2026.02.26 Processione in onore della Vergine della Carità 2026.02.26 Processione in onore della Vergine della Carità 

ಕ್ಯೂಬಾದ ಧರ್ಮಸಭೆ: ಗೌರವಯುತ ಜೀವನಕ್ಕಾಗಿ ತವಕಪಡುವ ಜನರಿಗೆ ಸಾಂತ್ವನದ ಸಂಕೇತ

ಹವಾನಾದ ವಂ. ಗುರು ಅರಿಯೇಲ್ ಸುಯಾರೆಸ್ ಜೌರೆಗುಯಿ ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ದೇಶದ ಇಂದಿನ ಪರಿಸ್ಥಿತಿಯನ್ನು “ನೇರವಾಗಿ ಹೇಳುವುದಾದರೆ ಬಹಳ ಕಠಿಣ” ಎಂದು ವರ್ಣಿಸಿದ್ದಾರೆ. ಆದಾಗ್ಯೂ, ಈ ಸಂಕಷ್ಟಗಳ ಮಧ್ಯೆಯೂ ಕ್ಯೂಬಾದ ಧರ್ಮಸಭೆ ಜನರಿಗೆ ಭರವಸೆಯೂ ಸಾಂತ್ವನವೂ ಆಗಿ ನಿಂತಿದೆ ಎಂದು ಅವರು ತಿಳಿಸಿದ್ದಾರೆ

ಲೇಖಕರು: ಜೋಹಾನ್ ಪಾಚೆಕೊ

ಕ್ಯೂಬಾ ಜನತೆ ಇಂಧನ ಸಂಕಷ್ಟದ ಪರಿಣಾಮಗಳನ್ನು ಮುಂದುವರಿಸಿಕೊಂಡೇ ಎದುರಿಸುತ್ತಿದ್ದು, ಇದರಿಂದ ಸಮಾಜವನ್ನು ಈಗಾಗಲೇ ಕಾಡುತ್ತಿರುವ ಅನೇಕ ಸಮಸ್ಯೆಗಳು ಮತ್ತಷ್ಟು ಗಂಭೀರವಾಗಿವೆ. “ನಾವು ಇಲ್ಲಿ ಇದ್ದೇವೆ — ಕೈಕಟ್ಟಿ ಕುಳಿತಿಲ್ಲ,” ಎಂದು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ವಂ. ಗುರು ಅರಿಯೇಲ್ ಸುಯಾರೆಸ್ ಜೌರೆಗುಯಿ ತಿಳಿಸಿದ್ದಾರೆ. ಅವರು ಕ್ಯೂಬಾ ಕಥೋಲಿಕ ಧರ್ಮಾಧ್ಯಕ್ಷರ ಸಭೆಯ ಸಹ ಕಾರ್ಯದರ್ಶಿಯಾಗಿದ್ದು, ಹವಾನಾದ ಎಲ್ ಕೊಬ್ರೆ ದಯಾಮಾತೆಯ ಧರ್ಮಕ್ಷೇತ್ರ ಹಾಗೂ ಕಿರಿಯ ಬಸಿಲಿಕಾದ ಧರ್ಮಗುರು ಆಗಿದ್ದಾರೆ.

“ಆಹಾರ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಔಷಧಿಗಳ ಕೊರತೆ ಉಂಟಾಗಿದೆ, ವೈದ್ಯಕೀಯ ಸೇವೆಗಳು ಕಡಿಮೆಯಾಗಿವೆ, ಶಸ್ತ್ರಚಿಕಿತ್ಸೆಗಳು ಜೀವಾಪಾಯದಲ್ಲಿರುವವರಿಗೆ ಮಾತ್ರ ಸೀಮಿತವಾಗಿವೆ. ಕುಡಿಯುವ ನೀರಿಗೆ ಪ್ರವೇಶವೂ ಕಷ್ಟಕರವಾಗಿದೆ, ಏಕೆಂದರೆ ಅನೇಕರು ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ; ಇಂಧನದ ಕೊರತೆಯಿಂದ ಅವುಗಳೂ ಎಲ್ಲೆಡೆ ತಲುಪಲು ಸಾಧ್ಯವಾಗುತ್ತಿಲ್ಲ,” ಎಂದು ವಂ. ಗುರು ವಿವರಿಸಿದರು.

ಈ ಪರಿಸ್ಥಿತಿಯಲ್ಲಿ ಬಡವಾಗಿರುವ ಧರ್ಮಸಭೆ ಬಡವರ ಮಧ್ಯೆ ನಿಂತು ದಯೆಯೂ ಸಾಂತ್ವನವೂ ನೀಡುವ  ಸೇವೆಯನ್ನು ಸಲ್ಲಿಸುತ್ತಿದೆ. “ದಯೆಯ ಕ್ಷೇತ್ರದಲ್ಲೇ ನಾವು ನಿರಂತರವಾಗಿ ಹೊಸತನ ಪಡೆದು ಬೆಳೆಯುತ್ತಿದ್ದೇವೆ. ಅಗತ್ಯಗಳು ಹೆಚ್ಚಾಗುತ್ತಿರುವಂತೆ ಬಡವರಲ್ಲಿ ಪ್ರಭುವಿಗೆ ಸೇವೆ ಸಲ್ಲಿಸುವ ಕರೆಯನ್ನೂ ನಾವು ಅನುಭವಿಸುತ್ತಿದ್ದೇವೆ,” ಎಂದು ಅವರು ಹೇಳಿದರು. ಅತ್ಯಂತ ದುರ್ಬಲರಿಗೆ ನೆರವಾಗಲು ಅನೇಕ ಸಹಾಯ ಕಾರ್ಯಗಳು — ಹಲವು ಸವಾಲುಗಳ ನಡುವೆಯೂ — ಮುಂದುವರಿದಿವೆ ಎಂದು ಅವರು ಸ್ಮರಿಸಿದರು.

