್ರಲೋಭನೆ ಇವು ಸಾಮಾಜಿಕ ಮಾಧ್ಯಮದ ಮಿತಿಗಳೆಂದೂ ಮತ್ತು ಅಪಾಯಗಳೆಂದೂ ಸಹೋದರಿ ಸ್ಪಷ್ಟಪಡಿಸಿದರು.

ಡಿಜಿಟಲ್ ಲೋಕದಲ್ಲಿ ನೈಜ ಸಾಕ್ಷ್ಯ

ಈ ಕಾರ್ಯಾಗಾರದ ಅವಧಿಯೆಲ್ಲಾ ಒಂದೇ ಕೇಂದ್ರಭಾವ ಸ್ಪಷ್ಟವಾಗಿ ಮೂಡಿಬಂದಿತು: ಸಾಮಾಜಿಕ ಮಾಧ್ಯಮವು ನೈಜತೆ, ವಿಶ್ವಾಸಾರ್ಹತೆ ಮತ್ತು ಸಮುದಾಯಾತ್ಮಕ ಉಪಸ್ಥಿತಿಯ ಸ್ಥಳವಾಗಬೇಕು.

ಬುಸ್ಕೆಮಿ ಒತ್ತಿಹೇಳಿದಂತೆ: “ಆನ್‌ಲೈನ್‌ನಲ್ಲಿ ಹಾಜರಿರಿ. ನೈಜರಾಗಿರಿ. ವಿಶ್ವಾಸಾರ್ಹರಾಗಿರಿ. ಸಂವಾದಾತ್ಮಕರಾಗಿರಿ. ಉದ್ದೇಶಪೂರ್ವಕರಾಗಿರಿ.”

ದೈವಕರೆಗಳ ಸಂಖ್ಯೆ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ, ಧರ್ಮಸಭೆಗೆ ಇರುವ ಸವಾಲು ಕೇವಲ ಡಿಜಿಟಲ್ ಜಾಗವನ್ನು ಹಿಡಿಯುವುದಲ್ಲ; ಅದನ್ನು ಸೇವೆಯ ಕ್ಷೇತ್ರವಾಗಿ ರೂಪಿಸುವುದು.ನಾವು ಆ ಜಾಗಗಳನ್ನು ನಿಜವಾದ ಸೇವೆಯ ಕ್ಷೇತ್ರಗಳಾಗಿ ರೂಪಿಸಬೇಕು. ಅಲ್ಲಿ ಜನರು ಶುಭಸಂದೇಶವನ್ನು ಅನುಭವಿಸಲು, ತಮ್ಮ ಪ್ರಶ್ನೆಗಳನ್ನು ಹಂಚಿಕೊಳ್ಳಲು, ಮತ್ತು ದೈವಕರೆಗಳ ವಿವೇಚನೆಯ ಪಯಣವನ್ನು ನಂಬಿಕೆಯಿಂದ ಸಾಗಲು ಅವಕಾಶ ದೊರಕಬೇಕು. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

28 ಫೆಬ್ರವರಿ 2026, 15:38