ಈ ಸಮಯದಲ್ಲಿ ಪವಿತ್ರ ಪೀಠದ ಪಿತೃತ್ವದ ಸಮೀಪತೆಗೆ ಕ್ಯೂಬಾದ ಧರ್ಮಸಭೆ ಕೃತಜ್ಞತೆ ವ್ಯಕ್ತಪಡಿಸಿದೆ. ಧರ್ಮಾಧ್ಯಕ್ಷರು ತಮ್ಮ ಅದ್ ಲಿಮಿನಾ ಭೇಟಿಯಲ್ಲಿ ಪೂಜ್ಯ ಜಗದ್ಗುರು ಲಿಯೋ ಅವರನ್ನು ಭೇಟಿ ಮಾಡುವ ನಿರೀಕ್ಷೆ ಹೊಂದಿದ್ದರೂ ಅದು ಮುಂದೂಡಲಾಯಿತು. “ಕ್ಯೂಬಾ ಜನರು ಮತ್ತು ಧರ್ಮಸಭೆಯ ಮೇಲಿನ ಜಗದ್ಗುರುಗಳ ಅವರ ಸ್ನೇಹಪೂರ್ಣ ಕಾಳಜಿಗೆ ನಾವು ಹೃತ್ಪೂರ್ವಕ ಧನ್ಯರಾಗಿದ್ದೇವೆ. ಪೂಜ್ಯ ತಂದೆಯ ಧ್ವನಿಯು ಕ್ಯೂಬಾ ಜನರ ದುಃಖಭರಿತವಾದರೂ ಆಶಾಭರವಿರುವ ಕಂಠಧ್ವನಿಯನ್ನು ಜಗತ್ತಿಗೆ ಕೇಳಿಸಿದೆ,” ಎಂದು ವಂ. ಗುರು ಹೇಳಿದರು.

ಹವಾನಾದ ಎಲ್ ಕೊಬ್ರೆ ದಯಾಮಾತೆಯ ಧರ್ಮಕ್ಷೇತ್ರದ ಧರ್ಮಗುರು ಆಗಿರುವ ವಂ. ಗುರು ಸುಯಾರೆಸ್, ಈ ಉಪವಾಸಕಾಲದಲ್ಲಿ — ಅನೇಕ ಸವಾಲುಗಳ ಮಧ್ಯೆಯೂ — ಕ್ಯೂಬಾ ಜನರು ಪ್ರಭು ಯೇಸುವಿನತ್ತ ಭರವಸೆಯಿಂದ ನೋಡುವಂತೆ ಪ್ರಾರ್ಥಿಸಿದರು. “ನನ್ನ ಜನರ ನೋವು, ಅದು ನನ್ನದೇ ನೋವಾಗಿದ್ದರೂ, ನಮ್ಮನ್ನು ಕೋಪಭರಿತರಾಗಿಯೂ ಹಿಂಸಾತ್ಮಕರಾಗಿಯೂ ಮಾಡಬಾರದು. ನಾವು ಸದಾ ಪ್ರೀತಿಸೋಣ, ಪ್ರೀತಿಯ ಜಯವನ್ನು ಸಾರೋಣ ಮತ್ತು ಪ್ರಭುವಿನ ಪ್ರೀತಿಗೆ ಸಾಕ್ಷಿಯಾಗೋಣ,” ಎಂದು ಅವರು ಪ್ರಾರ್ಥನೆಯೊಂದಿಗೆ ಹಂಚಿಕೊಂಡರು.

ನಾವು ಈಗ ತಪಸ್ಸು ಕಾಲ ಎಂಬ ಧಾರ್ಮಿಕ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ — ಇದು ಪಾಸ್ಕ ಹಬ್ಬದತ್ತ ಸಾಗುವ ಪವಿತ್ರ ಯಾತ್ರೆಯಾಗಿದ್ದು ಕ್ರೈಸ್ತರಿಗೆ ನಿರೀಕ್ಷೆಯ ಸಮಯವಾಗಿದೆ. ಇತ್ತೀಚಿನ ವಾರಗಳಲ್ಲಿ ಕ್ಯೂಬಾ ಹೆಚ್ಚು ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿರುವುದನ್ನು ನಾವು ತಿಳಿದಿದ್ದೇವೆ. ಕ್ರೈಸ್ತ ನಿರೀಕ್ಷೆಯ ಬೆಳಕಿನಲ್ಲಿ ಧರ್ಮಸಭೆ ಈ ವಾಸ್ತವಿಕತೆಯನ್ನು ಹೇಗೆ ಎದುರಿಸುತ್ತಿದೆ?

ತಪಸ್ಸು ಕಾಲವು ಕ್ರೈಸ್ತರಿಗೆ ಪಾಸ್ಕ ಹಬ್ಬದತ್ತ ಸಾಗುವ ಪವಿತ್ರ ಯಾತ್ರೆಯಾಗಿದ್ದು, ಆಶೆಯ ಕಾಲವೂ ಆಗಿದೆ. ಇತ್ತೀಚಿನ ವಾರಗಳಲ್ಲಿ ಕ್ಯೂಬಾ ಮತ್ತಷ್ಟು ಸವಾಲುಗಳನ್ನು ಎದುರಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಈ ಕ್ರೈಸ್ತ ಆಶೆಯ ಬೆಳಕಿನಲ್ಲಿ ಧರ್ಮಸಭೆ ತನ್ನ ಸೇವೆಯನ್ನು ಮುಂದುವರಿಸುತ್ತಿದೆ.

ಕ್ರಿಸ್ತನ ವಾಗ್ದಾನಗಳ ಮೇಲೆ ವಿಶ್ವಾಸವಿಟ್ಟು ಧರ್ಮಸಭೆ ಸಾಧ್ಯವಾದಲ್ಲಿ ಎಲ್ಲೆಡೆ ಶುಭಸಂದೇಶವನ್ನು ಸಾರುತ್ತಿದ್ದು, ಪವಿತ್ರ ಸಂಸ್ಕಾರಗಳನ್ನು ಆಚರಿಸುತ್ತಿದೆ. ಮಕ್ಕಳಿಗೆ ಧರ್ಮೋಪದೇಶ ಬೋಧನೆ, ರೋಗಿಗಳು ಹಾಗೂ ಕೈದಿಗಳನ್ನು ಭೇಟಿ ಮಾಡುವುದು, ದೀಕ್ಷಾಸ್ನಾನಾಭ್ಯರ್ಥಿಗಳ ತರಬೇತಿ ಹಾಗೂ ಇತರ ರೂಪಣಾ ಕಾರ್ಯಕ್ರಮಗಳ ಮೂಲಕ ಮಕ್ಕಳು,ಯುವಜನರು ಮತ್ತು ವಯಸ್ಕರನ್ನು ತಯಾರಿಸುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ದಂಪತಿಗಳು ವಿವಾಹ ತಯಾರಿ ಹಾಗೂ ಕುಟುಂಬ ಜೀವನದ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಿದ್ದಾರೆ; ರೂಪಣಾ ಕೇಂದ್ರಗಳೂ ಚುರುಕಾಗಿ ಕಾರ್ಯನಿರ್ವಹಿಸುತ್ತಿವೆ. ಧರ್ಮಕೇಂದ್ರಗಳು ಮತ್ತು ಸಮುದಾಯಗಳಲ್ಲಿ ದಾನಧರ್ಮದ ಕಾರ್ಯಗಳು ಹೆಚ್ಚಾಗುತ್ತಿವೆ.

ಉಪವಾಸಕಾಲದಲ್ಲಿ ವಿಶೇಷವಾಗಿ ಶುಕ್ರವಾರಗಳಂದು ಆತ್ಮಪರಿಶೀಲನಾ ಶಿಬಿರಗಳು, ಪಶ್ಚಾತ್ತಾಪ ಆಚರಣೆಗಳು ಹಾಗೂ ಶಿಲುಬೆ ಹಾದಿ ಪ್ರಾರ್ಥನೆಗಳಿಗೆ ಅವಕಾಶಗಳನ್ನು ಕಲ್ಪಿಸಲಾಗಿದೆ. ಆದರೆ ಗ್ರಾಮೀಣ ಪ್ರದೇಶಗಳು ಅಥವಾ ಧರ್ಮಕೇಂದ್ರಗಳಿಂದ ದೂರವಿರುವ ಸ್ಥಳಗಳಲ್ಲಿ ಚಟುವಟಿಕೆಗಳಲ್ಲಿ ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಂಧನದ ಕೊರತೆಯಿಂದ ಅನೇಕ ಧರ್ಮಗುರುಗಳು ಅಥವಾ ಧರ್ಮೋಪದೇಶಕರು ಆ ಸ್ಥಳಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ.

ಎಲ್ಲ ಯುವಜನರೂ ಬಲಿಷ್ಠರೂ ಅಲ್ಲ; ತೀವ್ರ ಉಷ್ಣತೆಯಲ್ಲಿಯೇ ದೂರದೂರಿಗೆ ಸೈಕಲ್‌ನಲ್ಲಿ ಪ್ರಯಾಣಿಸುವುದು ಕಷ್ಟಕರವಾಗಿದೆ. ಕೆಲವು ರಸ್ತೆಗಳು ಸಂಚಾರಕ್ಕೆ ಅಸಾಧ್ಯವಾಗಿವೆ; ವಿದ್ಯುತ್‌ ಇಲ್ಲದೆ ರಾತ್ರಿ ಹಿಂದಿರುಗುವುದೂ ಅಪಾಯಕರವಾಗಿದೆ. ಆದರೂ ಸಾಧ್ಯವಾದಷ್ಟು ಮಾಡುತ್ತಾ ಧರ್ಮಸಭೆ ತನ್ನ ಸನ್ನಿಧಿಯನ್ನು ಕಾಪಾಡಿಕೊಂಡಿದೆ — ಕೈಕಟ್ಟಿ ನಿಂತಿಲ್ಲ, ಜನರೊಂದಿಗೆ ಜೊತೆಯಾಗಿ ಸೇವೆಯಲ್ಲಿ ಮುಂದುವರಿದಿದೆ.

2026 ಜನವರಿಯಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ದೇಶಕ್ಕೆ ತೈಲ ಸರಬರಾಜಿನ ನಿರ್ಬಂಧಗಳಿಂದ ಸಾಮಾಜಿಕ ಅಶಾಂತಿ ಮತ್ತು ಹಿಂಸೆಯ ಅಪಾಯವಿದೆ ಎಂದು ಧರ್ಮಾಧ್ಯಕ್ಷರು ಎಚ್ಚರಿಸಿದರು. ಪ್ರಸ್ತುತ ಪರಿಸ್ಥಿತಿ ಹೇಗಿದೆ, ಮತ್ತು ಕ್ಯೂಬಾ ಜನರನ್ನು ಕಾಡುತ್ತಿರುವ ಪ್ರಮುಖ ಆತಂಕಗಳು ಯಾವುವು?

ಇಂದಿನ ಪರಿಸ್ಥಿತಿಯು ನಿಜವಾಗಿಯೂ ಕಠಿಣವಾಗಿದ್ದು, ಜನರ ಮನಸ್ಸಿನ ಮೇಲೆ ಹಲವು ಚಿಂತೆಗಳು ಭಾರವಾಗಿವೆ. ಇಂದು ಸಾರ್ವಜನಿಕ ಹಾಗೂ ಖಾಸಗಿ ಸಾರಿಗೆ ರಸ್ತೆಗಳಲ್ಲೂ ಹೆದ್ದಾರಿಗಳಲ್ಲೂ ಕಡಿಮೆಯಾಗುತ್ತಿದ್ದು, ಸಾಯಂಕಾಲದ ಬಳಿಕ ಪಟ್ಟಣಗಳು ಮತ್ತು ನಗರಗಳು ಬಿಕೋ ಎನಿಸುವಂತಾಗಿವೆ. ಹವಾನಾದ ಬೀದಿಗಳಲ್ಲಿ ಕಸ ತುಂಬಿಕೊಂಡು ಪಾದಚಾರಿಗಳಿಗೂ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬಡವರು, ಗೃಹರಹಿತರು ಹಾಗೂ ನಿರ್ಲಕ್ಷಿತ ವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಕೆಲ ಕಿಶೋರರು ಮತ್ತು ಯುವಕರು ಮದ್ದುಗಳತ್ತ ತಿರುಗುತ್ತಿರುವುದು ಮತ್ತೊಂದು ಚಿಂತೆ.

ಕೆಲಸದ ಹಾಗೂ ಶಾಲೆಯ ಸಮಯ ಕಡಿಮೆಯಾಗುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಬದುಕುತ್ತಿದ್ದಾರೆ. ಆಹಾರದ ಬೆಲೆ ಏರುತ್ತಿದೆ; ಔಷಧಿಗಳು ಅಪರೂಪವಾಗಿವೆ; ವೈದ್ಯಕೀಯ ಸೇವೆಗಳು ಕುಂಠಿತವಾಗಿದ್ದು ಶಸ್ತ್ರಚಿಕಿತ್ಸೆಗಳು ಜೀವಾಪಾಯದ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿವೆ. ಕುಡಿಯುವ ನೀರಿನ ಲಭ್ಯತೆಯೂ ಕಷ್ಟಕರವಾಗುತ್ತಿದೆ, ಏಕೆಂದರೆ ಹಲವರು ಇಂಧನದ ಕೊರತೆಯಿಂದ ಸರಿಯಾಗಿ ಕಾರ್ಯನಿರ್ವಹಿಸಲಾಗದ ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ.

ಆರ್ಥಿಕವಾಗಿ ಸಾಮರ್ಥ್ಯ ಹೊಂದಿರುವವರು ಮನೆಗಳು ಮತ್ತು ವ್ಯಾಪಾರ ಸ್ಥಳಗಳಲ್ಲಿ  ನವೀಕರಿಸಬಹುದಾದ ಇಂಧನ ಸೌಲಭ್ಯಗಳನ್ನು ತಮ್ಮ ಮನೆಗಳಲ್ಲಿ ಸ್ಥಾಪಿಸಿಕೊಳ್ಳುತ್ತಿದ್ದಾರೆ ಸ್ಥಾಪಿಸುತ್ತಿದ್ದಾರೆ ಅಥವಾ ಇಂಧನದ ಮೇಲೆ ಅವಲಂಬಿಸದ ಸಾರಿಗೆ ಸಾಧನಗಳನ್ನು ಖರೀದಿಸುತ್ತಿದ್ದಾರೆ. ಆದರೆ ಸಾಮಾನ್ಯ ಜನರು ಈ ಸ್ಥಿತಿಯನ್ನು ನೋವು ಮತ್ತು ದುಃಖದೊಂದಿಗೆ ಎದುರಿಸುತ್ತಿದ್ದಾರೆ. ಕಳೆದ ದಶಕಗಳಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿದ್ದೇವೆ ಎಂಬ ಭಾವನೆ ಅವರಲ್ಲಿದ್ದು, ತಮ್ಮದೇ ದೇಶದಲ್ಲಿ ಗೌರವಯುತ ಮತ್ತು ಸಂತೋಷಕರ ಜೀವನಕ್ಕಾಗಿ ಅವರು ಹಂಬಲಿಸುತ್ತಿದ್ದಾರೆ.

ಕೆಲವರು ಹಿಂಸೆಗೆ ತಿರುಗಿ ಲೋಭ, ಸ್ವಾರ್ಥ ಮತ್ತು ಮಹತ್ವಾಕಾಂಕ್ಷೆಗಳಿಗೆ ಅವಕಾಶ ನೀಡುತ್ತಿರುವಾಗ, ಮತ್ತೆ ಕೆಲವರು ಉದಾರತೆ, ಸಹೋದರತ್ವ ಮತ್ತು ಪರೋಪಕಾರದ ಸುಂದರ ಸಾಕ್ಷಿಯನ್ನು ನೀಡುತ್ತಿದ್ದಾರೆ. ಇದರ ಮಧ್ಯೆ “ಇದಕ್ಕೊಂದು ಬದಲಾವಣೆ ಅಗತ್ಯ — ಹೀಗೆ ಬದುಕಲು ಸಾಧ್ಯವಿಲ್ಲ” ಎಂಬ ಸಾಮೂಹಿಕ ಮನೋಭಾವವೂ ಜನರೊಳಗೆ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ.

ಕೆಲವು ವಾರಗಳ ಹಿಂದೆ, ಏಂಜಲಸ್ ಪ್ರಾರ್ಥನಾ ಭಾಷಣದಲ್ಲಿ, ಪೂಜ್ಯ ಜಗದ್ಗುರು 14ನೇ ಲಿಯೋ ಕ್ಯೂಬಾದ ಪರಿಸ್ಥಿತಿಯ ಬಗ್ಗೆ ಚಿಂತೆಯನ್ನು ವ್ಯಕ್ತಪಡಿಸಿ, ಜನರ ದುಃಖವನ್ನು ಹೆಚ್ಚಿಸುವ ಕ್ರಮಗಳನ್ನು ತಪ್ಪಿಸಲು ಸಂವಾದವನ್ನು ಉತ್ತೇಜಿಸಿದರು. ಈ ಹತ್ತಿರತನವು ಕ್ಯೂಬಾದ ಧರ್ಮಸಭೆಗೆ ಏನನ್ನು ಅರ್ಥೈಸಿದೆ?

 ಈ ಸಹಕಾರ ಕ್ಯೂಬಾದ ಧರ್ಮಸಭೆಗೆ ಮಹತ್ವದ ಸಾಂತ್ವನ ಮತ್ತು ಬೆಂಬಲದ ಸೂಚನೆಯಾಗಿದೆ.ಫೆಬ್ರವರಿ 1ರಂದು ಆಂಜೆಲಸ್‌ನಲ್ಲಿ ಜಗದ್ಗುರುಗಳ ಮಾತುಗಳನ್ನು ಪಿತೃತ್ವದ ಮಮತೆಯ ಸಂಕೇತವಾಗಿ ಸ್ವೀಕರಿಸಲಾಯಿತು. ಅವರು “ಪ್ರಿಯ ಕ್ಯೂಬಾ ಜನರ ದುಃಖವನ್ನು ತಗ್ಗಿಸಲು ಗಂಭೀರ ಮತ್ತು ಪರಿಣಾಮಕಾರಿ ಸಂವಾದ” ಅಗತ್ಯವೆಂದು ಸೂಚಿಸಿದರು. ಜೊತೆಗೆ ದೇಶದ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆ ಜನವರಿ 31ರಂದು ಕ್ಯೂಬಾ ಧರ್ಮಾಧ್ಯಕ್ಷರು ಪ್ರಕಟಿಸಿದ್ದ ಮಹತ್ವದ ಹಾಗೂ ದೂರದೃಷ್ಟಿಯ ಸಂದೇಶಕ್ಕೂ ಅವರು ಬೆಂಬಲ ವ್ಯಕ್ತಪಡಿಸಿದರು.

ಜನರಿಗೂ ಧರ್ಮಸಭೆಗೂ ಜಗದ್ಗುರು ತೋರಿದ ಈ ಮಮತೆಗೆ ನಾವು ಅತ್ಯಂತ ಕೃತಜ್ಞರಾಗಿದ್ದೇವೆ. ಅವರ ಧ್ವನಿಯು ಕ್ಯೂಬಾ ಜನರ ದುಃಖಭರಿತವಾದರೂ ಆಶಾಭರವಿರುವ ಕೂಗನ್ನು ವಿಶ್ವದ ಮುಂದೆ ಇನ್ನಷ್ಟು ಸ್ಪಷ್ಟವಾಗಿ ಪ್ರತಿಧ್ವನಿಸುವಂತೆ ಮಾಡಿದೆ.

ಈ ಪರಿಸ್ಥಿತಿ ಧರ್ಮಾಧ್ಯಕ್ಷರನ್ನು ರೋಮ್ ಪ್ರವಾಸವನ್ನು ಮುಂದೂಡಬೇಕಾದ ಪರಿಸ್ಥಿತಿ ಉಂಟಾಗಿದೆ. ಧರ್ಮಕ್ಷೇತ್ರಗಳು   ಮತ್ತು ಧರ್ಮಕೇಂದ್ರಗಳಲ್ಲಿ ನಡೆಯುತ್ತಿರುವ ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳು ಯಾವುವು?

ಧರ್ಮಪ್ರಾಂತ್ಯಗಳು ಮತ್ತು ಧರ್ಮಕೇಂದ್ರಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು ವಿಶ್ವದಾದ್ಯಂತ ನಡೆಯುವ ಸಾಮಾನ್ಯ ಕಾರ್ಯಗಳಂತೆಯೇ ಇದ್ದರೂ, ನಮ್ಮಲ್ಲಿ ಅವುಗಳಿಗೆ ವಿಶೇಷವಾದ ಸ್ಪರ್ಶ ದೊರೆತಿದೆ — ಸಮೀಪತೆ, ಕರುಣೆ ಮತ್ತು ಮೃದುವಾದ ಮಾನವೀಯತೆಯ ಸ್ಪರ್ಶ. ಧರ್ಮಸಭೆ ತನ್ನ ಧಾರ್ಮಿಕ ಸೇವಕರ ಮೂಲಕ ಜನರನ್ನು ಆಲಿಸುವುದು, ಭೇಟಿ ನೀಡುವುದು, ಜೊತೆಯಾಗಿರುವುದು ಮತ್ತು ಸಾಂತ್ವನ ನೀಡುವುದಕ್ಕೆ ಸಮಯ ಹಾಗೂ ಸಂಪನ್ಮೂಲಗಳನ್ನು ಸಮರ್ಪಿಸುತ್ತದೆ.

ದಾನಧರ್ಮದ ಕ್ಷೇತ್ರದಲ್ಲಿಯೇ ನಾವು ನವೀಕರಣವನ್ನು ಅನುಭವಿಸುತ್ತಿದ್ದೇವೆ. ಅಗತ್ಯಗಳು ಹೆಚ್ಚಾಗುತ್ತಿರುವಂತೆ, ಬಡವರಲ್ಲಿ ಪ್ರಭುವನ್ನು ಸೇವೆ ಮಾಡಲು ಕರೆಯಲ್ಪಟ್ಟಿದ್ದೇವೆ ಎಂಬ ಅರಿವು ಮತ್ತಷ್ಟು ಗಾಢವಾಗುತ್ತಿದೆ. ಅನೇಕ ಧರ್ಮಕೇಂದ್ರಗಳು ವೃದ್ಧರು ಹಾಗೂ ದುರ್ಬಲರಿಗಾಗಿ ಅನ್ನಸಂತರ್ಪಣೆಗಳನ್ನು ಆಯೋಜಿಸುತ್ತಿವೆ; ಕೆಲವೆಡೆ ಊಟವನ್ನು ತಯಾರಿಸಿ ಮನೆಗಳಿಗೆ ತಲುಪಿಸಲಾಗುತ್ತಿದೆ.

ಸಿದ್ಧವಾದ ಆಹಾರವನ್ನು ಬೀದಿಗಳಲ್ಲಿ, ಉದ್ಯಾನವನಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬದುಕುತ್ತಿರುವವರಿಗೆ ಹಂಚಲಾಗುತ್ತಿದೆ. ಜಾನ್ XXIII ಚಳವಳಿ, ಸಂತ್ ಎಜಿಡಿಯೋ ಸಮುದಾಯ, ಕಮ್ಯೂನಿಯನ್ ಅಂಡ್ ಲಿಬರೇಶನ್ ಮುಂತಾದ ಗುಂಪುಗಳೂ ಈ ಕಾರ್ಯಗಳಲ್ಲಿ ತೊಡಗಿವೆ. ಇತರ ದೇಶಗಳ ಕಾರಿತಾಸ್ ಸಂಸ್ಥೆಗಳ ಸಹಾಯವೂ ಈ ಸೇವಾ ಕಾರ್ಯಗಳನ್ನು ನಿರಂತರವಾಗಿ ಬೆಂಬಲಿಸುತ್ತದೆ.

ವಿಶೇಷವಾಗಿ ವೃದ್ಧಾಶ್ರಮಗಳು ಅಥವಾ ಮಾನಸಿಕ ಅಸ್ವಸ್ಥರ ನಿವಾಸಗಳನ್ನು ನಡೆಸುತ್ತಿರುವ ಧಾರ್ಮಿಕ ಸಹೋದರಿಯರು ಹಾಗೂ ಸಹೋದರರ ಮೌನ, ಸಾಹಸಮಯ ಮತ್ತು ಅತ್ಯಂತ ಉದಾರ ಸೇವೆಯನ್ನು ಇಲ್ಲಿ ಸ್ಮರಿಸಲೇಬೇಕು. ಸಾರಿಗೆ ಕೊರತೆಯಿಂದ ಸಿಬ್ಬಂದಿ ಕೆಲಸಕ್ಕೆ ಬರಲಾರದ ಸ್ಥಿತಿಯಲ್ಲಿಯೂ, ದೇಶ ಎದುರಿಸುತ್ತಿರುವ ಎಲ್ಲಾ ಸಂಕಷ್ಟಗಳ ನಡುವೆಯೂ ಅವರು ತಮ್ಮ ಸೇವೆಯನ್ನು ನಿಷ್ಠೆಯಿಂದ ಮುಂದುವರಿಸುತ್ತಿದ್ದಾರೆ.

ಸಾಮಾನ್ಯ ಸಂಕಷ್ಟಗಳ ನಡುವೆಯೂ ಅತಿದರಿದ್ರರ ಆರೈಕೆಗೆ ಸಂಬಂಧಿಸಿದ ಕೆಲವು ಸ್ಪಷ್ಟ ಸಾಕ್ಷ್ಯಗಳನ್ನು ಹಂಚಿಕೊಳ್ಳಬಹುದು.

ನಾನು ಹನ್ನೊಂದು ವರ್ಷಗಳಿಂದ ಪಾಸ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಧರ್ಮಕೇಂದ್ರದಲ್ಲಿ, ಪ್ರತಿ ವಾರ ಸುಮಾರು 150 ವೃದ್ಧರಿಗೆ ಮಧ್ಯಾಹ್ನದ ಊಟವನ್ನು ಒದಗಿಸಲಾಗುತ್ತದೆ. ಪ್ರತೀ ಗುರುವಾರ ಸಂಜೆ 100 ನಿರಾಶ್ರಿತರಿಗೆ ಹಾಲು, ಒಂದು ಸ್ಯಾಂಡ್‌ವಿಚ್ ಹಾಗೂ ಪ್ರೋಟೀನ್ ಆಹಾರ ನೀಡಲಾಗುತ್ತದೆ. ತಿಂಗಳಿಗೆ ಎರಡು ಬಾರಿ ಶನಿವಾರದಂದು ದುರ್ಬಲ ಸ್ಥಿತಿಯಲ್ಲಿರುವವರಿಗೆ ವಿಶೇಷ ಊಟವನ್ನು ತಯಾರಿಸಿ ತಲುಪಿಸಲಾಗುತ್ತದೆ.

ಈ ಸೇವೆಯಲ್ಲಿ ತೊಡಗಿರುವ ಸ್ವಯಂಸೇವಕರ ಸಂತೋಷ ಮತ್ತು ಪ್ರೀತಿಯನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಅವರಿಗೂ ತಮ್ಮದೇ ಸಮಸ್ಯೆಗಳು ಹಾಗೂ ಅಗತ್ಯಗಳಿವೆ. ಆದರೂ ಅವರು ತಮ್ಮ ಸಮಯ ಮತ್ತು ಶಕ್ತಿಯನ್ನು ಪ್ರಭುವಿಗೂ ತಮ್ಮ ಸಹೋದರ-ಸಹೋದರಿಯರಿಗೂ ಅರ್ಪಿಸುತ್ತಾರೆ. ತಮ್ಮಲ್ಲಿರುವುದನ್ನು ಹಂಚಿಕೊಳ್ಳುವಾಗ ಅವರು ಸದಾ ನಗೆಯೊಂದಿಗೆ ಸೇವೆ ಸಲ್ಲಿಸುತ್ತಾರೆ ಮತ್ತು ಬಡವರನ್ನು ಅತ್ಯಂತ ಗೌರವದಿಂದ ವರ್ತಿಸುತ್ತಾರೆ.

ನಾನು ನನ್ನ ಧರ್ಮಕೇಂದ್ರದ ಬಗ್ಗೆ ಮಾತನಾಡುತ್ತಿದ್ದೇನೆ, ಏಕೆಂದರೆ ಅದು ನನಗೆ ಅತ್ಯಂತ ಪರಿಚಿತ. ಆದರೆ ಇಂತಹ ಸೇವಾ ಪ್ರಯತ್ನಗಳು ಕ್ಯೂಬಾದ ಅನೇಕ ಧರ್ಮಕೇಂದ್ರಗಳಲ್ಲಿ ನಡೆಯುತ್ತಿವೆ. ಕಥೋಲಿಕ ಅಲ್ಲದ ಕ್ರೈಸ್ತ ಸಮುದಾಯಗಳಲ್ಲಿಯೂ ಹೃದಯಸ್ಪರ್ಶಿ ಸೇವಾ ಕಾರ್ಯಗಳು ಕಂಡುಬರುತ್ತಿವೆ. ಈ ಕಠಿಣ ಸಮಯಗಳಲ್ಲಿ ದೇವರು ನಮಗೆ ಪ್ರೇರೇಪಿಸಿದ ಎಲ್ಲದರಿಗಾಗಿ ನಾವು ಕೃತಜ್ಞರಾಗಿದ್ದೇವೆ. ಪ್ರಭು ನಮಗೆ ಒಳ್ಳೆಯ ಕಾರ್ಯಗಳಲ್ಲಿ ಎಂದಿಗೂ ಆಯಾಸಗೊಳ್ಳದಂತೆ ಸಹಾಯ ಮಾಡಲಿ.

ಕ್ಯೂಬಾ ಅನುಭವಿಸುತ್ತಿರುವ ವಾಸ್ತವಿಕತೆಯ ಬೆಳಕಿನಲ್ಲಿ ನಿಮ್ಮ ಸಂದೇಶ ಏನು? ಪಾಸ್ಕ ಪ್ರಯಾಣದಲ್ಲಿ ನಿಮ್ಮ ಪ್ರಾರ್ಥನೆ ಏನು?

ತಪಸ್ಸು ಕಾಲದಲ್ಲಿ, ನಮಗೆ ಸವಾಲಾಗಿ ಎದುರಾಗುವುದು — ತನ್ನನ್ನೆಲ್ಲಾ ಕೊಡುವ ದೇವರ ಸತ್ಯ. ಕೊನೆಯವರೆಗೂ ನಮ್ಮನ್ನು ಪ್ರೀತಿಸಿ ತನ್ನನ್ನೇ ಸಂಪೂರ್ಣವಾಗಿ ಅರ್ಪಿಸಿದ ದೇವರ ಮುಖಾಮುಖಿಯಾಗುತ್ತೇವೆ. ಶಿಲುಬೆಯ “ಏಕೆ?” ಎಂಬ ಪ್ರಶ್ನೆಯಲ್ಲಿ — ದುಃಖ ಮತ್ತು ನೋವಿನ ಕಾರಣಗಳಲ್ಲಿ — ನಿಲ್ಲುವುದು ಸುಲಭ. ಆದರೆ ಯೇಸು ನಮಗೆ “ಯಾವ ಉದ್ದೇಶಕ್ಕಾಗಿ?” ಎಂಬ ಪ್ರಶ್ನೆಯನ್ನು ಕೇಳಲು ಕಲಿಸಿದರು.

ಕ್ಯೂಬಾ ಜನರ ದೀರ್ಘಕಾಲದ ನೋವನ್ನೂ, ಜಗತ್ತಿನ ಅನೇಕ ಜನಾಂಗಗಳ ಕಷ್ಟಗಳನ್ನೂ ನೋಡಿದಾಗ, ನಾವು ಪ್ರಭುವಿನ ಕಡೆಗೆ ದೃಷ್ಟಿಸಬೇಕು. ಯೇಸು ಪ್ರೀತಿಸಲು ಮತ್ತು ತನ್ನ ಜೀವವನ್ನೇ ಅರ್ಪಿಸಲು ಕಲಿಸಿದರು. ಹೀಗೆ ನೋವಿಗೆ ಅರ್ಥ ತುಂಬಿ, ಅದನ್ನು ದಾಟಿ ಪಾಸ್ಕದ ಪ್ರಕಾಶಮಾನ ಬೆಳಗ್ಗಿನತ್ತ ಸಾಗುವ ದಾರಿಯನ್ನು ತೋರಿಸಿದರು.

ನನ್ನ ಜನರ ನೋವು — ಅದು ನನ್ನದೇ ನೋವು — ನಮ್ಮನ್ನು ದ್ವೇಷಪರ, ಹಿಂಸಾತ್ಮಕ ಅಥವಾ ಗಾಯಗೊಂಡವರನ್ನಾಗಿ ಮಾಡದಿರಲಿ. ನಾವು ಸದಾ ಪ್ರೀತಿಸಲಿ, ಪ್ರೀತಿಯ ಜಯವನ್ನು ಘೋಷಿಸಲಿ ಮತ್ತು ಪ್ರಭುವಿನ ಪ್ರೀತಿಗೆ ಸಾಕ್ಷಿಯಾಗಲಿ.

ಪೂಜ್ಯ ಜಗದ್ಗುರು 14ನೇ ಲಿಯೋ ತಮ್ಮ ಮೊದಲ Urbi et Orbi ಸಂದೇಶದಲ್ಲಿ ಹೇಳಿದಂತೆ: ಪುನರುತ್ಥಾನಿ ಕ್ರಿಸ್ತ “ಕೆಡುಕು ಜಯಿಸಲಾರದು” ಎಂದು ತೋರಿಸಿದ್ದಾನೆ. ಇದೇ ನಮ್ಮ ಪ್ರೀತಿಯೂ ನಮ್ಮ ನಿರೀಕ್ಷೆಯೂ ಆಗಿದೆ. ಧನ್ಯವಾದಗಳು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

27 ಫೆಬ್ರವರಿ 2026, 19:37